ಇತಿ ಪಾದರಕ್ಷಾ ಪುರಾಣಂ
ಶಿಶಿರ ಕಾಲ
ಶಿಶಿರ್‌ ಹೆಗಡೆ
ಬಹಳ ವರ್ಷಗಳ ಹಿಂದಿನ ಸುದ್ದಿ. ನಿಮಗೆ ಆ ಸುದ್ದಿ ಮೊದಲು ಓದಿದ ನೆನಪಿದ್ದರೂ ಇರಬಹುದು. ತಮಿಳುನಾಡಿನ ಜೆ. ಜಯಲಲಿತಾ ಮನೆಯ ಮೇಲೆ ಸಿಬಿಐ ದಾಳಿಯಾಗಿತ್ತು. ಕರುಣಾನಿಧಿ ಅಧಿಕಾರಕ್ಕೆ ಬಂದಾಕ್ಷಣ ಜಯಲಲಿತಾಳನ್ನು ಜೈಲಿಗೆ ಅಟ್ಟುವ ತಯಾರಿ ಮಾಡುವುದು, ಆಮೇಲೆ ಜಯಲಲಿತಾ ಅಧಿಕಾರಕ್ಕೆ ಬಂದ ಕೂಡಲೆ ಕರುಣಾನಿಧಿಯನ್ನು ಜೈಲಿಗೆ ಕಳಿಸುವುದು ಹೀಗೆ ಅದೊಂದು ಟಾಮ್ ಆಂಡ್ ಜೆರ್ರಿ ರಾಜಕಾರಣದ ದಿನಗಳು.
ಕರುಣಾನಿಧಿ ಮಹಾ ಚತುರ. ಜಯಲಲಿತಾ ತಾಕತ್ತನ್ನು ಅತ್ಯಂತ ಮೊದಲು ಗುರುತಿಸಿದ್ದೇ ಕರುಣಾನಿಧಿ. ರಾಜಕೀಯದಲ್ಲಿ ತಮ್ಮ ಪಕ್ಷದ ಇರುವ ಪೈಪೋಟಿಯನ್ನು ಗ್ರಹಿಸುವುದು ಅತ್ಯಂತ ಮುಖ್ಯವಾದದ್ದು. ರಾಜಕಾರಣದಲ್ಲಿ ಸ್ವಪಕ್ಷದಲ್ಲಿಯೇ ಅತ್ಯಂತಸ್ಪರ್ಧೆಯಿರುತ್ತದೆ. ಅಲ್ಲಿ ಗೆದ್ದರೆ ಮಾತ್ರ ಮುಂದಿನ ಸ್ಪರ್ಧೆ. ಅಲ್ಲಿಯೇ ಎಡವಿ ಮುನ್ನೆಲೆಗೆ ಬರದೇ ಹೋದ ಅದೆಷ್ಟೋರಾಜಕಾರಣಿಗಳಿದ್ದಾರೆ.
ಅವರ ಹೆಸರು ಗೊತ್ತಿರುವುದಿಲ್ಲ. ರಾಜಕಾರಣಿ ಅದೆಷ್ಟೇ ಸಾಚಾ ಎಂದಾದರೂ ಆತ/ಆಕೆ ಅದೊಂದಿಷ್ಟು ಈ ರೀತಿಯ ಸ್ಪರ್ಧೆ ಗಳನ್ನು ಗೆದ್ದೇ ಬರಬೇಕು. ಹೀಗೆ ಸೆಣಸುವ ಇಬ್ಬರು ರಾಜಕಾರಣಿಗಳು ಸಮ ತಾಕತ್ತುಳ್ಳವರಾದರೆ ಮುಂದೊಂದು ದಿನ ಇದೇ ಹೊಡೆದಾಟ ಪಕ್ಷವನ್ನೇ ಎರಡು ಭಾಗವನ್ನಾಗಿಸಿಬಿಡಬಹುದು. ಇದಕ್ಕೆ ಎಲ್ಲ ಪಕ್ಷದಲ್ಲೂ ಉದಾಹರಣೆಗಳಿವೆ.
ಎಂ.ಜಿ.ಆರ್ ಆಗಿನ್ನೂ ಡಿಎಂಕೆಯ ಇದ್ದರು. ಮಧುರೈನಲ್ಲಿನ ಒಂದು ರಾಲಿ. ಎಂ.ಜಿ.ಆರ್ ಈ ರಾಲಿಯಲ್ಲಿ ಜಯಲಲಿತಾಗೆ ಮಾತನಾಡಲು ಬಿಡಬೇಕು ಎಂದು ಹೇಳಿದಾಗ ಕರುಣಾನಿಧಿ ಅದನ್ನು ಸುತರಾಂ ಒಪ್ಪಲೇ ಇಲ್ಲ. ಹೀಗೆ ಅದ್ಯಾವತ್ತೋ ಶುರುವಾದ ರಾಜಕೀಯ ವೈಮನಸ್ಸು ಮತ್ತು ಸ್ಪರ್ಧೆ ನಂತರದಲ್ಲಿ ಈ ಇಬ್ಬರು ಮುಖ್ಯಮಂತ್ರಿಯಾದಾಗಲೂ ಮುಂದುವರಿಯಿತು.
ಅವರಿಬ್ಬರ ಕೊನೆಯ ಉಸಿರಿರುವಲ್ಲಿಯವರೆಗೂ ಹಾಗೆಯೇ ಇತ್ತು. ದಕ್ಷಿಣದ ರಾಜಕಾರಣದಲ್ಲಿ ಜಯಾ ಮತ್ತು ಕರುಣಾನಿಧಿ ಕಿತ್ತಾಡಿದಷ್ಟು ಇನ್ಯಾರೂ ಕಿತ್ತಾಡಿಲ್ಲ. ತಮಿಳುನಾಡಿನ ರಾಜಕಾರಣದ ಇತಿಹಾಸ ರಾಜಕೀಯದಲ್ಲಿ ಆಸಕ್ತಿಯುಳ್ಳವರಿಗೆ ಪಿಎಚ್.ಡಿ ಗ್ರಂಥ. ಅದೆಲ್ಲ ಅಲ್ಲಿಗೇ ಬಿಡಿ. ರಾಜಕಾರಣದಲ್ಲಿ ಅದೆಷ್ಟೇ ಆಸಕ್ತಿಯಿದ್ದರೂ ಅದರ ಬಗ್ಗೆ ಬರೆಯಲೇ ಬಾರದು ಎಂದು ಕೆಲವರ್ಷಗಳ ಹಿಂದೆಯೇ ನಿರ್ಧರಿಸಿ ಆಗಿದೆ. ಜಯಲಲಿತಾ ಇವತ್ತು ನೆನಪಾಗಿದ್ದೇಕೆ ಎಂದರೆ ಅದ್ಯಾವತ್ತೋ ಕೇಳಿದ ಸುದ್ದಿಯಿಂದಾಗಿ.ಇಪ್ಪತ್ತೈದು ವರ್ಷ ಹಿಂದಿರಬೇಕು, ಸಿಬಿಐ ದಾಳಿಯಾಯಿತು ಅಥವಾ ಮಾಡಿಸಲಾಯಿತು – ಜಯಲಲಿತಾ ಆಸ್ತಿ ಜಪ್ತಿಯಾದಾಗಬಂದ ಸುದ್ದಿಯಲ್ಲಿ ನನಗೆ ಅತೀ ಗಮನ ಸೆಳೆದದ್ದು ಆಕೆಯ ಬಳಿ ಇದ್ದ750ಜತೆ ಚಪ್ಪಲಿಗಳು.
ಅಷ್ಟೊಂದು ಸಂಖ್ಯೆಯ ಚಪ್ಪಲಿ ಮನುಷ್ಯನ ಆಸೆ, ಲಾಲಸೆಯ ಪ್ರತೀಕ ಎಂಬಂತೆ ಅದೆಷ್ಟೋ ಮಂದಿ ಆಡಿಕೊಂಡಿದ್ದರು. ಹತ್ತು ಸಾವಿರ ರೇಷ್ಮೆ ಸೀರೆ ಇತ್ತಂತೆ ಎನ್ನುವ ಸುದ್ದಿ ಅಷ್ಟಾಗಿ ಏನೂ ಅನ್ನಿಸಲಿಲ್ಲ. ಸೀರೆಯಾದರೆ ಗಿಫ್ಟ್ ಕೊಟ್ಟದ್ದಿರಬಹುದು. ಆದರೆ750ಜೊತೆ ಚಪ್ಪಲಿ!
ಈಗಿನ ಕಾಲದದರೆ ಅಷ್ಟು ಆಶ್ಚರ್ಯವಾಗುತ್ತಿರಲಿಲ್ಲವೇನೋ. ಇಂದಿನ ಕಾಲದಲ್ಲಿ ಹೆಚ್ಚಿನವರ ಹತ್ತಿರ ಹತ್ತಿಪ್ಪತ್ತು ಜೋಡಿ ಚಪ್ಪಲಿ ಸಾಮಾನ್ಯ – ಕೊನೆಯ ಪಕ್ಷ ನಾಲ್ಕೆ ದಂತೂ ಇದ್ದೇ ಇರುತ್ತದೆ. ಹಾಗಿರುವಾಗ ರಾಜಕಾರಣಿ ಅದರಲ್ಲೂ ಅಷ್ಟೊಂದು ಬಾರಿಮುಖ್ಯಮಂತ್ರಿಯಾಗಿದ್ದಾಕೆ ಏಳೆಂಟು ನೂರರ ಲೆಕ್ಕದಲ್ಲಿ ಚಪ್ಪಲಿ ಹೊಂದಿದ್ದಾರೆ ದೊಡ್ಡ ವಿಷಯವೇ ಆಗುತ್ತಿರಲಿಲ್ಲ. ಆದರೆ ಆಕಾಲದಲ್ಲಂತೂ ಇದೊಂದು ಆಶ್ಚರ್ಯ ಮತ್ತು ಬೆರಗಿನ ಸುದ್ದಿಯೇ ಆಗಿತ್ತು. ಆಮೇಲೆ ಜಯಲಲಿತಾ ಕೇಸ್ ಸುದ್ದಿ ಓದಿದಾಗಲೆಲ್ಲನನ್ನದು ಒಂದೇ ಚಿಂತೆ – ಆ ಚಪ್ಪಲಿಗಳು ಏನಾದವು ಎಂದು.
ಬೆಂಗಳೂರಿನ ಕೋರ್ಟ್ ಜಯಲಲಿತಾಳನ್ನು ಖುಲಾಸೆ ಮಾಡಿದಾಗ ಈ ಚಪ್ಪಲಿಗಳನ್ನು ವಾಪಾಸ್ ಕೊಟ್ಟರೇ? ಅಥವಾಮೇಲ್ಮನವಿ ಕಾರಣದಿಂದ ಇದನ್ನು ಹಾಗೆಯೇ ಇಟ್ಟುಕೊಂಡಿದ್ದರೇ, ಚಪ್ಪಲಿ ಚರ್ಮದ್ದಾದರೆ ಹಾಳಾಗಿ ಹೋಗಿರಬಹುದು, ಫಂಗಸ್ ಹತ್ತಿರಬಹುದು, ಕುಟ್ಟಿ ಹಿಡಿದಿಸಬಹುದು. ಹಾಗೆ ಹಾಳಾದರೆ – ಅದು ಒಂದು ವೇಳೆ ನ್ಯಾಯ ಮಾರ್ಗದ ಖರೀದಿಸಿ ದ್ದಾದಲ್ಲಿ ಸರಕಾರ ವೈಯಕ್ತಿಕ ಆಸ್ತಿ ಹಾನಿ ಮಾಡಿದಂತಾಗಲಿಲ್ಲವೇ? ಈ ಹಾನಿ ತುಂಬಿಕೊಡುವವರು ಯಾರು.
ಹೀಗೆ ಜಯಲಲಿತಾ ಕೇಸ್ ಹಿಂಬಾಲಿಸುವಾಗ ಓದಿದ ಸುದ್ದಿಗಳೆಲ್ಲ ಆಕೆಯ ಆ750ಜೊತೆ ಚಪ್ಪಲಿಗಳನ್ನೇ ನೆನಪಿಸುತ್ತಿತ್ತು.ಅದೊಂದು ಒಬ್ಸೇಷನ್ ಅನ್ನಿ ಅಥವಾ ಚಾಳಿ ಅನ್ನಿ. ಸಾಮಾನ್ಯವಾಗಿ ಹೊಸಬರನ್ನು ಭೇಟಿಯಾದಾಗಲೆಲ್ಲ ಅವರ ಚಪ್ಪಲಿ ಯನ್ನು ಗ್ರಹಿಸುವ ಒಂದು ಕೆಟ್ಟ ಚಟ ನನಗಿದೆ. ಎದುರಿಗೆ ಸಿಕ್ಕವರ ಬಟ್ಟೆಗಿಂತ ಮೊದಲು ಗ್ರಹಿಸುವುದೇ ಚಪ್ಪಲಿ – ಶೂ ಅನ್ನು.ಅದಕ್ಕೆ ಜಯಲಲಿತಾ ಚಪ್ಪಲಿ ಸುದ್ದಿ ಅಷ್ಟು ಹಿಂಬಾಲಿಸಿದ್ದೇ ಕಾರಣವೇ? ಗೊತ್ತಿಲ್ಲ ಮಾರಾಯ್ರೆ.
ಸಾಮಾನ್ಯವಾಗಿ ಯಾರದ್ದೇ ಪರಿಚಯವಾದಾಗ, ಆಮೇಲೆ ಭೆಟ್ಟಿ ಆದಾಗ ಒಬ್ಬೊಬ್ಬರ ಗಮನ ಒಂದೊಂದು ರೀತಿಯದ್ದಾಗಿ ರುತ್ತದೆ. ಕೆಲವರು ಸಿಕ್ಕವರ ಹೇರ್ ಸ್ಟೈಲ್ ನೋಡುತ್ತಾರೆ. ಇನ್ನು ಕೆಲವರು ಬಟ್ಟೆಯನ್ನು, ಕೆಲವರು ಕೈ ಬೆರಳನ್ನು, ಹಣೆಯನ್ನು ಹೀಗೆ (ಅಷ್ಟಕ್ಕೇ ಬಿಡೋಣ). ಇದಕ್ಕೆ ಇಂಥದ್ದೇ ಉದ್ದೇಶ ಎಂದು ಆರೋಪಿಸಬೇಕಿಲ್ಲ. ಅಸಲಿಗೆ ಇದಕ್ಕೊಂದು ಕಾರಣ ಎಂದಿ ರುವುದಿಲ್ಲ. ಮೊದಮೊದಲು ಹೀಗೊಂದು ಚಾಳಿ ನನಗೊಂದೇ ಇತ್ತು ಎಂದುಕೊಂಡಿದ್ದೆ. ಆದರೆ ಇದು ಸಾರ್ವತ್ರಿಕ ಎಂದು ಆಮೇಲೆ ತಿಳಿದದ್ದು. ಇದೊಂದು ನಿಷ್ಕಾರಣ. ಇದರಿಂದ ವ್ಯಕ್ತಿ ಚಿತ್ರಣ ಮಾಡುವಂತಿಲ್ಲ.
ಮನುಷ್ಯನ ಹತ್ತಾರು ಪುಕ್ಸಟ್ಟೆ ಚಾಳಿಗಳಲ್ಲಿ ಇದು ಕೂಡ ಒಂದು ಅಷ್ಟೇ. ಪ್ರತಿಯೊಬ್ಬರಿಗೂ ಇಂಥದ್ದೊಂದು ಅಯಾಚಿತ ಮತ್ತು ಮುಗ್ಧ ಚಾಳಿಯಿರುತ್ತದೆ. ಈ ಚಾಳಿಯಿಂದಲೋ, ಚಪ್ಪಲಿ – ಶೂ ಎಡೆಗಿನ ಗೀಳಿನಿಂದಲೋ ಏನೋ, ಅದರ ಸುತ್ತ ಅದೆಷ್ಟೋ ಪ್ರಶ್ನೆಗಳು ನನ್ನನ್ನು ಕಾಡಿವೆ. ಚಪ್ಪಲಿ ಆವಿಷ್ಕಾರವಾದದ್ದು ಏಕೆ ಎನ್ನುವ ಸರಳ ಪ್ರಶ್ನೆಗೆ ಅಷ್ಟೇ ಸರಳ ಉತ್ತರ ಕಾಲಿನ ರಕ್ಷಣೆ. ಆದರೆ ಕಾಲನ್ನು ರಕ್ಷಣೆ ಮಾಡಿಕೊಳ್ಳುವ ಅವಶ್ಯಕತೆ ಅದು ಯಾವಾಗ ಮನುಷ್ಯನಿಗೆ ಎದುರಾಯಿತು? ಏಕೆ ನಾವು ಚಪ್ಪಲಿ – ಶೂ ಧರಿಸಬೇಕು? ಕಾಲಿನ ಪಾದ ಯಾವಾಗ ಅದರ ಆದ್ಯ ಕರ್ತವ್ಯವನ್ನೇ ಮರೆಯಿತು? ಹೀಗೊಂದಿಷ್ಟು.
ಮನುಷ್ಯನ ಕಾಲು ಅಂಗಾಂಗಗಳಲ್ಲಿಯೇ ಕನಿಷ್ಠ ಎನ್ನುವ ಭಾವನೆ ಅದೆಷ್ಟೋ ಶತಮಾನದಿಂದ ಬಹುತೇಕ ಎಲ್ಲ ಮನುಷ್ಯಜನಾಂಗದಲ್ಲಿಯೂ ಇದೆ. ಕಾಲು ತಾಗಿಸುವುದು, ಒದೆಯುವುದು ಇವೆಲ್ಲ ನೋವಿಗಿಂತ ಅವಮಾನದ ವಿಚಾರ ಅಲ್ವೇ? ನಾನುಅದನ್ನು ಕಾಲಿನಿಂದಲೂ ಮುಟ್ಟುವುದಿಲ್ಲ ಎನ್ನುವ ಮಾತನ್ನು ಆಗೀಗ ಕೇಳುತ್ತಿರುತ್ತೇವೆ – ಹೇಳುತ್ತಿರುತ್ತೇವೆ. ಕಾಲು ಎನ್ನುವಅತ್ಯಂತ ಮುಖ್ಯ ಅಂಗವನ್ನು ನಾವು ಸಾಮಾಜಿಕವಾಗಿ ನೋಡುವ ರೀತಿಯೇ ಬೇರೆ. ಕಾಲಿನ ಮಹತ್ವ ಅದಿಲ್ಲದವರಿಗಷ್ಟೇ ಗೊತ್ತುಎನ್ನುವಂತಾಗಿದೆ. ಕಾಲಿನಲ್ಲಿ ಪಾದಕ್ಕೆ ಕೊಡುವ ಸ್ಥಾನ ಇನ್ನೂ ಕನಿಷ್ಠದ್ದು. ಹಾಗೆ ನೋಡಿದರೆ ಕಾಲಿನ ಪಾದದ ರಚನೆ ಮೇಲ್ನೋಟಕ್ಕೆ ಸರಳವೆನ್ನಿಸಿದರೂ ತಿಳಿದುಕೊಂಡಷ್ಟು ಸಾಮಾನ್ಯವಲ್ಲ.
ಇಪ್ಪತ್ತಾರು ಮೂಳೆಗಳೊಂದಿಗಿನ ಕಾಲಿನ ಪಾದದ ರಚನೆ ಅತ್ಯಂತ ಸೂಕ್ಷ್ಮವಾದದ್ದು. ಪ್ರತೀ ಮೂಳೆ ಆರು ಡಿಗ್ರಿ ತಿರುಗಬಹುದು. ಸುಮಾರು ಇಪ್ಪತ್ತು ಸ್ನಾಯುಗಳು ಮತ್ತು ನಾಲ್ಕು ಪದರ. ಇದು ಪ್ರಾಯಶಃ ಕಾಲು ಪಾದದ ಅತ್ಯಂತ ಸರಳ ವಿವರಣೆ. ಆದರೆ ಮನುಷ್ಯನ ವಿಕಸನದ ಅಭ್ಯಾಸದಲ್ಲಿ ಮೆದುಳಿಗಿಂತ ಜಾಸ್ತಿ ಅಭ್ಯಾಸ ಮಾಡುವ ಅಂಗವೆಂದರೆ ಕಾಲು ಎಂದರೆ ಆಶ್ಚರ್ಯ ವಾಗಬಹುದು. ನಮ್ಮ ಕಾಲು ವಿಕಾಸನವಾದ ಕಥೆಯೇ ಮನುಷ್ಯನ ವಿಕಸನದ ಕಥೆ.
ಇಪತ್ತು ಲಕ್ಷ ವರ್ಷದ ಹಿಂದಿನಿಂದ ಇಂದಿನವರೆಗೆ ಮನುಷ್ಯನ ಅಸ್ತಿತ್ವದಲ್ಲಿ ಕಾಲಿನ, ಅದರಲ್ಲಿಯೂ ಪಾದದ ರಚನೆ ಅತಿಮುಖ್ಯವಾದದ್ದು. ಪಾದದ ರಚನೆ ಅತ್ಯಂತ ಅದ್ಭುತ. ಇದಕ್ಕೊಂದು ವಿಶೇಷ ರಕ್ಷಣೆಯ ಅವಶ್ಯಕತೆಯಿತ್ತೇ? ಹಾಗೊಂದು ಅವಶ್ಯಕತೆ ಹುಟ್ಟಿದ್ದಾದರೂ ಯಾವಾಗ? ಈ ಪ್ರಶ್ನೆಗಳು ನಮ್ಮನ್ನು ಬರೋಬ್ಬರಿ ನಲವತ್ತು ಸಾವಿರ ವರ್ಷ ಹಿಂದಕ್ಕೆ ಕರೆದು ಕೊಂಡು ಹೋಗಿ ನಿಲ್ಲಿಸುತ್ತದೆ. ಹೌದು ಮನುಷ್ಯ ಚಪ್ಪಲಿ ಧರಿಸಲು ಶುರುಮಾಡಿ ನಲವತ್ತು ಸಾವಿರ ವರ್ಷವಾಯಿತು.
ಉತ್ಖನನದಲ್ಲಿ ಮೊದಲ ಸಿಕ್ಕ ಚಪ್ಪಲಿ ಅಷ್ಟು ಹಳೆಯದು. ಮೊದಲು ಎಲ್ಲಿಯ ಮನುಷ್ಯ ಚಪ್ಪಲಿ ಧರಿಸಲು ಶುರುಮಾಡಿದ ಎನ್ನುವ ಪ್ರಶ್ನೆಗೆ ನಿರ್ದಿಷ್ಟ ಉತ್ತರವಿಲ್ಲ. ಯಾವ ದೇಶದ ಇತಿಹಾಸಕಾರರನ್ನು ಕೇಳಿದರೂ ಇದು ನಮ್ಮಲ್ಲಿಯೇ ಮೊದಲು ಎನ್ನುತ್ತಾರೆ, ನಮ್ಮಲ್ಲಿನ ನ್ಯೂಸ್ ಚ್ಯಾನಲ್ ಗಳಂತೆ. ಒಟ್ಟಾರೆ ಮೊದಲ ಚಪ್ಪಲಿಯೆಂದರೆ ಅದು ಬೇಟೆಯಾಡಿದ ಪ್ರಾಣಿಯ ಚರ್ಮ. ಅದನ್ನು ಕಾಲಿಗೆ ಸುತ್ತಿಕೊಳ್ಳುವ ಪದ್ಧತಿ ಶಿಲಾಯುಗದ ಕಾಲಕ್ಕಿಂತ ಬಹಳ ಮುಂಚೆ ಇತ್ತು. ಆಮೇಲೆ ಶಿಲಾಯುಗದ ಅಂತ್ಯದ ಸೂಜಿಯ ಆವಿಷ್ಕಾರವಾದ ನಂತರ ಅದೇ ಚರ್ಮವನ್ನು ಪಾದಕ್ಕೆ ಹೊಂದುವಂತೆ ಹೊಲಿದುಕೊಳ್ಳುವ ಕ್ರಮ ಶುರುವಾಯಿತು. ಚಿಕಾಗೋ ಫೀಲ್ಡ್ ಮ್ಯೂಸಿಯಂನಲ್ಲಿ ಸುಮಾರು ನಾಲ್ಕು ಸಾವಿರ ವರ್ಷ ಹಳೆಯದಾದ ನಾರಿನ ಚಪ್ಪಲಿಯಿದೆ. ಥೇಟ್ ಕೊಲ್ಹಾಪುರಿ ಚಪ್ಪಲಿಯನ್ನು ಹೋಲುವ ಇದು ಈಜಿಪ್ಟ್‌ನದು.
ಈ ಮ್ಯೂಸಿಯಂನ ತುಂಬ ಬೇರೆ ಬೇರೆ ಕಾಲ ಘಟ್ಟದಲ್ಲಿ ಮನುಷ್ಯ ಧರಿಸಿದ ಚಪ್ಪಲಿ ಇಡಲಾಗಿದೆ. ಇತಿಹಾಸದುದ್ದಕ್ಕೂ ಚಪ್ಪಲಿ ಒಂದು ಅವಶ್ಯಕತೆ. ಮೊದಲು ಬೇಟೆಗೆ ಹೋಗುವ ಗಂಡಸರಷ್ಟೇ ಚಪ್ಪಲಿ ಧರಿಸುತ್ತಿದ್ದರು. ಆಮೇಲೆ ಚಪ್ಪಲಿ ಎನ್ನುವುದು ಯುದ್ಧ ಪೋಷಾಕಿನ ಜೊತೆ ಸೇರಿಕೊಂಡಿತು. ರಾಜರುಗಳಿಗೆ ಚಪ್ಪಲಿ ಹೊಲಿಯಲೆಂದೇ ಕುಟುಂಬಗಳು ನಿಗದಿಯಾದವು. ಕ್ರಮೇಣ ಅದೊಂದು ಕೌಶಲ್ಯ ಎಂದು ಗುರುತಿಸಲ್ಪಟ್ಟಿತು. ಒಳ್ಳೆಯ ಚಪ್ಪಲಿ ತಯಾರಿಸುವವನಿಗೆ ಬಹುತೇಕ ಆಸ್ಥಾನಗಳಲ್ಲಿ ವಿಶೇಷ ಮರ್ಯಾದೆಯಿತ್ತು. ಕ್ರಮೇಣ ಶಸ್ತ್ರಾಸ್ತ್ರ ತಯಾರಿಸುವುದರ ಜೊತೆ ಚಪ್ಪಲಿಯನ್ನು ಜೋಡಿಸಲಾಯಿತು.
ಅದೊಂದು ಕಾಲವಿತ್ತು – ಹೇಗೆ ಇಂದು ಬುಲೆಟ್ ಪ್ರೂಫ್ ಮತ್ತು ಹೆಲ್ಮೆಟ್‌ಗಳು ಸೈನ್ಯವನ್ನು ಗ್ರೇಡ್ ಮಾಡುತ್ತವೆಯೋ ಅದೇ ರೀತಿಚಪ್ಪಲಿ ರಾಜನ ಸೈನ್ಯದ ಆಧುನಿಕತೆಯ ಪ್ರತೀಕವಾಗಿತ್ತು. ಇಂದಿಗೂ ಅಮೆರಿಕಾದ ಹಲವು ರಾಜ್ಯಗಳಲ್ಲಿ, ಪ್ರಪಂಚದ ಹಲವು ದೇಶಗಳಲ್ಲಿ ಚಪ್ಪಲಿಯನ್ನು ಅವಶ್ಯಕ ವಸ್ತು ಎಂದೇ ಪರಿಗಣಿಸಲಾಗುತ್ತದೆ. ಆ ಕಾರಣಕ್ಕೆ ಜಗತ್ತಿನ ಹಲವು ರಾಜ್ಯ ದೇಶಗಳಲ್ಲಿ ಚಪ್ಪಲಿಗಳಿಗೆ ಸುಂಕ ಅನ್ವಯವಾಗುವುದಿಲ್ಲ. ಆದರೆ ಚಪ್ಪಲಿ ಅವಶ್ಯಕತೆಯೇ ಅಥವಾ ಶೋಕಿಯೇ ಎನ್ನುವ ಜಿಜ್ಞಾಸೆ ಇಂದು ನಿರ್ಮಾಣವಾಗಿದೆ.
ಚಪ್ಪಲಿ ಅವಶ್ಯಕತೆಯಿಂದ ಮುಂದೆ ಹೋಗಿ ಶೋಕಿಯಾದದ್ದು ಯಾವಾಗ? ಬಹುಷಃ ಜನರು ಚಪ್ಪಲಿಯನ್ನು ಕೇವಲ ಪಾದರಕ್ಷೆಯಾಗಿ ಅಷ್ಟೇ ನೋಡದೆ ಅದರಾಚೆ ಪರಿಗಣಿಸಲು ಶುರುಮಾಡಿದ್ದು ಯಾವಾಗ? ಹದಿನಾಲ್ಕನೇ ಶತಮಾನ – ಮನುಷ್ಯನ -ಶನ್ ಪ್ರಜ್ಞೆ ಅತಿ ಹೆಚ್ಚು ಜಾಗೃತವಾಗಿದ್ದು ಆ ಸಮಯದಲ್ಲಿ. ಕೂದಲು,ಮೈ, ಕೈ ಗೆ ಬಣ್ಣ ಹಚ್ಚಿಕೊಳ್ಳುವ ಅವಶ್ಯಕತೆ ಭೇಟೆಯ ಸಂದರ್ಭದಲ್ಲಿ, ಕಾಡಿನಲ್ಲಿ ಅಡಗಳು ಹುಟ್ಟಿದ್ದು. ಕ್ರಮೇಣ ಈ ಕ್ರಮ ಅಲಂಕಾರಕ್ಕೆ ತಿರುಗಿ ಅದೆಷ್ಟೋ ಶತಮಾನಗಳೇ ಕಳೆದಿದ್ದರೂ ವಸವನ್ನೇ ಅಲಂಕರಿಸಿಕೊಳ್ಳುವ ಪದ್ಧತಿ ಅಷ್ಟೆಲ್ಲ ಹಳೆಯದಲ್ಲ.
ಈ ವಸ್ತ್ರಾಲಂಕಾರದ ಜೊತೆ ಜೊತೆ ನಾವು ಕಲಿತದ್ದು ಚಪ್ಪಲಿ ಅಲಂಕಾರವನ್ನು. ಹದಿನಾಲ್ಕನೇ ಶತಮಾನದಿಂದ ಹದಿನೆಂಟನೇಶತಮಾನದ ವರೆಗೆ ಜಗತ್ತೇ ಬದಲಾದರೂ ಚಪ್ಪಲಿ ಬದಲಾಗಲಿಲ್ಲ. ಹದಿನೆಂಟನೆಯ ಶತಮಾನದ ವರೆಗೂ ಚಪ್ಪಲಿಗೆ ಅಷ್ಟೊಂದು ಲಿಂಗಬೇಧವಿರಲಿಲ್ಲ. ಗಂಡಸರ ಮತ್ತು ಹೆಂಗಸರ ಚಪ್ಪಲಿ ಒಂದೇ ರೀತಿ ಇರುತ್ತಿತ್ತು. ಹದಿನೈದನೇ ಶತಮಾನದಿಂದಹತ್ತೊಂಬತ್ತನೇ ಶತಮಾನದವರೆಗೆ ಯುರೋಪಿನಲ್ಲಿ ರಾಜರುಗಳ ಚಪ್ಪಲಿ ಮಾತ್ರ ಬೇರೆ ತೆರನಾಗಿರುತ್ತಿತ್ತು. ಆ ಕಾಲದಲ್ಲಿ ಮೊದಲು ಯುರೋಪಿಯನ್ ರಾಜರು ಹೈ ಹೀಲ್ಡ ಚಪ್ಪಲಿ ಧರಿಸುತ್ತಿದ್ದರು.
ಇದೊಂದು ರೀತಿಯ ಶಕ್ತಿ, ಪ್ರಾಬಲ್ಯ ಮತ್ತು ತಾವೇ ಮೇಲೆ ಎನ್ನುವ ದ್ಯೋತಕವಾಗಿತ್ತು. ಹೈ ಹೀಲ್ಡ್ ಎಂದರೆ ಪ್ರತಿಷ್ಠೆ, ಗತ್ತು. ರಾಜ ಮನೆತನದ ಗಂಡಸರಲ್ಲದೇ ಬೇರೆಯವರು ಈ ಹೀಲ್ಡ ಚಪ್ಪಲಿ – ಶೂ ಧರಿಸುವಂತೆ ಇರಲಿಲ್ಲ. ಫ್ರಾನ್ಸ್‌ನ ರಾಜ ಲೂಯಿ ದಿ14ಈ ಹೈ ಹೀಲ್ಡ ಚಪ್ಪಲಿಯ ಪ್ರಸಿದ್ಧಿಗೆ ಕಾರಣನಾದವನು. ಕ್ರಮೇಣ ಆತನ ಫ್ಯಾಶನ್ ಅನ್ನು ಅನೇಕ ರಾಜರು ಹಿಂಬಾಲಿಸಿದರು.
ರಾಜ ಲೂಯಿಗೆ ಚಪ್ಪಲಿಯ ಗೀಳು ಎಷ್ಟಿತ್ತೆಂದರೆ ಫ್ರಾನ್ಸ್‌ನಲ್ಲಿ ಗಂಡಸರೆಲ್ಲ ಚಪ್ಪಲಿ ಧರಿಸಬೇಕು ಎಂದು ಕಾನೂನನ್ನೇ ಮಾಡಿಬಿಟ್ಟಿದ್ದ. ಬಹುಶಃ ಆಗಲೇ ಇರಬೇಕು – ಚಪ್ಪಲಿಗೆ ಕೈಗಾರಿಕಾ ಸ್ಥಾನಮಾನ ಸಿಕ್ಕಿದ್ದು. ಚಮ್ಮಾರರು ಸಾಮಾನ್ಯರಿಗೆಂದೇ ಚಪ್ಪಲಿ ತಯಾರಿಸಲು ಶುರುಮಾಡಿದ್ದು. ಚಿಕ್ಕ ಮಕ್ಕಳು ಎಡ ಬಲದ ಚಪ್ಪಲಿ ಆಚೀಚೆ ಮಾಡಿಕೊಳ್ಳುವುದು ಸಾಮಾನ್ಯ. ಹದಿನೆಂಟನೇ ಶತಮಾನದವರೆಗೂ ಎಡ ಬಲದ ಚಪ್ಪಲಿ ಬೇರೆ ಬೇರೆ ಇರುತ್ತಿರಲಿಲ್ಲ. ಎರಡೂ ಒಂದೇ. ಯಾವ ಚಪ್ಪಲಿಯನ್ನು ಯಾವ ಕಾಲಿಗೆ ಬೇಕಾದರೂ ಹಾಕಬಹುದಿತ್ತು.
ಆ ಸಮಯದ ಗಂಡಸರು ಹೈ ಹೀಲ್ಡ್ ಚಪ್ಪಲಿ ಧರಿಸಲು ಬಿಟ್ಟು ಮಹಿಳೆಯರು ಅದನ್ನು ಧರಿಸಲು ಶುರುಮಾಡಿದ್ದು. ಆ ಫ್ಯಾಶನ್ ಅನ್ನು ಇಂದಿನವರೆಗೂ ಕಾಪಾಡಿಕೊಂಡು ಬಂದವರು ಮಹಿಳೆಯರು. ಯಾವಾಗ ಚಪ್ಪಲಿ ಒಂದು ಫ್ಯಾಷನ್ ಎಂದಾಯಿತೋ ಆಗ ಅವಶ್ಯಕತೆಯನ್ನೂ ಮೀರಿ ಚಪ್ಪಲಿಗಳ ವಿನ್ಯಾಸ ಶುರುವಾದವು. ಕಾಲಿಗೆ ತಕ್ಕನಾದ ಚಪ್ಪಲಿಯನ್ನು ಧರಿಸುವುದು ಬಿಟ್ಟು ಚಪ್ಪಲಿಯ ಫ್ಯಾಶನ್ ಗೆ ಬೇಕೆಂದು ಕಾಲಿನ ರಚನೆಯನ್ನೇ ಬದಲಿಸಿಕೊಳ್ಳುವ, ವಿರೂಪಗೊಳಿಸಿಕೊಳ್ಳುವ ಘೋರ ಪದ್ಧತಿಗಳು ಶುರುವಾದದ್ದು. ಪ್ರಾಚೀನ ಚೀನಾದಲ್ಲಿ ಲೋಟಸ್ ಫುಟ್ ಎನ್ನುವ ಒಂದು ಪದ್ಧತಿಯಿತ್ತು.
ಐದು ಆರು ವಯಸ್ಸಿನಲ್ಲಿರುವಾಗ ಕಾಲಿನ ಮೂಳೆಯನ್ನು ಹೇಗೆ ಬೇಕಾದರೂ ಬಗ್ಗಿಸಬಹುದು. ಆ ವಯಸ್ಸಿನಲ್ಲಿ ಬಟ್ಟೆಯಿಂದ ಗಟ್ಟಿ ಕಟ್ಟಿ ಕಮಲದ ಎಸಳಂತೆ ಹೆಣ್ಣಿನ ಪಾದವನ್ನು ತಿರುಗಿಸಿ ವಿರೂಪಗೊಳಿಸುವ ಒಂದು ವಿಚಿತ್ರ ಪದ್ಧತಿ. ಹೀಗೆ ವಿರೂಪ ಗೊಳಿಸಿಕೊಂಡ ಕಾಲಿಗೆ ಆಕಳಿನ ಗೊರಸಿನಂಥ ಚಪ್ಪಲಿ ಅಂದಿನ ಅಲ್ಲಿಯ ಫ್ಯಾಶನ್. ಕೈಗಾರಿಕಾ ಕ್ರಾಂತಿ ಮನುಷ್ಯರೆಲ್ಲ ಚಪ್ಪಲಿ ಧರಿಸುವಂತೆ ಸಾಧ್ಯತೆ ಸೃಷ್ಟಿಸಿದರೂ ಇಂದಿಗೂ ಚಪ್ಪಲಿಯೆಂದರೆ ಜಗತ್ತಿನ ಎಲ್ಲರಿಗೂ ಲಭ್ಯವಿಲ್ಲದ ವಸ್ತು.
ಚಪ್ಪಲಿಯೇ ಧರಿಸದ ಅದೆಷ್ಟೋ ಕೋಟಿ ಮಂದಿ ಇಂದಿಗೂ ಇzರೆ. ಅದರ ಬಗ್ಗೆ ವಿವರಣೆ ಬೇಡವೆನಿಸುತ್ತದೆ. ಚಪ್ಪಲಿ ಕೇವಲ ಪಾದರಕ್ಷೆಯಲ್ಲ. ಚಪ್ಪಲಿ – ಶೂ ಅಂದು ಮತ್ತು ಇಂದು ಧರ್ಮ, ಮೂಢನಂಬಿಕೆ, ಸಂಸ್ಕೃತಿ ಇವೆಲ್ಲದರ ಚಿಹ್ನೆಯಾಗಿದೆ. ಒಂದೊಂದು ಸಂಸ್ಕೃತಿಯಲ್ಲೂ ಪಾದರಕ್ಷೆಗೆ ಒಂದೊಂದು ಸ್ಥಾನ, ಒಂದೊಂದು ಮಾನ. ಹಿಂದೂ ಧರ್ಮ ಸೇರಿದಂತೆ ಕೆಲ ಧರ್ಮಗಳಲ್ಲಿ ಚಪ್ಪಲಿಗೆ ಚಪ್ಪಲಿಯ ಸ್ಥಾನ. ಅದನ್ನು ಹೊರಗೇ ಬಿಡಬೇಕು. ಪವಿತ್ರ ಸ್ಥಳಗಳಲ್ಲಿ ಅವಕ್ಕೆ ಜಾಗವಿಲ್ಲ.
ಕ್ಕ್ರಿಶ್ಚಿಯನ್ ಧರ್ಮದಲ್ಲಿ ಇಂದು ಚರ್ಚಿನೊಳಕ್ಕೆ ಚಪ್ಪಲಿ ಹೊಕ್ಕಬಹುದು. ಸಿನೆಮಾಗಳಲ್ಲಿ ಹೀರೊಗಿಂತ ಮೊದಲು ಸ್ಕ್ರೀನ್‌ನಲ್ಲಿಎಂಟರ್ ಆಗುವುದೇ ಹೀರೋನ ಚಪ್ಪಲಿ – ಶೂ. ಸಿನೆಮಾ ವ್ಯಕ್ತಿ ಚಿತ್ರಣಕ್ಕೆ ಚಪ್ಪಲಿಯನ್ನು ಬಳಸಿಕೊಳ್ಳುವ ರೀತಿ ಸದಾ ನನ್ನನ್ನುಬೆರಗುಗೊಳಿಸಿದೆ. ಚಪ್ಪಲಿಯಿಂದ ಮುಖದತ್ತ ಕ್ಯಾಮರಾ ಪ್ಯಾನ್ ಆಗುವಾಗ ಹೀರೋನ ಸಾಮಾಜಿಕ ಸ್ಥಾನಮಾನ, ವ್ಯಕ್ತಿತ್ವ ಹೀಗೆಪಾತ್ರದೆಡೆಗಿನ ಸಂಪೂರ್ಣ ಮೊದಲ ಅಭಿಪ್ರಾಯ ಮೂಡುವಂತೆ ಮಾಡುವ ಸೂಕ್ಷ್ಮ ಗ್ರಹಿಸಲೇ ಬೇಕಾದದ್ದು.
ಅಲ್ಲಿ ಚಪ್ಪಲಿ ಒಂದಿಡೀ ಹಿನ್ನೆಲೆಯನ್ನೇ ಕ್ಷಣಮಾತ್ರದಲ್ಲಿ ಹೇಳಿಬಿಡುತ್ತದೆ. ಇನ್ನು ಚಪ್ಪಲಿಯೆಡೆಗಿನ ಮೂಢನಂಬಿಕೆ – ಎಲ್ಲ ದೇಶ ಕಾಲದಲ್ಲೂ ಇದನ್ನು ಕಾಣಬಹುದು. ಸಾವಿರದ ಲೆಕ್ಕದಲ್ಲಿ ಚಪ್ಪಲಿಯೆಡೆಗಿನ ಮೂಢನಂಬಿಕೆಗಳಿವೆ. ಸಾಂಪ್ರದಾಯಿಕ ಇಂಗ್ಲೆಂಡಿನಲ್ಲಿ ಯಾರಾದರೂ ಒಳ್ಳೆಯ ಕೆಲಸಕ್ಕೆ ಅಥವಾ ದೂರದ ಪ್ರಯಾಣಕ್ಕೆ ಹೊರಟರೆ ಅವರತ್ತ, ಅವರು ಹೋಗುವ ದಿಕ್ಕಿನಲ್ಲಿ ಶೂ ಎಸೆಯುವುದು ಶುಭ ಹಾರೈಕೆ ಎನ್ನುವ ಪದ್ಧತಿ ಬಹುಕಾಲದಿಂದ ಇದೆ. ಇದನ್ನು ತಿಳಿದಾಗ ನನಗೂ ನಗು ಬಂದಿತ್ತು.
ಭಾರತದನಾದರೂ ಹೀಗೆ ಮಾಡಿದರೆ ಹಾಗೆ ಎಸೆದವನ ಪ್ರಯಾಣವೇ ಅಲ್ಲಿಗೆ ಮುಗಿಯುವ ಸಾಧ್ಯತೆ ಹೆಚ್ಚು. ಓಮನ್ ನಲ್ಲಿಚಪ್ಪಲಿಯನ್ನು ಪೀಠೋಪಕರಣದ ಮೇಲೆ ಇಡುವುದೆಂದರೆ ಅದೊಂದು ದೊಡ್ಡ ಅಪಶಕುನ. ಯಾರಾದರೂ ಮಕ್ಕಳು ಅಪ್ಪಿ ತಪ್ಪಿ ಅಂತಹ ಕೆಲಸ ಮಾಡಿದರೆ ಪ್ರಳಯ ಸಾದೃಶ ಸ್ಥಿತಿ ನಿರ್ಮಾಣವಾಗುತ್ತದೆ ಎನ್ನುವುದು ಅಲ್ಲಿನವರ ನಂಬಿಕೆ. ಇನ್ನೊಬ್ಬರಕಣ್ಣು ಬೀಳದಿರಲಿ ಎಂದು ಹಳೆ ಚಪ್ಪಲಿ ಕಟ್ಟುವುದು ನಾವು ನೋಡಿದುವಂಥದ್ದು. ಉತ್ತರ ಭಾರತದಲ್ಲಿ ಒಂಟಿ ಚಪ್ಪಲಿಕಟ್ಟುವುದೆಂದರೆ ಅದರಿಂದ ಶುಭವಾಗುತ್ತದೆ ಎನ್ನುವ ನಂಬಿಕೆ. ಈ ಮೂಢ ನಂಬಿಕೆಗಳು ಹೇಗೆ ಹುಟ್ಟಿಕೊಂಡವು ಎನ್ನುವುದಕ್ಕೆ ಹಲವು ಚಿಂತನೆಗಳಿದ್ದರೂ ಇವೆಲ್ಲ ಮೌಢ್ಯತೆಯೇ.
ಈಗಂತೂ ಚಪ್ಪಲಿ, ಶೂ ಎಂಬ ಒಂದು ವಿಚಾರವನ್ನಿಟ್ಟುಕೊಂಡು ಮನುಷ್ಯನನ್ನು ಎರಡು ವರ್ಗವಾಗಿ ವಿಂಗಡಿಸಬಹುದು.ಮೊದಲನೆಯದು ಚಪ್ಪಲಿಯನ್ನು ಫ್ಯಾಶನ್ ಎನ್ನುವ ವರ್ಗ. ಎರಡನೆಯದು ಚಪ್ಪಲಿ ಎಂದರೆ ಕಂಫರ್ಟ್‌ಗೆ ಆದ್ಯತೆ ಕೊಡುವವರ್ಗ. ನೈಕಿ, ಆಡಿಡಾಸ್, ಪುಮಾ ಹೀಗೆ ಅದೆಷ್ಟೋ ಸಾವಿರ ಚಪ್ಪಲಿ – ಶೂ ತಯಾರಿಸುವ ಕಂಪನಿಗಳಿವೆ. ಇಂದು ನೂರೆಂಟು ರೀತಿಯ ಚಪ್ಪಲಿಗಳಿವೆ. ಶೂ, ಸ್ಯಾಂಡಲ್‌, ಸ್ಲಿಪ್ಪರ್, ಸ್ನಿಕರ್ ಹೀಗೆ ಹತ್ತಾರು ರೀತಿ. ಬುಲೆಟ್ ಶೂ, ಬೋಟ್ ಶೂ, ಗುಡ್ಡ ಹತ್ತಲು ಒಂದು ಶೂ, ಗುಡ್ಡ ಇಳಿಯಲು ಇನ್ನೊಂದು ಶೂ, ಫುಟ್ಬಾಲ್, ಕ್ರಿಕೆಟ್, ಟೆನಿಸ್, ವೋಲಿಬಾಲ್, ಕಬಡ್ಡಿ, ಗಾಲ್ಫ್, ರನ್ನಿಂಗ್, ಹೈ ಜಂಪ್, ಐಸ್ ಸ್ಕೇಟಿಂಗ್ ಹೀಗೆ ಒಂದೊಂದು ಕ್ರೀಡೆಗೆ ಒಂದೊಂದು.
ಮಳೆಗಾಲಕ್ಕೆ, ಬೇಸಿಗೆಗೆ, ಆಸ್ಪತ್ರೆಗೆ, ಅಂಗಡಿಗೆ, ಕೆಲಸಕ್ಕೆ, ಕೃಷಿಗೆ, ಈಜಾಡಲು ಹೀಗೆ ಒಂದೊಂದು ಸಂದರ್ಭಕ್ಕೆ ಒಂದೊಂದುಪಾದರಕ್ಷೆ. ಇಂದಿನ ಚಪ್ಪಲಿ ಇಂಡಸ್ಟ್ರಿಯ ಬಗ್ಗೆ ಹೆಚ್ಚಿಗೆ ಕೊರೆಯಲು ಹೋಗುವುದಿಲ್ಲ. ಆದರೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆಯುರೋಪಿನಲ್ಲಿ ಇಂದು 28000 ಚಪ್ಪಲಿ ತಯಾರಿಸುವ ಕಂಪನಿಗಳಿಗೆ. ಅಮೆರಿಕಾದಲ್ಲಿ ಇದು ನೂರು ಬಿಲಿಯನ್ ಡಾಲರ್ವ್ಯವಹಾರ. ಇಲ್ಲಿ ಎಂಭತ್ತು ಸಾವಿರ ಚಪ್ಪಲಿ ಅಂಗಡಿಗಳಿವೆ. ಇಲ್ಲಿನ ಟಿವಿಗಳಲ್ಲಿ ಪ್ರತೀ ನಾಲ್ಕರಲ್ಲಿ ಒಂದು ಜಾಹಿರಾತು ಚಪ್ಪಲಿಯದು.
ಅಮೆರಿಕಾವೊಂದರ ಸುಮಾರು ಮೂರೂ ಲಕ್ಷ ಮಂದಿಗೆ ಉದ್ಯೋಗ ಕೊಡುವ ವ್ಯವಹಾರ ಇದು. ಇಲ್ಲಿನ ಮಂದಿಗೆ ಸ್ನಿಕರ್ಎಂದರೆ ಎಲ್ಲಿಲ್ಲದ ಗೀಳು. ಚಪ್ಪಲಿ ಸಂಗ್ರಹಿಸುವುದು ಅಮೆರಿಕಾದ ಅತಿ ಹೆಚ್ಚು ಮಂದಿ ಪಾಲಿಸುವ ಹವ್ಯಾಸ. ಏನೇನೆಲ್ಲ ರೀತಿಯವಿನ್ಯಾಸದ, ವಿಶೇಷದ ಚಪ್ಪಲಿಗಳು. ಇಂದಿನ ಚಪ್ಪಲಿಗಳ ಬಗ್ಗೆ ಬರೆದರೆ ಅದು ಒಂದು ಲೇಖನದಲ್ಲಿ ಹಿಡಿದು ಕೊಡುವುದು ಕಷ್ಟ.ಚಪ್ಪಲಿಗಳ ಬಗ್ಗೆಯೇ ಪ್ರಕಟವಾಗುವ ಸುಮಾರು ನಲವತ್ತು ವಾರ ಪತ್ರಿಕೆಗಳಿವೆ. ಟಾಪ್ ಬ್ರಾಂಡ್‌ಗಳು ದಿನಕ್ಕೊಂದು ವಿನ್ಯಾಸ ವನ್ನು ಹೊರತರುತ್ತವೆ.
ನೈಕಿ ಪ್ರತೀ ವಾರ ಹೊರ ತರುವ ಸ್ನಿಕರ್ ನಾಲ್ಕು ದಿನದಲ್ಲಿ ಮಾರಾಟವಾಗಿ ಬಿಡುತ್ತದೆ. ಭರತ ರಾಮನ ಪಾದುಕೆಯನ್ನು ಸಿಂಹಾಸನದಲ್ಲಿಟ್ಟು ಆಳ್ವಿಕೆ ಮಾಡಿದ. ಹೀಗೆ ಇದ್ದೊಂದು ಚಪ್ಪಲಿಯನ್ನು ಭರತ ವನವಾಸದಲ್ಲಿದ್ದ ರಾಮನಿಂದ ತೆಗೆದುಕೊಂಡು ಹೋಗಿದ್ದು ಎಷ್ಟು ಸರಿ ಎಂಬುದೆಲ್ಲ ಮಷ್ಕಿರಿ ಪ್ರಶ್ನೆ. ಆದರೆ ಸಿಂಹಾಸನದಲ್ಲಿಡುವ ರೀತಿಯ ಚಪ್ಪಲಿಯನ್ನು ಪರಿಗಣಿಸುವ, ಚಪ್ಪಲಿಗೆ ರಾಜ ಮರ್ಯಾದೆ ಕೊಡುವ ದೊಡ್ಡ ವರ್ಗವೇ ಇಲ್ಲಿದೆ. ಅಮೆರಿಕಾದ ಈ ವರ್ಗವನ್ನು ಸ್ನಿಕರ್ ಹೆಡ್ ಎಂದು ಕರೆಯ ಲಾಗುತ್ತದೆ.
ಅವರಿಗೆ ಸ್ನಿಕರ್‌ ಖರೀದಿಸಿ ಶೇಖರಿಸುವುದು, ದಿನವಿಡೀ ಅದರ ಬಗ್ಗೆಯೇ ಮಾತನಾಡುವುದೇ ಕೆಲಸ, ಕಾಯಕ, ಹವ್ಯಾಸ ಎಲ್ಲ. ಸ್ನಿಕರ್ ಒಂದು ಧರ್ಮ. ಇತ್ತೀಚೆಗೆ ಮಿಸ್ಚಿ- ಎನ್ನುವ ಕಂಪನಿ ಲಿಮಿಟೆಡ್ 666 ಶೂ ಗಳನ್ನು ಹೊರತಂದಿತು. ಈ ಶೂ ನ ವಿಶೇಷತೆ (!) ಏನೆಂದರೆ ಇದರ ಸೊಲ್ ನಲ್ಲಿ ಮನುಷ್ಯನ ರಕ್ತವನ್ನು ಹಾಕಲಾಗಿರುತ್ತದೆ. ಇದು ಹೊರಗಿನಿಂದ ಪಾರದರ್ಶಕ ಕಾಣಿಸುತ್ತದೆ. ಇದೊಂದು ಉದಾಹರಣೆ ಅಷ್ಟೆ. ಈ ರೀತಿ ತೀರಾ ಅತಿಯೆನಿಸುವ ಚಪ್ಪಲಿ – ಶೂ ಗಳು ಇಂದು ಲಭ್ಯ. ಮನುಷ್ಯ ಎಂದರೇ ವಿಪರೀತ ಬಿಡಿ. ಒಟ್ಟಾರೆ ಇತಿಹಾಸದುದ್ದಕ್ಕೂ ಚಪ್ಪಲಿ ಕನಿಷ್ಠವೆನ್ನುವ ಭಾವನೆಯ ಜೊತೆ ಜೊತೆ ಅದೊಂದು ಸ್ಟೇಟಸ್, ವ್ಯಕ್ತಿತ್ವ ಹೇಳುವ, ಸಮಾಜದಲ್ಲಿನ ಸ್ಥಾನವನ್ನು ಹೇಳುವ, ವ್ಯಕ್ತಿತ್ವವನ್ನು ವಿವರಿಸುವ ಚಿಹ್ನೆಯಾಗಿರುವುದು ವ್ಯಂಗ್ಯವಾದರೂ ಸತ್ಯ.
ಇತಿ ಪಾದರಕ್ಷಾ ಪುರಾಣಂ.