ಜೂಟಾಟ ಸಾಕು, ವ್ಯಾಕ್ಸೀನ್ ಬೇಕೇ ಬೇಕು
ಪ್ರಚಲಿತ
ಕೀರ್ತನ ಎನ್‌.ಎಂ
ಮೇ ತಿಂಗಳ ಮೊದಲ ವಾರದಿಂದ18ರಿಂದ44ವಯಸ್ಸಿನವರಿಗೆ ಕೋವಿಡ್ ಲಸಿಕಾ ಅಭಿಯಾನ ಪ್ರಾರಂಭವಾಯಿತು. ಅವತ್ತಿ ನಿಂದ ಇವತ್ತಿನವರೆಗೂ ಲಸಿಕೆಗಾಗಿ ಸ್ಲಾಟ್‌ಬುಕ್ ಮಾಡಲು ದಿನಕ್ಕೆ ಏನಿಲ್ಲವೆಂದರೂ10ರಿಂದ20ಬಾರಿಯಾದರೂ ಆರೋಗ್ಯ ಸೇತು ಅಪ್ಲಿಕೇಷನ್ ಪರಿಶೀಲಿಸುತ್ತಲೇ ಇರುತ್ತೇನೆ.
ಅದೂ ಎಷ್ಟರ ಮಟ್ಟಿಗೆಂದರೆ, ದಿನನಿತ್ಯದ ಕೆಲಸ, ಕಾರ್ಯಗಳಲ್ಲಿ ಇದು ಒಂದಾಗಿ ಹೋಗುವಷ್ಟರ ಮಟ್ಟಿಗೆ. ಹಾಗೆ ಮೊನ್ನೆ ಲಸಿಕೆ ಲಭ್ಯತೆಯ ಬಗ್ಗೆ ನೋಡುತ್ತಿದ್ದಾಗ ಮೊಬೈಲ್ ಪರದೆಯ ಮೇಲೆ ಒಂದು ಸಂದೇಶ ! ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ5000ರು. ಬಹುಮಾನ ಎಂದು. ಅದನ್ನು ನೋಡಿದವಳೇ ಆರೋಗ್ಯ ಸೇತು ಅಪ್ಲಿಕೇಶನ್ ತೊರೆದು ನ್ಯೂಸ್ ಅಪ್ಲಿಕೇಶನ್‌ಗೆ ಚಂಗನೆ ಜಿಗಿದು ಬಿಟ್ಟೆ. ಎಷ್ಟಾದರೂ ದುಡ್ಡಿನ ವಿಷಯವಲ್ಲವೇ? ಕೈಗಳು ತಾನಾಗಿಯೇ ವೇಗ ಹೆಚ್ಚಿಸಿಕೊಳುತ್ತದೆ.
ಜನಸಾಮಾನ್ಯರು ತಾವು ಅಥವಾ ತಮ್ಮ ಕುಟುಂಬಸ್ಥರು ಲಸಿಕೆ ಹಾಕಿಸಿಕೊಂಡಿರುವ ಭಾವ ಚಿತ್ರವನ್ನು ಒಂದೊಳ್ಳೆ ಶೀರ್ಷಿಕೆ ಯೊಂದಿಗೆ .inವೆಬ್ಸೈಟ್ಗೆ ಕಳುಹಿಸಿದರೆ, ಪ್ರತಿ ತಿಂಗಳು ವಿಶಿಷ್ಟವಾದ 10ಶೀರ್ಷಿಕೆಗಳನ್ನು ಆಯ್ಕೆಮಾಡಿ ವಿಜಯೇತರಿಗೆ5000ರು. ಬಹುಮನ ನೀಡುವುದಾಗಿ ಸರಕಾರ ಘೋಷಿಸಿತ್ತು. ಫ್ರೀ ಲಸಿಕೆ ನೀಡುತ್ತಿರುವುದಲ್ಲದೆ ಸಾಲದೆಂಬಂತೆಬಹುಮಾನವೇ? ಎಂದುಕೊಂಡೆ. ಸೆಕೆಂಡ್‌ಗಳ ಲೆಕ್ಕದಲ್ಲಿ ಓಪನ್ – ಕ್ಲೋಸ್ ಆಗುತ್ತಿದ್ದ ಸ್ಲಾಟ್, ಮಧ್ಯರಾತ್ರಿ ಅಲಾರಾಂ ಇಟ್ಟುಕೊಂಡು ಬುಕ್ ಮಾಡಲು ಪ್ರಯತ್ನಿಸುವ ಹಾಗೆ ಕೂಡ ಮಾಡಿತ್ತು.
ಇಷ್ಟೊಂದು ಪೀಠಿಕೆ ಯಾಕಮ್ಮ? ವಿಷಯ ಏನೆಂದು ಹೇಳು ನಾವು5000ರು. ಬಗ್ಗೆ ಏನಾದರು ಹೇಳುವೆಯೆಂದು ಕಾದು ಕುಳಿತಿದ್ದೇವೆ ಎನ್ನುತ್ತಿದ್ದೀರಾ ? ಕ್ಷಮಿಸಿ, ವಿಷಯ ಅದಲ್ಲ. ಹೀಗೆಂದೊಡನೆ ಮುಖ ಸಿಂಡರಿಸಬೇಡಿ. ಸರಕಾರ ಬಹುಮಾನ ನೀಡುವ ಸುದ್ದಿ ಏಕೆ ಹೇಳಿದೆನೆಂದರೆ ಒಂದು ಸರಕಾರ ತನ್ನ ಪ್ರಜೆಗಳನ್ನು ಪ್ರಾಣ ರಕ್ಷಕ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿ ಸಲು ಏನೆ ಮಾಡುತ್ತವೆಂದು ಹೇಳಲು ಸಣ್ಣ ಉದಾಹರಣೆ ನೀಡಿದೆ.
ಈತರದ ಕಾರ್ಯಗಳು ನಡೆದಿರುವುದು ಇದೇ ಮೊದಲಲ್ಲ, ಕೊನೆಯದಾಗುವುದು ಇಲ್ಲ.1796ರಲ್ಲಿ ವಿಶ್ವವೇ ಸಿಡುಬು ರೋಗ ದಿಂದ ತತ್ತರಿಸಿ ಹೋಗಿತ್ತು. ಲಸಿಕೆಯ ಪಿತಾಮಹ ಎಂದೇ ಕರೆಯಲ್ಪಡುವ ಎಡ್ವರ್ಡ್ ಜೆನ್ನರ್ ಎಂಬ ಬ್ರಿಟಿಷ್ ವಿಜ್ಞಾನಿ ಈ ಮಹಾಮಾರಿಗೆ ಲಸಿಕೆಯನ್ನು ಕಂಡುಹಿಡಿದ. ಆದರೆ ಆ ಲಸಿಕೆ ಸುಮಾರು 7500ಕಿ.ಮೀ. ದೂರವಿದ್ದ (ಬ್ರಿಟನ್ ನಿಂದ) ಭಾರತಕ್ಕೆ ಬಂದು ತಲುಪಿದ್ದು 1802ರಲ್ಲಿ.
ಲಸಿಕೆಯೇನೋ ಬಂದಿತಾದರೂ ಅದನ್ನು ಧೈರ್ಯವಾಗಿ ತೆಗೆದುಕೊಳ್ಳಲು ಯಾರೂ ಮುಂದೆ ಬರಲೇ ಇಲ್ಲ. ಅದಾಗಲೇ ಈ ಮಹಾಮಾರಿಗೆ ಹಲವಾರು ಮಂದಿ ಬಲಿಯಾಗಿದುದ್ದರಿಂದ ಈ ರೋಗ ದಿನೇ ದಿನೇ ಉಲ್ಬಣವಾಗುತ್ತಿದುದ್ದನ್ನು ಗಮನಿಸಿ, ಬ್ರಿಟಿಷ್ ಸರಕಾರ ಕಳವಳಗೊಂಡಿತ್ತು. ಹೇಗಾದರೂ ಮಾಡಿ ಜನರಿಗೆ ಲಸಿಕೆಯ ಮೇಲಿದ್ದ ಭಯ ಮತ್ತು ಅಪನಂಬಿಕೆಯನ್ನು ಹೋಗ ಲಾಡಿಸಿ, ಜನರಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಲೇಬೇಕೆಂದು ಸರಕಾರ ಪಣತೊಟ್ಟಿತು. ಆ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವಿಲಿಯಂ ಬೆಂಟಿಂಕ್ ಅವರು ಮೈಸೂರು ಸಂಸ್ಥಾನದಲ್ಲಿ ಸರಕಾರದ ಪ್ರತಿನಿಧಿಯಾಗಿದ್ದ ಮಾರ್ಕ್ ವಿಲ್ಕೆರ್ಸ್ ಹೆಗಲ ಮೇಲೆ ಲಸಿಕೆಯ ಕುರಿತು ಜನ ಜಾಗೃತಿ ಮೂಡಿಸುವ ಮತ್ತು ಅವರನ್ನು ಪ್ರೋತ್ಸಾಹಿಸುವ ಕೆಲಸ ಹೊರಿಸಿದರು.
ಈ ಕುರಿತು ಮಾರ್ಕ್ ವಿಲ್ಕೆರ್ಸ್ ಮೈಸೂರು ಅರಸರ ಸಹಾಯ ಕೋರಿದಾಗ, ಅಂದಿನ ಮೈಸೂರು ಸಂಸ್ಥಾನದ ದಿವಾನ ರಾಗಿದ್ದಪೂರ್ಣಯ್ಯನವರು ರಾಜಮಾತೆಯಾದ ರಾಣಿ ಲಕ್ಷ್ಮಮ್ಮಣ್ಣಿ ಅವರೊಂದಿಗೆ ಸೇರಿ ಜಾಗ್ರತಾ ಕಾರ್ಯಕ್ಕೆ ನಾಂದಿ ಹಾಡಿದರು.ಅದಾಗಲೇ ಸಿಡುಬು ರೋಗದ ಬಗ್ಗೆ ಧಾರ್ಮಿಕ ನಂಬಿಕೆಯ ತಳುಕಿನೊಂದಿಗೆ ಮೌಢ್ಯವನ್ನು ಬೆಳೆಸಿಕೊಂಡಿದ್ದ ನಮ್ಮ ಜನರು,ಲಸಿಕೆ ತೆಗೆದುಕೊಂಡರೆ ದೇವರು ಮುನಿಸಿಕೊಳ್ಳುತ್ತಾನೆಂದೂ, ಇದಕ್ಕೂ ಮಿಗಿಲಾಗಿ ತಮಗೆ ಬ್ರಿಟಿಷ್ ಸರಕಾರದ ಮೇಲಿದ್ದ ಅಪನಂಬಿಕೆಯಿಂದಾಗಿ ಲಸಿಕೆ ಪಡೆಯಲು ನಿರಾಕರಿಸುತ್ತಿದ್ದರು.
ಇದನ್ನು ಗಮನಿಸಿದ ರಾಜಮಾತೆ, ಮೈಸೂರು ಸಂಸ್ಥಾನದ ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಿರಿಯ ರಾಣಿಯಾದ ಮಹಾರಾಣಿ ದೇವಜಮ್ಮಣ್ಣಿ ಲಕ್ಷ್ಮಿವಿಲಾಸ ಸನ್ನಿದಾನ ಅವರಿಗೆ ಮೊದಲ ಲಸಿಕೆ ಕೊಡಿಸುವುದಾಗಿ ಘೋಷಿಸಿದರು. ತಮ್ಮ ಈ ಕಾರ್ಯ ಜನರಲ್ಲಿ ಸ್ಫೂರ್ತಿ ತುಂಬಲಿ ಎಂದು ಅಂದಿನ ಸುಪ್ರಸಿದ್ಧ ಚಿತ್ರಕಾರರಾದ ಥಾಮಸ್ ಹಿಕ್ಕಿ ಅವರನ್ನು ಕರೆಸಿ ಮುಮ್ಮಡಿ ಕೃಷ್ಣರಾಜ ಒಡೆಯ ಅವರ ಕಿರಿಯ ರಾಣಿಯಾದ ಮಹಾರಾಣಿ ದೇವಜಮ್ಮಣ್ಣಿ ಲಕ್ಷ್ಮಿವಿಲಾಸ ಸನ್ನಿಧಾನ ಮತ್ತು ಪಟ್ಟದ ರಾಣಿಯಾದ ಪಟ್ಟಮಹಿಶಿ ರಾಣಿ ದೇವಜಮ್ಮಣ್ಣಿ ಇಬ್ಬರೂ ಲಸಿಕೆ ತೆಗೆದುಕೊಳ್ಳುವ ಕುರಿತು ಪ್ರೋತ್ಸಾಹಿಸುತ್ತಿರುವಒಂದು ಸ್ತಬ್ಧ ಚಿತ್ರವನ್ನು ಬರೆಸಿದರು.
(ಚಿತ್ರದಲ್ಲಿ ಹಿರಿಯ ರಾಣಿಯ (ಎಡದಿಂದ ಮೊದಲನೆಯವರು) ಬಾಯಿ ಸುತ್ತ ಬಿಳಿ ಬಣ್ಣವಿರುವುದು ಸಿಡುಬು ರೋಗದ ಲಕ್ಷಣವಾದರೆ, ಕಿರಿಯ ರಾಣಿ (ಬಲದಿಂದ ಮೊದಲಿಗರು) ತಾವು ಲಸಿಕೆ ತೆಗೆದುಕೊಳ್ಳಲು ತಯಾರಿರುವಂತೆ ತೋಳನ್ನು ಮುಂದೆ ಮಾಡಿ ನಿಂತಿದ್ದಾರೆ. ಹೀಗೆ ರಾಜಮಾತೆ (ಮಧ್ಯದವರು) ಯಾವ ಮಹಾಮಾರಿ ತಮ್ಮ ಪತಿ ಇಮ್ಮಡಿ ಕೃಷ್ಣರಾಜ ಒಡೆಯರ್ಅವರನ್ನು ಬಲಿತೆಗೆದುಕೊಂಡಿತೊ ಅಂತಹ ರೋಗ ಪ್ರಜೆಗಳನ್ನು ಕಾಡಬಾರದು, ಹಾಗಾಗಿ ಲಸಿಕೆ ತೆಗೆದುಕೊಳ್ಳುವುದು ಅವಶ್ಯಕ ಎಂದು ಈ ಚಿತ್ರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಇದಾದ ನಂತರ ಜನರಲ್ಲಿ ಲಸಿಕೆಯ ಬಗ್ಗೆ ಇದ್ದ ಭಯ ಸ್ವಲ್ಪಮಟ್ಟಿಗೆ ಕಮ್ಮಿಯಾಗಿ ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾ ಯಿತು. ಇದುವೇ ಆ ಕಾಲದಲ್ಲಿ ಪ್ರಜೆಗಳಿಗೆ ಲಸಿಕೆ ತೆಗೆದುಕೊಳ್ಳುವಂತೆ ರಾಜ ಮನೆತನದವರು ಪ್ರೋತ್ಸಾಹಿಸಿದ ಪರಿ. ಈಗ ಹೇಳಿ 1804ರಿಂದ2021ರವರೆಗೆ2ಶತಮಾನವೇ ಕಳೆದುಹೋಗಿದೆ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಲಸಿಕೆ ಎಂದೊಡನೆ ನಂಗೆ ಬೇಡಪ್ಪ ಎಂದು ಸರಕಾರದೊಂದಿಗೆ ಜೂಟಾಟವಾಡುತ್ತಿದ್ದೇವೆ.
ಇಂದಿಗೂ ಹಲವು ಮಂದಿಯ ಮನಸಿನಲ್ಲಿ ಲಸಿಕೆಯ ಕುರಿತು ಅನುಮಾನದ ಸುಳಿ ಸುತ್ತುತ್ತಲೇ ಇದೆ. ಇದರೊಂದಿಗೆ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ ವೆಂಬಂತೆ ಲಸಿಕೆಗಾಗಿ ದುಂಬಾಲು ಬೀಳುತ್ತಿರುವ ದೇಶಗಳ ನಡುವೆ ಜೀವರಕ್ಷಕದಂತೆ ಬಂದಿರುವ ಲಸಿಕೆಯನ್ನು ಉಚಿತವಾಗಿ ನೀಡುತ್ತೇವೆಯೆಂದರೂ ಜನ ತೆಗೆದುಕೊಳ್ಳಲು ಹಿಂಜರಿಯುತ್ತಿರುವುದು ಶೋಚನೀಯ.
ಈಗಲಾದರೂ ಸರಕಾರ ಮತ್ತು ವೈದ್ಯರು ನೀಡಿರುವ ಮಾರ್ಗಸೂಚಿಯಂತೆ ಲಸಿಕೆಯನ್ನು ತೆಗೆದುಕೊಂಡು ಈ ಕರೋನಾ ಮಹಾಮಾರಿಯನ್ನು ಗೆದ್ದು ಬರೋಣ, ಮತ್ತೊಮ್ಮೆ ಸ್ವಚ್ಛ ಜೀವನ ನಮ್ಮದಾಗಿಸಿಕೊಳೋಣ .