’ಕರೋನಾ’ ಸಂಕಷ್ಟದಲ್ಲಿ ’ಆರೈಕೆ ದಾಸೋಹ’ದಲ್ಲಿ ನಿರತರಾಗಿರುವ ’ಮಠಗಳು’
ವೀಕೆಂಡ್ ವಿಥ್‌ ಮೋಹನ್‌
ಮೋಹನ್‌ ವಿಶ್ವ – @.
ಕಾಣದ ವೈರಾಣುವಿನ ವಿರುದ್ಧ ಜಗತ್ತು ನಡೆಸುತ್ತಿರುವ ಹೋರಾಟ, ಕರ್ನಾಟಕದಲ್ಲಿಯೂ ನಡೆಯುತ್ತಿದೆ. ಸರಕಾರ ತನ್ನ ಕೈಮೀರಿ ಕರೋನಾ ವೈರಾಣುವನ್ನು ಹತೋಟಿಗೆ ತರುವಲ್ಲಿ ಪ್ರಯತ್ನ ನಡೆಸುತ್ತಿದೆ.
ಸುಮಾರು 140 ಕೋಟಿ ಜನಸಂಖ್ಯೆಯ ಭಾರತ ದೇಶದಲ್ಲಿ ಕಾಣದ ವೈರಾಣುವಿನ ವಿರುದ್ಧ ಹೋರಾಡಲು ಕೇವಲ ಸರಕಾರ ದಿಂದ ಮಾತ್ರ ಸಾಧ್ಯವಿಲ್ಲ. ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆಯಿರುವ ಭಾರತಕ್ಕೆ, ಅತಿ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ಹಾಗೂ ಅತಿ ಹೆಚ್ಚಿನ ಲಸಿಕೆಗಳು ಬೇಕಿದೆ. ಜಗತ್ತಿನ ಯಾವ ದೇಶವೂ ಸಹ ಕಾಣದ ವೈರಾಣುವಿನ ವಿರುದ್ಧ ಹೋರಾಡಲು ಈಮಟ್ಟದಲ್ಲಿ ಸನ್ನದ್ಧರಾಗಿರಲಿಲ್ಲ.
ಮೂರನೇ ಮಹಾಯುದ್ಧವೆಂದೇ ಹೇಳಬಹುದಾದ ‘ಕರೋನಾ ’ ವೈರಾಣುವಿನ ವಿರುದ್ಧ ಹೋರಾಡುವುದು ಸುಲಭದ ಕೆಲಸ ವಾಗಿರಲಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಮುಂದುವರಿದ ದೇಶವಾದ ಅಮೆರಿಕವೇ ವೈರಾಣು ಯುದ್ಧದಲ್ಲಿ ಹೈರಾಣಾಗಿ ಹೋಗಿ, ಅತಿ ಹೆಚ್ಚಿನ ಸಾವು – ನೋವುಗಳನ್ನು ಕಂಡಿರುವಾಗ, ಅಮೆರಿಕ ದೇಶದ ನಾಲ್ಕು ಪಟ್ಟು ಹೆಚ್ಚಿನ ಜನಸಂಖ್ಯೆ ಯಿರುವ ಭಾರತದ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭದ ಮಾತಲ್ಲ.
ಸಂಕಷ್ಟದ ಸಮಯದಲ್ಲಿ ಸರಕಾರದ ಜತೆ ನಿಲ್ಲದೇ ಇಲ್ಲ ಸಲ್ಲದ ರಾಜಕೀಯ ಮಾಡಿಕೊಂಡು ಮತ್ತಷ್ಟು ಸಮಸ್ಯೆ ಸೃಷ್ಟಿ ಮಾಡು ವುದರಲ್ಲಿ ಆಂತರಿಕ ಶತ್ರುಗಳು ನಿರತರಾಗಿದ್ದಾರೆ. ಇದು ಟೀಕಿಸುವ ಸಮಯವಲ್ಲವೆಂಬ ಸಾಮಾನ್ಯಜ್ಞಾನ ಇಲ್ಲದ ಹಲವು ಎಡ ಬಿಡಂಗಿಗಳು ದಿನ ಬೆಳಗಾದರೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಯಾವುದೇ ಒಂದು ವೈರಾಣುವಿನ ವಿರುದ್ಧ ಹೋರಾಡಬೇಕಾದರೆ ವೈದ್ಯರ ಕೃಪೆಯ ಜತೆಗೆ, ದೇವರ ಕೃಪೆಯು ಬೇಕೆಂಬುದನ್ನು ‘ಸನಾತನ ಹಿಂದೂ ಧರ್ಮ’ ಹೇಳಿಕೊಟ್ಟಿದೆ. ಸಣ್ಣದೊಂದು ಜ್ವರ ಬಂದರೂ ಸಹ ವೈದ್ಯರಿಂದ ಗುಳಿಗೆತೆಗೆದುಕೊಂಡ ಮೇಲೆ ದೇವರನ್ನು ಮನಸ್ಸಿನಲ್ಲಿ ನಮಸ್ಕರಿಸಿ ಬೇಡಿಕೊಳ್ಳುವ ಸಂಪ್ರದಾಯ ನಮ್ಮದು. ಸ್ವತಃ ವೈದ್ಯರುಗಳೇ ತಮ್ಮ ವೃತ್ತಿಯಲ್ಲಿ ದೇವ ರನ್ನು ನಂಬಿ ಪ್ರತಿಯೊಂದು ಕೆಲಸವನ್ನು ಮಾಡುತ್ತಾರೆ.
ಕರೋನಾ ಸಂಕಷ್ಟದ ಸಮಯದಲ್ಲಿ ಆಳುವ ದೊರೆಯೂ ಕೂಡ ದೇವರಮ್ಮೆ ಬೇಡಿಕೊಂಡು ತನ್ನ ದಿನವನ್ನು ಪ್ರಾರಂಭಿಸು ತ್ತಾನೆ. ಇಂಥ ಸಂದರ್ಭದಲ್ಲಿ ಭಗವಂತನ ವಾಸಸ್ಥಾನವಾಗಿರುವ ‘ಹಿಂದೂ’ ಮಠಗಳು ಕರೋನಾ ಪೀಡಿತರಿಗೆ ಸಹಾಯಹಸ್ತ ಚಾಚುವ ಮೂಲಕ ಮತ್ತೊಮ್ಮೆ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿತೋರಿಸಿವೆ. ‘ಅಕ್ಷರ ದಾಸೋಹ’ ‘ಅನ್ನ ದಾಸೋಹ’ ವೆಂದರೆ ಎಲ್ಲರಿಗೂ ನೆನಪಾಗುವುದು ‘ಸಿದ್ದಗಂಗಾ ಮಠ’, ಲಕ್ಷಾಂತರ ವಿದ್ಯಾರ್ಥಿಗಳಿಗೆ ಜಾತಿಭೇದವಿಲ್ಲದೆ ಏಳು ದಶಕಗಳಿಂದ ಅಕ್ಷರಜ್ಞಾನ ನೀಡುತ್ತಿರುವ ಮಠದ ಬಗ್ಗೆ ವಿಸ್ತಾರವಾಗಿ ಹೇಳಬೇಕಿಲ್ಲ.
ನಮ್ಮ ಸುತ್ತಮುತ್ತಲ ಸ್ನೇಹಿತರಲ್ಲಿ ಯಾರಾದರೂ ಒಬ್ಬರಾದರೂ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾರೆ. ಪ್ರತಿನಿತ್ಯ ಬರುವ ಸಾವಿರಾರು ಭಕ್ತಾದಿಗಳಿಗೆ ‘ಅನ್ನದಾಸೋಹ’ದ ಮೂಲಕ ಹೊಟ್ಟೆ ತುಂಬಿಸುವ ಕೆಲಸವನ್ನು ಮಠ ಮಾಡುತ್ತಾ ಬಂದಿದೆ. ಕರೋನಾ ಸಂಕಷ್ಟದ ಸಮಯದಲ್ಲಿಯೂ ಸಹ ನಿತ್ಯ ಸಾವಿರಾರು ರೋಗಿಗಳಿಗೆ ಮಠದಿಂದ ಅನ್ನದಾಸೋಹದ ವ್ಯವಸ್ಥೆಯಾಗು ತ್ತಿದೆ. ಕ್ಯಾತ್ಸಂದ್ರ ಬಳಿಯಿರುವ ಮಠದ ‘ಯಾತ್ರಿನಿವಾಸ’ವನ್ನು ‘ಕರೋನಾ ಆರೈಕೆ ಕೇಂದ್ರ’ವನ್ನಾಗಿ ಪರಿವರ್ತಿಸಿ ‘ಆರೈಕೆದಾಸೋಹ’ವನ್ನು ಮಾಡುವ ಮೂಲಕ ಸಿದ್ದಗಂಗಾ ಮಠ ಸಮಾಜಕ್ಕೆ ಮಾದರಿಯಾಗಿದೆ.
ಸಿದ್ದಲಿಂಗಸ್ವಾಮಿಗಳು ಸ್ವತಃ ತಾವೇ ಪ್ರತಿನಿತ್ಯ ಕರೋನಾ ಪೀಡಿತ ರೋಗಿಗಳ ಯೋಗಕ್ಷೇಮ ವಿಚಾರಿಸಿ, ಮಾನಸಿಕ ಸ್ಥೈರ್ಯ ತುಂಬುವ ಕಾಯಕದಲ್ಲಿ ನಿರತರಾಗಿದ್ದಾರೆ. ಕರೋನಾ ಪೀಡಿತರೆಂದರೆ ಸ್ವಂತ ಸಂಬಂಧಿಕರೇ ಭಯದಿಂದ ಹತ್ತು ಅಡಿ ದೂರ ದಲ್ಲಿ ನಿಲ್ಲುವ ಕಾಲದಲ್ಲಿ ಸಿದ್ದಲಿಂಗ ಸ್ವಾಮಿಗಳ ಪ್ರತಿನಿತ್ಯದ ಭೇಟಿ ಸೋಂಕಿತರ ಆತ್ಮವಿಶ್ವಾಸವನ್ನು ಹೆಚ್ಚುಸುವುದರಲ್ಲಿಯಾವುದೇ ಅನುಮಾನವಿಲ್ಲ. ಇದಲ್ಲದೆ ‘ಸಿದ್ದಗಂಗಾ ಆಸ್ಪತ್ರೆ’ಯಲ್ಲಿನ ಕರೋನಾ ಸೋಂಕಿತರ ಯೋಗಕ್ಷೇಮ ವಿಚಾರಿಸಲೂ ಸಹ ಸಿದ್ದಲಿಂಗ ಸ್ವಾಮಿಗಳು ಆಸ್ಪತ್ರೆಗೆ ನಿತ್ಯ ಭೇಟಿ ನೀಡುತ್ತಿರುತ್ತಾರೆ.
ತಮ್ಮ ಪ್ರತಿನಿತ್ಯದ ಪೂಜಾ ಕೈಂಕರ್ಯಗಳ ನಡುವೆಯೂ ಕರೋನಾ ಪೀಡಿತರ ನೆರವಿಗೆ ಧಾವಿಸಿ ಮಠದ ಮೇಲಿನ ಭಕ್ತಿಯನ್ನು ನೂರು ಪಟ್ಟು ಹೆಚ್ಚು ಮಾಡಿಸಿದ್ದಾರೆ. ಮಠದ ಆಶ್ರಯದಲ್ಲಿರುವ ಕರೋನಾ ಪೀಡಿತರು ‘ಚಿಕ್ಕ ಬುದ್ದಿ’ಯವರ ಆಶೀರ್ವಾದದಿಂದ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಬಹುಬೇಗ ಗುಣಮುಖರಾಗುತ್ತಿದ್ದಾರೆ.
‘ಶಿವಕುಮಾರ ಸ್ವಾಮೀಜಿ’ಯವರ ಹಾದಿ ಯಲ್ಲಿಯೇ ಸಮಾಜದ ಏಳಿಗೆಗೆ ಕರೋನಾ ಸಮಯದಲ್ಲಿ ಶ್ರಮಿಸುತ್ತಿರುವ ಸಿದ್ದಲಿಂಗ ಸ್ವಾಮಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ಬಸವಣ್ಣನವರ ‘ಕಾಯಕವೇ ಕೈಲಾಸ’ದ ತತ್ತ್ವವನ್ನು ‘ಸಿದ್ದಗಂಗಾ ಮಠ’ ಪ್ರತಿನಿತ್ಯ ವೂ ಸಮಾಜದಲ್ಲಿ ಅನುಷ್ಠಾನಗೊಳಿಸುತ್ತಲೇ ಇರುವುದಕ್ಕೆ ‘ಕರೋನಾ ಆರೈಕೆ ಕೇಂದ್ರ’ವೇ ಸಾಕ್ಷಿ. ‘ಅಕ್ಷರ’ ಹಾಗೂ ‘ವೈದ್ಯಕೀಯ’ ವೆಂದರೆ ನೆನಪಾಗುವ ಮತ್ತೊಂದು ಮಠವೆಂದರೆ ‘ಅದಿಚುಂಚನಗಿರಿ’ಯ ಶ್ರೀಬಾಲಗಂಗಾಧರನಾಥ ಸ್ವಾಮಿಜಿ ಮಠ. ಹಲವು ದಶಕಗಳಿಂದ ಸಂಕಷ್ಟದ ಸಂದರ್ಭದಲ್ಲಿ ಸಮಾಜದ ಜೊತೆಗೆ ನಿಂತಿರುವ ಮತ್ತೊಂದು ಮಠವಿದು.
‘ಶ್ರೀಬಾಲಗಂಗಾಧರನಾಥ ಸ್ವಾಮೀಜಿ’ಯವರ ನೇತೃತ್ವದಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಜನಮಾನಸದಲ್ಲಿ ಮನೆ ಮಾತಾಗಿರುವ ಮಠವಿದು. ಕರೋನಾ ಪೀಡಿತರಿಗೆ ನೆರವಾಗಲೆಂದು ‘ಆದಿಚುಂಚನಗಿರಿ’ ಮಠವು ಹಲವು ಸಮಾಜಮುಖಿ ಕಾರ್ಯ ಗಳನ್ನು ಮಾಡಿದೆ. ಮಠದ ‘ವಿಜಯನಗರ’ದ ಆಯುರ್ವೇದಿಕ್ ಕಾಲೇಜಿನಲ್ಲಿ100ಹಾಸಿಗೆಗಳ ಸುಸಜ್ಜಿತ ಕೇರ್ ಸೆಂಟರ್ ಸ್ಥಾಪಿಸುವ ಮೂಲಕ ಮಠವು ಕರೋನಾ ಪೀಡಿತರ ನೆರವಿಗೆ ನಿಂತಿದೆ.
ಸೋಂಕಿತರಿಗೆ ಸಮಯ ಕಳೆಯಲು ಪ್ರತಿ ಕೊಠಡಿಯಲ್ಲೂ ಟಿ.ವಿ. ವ್ಯವಸ್ಥೆಯನ್ನು ಮಾಡಿದ್ದಾರೆ. 24 ಘಂಟೆಗಳ ಕಾಲ ತಜ್ಞ ವೈದ್ಯರ ತಂಡವು ಸೋಂಕಿತರ ಆರೈಕೆಯನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಕರೋನಾ ಪೀಡಿತರಿಗೆ ಕೇಂದ್ರದಲ್ಲಿ ಸಿಗುವ ಪ್ರತಿಯೊಂದು ಸೇವೆಯೂ ಉಚಿತ. ಬಾಲಗಂಗಾಧರನಾಥ ಸ್ವಾಮೀಜಿಯವರ ನಿಧನದ ನಂತರ, ನಿರ್ಮಲಾನಂದ ಶ್ರೀಗಳು ತಮ್ಮ ಗುರುವಿನ ಹಾದಿಯ ನಡೆಯುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ.
ಮಂಡ್ಯದ ಮಿಮ್ಸ ಆಸ್ಪತ್ರೆಯ ರೋಗಿಗಳಿಗೆ ಮಠದ ವತಿಯಿಂದ ಹಣ್ಣು ಹಂಪಲುಗಳನ್ನು ನೀಡಲಾಗಿತ್ತು. ಶಿವಮೊಗ್ಗದ ‘ಆದಿಚುಂಚನಗಿರಿ’ ಶಾಖೆಯ ಸಮುದಾಯ ಭವನವನ್ನು ಮತ್ತೊಂದು ಕರೋನಾ ಆರೈಕೆ ಕೇಂದ್ರವನ್ನಾಗಿಸುವ ಮೂಲಕ ಮಠದ ಸೇವೆ ಕೇವಲ ಒಂದೆರಡು ಜಿಗೆ ಮಾತ್ರ ಸೀಮಿತವಾಗದಂತೆ ನೋಡಿಕೊಂಡಿzರೆ. ಅಷ್ಟೇ ಅಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಕರೋನಾ ಸೋಂಕಿತರನ್ನು ಆರೈಕೆ ಕೇಂದ್ರಗಳಿಗೆ ಕರೆತರಲು ಮಠದ ವತಿಯಿಂದ ವಾಹನಗಳ ವ್ಯವಸ್ಥೆಯನ್ನೂ ಸಹ ಮಾಡಿ ದ್ದಾರೆ.
ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಲೆಯನ್ನು ಕರೋನಾ ಆರೈಕೆ ಕೇಂದ್ರವನ್ನಾಗಿ ಮಾಡಿದ್ದಾರೆ. ಕಳೆದ ವಾರ ನಿರ್ಮಲಾ ನಂದ ಶ್ರೀಗಳು ಮತ್ತೊಂದು ಮಹತ್ವದ ಸಾಮಾಜಿಕ ಕಾರ್ಯವೊಂದನ್ನು ಘೋಷಿಸಿದರು. ಕರೋನಾ ಮಹಾಮಾರಿಯಿಂದ ಹಲವು ಮಕ್ಕಳು ಸಣ್ಣ ವಯಸಿನಲ್ಲಿ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇಂಥ ಮಕ್ಕಳು ಊಟ, ವಸತಿ, ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ಇಂಥ ಮಕ್ಕಳ ಆರೈಕೆಯ ಸಲುವಾಗಿ ಮಠದ ವತಿಯಿಂದ ಮಕ್ಕಳ ಸಂಪೂರ್ಣವಿದ್ಯಾಭ್ಯಾಸದ ಜವಾಬ್ದಾರಿಯನ್ನು ನೋಡಿಕೊಳ್ಳುವುದಾಗಿ ಸ್ವಾಮಿಗಳು ಘೋಷಿಸಿದ್ದಾರೆ.
ಹಲವು ದಶಕಗಳಿಂದ ಆದಿಚುಂಚನಗಿರಿ ಮಠದಲ್ಲಿ ನಡೆಸಿಕೊಂಡು ಬಂದಂಥ ಸಮಾಜಮುಖಿ ಕಾರ್ಯಗಳನ್ನು ಕರೋನಾ ಸಂಕಷ್ಟದ ಸಮಯದಲ್ಲಿಯೂ ನಡೆಸಿಕೊಂಡು ಬಂದ ಕೀರ್ತಿ ನಿರ್ಮಲಾನಂದ ಶ್ರೀಗಳಿಗೆ ಸಲ್ಲುತ್ತದೆ. ದಾಸೋಹಕ್ಕೆ ಹೆಸರಾಗಿ ರುವ ಮತ್ತೊಂದು ಮಠವೆಂದರೆ ಕೊಪ್ಪಳದ ‘ಗವಿ ಮಠ’, ಕೊಪ್ಪಳದ ಸುತ್ತಮುತ್ತ ಕರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಮಠದ ವತಿಯಿಂದ ‘ಕರೋನಾ ಆಸ್ಪತ್ರೆ’ಯನ್ನು ಸ್ಥಾಪಿಸಲಾಗಿದೆ.
ಶ್ರೀಗವಿಸಿದ್ದೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಸುಮಾರು 100ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರ ಜತೆಗೆ ಗವಿಸಿದ್ದೇಶ್ವರ ಮಹಿಳಾ ವಸತಿ ಸಮುಚ್ಛಯವನ್ನು ‘ಕರೋನಾ ಆರೈಕೆ ಕೇಂದ್ರ’ವನ್ನಾಗಿ ಮಾಡಲಾಗಿದೆ. ಪ್ರತಿನಿತ್ಯ ಕರೋನಾ ಪೀಡಿತರಿಗೆ ಬೇಕಿರುವ ಚಿಕಿತ್ಸೆಯನ್ನು ಉಚಿತವಾಗಿ ಗವಿಮಠವು ನೀಡುತ್ತಿದೆ.
ಕರೋನಾ ಪೀಡಿತರಿಗೆ ರುಚಿಯಾದ, ಶುಚಿಯಾದ, ಆರೋಗ್ಯವಾದ ಊಟ ನೀಡುವ ಸಲುವಾಗಿ ಮಠದ ದಾಸೋಹ ಸಿಬ್ಬಂದಿ ಬೆಳಗಿನಿಂದ ರಾತ್ರಿಯವರೆಗೂ ದುಡಿಯುತ್ತಿದ್ದಾರೆ. ಮಠದ ವೃದ್ಧಾಶ್ರಮವನ್ನೂ ಸಹ ಇತ್ತೀಚಿಗೆ ‘ಕರೋನಾ ಆರೈಕೆ ಕೇಂದ್ರ’ ವನ್ನಾಗಿ ಮಾರ್ಪಾಡು ಮಾಡಲಾಗಿದೆ. ಪ್ರತಿನಿತ್ಯ ಗವಿಮಠದ ಸ್ವಾಮಿಗಳು ಕೋವಿಡ್ ಸೋಂಕಿತರ ಬಳಿ ಮಾತನಾಡಿ ಯೋಗ ಕ್ಷೇಮ ವಿಚಾರಿಸುವ ಮೂಲಕ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.
ಗವಿಮಠದ ಆರೈಕೆ ಕೇಂದ್ರಗಳಲ್ಲಿ ಕರೋನಾ ಸೋಂಕಿತರು ವಾಲಿಬಾಲ, ಕೇರಂನಂಥ ಆಟಗಳನ್ನಾಡುವ ಮೂಲಕ ತಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಮಠದ ಆರೈಕೆ ಕೇಂದ್ರದಲ್ಲಿನ ವೈದ್ಯರು ಕರೋನಾ ಪೀಡಿತರನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆಂದು ಗುಣಮುಖವಾಗಿ ಬಂದಂಥ ಸೋಂಕಿತರು ಹೇಳುತ್ತಿದ್ದಾರೆ.
ಆರು ಶತಮಾನಗಳ ಇತಿಹಾಸವಿರುವ ಗವಿಮಠವು ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಕರೋನಾ ಸಂಕಷ್ಟದ ಸಮಯ ದಲ್ಲಿ ಸಮಾಜದ ಪರವಾಗಿ ನಿಂತಿರುವುದು, ಮಠವೊಂದು ಎಷ್ಟೇ ಶತಮಾನಗಳು ಕಳೆದರೂ ಸಹ ತನ್ನ ಸಾಮಾಜಿಕ ಜವಾಬ್ದಾರಿ ಯನ್ನು ಮರೆಯುವುದಿಲ್ಲವೆಂಬುದಕ್ಕೆ ಸಾಕ್ಷಿಯಾಗಿದೆ. ಶ್ವಾಸಗುರುಗಳಾದ ಹರಿಹರದ ಪಂಚಮಸಾಲಿ ಪೀಠದ ‘ಶ್ರೀವಚನಾನಂದ ಸ್ವಾಮಿ’ಗಳು ಕರೋನಾ ಸಮಯದಲ್ಲಿ ಸೋಂಕಿತರು ಮನೆಯಲ್ಲಿ ಕುಳಿತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದಂಥ ಆರೋಗ್ಯ ಕ್ರಮಗಳ ಬಗ್ಗೆ ಜಾಗೃತಿಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಕರೋನಾ ಸೋಂಕಿತರು ತಮ್ಮ ಶ್ವಾಸಕೋಶದ ಬಗ್ಗೆ ಹೆಚ್ಚು ಗಮನಹರಿಸಬೇಕಿರುವ ಕಾರಣ ಪ್ರಾಣಾಯಾಮ ಹಾಗೂ ಉಸಿರಾಟದ ಹಲವು ಯೋಗಕ್ರಿಯೆಗಳನ್ನು ದಿನನಿತ್ಯ ಮಾಡಬೇಕಿದೆ, ಶ್ರೀವಚನಾನಂದ ಸ್ವಾಮಿಗಳು ಜನರಲ್ಲಿ ಇದರ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕೆಲಸವನ್ನು ಸಾಮಾಜಿಕ ಜಾಲತಾಣಗಳು ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಮಾಡುತ್ತಿದ್ದಾರೆ.
ಬಳ್ಳಾರಿ ಜಿಯ ಹಗರಿಬೊಮ್ಮನಹಳ್ಳಿಯ ‘ಪಂಚಮಸಾಲಿ ಭವನ’ವನ್ನು ಕರೋನಾ ಆರೈಕೆ ಕೇಂದ್ರವನ್ನಾಗಿಸಿ, ಸುಮಾರು 40ಹಾಸಿಗೆಗಳ ವ್ಯವಸ್ಥೆಯನ್ನು ಕರೋನಾ ಸೋಂಕಿತರಿಗೆಂದು ಮೀಸಲಿಡಲಾಗಿದೆ. ಕನ್ನಡದ ಮಾಧ್ಯಮವೊಂದು ‘ಕರೋನಾ ಅಳಿಸಿ ಹಳ್ಳಿಗಳನ್ನು ಉಳಿಸಿ’ ಅಭಿಯಾನವನ್ನು ಹಮ್ಮಿಕೊಂಡಿತ್ತು, ಈ ಅಭಿಯಾನದ ರಾಯಭಾರಿಯಾಗಿ ಮಾಧ್ಯಮದ ಜೊತೆ ಕೈ ಜೋಡಿಸಿರುವ ಶ್ರೀಗಳು ಹಳ್ಳಿಗಳಿಗೆ ಸ್ವತಃ ತಾವೇ ತೆರಳಿ ಜನರಲ್ಲಿ ಕರೋನ ಬಗ್ಗೆ ಇರುವ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಈ ಅಭಿಯಾನದ ಮತ್ತೊಂದು ಭಾಗವಾಗಿ ಹಳ್ಳಿಗಳಿಗೆ ‘ಸ್ಯಾನಿಟೈಜರ್’ ಸಿಂಪಡಣೆ ಮಾಡುವ ಕೆಲಸವನ್ನು ಹಮ್ಮಿಕೊಳ್ಳಲಾಗಿತ್ತು, ಶ್ರೀಗಳು ಕೆಲವು ಹಳ್ಳಿಗಳಿಗೆ ತೆರಳಿ ತಾವೇ ಹಳ್ಳಿಗಳಿಗೆ ‘ಸ್ಯಾನಿಟೈಜರ್’ ಸಿಂಪಡಣೆ ಮಾಡಿದ್ದಾರೆ.  ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಚನಾನಂದ ಶ್ರೀಗಳು ಕರೋನಾ ಸಂಕಷ್ಟದ ಸಮಯದಲ್ಲಿ ಸಮಾಜದ ಜತೆಗೆ ನಿಂತಿರು ವುದು ನಿಜಕ್ಕೂ ಶ್ಲಾಘನೀಯವಾದ ವಿಚಾರ. ಇವರೆಲ್ಲರ ಜತೆಗೆ ಈ ಕಷ್ಟದ ಸಮಯದಲ್ಲಿ ಕರ್ನಾಟಕದ ಇನ್ನೂ ಹಲವು ಮಠಗಳು ತಮ್ಮ ಸಾಮಾಜಿಕ ಕಳಕಳಿಯನ್ನು ನಿರೂಪಿಸಿವೆ.
ಹಲವು ಮಠಗಳು ತಮ್ಮ ಯಾತ್ರಿ ನಿವಾಸಗಳನ್ನು ಕರೋನಾ ಆರೈಕೆ ಕೇಂದ್ರವನ್ನಾಗಿಸಿವೆ, ಹಲವು ಮಠಗಳು ಕರೋನಾಸೋಂಕಿತರಿಗೆ ಬೇಕಿರುವ ಊಟದ ವ್ಯವಸ್ಥೆಯನ್ನು ಮಾಡಿವೆ, ಹಲವು ಮಠಗಳು ಕರೋನಾ ಸೋಂಕಿತರಿಗೆ ಬೇಕಿರುವ ಔಷಧಿಗಳ ವ್ಯವಸ್ಥೆಯನ್ನು ಮಾಡಿವೆ, ಕರೋನಾ ಸೋಂಕಿತರಿಗೆ ಅತಿಮುಖ್ಯವಾಗಿ ಬೇಕಿರುವ ಆತ್ಮ ಸ್ಥೈರ್ಯವನ್ನು ತುಂಬುವ ಕೆಲಸವನ್ನು ಹಲವು ಮಠಗಳು ಮಾಡಿವೆ.
ಪ್ರತಿಯೊಂದು ಮಠಗಳು ಮಾಡಿರುವ ಸಾಮಾಜಿಕ ಕಾರ್ಯವನ್ನು ಕೇವಲ ಒಂದೇ ಒಂದು ಅಂಕಣದಲ್ಲಿ ವಿವರಿಸಲು ಸಾಧ್ಯ ವಿಲ್ಲದ ಕಾರಣ, ಎಲ್ಲವನ್ನು ಒಮ್ಮೆಲೇ ಬರೆಯಲು ಸಾಧ್ಯವಾಗುತ್ತಿಲ್ಲ. ಮಠಗಳಿಗೆ ರಾಜ್ಯ ಸರಕಾರವು ಪ್ರತಿವರ್ಷದ ಆಯವ್ಯಯ ದಲ್ಲಿ ಒಂದಷ್ಟು ಹಣವನ್ನು ಮೀಸಲಿಡುತ್ತ ಬಂದಿದೆ. ಮಠಗಳಿಗೆ ಮೀಸಲಿಟ್ಟ ಹಣದಲ್ಲಿ ಕೆಲವು ಮಠಗಳು ತಮ್ಮಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದವು. ಇಂದು ಮಠಗಳು ಅಭಿವೃದ್ಧಿಪಡಿಸಿದ ಮೂಲಸೌಕರ್ಯಗಳನ್ನೇ ಕರೋನಾ ಸಂಕಷ್ಟದ ಸಮಯದಲ್ಲಿ ಸಮಾಜದ ಒಳಿತಿಗಾಗಿ ಬಳಸಲಾಗುತ್ತಿರುವುದು ಖುಷಿಯ ವಿಷಯ.
ಹಲವು ಮಂದಿ ಮಠಗಳಿಗೆ ಸರಕಾರವು ಹಣ ಸಹಾಯ ಮಾಡಿದಾಗ ವಿರೋಧಿಸಿದ್ದರು, ಇಂದು ಅದೇ ಮಠಗಳು ಕರೋನಾ ಸೋಂಕಿತರ ಪರವಾಗಿ ನಿಲ್ಲುವ ಮೂಲಕ ವಿರೋಧಿಗಳಿಗೆ ಸರಿಯಾದ ಉತ್ತರವನ್ನು ನೀಡಿವೆ. ಹಲವು ವರ್ಷಗಳಿಂದ ‘ಕ್ರಿಶ್ಚಿಯನ್’ ಹಾಗೂ ‘ಮುಸಲ್ಮಾನ್’ ಸಮುದಾಯಕ್ಕೆ ನೂರಾರು ಕೋಟಿಯಷ್ಟು ಹಣವನ್ನು ಸರಕಾರಗಳು ನೀಡುತ್ತಾ ಬಂದಿವೆ, ಅವರಿಗೆಇಲ್ಲದ ವಿರೋಧವನ್ನು ಮಠಗಳಿಗೆ ನೀಡುವ ಅನುದಾನದ ವಿಚಾರದಲ್ಲಿ ಮಾತ್ರ ಬುದ್ಧಿಜೀವಿಗಳು ತೋರಿಸುತ್ತಾರೆ.
ಮುಸಲ್ಮಾನರಿಗೆ ‘ಹಜ್’ ಯಾತ್ರೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರಕಾರಗಳು ಕೋಟ್ಯಂತರ ರುಪಾಯಿ ಹಣವನ್ನು ಪ್ರತಿ ವರ್ಷವೂ ನೀಡುತ್ತಾ ಬಂದಿವೆ. ಈ ವರ್ಷದ ಆಯವ್ಯಯದಲ್ಲಿ 200 ಕೋಟಿಯಷ್ಟು ಹಣವನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮೀಸಲಿಡಲಾಗಿದೆ. ಮಠಗಳು ತಮ್ಮಲ್ಲಿನ ಮೂಲಭೂತ ಸೌಕರ್ಯಗಳನ್ನು ಕರೋನಾ ಸೋಂಕಿತರಿಗೆ ನೀಡಿದ ಮಟ್ಟದಲ್ಲಿ ‘ಮಸೀದಿಗಳು’ ಹಾಗೂ ‘ಚರ್ಚು’ಗಳು ನೀಡಿರುವುದು ಹೆಚ್ಚಾಗಿ ಕಂಡುಬಂದಿಲ್ಲ.
ಅಲ್ಲಿ ಇಲ್ಲಿ ಒಂದಷ್ಟು ಮಸೀದಿಗಳಿಗೆ ಸೇರಿದ ಭವನಗಳನ್ನು ‘ಕರೋನಾ ಆರೈಕೆ ಕೇಂದ್ರ’ ಗಳನ್ನಾಗಿ ಪರಿವರ್ತಿಸಿದ್ದನ್ನು ಬಿಟ್ಟರೆ ಹೆಚ್ಚಿನ ಸ್ಥಳಗಳನ್ನು ನೀಡಿರುವುದು ಕಂಡುಬಂದಿಲ್ಲ. ಕರ್ನಾಟಕದಲ್ಲಿ ಬಹುಷ್ಯ ಕ್ರಿಶ್ಚಿಯನ್ ಮಿಷನರಿಗಳು ಹೊಂದಿರುವಷ್ಟು ಸ್ಥಿರಾಸ್ತಿಯನ್ನು ಹಿಂದೂ ಮಠಗಳು ಹೊಂದಿಲ್ಲ. ರಾಜ್ಯದ ಮೂಲೆ ಮೂಲೆಗಳಲ್ಲಿ ಮಿಷನರಿಗಳ ‘ಚರ್ಚ್‌ಗಳನ್ನು ಕಾಣಬಹುದು, ಎಕರೆ ಗಟ್ಟಲೆ ಭೂಮಿಯನ್ನು ಬೆಂಗಳೂರಿನ ಹೃದಯಭಾಗದಲ್ಲಿ ‘ಚರ್ಚ್’ ಗಳು ಹೊಂದಿವೆ. ಈ ಮಿಷನರಿಗಳು ತಮ್ಮಲ್ಲಿರುವಜಾಗವನ್ನು ‘ಕರೋನಾ ಆರೈಕೆ ಕೇಂದ್ರ’ ವನ್ನಾಗಿ ಪರಿವರ್ತಿಸಿದರೆ ಬಹುಷ್ಯ ರಾಜ್ಯದಲ್ಲಿ ಈ ಮಟ್ಟದ ಹಾಸಿಗೆಯ ಕೊರತೆ ಕಾಣುತ್ತಿರಲಿಲ್ಲವೇನೋ.
ಕೇವಲ ಮತಾಂತರಕ್ಕಾಗಿ ಬಡವರ ಮನೆ ಮನೆಗಳಿಗೆ ತೆರಳುವ ಕ್ರಿಶ್ಚಿಯನ್ ಮಿಷನರಿಗಳು ಕರೋನಾ ಸಂಕಷ್ಟದ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಸೋಂಕಿತರ ಅರೋಗ್ಯ ವಿಚಾರಿಸುವ ಕೆಲಸ ಮಾಡಬಹುದಿತ್ತು, ಆದರೆ ನನ್ನ ಕಣ್ಣಿಗೆ ಮಾತ್ರ ಆ ರೀತಿಯ ಒಂದೇ ಒಂದು ಘಟನೆಯು ಕಾಣಲಿಲ್ಲ. ಏನೇ ವ್ಯಾದಿ ಇದ್ದರೂ ಸರಿ ‘ಯೇಸು ಕ್ರಿಸ್ತ’ ಸರಿ ಮಾಡುತ್ತೇನೆಂದು ಹೇಳಿ ಚರ್ಚುಗಳಲ್ಲಿ ಕುಣಿಯುತ್ತಿದ್ದಂಥ ಪಾದ್ರಿಗಳು ಯಾರ ಕಣ್ಣಿಗೂ ಕಾಣದಂತೆ ಒಳಗೆ ಕುಳಿತ್ತಿದ್ದಾರೆ.
ಕಳೆದ ವರ್ಷ ಕರೋನಾ ಸಂದರ್ಭದಲ್ಲಿ ಕ್ರಿಶ್ಚಿಯನ್ನರ ಪವಿತ್ರ ಸ್ಥಳ ‘ವ್ಯಾಟಿಕನ್’ನಲ್ಲಿ ಒಂದು ಘಟನೆ ನಡೆದಿತ್ತು, ಸುಮಾರು80ವರ್ಷದ ಮಹಿಳೆಯೊಬ್ಬರು ಕರೋನಾದಿಂದ ಬಳಲುತ್ತಿದ್ದಂಥ ಸಂದರ್ಭದಲ್ಲಿ ವಯಸ್ಸಾದವರಿಗೆ ಚಿಕಿತ್ಸೆ ನೀಡಲಾಗುವು ದಿಲ್ಲವೆಂದು ಅಲ್ಲಿನ ಮಿಷನರಿ ಹೇಳಿತ್ತು. ಯೇಸುವು ವಯಸ್ಸಾದವರಿಗೆ ಚಿಕಿತ್ಸೆ ನೀಡಲಾಗುವುದಿಲ್ಲವೆಂದು ಎಂದರೂ ಹೇಳಿದ್ದಾ ನೆಯೇ? ಇಂಥ ಮತಾಂಧರ ಬಲೆಗೆ ಸಿಕ್ಕಿ ಹಲವು ಹಿಂದೂಗಳು ಇಂದು ಮತಾಂತರವಾಗಿದ್ದಾರೆ. ನಮ್ಮ ಮಠಗಳು ಎಂದೂ ಸಹ ಹಾಗೆ ಹೇಳುವುದಿಲ್ಲ, ವಯಸ್ಸಿನ ತಾರತಮ್ಯ ಮಾಡದೆ ಎಲ್ಲರಿಗೂ ಅನುಕೂಲಕರವಾಗುವ ರೀತಿಯಲ್ಲಿ ಕರೋನಾ ಸೋಂಕಿತರ ಪರವಾಗಿ ನಿಂತಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಯಸ್ಸಾದವರಿಗೆ ಮತ್ತಷ್ಟು ಹೆಚ್ಚಿನ ಆರೈಕೆ ನೀಡುವಲ್ಲಿ ನಮ್ಮ ಮಠಗಳು ನಿರತವಾಗಿವೆ.
ಒಂದಂತೂ ಸತ್ಯ ಕರ್ನಾಟಕದ ಮಠಗಳು ಕರೋನಾ ಸಂಕಷ್ಟದ ಸಮಯದಲ್ಲಿ ಸೋಂಕಿತರ ಪರವಾಗಿ ಕಾಯ, ವಾಚಾ,ಮನಸಾ ನಿಲ್ಲುವ ಮೂಲಕ ಸಮಾಜಕ್ಕೆ ಮಾದರಿಯಾಗಿವೆ.