ಪಶ್ಚಿಮ ಬಂಗಾಳದ ಹಿಂದೂಗಳಿಗೆ ನ್ಯಾಯ ದೊರೆಯುತ್ತದೆಯೇ ?
ಪ್ರಚಲಿತ
ಪ್ರವೀಣ್ ಕುಮಾರ್‌‌, ಮಾವಿನಕಾಡು
ಚುನಾವಣೆಯ ನಂತರ ಪಶ್ಚಿಮ ಬಂಗಾಳದ ಪರಿಸ್ಥಿತಿ ಎನ್ನುವ ವಿಷಯದ ಕುರಿತು ಕನ್ನಡಿಗರೇ ಆದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರು ಕಳೆದ ಶುಕ್ರವಾರದಂದು ಆನ್ಲೈನ್ ಮೂಲಕ ವಿಶ್ಲೇಷಣೆ ನಡೆಸಿದರು.
ದೂರದ ರಾಜ್ಯವೊಂದರ ಬಗ್ಗೆ ಕೇವಲ ಊಹಾಪೋಹದ ಸುದ್ದಿಗಳನ್ನೇ ನಂಬಿ ಏನೇನೋ ಕಲ್ಪಿಸಿಕೊಳ್ಳುವ ಇಲ್ಲಿನ ಜನ ಸಾಮಾನ್ಯರಿಗೆ, ಮತ್ತು ಅಲ್ಲಿ ನಡೆಯುತ್ತಿರುವ ದೌರ್ಜನ್ಯಗಳನ್ನು ಮಾಧ್ಯಮಗಳ ಮೂಲಕ ವೀಕ್ಷಿಸಿ ಕೇಂದ್ರ ಸರಕಾರ ರಾಷ್ಟ್ರಪತಿ ಆಳ್ವಿಕೆ ಹೇರಿಬಿಡಬೇಕು. ಪ್ರಧಾನಿಗಳು ಹಾಗೆ ಮಾಡಬೇಕು, ಕೇಂದ್ರ ಗೃಹಸಚಿವರು ಹೀಗೆ ಮಾಡಬೇಕು ಎಂದು ತಮಗೆ ತೋಚಿ ದಂತೆ ಮಾತನಾಡುವ ಇಲ್ಲಿನವರಿಗೆ ಅವರ ಮಾತುಗಳು ಅಲ್ಲಿನ ಪರಿಸ್ಥಿತಿಯ ಸಮಗ್ರ ಚಿತ್ರಣ ಕಟ್ಟಿಕೊಡುವುದರ ಜೊತೆಗೆ ಕೆಲವೊಂದಿಷ್ಟು ಸಾಂವಿಧಾನಿಕ ಅನಿವಾರ್ಯತೆಗಳ ಬಗ್ಗೆಯೂ ಅರಿವು ಮೂಡಿಸುವಂತಿದ್ದವು.
ಹಾಗಾದರೆ ಮುಂದೇನು? ಆ ರಾಜ್ಯದಲ್ಲಿ ಬಿಜೆಪಿ3ರಿಂದ 75 ಸ್ಥಾನಗಳಿಗೆ ತನ್ನನ್ನು ವೃದ್ಧಿಸಿಕೊಂಡಿದೆ. ಹೀಗಿರುವಾಗ ಮುಂದೊಂದು ದಿನ ಆ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರುವುದು ನಿಶ್ಚಿತ. ಅದರಲ್ಲೂ ಟಿಎಂಸಿ ಒಂದು ವ್ಯಕ್ತಿ ಕೇಂದ್ರಿತ ಪಕ್ಷವಾಗಿರುವುದರಿಂದ ಆ ವ್ಯಕ್ತಿಯ ತೋಳಿನ ಶಕ್ತಿ ಕುಂದಿದ ಕೂಡಲೇ ಎದುರಾಳಿ ಪಕ್ಷ ಸುಲಭ ವಾಗಿ ಅಧಿಕಾರಕ್ಕೇರಿಬಿಡಬಹುದು. ಆಗ ಆ ರಾಜ್ಯದಲ್ಲಿ ಏನೇನು ಬದಲಾವಣೆಗಳಾಗುತ್ತವೆ? ಬಿಜೆಪಿ ಕಾರ್ಯಕರ್ತರು ಎಷ್ಟುಸ್ವಾತಂತ್ರ್ಯ ಅನುಭವಿಸುತ್ತಾರೆ? ದೌರ್ಜನ್ಯ ಎದುರಿಸುತ್ತಿರುವ ಅಲ್ಲಿನ ಹಿಂದೂಗಳ ನೋವು ಯಾವ ರೀತಿಯಲ್ಲಿ ಉಪಶಮನ ಗೊಳ್ಳುತ್ತದೆ? ಬಿ.ಎಲ್ ಸಂತೋಷ್ ಅವರ ಮಾತುಗಳನ್ನೇ ನಂಬುವು ದಾದರೆ, ಅಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಕೂಡಲೇ ಹಿಂದೂ ಗಳು ಈಗ ಎದುರಿಸುತ್ತಿರುವ ದೌರ್ಜನ್ಯಗಳೆಲ್ಲವೂ ನಿಂತುಹೋಗುತ್ತವೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದವರೂ ಆ ಆಶಾಭಾವನೆಯೊಂದಿಗೇ ತಮ್ಮ ಮತ ಚಲಾಯಿಸಿದ್ದಾರೆ. ಆದರೆ ರಾಜ್ಯವೊಂದರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ತಮ್ಮ ಆಕಾಂಕ್ಷೆಗಳ ಈಡೇರಿಕೆಯ ಬಗ್ಗೆ ಪಶ್ಚಿಮ ಬಂಗಾಳದ ಹಿಂದೂ ವಿನ ಹೇಳಿಕೆಗಿಂತಲೂ, ಕರ್ನಾಟಕದಂತಹ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯವೊಂದರ ಹಿಂದೂವಿನ ಹೇಳಿಕೆಯೇ ಹೆಚ್ಚು ವಿಶ್ವಾಸಾರ್ಹ. ಏಕೆಂದರೆ ಪಶ್ಚಿಮ ಬಂಗಾಳದ ಹಿಂದುವಿಗೆ ಅದು ಕೇವಲ ಭವಿಷ್ಯ.
ಆದರೆ ಕರ್ನಾಟಕದ ಹಿಂದುವಿಗೆ ಅದು ವರ್ತಮಾನ. ಪಶ್ಚಿಮ ಬಂಗಾಳದ ಭೂಗೋಳ ಮತ್ತು ಡೆಮೋಗ್ರಫಿ ಸಹ ಬದಲಾಗುತ್ತಿದೆ. ಹಿಂಸಾಚಾರದಲ್ಲಿ ಅಕ್ರಮ ವಲಸಿಗರ ಪಾತ್ರ ದೊಡ್ಡದಿದೆ. ಬಾಂಗ್ಲಾ ಗಡಿಯಿಂದ ಬಹು ದೂರದಲ್ಲಿರುವ ಕರ್ನಾಟಕದ ಡೆಮೋ ಗ್ರಫಿಯೂ ಬದಲಾಗುತ್ತಿದೆ. ಬೆಂಗಳೂರಿನ ಚಿಕ್ಕಪೇಟೆಯಿಂದ ಹಿಡಿದು ಚಿಕ್ಕಮಗಳೂರಿನ ಕಾಫಿ ತೋಟದವರೆಗೂ ಅಕ್ರಮ ಬಾಂಗ್ಲಾ ವಲಸಿಗರ ಹೆಜ್ಜೆಗಳು ಕಾಣಿಸಿಕೊಂಡಿವೆ.
ಇಲ್ಲಿಯೂ ಕೊಲೆ,ಕಳ್ಳತನ,ಕಳ್ಳಸಾಗಣೆ ಮುಂತಾದ ಅನೇಕ ಪ್ರಕರಣಗಳಲ್ಲಿ ಅಕ್ರಮ ವಲಸಿಗರ ಪಾತ್ರವಿರುವ ಬಗ್ಗೆ ಹಿಂದೆ (ಅಧಿಕಾರದಲ್ಲಿಲ್ಲದಿದ್ದಾಗ) ಹಲವಾರು ಬಾರಿ ಬಿಜೆಪಿ ನಾಯಕರುಗಳೇ ಮಾತನಾಡಿದ್ದಿದೆ. ರಾಜಧಾನಿ ಬೆಂಗಳೂರೊಂದರ ಮೂರು ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ದೇಶೀ ವಲಸಿಗರಿzರೆ ಎಂದು ಪ್ರಸ್ತುತ ಸರ್ಕಾರದ ಉಪಮುಖ್ಯಮಂತ್ರಿಗಳಬ್ಬರೇ ಒಪ್ಪಿ ಕೊಂಡಿದ್ದಾರೆ. ಬಿಬಿಎಂಪಿಯ ಗುತ್ತಿಗೆ ಕೆಲಸಗಳಿಗೆ ಅಕ್ರಮ ಬಾಂಗ್ಲಾ ವಲಸಿಗರನ್ನು ನೇಮಿಸಿಕೊಂಡಿರುವ ಬಗ್ಗೆಯೂ ವರದಿ ಗಳಿವೆ.
ಅವರೆಲ್ಲರೂ ಈಗಾಗಲೇ ಮತದಾರರ ಗುರುತಿನ ಚೀಟಿ ಯೂ ಸೇರಿದಂತೆ ಅಗತ್ಯ ಸರಕಾರಿ ದಾಖಲೆಗಳನ್ನು ಪಡೆದುಕೊಂಡಿರುವ ಬಗ್ಗೆಯೂ ಮಾಹಿತಿಯಿದೆ. ಸ್ವತಃ ಬಿಜೆಪಿಯ ಸಂಸದರೇ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೂ ಇದೆ. ಹೀಗಿರುವಾಗ ರಾಜ್ಯ ಬಿಜೆಪಿ ಸರಕಾರ ಇದುವರೆಗೆ ಆ ಅಕ್ರಮ ವಲಸಿಗರ ವಿರುದ್ಧ ಏನೇನು ಕಠಿಣ ಕ್ರಮ ಕೈಗೊಂಡಿದೆ? ಎಷ್ಟು ಲಕ್ಷ ಅಕ್ರಮ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ?ಎಷ್ಟು ಲಕ್ಷ ಅಕ್ರಮ ವಲಸಿಗರನ್ನು ರಾಜ್ಯ  ದಿಂದ ಹೊರಹಾಕಲಾಗಿದೆ? ಕೇವಲ ಮುಖ ನೋಡಿಯೇ ಗುರುತಿಸಬಹುದಾದ ಕರ್ನಾಟಕದಂತ ರಾಜ್ಯದಿಂದಲೇ ಅಧಿಕಾರಾ ರೂಢ ಪಕ್ಷಕ್ಕೆ ಅಕ್ರಮ ವಲಸಿಗರನ್ನು ಓಡಿಸಲಾಗಲಿಲ್ಲವೆಂದ ಮೇಲೆ ಇನ್ನು ಬಾಂಗ್ಲಾದವನ್ಯಾರು, ಬಂಗಾಳದವನ್ಯಾರು ಎಂದುಗುರುತಿಸಲು ಸಾಧ್ಯವೇ ಆಗದಷ್ಟು ಸಾಮ್ಯತೆ ಹೊಂದಿರುವ ಗಡಿ ರಾಜ್ಯದಿಂದ ಅವರನ್ನು ಹೊರಕಳಿಸುವ ಶಕ್ತಿ ನಿಜವಾಗಿಯೂ ಬಿಜೆಪಿಗೆ ಇದೆಯೇ? ಮಮತಾ ಬ್ಯಾನರ್ಜಿಯವರು ದೌರ್ಜನ್ಯದ ರಾಜಕೀಯವನ್ನು ಮೈಗೂಡಿಸಿಕೊಂಡಿದ್ದಾರೆ.
ಇಂದು ಅವರ ಪಕ್ಷದ ಕಾರ್ಯಕರ್ತರು ಹಿಂದೂ ಸಮಾಜ, ಹಿಂದೂ ಪರಂಪರೆ ಮತ್ತು ಹಿಂದೂ ಧಾರ್ಮಿಕತೆಯ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲೂ ಹಿಂದಿನ ಮುಖ್ಯಮಂತ್ರಿಗಳ ವಿರುದ್ಧ ಇದೇ ಆರೋಪಗಳಿದ್ದವು. ಆಗ ಹಿಂದೂ ಕಾರ್ಯಕರ್ತರ ಸಾಲು ಸಾಲು ಕೊಲೆಗಳಾಗಿದ್ದವು. ಅದರ ವಿರುದ್ಧ ಅಂದು ಪ್ರತಿಪಕ್ಷದಲ್ಲಿದ್ದ ಭಾರತೀಯ ಜನತಾ ಪಕ್ಷ ದೊಡ್ಡದೊಡ್ಡ ಹೋರಾಟಗಳನ್ನು ಸಂಘಟಿಸಿತ್ತು. ಅದರ ಫಲವೇ ಎನ್ನುವಂತೆ ಬಿಜೆಪಿಯು ಅಧಿಕಾರವನ್ನೂ ಪಡೆಯಿತು.
ಆದರೆ ಆಗಿದ್ದೇನು? ಕೊಲೆಯಾದ ವ್ಯಕ್ತಿಗಳ ಕುಟುಂಬ ದವರಿಗೆ ಸಿಕ್ಕಿದ್ದೇನು? ಈಗಲೂ ಕೇವಲ ಹಿಂದುತ್ವದ ಕಾರಣಕ್ಕೆ, ಬಿಜೆಪಿ ಬೆಂಬಲಿಗ ಎನ್ನುವ ಒಂದೇ ಕಾರಣಕ್ಕೆ ಸೆಕ್ಯುಲರ್ ಸಮುದಾಯಗಳವರಿಂದ ದೌರ್ಜನ್ಯಗಳು, ಹಗಲು, ಕೊಲೆಗಳು ನಡೆಯುತ್ತಲೇ ಇವೆ. ಆದರೆ ಅಂದು ರಾಷ್ಟ್ರಮಟ್ಟದ ಸುದ್ದಿಯಾ ಗುತ್ತಿದ್ದ ಅವು ಈಗ ತಾಲೂಕು ಮಟ್ಟದವರೆಗೆ ತಲುಪುವ ಶಕ್ತಿಯನ್ನೂ ಕಳೆದು ಕೊಂಡು ಬಿಟ್ಟಿವೆ. ಏಕೆಂದರೆ ಅಂತಹ ಹಗಳ ವಿರುದ್ಧ ಹೋರಾಡಬೇಕಿದ್ದ ಬಿಜೆಪಿ ಈಗ ಅಧಿಕಾರಾರೂಢವಾಗಿದೆ.
ಹಿಂದೂಗಳಿಗೆ, ಬಿಜೆಪಿ ಕಾರ್ಯಕರ್ತರಿಗೆ ತಾವು ಮತ ಹಾಕಿದ ಪಕ್ಷವೇ ಅಽಕಾರದಲ್ಲಿರುವುದರಿದ ಆ ದೌರ್ಜನ್ಯಗಳ ವಿರುದ್ಧಮಾತಾಡಲು ಬಾಯಿ ಸತ್ತು ಹೋಗಿದೆ. ಹಾಗೆಯೇ ಹಿಂದೂ ದೇವಾಲಯಗಳನ್ನು ಅಪವಿತ್ರಗೊಳಿಸುವ ಕಾರ್ಯಗಳು ಈಗಲೂ ನಿರಂತರವಾಗಿ ನಡೆಯುತ್ತಲೇ ಇವೆ.ಆದರೆ ಹಿಂದೂಗಳು ಮಾತ್ರ ಆ ಪ್ರಕರಣಗಳನ್ನು ಖಂಡಿಸುತ್ತಿದ್ದಾರೆಯೇ ಹೊರತೂ, ಅಧಿಕಾರವಿಲ್ಲದಿದ್ದಾಗ ಅಂತಹ ಪ್ರಕರಣಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಡುತ್ತಿದ್ದ ಬಿಜೆಪಿ ಮಾತ್ರ ತಾನೇ ಅಧಿಕಾರ ದಲ್ಲಿರುವ ಈ ಸಂದರ್ಭದಲ್ಲಿ ಆ ಕುರಿತು ಉಸಿರೇ ಎತ್ತುತ್ತಿಲ್ಲ!
ಬಿಜೆಪಿ ಅಧಿಕಾರಕ್ಕೆ ಬರುವವರೆಗೆ ಮಾತ್ರ ಹಿಂದೂಗಳ ಪಕ್ಷ. ಒಮ್ಮೆ ಅಧಿಕಾರಕ್ಕೆ ಬಂದ ಕೂಡಲೇ ಅದು ಸೆಕ್ಯುಲರ್ ಪಕ್ಷಗಳಅಪ್ಪನಂತೆ ಬದಲಾಗುತ್ತದೆ. ಹಿಂದೂ ಜೀವನ ಪದ್ಧತಿಯಿಂದ ಕ್ರಿಶ್ಚಿಯನ್ ಆಗಿ ಹೊಸದಾಗಿ ಮತಾಂತರಗೊಂಡವನೊಬ್ಬತಾನೊಬ್ಬ ಅಪ್ಪಟ ಕ್ರಿಶ್ಚಿಯನ್ ಎಂದು ಸಾಬೀತುಪಡಿಸಲು ಹೇಗೆ ಅತ್ಯುತ್ಸಾಹಿತನಾಗಿರುತ್ತಾನೋ, ಹಾಗೆಯೇ ಬಿಜೆಪಿ ಪಕ್ಷವೂ ಅಧಿಕಾರಕ್ಕೇರಿದ ಕೂಡಲೇ ತಾನೊಂದು ಅಪ್ಪಟ ಸೆಕ್ಯುಲರ್‌ ಪಕ್ಷ ಎಂದು ಸಾಬೀತುಪಡಿಸಲು ಅತ್ಯುತ್ಸಾಹವನ್ನು ತೋರಿಸ ತೊಡಗುತ್ತದೆ.
ಅದಕ್ಕಾಗಿಯೇ ಹಿಂದೂಗಳು ಮನೆಯೊಳಗೇ ಕೂರಿಸುವ ಗಣೇಶನ ವಿಗ್ರಹಗಳೂ ಇಷ್ಟೇ ಇಂಚು ಎತ್ತರವಿರಬೇಕು ಎನ್ನುವ ನಿರ್ಬಂಧ ಹೇರುತ್ತದೆ. ದೀಪಾವಳಿಯ ಶುಭಾಶಯಗಳ ಜತೆಗೇ ಹಿಂದೂಗಳಿಗೆ ಎಚ್ಚರಿಕೆ ನೀಡುವ ಸರಕಾರಿ ಜಾಹೀರಾತುಗಳನ್ನೂ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಿಸುತ್ತದೆ. ಕರೋನಾ ಸಮಯದಲ್ಲೂ ಹಿಂದೂಗಳ ಹಬ್ಬ ಬಂದಾಗ ನಿರ್ಬಂಧಗಳ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ. ಇತರ ಕೋಮುಗಳ ಹಬ್ಬ ಬಂದಾಗ ಲಾಕ್ ಡೌನ್ ನಿರ್ಬಂಧಗಳನ್ನೂ ಸಡಿಲಗೊಳಿಸಿ ಆಚರಣೆಗಳಿಗೆಅವಕಾಶ ಮಾಡಿಕೊಡುತ್ತದೆ!
ಬಂಗಾಳಾದಲ್ಲಿ ದುರ್ಗಾಪೂಜೆಯ ಪೆಂಡಾಲ್ ಕಿತ್ತು ಹಾಕಿದರೆ ಅದು ರಾಷ್ಟ್ರಮಟ್ಟದ ಸುದ್ದಿಯಾಗುತ್ತದೆ. ಆದರೆ ಬಿಜೆಪಿಸರಕಾರವಿರುವ ಕರ್ನಾಟಕದಲ್ಲಿ ಗಣೇಶನ ಪೆಂಡಾಲ್ ಕಿತ್ತು ಹಾಕಿದರೆ ಆ ಸುದ್ದಿ ಆ ಪೆಂಡಾಲಿನ ಜೊತೆಗೇ ನೆಲಕಚ್ಚುತ್ತದೆ. ಏಕೆಂದರೆ ರಾಜ್ಯದಲ್ಲಿ ಬಿಜೆಪಿ ಹೊಳೆ ದಾಟಿಯಾಗಿದೆ.
ಇನ್ನು ಅದಕ್ಕೆ ಅಂಬಿಗನ ಹಂಗೇಕೆ? ಅಧಿಕಾರದಲ್ಲಿ ಇಲ್ಲದ ರಾಜ್ಯದಲ್ಲಿ ಬಿಜೆಪಿ ಕೊಡುವ ಆಶ್ವಾಸನೆಗಳಿಗೂ ಮತ್ತು ಅಧಿಕಾರ ದಲ್ಲಿರುವ ರಾಜ್ಯದಲ್ಲಿ ಅದು ನಡೆದುಕೊಳ್ಳುವ ರೀತಿಗೂ ಇರುವ ವ್ಯತ್ಯಾಸವನ್ನು ನೇರವಾಗಿ ನೋಡುವ ಅವಕಾಶವೊಂದು ಇತ್ತೀಚಿಗೆ ದೊರೆಯಿತು. ಪಕ್ಕದ ತಮಿಳುನಾಡಿನಲ್ಲಿ ಇತ್ತೀಚಿಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಎಲ್ಲಾ ದೇವಾಲಯಗಳನ್ನೂ ಸರಕಾರದ ಹಿಡಿತದಿಂದ ಬಿಡಿಸಿ ಭಕ್ತರಿಗೆ ಒಪ್ಪಿಸಲಾಗುವುದು ಎನ್ನುವ ಆಶ್ವಾಸನೆಯನ್ನು ಅಲ್ಲಿನ ಪ್ರಚಾರದ ಉಸ್ತುವಾರಿ ಹೊತ್ತಿದ್ದ ಬಿಜೆಪಿಯ ಕನ್ನಡಿಗ ನಾಯಕರೊಬ್ಬರು ನೀಡಿದ್ದರು.
ಅದನ್ನು ಕೇಳಿ ಅಲ್ಲಿನ ಮತದಾರರೂ ರೋಮಾಂಚನಗೊಂಡು ಚಪ್ಪಾಳೆ ತಟ್ಟಿರಬಹುದು. ಆದರೆ ವಾಸ್ತವ ಏನು ಎನ್ನುವುದುಕರ್ನಾಟಕದ ಹಿಂದುಗಳಿಗಳಿಗಿಂತ ಹೆಚ್ಚು ಅವರಿಗೆ ತಿಳಿದಿರಲಾರದು. ಕರ್ನಾಟಕದಲ್ಲಿ ಅದೇ ಪಕ್ಷ ಅಧಿಕಾರದಲ್ಲಿದ್ದೂ, ದೇವಾಲಯಗಳು ಇಂದಿಗೂ ಸರಕಾರದ ಕಪಿ ಮುಷ್ಟಿಯಲ್ಲಿಯೇ ಇವೆ. ಅಷ್ಟೇ ಅಲ್ಲದೆ ಈಗಲೂ ಏನೇನೋ ಕಾರಣಗಳನ್ನೊಡ್ಡಿ ದೇವಾಲಯಗಳನ್ನು ಸರಕಾರದ ತೆಕ್ಕೆಗೆ ತೆಗೆದುಕೊಳ್ಳುವ ಪ್ರಕ್ರಿಯೆಗಳೇನೂ ನಿಂತುಹೋಗಿಲ್ಲ.
ಅನ್ಯಕೋಮಿನ ಅಧಿಕಾರಿಗಳೇ ಹಿಂದೂ ದೇವಾಲಯಗಳ ಆಚರಣೆಯ ಮಾರ್ಗಸೂಚಿಗಳನ್ನು ಹೊರಡಿಸುವ ಕಾಲವೂಬದಲಾಗಿಲ್ಲ. ಗ್ರಾಮ ಗ್ರಾಮಗಳಲ್ಲಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಕಸಿದುಕೊಳ್ಳುವ ಕೆಲಸವನ್ನು ತೃಣಮೂಲ ಕಾಂಗ್ರೆಸ್ಮಾಡಿದೆ ಎನ್ನುವುದಕ್ಕೆ ಸಾಕ್ಷಿಗಳಿವೆ.ಇವೆಲ್ಲದರ ಬಗ್ಗೆ ದೂರು ನೀಡಲು ಸಂತ್ರಸ್ಥರಿಗೆ ಧೈರ್ಯ ತುಂಬಲಾಗುತ್ತಿದೆ. ನಮ್ಮಹೋರಾಟ ಮುಂದುವರಿಯಲಿದೆ. ಕರ್ನಾಟಕದಲ್ಲೂ ಈ ಹಿಂದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹತ್ತಾರು ಸಾವಿರ ಮತದಾರರ ಗುರುತಿನ ಚೀಟಿಗಳನ್ನು ಕಸಿದಿಟ್ಟುಕೊಳ್ಳುವ ಕೃತ್ಯವನ್ನು ಮಾಡಿದ್ದರು.
ಅದರ ವಿರುದ್ಧ ಬಿಜೆಪಿ ನಾಯಕರುಗಳೇ ಹೋರಾಟವನ್ನೂ ನಡೆಸಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಗುರುತಿನ ಚೀಟಿ ಕಳೆದುಕೊಂಡಿದ್ದ ಆ ಅಮಾಯಕ ಮತದಾರರಿಗೆ ಧೈರ್ಯ ತುಂಬಿ ಆ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸಾಕ್ಷಿ ಯನ್ನೂ ಹೇಳಿಸಲಾಗಿತ್ತು.ಆದರೆ ಕೊನೆಯಲ್ಲಿ ಆದದ್ದೇನು? ಅದೇ ಅಭ್ಯರ್ಥಿಯನ್ನು ಶಾಲು ಹೊದಿಸಿ ಬಿಜೆಪಿ ಪಕ್ಷಕ್ಕೆ ಬರಮಾಡಿ ಕೊಳ್ಳಲಾಯಿತು. ಯಾವ ವ್ಯಕ್ತಿಯ ವಿರುದ್ಧ ಅಲ್ಲಿನ ಬಿಜೆಪಿ ಕಾರ್ಯಕರ್ತರು ಕಾಲೂರಿ ಬಡಿದಾಡಿದ್ದರೋ, ಅದೇ ವ್ಯಕ್ತಿಯ ಪರವಾಗಿ ಜೈಕಾರ ಹಾಕಬೇಕಾದ ಅನಿವಾರ್ಯತೆ ಈಗ ಆ ಕಾರ್ಯಕರ್ತರದ್ದು.
ಇಂತಹಾ ಹೊಂದಾಣಿಕೆಗಳಿಂದ ನಾಯಕರ ಮಟ್ಟದ ವ್ಯಕ್ತಿಗಳು ಎಲ್ಲಾ ಒಂದು ಕಡೆ ತಮಗೆ ಸಿಗಬೇಕಾದ ಜಾಗಗಳನ್ನು ಪಡೆದು ಕೊಳ್ಳಬಹುದು.ಆದರೆ ಬಿಜೆಪಿ ನಾಯಕರ ಭರವಸೆಗಳನ್ನು ನಂಬಿ ಅಂದು ಆ ನಾಯಕನ ವಿರುದ್ಧ ಸಾಕ್ಷಿ ಹೇಳಿದ್ದ ಆ ಸಾಮಾನ್ಯಮತದಾರರಿಗೆ ಈಗ ಯಾರು ದಿಕ್ಕು? ದೇವರೇ ದಿಕ್ಕು. ಇದೇ ರೀತಿಯಾಗಿ ಬಂಗಾಳಾದಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಕಸಿದುಕೊಂಡ ವಿರೋಧಿ ನಾಯಕರುಗಳನ್ನೂ ಮುಂದೊಮ್ಮೆ ಬಿಜೆಪಿಗೆ ಕರೆತರಬಹುದು. ಆಗ ರಾಜ್ಯಪಾಲರನ್ನೇ ಅಡ್ಡಗಟ್ಟಿ ಸುವ, ಕೇಂದ್ರ ಸಚಿವರ ಕಾರಿಗೇ ಕಲ್ಲು ತೂರಿಸುವ ಆ ಭಂಡ ನಾಯಕರುಗಳಿಂದ ಅವರ ವಿರುದ್ಧ ಈಗ ಬಿಜೆಪಿಯ ಮಾತು ಕೇಳಿ ದೂರು ನೀಡಲಿರುವ ಸಂತ್ರಸ್ಥ ಹಿಂದೂಗಳ ಜೀವ ರಕ್ಷಿಸುವವರು ಯಾರು? ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ನೋಡುವು ದಾದರೆ, ಹಲವು ದೇಶಗಳ ಜತೆಗೆ ಗಡಿ ಹಂಚಿಕೊಂಡು ಆಯಕಟ್ಟಿನ ಜಾಗದಲ್ಲಿರುವ ಪಶ್ಚಿಮ ಬಂಗಾಳಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೇಬೇಕಿದೆ.
ಆದರೆ ಏನನ್ನು ಅಪೇಕ್ಷಿಸಿ ಅಲ್ಲಿನ ಸಂತ್ರಸ್ಥ ಹಿಂದೂಗಳು ಮತ್ತು ಬಿಜೆಪಿ ಕಾರ್ಯಕರ್ತರು ಆ ಪಕ್ಷವನ್ನು ಗೆಲ್ಲಿಸಿರುತ್ತಾರೋ, ಅವರ ಆ ಅಪೇಕ್ಷೆಗಳು ಈಡೇರುವುದರ ಬಗ್ಗೆ ಮಾತ್ರ ಸಂಶಯಗಳಿವೆ. ಒಮ್ಮೆ ಬಿಜೆಪಿ ಅಲ್ಲಿ ಅಧಿಕಾರಕ್ಕೆ ಬಂದರೆ, ಅಲ್ಲಿನ ಕಾರ್ಯಕರ್ತರು ಅದುವರೆಗೂ ತಮಗಿದ್ದ ಪ್ರತಿಭಟಿಸುವ ಸ್ವಾತಂತ್ರ್ಯವನ್ನು ಕಳೆದುಕೊಂಡು ಮೂಕರಾಗಬಹುದೇ ಹೊರತೂ ಹೊಸದಾಗಿ ಗಳಿಸಿಕೊಳ್ಳುವಂತಹದ್ದೇನೂ ಕಾಣಿಸುತ್ತಿಲ್ಲ.