ಇಲ್ಲಿ ಪ್ರಾಣಿಗಳಿಗೆ ಪ್ರವೇಶವಿಲ್ಲ…ಕತ್ತಲಡರುತ್ತಿದ್ದರೆ ಮನುಷ್ಯರಿಗೂ
ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
ಅಲ್ಲಿ ಜೀವಕ್ಕೆ ಭರಿಸಲಾಗದ ಚಳಿಯ ಹೊರತಾಗಿ ಇನ್ನೇನೂ ಸಿಕ್ಕುವುದಿಲ್ಲ. ಯಕಶ್ಚಿತ ಉಪ್ಪನ್ನು ತರಲೂ ಒಂದು ವಾರ ಕಾಲ ಹತ್ತಿಳಿಯ ಬೇಕಾಗುತ್ತದೆ. ಯಾವ ಪರ್ವತ ಯಾವಾಗ ದಿಕ್ಕು ಬದಲಿಸುತ್ತದೋ, ಯಾವ ನದಿಯ ಪಾತ್ರ ಎಷ್ಟೊತ್ತಿಗೆ ತಿರುಗಿ ಹರಿಯುತ್ತದೋ ಯಾವ ಲೆಕ್ಕದಲ್ಲೂ ಊಹಿಸಲಾಗದ ಅನಿಶ್ಚಿತತೆ.
ಅಂತಹ ದಾರಿಯನ್ನು ಕ್ರಮಿಸಿ ಸಾಮಾನು ಸೇರಿದಂತೆ ಸರ್ವಸ್ವವನ್ನೂ ಒದಗಿಸಿಕೊಂಡು.. ಮದುವೆ, ಬಸರು, ಬಾಣಂತನ, ಆಗೀಗ ಜರಗುವ ಅನಿರೀಕ್ಷಿತಗಳೊಂದಿಗೆ ಏಗುತ್ತಲೇ, ಆದರೂ ಆ ನೆಲದ ಬಗ್ಗೆ ಅರಪಾವಿನಷ್ಟು ಬೇಸರಿಸದೆ ಅ ಬದುಕು..ಬೆವರು..ಅನ್ನ ಎಲ್ಲವನ್ನೂ ಕಂಡುಕೊಂಡು ಜನಜೀವನವನ್ನು ನಡೆಸುತ್ತಿರುವ ವರಿಗೆ ಅದೇ ಸ್ವರ್ಗ. ಕಾರಣ ಜನನೀ ಜನ್ಮ.. ಭೂಮಿಶ್ಚ..ಶಿಲ್ಲಿ, ಪಲ್ತು, ಸಜ್ಜೆ ಸೇರಿದಂತೆ ಹಲವು ಧವಸ ಧಾನ್ಯಗಳು, ಜಗತ್ತಿನ ಯಾವ ಮೂಲದಲ್ಲೂ ಇಲ್ಲದ ಶಿಲ್ಲಿಕುರ ಎಂಬ ತಿಂಡಿ.
ಫೈನ್ವೃಕ್ಷಮತ್ತು ಭೋಜಪತ್ರಗಳ ಮರಗಳ ಕಾಡಿನಲ್ಲಿ ಧೂಪದ ಸುವಾಸನೆಯಲ್ಲಿ ಚಲಿಸಿ, ಹದಿನೈದು ಸಾವಿರ ಅಡಿ ಎತ್ತರ ದಲ್ಲಿರುವ ಈ ಊರಿಗೆ ಏನೆಲ್ಲ ಹೊತ್ತು ತರಲು ಸಾಕುಪ್ರಾಣಿಗಳೇ ಬೇಕು. ಆದರೆ ಅವುಗಳಿಗೆ ಊರಲ್ಲಿ ಮಾತ್ರ ಪ್ರವೇಶವಿಲ್ಲ. ಒಂದು ಕಿ.ಮೀ. ದೂರ ಕಟ್ಟಿರುವ ಚಪ್ಪರದ ಕೆಳಗೆ ಊರ ಪ್ರಾಣಿಗಳ ಬದುಕು. ಸಂಜೆಯ ಕತ್ತಲಡರುತ್ತಿದ್ದರೆ ಹೊರಗಿನ ಮನುಷ್ಯರಿಗೂಪ್ರವೇಶವಿಲ್ಲ. ಈ ನೆಲವೇ ಕುಠಿ. ಭಾರತದ ಕೊನೆಯ ಹಳ್ಳಿ.
ಇತ್ತ ಕುದುರೆಯೂ ಅಲ್ಲದ ಅತ್ತ ಕತ್ತೆಯೂ ಅಲ್ಲದ ಕಚ್ಛರನ್ನು ಸಾರಿಗೆ ಸಹಾಯಕವನ್ನಾಗಿ ಬಳಸಿಕೊಳ್ಳುವ, ಒಮ್ಮೆ ಕೆಳಗೆ ಹೋದರೆ ಹಿಂದಿರುಗಲು ಏಳೆಂಟು ದಿನಗಳ ಎತ್ತರದ ಈ ಊರಿನ ವೈಶಿಷ್ಠ್ಯವೆಂದರೆ, ನಾನ್ನೂರು ಚಿಲ್ರೆ ಸಂಖ್ಯೆಗೆ ದುಡಿತದಲ್ಲಿಸಮಬಾಳು ಸಮಪಾಲು. ಎತ್ತರದ ಪರ್ವತ ಪ್ರದೇಶದ ಕುರುಚಲು ಕಾಡಿನ ಬುಡ ಅಗೆದು ಹುಳುಗಳನ್ನು ಹುಡುಕುವ ಕೆಲಸಕ್ಕೆಊರಜನರೆಲ್ಲ ಒಂದಾಗಿ ಶ್ರಮಿಸುತ್ತಾರೆ.
ನೀವು ನಂಬುತ್ತಿರೋ ಇಲ್ಲವೋ ಒಂದು ಕೆ.ಜಿ. ಹುಳಗಳನ್ನು ಚೀನಿಯರಿಗೆ ಮಾರಿದರೆ ಕನಿಷ್ಠ ಎರಡೂ ಚಿಲ್ರೆ ಲಕ್ಷ ರುಪಾಯಿಸಂಪಾದನೆ. ಚಿನ್ನಕ್ಕಿಂತಲೂ ದುಬಾರಿ. ಹಿಮ ಕರಗಿ ಹಿಂದೆ ಸರಿಯುತಿದ್ದಂತೆ ಹುಳ ಆರಿಸುವ ಕೆಲಸ ಆರಂಭವಾಗುತ್ತದೆ. ಪುನಃಹಿಮ ಮುಚ್ಚಿಕೊಳ್ಳುವವರೆಗೆ ಅದರ ಸಂತಾನಾಭಿವೃದ್ಧಿ ನೋಡಿಕೊಂಡು ಆರಿಸುವಿಕೆ ಕೊನೆಯಾಗುತ್ತದೆ. ವರ್ಷದಲ್ಲಿ ನಾಲ್ಕುಬಾರಿ ಮಾತ್ರ ಹೀಗೆ ಹುಳುಗಳ ಬೇಟೆ ನಡೆದು, ಅದನ್ನು ಮಾರುಕಟ್ಟೆ ಕುದುರಿಸಲು ದೂರದ ಟಿಬೆಟ್ಟಿಗೆ ಕುದುರೆ ಏರಿ ದೌಡಾಯಿಸುತ್ತಾರೆ.
ಅಲ್ಲಿನ ಮಾರುಕಟ್ಟೆ ಮೂಲಕ ಚೀನಾ ತಲುಪುತ್ತದೆ. ಹೀಗೆ ಬಂದ ಹಣ ಸಮಾಜದ ಸಮ್ಮುಖದಲ್ಲಿ ಊರ ಜನರಿಗೆ ಪಾಲುಹೋಗುತ್ತದೆ. ಈ ಸಾಮೂಹಿಕ ದುಡಿಮೆಯ ಕೆಲಸದಲ್ಲಿ ಎಲ್ಲರೂ ತಮ್ಮಿಂದಾದ ಸಹಾಯ ನೀಡುತ್ತಾರೆ. ವಯಸ್ಕರು ಹುಳಗಳ ಕರೆಗಟ್ಟದಂತೆ, ನೈಸರ್ಗಿಕ ಔಷಧಿಯನ್ನು ತಯಾರಿಸುವ ಕೆಲಸಕ್ಕೆ ತೊಡಗಿ ಅದನ್ನು ಪ್ಯಾಕಿಂಗ್ ಮತ್ತು ಸಾಗಾಟಕ್ಕೆ ಅನುಕೂಲ ಒದಗಿಸಿದರೆ, ಹೆಂಗಸರೆ ಒಣಭೋಜ ಪತ್ರಗಳ ಸಂಗ್ರಹ ಇತ್ಯಾದಿ ಮೂಲಕ ಸೇವೆ. ಆಯ್ದ ಗಂಡಸರು ಈ ಕೆಲಸಕ್ಕೆ ವಾರಗಟ್ಟಲೇ ಬೆಟ್ಟ ಏರುತ್ತಾರೆ. ವಾರಪೂರ್ತಿ ವಸತಿ, ಊಟ, ನೀರು ನಿಡಿ, ದಿನವೂ ದೊರೆತ ಹುಳಗಳ ಸಾಗಾಟ ಇತ್ಯಾದಿ ಸೌಕರ್ಯಕ್ಕೆ ಇನ್ನೊಂದು ತಂಡ ಕೆಲಸ ಮಾಡುತ್ತದೆ.
ಸಾಮೂಹಿಕ ಕಾರ್ಯದಲ್ಲಿ ಬರುವ ಹಣದ ವಿಲೇವಾರಿಯೂ ಸಮಾನ. ಮುಂದಿನ ಋತು ಮಾನದವರೆಗೆ ಹುಳದ ನೈಜಬೆಳವಣಿಗೆಗೆ ಅನುಕೂಲ ವಾಗುವಂಥ ವಾತಾವರಣ ಕಲ್ಪಿಸಿ ಬೆಟ್ಟ ಇಳಿಯುವ ಕುಠಿ ಜನರ ಸಾಮಾಜಿಕ ಜೀವನ ಶೈಲಿ ತುಂಬ ಉಚ್ಛ ಸ್ಥರದಲ್ಲಿದೆ. ಇವರೆಲ್ಲ ಜೋಂಗ್ಕಾಂಗ್ ಬುಡಕಟ್ಟಿನವರು. ಉಳಿದ ಸಮಯದಲ್ಲಿ ವೈಯಕ್ತಿಕ ಸಂಪಾದನೆ ಮಾಡಿಕೊಳ್ಳುವಅವಕಾಶ. ಅದಕ್ಕಾಗಿ ಪ್ರವಾಸಿಗರನ್ನು ಯಾತ್ರಿಗಳಿಗೆ, ಚಾರಣಿಗರ ಹಿಂಬಾಲಕರಾಗಿ ಕುದುರೆ ಮೂಲಕ ಕೈಲಾಸ – ಮಾನಸ ಸರೋವರ, ಅನ್ನಪೂರ್ಣೆ, ನಂದಾದೇವಿ ಹೀಗೆ ಹಲವು ಭಾಗಗಳಿಗೆ ಸವಾರಿ ಸಹಾಯ ಒದಗಿಸುತ್ತಾರೆ.
ಆಹಾರೋತ್ಪನ್ನಕ್ಕಾಗಿ ಲಭ್ಯವಾಗೋ ಸಣ್ಣ ಜಾಗವನ್ನೆ ಕೃಷಿಗಾಗಿ ಬಳಸುತ್ತಾರೆ. ಇಲ್ಲಿನವರಿಗೆ ದುಡಿಮೆಯೇ ಮೂಲಮಂತ್ರ ಮತ್ತು ಸಾಮಾಜಿಕ ಸಮರಸವೇ ಜೀವನದ ಪ್ರಮುಖ ಅಂಶ. ಸೀಯರು ಕಾರ್ಪೇಟ್ಟುಗಳನ್ನು ಹೆಣೆದು ಟಿಬೇಟ್, ನೇಪಾಳದ ಮೂಲಕ ಮಾರುಕಟ್ಟೆಗೆ ತಲುಪಿಸುತ್ತಾರೆ. ಒಂದೊಂದು ಕಾರ್ಪೆಟ್ಟಿಗೆ ಒಂದೂವರೆ ಸಾವಿರ ಅದಾಯ ದಕ್ಕುತ್ತದಂತೆ.
ವೈದ್ಯರ ಅಗತ್ಯವೇ ಇಲ್ಲದೆ ಬದುಕುತ್ತಿರುವ ಜೋಂಗ್ಕಾಂಗ್ ಸಮುದಾಯ ವಿಜ್ಞಾನ ಲೋಕಕ್ಕೊಂದು ಸವಾಲು. ಕಾಯಿಲೆ,ಕಸಾಲೆ ಸೇರಿದಂತೆ, ಕೈ ಕಾಲು ಮುರಿತಗಳಿಗೂ ಸ್ಥಳೀಯ ಪದ್ಧತಿಯ ಔಷಧಿಗಳಿವೆ. ಏಡ್ಸ್, ಕ್ಯಾನ್ಸರ್ ಇವರಿಗೇ ಗೊತ್ತೇ ಇಲ್ಲ. ಬಾಣಂತಿಯರು, ಮಕ್ಕಳು ತೀರಿ ಹೋಗಿದ್ದು, ವೈಫಲ್ಯ ಎಂಬ ದಾಖಲೆಗಳೆ ಇಲ್ಲ. ಇಲ್ಲಿನವರ ಜೀವಕಣಗಳ ಅಭ್ಯಾಸ ಖಂಡಿತಆಗಬೇಕಿದೆ. ತಲುಪುವ ದಾರಿ ಕಠಿಣ, ಅವರ ಜನರೇ ತಲುಪಲು ನಾಲ್ಕಾರು ದಿನಗಳು ಬೇಕಾಗುತ್ತದೆ. ನಮಗೆ ಡಬ್ಬಲ್ಲು.
ಭಾರತದ ಕೊನೆಯ ವಾಹನ ಸೌಕರ್ಯದ ಊರು ದಾರ್ಚುಲ. ಇಲ್ಲಿಂದ ಕಾಲ್ನಡಿಗೆಯ ಪಯಣ ಕುಠಿಯನ್ನು ತಲುಪಲುಅನಾಮತ್ತು ನೂರು ಕಿ.ಮೀ. ಮೇಲ್ಮುಖ ನಡಿಗೆ. ದಿನಕ್ಕೆ ಹತ್ತನ್ನೆರಡು ಕ್ರಮಿಸುವುದೂ ಕಷ್ಟ. ಶಿವಾಲಿಕಾ ಪರ್ವತ ಸಮೂಹದಲ್ಲಿ ಏರುತ್ತಾ ಸಾಗುವ ಈ ಊರಿಗೆ ಹೆಸರು ಲಭ್ಯವಾದದ್ದು ಪಾಂಡವರನ್ನು ಕೌರವರಿಂದ ರಕ್ಷಿಸಲು ಕುಂತಿ ಹಸ್ತಿನಾಪುರದಿಂದ ಇಲ್ಲಿಗೆ ಬಂದು ನೆಲೆಸಿದ್ದಳು ಎನ್ನುವುದು ಪುರಾಣದ ಕತೆ.
ದಾರ್ಚುಲಾದಿಂದ ಕಾಲ್ನಡಿಗೆಯಲ್ಲಿ ಸಾಗಿದ ನನ್ನ ಪಯಣ.. ನಡೆದದ್ದು ಸಿರ್ಖಾ, ಗಾಲ,ಬುಧಿಮತ್ತು ಗುಂಜಿ ಎಂಬ ಹಳ್ಳಿಗಳಮೇಲೆ ನಿರಂತರವಾಗಿ ಏರುತ್ತಾ ಸಾಗಿದ್ದು ಕುಠಿಗೆ. ಉತ್ತರಾಖಂಡದ ಜಲಪ್ರಳಯದಲ್ಲಿ ತವಾಘಾಟ ವರೆಗಿನ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ಎಡಕ್ಕೆ ಕಾಳಿಕಣಿವೆ ಬಲಕ್ಕೆ ಅಗಾಧ ಎತ್ತರದ ಪರ್ವತದ ಸೆರಗನ್ನು ಕೊರೆದು ಮಾಡಿದ ಕಾಲ್ದಾರಿಯಲ್ಲಿ ಏರುತ್ತಾ 18 ಕಿ.ಮೀ ಎತ್ತರಕ್ಕೆ ಏರಿ ಮೊದಲ ದಿನ ಗಾಲದ ಮೂಲಕ ಲಖನಪುರ ತಲುಪಿದಾಗ ಮೈಯೆಲ್ಲ ಕಿತ್ತು ಬರುವ ಬೆವರು, ಎತ್ತರದ ಕುಳಿರ್ಗಾಳಿಗೆ ತಣ್ಣಗೆ ಕೊರೆಯತೊಡಗಿತ್ತು.
ಇಲ್ಲಿ ಕೊಂಚ ವಿಶ್ರಾಮ ಮತ್ತೇ ಏರಾಟ. ಅಷ್ಟರವರೆಗೆ ಇಳಿದ ಅಂತರವನ್ನು ಮತ್ತೆ ಏರಿ ಬಾ ಎನ್ನುವಬುಧಿಎಂಬ ಬ್ರೆಕ್ ಪಾಯಿಂಟ್ ಆಳ ಕಣಿವೆಯ ಊರು. ಒಂದರ್ಥದಲ್ಲಿ ಕುಠಿ ಹಾಗೂ ದಾರ್ಚುಲಾದ ಮಧ್ಯ ಭಾಗ ಪ್ರಯಾಣಿಕರ ನಿರಂತರ ತಂಗುದಾಣದಂತಿರುವ ಊರು ಲಾಮಾರಿ. ಇಲ್ಲಿಂದ ಕುಠಿಯನ್ನು ತಲುಪುವವರೆಗೂ ಅನ್ನಪೂರ್ಣ, ಮಹಾದೇವ ಮತ್ತು ಶೇಷನಾಗನಂತಹ ಪರ್ವತಾಗ್ರಹಗಳು ನಿರಂತರವಾಗಿ ನಮ್ಮ ಎಡಭಾಗಕ್ಕೆ ಇರುತ್ತವೆ.
ಅನ್ನಪೂರ್ಣೆಯನ್ನು ಬಳಸಿಕೊಂಡು ಮರುದಿನ ಅನಾಮತ್ತು ನಾಲ್ಕೂವರೆ ಸಾವಿರ ಅಡಿ ಮೇಲಕ್ಕೇರಿದರೆ ಲಭ್ಯವಾಗುವ ಅಗಾಧಭೋಜವೃಕ್ಷ ಪತ್ರದ ಕಾಡೀನ ಶಿಯಾಲೇಕ್ ಎನ್ನುವ ಅವಿಸ್ಮರಣೀಯ ಸಮಪಾತಳಿ ಪ್ರದೇಶ. ಇದು ದೇಶದ ಎತ್ತರದ ಹುಲ್ಲುಗಾ ವಲು ಪ್ರದೇಶ. ಅದರ ಆರಂಭದಲ್ಲಿಯೇ ಸ್ವಾಗತಿಸುವಂತೆ ಯಾವಾಗಲೂ ಹೆಪ್ಪುಗಟ್ಟಿದಂತಿರುವ ಹಿಮನದಿ ಕಲ್ಲು ಬಂಡೆಯ ಪರ್ವತ ಪ್ರದೇಶದ ಮಧ್ಯ ಹಾಯ್ದು ಬಂದಿರುವ ದೃಶ್ಯಾವಳಿ ವಿವರಣೆಗೆ ನಿಲುಕದ ದೃಶ್ಯ.
ಇಲ್ಲಿಂದ ಬಲಕ್ಕೆ ತಿರುಗಿದರೆ, ಉಸಿರು ಹಿಡಿದುಕೊಳ್ಳುತ್ತಾ ಮೇಲಕ್ಕೇರಿದರೆ ಸಿಕ್ಕುವುದೇ ಅದ್ಭುತ ಎತ್ತರದ ಹಳ್ಳಿ ಕುಠಿ. ನೂರಾರುಟನ್ ಗ್ಲಾಸುಗಳನ್ನು ಎತ್ತಿ ಹಾಕಿದಂತೆ ಶಬ್ದಿಸುವ, ಆಗಾಗ ಜರಿದು ಬೀಳುವ ಅಗಾಧ ಹಿಮಬಂಡೆಗಳ ದಾರಿ ಕುಠಿಯ ಹೈವೆ.ಜೋಲೀಂಗ್ಕಾಂಗ್ ಎನ್ನುವ ಪರ್ವತ ಪ್ರದೇಶ ಇದರ ಬೇಸ್ ಕ್ಯಾಂಪು. ಉಳಿದೆ ನಮ್ಮಂತೆ ಜೀವನ ಶೈಲಿ ಎನ್ನಿಸಿದರೂ ಮರದದಿಮ್ಮಿಗಳನ್ನು ಜೋಡಿಸಿ, ಕಲ್ಲು ಬಂಡೆಗಳ ಮೇಲೆ ಎತ್ತರಕ್ಕೆ ಕಟ್ಟಿದ ಮನೆಗಳ ಸಮೂಹ ಆಕರ್ಷಕ. ತಂಪು ಹವೆಯಿಂದ ರಕ್ಷಿಸುವ ಮತ್ತು ಹಿಮಪಾತದಲ್ಲೂ ಬೆಚ್ಚಗಿರಿಸುವ ತಂತ್ರಜ್ಞಾನ ಇದು.
ಕೆಲವು ಮನೆಗಳಿಗೆ ಶತಮಾನದಷ್ಟು ವಯಸ್ಸಾಗಿದೆ. ಪ್ರತಿ ಮನೆಯ ಕಿಟಕಿಗಳೂ ಒಂದೊಂದು ವಿನ್ಯಾಸ ಆಕಾರ. ಮನೆಯ ಬಾಗಿಲಿಗಿಂತ ಕಿಟಕಿಯ ಚೆಂದವೆ ಬೇರೆ. ಊರಿಗೊಂದು ಕಮಾನು. ಸಂಪೂರ್ಣ ಊರಿಗೆ ಕಲ್ಲಿನ ಕಾಂಪೌಂಡು. ಒಳಗೆ ಪ್ರವೇಶವಿಲ್ಲ ಅವರದೇ ಪ್ರಾಣಿಗಳಿಗೂ, ಕತ್ತಲಡರುತ್ತಿದ್ದರೆ ಹೊರಗಿನ ಮನುಷ್ಯರಿಗೂ. ಇದ್ಯಾಕೆ ಹೀಗೆ..? ಪ್ರಾಣಿಗಳ ಬೇಟೆಯಾಡುತ್ತಾ ಹಿಂಬಾಲಿಸುವ ಕೆಟ್ಟ ಶಕ್ತಿಗಳು, ಅಪರಿಚಿತರ ಜೊತೆ ಬರುವ ಅಪರಿಚಿತ ಶಕ್ತಿಗಳೂ ಕತ್ತಲೆಯಲ್ಲಿ ಊರೊಳಕ್ಕೆ ಬರುತ್ತವೆ. ಅದಕ್ಕಾಗಿ ನಮ್ಮೂರು ನಮ್ಮ ಜನ, ನೀವೆಲ್ಲ ಹೊರಗೆ ಎನ್ನುವುದು ಸ್ಥಳೀಯ ಪಾಲಿಸಿ.
ಅವರವರ ನಂಬಿಕೆ. ಉದ್ದ ಕೂದಲಿನ ಮೇಕೆಗಳು, ಎತ್ತು, ಹಸು, ಕಚ್ಛರಗಳು, ಕುದುರೆ ಅವುಗಳ ಮರಿಗಳ ಕೆನೆತ, ಪೊಗದಸ್ತು ಸೈಜಿನ ನಾಯಿಗಳು ಹೀಗೆ ಒಂದು ಪ್ರಾಣಿಸಂಗ್ರಹಾಲಯದಂತೆ. ಎಲ್ಲ ಒಂದು ಚಪ್ಪರದ ಕೆಳಗೆ ಬಿಟ್ಟಿರುತ್ತಾರೆ. ಮೂಕಭಾಷೆಯಲ್ಲಿ ಆಗಿರುವ ಒಪ್ಪಂದಂತೆ ಒಂದಕ್ಕೊಂದು ಮೈ ಹೊಸೆದುಕೊಂಡು ಕತ್ತು ಸೇರಿಸಿ, ಕಾಲುಚಾಚಿ ಸೆಟ್ಲ್ ಆಗಿಬಿಡುತ್ತವೆ ಎಲ್ಲ ಪ್ರಾಣಿ ಗಳು. ತಂತಮ್ಮೊಳಗೇ ಆಗಿರುವ ದೋಸ್ತಿಗಳ ಅನುಸಾರ ಬದುಕುತ್ತವೆ.
ಸೂರ್ಯಾಸ್ತಕ್ಕೂ ಮೊದಲೇ, ಊರೊಳಕ್ಕೆ ಪ್ರವೇಶಿಸಿ ಸಣ್ಣ ಮನೆಯೊಳಗೆ ಅತಿಥಿಯಾಗಿ ದಾಖಲಾಗಿ. ಅಡುಗೆ ಮನೆಯಬಿಸಿಗೆ ಕೂತ ಮೈ ಕಾಯಿಸಿಕೊಳ್ಳಬಹುದಾದಷ್ಟು ದೊಡ್ಡ ಮನೆಗಳು. ಮಾತುಕತೆಗೆ ಬರವಿಲ್ಲ. ಹೊತ್ತೊತ್ತಿಗೆ ದಕ್ಕುತ್ತಿದ್ದ ದಾಲ್ಚಿನ್ನಿಬೆರೆಸಿದ ಚಹ, ಜೊತೆಗೆ ಅಲೂ, ಹಸಿರು ಬಟಾಣಿಯ ಸಾರ್ವತ್ರಿಕ ಪಲ್ಯ. ಹೊದ್ದು ಮಲಗಿಬಿಡೋಣ ಅನ್ನಿಸುವಷ್ಟು ಆಗಿದ್ದ ಆಯಾಸಕ್ಕೆ ಚಳಿ ಜೊತೆಕೊಡುತ್ತಿದ್ದರೆ ಆವತ್ತಿಗೆ ಕುಠಿ ಎಂಬ ಚೀನಿ ಸರಹದ್ದಿಗೆ ಅತೀ ಹತ್ತಿರ ಊರು ಮಲಗಿದ್ದ ಸ್ವರ್ಗ. ಬೆಳಿಗ್ಗೆ ವಾತಾವವರಣ ಸರಿ ಇದ್ದರೆ ದಾರಿ ಹಿಡಿದು ಕೆಳಗಿಳಿಯುವುದು.
ಇಲ್ಲ ಮತ್ತೊಂದು ದಿನ ಅ ಠಿಕಾಣಿ. ನನ್ನಂಥ ಅಲೆಮಾರಿಗಿನ್ನೇನು ಕೆಲಸ. ಕತೆ ಹೊಡೆಯುತ್ತಾ ಅ ಝೆಂಡಾ. ಹಾಗಾದಾಗ ಮಾತ್ರ ಹೀಗೆಲ್ಲ ಬರೆಯಲು ಸಾಧ್ಯವಾದದ್ದು