ಕೋವಿಡ್‌ ನಂತರದ ಆರೋಗ್ಯ ಕ್ಷೇತ್ರದ ಬದಲಾವಣೆ
ವಿಶ್ಲೇಷಣೆ
ಡಾ.ಹಾಲಸ್ವಾಮಿ ವಿ.ಕಂಬಾಳಿಮಠ
ವಿಶ್ವವೇ ನಲುಗಿ ಹೋಗುವಂತಹ  ಸನ್ನಿವೇಶವನ್ನು ಸೃಷ್ಟಿ ಮಾಡಿರುವ ಚೀನಾ ದೇಶದಲ್ಲಿ ಹುಟ್ಟಿ ಪ್ರತಿ ಮನೆ ಮನಗಳಲ್ಲಿಭೀತಿ ಮೂಡಿಸಿರುವ ಕರೋನಾದಿಂದ ಇಡೀ ವಿಶ್ವ ಆತಂಕದಲ್ಲಿದೆ.
ಭಾರತಕ್ಕೂ ಈ ವೈರಸ್ ಹಲವು ಆತಂಕವನ್ನು ಸೃಷ್ಟಿಸಿದೆ. ಆದರೆ ಇದೀಗ ಕರೋನಾ ನಂತರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗಬಹುದಾದ ಬದಲಾವಣೆಗಳು ಅನೇಕ. ಸರಿ ಸುಮಾರು ಹದಿನೆಂಟು ತಿಂಗಳ ಈ ರಾಕ್ಷಸ ಕೂಸು ಕೋಟಿ ಕೋಟಿ ಮಾನವ ದೇಹಗಳಿಗೆ ಹೊಕ್ಕಿದ್ದು ಮತ್ತು ಬಲಿ ತೆಗೆದುಕೊಂಡಿದ್ದು ಸಹ ಕೋಟಿಗಳಲ್ಲೇ. ತನ್ನ ನಿಜ ಸ್ವರೂಪವನ್ನು ನೂರಾರು ಬಾರಿ ಬದಲಾಯಿಸಿ ತಾನೇ ಶ್ರೇಷ್ಠ ಪ್ರಾಣಿ ಎಂದು ಬೀಗುತ್ತಿದ್ದ ಮಾನವನಿಗೆ ನೀನು ಯಃಕಶ್ಚಿತ್ ಹುಲು ಮಾನವ ಎಂದು ಕಣ್ಣಿಗೆ ಕಾಣದೇ ಇರುವ ಈ ಜೀವಿ ಸಿದ್ಧ ಮಾಡಿ ತೋರಿಸಿದೆ.
ದಿನಕ್ಕೊಂದು ಸ್ವರೂಪ ತೋರಿಸಿ ದಾಳಿ ನಡೆಸುತ್ತಿರುವ ಈ ಸಂದರ್ಭದಲ್ಲಿ ಮಾನವನ ಮುಂದಿನ ನಡೆ ಮತ್ತು ದೇಶ ವಿದೇಶಗಳ ಹಾಗೂ ಸರಕಾರಗಳ ಸಿದ್ಧತೆ ಪ್ರತ್ಯಾಸಗಳ ಪ್ರಯೋಗಗಳು ಹೇಗಿರಬಹುದು ಎಂದು ಭಯ ಮಿಶ್ರಿತ ಕುತೂಹಲ ನಮ್ಮೆಲ್ಲರಲ್ಲೂ ಇದೆ. ನಮ್ಮ ದೇಶದ ವಿಷಯಕ್ಕೆ ಬಂದರೆ ಮಾರ್ಚ್ 2020ರ ಎರಡನೇ ವಾರದಲ್ಲಿ ಕೇರಳದ ಮುಖಾಂತರ ಹೆಜ್ಜೆಯಿಟ್ಟು ತನ್ನ ಬಾಹುಗಳನ್ನು ದೇಶದ ಪ್ರತಿ ಊರು, ಹಳ್ಳಿ, ಕೇರಿ, ಮನೆಗಳಲ್ಲಿ ಚಾಚಿ ಮಾನವ ದೇಹಗಳನ್ನು ಹಿಂಡಿ ಹಿಪ್ಪೆ ಮಾಡಿದೆ. ಮುಂದೆ ನಡೆಯಬಹುದಾದ ಘಟನೆಗಳನ್ನು ಊಹಿಸಿಕೊಂಡು ಅನುಕೂಲ ಮತ್ತು ಪ್ರತಿಕೂಲ ಸನ್ನಿವೇಶಗಳ ವಿಶ್ಲೇಷಣೆ ಮಾಡೋಣ.
ಸೋಂಕು ಪ್ರಸರಣ ಮತ್ತು ಅದರ ಅಲೆಗಳು :ಮುಂದೆ ಬರುವ ಅಲೆಗಳು ಈ ಹಿಂದೆ ಮಾಡಿದಷ್ಟು ಸಮಸ್ಯೆ ಮಾಡಿ, ಪರಿಣಾಮ ಬೀರದೇ ಹೋಗಬಹುದು. ಇದಕ್ಕೆ ಉದಾಹರಣೆಗಳು ಇನ್ನಿತರೆ ದೇಶಗಳಲ್ಲಿ ಬಂದು ಹೋದ ಮೂರನೇ ಮತ್ತು ನಾಲ್ಕನೇ ಅಲೆ ಗಳು. ಅಂದರೆ ಸದ್ಯ ಚಾಲ್ತಿಯಲ್ಲಿರುವ ಎರಡನೇ ಅಲೆ ಜೂನ್ ಅಂತ್ಯಕ್ಕೆ ಸಂಪೂರ್ಣ ಕಡಿಮೆಯಾಗಿ ಜನ ಸಾಮಾನ್ಯರು ಜೀವನ ವನ್ನು ಮರಳಿ ಕಟ್ಟಿಕೊಳ್ಳಲು ಸಾಧ್ಯವಾಗಬಹುದು.
ಆದರೆ ಎರಡನೇ ಅಲೆಯು ಇಳಿಕೆಯಾಗದೇ ಜುಲೈ ಆಗಸ್ಟ್‌ವರೆಗೆ ಮುಂದುವರೆದು ಸಾವು-ನೋವುಗಳ ಸರಮಾಲೆ ಹೆಚ್ಚಾಗ ಬಹುದು. ವೈರಾಣು ಸಹ ಮತ್ತೆ ಮತ್ತೆ ತನ್ನ ಸ್ವರೂಪವನ್ನು ವೇಗವಾಗಿ ಬದಲಾಯಿಸಿ ವೈದ್ಯಕೀಯ ರಂಗಕ್ಕೆ ಸವಾಲಾಗಬಹುದು.
ವೈದ್ಯಕೀಯ ಕ್ಷೇತ್ರದ ಪರಿಸ್ಥಿತಿಅನುಕೂಲ ವಾತಾವರಣದಲ್ಲಿ :ರೋಗಿಗಳ ಸಂಖ್ಯೆ ಇಳಿಮುಖವಾಗಿ ಹಾಸಿಗೆ, ಐ.ಸಿ.ಯು., ಆಮ್ಲಜನಕಗಳ ಕೊರತೆ ನೀಗಬಹುದು. ಈಗಾಗಲೇ ಅಭಿವೃದ್ಧಿಪಡಿಸಿರುವ ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳಾದಂತ ಬೆಡ್,ಆಮ್ಲಜನಕ ಘಟಕಗಳು ಮುಂದೆ ಸಾಮಾನ್ಯ ರೋಗಿಗಳ ತುರ್ತು ಸಂದರ್ಭಗಳಲ್ಲಿ ಬಳಕೆಯಾಗುತ್ತವೆ.
ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಒತ್ತಡ ಸಹಜ ಸ್ಥಿತಿಗೆ ಮರಳಿ ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ. ಈಗಾಗಲೇ ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ನರಳುತ್ತಿರುವ ಹೃದ್ರೋಗಿಗಳು, ಕ್ಯಾನ್ಸರ್ ಪೀಡಿತರು, ಮೂತ್ರಪಿಂಡ ವೈಫಲ್ಯದಿಂದ ಡಯಾಲಿಸಿಸ್ ಮಾಡಿಸುತ್ತಿರುವವರು, ಪಾರ್ಶ್ವವಾಯು ಪೀಡಿತರು, ಸಂದಿವಾತ ನೋವುಗಳಿಂದ ಬಳಲುತ್ತಿರುವವರು, ಚರ್ಮರೋಗಿಗಳು, ಮಾನಸಿಕ ರೋಗಿಗಳು ಮತ್ತು ಗರ್ಭಿಣಿ ಹಾಗೂ ಬಾಣಂತಿಯರು ಆಸ್ಪತ್ರೆಗಳತ್ತ ಮುಖಮಾಡಿ ನೆಮ್ಮದಿಯಾಗಿ ಸರಿಯಾದ ಸೂಕ್ತ ಚಿಕಿತ್ಸೆ ಪಡೆಯಬಹುದು.
ಶಸ್ತ್ರ ಚಿಕಿತ್ಸಾ ಸೇವೆಗಳು ಸಹ ಪುನರಾರಂಭಿಸಿ ಬಹುದಿನಗಳವರೆಗೆ ಮುಂದೂಡಿದ್ದ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಳ್ಳಬಹುದು. ದಂತ ಚಿಕಿತ್ಸೆ, ನೇತ್ರ ಚಿಕಿತ್ಸೆ, ಶ್ರವಣ, ಗಂಟಲು, ಮೂಗು, ಇವಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ಪುನರಾರಂಭ ಮಾಡಬಹುದು. ಈ ಮಧ್ಯೆ ವೈದ್ಯಕೀಯ ರಂಗದ ಪ್ರಮುಖ ಅಂಗಗಳಾದ ಆಮ್ಲಜನಕ ಘಟಕಗಳು, ಔಷಧ ಘಟಕಗಳು, ವೈದ್ಯಕೀಯ ಪರಿಕರಗಳು, ರಕ್ತ ಪರೀಕ್ಷಾ ಲ್ಯಾಬ್ ಘಟಕಗಳು, ಕ್ಷ-ಕಿರಣ, ಸಿಟಿ., ಎಂ.ಆರ್.ಐ. ಉಪಕರಣಗಳ ಉತ್ಪಾದನೆ ಮತ್ತು ಲಭ್ಯತೆ, ಆಂಬ್ಯುಲೆನ್ಸ್ ಸೇವೆಗಳಉಪಯೋಗ, ಈ ಎಲ್ಲಾ ಅಂಗಗಳು ಪರಿಪೂರ್ಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸದ್ಯದ ಪರಿಸ್ಥಿತಿಯಲ್ಲಿ ಆಶಾ ದಾಯಕವಾಗಿದೆ.
ಮುಂಬರುವ ಯಾವುದೇ ಸವಾಲುಗಳನ್ನು ಎದುರಿಸಲು ಇನ್ನೂ ಹೆಚ್ಚು ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿವೆ. ಸಾಮಾನ್ಯಔಷಧಿಗಳಾದ ಪ್ಯಾರಾಸಿಟಮಲ್, ಆಂಟಿ ವೈರಲ್, ಮಲ್ಟಿವಿಟಮಿನ್ ಮಾತ್ರೆಗಳ ಕೊರತೆ ಕಾಣದ ಹಾಗೆ ಉತ್ಪಾದನೆ ಮತ್ತು ಲಭ್ಯತೆಯ ಸಾಮರ್ಥ್ಯವನ್ನು ಬಲಪಡಿಸಿಕೊಂಡಿವೆ. ಕೆಲವೇ ತಿಂಗಳ ಮುಂಚೆ ಏನೆಂದು ಗೊತ್ತಿರದ ಪಲ್ಸ್ ಆಕ್ಸಿಮೀಟರ್, ಆಕ್ಸಿಜನ್ ಕಾನ್ಸನ್ ಟ್ರೇಟರ್ ಮತ್ತು ಜನರೇಟರ್, ಸಿಲಿಂಡರ್,ಹ್ಯುಮಿಡಿಫೈಯರ್‌ಗಳು ಈಗ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಚಿರಪರಿಚಿತವಾಗಿವೆ.
ಮನೆ ಮನೆಗಳಲ್ಲೂ ಪಲ್ಸ್ ಆಕ್ಸಿಮೀಟರ್‌ಗಳು ಬಂದಿವೆ. ಕರೋನಾ ಮುಕ್ತವಾದ ಕೆಲವು ರೋಗಿಗಳಲ್ಲಿ ಶ್ವಾಸಕೋಶ ಜರ್ಝರಿತ ವಾಗಿರುವವರ ಮನೆಗಳಲ್ಲಿ ಬಾಡಿಗೆಗೆ ಅಥವಾ ಸ್ವಂತಕ್ಕೆ ತಂದಿರುವ ಆಮ್ಲಜನಕ ಕಾನ್ಸನ್‌ಟ್ರೇಟರ್ ಮತ್ತು ಸಿಲಿಂಡರ್‌ಗಳುಕಾಣತೊಡಗಿವೆ. ಕೋವಿಡ್ ರೋಗಿಗಳ ರಕ್ತ ಪರೀಕ್ಷೆಯ ಫಲಿತಾಂಶಗಳನ್ನು, ಸಿಟಿ ಸ್ಕ್ಯಾನಿಂಗ್ ಫಲಿತಾಂಶಗಳನ್ನು ಓದುವ ಮತ್ತು ತಮ್ಮಲ್ಲೇ ವಿಶ್ಲೇಷಿಸಿಕೊಳ್ಳುವ ಮಟ್ಟಕ್ಕೆ ಜನ ಸಾಮಾನ್ಯರಲ್ಲಿ ಕೋವಿಡ್ ಬಗೆಗೆ ಜ್ಞಾನ ಬೆಳೆಸಿಕೊಂಡಿದ್ದಾರೆ.
ಇದರ ಮಧ್ಯೆ ಈ ವೈರಸ್ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿದ ಅಯುರ್ವೇದ ಮತ್ತು ಇತರೆ ಭಾರತೀಯ ವೈದ್ಯಕೀಯ ಪದ್ಧತಿಗಳು ಬಹು ಪರಿಣಾಮಕಾರಿಯಾಗಿರುವುದು ಸಾಬೀತಾಗಿದೆ. ಇವತ್ತಿಗೂ ಸಹ ಪ್ರತಿಶತ 90 ರಷ್ಟು ಮಂದಿ ಮನೆಯಲ್ಲಿಲಭ್ಯವಿರುವ ಪಾರಂಪರಿಕ ಅಡುಗೆ ಸಾಮಾಗ್ರಿಗಳು ಮತ್ತು ಅವರವರ ಮನೆ ಪದ್ಧತಿಗಳಲ್ಲಿ ಲಭ್ಯವಿರುವ ಪದಾರ್ಥಗಳ ಸೇವನೆ ಯಿಂದ ಕೋವಿಡ್‌ನಿಂದ ರಕ್ಷಣೆ ಪಡೆದಿರುವುದಲ್ಲದೇ, ರೋಗ ಲಕ್ಷಣಗಳ ನಿರ್ವಹಣೆಗೂ ಸಹ ಪರಿಣಾಮಕಾರಿಯಾಗಿ ಉಪಯೋಗಿಸಿ ಅವುಗಳ ಲಾಭ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಆಯುಷ್ ಇಲಾಖೆ ಆಯುರ್ವೇದ, ಯುನಾನಿ, ಹೋಮಿಯೋಪತಿ ಪದ್ಧತಿಗಳನ್ನು ಸಾರ್ವಜನಿಕರಿಗೆಪರಿಚಯಿಸಿ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದೆ ಮತ್ತು ಸಾಮರ್ಥ್ಯವನ್ನು ಸಹ ಹೆಚ್ಚಿಸಿಕೊಂಡಿದೆ.
ಲಸಿಕೆಚೀನಾ ದೇಶದಲ್ಲಿ ಹುಟ್ಟಿದ ಈ ಮಹಾಮಾರಿಗೆ ಪ್ರತ್ಯಾಸವನ್ನು ಕಂಡು ಹಿಡಿಯಲು ಹಲವು ದೇಶಗಳು ಹರಸಾಹಸ ಮಾಡುತ್ತಿ ರುವ ಸಂದರ್ಭದಲ್ಲಿ ಲಸಿಕೆಯೇ ಸರಿಯಾದ ಅಸ್ತ್ರ ಎಂದು ಸಾಬೀತಾಗಿ ವಿಶ್ವದಲ್ಲೆಡೆ ಅದರ ಪ್ರಯೋಗ ಪ್ರಾರಂಭವಾಗಿ ಈಗ ಸಾರ್ವಜನಿಕರಿಗೆ ತುರ್ತು ಉಪಯೋಗಕ್ಕೆ ಲಭ್ಯವಾಗಿದೆ. ಈಗಾಗಲೇ ನಮ್ಮ ದೇಶದಲ್ಲಿ ಸರಿಸುಮಾರು 20 ಕೋಟಿ ಜನಕ್ಕೆ ಲಸಿಕೆ ಕೊಟ್ಟಾಗಿದೆ. ಜನವರಿ 16 ರಿಂದ ಕರೋನಾ ವಾರಿಯರ‍್ಸ್ ಗೆ ಮಾತ್ರ ಪ್ರಾರಂಭವಾದ ಲಸಿಕೆ ಕಾರ್ಯಕ್ರಮ ಏಪ್ರಿಲ್ ನಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಭ್ಯವಾಯಿತು.
ಆದರೆ, ಪ್ರಾರಂಭದಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದವರು ಈಗ ಮುಗಿಬಿದ್ದು ಸರತಿಯಲ್ಲಿ ನಿಂತುಕೊಂಡು ನಾ ಮುಂದು ತಾ ಮುಂದು ಎಂದು ಲಸಿಕೆ ಪಡೆಯುತ್ತಿದ್ದಾರೆ. ಒಮ್ಮೆಗೆ ಬೇಡಿಕೆ ಜಾಸ್ತಿ ಆದ ಕಾರಣ ಲಸಿಕೆಯ ಲಭ್ಯತೆಯಲ್ಲಿ ಕೊರತೆ ಎದ್ದು ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಲಸಿಕೆಯ ವಿಚಾರದಲ್ಲಿ ಅನುಕೂಲಕರವಾದ ವಾತಾವರಣ ಗೋಚರಿಸುತ್ತಿದೆ.
ಈಗಾಗಲೇ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಮೊದಲನೇ ಡೋಸ್ ಪಡೆದಿರುವವರು ಸರತಿ ಸಾಲುಗಳಲ್ಲಿ ಅಥವಾ ಲಸಿಕೆ ಲಭ್ಯವಿರುವ ಅಕ್ಕಪಕ್ಕದ ಊರುಗಳಿಗೆ ಹೋಗಿ ಹಾಕಿಸಿಕೊಂಡು ಬರುತ್ತಿದ್ದಾರೆ. ಲಸಿಕೆ ಉತ್ಪಾದನೆ ಮತ್ತು ಅದರ ಲಭ್ಯತೆಯ ಪ್ರಮಾಣ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹೆಚ್ಚಾಗುತ್ತಿದೆ. ಈ ಮಧ್ಯೆ ರಷ್ಯಾ ದೇಶದ ಸ್ಪುಟ್ನಿಕ್ ಲಸಿಕೆ ಸಹ ಮಾರುಕಟ್ಟೆಗೆಲಗ್ಗೆ ಇಟ್ಟಿದ್ದು ನಗರಗಳಲ್ಲಿ ಹೆಚ್ಚಿನ ದರಗಳಲ್ಲಿ ಲಭ್ಯವಾಗುತ್ತಿದೆ.
ಸೋಂಕು ತಗುಲಿ ಲಕ್ಷ ಲಕ್ಷ ಹಣ ವ್ಯಯಿಸಿ ಮೈ-ಮನಗಳನ್ನು ಘಾಸಿ ಮಾಡಿಸಿಕೊಳ್ಳುವುದಕ್ಕಿಂತ ಸಾವಿರ ರುಪಾಯಿಗಳನ್ನುಕೊಟ್ಟು ಹಾಕಿಸಿಕೊಳ್ಳುವುದೇ ಉತ್ತಮ ಎಂಬುವವರ ಸಂಖ್ಯೆ ಹೆಚ್ಚುತ್ತಿದೆ. ಜುಲೈ-ಆಗಸ್ಟ್ ವೇಳೆಗೆ ಒಟ್ಟು ಜನಸಂಖ್ಯೆಯ ಸರಿ ಸುಮಾರು ಶೇ.25ರಷ್ಟು ಜನಗಳಿಗೆ ಲಸಿಕೆಯನ್ನು ಹಾಕಿಸಬೇಕೆಂಬ ಗುರಿ ಸರಕಾರಕ್ಕಿದೆ.
ಇದರ ಮಧ್ಯೆ 12ರಿಂದ 18ವರ್ಷದ ಪ್ರೌಢಾವಸ್ಥೆಯಲ್ಲಿರುವ ಮಕ್ಕಳ ಮೇಲೆ ಸಹ ಲಸಿಕಾ ಪ್ರಯೋಗಗಳು ನಡೆಯುತ್ತಿದ್ದುಮೂರನೇ ಅಲೆ ಬರುವ ಮುಂಚೆಯೇ ಅವರಿಗೆ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳ್ಳಬಹುದು. ಅಮೆರಿಕದ ಮಾಡ್ರನೋ ಲಸಿಕೆ (ಏಕಮಾತ್ರ ಡೋಸ್) ಸಹ ಭಾರತದ ಮಾರುಕಟ್ಟೆಗಳಲ್ಲಿ ಲಭ್ಯವಾಗುವ ಸಾಧ್ಯತೆಗಳು ಇವೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ನಮ್ಮದೇ ವಿಜ್ಞಾನಿಗಳು ತಯಾರಿಸಿದ ಕೋವ್ಯಾಕ್ಸಿನ್ ಲಸಿಕೆಯನ್ನು ಚುಚ್ಚುಮದ್ದಾಗಿ ನೀಡುವ ಬದಲಾಗಿ ಮೂಗಿನಲ್ಲಿ ಎರಡು ಹನಿಗಳನ್ನು ಹಾಕುವ ವಿಧಾನಕ್ಕೆ ಬದಲಾಗಬಹುದು.
ಇದು ಪ್ರಯೋಗ ಹಂತದಲ್ಲಿದ್ದು ಕೆಲವೇ ತಿಂಗಳುಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ. ಹೀಗಾ ದಲ್ಲಿ ಲಸಿಕೆ ಕಾರ್ಯಕ್ರಮವು ವೇಗ ಪಡೆದು ಅತಿ ಶೀಘ್ರದಲ್ಲಿ ಜನ ಸಂಖ್ಯೆಯ ಬಹುಪಾಲು ಜನರಿಗೆ ಕರೋನಾ ವೈರಸ್ನಿಂದ ರಕ್ಷಣೆ ಸಿಕ್ಕಂತಾಗುತ್ತದೆ. ಲಸಿಕೆ ಕಾರ್ಯಕ್ರಮಕ್ಕೆ ಪ್ರತಿಕೂಲ ವಾತಾವರಣಗಳು ಲಸಿಕೆಗಳನ್ನು ತಯಾರಿಸಲು ಬಳಸುವ ಕೆಲವು ಕಚ್ಚಾವಸ್ತುಗಳು ಅಮೆರಿಕದ ಪೇಟೆಂಟ್ ಅಡಿಯಲ್ಲಿದ್ದು ಅವುಗಳ ಸಾಗಾಣಿಕೆಗೆ ಆ ದೇಶ ಅಡ್ಡಿ ಮಾಡುತ್ತಿದೆ.
ಇದರಿಂದ ಲಸಿಕೆಗಳ ನಿರೀಕ್ಷಿತ ಉತ್ಪಾದನಾ ಸಾಮರ್ಥ್ಯ ಸ್ವಲ್ಪ ಕುಂಠಿತವಾಗುತ್ತಿದೆ. ಎರಡನೇಯದಾಗಿ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು-400ರಿಂದ-700ಸೆಂಟಿಗ್ರೇಡ್ ನಲ್ಲಿ ಶೇಖರಣೆ ಮಾಡಿ ಅದೇ ಉಷ್ಣಾಂಶದಲ್ಲಿ ಸಾರಿಗೆ ವ್ಯವಸ್ಥೆ ಮಾಡಬೇಕಾಗು ತ್ತದೆ. ಇದಕ್ಕೆ ಬೇಕಾದ ಶೀತಲ ಸಂಗ್ರಹಣೆ ಘಟಕಗಳು ಮತ್ತು ಅವುಗಳ ಸಾರಿಗೆ ವಾಹನಗಳ ಲಭ್ಯತೆಯ ಸವಾಲುಗಳು ನಮ್ಮ ಮುಂದಿದೆ.
ಕೋವ್ಯಾಕ್ಸಿನ್ ಮೂಗಿನ ಲಸಿಕೆಯ ಮೂರನೇ ಹಂತದ ಪರೀಕ್ಷೆಯ ಫಲಿತಾಂಶಗಳು ಸಹ ಸ್ಪಷ್ಟವಾಗಿ ಹೊರಬಂದಿರುವುದಿಲ್ಲ. ಆದ್ದರಿಂದ ಇದರ ಲಭ್ಯತೆ ಮತ್ತು ಉಪಯೋಗಗಳು ಮುಂದೆ ಹೋಗುವ ಸಾಧ್ಯತೆಗಳು ಇವೆ. ಸದ್ಯಕ್ಕೆ ಇಡೀ ದೇಶಾದ್ಯಂತ ಪ್ರತಿದಿನ ಕೇವಲ20ಲಕ್ಷ ಜನರಿಗೆ ಲಸಿಕೆ ಹಾಕುತ್ತಿದ್ದು ಒಟ್ಟು ಜನಸಂಖ್ಯೆಯ ಪ್ರತಿಶತ ಶೇ.50ಜನರಿಗೆ ಲಸಿಕೆ ಹಾಕಲು ಕನಿಷ್ಟ ಎಷ್ಟು ದಿವಸಗಳು ಬೇಕಾಗಬಹುದೆಂದು ಊಹಿಸಿ.
ಇದಲ್ಲದೇ ಎರಡನೇ ಅಲೆಯಲ್ಲಿ ಯಾರೂ ಊಹಿಸದ ಹಾಗೇ45ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಸೋಂಕಿಗೆ ತುತ್ತಾಗಿ ಬಹುಬೇಗ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಸರಕಾರಗಳು ಸಹ ಈ ಲಸಿಕೆಗಳನ್ನು ಹಿರಿಯ ನಾಗರೀಕರಿಗೆ ಕೊಟ್ಟು ಅವರನ್ನು ರಕ್ಷಣೆ ಮಾಡಿಕೊಳ್ಳಬೇಕೇ ಅಥವಾ ಮಧ್ಯವಯಸ್ಕರಿಗೆ ನೀಡಿ ಅವರನ್ನು ಉಳಿಸಿಕೊಳ್ಳಬೇಕೇ? ಎಂಬ ದ್ವಂದ್ವದಲ್ಲಿಲಸಿಕಾ ಕಾರ್ಯಕ್ರಮ ಮಾಡುತ್ತಿದೆ.
ಲಸಿಕೆಯ ಪರಿಣಾಮಗಳು ತುಂಬಾ ಆಶಾದಾಯಕವಾಗಿದ್ದು ತೀವ್ರತರನಾದ ಸೋಂಕಿನಿಂದ ರಕ್ಷಣೆಯನ್ನು ಒದಗಿಸುತ್ತಿವೆ ಯೆಂದು ಸಿದ್ಧವಾಗಿದೆ. ಬೇರೆ ದೇಶಗಳಲ್ಲಿ ಪೂರ್ಣ ಪ್ರಮಾಣದ ಲಸಿಕೆ ಪಡೆದವರಿಗೆ ಮಾಸ್ಕ್ ಧರಿಸುವುದರಿಂದ ಮುಕ್ತಿ ಸಿಕ್ಕಿದ್ದು ಆ ತರಹದ ವಿಶ್ವಾಸ ನಮ್ಮ ಲಸಿಕೆಗಳ ಮೇಲೆ ಇನ್ನೂ ಸರಕಾರಕ್ಕಾಗಲಿ, ಸಾರ್ವಜನಿಕರಿಗಾಗಲಿ ಇನ್ನೂ ಬಂದಿಲ್ಲ.