ನಾಟ್ಯ ಕ್ಷೇತ್ರದ ಧ್ರುವತಾರೆ ಪದ್ಮಭೂಷಣ ವೆಂಕಟಲಕ್ಷ್ಮಮ್ಮ
ಸ್ಮರಣೆ
ಕೆ.ರಾಮಮೂರ್ತಿ ರಾವ್
ಡಾ.ಕೆ.ವೆಂಕಟಲಕ್ಷಮ್ಮರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು ಕರ್ನಾಟಕಕ್ಕೆ ಹೆಮ್ಮೆ. ಆದರೆ ಅವರು ಇದು ಯಾವುದಕ್ಕೂ ಆಸೆಪಟ್ಟವರಲ್ಲಿ, ಈ ಬಿರುದುಬಾವಲಿಗಳು ಬರುವ ಮುನ್ನ ಅವರೇನು ಕೊರಗುತ್ತ ಇರಲಿಲ್ಲ, ಬಂದ ಮೇಲೆ ಮೆರೆಯಲೂ ಇಲ್ಲ. ಇವರು ತುಂಬಿದ ಕೊಡದಂತಿದ್ದವರು. ಸರಳವಾದ ನಿರಾಡಂಬರ ಜನ ಅಪಾರ ಗುರುಭಕ್ತಿ, ಆಧ್ಯಾತ್ಮದ ಕಡೆಗೆ ಹೆಚ್ಚಿನ ಆಸಕ್ತಿ ಇವು ಅವರ ವ್ಯಕ್ತಿತ್ವದ ಪ್ರಮುಖ ಅಂಶಗಳಾಗಿದ್ದವು. ತಮಗೆ ದೈವದತ್ತವಾಗಿ ಲಭಿಸಿ ರುವ ನೃತ್ಯ ಕಲೆಯನ್ನು ಸ್ವಲ್ಪವೂ ಮರೆಮಾಚದೆ ಶಿಷ್ಯವರ್ಗಕ್ಕೆ ಅನುಗ್ರಹ ಪೂರ್ವಕವಾಗಿ ತರಬೇತಿ ನೀಡುವ ಗುಣ ವಿಶೇಷ ಅವರದ್ದಾಗಿತ್ತು. ಇಂಥಬಿಚ್ಚುಮನಸಿನ ಗುಣ ಹೊಂದಿರುವ ಕಲಾವಿದರು ಅತಿ ವಿರಳ.
ನೃತ್ಯ ಕ್ಷೇತ್ರದಲ್ಲಿ ಮೈಸೂರಿನ ಪದ್ಮಭೂಷಣ ಡಾ.ಕೆ.ವೆಂಕಟಲಕ್ಷಮ್ಮ ಅವರದ್ದು ದೊಡ್ಡ ಹೆಸರು. ಅವರ ಹುಟ್ಟೂರು ಕಡೂರಿನತಂಗಲಿ ತಾಂಡ್ಯ. 1906ರ ಮೇ29ರಂದು ಜನಿಸಿದ ಇವರು96ವರ್ಷಗಳ ತುಂಬು ಸಾರ್ಥಕ ಕಲಾ ಜೀವನ ನಡೆಸಿ 2002ರ ಜುಲೈ 3, 2002ರಂದು ಹುಟ್ಟೂರಿನ ನಿಧನರಾದರು. ಇವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರಿಂದ ಅಜ್ಜ ರಾಮ ನಾಯಕ ಮತ್ತು ಅಜ್ಜಿಯ ಪೋಷಣೆಯ ಬೆಳೆದರು.
ಇವರ ಬಾಲಪ್ರತಿಭೆಯನ್ನು ಗುರುತಿಸಿದ ಊರ ಹಿರಿಯರ ಸಲಹೆಯಂತೆ ಅಜ್ಜ – ಅಜ್ಜಿ ಇವರನ್ನು ಕಲಾಭ್ಯಾಸದ ಸಲುವಾಗಿ ಮೈಸೂರಿಗೆ ಕರೆ ತಂದರು. ಅಲ್ಲಿಂದ ಮುಂದೆ ಸುಮಾರು 70-75ವರ್ಷಗಳ ಕಾಲ ಮೈಸೂರು ಸೀಮೆಯೇ ಇವರ ಕಲಾ ವೇದಿಕೆ ಯಾಯ್ತು. ತಮ್ಮ ಒಂಬತ್ತನೆಯ ವಯಸ್ಸಿನಲ್ಲಿಯೇ ನಾಟ್ಯ ಸರಸ್ಪತಿ ಬಿರುದಾಂಕಿತೆ ಜಟ್ಟಿತಾಯಮ್ಮನವರಿಂದ ಭರತ ನಾಟ್ಯ ತರಬೇತಿ ಪಡೆಯಲಾರಂಭಿಸಿದ ಇವರು, ಬಿಡಾರಂ ಕೃಷ್ಣಪ್ಪ ಅವರ ಶಿಷ್ಯ ಆಸ್ಥಾನ ವಿದ್ವಾನ್ ಬಿ.ದೇವೇಂದ್ರಪ್ಪನವರಿಂದ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನು ಪಡೆದರು.
ವೆಂಕಟಲಕ್ಷಮ್ಮನವರ ಸಾಮಾನ್ಯ ವಿದ್ಯಾಭ್ಯಾಸ ಬರಿಯ ಎಂಟನೆಯ ತರಗತಿಗೆ ನಿಂತಿತಾದರೂ ನಾಟ್ಟಕಲೆಯಲ್ಲಿನ ಅವರ ಅಪಾರ ಸಾಧನೆ ಹಾಗೂ ಪರಿಶ್ರಮದ ಫಲವಾಗಿ 1977ರ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿತು. ಕರ್ನಾಟಕದಲ್ಲಿ ನೃತ್ಯ ಕ್ಷೇತ್ರದ ಸಾಧನೆಗಾಗಿ ಗೌರವ ಡಾಕ್ಟರೇಟ್ ಗಳಿಸಿದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು. ಹಾಗೆಯೇ ಭಾರತ ಸರಕಾರವು1992ರಲ್ಲಿ ಇವರಿಗೆ ರಾಷ್ಟ್ರದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.
ಇನ್ನು ಖಾಸಗಿ ಸಂಘ ಸಂಸ್ಥೆಗಳು ಇವರಿಗೆ ನೀಡಿರುವ ಪ್ರಶಸ್ತಿ ಪುರಸ್ಕಾರಗಳು ಸಹಸಾರು. ಇವೆಲ್ಲದರ ಹಿಂದೆ ಅವರ ಸುಮಾರು ಏಳೆಂಟು ದಶಕಗಳ ಅವಿರತ ಶ್ರಮ, ಕಲಾಬದ್ಧತೆ, ಕಲೆಯ ಮೇಲಿನ ಕಳಕಳಿ ಹಾಗೂ ಕ್ರಿಯಾಶೀಲತೆ ಇರುವುದು ಸುಸ್ಪಷ್ಟ.ವೆಂಕಟಲಕ್ಷ್ಮಮ್ಮನವರು1939ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನ ಆಸ್ಥಾನ ವಿದುಷಿ ಆಗಿ ನೇಮಕ ಗೊಂಡರು. ನಂತರ ಸುಮಾರು30ವರ್ಷಗಳ ಕಾಲ ಆಸ್ಥಾನ ವಿದುಷಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು, ಅರಮನೆಯಲ್ಲಿ ಪ್ರತಿವರ್ಷ ನಡೆಯುವ ಎರಡು ಪ್ರಮುಖ ಸನ್ನಿವೇಶಗಳಲ್ಲಿ ನಡೆಯುತ್ತಿದ್ದ ನೃತ್ಯ ಸೇವೆಯ ಬಗ್ಗೆ ಅವರು ಯಾವಾಗಲೂ ಜ್ಞಾಪಿಸಿಕೊಳ್ಳುತ್ತಿದ್ದರು.
ಒಂದು ದಸರಾ ಮಹೋತ್ಸವ, ಇನ್ನೊಂದು ಮಹಾರಾಜರ ವರ್ಧಂತಿ. ನವರಾತ್ರಿಯ ಹತ್ತು ದಿನಗಳಲ್ಲೂ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಶ್ರೀ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ನಡೆಯುತ್ತಿದ್ದ ಕಟ್ಟಳೆ ಪೂಜೆ ಆದ ತಕ್ಷಣ ಅಲ್ಲಿ ನೃತ್ಯ ಸೇವೆಇರುತ್ತಿತ್ತಂತೆ. ಈ ನೃತ್ಯವನ್ನು ಮಹಾರಾಜರು ನೋಡುತ್ತಿದ್ದರಂತೆ. ಸುಮಾರು ಹತ್ತು ನಿಮಿಷಗಳ ಅವಧಿಯ ಈ ಸೇವೆಯಲ್ಲಿ ಸಾಮಾನ್ಯವಾಗಿ ಸಂಸ್ಕೃತದ ಶ್ಲೋಕಗಳು ಅಥವಾ ಚಾಮುಂಡೇಶ್ವರಿಯ ಕೀರ್ತನೆಗಳಿಗೆ ವೆಂಕಟಲಕ್ಷಮ್ಮ ಅಭಿನಯ ನೀಡುತ್ತಿದ್ದ ರಂತೆ.
ಹಾಗೆಯೇ ಇವರು ಭಾಗವಹಿಸುತ್ತಿದ್ದ ಮಹಾರಾಜರ ವರ್ಧಂತಿ ಕಾರ್ಯಕ್ರಮದ ರೀತಿಯೇ ಬೇರೆ ತೆರನದಾಗಿತ್ತು. ಇಲ್ಲಿ ರಾಜರದರ್ಬಾರಿನಲ್ಲಿ ಅವರ ಸಿಂಹಾಸನದ ಮುಂದೆ ಎರಡು ಪಕ್ಕಗಳಲ್ಲಿ ಎರಡು ತಂಡದವರು ನೃತ್ಯ ಮಾಡಬೇಕಾಗಿರುತ್ತಿತ್ತು. ಇಲ್ಲಿನ ವೈಶಿಷ್ಟ್ಯ ಎಂದರೆ ಎರಡೂ ನೃತ್ಯ ತಂಡಗಳ ಹಾಡು, ಶೃತಿ ರಾಗ, ನೃತ್ಯ ಎಲ್ಲವೂ ಒಂದೇ ಆಗಿರಬೇಕು. ಇದರಲ್ಲಿ ಎರಡುತಂಡಗಳ ನಡುವೆ ಸ್ವಲ್ಪ ವತ್ಯಾಸ ಕಂಡು ಬಂದರೂ ಅದು ಮಹಾರಾಜರ ಗಮನಕ್ಕೆ ಬರ್ತಿತ್ತಂತೆ.
ಮರುದಿನ ಅಧಿಕಾರಿಗಳ ಪ್ರಶ್ನೆಗೆ ಕಲಾವಿದೆಯರು ಸಮಜಾಯಿಷಿ ಕೊಡಬೇಕಾಗುತ್ತಿತ್ತು. ಈ ನೃತ್ಯ ಕಾರ್ಯಕ್ರಮ ದರ್ಬಾರಿನಲ್ಲಿ ಸುಮಾರು ಅರ್ಧ ಗಂಟೆ ಕಾಲ ನಡೆಯುತ್ತಿತ್ತಂತೆ. ಆ ವೈಭವ ಈಗ ಒಂದು ಸಾಂಸ್ಕೃತಿಕ ಇತಿಹಾಸ. ಅದರ ಪ್ರಮುಖ ಪಾತ್ರಧಾರಿ ವೆಂಕಟಲಕ್ಷ್ಮಮ್ಮ ಈಗ ನೆನಪು ಮಾತ್ರ. 1963ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ ವೆಂಕಟಲಕ್ಷ್ಮಮ್ಮನವರನ್ನು ವಿಶ್ವವಿದ್ಯಾ ನಿಲಯದ ಲಲಿತ ಕಲೆಗಳ ಕಾಲೇಜಿನ ನೃತ್ಯ ವಿಭಾಗ ಕ್ಕೆ ನೇಮಕ ಮಾಡಿತು. ಮುಂದೆ ಒಂಬತ್ತು ವರ್ಷಗಳ ಕಾಲ ಅವರು ಅಲ್ಲಿ ರೀಡರ್ ಆಗಿ ಸೇವೆ ಸಲ್ಲಿಸಿದರು.
ಅನಂತರ ಇವರ ಮೊಮ್ಮಗಳಾದ ವಿದುಷಿ ಶಕುಂತಲಾ ಹನುಮಂತಪ್ಪ ಅವರು ಈ ವಿಭಾಗದಲ್ಲಿ ಕೆಲ ಕಾಲ ಕಾಲೇಜಿನ ಪ್ರಾಂಶುಪಾಲೆಯೂ ಆಗಿ ಸೇವೆ ಸಲ್ಲಿಸಿದರು. ಡಾ.ವೆಂಕಟಲಕ್ಷ್ಮಮ್ಮನವರು ಮೈಸೂರಿನಲ್ಲಿ ಭರತ ಕಲಾ ನಿಕೇತನ ಎಂಬ ಸ್ವಂತಸಂಸ್ಥೆಯೊಂದನ್ನೂ ನಡೆಸುತ್ತಿದ್ದರು. ಅದನ್ನು ಮುಂದೆ ಇತ್ತೀಚಿನವರೆಗೂ ಅವರ ಶಿಷ್ಯೆ ವಿದುಷಿ ಕೃಷ್ಣವೇಣಿ ನಡೆಸಿಕೊಂಡು ಬಂದಿದ್ದು ಇತ್ತೀಚೆಗೆಷ್ಟೆ ನಿಧನ ರಾದರು. ಬೆಂಗಳೂರಿನ ಗಿರಿನಗರದಲ್ಲಿ ಇವರ ನೇರ ಶಿಷ್ಯೆ ವಿದುಷಿ ವಿದ್ಯಾ ರವಿಶಂಕರ್ ಅವರುಮಾತೃಕಾ ನೃತ್ಯಶಾಲೆ ಎಂಬ ಹೆಸರಿನಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳನ್ನು ಮೈಸೂರು ಶೈಲಿಯ ಭರತನಾಟ್ಯದಲ್ಲಿ ತರಬೇತಿ ನೀಡುತ್ತಿದ್ದಾರೆ.
ಅಮೆರಿಕದಿಂದ ವಿದ್ಯಾರ್ಥಿಗಳ ತಂಡ ಇಲ್ಲಿಗೆ ಬಂದು ವೆಂಕಟಲಕ್ಷ್ಮಮ್ಮನವರಿಂದ ಮೈಸೂರು ಶೈಲಿಯ ಭರತ ನಾಟ್ಯದಲ್ಲಿ ತರಬೇತಿ ಪಡೆದಿದ್ದಾರೆ. ಹೊರ ದೇಶಗಳಲ್ಲಿ ಕೂಡಾ ಇವರ ಶಿಷ್ಯರು ಮೈಸೂರು ಶೈಲಿಯ ಭರತನಾಟ್ಯ ಕಲೆಯನ್ನು ಪಸರಿಸುತ್ತಿzರೆ.ಆಪೈಕಿ ವಿದ್ವಾನ್ ಡಿ ಕೇಶವ ಹಾಗೂ ಅಪರ್ಣ ಸಿಂಧೂರ್ ಮುಂತಾದವರನ್ನು ಹೆಸರಿಸಬಹುದಾಗಿದೆ. ತಮ್ಮ 70-80ರ ಇಳಿ ವಯಸ್ಸಿನಲ್ಲೂ ವೆಂಕಟ ಲಕ್ಷ್ಮಮ್ಮನವರು ವೇದಿಕೆಯ ಮೇಲೆ ಕುಳಿತುಕೊಂಡೇ ಹಿನ್ನೆಲೆ ಗಾಯನಕ್ಕೆ ತಕ್ಕಂತೆ ರಸಾಭಿನಯ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿದ್ದರು.
ಇದು ಮದರಾಸಿನ ಪ್ರಖ್ಯಾತ ಕಲಾವಿದೆ ಬಾಲಸರಸ್ವತಿ ಅವರನ್ನು ನೆನಪಿಗೆ ತರುತ್ತಿತ್ತು. ಅಂದಿನ ರಾಷ್ಟ್ರಪತಿ ಆಗಿದ್ದ ಡಾ.ರಾಧಾಕೃಷ್ಣನ್ ಅವರೇ ವೆಂಕಟಲಕ್ಷ್ಮಮ್ಮನವರು ಅಷ್ಟಪದಿ, ಜಾವಳಿಗಳಿಗೆ ನೀಡಿದ ಅಭಿನಯವನ್ನು ಕೊಂಡಾಡಿದ್ದರು.ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯು 1962ರ ಇವರನ್ನು ಸನ್ಮಾನಿಸಿತ್ತು. 1986ರಲ್ಲಿ ಮುಂಬೈಯ ಮೈಸೂರು ಅಸೋಸಿಯೇಷನ್ ನವರು ಇವರ 80ನೆ ಹುಟ್ಟುಹಬ್ಬವನ್ನು ವೈಭವದಿಂದ ಆಚರಿಸಿ ಇವರನ್ನು ಸನ್ಮಾನಿಸಿತು.
1988ರಲ್ಲಿ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. 1989ರಲ್ಲಿ ಬೆಂಗಳೂರಿನ ಗಾಯನ ಸಮಾಜ ತಮ್ಮ ವಾರ್ಷಿಕ ಸಂಗೀತ ಸಮ್ಮೇಳನದ ಅಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಿ ಸಂಗೀತರತ್ನ ಎಂಬ ಬಿರುದು ನೀಡಿ ಗೌರವಿಸಿತು. ಸಾಹಿತಿ ಚದುರಂಗ ಅವರ ನೇತೃತ್ವದಲ್ಲಿ ಗುರು ವೆಂಕಟಲಕ್ಷ್ಮಮ್ಮನವರ ಸಾಕ್ಷ್ಯಚಿತ್ರವೊಂದನ್ನು ಕೂಡಾ ರಾಜ್ಯ ವಾರ್ತಾ ಮತ್ತು ಪ್ರಚಾರ ಇಲಾಖೆ ನಿರ್ಮಿಸಿದೆ.
ಇವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು ಕರ್ನಾಟಕಕ್ಕೆ ಹೆಮ್ಮೆ. ಆದರೆ ಅವರು ಇದು ಯಾವುದಕ್ಕೂ ಆಸೆಪಟ್ಟವರಲ್ಲಿ, ಈ ಬಿರುದುಬಾವಲಿಗಳು ಬರುವ ಮುನ್ನ ಅವರೇನು ಕೊರಗುತ್ತ ಇರಲಿಲ್ಲ, ಬಂದ ಮೇಲೆ ಮೆರೆಯಲೂ ಇಲ್ಲ. ಇವರು ತುಂಬಿದ ಕೊಡದಂತಿದ್ದವರು. ಸರಳವಾದ ನಿರಾಡಂಬರ ಜನ ಅಪಾರ ಗುರುಭಕ್ತಿ, ಆಧ್ಯಾತ್ಮದ ಕಡೆಗೆ ಹೆಚ್ಚಿನ ಆಸಕ್ತಿ ಇವು ಅವರವ್ಯಕ್ತಿತ್ವದ ಪ್ರಮುಖ ಅಂಶಗಳಾಗಿದ್ದವು. ತಮಗೆ ದೈವದತ್ತವಾಗಿ ಲಭಿಸಿರುವ ನೃತ್ಯ ಕಲೆಯನ್ನು ಸ್ವಲ್ಪವೂ ಮರೆಮಾಚದೆ ಶಿಷ್ಯ ವರ್ಗಕ್ಕೆ ಅನುಗ್ರಹ ಪೂರ್ವಕವಾಗಿ ತರಬೇತಿ ನೀಡುವ ಗುಣವಿಶೇಷ ಅವರದ್ದಾಗಿತ್ತು.
ಇಂಥ ಬಿಚ್ಚುಮನಸಿನ ಗುಣ ಹೊಂದಿರುವ ಕಲಾವಿದರು ಅತಿವಿರಳ ತಾವೇ ಸ್ವತಃ ನೂರಾರು ಮಂದಿ ಕಲಾವಿದರನ್ನು ತಯಾರಿ ಮಾಡಿದ್ದಾರೆ. ಯಾವುದೇ ಸಂಸ್ಥೆ ಆಹ್ವಾನಿಸಲಿ, ಅಲ್ಲಿ ಅಭಿನಯದ ಕಾರ್ಯಾಗಾರಗಳನ್ನು ನಡೆಸಿ ಸಾವಿರಾರು ನೃತ್ಯ ವಿದ್ಯಾರ್ಥಿ ಗಳಿಗೆ ಹಾಗೂ ಗುರುಗಳಿಗೆ ಅಭಿನಯದ ತರಬೇತಿ ನೀಡಿದ್ದಾರೆ. ಹೆಚ್ಚು ಕಡಿಮೆ ನಾಡಿನ ಎಲ್ಲಾ ನೃತ್ಯ ಗುರುಗಳ ಶಿಷ್ಯರೂ ಒಂದಲ್ಲಒಂದು ಬಾರಿ ವೆಂಕಟಲಕ್ಷ್ಮಮ್ಮನವರಿಂದ ಮಾರ್ಗದರ್ಶನ ಪಡೆದವರೇ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಇಂದು ಅವರ115ನೆಯ ಜನುಮ ದಿನ.