ಪ್ರಸ್ತುತ ಪ್ರಜ್ವಲಿಸಬೇಕಿದೆ ಮಾನವೀಯ ಹಣತೆ
ಅಭಿಮತ
ಮಹಾದೇವ ಬಸರಕೋಡ
ಬದುಕು ತೀರ ಹದಗೆಟ್ಟು ಹೋಗಿದೆ. ಕೋವಿಡ್ ಮಹಾಮಾರಿಯ ಹುಚ್ಚಾಟದ ಪಾದದಡಿಯಲ್ಲಿ ಸಿಲುಕಿ ಬದುಕು ಛಿದ್ರ ಛಿದ್ರ ವಾಗುತ್ತಿದೆ. ನಮ್ಮ ಸುತ್ತಲೂ ನಿತ್ಯವೂ ನರಕ ಸದೃಶ್ಯ ಚಿತ್ರಸರಣಿಗಳದೇ ಸುಳಿದಾಟ. ಕಲ್ಪನೆಗೂ ನಿಲುಕದ ನೂರಾರು ಹೃದಯ ವಿದ್ರಾವಕ ಘಟನೆಗಳು ಧುತ್ತೆಂದು ಬಂದೆರಗಿ ಮನಸ್ಸನ್ನು ಜರ್ಜರಿತವಾಗಿಸುತ್ತಿವೆ.
ಕಷ್ಟಗಳ ಸುಳಿಗಾಳಿಯಿಂದ ಹೊರಬರುವುದು ಅಸಾಧ್ಯವೆಂಬ ಭಾವ ಬಲವಾಗುತ್ತಿದೆ. ಮನೆಯಿಂದ ಹೊರಗೆ ಕಳಿಸದೇ ಲಕ್ಷ್ಮಣ ರೇಖೆ ಹಾಕಿ ಕಾಯುವ ಅನಿವಾರ್ಯತೆ, ಮನೆಯಲ್ಲಿ ಬಂಽಯಾಗಿ ಎಲ್ಲರನ್ನೂ ಬಂಽಸಿರಿಸುವ ಅನಿವಾರ್ಯತೆ. ನಮ್ಮ ಆರ‍್ಯೋಗ್ಯ ವ್ಯವಸ್ಥೆಯೇ ಅವ್ಯವಸ್ಥೆಯಾಗಿ ರೂಪಾಂತರಗೊಂಡು ಎಲ್ಲವನ್ನು, ಎಲ್ಲರನ್ನೂ ಕಾಡುವ, ಪೀಡಿಸುವ ಮಟ್ಟಕ್ಕೆ ಬಂದು ನಿಂತಿರು ವುದು ಈ ಹೊತ್ತಿನ ವಿಪರ್ಯಾಸವೇ ಸರಿ. ಕರೋನಾದ ಎರಡನೆಯ ಅಲೆ ಲಕ್ಷಾಂತರ ಕುಟುಂಬಗಳಿಗೆ ಇಹದಲ್ಲಿಯೇ ನರಕವನ್ನು ತೋರಿಸಿದೆ.
ಧುತ್ತೆಂದು ಬಂದೆರಗಿದ ಕಾರಣಕ್ಕಾಗಿ, ನಮ್ಮ ನಿಷ್ಕಾಳಜಿಯ ಪರಿಣಾಮವಾಗಿ ಬಹುಶಃ ಎಲ್ಲವೂ ಅಯೋಮಯವಾದ ಪರಿಸ್ಥಿತಿ. ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳುವಲ್ಲಿನ ಹೆದರಿಕೆ, ಸೋಂಕು ವರದಿ ಸಿಗುವಲ್ಲಿ ವಿಳಂಬ, ಪ್ರಾಥಮಿಕ ಹಂತದಲ್ಲಿನ ಪರೀಕ್ಷೆಗಳಲ್ಲಿ ನಿಖರವಾಗಿ ಗುರುತಿಸಲು ಸಾಧ್ಯವಾಗದಿರುವಿಕೆ, ಹಳ್ಳಿಗಳಲ್ಲಿ ಚಿಕಿತ್ಸಾ ಸೌಲಭ್ಯಗಳಲ್ಲಿನ ಕೊರತೆ, ಪ್ರಾಣವಾಯು ಪೂರೈಕೆಯಲ್ಲಿನ ಕೊರತೆ, ಆಸ್ಪತ್ರೆಗಳಲ್ಲಿ ಬೆಡ್ ಅಲಭ್ಯತೆ, ಚಿತಾಗಾರದಲ್ಲಿ ದಿನಗಟ್ಟಲೆ ಸರದಿಯಲ್ಲಿ ಕಾಯುವಿಕೆ, ಆಪ್ತರೂ ಕೂಡ ಸ್ಪಂದಿಸಲು ಸಾಧ್ಯವಾಗದ ಅನಿವಾರ್ಯತೆ.
ಮಕ್ಕಳು ಕೂಡ ಶವ ಸಂಸ್ಕಾರ ಮಾಡಲು ಹಿಂಜರಿಯುವ ಸಂದಿಗ್ಧತೆ ಒಂದಲ್ಲ ಎರಡಲ್ಲ ಸಾಲು ಸಾಲು ಸಮಸ್ಯೆಗಳದೇ ಸುರಿಮಳೆ. ಪರಿಸ್ಥಿತಿ ಇಷ್ಟು ಬಿಗಡಾಯಿಸಿದಾಗಲೂ ಅದರ ಅರಿವೇ ಇರದ ಜನತೆ ಉಡಾ-ಯ ನಿಲುವುಗಳು. ನನಗೇನು ಆಗುವುದಿಲ್ಲ ಎಂದು ಮಾಸ್ಕ್ ಧರಿಸದೇ ಇರುವುದು. ಅನಗತ್ಯವಾಗಿ ಮನೆಬಿಟ್ಟು ರಸ್ತೆಗಿಳಿಯುವುದು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇಮುಗಿಬಿದ್ದು ಸಿಕ್ಕಿತೋ ಇಲ್ಲವೋ ಎಂದು ತರಕಾರಿ, ದಿನಸಿ, ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಗೆ ತವಕಿಸುವುದು.
ತಿಳಿಹೇಳಲು ಬಂದ ಕರೋನಾ ವಾರಿಯರ‍್ಸ್ ಜತೆ ವಾದಕ್ಕಿಳಿಯುವುದು, ಉತ್ತರಕುಮಾರನ ಪೌರುಷ ಮರೆಯುವುದು. ನಕಲಿ ಲೇಬಲ್ ಸೃಜಿಸಿ ವಾಹನಗಳಿಗೆ ಅಂಟಿಸಿಕೊಂಡು ಸುಮ್ಮನೆ -ಸ್ ಕೊಡುವುದು ಸಂಗತಿಗಳು ಜರಗುತ್ತಲೇ ಇವೆ. ಇಂಥ ಸಂಕಟ ಮಯ ಸನ್ನಿವೇಶದಲ್ಲಿನ ಧಾವಂತವನ್ನು ಹಣವನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ಹಾತೊರೆಯುತ್ತಿರುವ ಧನದಾಹಿಗಳದ್ದು ಇನ್ನೂ ಭೀಕರ ರೂಪದ್ದು.
ಕೃತಕವಾಗಿ ಬೆಡ್‌ಗಳನ್ನು ಕೊರತೆಯಾಗಿಸುವುದು, ಕಾಳಸಂತೆಯಲ್ಲಿ ಔಷಧಗಳನ್ನು ಮಾರುವುದು, ನಕಲಿ ಔಷಧಗಳನ್ನು ಸೃಜಿಸುವುದು, ಅರ್ಧ ಡೋಸ್ ಕೊಟ್ಟು ಇನ್ನುಳಿದ ಲಕಸಿಕೆಗಳನ್ನು ಹೆಚ್ಚಿನ ಬೆಲೆಗೆ ಮಾರುವುದು. ಗೊತ್ತಿರದೇ ಇದ್ದರೂ ಯಾವುದೋ ತಾತ್ಕಾಲಿಕ ಔಷಧೋಪಚಾರ ಮಾಡಿ ರೋಗಿಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ನಕಲಿ ವೈದ್ಯರ ಸೇವೆ. ಇತ್ಯಾದಿ ನೂರೆಂಟು ಸ್ವಾರ್ಥದ ಮುಖಗಳು ಅನಾವರಣಗೊಂಡು ಪರಿಸ್ಥಿತಿಯನ್ನು ಇನ್ನಷ್ಟು ಗಂಡಾಂತರಕಾರಿಯಾಗಿಸಿದೆ.
ನಮ್ಮೆದುರಿಗೆ ಇರುವ ಒಂದು ದುಃಖಭೂಯಿಷ್ಯವಾದ ಜಗತ್ತಿದೆ ಇಂದು. ಇಂಥ ಪರಿಸ್ಥಿತಿಗೆ ಯಾರನ್ನೋ ದೂಷಿಸುವುದರಲ್ಲಿಯೇ ತೃಪ್ತರಾಗುವುದು, ಏನೇನೋ ಕಾರಣಗಳನ್ನು ಹೇಳಿ ನಾವು ಜಾರಿಕೊಳ್ಳುವುದು ಸಮರ್ಥನೀಯವಲ್ಲ. ಅದನ್ನು ಬದಲಾಯಿಸು ವುದು, ಉತ್ತಮಗೊಳಿಸುವುದು ನಮ್ಮೆಲ್ಲರ ಇಂದಿನ ನಿಲುವಾಗಬೇಕು. ಸತ್ಯವನ್ನು ಕುರಿತು ಗಾಢವಾಗಿ ಯೋಚನೆ ಮಾಡಬೇಕು.ಮಾಲಿನ್ಯಗಳಿಂದ ನಮ್ಮ ಮನಸ್ಸನ್ನು ಮುಕ್ತಗೊಳಸಿಕೊಂಡು ಪ್ರೀತಿಯ ಮೂಲಕ ಸಹಜೀವಿಗಳ ದುಃಖ ಕಡಿಮೆ ಮಾಡುವಪ್ರಯತ್ನ ಮಾಡಬೇಕು.
ಹೊಸ ಪಾರತಂತ್ರ್ಯದಿಂದ ಬಿಡುಗಡೆಯಾಗುವುದರತ್ತ ನಮ್ಮೆಲ್ಲರ ಪ್ರಯತ್ನಗಳು ಸಾಗಬೇಕು. ಸಾಮಾಜಿಕ ಸ್ಥಿತಿಗತಿಗಳಿಗೆ ಸ್ಪಂದಿ ಸುವ ಉದಾರತೆ ನಮ್ಮಲ್ಲಿ ಮೂಡಬೇಕು. ಸುತ್ತಣ ಜಗತ್ತಿನ ಕಷ್ಟ – ಕಾರ್ಪಣ್ಯಗಳಿಗೆ ಸಕಾರತ್ಮಕವಾಗಿ ಸ್ಪಂದಿಸುವ ನಿಲುವುಗಳನ್ನು ಅಳವಡಿಸಿಕೊಳ್ಳಬೇಕು. ಮತ್ತೆ ಮತ್ತೆ ಕವಿಯುವ ಅಮಾನವೀಯ ಕತ್ತಲನ್ನು ದೂರಕ್ಕೆ ಸರಿಸುವ ನಿಟ್ಟಿನಲ್ಲಿ ಮಾನವೀಯತೆಯ ಹಣತೆ ಹಚ್ಚಬೇಕಿರುವುದು ನಮ್ಮೆಲ್ಲರ ಇಂದಿನ ತುರ್ತಾಗಬೇಕು.