ಬೆಲರೂಸ್ ದೇಶವೇ ವಿಮಾನವನ್ನು ಹೈಜಾಕ್‌ ಮಾಡಿಸಿದ್ದೇಕೆ ?
ಅವಲೋಕನ
ಕಿಶೋರ್‌ ನಾರಾಯಣ್‌
ಒಂದು ಉಗ್ರ ಸಂಘಟನೆಯೋ ದೇಶ ವಿರೋಧಿ ಸಂಘಟನೆಯೋ ಒಂದು ನಾಗರಿಕ ವಿಮಾನವನ್ನು ಹೈಜಾಕ್ ಮಾಡುವುದನ್ನು ಕೇಳಿದ್ದೇವೆ. ಆದರೆ ಇತ್ತೀಚಿಗೆ ಬೆಲರೂಸ್ ದೇಶದ ಸರಕಾರವೇ ತನ್ನ ವಾಯುಪ್ರದೇಶದಲ್ಲಿ ಹಾರುತ್ತಿದ್ದ ಒಂದು ಅನ್ಯದೇಶದ ನಾಗರಿಕ ವಿಮಾನ ವನ್ನು ಬಲವಂತವಾಗಿ ಕೆಳಗಿಳಿಸಿದೆ.
ಇದು ಅಂತಾರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಬೆಲರೂಸ್‌ಗೆ ಈ ಕೃತ್ಯ ವಿವರಿಸಲು ಕಷ್ಟಸಾಧ್ಯವಾಗಿ ಪರಿಣಮಿಸುತ್ತಿದೆ. ಇಷ್ಟಕ್ಕೂ ಬೆಲರೂಸ್ ಸರಕಾರ ಹೀಗೆ ಮಾಡಿದ್ದಾದರೂ ಏಕೆ? ಮೇ 23ರಂದು ರಯಾನ್ ಏರ್ ಸಂಸ್ಥೆಯ ಒಂದು ವಿಮಾನ ಗ್ರೀಸ್‌ನ ರಾಜಧಾನಿ ಅಥೆನ್ಸ್‌ನಿಂದ ಲಿಥುವೇನಿಯಾದ ರಾಜಧಾನಿ ವಿಲ್ನಿಯಸ್‌ಗೆ ಪ್ರಯಾಣ ಬೆಳೆಸಿತ್ತು. ಮಾರ್ಗಮಧ್ಯೆ ಇದು ಬೆಲರೂಸ್‌ನ ವಾಯುಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ ಹಠಾತ್ತನೆ ಬೆಲರೂಸ್ ನ ವಾಯು ಸಂಚಾರ ನಿಯಂತ್ರಣಾಲಯ (ಏರ್ ಟ್ರಾಫಿಕ್ ಕಂಟ್ರೋಲ್‌)ನಿಂದ ಒಂದು ಸಂದೇಶ ರವಾನೆಯಾಯಿತು.
ನಿಮ್ಮ ವಿಮಾನದಲ್ಲಿ ಒಂದು ಬಾಂಬ್ ಇದೆ ಎಂದು ನಮಗೆ ಸಂದೇಶ ಬಂದಿದೆ. ನಾವು ಅದಕ್ಕಾಗಿ ನಿಮ್ಮನ್ನು ಈಗಲೇ ನಮ್ಮ ರಾಜಧಾನಿ ಮಿನ್ಕ್ಸ್‌ನ ವಿಮಾನ ನಿಲ್ದಾಣಕ್ಕೆ ತಪಾಸಣೆಗೆಂದು ಬಂದಿಳಿಯಲು ಆದೇಶಿಸುತ್ತಿದ್ದೇವೆ ಎಂದು ಹೇಳಿದರು. ಅಲ್ಲದೆ ಒಂದು ವೇಳೆ ನೀವು ಕೆಳಗಿಳಿಯಲು ನಿರಾಕರಿಸಿದರೆ ನಾವು ನಿಮ್ಮನ್ನು ಬಲವಂತವಾಗಿ ಇಳಿಸಲು ನಮ್ಮ ಒಂದು ಮಿಗ್ –29ಯುದ್ಧ ವಿಮಾನವನ್ನು ನಿಮ್ಮ ಬೆಂಗಾವಲಿಗಾಗಿ ರವಾನಿಸುತ್ತೇವೆ ಎಂದು ಖಡಕ್ ಸೂಚನೆಗಳನ್ನು ನೀಡಿತು.
ಇಂಥ ಸಂದರ್ಭಗಳಲ್ಲಿ ನಾಗರಿಕ ವಿಮಾನಗಳು ಅವರಿಗೆ ಕೊಟ್ಟ ನಿರ್ದೇಶನಗಳನ್ನು ಬೇಷರತ್ತಾಗಿ ಪಾಲಿಸುತ್ತವೆ. ರಯಾನ್ ಏರ್ ವಿಮಾನವೂ ಹಾಗೆಯೇ ಮಾಡಿತು. ಮಿನ್ಸ್ಕ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ತಕ್ಷಣ ಭದ್ರತಾ ಅಧಿಕಾರಿಗಳು ವಿಮಾನದ ತಪಾಸಣೆ ನಡೆಸಿ ನಮಗೆ ಏನೂ ಸಂಶಯಾಸ್ಪದ ಸಾಮಾನು ಸಿಕ್ಕಿಲ್ಲವೆಂದೂ ಪ್ರಯಾಣಿಕರನ್ನೇ ತಪಾಸಣೆಗೆ ಒಳಪಡಿಸ ಬೇಕಾಗುತ್ತದೆ ಎಂದೂ ಹೇಳಿದರು.
ಹಾಗಾಗಿ ಎಲ್ಲ ಪ್ರಯಾಣಿಕರನ್ನೂ ವಿಮಾನ ನಿಲ್ದಾಣ ಒಳಗಿನ ಕೊಠಡಿಗಳಿಗೆ ಕರೆದುಕೊಂಡು ಹೋದರು. ಸುಮಾರು 7-8 ಘಂಟೆ ಗಳ ನಂತರ ಆ ವಿಮಾನ ಪುನಃ ಪ್ರಯಾಣ ಬೆಳೆಸಿತು. ಆದರೆ ಅದರಲ್ಲಿ ಒಬ್ಬ ಪ್ರಯಾಣಿಕ ವಿಮಾನಕ್ಕೆ ಹಿಂತಿರುಗಿರಲಿಲ್ಲ.ಆತ ಬೆಲರೂಸ್ ದೇಶದ ಓರ್ವ ಪತ್ರಕರ್ತ. ಅಲ್ಲಿನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ವಿರುದ್ಧ ಬಂಡೆದ್ದ ಅನೇಕ ಜನರಲ್ಲಿ ಈತನೂ ಒಬ್ಬ. ಅವನ ಹೆಸರು ರೋಮನ್ ಪ್ರೊಟಾಸೆವಿಚ್.
ಆತ ಬೆಲರೂಸ್ ದೇಶದ ಹೊರಗಿದ್ದುಕೊಂಡು ಟೆಲಿಗ್ರಾಮ್ ಆಪ್‌ನಲ್ಲಿ ಲುಕಾಶೆಂಕೋ ವಿರುದ್ಧ ಒಂದು ಚಾನೆಲ್ ನಡೆಸುತ್ತಿದ್ದನು. ಸರಕಾರಕ್ಕೆ ಅವನ ಮೇಲಿನ ಕೆಂಗಣ್ಣಿಗೆ ಇದೇ ಕಾರಣ. ಆತನನ್ನು ಏನಾದರೂ ಮಾಡಿ ದೇಶಕ್ಕೆ ಬರೆಸಿಕೊಂಡು ಬಂಧಿಸಬೇಕು ಎನ್ನುವುದು ಆ ಸರಕಾರದ ಉದ್ದೇಶವಾಗಿತ್ತು ಎನ್ನುವುದು ಆಗಷ್ಟೇ ಎಲ್ಲರಿಗೂ ಸ್ಪಷ್ಟವಾಯಿತು.
ರಯಾನ್ ಏರ್ ಐರ್ಲೆಂಡ್ ದೇಶದ ಒಂದು ವಿಮಾನ ಸಂಸ್ಥೆ. ಐರ್ಲೆಂಡ್ ಐರೋಪ್ಯ ಒಕ್ಕೂಟದ ಒಂದು ಅಂಗ ರಾಷ್ಟ್ರ. ಅಂತೆಯೇ ಗ್ರೀಸ್ ಹಾಗೂ ಲಿಥುವೇನಿಯಾ ಕೂಡ ಐರೋಪ್ಯ ಒಕ್ಕೂಟದ ಅಂಗ ರಾಷ್ಟ್ರಗಳು. ಬೆಲರೂಸ್ ಐರೋಪ್ಯ ಒಕ್ಕೂಟಕ್ಕೆಸೇರಿರದ ದೇಶ. ಅದು ರಷ್ಯಾಕ್ಕೆ ಸೈದ್ಧಾಂತಿಕವಾಗಿ ಸಾಂಸ್ಕೃತಿಕವಾಗಿ ಅತ್ಯಂತ ಹತ್ತಿರದ ದೇಶ. ಹಾಗಾಗಿ, ಐರೋಪ್ಯ ಒಕ್ಕೂಟದ ದೇಶಗಳು ಈ ಕೃತ್ಯ ರಷ್ಯಾದ ಓರ್ವ ಅನುಯಾಯಿ ದೇಶ ಎಸಗಿದ ಕುಕೃತ್ಯ ಎಂದೇ ಭಾವಿಸಲಾರಂಭಿಸಿದವು. ಇದು ಬೆಲರೂಸ್ ಪ್ರಚೋದನೆಯಿಂದ ನಡೆದ ಹೈಜಾಕ್ ಎನ್ನುವ ಗಂಭೀರ ಆರೋಪ ಮಾಡಲಾರಂಭಿಸಿದರು.
ಐರೋಪ್ಯ ಒಕ್ಕೂಟ ದೇಶಗಳಿಂದ ಬೆಲರೂಸ್‌ಗೆ ಎಲ್ಲ ವಿಮಾನಗಳನ್ನೂ ಸ್ಥಗಿತಗೊಳಿಸಿದ್ದಲ್ಲದೆ, ಬೆಲರೂಸ್‌ನ ವಾಯುಪ್ರದೇಶ ದಲ್ಲಿ ನಮ್ಮ ಯಾವುದೇ ವಿಮಾನಗಳು ಹಾರಾಡಬಾರದು ಎಂದೂ ಆದೇಶ ಹೊರಡಿಸಿದೆ. ಹೇಗೆ ಪೊಲೀಸರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಟರ್ ಪೋಲ್ ಸಂಸ್ಥೆ ಇದೆಯೋ ಹಾಗೆಯೇ ನಾಗರಿಕ ವಿಮಾನ ಹಾರಾಟಗಳಿಗೆ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಸಂಸ್ಥೆ (    ) ಇದೆ. ಇದು ವಿಶ್ವ ಸಂಸ್ಥೆಯ ಒಂದು ಅಂಗ ಸಂಸ್ಥೆ. ಈ  ICAOಸಂಸ್ಥೆ ಕೂಡ ಈಗ ಈ ಇಡೀ ಘಟನೆಯನ್ನು ಗಂಭೀರವಾಗಿ ಪರಿಗಣಿಸಲು ಮುಂದಾಗಿದೆ.
ವಿಮಾನಗಳು ಯಾವ ದೇಶಕ್ಕೆ ಸೇರಿರುತ್ತದೆಯೋ ಆ ದೇಶದ ಸಂಪೂರ್ಣ ಹಕ್ಕು. ದೇಶದಿಂದ ಹೊರಗೆ ಹಾರಾಡುತ್ತಿದ್ದರೂ ಆವಿಮಾನದ ಮೇಲಿನ ಸಾರ್ವಭೌಮತ್ವ ಆ ದೇಶಕ್ಕಿರುತ್ತದೆ. ಅದನ್ನು ಯಾವುದೇ ಕಾರಣಕ್ಕೂ ಉಲ್ಲಂಸುವಂತಿಲ್ಲ ಎಂದುಜಿನೀವಾ ಸಮಾವೇಶದಡಿ ತೀರ್ಮಾನಿಸಲಾಗಿದೆ. ಹಾಗಾಗಿ, ಬೆಲರೂಸ್ ಮಾಡಿರುವುದು ಅಕ್ಷಮ್ಯ ಅಪರಾಧ ಎನ್ನುವುದುಎಲ್ಲರ ವಾದ.
ಇತ್ತ ಬೆಲರೂಸ್ ಹೀಗೆ ಮಾಡಿzದರೂ ಏಕೆ? 1990ರಲ್ಲಿ ಸೊವಿಯತ್ ಒಕ್ಕೂಟ ಛಿದ್ರಗೊಂಡಾಗ ಬೆಲರೂಸ್ ಕೂಡ ಒಂದು ಸ್ವತಂತ್ರ ದೇಶವಾಗಿ ಹೊರಹೊಮ್ಮಿತ್ತು. ತನಗಾಗಿ ಒಂದು ಸಂವಿಧಾನ ಬರೆದುಕೊಂಡು ಮೊದಲ ಬಾರಿಗೆ1994ರಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು. ಆಗ ಅಲೆಕ್ಸಾಂಡರ್ ಲುಕಾಶೆಂಕೋ ವಿಜಯಿಯಾದರು. ಅಂದಿನಿಂದ ಇಂದಿನವರೆಗೆಬರೋಬ್ಬರಿ26ವರ್ಷ ತಡೆರಹಿತವಾಗಿ ಲುಕಾಶೆಂಕೋ ಬೆಲರೂಸ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಆದರೆ ಈ ಲುಕಾಶೆಂಕೋ ಆ ದೇಶದ ಎಲ್ಲ ವಿಪಕ್ಷ ನಾಯಕರನ್ನೂ ಪತ್ರಕರ್ತರನ್ನೂ ನಾಗರಿಕ ಸಮಾಜದ ಮುಖಂಡರನ್ನೂಮೂಲೆಗುಂಪು ಮಾಡಿಬಿಟ್ಟಿದ್ದಾರೆ. ಹಾಗಾಗಿ ಆ ದೇಶದಲ್ಲಿ ಲುಕಾಶೆಂಕೋಗೆ ಸವಾಲಿನಂತೆ ಯಾವೊಬ್ಬ ನಾಯಕನೂ ಹೊರ ಹೊಮ್ಮಲಾಗಿಲ್ಲ. ಕೌತುಕವೆಂದರೆ 2020ರಲ್ಲಿ ಓರ್ವ ಗೃಹಿಣಿ ಲುಕಾಶೆಂಕೋ ವಿರುದ್ಧ ಚುನಾವಣೆಯಲ್ಲಿ ನಿಲ್ಲುತ್ತೇನೆ ಎಂದು ಘೋಷಿಸಿ ದೇಶದೆಡೆ ಮನೆಮಾತಾಗಿದ್ದಳು.
ಆಕೆಯ ಹೆಸರು ಸ್ವೆಟ್ಲಾನಾ ಟ್ಸಿಖಾನೋವ್ಸ್ಕಾಯಾ.2020ಆಗಸ್ಟ್‌ನಲ್ಲಿ ನಡೆದ ಚುನಾವಣೆಯಲ್ಲಿ ಎಂದಿನಂತೆ ಲುಕಾಶೆಂಕೋ ಶೇ.80ಮತಗಳನ್ನು ಪಡೆದು ಮತ್ತೊಂದು ಬಾರಿ ವಿಜಯದ ಪತಾಕೆಯನ್ನು ಹಿಡಿದಿzರೆ ಎಂದು ಘೋಷಿಸಲಾಯಿತು. ಆದರೆ ಜನರಾಗಲಿ, ಎದುರಾಳಿ ಟ್ಸಿಖಾನೋವ್ಸ್ಕಾಯಾ ಆಗಲಿ ಇದನ್ನು ಒಪ್ಪಲು ತಯಾರಿರಲಿಲ್ಲ. ಚುನಾವಣೆಯ ಫಲಿತಾಂಶಗಳು ದೋಷ ಪೂರಿತವಾದುದೆಂದು, ಈ ಚುನಾವಣೆಯ ನಿಜವಾದ ವಿಜಯಿ ತಾನೆಂದೂ ಅಧಿಕಾರವನ್ನು ಬಿಟ್ಟುಕೊಡುವಪ್ರಕ್ರಿಯೆ ಪ್ರಾರಂಭಿಸಬೇಕೆಂದೂ ಟ್ಸಿಖಾನೋವ್ಸ್ಕಾಯಾ ಲುಕಾಶೆಂಕೋಗೆ ಒತ್ತಾಯಿಸ ತೊಡಗಿದಳು.
ಆಗ ಜನರು ಅವಳ ಮಾತನ್ನು ನಿಜವೆಂದು ನಂಬಿ ಹೋರಾಟಕ್ಕೆಂದು ಬೀದಿಗಿಳಿದರು. ಅಂದಿನಿಂದ ಜನ ಪ್ರತಿ ವಾರಾಂತ್ಯವೂ ರಾಜಧಾನಿ ಮಿನ್ಸ್ಕ್‌ನಲ್ಲಿ ಜಮಾಯಿಸಲಾರಂಭಿಸಿದರು. ಲುಕಾಶೆಂಕೋ ಮೇಲೆ ಹಿಂದೆಂದೂ ಕಾಣದ ಒತ್ತಡ ಹೇರಲಾಗುತ್ತಿತ್ತು. ಆ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಧ್ಯ ಪ್ರವೇಶಿಸಿ ಲುಕಾಶೆಂಕೋರನ್ನು ಮಾಸ್ಕೋಗೆ ಕರೆಸಿಕೊಂಡು ಅವರಿಗೆ ಈ ಪ್ರತಿಭಟನೆಗಳನ್ನು ಶಮನ ಗೊಳಿಸುವ ಮಾರ್ಗೋಪಾಯಗಳನ್ನು ಹೇಳಿಕೊಟ್ಟರು. ಪುಟಿನ್ ಕೂಡ ಕೈ ಬಿಟ್ಟ ಮೇಲೆ ಇನ್ನೇನು ಲುಕಾಶೆಂಕೋ ಅವರು ರಾಜೀನಾಮೆ ನೀಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.
ಮಿನ್ಸ್ಕ್‌ಗೆ ಹಿಂತಿರುಗಿದ ಲುಕಾಶೆಂಕೋ ತನ್ನ ಬತ್ತಳಿಕೆಯ ಅತ್ಯಂತ ಪರಿಣಾಮಕಾರಿ ಬಾಣವನ್ನು ಬಿಟ್ಟರು. ಇದ್ದಕ್ಕಿದ್ದಂತೆಟ್ಸಿಖಾನೋವ್ಸ್ಕಾಯಾ ಯಾರಿಗೂ ಕಾಣದಂತೆ ಮಾಯ ವಾಗಿಬಿಟ್ಟಿದ್ದರು. ನಾಲ್ಕಾರು ದಿನಗಳ ನಂತರ ಅವರು ಒಂದುವಿಡಿಯೋವನ್ನು ಬಿಡುಗಡೆ ಮಾಡಿದರು. ಅದರಲ್ಲಿ ಅವರು ನಾನು ನನ್ನ ಮಕ್ಕಳ ಸುರಕ್ಷತೆಗಾಗಿ ಹಾಗೂ ನನ್ನ ಪ್ರಾಣ ರಕ್ಷಣೆ ಗಾಗಿ ಬೆಲರೂಸ್ ತೊರೆದು ನೆರೆಯ ಲಿಥುವೇನಿಯಾಗೆ ಹೋಗಿದ್ದೇನೆ ಎಂದು ಹೇಳಿ ಇನ್ನು ಮುಂದೆ ನಾನು ಈ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಳ್ಳುವುದಿಲ್ಲವೆಂದು ಹೇಳಿಬಿಟ್ಟರು.
ಹೋರಾಟದಲ್ಲಿ ನಿರತರಾಗಿದ್ದ ಜನರಿಗೆ ನಾಯಕಿ ಇಲ್ಲದ ಪರಿಸ್ಥಿತಿ ಎದುರಾಯಿತು. ಹೀಗೆ ಇನ್ನೇನು ಪರಿಸ್ಥಿತಿ ತನ್ನ ಕೈ ಮೀರಿ ಹೋಗುತ್ತಿದೆ, 25 ವರ್ಷದ ಅಧಿಕಾರವನ್ನು ಟ್ಸಿಖಾನೋವ್ಸ್ಕಾಯಾಗೆ ಹಸ್ತಾಂತರಿಸಬೇಕು ಎನ್ನುವ ಪರಿಸ್ಥಿತಿಯಲ್ಲೂ ಲುಕಾ ಶೆಂಕೋ ತನ್ನ ದಾಳವನ್ನು ಆಡಿ ತನ್ನ ಶಕ್ತಿಯನ್ನು ಮತ್ತಷ್ಟು ಬಲಿಷ್ಠಗೊಳಿಸಿಕೊಂಡರು.
ಮಿನ್ಸ್ಕ್ ಬೆಂಗಳೂರು ನಂಟು:ಮಿನ್ಸ್ಕ್ ಹಾಗೂ ಬೆಂಗಳೂರು ಸಹೋದರಿ ನಗರಗಳು. ಇದರಂತೆ, ಈ ಎರಡು ನಗರಗಳಲ್ಲಿ ಸಾಂಸ್ಕೃತಿಕ ಹಾಗೂ ವಾಣಿಜ್ಯ ಚಟುವಟಿಕೆಗಳ ವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಈ ಕಾರಣಕ್ಕಾಗಿಯೇ, ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್ ಬಳಿಯಿರುವ ಚೌಕಕ್ಕೆ ಮಿನ್ಸ್ಕ್ ಚೌಕ ಎಂದು ಹೆಸರಿಡಲಾಗಿದೆ. ಅಂತೆಯೇ, ಮಿನ್ಸ್ಕ್ ನಲ್ಲೂ ಒಂದು ಚೌಕಕ್ಕೆ ಬೆಂಗಳೂರು ಚೌಕ ಎಂದು ಹೆಸರಿಡಲಾಗಿದೆ. ಮಿನ್ಸ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹೆಚ್ಚಾಗಿ ನಡೆಯು ವುದು ಈ ಬೆಂಗಳೂರು ಚೌಕದ!
ಹಾಗಾಗಿ, ಬೆಂಗಳೂರು ದೂರದ ಮಿನ್ಸ್ಕ್ ನಗರದಲ್ಲಿ ನಡೆದ ಪ್ರತಿಭಟನೆಗಳಿಂದಲೂ ಹೆಸರು ಮಾಡಿತು. ಲುಕಾಶೆಂಕೋ ಎನ್ನುವ ಸರ್ವಾಧಿಕಾರಿ ಹೀಗೆ ತನ್ನ ವಿರುದ್ಧ ಬಂದ ಎಲ್ಲ ಎದುರಾಳಿಗಳನ್ನೂ ಇಲ್ಲದಂತೆ ಮಾಡಿ, ಲುಕಾಶೆಂಕೋ ಬೆಲರೂಸ್‌ನ ಸರ್ವಾಧಿ ಕಾರಿಯಾಗಿ ಹೊರಹೊಮ್ಮಿದ್ದಾರೆ. ತನ್ನ ವಿರುದ್ಧ ಯಾರೇ ಚಕಾರ ಎತ್ತಿದರೂ ಅವರಿಗೆ ಅಜ್ಞಾತವಾಸವೋ ಜೈಲು ವಾಸವೋ ಇಲ್ಲ ಮರಣ ದಂಡನೆಯೋ ಕಟ್ಟಿಟ್ಟ ಬುಟ್ಟಿ. ಐರೋಪ್ಯ ಒಕ್ಕೂಟದ ಇತರ ದೇಶಗಳಿಂದಾಗಲಿ ಅಮೆರಿಕದಿಂದಾಗಲಿ ನಿರ್ಬಂಧ ಗಳು ಹೇರಲಾಗಿದ್ದರೂ ಲುಕಾಶೆಂಕೋ ಮಾತ್ರ ಸ್ವಲ್ಪವೂ ವಿಚಲಿತವಾಗದೆ ತನ್ನ ಅಧಿಕಾರದ ದುರುಪಯೋಗ ಪಡೆಸಿಕೊಳ್ಳುತ್ತಲೇ ಇದ್ದಾರೆ. ಈ ರೀತಿ ಮಾಡಿದ ಅನೇಕ ಕುಕೃತ್ಯಗಳಲ್ಲಿ ಈ ವಿಮಾನ ಹೈಜಾಕ್ ನಾಟಕವೂ ಒಂದು.
ಕೇವಲ ಓರ್ವ ಪತ್ರಕರ್ತನಿಗಾಗಿ ತನ್ನ ದೇಶದಲ್ಲದ ಒಂದು ನಾಗರಿಕ ವಿಮಾನವನ್ನೇ ಬಲವಂತವಾಗಿ ಕೆಳಗಿಳಿಸಿ ಇಡೀ ಜಾಗತಿಕಸಂಸ್ಥೆಗಳನ್ನೇ ಎದುರು ಹಾಕಿಕೊಳ್ಳುವ ಮಟ್ಟಕ್ಕೆ ಲುಕಾಶೆಂಕೋ ಬೆಳೆದು ನಿಂತಿದ್ದಾರೆ. ಐಸಿಎಒ ಸಂಸ್ಥೆಗೆ ಈ ವಿಮಾನ ಹೈಜಾಕ್ ಘಟನೆ ಒಂದು ಹೊಸ ತಲೆನೋವಾಗಿ ಪರಿಣಮಿಸಿದೆ. ಮೊದಲೇ ಕರೋನಾ ಸಾಂಕ್ರಾಮಿಕ ರೋಗದಿಂದ ವಿಮಾನ ಉದ್ಯಮ ನನೆಗುದಿಗೆ ಬಿದ್ದಿದೆ. ಈಗ ತಾನೇ ತರಿಸಿಕೊಳ್ಳುತ್ತಿರುವ ಈ ಉದ್ಯಮಕ್ಕೆ ಇಂಥ ಕುಕೃತ್ಯಗಳು ನಡುಕ ಹುಟ್ಟಿಸುವಂತಹವು.
ಇದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ನಾಳೆ ಯಾವುದಾದರೂ ವೈರಿ ದೇಶವೋ, ಉಗ್ರ ಸಂಘಟನೆಯೋ ಈ ರೀತಿ ಮಾಡಿದರೆ, ಜಿನೀವಾ ಸಮಾವೇಶದ ಪ್ರಸ್ತಾಪಗಳನ್ನೇ ಉಲ್ಲಂಘಿಸಿದಂತಾಗುತ್ತದೆ. ಆಗ ಯಾವ ಪ್ರಯಾಣಿಕ ತಾನೇ ಸುರಕ್ಷಿತವಾಗಿ ಪ್ರಯಾಣಿಸ ಬಲ್ಲ? ಯಾವ ವಿಮಾನ ತಾನೇ ಸುರಕ್ಷಿತವಾಗಿ ಹಾರಬಲ್ಲದು? ಈ ರೀತಿಯ ಘಟನೆಗಳು ಮುಂದೆಂದೂ ಮರುಕಳಿಸಬಾರದು. ವಿಮಾನಗಳನ್ನು ಸೈದ್ಧಾಂತಿಕ ಚೌಕಟ್ಟಿನಿಂದ ಹೊರಗಿಡುವುದು ಎಲ್ಲರಿಗೂ ಅತ್ಯವಶ್ಯಕ. ಹಾಗಾಗಿ ಲುಕಾಶೆಂಕೋಗೆ ಈ ತಪ್ಪಿನ ಅರಿವು ಮೂಡಿಸಿ ದಂಡ ವಿಧಿಸಿ ಪಡೆದುಕೊಳ್ಳುವುದೇ ಎಷ್ಟು ಮುಖ್ಯವೋ, ಅಂತೆಯೇ, ಆ ದೇಶದಲ್ಲಿನ ಕಾರಾಗೃಹಗಳಲ್ಲಿ ಬಂಧಿಯಾಗಿರುವ ಎಲ್ಲ ರಾಜಕೀಯ ಎದುರಾಳಿಗನ್ನೂ ಬಿಡಿಸುವುದಲ್ಲದೆ, ಜನರ ಅಭಿಪ್ರಾಯದಂತೆ ನಿರ್ಭಯದ ವಾತಾವರಣ ದಲ್ಲಿ ಹೊಸ ಚುನಾವಣೆಗಳನ್ನು ನಡೆಸುವುದೂ ಅಷ್ಟೇ ಮುಖ್ಯವಾಗಿದೆ.
ಆದರೆ ದೊಡ್ಡಣ್ಣನಂತೆ ಪುಟಿನ್ ನಿಂತಿರುವಾಗ ಲುಕಾಶೆಂಕೋಗೆ ಈ ರೀತಿ ದಂಡ ವಿಽಸುವುದಾದರೂ ಹೇಗೆ ಎನ್ನುವುದು ಈಗಎಲ್ಲರ ಮುಂದಿರುವ ಯಕ್ಷಪ್ರಶ್ನೆ.