ಹಿಂದುತ್ವಮಯಗೊಳಿಸಿ ಹಿಂದೂ ಸಮಾಜವನ್ನು ಕ್ಷಾತ್ರತೇಜಗೊಳಿಸಿ
ತನ್ನಿಮಿತ್ತ
ಸಿಂಚನ ಎಂ.ಕೆ
ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಅವರಂತಹ ತೇಜಸ್ವಿ, ಸಾಹಸಿ, ಜ್ಞಾನಿ ವ್ಯಕ್ತಿ ಭಾರತ ಭೂಮಿಯ ಮುಕ್ತಿಗಾಗಿ ಕೈಗೊಂಡ ಮುಳ್ಳಿನ ಹಾದಿಯ ಜೀವನದ ಬಗ್ಗೆ ನಮಗೆ ಹೆಚ್ಚು ಅರಿವಿದೆ. ಆದರೂ ಈ ಮಹಾನ್ ಕ್ರಾಂತಿಕಾರಿಯ ಪರಿಚಯ ಭಗತ್ ಸಿಂಗ್, ಗಾಂಧೀಜಿ, ನೇತಾಜಿ ಅವರಂತೆ ಸಹಜವಾಗಿ ಶಾಲಾದಿ ನಗಳಿಂದಲೇ ಏಕೆ ಆಗಲಿಲ್ಲ ಎಂಬ ಸಂಶಯವೂ ಇದೆ.
ಹಾಗೆಯೇ ಇವರು ಈ ಪುಣ್ಯಭೂಮಿಯ ವೀರಪುತ್ರನಾದರೂ, ಮಹಾನ್ ದೇಶಭಕ್ತನಾದರೂ, ಧರ್ಮ ರಕ್ಷಕನಾದರೂ ಅಗಾಧ ಅಭಿಮಾನಿಗಳ ನಡುವೆ ಶತ್ರುಗಳ ದೊಡ್ಡ ಪಂಕ್ತಿಯನ್ನೇ ಹೊಂದಿರುವುದರ ಬಗ್ಗೆ ಅಚ್ಚರಿಯೂ ಇದೆ. ವೀರ ಸಾವರ್ಕರ್ ಅವರು ತಮ್ಮ ಜೀವನದುದ್ದಕ್ಕೂ ಸವೆಸಿದ ಸವಾಲಿನ ಹಾದಿ ಅಥವಾ ಈಶ್ವರನಿಂದ ಈ ನಿಸ್ವಾರ್ಥ ವಜ್ರಾಯುಧ ಮಾನವನಿಗೆ ದೊರೆತಸಂಘರ್ಷದ ಯಾತ್ರೆ ಎಷ್ಟು ಕಾಠಿಣ್ಯತೆಗಳಿಂದ ಕೂಡಿತ್ತು? ಹಿಂದುಸ್ತಾನದ ಸ್ವಾತಂತ್ರ್ಯ ಯಜ್ಞದಲ್ಲಿ ತಮ್ಮನ್ನು ತಾವು ಹವಿಸ್ಸಾಗಿ ಸಮರ್ಪಿಸಿಕೊಂಡ ತ್ಯಾಗಿ, ಬಲಿದಾನ ವೀರನ ಮೇಲೆ ಯಾರಾದರೂ ಏಕೆ ವೈರತ್ವ ಸಾಧಿಸುತ್ತಾರೆ? ಸಾವರ್ಕರ್ ಕೇವಲ ಮೇಲ್ವರ್ಗ ದವರನ್ನು ಮಾತ್ರ ಬೆಂಬಲಿಸಿದರು ಎಂಬ ತಪ್ಪು ಕಲ್ಪನೆಯನ್ನು ಜನರಲ್ಲಿ ಬೇಕಂತಲೇ ತರಿಸಲಾಗಿದೆ.
ಆದರೆ, 1924ರಿಂದ ಯಾವುದೇ ರಾಜಕೀಯ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗದೆ ತಮ್ಮ ಸ್ಥಳದ ಉಳಿಯಬೇಕೆಂಬ ಷರತ್ತಿನ ಮೇಲೆ ಬಿಡುಗಡೆಯಾದ ಸಾವರ್ಕರ್ ಅವರು ತಮ್ಮ ಮುಂದಿನ 13 ವರ್ಷಗಳ ಕಾಲ ಹಿಂದೂ ಧರ್ಮದಲ್ಲಿ ಕಳಂಕ ವಾಗಿ ಮಾರ್ಪಾಡಿಸಿ ಹೋಗಿದ್ದ ಜಾತಿ ಪದ್ಧತಿ, ಅಸ್ಪೃಶ್ಯತೆ, ಭೇದ ಭಾವಗಳನ್ನು ನಿವಾರಿಸಲು ಸತತ ಪ್ರಯತ್ನ ನಡೆಸಿದರು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ – ಒಬ್ಬ ವ್ಯಕ್ತಿ ಬಾಲ್ಯದಿಂದಲೂ ಸ್ವಾತಂತ್ರ್ಯ ಹೋರಾಟದ ಚಿಂತನೆ, ಚಟುವಟಿಕೆ ಗಳನ್ನೇ ಮುಳುಗಿ ಸಮರ್ಪಣೆಗೊಂಡಿದ್ದನೋ, ಆತನನ್ನು ಈ ಯಾವುದೇ ಕಾರ್ಯ ಮಾಡಬಾರದೆಂದು ಷರತ್ತು ವಿಧಿಸಿ ಬಿಡುಗಡೆಮಾಡಿದಾಗ ಎಂತಹ ಆಘಾತವಾಗಿದ್ದಿರಬಹುದು!
ಸಾವರ್ಕರ್ ಜೀವನದಲ್ಲೂ ನಡೆದಿದ್ದು ಇದೇ. ಆದರೆ, ಸಾವರ್ಕರ್ ಅವರು ಚಿಂತೆ ಮಾಡುತ್ತಿರಲಿಲ್ಲ, ಚಿಂತನೆ ಮಾಡುತ್ತಿದ್ದರು. ಸ್ವಾಮಿ ವಿವೇಕಾನಂದರಿಗೆ ಒಬ್ಬ ವ್ಯಕ್ತಿ ನಿಮ್ಮಂತಹ ಮಹಾನ್ ಸಾಧಕರು ಮನಸ್ಸು ಮಾಡಿದರೆ 24ಗಂಟೆಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಬಹುದು. ಆದರೆ ನೀವೇಕೆ ಹಾಗೆ ಮಾಡುತ್ತಿಲ್ಲವೆಂದು ಪ್ರಶ್ನಿಸಿದ್ದಾಗ ಸ್ವಾಮೀಜಿ ಅವರು ಸ್ವಾತಂತ್ರ್ಯ ವನ್ನು ಸಮರ್ಥವಾಗಿ ನಿಭಾಯಿಸಲು ಮನುಷ್ಯರೆಲ್ಲಿದ್ದಾರೆ? ಎಂದು ಮರುಪ್ರಶ್ನಿಸಿದ್ದರಂತೆ.
ಹಾಗೆಯೇ ಸಾವರ್ಕರ್ ಸಹ ಯಾವುದೇ ಸುಧಾರಣೆಗಳಿಲ್ಲದೆ ಗಳಿಸಿದ ಸ್ವಾತಂತ್ರ್ಯ 3ದಿನವೂ ಉಳಿಯುವುದಿಲ್ಲ ಎಂಬುದನ್ನು ಅರ್ಥೈಸಿಕೊಂಡು ಸಾಮಾಜಿಕ ಸುಧಾರಣೆಗೆ ಮುಂದೆ ಬಂದರು. ಸಾವರ್ಕರ್ ರಾಷ್ಟ್ರವಾದಿಯಾಗಿ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ ಬ್ರಿಟಿಷರಿಂದ ಸಮಸ್ಯೆಯನ್ನು ಎದುರಿಸಬೇಕಾಯಿತು. ನಂತರದಲ್ಲಿ ಅವರು ಒಬ್ಬ ಸಮಾಜ ಸುಧಾರಕರಾಗಿ ಹಿಂದೂ ಸಮಾಜದ ಭರತ ಭೂಮಿಯ ಉನ್ನತಿಗಾಗಿ ಸಾಮಾಜಿಕ ಸ್ವಾತಂತ್ರ್ಯದ ಹೋರಾಟ ಮಾಡುತ್ತಿದ್ದಾಗ ಅವರ ಸ್ವಂತ ಜನರಿಂದಲೇ ಸಮಸ್ಯೆಯನ್ನು ಎದುರಿಸಬೇಕಾಯಿತು.
ಅವರೇ ಹೇಳುವಂತೆ ಸಾಮಾಜಿಕ ಕಾರ್ಯಗಳನ್ನು ಮಾಡುವುದೆಂದರೆ ಮುಳ್ಳಿನ ಹಾಸಿಗೆಯ ಮೇಲೆ ನಡೆದ ಹಾಗೆ, ಅದು ಬಲಹೀನ ಹೃದಯದವರಿಗಲ್ಲ. ಕೆಳ ವರ್ಗದವರಿಗೆ ಸಾರ್ವಜನಿಕ ಜಲ ಸಂಗ್ರಹ ಸ್ಥಳಗಳಾದ ಕೆರೆ, ಬಾವಿಗಳಲ್ಲಿ ನೀರು ತೆಗೆದುಕೊಳ್ಳಲು ಅವಕಾಶ ನೀಡಬೇಕು. ಹಾಗೆಯೇ ಅವರು ಸಹ ಎಲ್ಲರಂತೆ ದೇವಾಲಯಗಳನ್ನು ಪ್ರವೇಶಿಸಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿ ಕೊಳ್ಳಲು ಅವಕಾಶ ನೀಡಬೇಕು ಎಂದು ವಾದ ಮಾಡಿ ಜನರಿಗೆ ಅರ್ಥೈಸಲು ಪ್ರಯತ್ನ ಪಡುತ್ತಿದ್ದರು.
ಕೆಳವರ್ಗದ ವಿದ್ಯಾರ್ಥಿಗಳಿಗೆ ಸ್ಲೇಟ್, ಚಾಕ್ ಪೀಸ್, ಮಾಸಿಕ ಗೌರವಧನವನ್ನು ನೀಡಿ ಶಾಲೆಗೆ ತಪ್ಪದೆ ಹಾಜರಾಗಿ ವಿದ್ಯಾಭ್ಯಾಸಪಡೆಯಬೇಕೆಂದು ಪ್ರೋತ್ಸಾಹ ನೀಡುತ್ತಿದ್ದರು. ಒಂದು ವೇಳೆ ಸಾಮಾಜಿಕ ಸುಧಾರಣೆಯ ಮೂಲಕ ಸಮಾನತೆಯನ್ನು ತರಲು ಸಾಧ್ಯವಾಗದಿದ್ದರೆ, ಕಾನೂನಿನ ಬಲವನ್ನು ಪ್ರಯೋಗಿಸಿಯಾದರೂ ಸಮಾನತೆಯನ್ನು ಸ್ಥಾಪಿಸಿ ಕೆಳವರ್ಗದ ಜನರ ಉದ್ಧಾರ ಮಾಡಬೇಕೆಂಬ ಖಡಕ್ ಸಂದೇಶವನ್ನು ನೀಡಿದ್ದರು. ಎಲ್ಲಾ ಜಾತಿಯವರನ್ನು ಒಟ್ಟುಗೂಡಿಸಿ ಭಜನೆ ಕಾರ್ಯಕ್ರಮಗಳು ಹಾಗೂ ಔತಣ ಕೂಟಗಳನ್ನು ಏರ್ಪಡಿಸುವುದು ಅಧಿಕವಾಗಿ ನಡೆಯುತ್ತಿತ್ತು.
ಅದುವೇ ನೂರಾರು ಜನರ ಭಾಗವಹಿಸುವಿಕೆಯ ಯಶಸ್ಸಿನಲ್ಲಿ ಎಂದರೆ ನೀವು ನಂಬಲೇಬೇಕು. ಹಾಗೆಯೇ ಎಲ್ಲಾ ಜಾತಿಯ ಹಿಂದೂಗಳಿಗೂ ತೆರೆಯಲ್ಪಡುವಕೆಫೆಯನ್ನು ಆರಂಭಿಸಿದರು. ತಮ್ಮನ್ನು ಎಂತಹ ಗಣ್ಯ ವ್ಯಕ್ತಿ ಭೇಟಿ ಮಾಡಲು ಅವರ ಜಿಗೆ ಬಂದರೂ, ಈ ಕೆಫೆಯಲ್ಲಿ ಒಂದು ಕಪ್ ಚಹಾವನ್ನಾದರೂ ಸೇವಿಸಿ ಬರಬೇಕೆಂಬ ನಿಯಮವೇ ನಿರ್ಮಾಣವಾಗಿ ಹೋಗಿತ್ತು.ಸಾವರ್ಕರ್ ಅವರು ಜಯಂತಿಯನ್ನು ಕೇವಲ ನಾಮ್‌ಕೆವಸ್ಥೆಗೆ ಮಾತ್ರ ಮೀಸಲಾಗಿ ಉಳಿಸದೆ, ಅವರ ಶ್ರೇಷ್ಠ ಆದರ್ಶಗಳನ್ನು ಮುನ್ನೆಡಸಲು ಪ್ರೇರಣೆ ಪಡೆದುಕೊಳ್ಳೋಣ. ಭಾರತ ವರ್ಷದಂತಹ ಭವ್ಯಭೂಮಿಯು ಸಾವಿರಾರು ವರ್ಷಗಳ ಗುಲಾಮಗಿರಿ ಯನ್ನು ಏಕೆ ಅನುಭವಿಸಬೇಕಾಗಿ ಬಂತು? ಆ ನಿರ್ದಿಷ್ಟಾವಧಿಯಲ್ಲಿ ನಮ್ಮ ಧರ್ಮ-ಸಂಸ್ಕೃತಿಯ ಜ್ಞಾನವನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಲು ವಿಫಲರಾದ ಪರಿಣಾಮವೋ ಅಥವಾ ಧರ್ಮವನ್ನು ಮಿಥ್ಯವಾಗಿ, ಪೂರ್ತಿಯಾಗಿ ಅರ್ಥಮಾಡಿ ಕೊಳ್ಳಲಾಗದ ಪರಿಣಾಮವೊ ಈ ದುರಂತಕ್ಕೆ ಕಾರಣವಾಗಿದ್ದಿರಬಹುದು.
ನಮ್ಮ ದೇಶ-ಧರ್ಮದ ಬಗೆಗಿನ ವಿಷಯಗಳಲ್ಲಿ ಅನಾಸಕ್ತಿ ಹೊಂದಿ ಕ್ಷಾತ್ರತೇಜವನ್ನು ಕ್ಷೀಣಿಸಿ, ಪ್ರವೃತ್ತಿ-ನಿವೃತ್ತಿಗಳಲ್ಲಿ ಸಮಾನತೆ ಸಾಧಿಸದಿದ್ದದ್ದೇ ಇದಕ್ಕೆ ಕಾರಣ ಅಲ್ಲವೆ? ನಿರಂತರ ಆಕ್ರಮಣಗಳ ಪೆಟ್ಟಿಗೆ ಕಾರಣವಾಗಿದ್ದು ನಮ್ಮ ಸನಾತನ ಧರ್ಮದಲ್ಲಿ ಉಂಟಾದ ಒಡುಕುಗಳೇ ಅಲ್ಲವೆ? ನಮ್ಮ ಸನಾತನ ಧರ್ಮದ ಸರಿಯಾದ ಅರ್ಥೈಸುವಿಕೆಯಿಂದ ಮಾತ್ರವೇ ನಮ್ಮ ಶಕ್ತಿ ಒಗ್ಗೂಡಲು ಬಲಿಷ್ಠವಾಗಲು ಸಾಧ್ಯ, ಆ ಒಗ್ಗಟ್ಟಿನಿಂದಲೇ ನಮ್ಮ ಮಾತೃಭೂಮಿಯನ್ನು ರಕ್ಷಣೆ ಮಾಡಲು ಸಕ್ಷಮರಾಗುತ್ತೇವೆ.
ಸಮಸ್ತ ಮಾನವಕಲ್ಯಾಣದ ಮಾರ್ಗವಾಗಿರುವ ನಮ್ಮ ಸಂಸ್ಕೃತಿಯನ್ನು ನಾವು ಅರಿತುಕೊಂಡರೆ ಭಾರತ ವಿಶ್ವಗುರುವಾಗಿ ಮಾರ್ಗವನ್ನು ಭೋದಿಸುವುದರಲ್ಲಿ ಯಾವುದೇ ಸಂಶಯವಿಲ್ಲ.