ಐತಿಹಾಸಿಕ ನಡೆ ಮೋದಿ ಸರಕಾರದಿಂದ ಮಾತ್ರವೇ ಸಾಧ್ಯ
ಹಂಪಿ ಎಕ್ಸ್‌’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು- 1336hampiexpress1509@.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಕಳೆದ ವರ್ಷದ ಕರೋನಾ ಸಂಕಷ್ಟದಲ್ಲಿ ಸಮರ್ಥ ಸಾಮರ್ಥ್ಯವನ್ನುತೋರಿದ್ದರಿಂದಲೇ ಕರೋನಾ ವಿರುದ್ಧದ ಭಾರತದ ಹೋರಾಟಕ್ಕೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಈ ಬಾರಿಯ ಎರಡನೇ ಅಲೆಯಲ್ಲಿ ಕೊಂಚ ಹಿನ್ನಡೆಯಾಗುತ್ತಿದಂತೆ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರ ಜಾಗಕ್ಕೆ ನಮ್ಮ ನಾಡಿನ ವಿಶ್ವವಿಖ್ಯಾತ ವೈದ್ಯರಾದ ಡಾ.ದೇವಿ ಪ್ರಸಾದಶೆಟ್ಟಿಯವರನ್ನು ನೇರವಾಗಿ ಕೇಂದ್ರ ಆರೋಗ್ಯ ಸಚಿವ ಸ್ಥಾನದಲ್ಲಿ ಕೂರಿಸುವ ಚಿಂತನೆ ನಡೆದಿದೆ.
ಇಂಥ ಐತಿಹಾಸಿಕ ನಡೆ ಮೋದಿಯವರ ಸರಕಾರದಿಂದ ಮಾತ್ರವೇ ಸಾಧ್ಯ. ಅದೇ ಬೇರೆ ಪಕ್ಷಗಳಾಗಿದ್ದರೆ ಆ ಮಂತ್ರಿ ಸ್ಥಾನಕ್ಕೆ ಕನಿಷ್ಠ ಹತ್ತು ಮಂದಿ ಅಯೋಗ್ಯರು ಟವಲ್ ಹಾಸಿದ್ದಿರಬೇಕು. ಅಥವಾ ಪಕ್ಷದ ಮುಖಂಡರಿಗೆ ಒಂದರ್ಥದಲ್ಲಿ ಅಳಿಯನಾಗಿರ ಬೇಕು ಅಥವಾ ಮಗಳ ಗಂಡನಾದರೂ ಆಗಿರಬೇಕು. ತಲೆಯಲ್ಲಿ ಮೆದುಳಿಲ್ಲದ ಯುವರಾಜ ಅಥವಾ ಯುವರಾಣಿ ಯಾದರೂ ಆಗಿರಬೇಕು ಅಥವಾ ಮಡಗಬೇಕಾದವರಿಗೆ ಸರಿಯಾದ ಪಿತೃಪಕ್ಷದ ಎಡೆ ಇಟ್ಟು ಭಾರಿ ಬಕೇಟು ಹಿಡಿದು ಓಲೈಸಿ ಕೊಂಡಿರಬೇಕು.
ಇಂಥವರನ್ನು ಎಲ್ಲಾ ಹಿರಿಯರೂ ಮುತ್ಸದ್ದಿಗಳು ನಾಯಕರು ಹೇಳುವ ಆಕೃತಿ ಯನ್ನು ಒಪ್ಪಿಕೊಳ್ಳಬೇಕು. ಆದರೆ ರಾಜಕೀಯದ ಗಂಧಗಾಳಿ ಪರಿಚಯವಿರದ ಒಂದು ದೇಶದ ಆರೋಗ್ಯ ಇಲಾಖೆಯನ್ನು ನಿಭಾಯಿಸಬಹುದಾದ ಪರಿಪೂರ್ಣ ವ್ಯಕ್ತಿಯಾದ ಡಾ.ದೇವಿಪ್ರಸಾದಶೆಟ್ಟಿಯಂಥ ವೈದ್ಯೋನಾರಾಯಣರನ್ನು ಏಕಾಏಕಿ ಕೇಂದ್ರ ಮಂತ್ರಿಸ್ಥಾನಕ್ಕೆ ಆಯ್ಕೆ ಮಾಡುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪವಿತ್ರ ಕಾರ್ಯ.
ಇಂಥ ಬದಲಾವಣೆಗಳನ್ನು ತರುವುದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ಮಾತ್ರವೇ ಹೊರತು ಗಂಡು ಮಗನಿಗೆ ಹೆಣ್ಣಿನ ಹೆಸರನ್ನಿಡುವಷ್ಟು ಗುಲಾಮಗಿರಿಯ ಮನಸ್ಥಿತಿಯವರಿಗಲ್ಲ. ಪಕ್ಷ, ವಂಶವೃಕ್ಷ, ಕುಟುಂಬ ರಾಜಕಾರಣ ಮತ್ತು ಇನ್ನಿತರ ಕುಲ ಗೆಟ್ಟ ಕಾರಣಗಳಿಗಿಂತ ದೇಶದ – ಪ್ರಜಾಪ್ರಭುತ್ವದ ಹಿತಚಿಂತನೆಯಲ್ಲಿ ಆಲೋಚಿಸಿದಾಗ ಮಾತ್ರ ಇಂಥ ಬದಲಾವಣೆಗಳು ಸಂಭವಿಸಲು ಸಾಧ್ಯ.
ಮೋದಿಯವರು ಕಳೆದ ವಾರ ತಮ್ಮ ಮಾತೃಕ್ಷೇತ್ರವನ್ನು ಬಿಟ್ಟು ಓಡಿಹೋಗುವಂಥ ಹೇಡಿಯಾಗದೆ ಒಬ್ಬ ಜವಾಬ್ದಾರಿಯುತ ಸಂಸದರಾಗಿ ತಮ್ಮ ವಾರಣಾಸಿ ಕ್ಷೇತ್ರದಲ್ಲಿ ಕರೋನಾ ವಾರಿಯರ್ಸ್‌ಗಳಾಗಿ ಶ್ರಮಿಸುತ್ತಿರುವ ವೈದ್ಯರು ಮತ್ತು ದಾದಿಯರೊಂದಿಗೆ ಸಮಾಲೋಚನೆ ಮಾಡುತ್ತಿರುವಾಗ ಸಾವುನೋವಿನ ವಿಚಾರದಲ್ಲಿ ಭಾವುಕರಾಗಿ ಕಣ್ಣೀರಿಡುತ್ತಾರೆ. ನೆನಪಿರಲಿ, ಇಷ್ಟಕ್ಕೂ ಅವರು ಮತ್ತೊಮ್ಮೆ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಲು ಅಥವಾ ಹೆಂಡತಿ ಮಕ್ಕಳು, ಮೊಮ್ಮಕ್ಕಳ ರಾಜಕೀಯ ಪಲ್ಲಕ್ಕಿಗಾಗಿ ಮೊಸಳೆಅಥವಾ ವಿಕ್ಸ್ ಆಧರಿತ ಕಣ್ಣೀರು ಸುರಿಸಲಿಲ್ಲ.
ಕರೋನಾ ಪರಿಣಾಮವನ್ನು ಎದುರಿಸುತ್ತಿರುವ ತಮ್ಮ ಜನಗಳ ಬಾಧೆಯನ್ನು ಕೇಳಿ ಮನುಷ್ಯಸಹಜ ಕಣ್ಣೀರಿಟ್ಟು ಅವರಲ್ಲಿತಾವೊಬ್ಬರಾಗಿ ಧೈರ್ಯತುಂಬಿದರು. ಆದರೆ ಮನುಷ್ಯತ್ವ ವಿರದ ವಿಕೃತರಂತೆ ಅನೇಕರು ಮೋದಿಯವರ ಕಣ್ಣೀರನ್ನು ಮೊಸಳೆ ಕಣ್ಣೀರು, ಮೋಸದ ಕಣ್ಣೀರೆಂದು ವ್ಯಂಗವಾಡುತ್ತಾ ಮರದ ಮೇಲಿನ ಬೇತಾಳಗಳಂತೆ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಇವರ ನೈತಿಕತೆ, ನಾಗರಿಕತೆ, ಮನುಷ್ಯತ್ವದ ಅಧಃಪತನ ಅನಾವರಣಗೊಂಡಿದೆ.
ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಒಂದು ವಿಚಾರ ಪ್ರಕಟಗೊಂಡರೆ ಅದು ಜಾಗತಿಕ ಗಮನ ಸೆಳೆಯುತ್ತದೆ. ಕಳೆದ ಮೇ 21 ಭಾನುವಾರ ಅದೇ ನ್ಯೂಯಾರ್ಕ್ ಟೈಮ್ಸ ಮುಖಪುಟದಲ್ಲಿ ಮುದಿ ಬಿದ್ದ ಮೊಸಳೆ ಕಣ್ಣೀರಿಡು ತ್ತಿರುವ ಅರ್ಧಪುಟದಷ್ಟು ದೊಡ್ಡದಾದ ಚಿತ್ರವನ್ನು ಪ್ರಕಟಿಸಿ ಅದಕ್ಕೆ ಭಾರತದ ಪ್ರಧಾನಿಯ ಅಳು ಎಂಬ ಶೀರ್ಷಿಕೆ ನೀಡಲಾಗಿತ್ತು. ಈ ಮುಖಪುಟ ಟ್ವಿಟರ್ ಖಾತೆಯೊಂದರಲಿ ಪ್ರಕಟವಾಗಿದ್ದೇ ತಡ ಅನೇಕ ವಿರೋಧಿಗಳು, ಟೂಲ್ಕಿಟ್ ಏಜೆಂಟರುಗಳು ತಮ್ಮ ಖಾತೆಯಲ್ಲಿ ಆ ಪುಟವನ್ನು ಪ್ರಕಟಿಸಿ ಪಾಕಿಸ್ತಾನದ ಶತ್ರುಗಳನ್ನೂ ಮೀರಿಸುವಂತೆ ಭಾರತದ ಪ್ರಧಾನಿ ಮೋದಿಯವರನ್ನು ಮನಸೋ ಇಚ್ಛೆ ಅಣಕಿಸಿದರು.
ಹೊಟ್ಟೆಗೆ ಸರಿಯಾಗಿ ಆಹಾರ ಪದಾರ್ಥಗಳನ್ನು ತಿನ್ನುವ ಯಾವನೇ ಆಗಿರಲಿ, ಅನ್ಯದೇಶ ವೊಂದು ನಮ್ಮ ದೇಶದ ಪ್ರಧಾನಿ ವಿರುದ್ಧ ವ್ಯಂಗವಾಗಿ ಬರೆದಾಗ ಅದಕ್ಕೆ ಒಬ್ಬ ಭಾರತೀಯನಾಗಿ ಪ್ರತಿರೋಧ ವ್ಯಕ್ತಪಡಿಸುವುದು ನೈಜ ಭಾರತೀಯನ ಲಕ್ಷಣ. ಅದರಲ್ಲೂ ಇಡೀ ವಿಶ್ವವೇ ಮೋದಿಯವರ ನಾಯಕತ್ವವನ್ನು ಗೌರವಿಸುತ್ತಿರುವಾಗ ನಮ್ಮ ದೇಶದ ವಿಚಾರವನ್ನು ಮತ್ತು ನಮ್ಮ ದೇಶದ ಸಂಸತ್ ನಾಯಕರನ್ನು ಪರದೇಶದ ಪತ್ರಿಕೆಯೊಂದು ವ್ಯಂಗ್ಯಮಾಡಿದಾಗ ಅದನ್ನು ಕನಿಷ್ಠ ಶಿಷ್ಟಾಚಾರದ ನೆಪದಲ್ಲಾ ದರೂ ಖಂಡಿಸದೆ ಚಂಡಾಲರಂತೆ ಸಂಭ್ರಮಿಸಿರುವುದನ್ನು ನೋಡಿದರೆ ಇಂಥವರಿಗೆ ನಾಳೆ ನಾವುಗಳು ಅಧಿಕಾರ ನೀಡಿದರೆ ನಮ್ಮ ದೇಶದ ಗತಿ ಪುಟ್ಟಣ್ಣಕಣಗಾಲರ ನಾಗರಹಾವು ಸಿನಿಮಾದ ಅಲಮೇಲು ಪಾತ್ರದಂತೆ ದುಸ್ಥಿತಿಗಿಳಿಯುವುದು ಈಗಲೇ ಗೋಚರಿಸುತ್ತಿದೆ.
ಈ ಮುಖಪುಟದ ವಿಚಾರದಲ್ಲಿ ನಡೆದಿರುವ ಅಸಲಿಯತ್ತೇನೆಂದರೆ ಇಷ್ಟಕ್ಕೂ ಆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಮುಖಪುಟವೇ ನಕಲಿ. ಯಾರೋ ಟೂಲ್ಕಿಟ್ ಗಿರಾಕಿಗಳು ಆ ಪತ್ರಿಕೆಯ ಮುಖಪುಟವನ್ನು ನಕಲು ಮಾಡಿ ಅಸಲಿ ಮುಖಪುಟದಲ್ಲಿದ್ದ ಗಾಜಾ ಪ್ರದೇಶದ ಚಿತ್ರದ ಜಾಗಕ್ಕೆ ಸರಿಯಾಗಿ ಈ ಮೊಸಳೆ ಚಿತ್ರವನ್ನು ಹಾಕಿ ಇಂಥ ವಿಕೃತಿ ಶೀರ್ಷಿಕೆಯನ್ನು ನೀಡಿರುವುದು ಬಹಿರಂಗ ಗೊಂಡಿದೆ. ಇದನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯೂ ಹೇಳಿಕೊಂಡಿದೆ.
ಇಂಥ ಹರಾಮಿ ಕೆಲಸವನ್ನು ಭಾರತೀಯರಲ್ಲದೇ ಇನ್ನಾರು ಮಾಡಲು ಸಾಧ್ಯ ಹೇಳಿ? ಸೋತವನು ಗೆಲ್ಲುವ ಪ್ರಯತ್ನ ಮಾಡು ವುದು ಸೃಷ್ಠಿ ನಿಯಮ. ಆದರೆ ಸೋತವನು ಗೆದ್ದವನ ಚಾರಿತ್ರ್ಯವಧೆ ಮಾಡುತ್ತಾ ಸೋಲಿಸುವ ಪ್ರಯತ್ನಕ್ಕಿಳಿದು ಅಪಪ್ರಚಾರ ಮಾಡುವುದು ಗುಲಾಮರ ಕೊನೆಯ ಅಸ್ತ್ರ. ಕಳೆದ ವರ್ಷ ಮೋದಿಯವರು ದೇಶದ ಜನರು ಕರೋನಾ ಭೀತಿಗೆ ಒಳಗಾಗದಂತೆ ಒಂದು ಧನಾತ್ಮಕ ಶಕ್ತಿ ಸಂಚರಿಸಲಿ ಎಂಬ ಉದ್ದೇಶದಿಂದ ಒಂದೇ ಒಂದು ದಿನ ಚಪ್ಪಾಳೆ ಹೊಡೆಯುವುದು ಮತ್ತೊಂದು ದಿನ ದೀಪ ಬೆಳಗುವುದನ್ನು ಹೇಳಿಕೊಟ್ಟರು.
ಆಗ ಜೋಪಡಿಯಲ್ಲಿ ವಾಸವಿದ್ದ ಅನಕ್ಷರಸ್ಥರು, ಸಾಮಾನ್ಯರು, ಭಿಕ್ಷುಕರೂ ಸಹ ಪುಟ್ಟ ದೀಪವನ್ನು ಬೆಳಗಿಸಿ ದೇಶದೊಂದಿಗೆ ಭಾವನೆಯನ್ನು ಹಂಚಿಕೊಂಡಿದ್ದರು. ಆದರೆ ಇವರುಗಳು ಪ್ರತಿನಿತ್ಯ ತಮ್ಮ ಕಿತ್ತುಹೋದ ಶಂಖವನ್ನು ಊದುತ್ತಾ ಪಿತೃಪಕ್ಷದ ಜಾಗಟೆ ಬಡಿಯುತ್ತಲೇ ಇದ್ದಾರೆ. ಇಂಥದ್ದನ್ನು ಬಿಟ್ಟು ತಮ್ಮ ಪಕ್ಷದ ನೀತಿಸೂತ್ರಗಳಲ್ಲಿ ಬದಲಾವಣೆ ತಂದು ದೇಶದ ಬಹು ಸಂಖ್ಯಾತ ಹಿಂದೂಗಳ ಮನಗೆಲ್ಲುವ ಪ್ರಯತ್ನಮಾಡಿ ಮತ್ತೇ ಅಧಿಕಾರಕ್ಕೆ ಬರುವ ಜಾಣತನದ ವಿಚಾರವನ್ನು ಅಂಡಿನ ಕೆಳಗೆ ಹಾಕಿಕೊಂಡು ಕೂತು ದೂರದಾ ಹೆಣಕೆ ನರಿಕೂಗಿ ನೆಗೆದು ಬಾಯಾರಿ ಸತ್ತಂತೆ ಸರ್ವಜ್ಞ ಎಂಬ ಸಾಲಿನಂತೆ ಇವರುಗಳು ಬರೀ ಮೋದಿಯವರನ್ನು ಅಣುಕಿಸಿ ದೂಷಿಸುವುದರ ದಿನ ಕಳೆಯುವಂತಾಗಿದೆ ಹೊರತು, ಅವರನ್ನು ಮೀರಿಸುವಂಥ ಉತ್ತಮ ಕೆಲಸಗಳನ್ನು ಮಾಡುವುದೋ ಅಥವಾ ಸರಕಾರಕ್ಕೆ ಇಂಥ ತುರ್ತು ಸಂದರ್ಭದಲ್ಲಿ ಕನಿಷ್ಠ ಒಂದೊಳ್ಳೆಯ ಮಾತುಗಳಮೂಲಕವಾದರೂ ಮಾರ್ಗದರ್ಶನ ಮಾಡುವ ಕಿಂಚಿತ್ ಪ್ರಜ್ಞೆಯೂ ಇಲ್ಲದಂತಾಗಿದೆ.
ಇನ್ನು ಮೋದಿಯವರ ವಿರುದ್ಧ ಮಾತನಾಡಲು ಬರೋಬ್ಬರಿ ನೂರಾ ಒಂದು ಏಣಿಯನ್ನು ಏರಿ ನಿಂತು ಮಾತನಾಡುವ ರಾಜೀನಾಮೆ ಗಿರಾಕಿಯೊಬ್ಬನಿಗೆ ದೇಶದ ಪ್ರಧಾನಿಯೊಬ್ಬರನ್ನು ಹೇಗೆ ಸಂಬೋಧಿಸಬೇಕೆಂಬ ಕನಿಷ್ಠ ಅನುಭವ ಜ್ಞಾನವೂ ಇದ್ದಂತಿಲ್ಲ. ಜನ ತಟ್ಟೆ – ಜಾಗಟೆ ಬಡಿಯುವಷ್ಟು ಮೂರ್ಖರಲ್ಲ ಎಂದು ಮತ್ತೊಬ್ಬ ಎನ್ನುತ್ತಾನೆ. ತಟ್ಟೆ-ಜಾಗಟೆ-ಶಂಖವನ್ನು ನಮ್ಮಲ್ಲಿ ತಿಥಿ – ವೈಕುಂಠ ಸಮಾರಾಧನೆಯಲ್ಲೂ ಬಾರಿಸುತ್ತಾರೆ, ಶುಭ ಕಾರ್ಯಗಳಲ್ಲೂ ಬಡಿಯುತ್ತಾರೆ. ಆದರೆ ಆ ಶಬ್ದವನ್ನುಕೇಳಿಸಿಕೊಳ್ಳುವವನಿಗೆ ಆಯಾ ಸಂದರ್ಭ ಅನುಭೂತಿಯಾಗುತ್ತದೆ.
ಇನ್ನು ಖಾಲಿ ತಲೆಯ ಕನಸುಗಾರನ ಭಾಷಣದಲ್ಲಿ ಮೋದಿ – ಚೌಕಿದಾರ್ -ಗರೀಬ್‌- ಜಿಡಿಪಿ – ನಾಟಕ್ ಎಂಬ ಪದಗಳನ್ನು ತೆಗೆದುಬಿಟ್ಟರೆ ಅದು ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್‌ನಂತೆ ಕೇಳಿಸುತ್ತದೆ. ಇನ್ನುಳಿದವರು ಮಾತನಾಡಿದರೆ ಬರಿಯ ತಟ್ಟೆ ಜಾಗಟೆ ಶಬ್ಧಗಳೇ ಪ್ರತಿಧ್ವನಿಸುತ್ತದೆ.
ಸಂವಿಧಾನದಲ್ಲಿ ವಿರೋಧ ಪಕ್ಷಗಳಿಗೆ ಅದರ ನಾಯಕರಿಗೆ ಸಮನಾದ ಸ್ಥಾನಮಾನವಿದೆ. ಆಡಳಿತ ಪಕ್ಷಗಳ ಕಾರ್ಯ ವೈಖರಿ ಗಳನ್ನು ಪರಾಮರ್ಶಿಸಿ ಸಂವಿಧಾನ ಮಾರ್ಗವಾಗಿ ನಡೆಸಿಕೊಂಡು ಹೋಗುವಂಥ ಸೈದ್ಧಾಂತಿಕವಾದ ಹೊಣೆಗಾರಿಕೆಗಳಿವೆ. ಆದರೆ ಆಡಳಿತ ಪಕ್ಷವನ್ನು ಕೆಡವುದೇ ವಿರೋಧ ಪಕ್ಷಗಳ ಪರಮಗುರಿಯಾಗಿ ವಿರೋಧ ಪಕ್ಷವೂ ಸ್ವಾಭಿಮಾನಿ ಭಾರತೀರಾಗಿರ ಬೇಕೆಂಬುದೇ ಮರೆತು ಹೋಗಿದೆ. ನಮ್ಮದೇ ದೇಶದ ಒಬ್ಬ ಪ್ರಧಾನಿಯನ್ನು ಬಾಯಿಗೆ ಬಂದಂತೆ ದೂಷಿಸುತ್ತಾ ಅವರ ಗಡ್ಡಮೀಸೆಮತ್ತೊಂದರ ಬಗ್ಗೆ ವ್ಯಂಗ್ಯಮಾಡುತ್ತಾ, ಶತ್ರುದೇಶಗಳೊಂದಿಗೆ ದೃತರಾಷ್ಟ್ರ ಹೆಂಡತಿಯ ಅಣ್ಣನ ಪಾತ್ರವನ್ನು ನಿಭಾಯಿಸುತ್ತಾ, ಟ್ವಿಟರ್‌ನಲ್ಲಿ ಗಾಳಿಪಟ ಹಾರಿಸುವುದೇ ಅಸ್ತಿತ್ವ ಎನಿಸಿದೆ.
ಯಾವ ಪಕ್ಷದ ಯಾರೇ ಆಗಲಿ ಸಮಾಜಕ್ಕೆ ದೇಶಕ್ಕೆ ಬೇಕಾದ ವ್ಯಕ್ತಿಯಾಗಿ ಐತಿಹಾಸಿಕ ನಡೆ ಮೋದಿ ಸರಕಾರದಿಂದ ಮಾತ್ರವೇ ಸಾಧ್ಯ ನಡೆದುಕೊಳ್ಳದಿದ್ದರೆ ಬೀದಿ ನಾಯಿಯೂ ಮೂಸದೆ ಒಂದು ಕಾಲನ್ನೆತ್ತಿ ಮುಂದೆ ಹೋಗುತ್ತದೆ. ಇಡೀ ವಿಶ್ವವೇ ಕರೋನಾ ಸೋಂಕಿನಿಂದ ಬಳಲುತ್ತಿದೆ. ಅಮೆರಿಕ ಇಟಲಿಯಂಥ ದೇಶಗಳೇ ಸೋತುಸುಣ್ಣವಾಗಿ ಲಕ್ಷಾಂತರ ನಾಗರಿಕರನ್ನು ಕಳೆದು ಕೊಂಡಿವೆ. ಆದರೆ ನಮ್ಮ ದೇಶದಲ್ಲಿ ಲಂಗುಲಗಾಮಿಲ್ಲದೆ ಬೆಳೆಯುತ್ತಿರುವ ಜನಸಂಖ್ಯೆಯ ತೀವ್ರತೆಯಲ್ಲೂ ಕರೋನಾವನ್ನುನಿಯಂತ್ರಿಸಲು ಸಾಕಷ್ಟು ಪ್ರಯತ್ನ ನಡೆಯುತ್ತಲೇ ಇದೆ.
ಇಂಥ ಸಮಯದಲ್ಲಿ ದೇಶದೊಂದಿಗೆ ಕೈಜೋಡಿಸಿ ತಮ್ಮೆ ಸೈದ್ಧಾಂತಿಕ ವಿರೋಧಗಳನ್ನು ರಾಜಕೀಯ ಕುತಂತ್ರಗಳನ್ನುಬದಿಗೊತ್ತಿ ಸರಕಾರದೊಂದಿಗೆ ನಾವಿದ್ದೇವೆ ಎಂಬ ನೈತಿಕ ಸ್ಥೈರ್ಯ ನೀಡಿ ಇವೆಲ್ಲಾ ಪಕ್ಷಗಳೂ ಒಗ್ಗೂಡಿ ದೇಶಕ್ಕಾಗಿ ಕೆಲಸ ಮಾಡುವುದನ್ನು ಬಿಟ್ಟು ಕೇವಲ ಸರಕಾರಗಳನ್ನು ಮತ್ತು ನಾಯಕರುಗಳನ್ನು ತೆಗಳುತ್ತಾ, ಸರಕಾರಿ ವ್ಯವಸ್ಥೆಗಳನ್ನು ಹಾಳು ಮಾಡುತ್ತಾ, ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆಯೇ ಹೊರತು ಜನಕ್ಕೆ ಇವರುಗಳು ಏನು ಮಾಡಿದ್ದಾರೆ?.
ಎಲ್ಲವೂ ಸರಿಯಾಗಿದ್ದು ಸಂಭ್ರಮಿಸುವ ಕಾಲದಲ್ಲಿ ವೈರಿಯೂ ಹಿತಕರವಾಗಿ ಕಾಣುತ್ತಾನೆ. ಆದರೆ ಸಂಕಟದ ಸಮಯದಲ್ಲಿಮಾತ್ರ ಮನೆಯವರು ಮಿತ್ರರು ಹೇಗೆ ವರ್ತಿಸುತ್ತಾರೆಂಬುದರ ಮೇಲೆ ಅವರ ಯೋಗ್ಯತೆ ನಿರ್ಧಾರವಾಗುತ್ತದೆ. ಅದೇ ಇಂದುಸಾವಿನ ಮನೆಯಲ್ಲಿನ ಇವರ ಸಂಚನ್ನು ನಾವುಗಳು ನೋಡುತ್ತಿದ್ದೇವೆ. ತಾಯಿಯನ್ನು ಬಿಟ್ಟರೂ ತಾಯಿನಾಡನ್ನು ಬಿಡೆವು ಎಂದು ಸಂಕಲ್ಪಿಸಿ ನೇಣುಗಂಬವೇರಿ ತ್ಯಾಗ ಬಲಿದಾನಗಳನ್ನು ಮಾಡಿದ ದೇಶದಲ್ಲಿ ಇಂದು ದೇಶದ್ರೋಹಿಗಳದ್ದೇ ದೊಡ್ಡ ಶಾಪವಾಗಿ ಪರಿಣಮಿಸಿದೆ.
ಮಾತೆತ್ತಿದರೆ ಮೋದಿ ಗಂಟೆ ಶಂಖ ಜಾಗಟೆಯನ್ನು ಹೊಡೆಯುವ ಇವರುಗಳಿಂದ ಕರೋನಾ ಸಂಕಷ್ಟದಲ್ಲಿ ಸಮಾಜಕ್ಕೆ ಇವರ ಕೊಡುಗೆಗಳೇನು? ಇದನ್ನೇ ಮೊನ್ನೆ ನಮ್ಮ ಉಚ್ಚನ್ಯಾಯಾಲಯ ಕಾಂಗ್ರೆಸ್ ಪಕ್ಷದ ಎಚ್.ಕೆ. ಪಾಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡು ಕೇಳಿದೆ. ನೀವು ಶಾಸಕರಾಗಿ ಸಮಸ್ಯೆ ಸರಿಪಡಿಸಲು ಏನು ಮಾಡಿದ್ದೀರಿ?, ಬೇರೆಯವರಿಗೆ ಹೇಳುವ ಮುನ್ನ ಸಮಾಜಕ್ಕೆ ನಿಮ್ಮ ಕೊಡುಗೆ ಏನು?, ಕರ್ನಾಟಕದ ಜನರಿಗೆ ನೀವು ಏನು ಮಾಡಿದ್ದೀರ? ಒಂದಾದರೂ ಆಕ್ಸಿಜನ್ ಪ್ಲಾಂಟ್ಸ್ಥಾಪಿಸಿದ್ದೀರಾ?, ಸದನದಲ್ಲಿ ಪ್ರಶ್ನಿಸದೇ ಕೋರ್ಟ್‌ಗೆ ಬಂದಿದ್ದೀರಾ..!. ಶಾಸಕನಾಗಿ ಜನರಿಗೆ ಏನೂ ಮಾಡುವುದಿಲ್ಲವೇ..?, ಪ್ರಭಾವಿ ಹುದ್ದೆಯಲ್ಲಿದ್ದು ಕೆಲಸ ಮಾಡಬಹುದಿತ್ತ..?. ನಿಮ್ಮ ಕ್ಷೇತ್ರದಲ್ಲಿ ಎಷ್ಟೇಷ್ಟು ಬೆಡ್ ಗಳನ್ನು ಒದಗಿಸಿದ್ದೀರಾ? ಇದೆ ಪ್ರಚಾರಕ್ಕಾಗಿ ತಂದಿರುವ ದೂರುಗಳು.
ಕೂಡಲೇ ಹಿಂಪಡೆಯದಿದ್ದರೆ ದಂಡ ವಿಧಿಸಬೇಕಾಗುತ್ತದೆ ಎಂದು ರಾಜ್ಯದ ಮುಖ್ಯ ನ್ಯಾಯಮೂರ್ತಿಗಳಾದ ಅಭಯ ಶ್ರೀನಿವಾಸ ಓಕಾ ಅವರು ಎಚ್ಚರಿಕೆ ನೀಡಿದ್ದಾರೆ. ಸಾಕಲ್ಲವೇ?. ಅಲ್ಲಿಗೆ ಇವರ ಡ್ರಾಮಗಳನ್ನು ನ್ಯಾಯಾಲಯವೂ ಸಹಿಸದಾಯಿತೆಂದರೆ ಅಲ್ಲಿಗೆ ಒಳ್ಳೆಯ ದಿನಗಳು ಬರಲಿವೆಯೆಂದೇ ಅರ್ಥ. ಇಷ್ಟಕ್ಕೂ ಪಾಟೀಲ್ ಅವರು ನ್ಯಾಯಾಲಯದ ಮೊರೆಹೋಗಿದ್ದು ಆಕ್ಸಿಜನ್ಕೊರತೆಗೆ ಸಂಬಂಧಿಸಿದಂತೆ ಸರಕಾರಕ್ಕೆ ನಿರ್ದೇಶನ ಮಾಡಬೇಕೆಂಬುದಕ್ಕಿಂತ ಹೆಚ್ಚಾಗಿ ಛೀಮಾರಿ ಹಾಕಬೇಕೆಂದು ಬಯಸಿ ದ್ದರೋ ಏನೋ. ಆದರೆ ಅದು ಉಲ್ಟಾ ಹೊಡೆದದ್ದು ಪಾಟೀಲರ ದುರದೃಷ್ಟ. ಆದರೆ ಒಂದು ನ್ಯಾಯಾಲಯದ ಅಭಿಪ್ರಾಯ ಇಡೀ ದೇಶದ ನಾಗರಿಕ ಸಮಾಜಕ್ಕೆ ಸಮನಾದ ಎಚ್ಚರಿಕೆ ಎಂಬುದನ್ನು ಯಾರೂ ಮರೆಯಬಾರದು.
ಸದ್ಯಕ್ಕೆ ಬೇರೆ ಯಾರೂ ಬೇಡ. ನಮ್ಮ ನಾಡಿನ ಹಿರಿಯ ರಾಜಕಾರಣಿ ಮಾಜಿ ಪ್ರಧಾನಿ ದೇವೇಗೌಡರು ಮೋದಿಯವರೊಂದಿಗೆ ಉತ್ತಮ ಬಾಂಧವ್ಯವನ್ನು ಗಳಿಸಿದ್ದಾರೆ. ಗೌಡರು ಕರೋನಾ ಸೋಂಕಿತರಾದಾಗ ಜನ್ಮದಿನಾಚರಣೆ ಆಚರಿಸಿಕೊಂಡಾಗ ಖುದ್ದು ಮೋದಿಯವರೇ ದೂರವಾಣಿ ಕರೆಮಾಡಿ ಆರೋಗ್ಯ ವಿಚಾರಿಸಿ ಹಾರೈಸಿದ್ದಾರೆ. ಆದರೆ ದೇವೇಗೌಡರು ಎಂಥ ಕಠೋರ ರಾಜಕಾರಣಿಯೆಂದರೆ ಮೊನ್ನೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ (ರೈತರ ಹೆಸರಿನಲ್ಲಿ ಎಂತೆಂಥ ನಕಲಿ ಹೋರಾಟಗಾರರು, ಟೂಲ್ಕಿಟ್ ಗಿರಾಕಿಗಳಿzರೆಂಬುದು ಇಡೀ ದೇಶಕ್ಕೆ ಗೊತ್ತಾಗಿದೆ) ವಿರೋಧ ಪಕ್ಷಗಳವರೊಂದಿಗೆ ಕೈಜೋಡಿಸಿರು ವುದು.
ರಾಜಕಾರಣದಲ್ಲಿ ವಿಶ್ವಾಸ ನಂಬಿಕೆ ಸ್ನೇಹಕ್ಕೆ ಪುಟಗೋಸಿ ಬೆಲೆಯಿಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಷ್ಟೇ ಅಲ್ಲ, ವಿರೋಧ ಪಕ್ಷಗಳ ನಾಯಕರು ಮಹಾಘಟ್ಬಂಧನ್ ಸ್ಥಾಪಿಸಿ ಕೈಕೈ ಹಿಡಿದುಕೊಂಡು ಮೇಲಕ್ಕೆ ಎತ್ತಿ ಮೋದಿ ಹಠಾವೋ ಎಂಬ ಒಂದಂಶದ ಒಗ್ಗಟ್ಟನ್ನು ಪ್ರದರ್ಶಿಸಿದರ, ಈಗ ಕರೋನಾ ವಿರುದ್ಧ ನಮ್ಮೆಲ್ಲರ ಹೋರಾಟ ಎಂದು ಕೈ ಜೋಡಿಸಿ ಕೈ ಎತ್ತಬಹು ದಲ್ಲವೇ?. ಅಂಥ ಮಹಾದೃಶ್ಯವನ್ನು ಕಣ್ತುಂಬಿ ಕೊಳ್ಳುವ ಸೌಭಾಗ್ಯ ಭಾರತೀಯರಿಗೆ ಬಂದರೆ ನಿಜಕ್ಕೂ ಪ್ರಜಾಪ್ರಭುತ್ವ ಪಾವನ ವಾದಂತೆ.
ಇನ್ನೆರಡು ವರ್ಷ ಕಳೆದರೆ ಮೋದಿಯವರನ್ನು ಹಿಮಾಲಯದ ಯಾವುದಾದರು ಗುಹೆಯ ಆಶ್ರಮದ ಸನ್ಯಾಸಿಯಾಗಿ ನೋಡ ಬೇಕಾದೀತು. ಆದರೆ ಇಂಥ ನೂರು ಮೋದಿಯವರನ್ನು ದೇಶಸೇವೆಗಾಗಿ ನೀಡಲು ನಾವುಗಳು ಸಿದ್ದ ಎನ್ನುತ್ತದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಬದಲಾವಣೆ ಜಗದ ನಿಯಮ. ಸ್ವಾತಂತ್ರೋತ್ತರದ ನಂತರವಿದ್ದ ಗುಲಾಮ ಮನಸ್ಥಿತಿಯ ನಾಗರಿಕತೆ ಈಗಿಲ್ಲ. ಪ್ರತಿಯೊಬ್ಬ ರಾಜಕಾರಣಿಯ ಹಿನ್ನೆಲೆ ಆತನ ಯೋಗ್ಯತೆ ಅರ್ಹತೆ ತಂತ್ರ ಕುತಂತ್ರಗಳನ್ನು ಜನ ಸೂಕ್ಷ್ಮವಾಗಿ ಗಮನಿಸು ತ್ತಾರೆ. ಕೇವಲ ಆಡಳಿತ ಪಕ್ಷವನ್ನು ಬೈದಕೂಡಲೇ ಸಂಭ್ರಮಿಸಿ ಮತ್ತೇ ವಿರೋಧ ಪಕ್ಷಕ್ಕೆ ಜನಾದೇಶ ನೀಡುತ್ತಾರೆಂಬುದು ಪ್ರಜಾಪ್ರಭುತ್ವವನ್ನು ಅವಮಾನಿಸಿದಂತೆ.