ಮೊದಲ ಕೋವಿಡ್ ಲಸಿಕೆಯ ಹಿಂದಿದೆ ವ್ಯಥೆ, ರೋಚಕತೆ !
ಡಾ.ಶ್ರೀಕಾಂತ್ ಭಟ್ ವಿಜ್ಞಾನಿ, ಜರ್ಮನಿ
ಕೋವಿಡ್ ಮಹಾಮಾರಿಗೆ ಹೆದರಿ ಜಗತ್ತಿನ ಹಲವು ದೇಶಗಳು ಲಾಕ್‌ಡೌನ್ ಘೋಷಿಸುವ ಮುನ್ನ ಜಾಗತಿಕವಾಗಿ ಲಸಿಕೆ ತಯಾರಿಕೆ ಸಿದ್ಧತೆ ನಡೆಸಿದ್ದ ವಿಜ್ಞಾನಿಗಳ ರೋಚಕ ಕಥೆ ಬಗ್ಗೆ ವಿಶ್ವವಾಣಿಗಾಗಿ ಬರೆದ ವಿಶೇಷ ಲೇಖನ.
ಮೊನ್ನೆ ಯುರೋಪಿಯನ್ ಯೂನಿಯನ್ ರಿಸರ್ಚ್ ಕೌನ್ಸಿಲ್‌ನ ಸಭೆ ನಡೆದಿತ್ತು. ಕೋವಿಡ್ ಮಹಾಮಾರಿಗೆ ಜಗತ್ತಿನ ಮೊಟ್ಟಮೊದಲ ಲಸಿಕೆಯನ್ನು ಕಂಡುಹಿಡಿದು, ಅಭಿವೃದ್ಧಿಪಡಿಸಿ ಅದ್ಭುತ ಯಶಸ್ಸಿನಿಂದ ಮಾರುಕಟ್ಟೆಗೆ ತಂದ ಜರ್ಮನಿಯ ವಿಜ್ಞಾನಿ ಡಾ. ಉಗುರ್ ಸಹಿನ್ ಮಾತನಾಡುತ್ತಿದ್ದರು.
ಟೈಫಾಯಿಡ್ ಜ್ವರಕ್ಕೆ ಲಸಿಕೆ ಬರಲು ಸರಿ ಸುಮಾರು ನೂರು ವರ್ಷ, ಪೋಲಿಯೋ ಕಾಯಿಲೆಗೆ ಲಸಿಕೆ ಬರಲು ಸುಮಾರುಐವತ್ತು ವರ್ಷ, ಎಂಬತ್ತರ ದಶಕದ ಎಬೋಲಾ ಕಾಯಿಲೆಗೂ ಲಸಿಕೆ ಬರಲು ಸುಮಾರು ಮೂವತ್ತು ವರ್ಷ ಬೇಕಾಯಿತು. ಈ ಎಲ್ಲ ವೈರಾಣು ರೋಗಗಳಲ್ಲಿಯೇ ಅತಿ ಕಡಿಮೆ ಅವಧಿಯಲ್ಲಿ ಮಾರುಕಟ್ಟೆಗೆ ಲಸಿಕೆ ಬಂದದ್ದು ದಡಾರ ಕಾಯಿಲೆಗೆ; ಅದಕ್ಕೂ ಸುಮಾರು ನಾಲ್ಕು ವರ್ಷ ಮೂರು ತಿಂಗಳು ಅವಧಿ ಬೇಕಾಯಿತು. ಇವಕ್ಕೆ ಹೋಲಿಸಿದರೆ ಕೋವಿಡ್‌ಗೆ ಲಸಿಕೆಯನ್ನು ನಾವುಕೇವಲ ಹತ್ತು ತಿಂಗಳಿನಲ್ಲಿ ಮಾರುಕಟ್ಟೆಗೆ ತಂದಿದ್ದೇವೆ.
ನನ್ನ ದೃಷ್ಟಿಯಲ್ಲಿ ಇದು ಬೆಳಕಿನ ವೇಗದಲ್ಲಿ ಬಂದ ಲಸಿಕೆ. ಅದೂ ಈ ಲಸಿಕೆ ನೂತನ ಆವಿಷ್ಕಾರಗಳ ಸರಪಣಿಯಿಂದ ಹೊರ ಬಂದಿದೆ. ಇಂತಹ ಒಂದು ತಂತ್ರಜ್ಞಾನದ ಲಸಿಕೆ ಮಾರುಕಟ್ಟೆಗೆ ಬರುತ್ತಿರುವುದು ಇದೇ ಮೊದಲು ಎಂದು ವಿವರವಾಗಿ ವಿಶ್ಲೇಷಿಸುತ್ತಿದ್ದರು. ನೆರೆದಿದ್ದ ಹಲವಾರು ಪ್ರಮುಖ ದೇಶಗಳ ವೈಜ್ಞಾನಿಕ ಸಲಹೆಗಾರರು, ಅನೇಕ ವೈರಾಣು ತಜ್ಞರು ಹಾಗೂ ಹತ್ತು ಹಲವು ಕ್ಷೇತ್ರಗಳ ವಿಜ್ಞಾನಿಗಳು ಸಭೆಯಲ್ಲಿ, ಒಬ್ಬರೂ ಡಾ.ಸಾಹಿನ್ ಅವರ ಮಾತನ್ನು ಅಲ್ಲಗಳೆಯಲಿಲ್ಲ. ಇಂದುಲಸಿಕೆಯ ಅಭಾವ ಎಲ್ಲರನ್ನೂ ಕಾಡುತ್ತಿರುವಾಗ, ಹೊಸ ತಂತ್ರಜ್ಞಾನದಿಂದ ಲಸಿಕೆ ಬಂದ ಹಾದಿಯನ್ನು ಒಮ್ಮೆ ಹೇಳಬೇಕು ಅನ್ನಿಸಿತು.
ಇಂದು ಜೀವ ರಕ್ಷಕ ದ್ರವ ಎಂದು ಕರೆಯಿಸಿಕೊಳ್ಳುವ ಲಸಿಕೆಗಳು ಸಂಜೀವಿನಿಯೇ ಸರಿ. ಆದರೆ ಹೊಸ ಆವಿಷ್ಕಾರದ ಆಲೋಚನೆ ಅದಕ್ಕೂ ಮುನ್ನ ಎಷ್ಟೋ ವಿಜ್ಞಾನಿಗಳ ವಿಚಾರಕ್ಕೆ ಧಾರೆಯಾಗಿ, ಆಸೆಗಳಿಗೆ ತಣ್ಣೀರಾಗಿ, ಮತ್ತೊಂದು ದಿನ ಜೀವನದ ಗುರಿಯಾಗಿ ಪ್ರಚೋದಿಸಿರುತ್ತದೆ. ಅದೆಲ್ಲವನ್ನೂ ಅರಹುವ ಮೊದಲು ವೈರಾಣು ಲಸಿಕೆಗಳ ಬಗ್ಗೆ ಸ್ವಲ್ಪ ಹೇಳುತ್ತೇನೆ. ನಿಮಗೂ ಅದಾಗಲೇ ತಿಳಿದಿರಬಹುದು. ಲಸಿಕೆಗಳಲ್ಲಿ ಮೂಲತಃ ಇರುವುದು ಅದೇ ವೈರಾಣುವಿನ ತುಂಡು ಭಾಗಗಳು ಅಥವಾ ನಿಷ್ಕ್ರಿಯ ಗೊಂಡ ವೈರಾಣುಗಳು.
ಅವು ನಮ್ಮ ದೇಹ ಸೇರಿದಾಗ ರೋಗ ನಿರೋಧಕ ಅಂಶಗಳ ಜತೆ ಸಖ್ಯ ಬೆಳೆಸಿ, ನಮ್ಮ ಶರೀರದಲ್ಲಿ ಹೊಸ ನಿರೋಧಕ ಗುಣ ಗಳನ್ನು ಸಿದ್ಧಗೊಳಿಸುತ್ತವೆ. ಮುಂದೊಮ್ಮೆ ಸಕ್ರಿಯವಾದ ವೈರಾಣುವೇ ನಮ್ಮ ಶರೀರಕ್ಕೆ ದಾಳಿ ಇಟ್ಟಾಗ ಆಗಬಹುದಾದಅನಾಹುತವನ್ನು ತಪ್ಪಿಸುತ್ತದೆ. ಈ ತಂತ್ರಜ್ಞಾನವನ್ನೇ ಅನುಸರಿಸಿ ಬಹುತೇಕ ಲಸಿಕೆಗಳು ತಮ್ಮ ಕೆಲಸ ನಿರ್ವಹಿಸುತ್ತವೆ. ಇದಕ್ಕೆ ’ವೆಕ್ಟರ್ ಮೆಡಿಸಿನ್ ತಂತ್ರeನ’ ಎನ್ನುತ್ತಾರೆ. ಭಾರತದಲ್ಲಿ ಲಭ್ಯವಿರುವ ಕೋವ್ಯಾಕ್ಸೀನ್ ಮತ್ತು ಕೋವಿಶೀಲ್ಡ್ ಲಸಿಕೆಗಳಲ್ಲಿ,ಇಂತಹುದೇ ತಂತ್ರಜ್ಞಾನ ಬಳಕೆಯಾಗಿದೆ.
ಆದರೆ ಕೋವಿಡ್‌ಗೆ ಲಸಿಕೆಯ ಅನಿವಾರ್ಯತೆ ಮತ್ತು ಅವಸರ ಇನ್ನೊಂದು ಹೊಸ ರೀತಿಯ ತಂತ್ರಜ್ಞಾನದ ಉಗಮಕ್ಕೆ ಮುನ್ನುಡಿ ಬರೆಯಿತು. ಇಲ್ಲಿಯ ಭಲೇ ಚಾಲಾಕಿಯಾದ ಮಾರ್ಗ ಅಂದರೆ ತಪ್ಪಾಗಲಾರದು. ಇಲ್ಲಿ ಅನುವಂಶಿಕ ಮಾಹಿತಿಯ () ಒಂದು ಭಾಗವನ್ನು ಜೀವಕೋಶಗಳಿಗೆ ಸಂದೇಶವಾಹಕವಾಗಿ ಬಳಸಿಕೊಳ್ಳಲಾಗುತ್ತದೆ.
ವೈರಾಣುವಿಗೆ ತಕ್ಕದಾದ ಸಂದೇಶವಾಹಕಗಳನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿ, ಲಸಿಕೆಯ ರೂಪದಲ್ಲಿ ನೀಡಲಾಗುತ್ತದೆ. ಇವು ಪ್ರತಿ ಜೀವಕೋಶಗಳಿಗೂ, ಹೊಸ ವೈರಾಣುವಿನ ಬಗೆಗೆ ಸುದ್ದಿ ತಲುಪಿಸುತ್ತವೆ ಮತ್ತು ನಿರ್ದಿಷ್ಟ ವಿವರಣೆಸಹಿತ ನೀಲನಕ್ಷೆಯನ್ನು ಒದಗಿಸುತ್ತದೆ. ಅಂದರೆ ವೈರಾಣುವಿನ ಗುಟ್ಟನ್ನೆ ಅವು ದಾಳಿ ಇಡುವ ಮೊದಲೇ ನಮ್ಮ ಜೀವಕೋಶ ಗಳಿಗೆ ರಟ್ಟು ಮಾಡುತ್ತವೆ. ಒಂದು ರೀತಿಯಲ್ಲಿ ಸುದ್ದಿ ಗುಮ್ಮಗಳು! ಎಂದು ಕರೆಯಬಹುದು. ಆ ಸುದ್ದಿಗುಮ್ಮರಿಂದ ಎಚ್ಚೆತ್ತ ಜೀವಕೋಶಗಳು, ನಾಳೆ ಬರಬಹುದಾದ ಹೊಸ ವೈರಿಯನ್ನು ಮಟ್ಟಹಾಕಲು ಹೊಸ ನಿರೋಧಕ ಶಕ್ತಿಯನ್ನು ಅಭಿವೃದ್ಧಿ ಪಡಿಸುತ್ತವೆ. ಈ ತಂತ್ರಜ್ಞಾನವನ್ನು ‘ಮೆಸೆಂಜರ್ ಆರ್‌ಎನ್‌ಎ’ ಅಥವಾ  ಎನ್ನುತ್ತಾರೆ.
ಎಲ್ಲ ಜೀವಕೋಶಗಳಲ್ಲಿ ಇಂತಹ ನೈಸ *** ಆದರೆ ಇಲ್ಲಿ ವೈರಸ್ಸಿಗೆ ಅನುಗುಣವಾಗಿ ಸಂದೇಶ ವಾಹಕಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಿ ಲಸಿಕೆಯ ಮೂಲಕ ತೋರಿಸಬೇಕಾಗುತ್ತದೆ. ಇದೇmRNAತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಮೆರಿಕ ದಲ್ಲಿ ’ಮೊಡರ್ನಾ’ ಎಂಬ ಕಂಪನಿ ಮತ್ತು ಜರ್ಮನಿಯ ’ಬಯೋ- ಏನ್ ಫೋಟೆಕ್’ ಕಂಪನಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ಮಾರುಕಟ್ಟೆಗೆ ತಂದಿವೆ. ಈ ಸಂದೇಶವಾಹಕಗಳನ್ನು ಕಂಡುಕೊಳ್ಳುವುದು ಸುಲಭದ ತುತ್ತಲ್ಲ.
ಒಮ್ಮೆ ಓದಿದ ನಂತರ ಅಳಿಸಿ ಹೋಗುವ ಇಮೇಲ್‌ನಂತೆ ಕೆಲಸ ನಿರ್ವಹಿಸುತ್ತದೆ. ಕೋಶವು ತನ್ನ ನೈಸರ್ಗಿಕ ಕಾರ್ಯವನ್ನು ನಿರ್ವಹಿಸುತ್ತದೆಯಾದರೂ, ನಮ್ಮ ಸುದ್ದಿಗುಮ್ಮರ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಸುದ್ದಿಗುಮ್ಮರನ್ನು ಜೀವಕೋಶಗಳ ನಡುವೆ ಕಾಯ್ದುಕೊಳ್ಳುವುದು ಮತ್ತು ಅವು ರದ್ದಿ ಅಥವಾ ತಪ್ಪು ಸಂದೇಶವನ್ನು ರವಾನಿಸದಂತೆ ನೋಡಿಕೊಳ್ಳುವುದು ಬಹಳ ನಾಜೂಕಿನ ಮತ್ತು ನಿಪುಣತೆಯ ಕೆಲಸ. ಇಂತಹ ಸನ್ನಿವೇಶವನ್ನು ಜೀವಕೋಶಗಳಿಗೆ ಅನುಗುಣವಾಗಿ ಸಮರ್ಥವಾಗಿ ಸೃಷ್ಟಿಸಿ ದರೆ, ದೇಹದ ಜೀವಕೋಶಗಳು ತಮ್ಮ ರಕ್ಷಣೆಗೆ ಏನು ಮಾಡಬೇಕೋ ಅದನ್ನು ಮಾಡುತ್ತದೆ ಎನ್ನುತ್ತಾರೆ ಡಾ.ಸಾಹಿನ್.
ಮೇಲೆ ಹೇಳಿದಂತೆ , ತಂತ್ರಜ್ಞಾನ ಲಸಿಕೆಯಲ್ಲಿ ಬಳಕೆಯಾಗುತ್ತಿರುವುದು ಇದೇ ಮೊದಲು. ಇಲ್ಲಿಯವರೆಗೆ ನುರಿತ ವೈದ್ಯರು, ವಿeನಿಗಳೂ ಇಂತಹ ಒಂದು ಪ್ರಕ್ರಿಯೆ ಸಾಧ್ಯವಿಲ್ಲ ಎಂದೇ ನಂಬಿದ್ದರು. ಲಸಿಕೆ ಸಿದ್ಧವಾಗಿ ಸರಿ ಸುಮಾರು ಒಂದುವರ್ಷ ಕಳೆದು, ಅದೆಷ್ಟೋ ಕೋಟಿ ಜನರಿಗೆ ಚುಚ್ಚಿ ಮುಗಿದ ಮೇಲೂ ಇದರ ಬಗ್ಗೆ ಮೂಗು ಮುರಿಯುವ ಕೆಲವರು ಸಿಗಬಹುದು. ಅದು ಹೊಸತಲ್ಲ.
ಈ ಹೊಸ ತಂತ್ರಜ್ಞಾನದ ಆಲೋಚನೆಯು ಕೋವಿಡ್-19 ಮಹಾಮಾರಿ ಬಂದ ನಂತರ ಹುಟ್ಟಿದ್ದಲ್ಲ. ಈ ಲಸಿಕೆಯ ಹಿಂದೆ ಒಬ್ಬ ವಿಜ್ಞಾನಿ ಕತ್ತಲಲ್ಲಿ ಹತ್ತು ವರ್ಷಕ್ಕೂ ಹೆಚ್ಚು ತೊಡಗಿಸಿಕೊಂಡ ವ್ಯಥೆ ಇದೆ. 1990 ರಲ್ಲಿಯೇ ಹಂಗೇರಿ ಮೂಲದ ವಿಜ್ಞಾನಿ ಡಾ.ಕಟಾಲಿನ್ ಕಾರಿಕೊ ಅವರು ಅಮೆರಿಕದ ಪೆನ್ಸ್ಲಾವೇನಿಯಾ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಇಂತಹ ಒಂದು ಸಾಧ್ಯತೆಯನ್ನು ಮುಂದಿಟ್ಟಿದ್ದರು. ಆಗ ಯಾವ ವಿಜ್ಞಾನಿಗಳೂ ಇದಕ್ಕೆ ಸೊಪ್ಪು ಹಾಕಲಿಲ್ಲ.ಸತತ ಆರು ವರ್ಷಗಳ ಕಾಲ (1995ರ ವರೆಗೆ) ಹತ್ತಾರು ಯೋಜನೆಗಳೊಂದಿಗೆ ಹಲವು ಅಮೆರಿಕದ ಸಂಶೋಧನಾ ಅನುಮೋ ದನೆ ಸಂಸ್ಥೆಗಳಿಗೆ ತಮ್ಮ ಪ್ರಸ್ತಾವನೆ ಸಲ್ಲಿಸಿದ್ದರು. ಎಲ್ಲಕ್ಕೂ ಉತ್ತರ ಒಂದೇ ಆಗಿತ್ತು.
ಇದು ಸಾಧ್ಯವಿಲ್ಲದ ವಿಚಾರ. ಯಾವ ಯೋಜನೆ, ಪ್ರಸ್ತಾವನೆಗಳಿಗೂ ಬಿಡಿಗಾಸೂ ಹುಟ್ಟಲಿಲ್ಲ. ಅವರು ಕೊನೆಗೆ ತಮ್ಮ ಕೆಲಸ ವನ್ನು ಉಳಿಸಿಕೊಳ್ಳಲು ಹಿಂಬಡ್ತಿ ಪಡೆಯುವ ಅನಿವಾರ್ಯತೆ ನಿರ್ಮಾಣವಾಯಿತು. ಇಂತಹ ಸಂದರ್ಭಗಳಲ್ಲಿ ಸಾಮಾನ್ಯ ವಾಗಿ ಬಹುತೇಕರು ವಿಜ್ಞಾನಕ್ಕೆ ಎಳ್ಳು ನೀರು ಬಿಟ್ಟು, ಕ್ಷೇತ್ರವನ್ನೇ ತೊರೆಯುತ್ತಾರೆ. ಅದೆಷ್ಟೋ ಸಲ ತಾನು ಕೂಡ ಬೇರೆಡೆಗೆ ಹೋಗಬೇಕೆಂದು ಯೋಚಿಸಿದ್ದಿದೆ, ಅಥವಾ ಬೇರೆ ಏನಾದರೂ ಮಾಡಬೇಕೆಂದು ಯೋಚಿಸಿದ್ದೇ ಎಂದು ಹೇಳುತ್ತಾರೆ ಡಾ.ಕಾರಿಕೊ.ಆದರೆ ಗಟ್ಟಿಮನಸ್ಸಿನಿಂದ ತಿರಸ್ಕೃತವಾದ ಪ್ರಸ್ತಾವನೆಗಳಿಗೆ ಹೊಸ ರೂಪ ಕೊಡಲು ಮುಂದಾಗುತ್ತಾರೆ.
ಯೋಜನೆಗಳನ್ನು ಪ್ರಾಯೋಗಿಕವಾಗಿ ಸಾಬೀತುಪಡಿಸಿದ ಸೂಕ್ತ ಸಾಕ್ಷಿಯ ಜತೆಗೆ ಮಂಡಿಸುತ್ತಾರೆ. ಸಹೋದ್ಯೋಗಿ ಡಾ.ಡ್ರೂ ವೆಯ್ಸ -ಮಾನ್ ಜತೆಗೂಡಿ ತಮ್ಮ ಯೋಜನೆಗೆ ಹೊಸ ದಾರಿಯನ್ನು ಕಂಡುಕೊಳ್ಳುತ್ತಾರೆ. ಇಷ್ಟಕ್ಕೆ ಸುಮಾರು ಹತ್ತು ವರ್ಷ ಸಮಯ ಹಿಡಿಯುತ್ತದೆ. ವಿಜ್ಞಾನ ಎಂಬುದು ಆತುರದ ಅಡಿಗೆ ಅಲ್ಲ ಎಂಬುದನ್ನು ಗಮನಿಸಬೇಕು. 2005ರ ಹೊತ್ತಿಗೆ ಇವರ ಜೋಡಿ ಹಲವು ಸಂಶೋಧನಾ ಸರಣಿ ಲೇಖನವನ್ನು ಸಾಕ್ಷಿಯ ಜತೆಗೆ ಪ್ರಕಟಿಸುತ್ತಾರೆ. ಆಗಲೂ ಬಹುತೇಕ ವಿಜ್ಞಾನಿಗಳಾಗಲಿ, ಫಾರ್ಮಾ ಕಂಪನಿಯಾಗಲಿ ಕಾರಿಕೊ ಮತ್ತು ವೆಯ್ಸ-ಮಾನ್ ಸಂಶೋಧನೆ ಯನ್ನು ಗಮನಿಸಲಿಲ್ಲ. ವಜ್ರ ಗಣಿಯಿಂದ ತೆಗೆಯು ವಾಗ ಮಾಮೂಲಿ ಕಲ್ಲಿನಂತಯೇ ಇರುತ್ತದೆ.
ಗುರುತಿಸುವ ಚಾಣಾಕ್ಷತನ ಇಲ್ಲದೆ ಹೋದರೆ ಕಲ್ಲಿನಲ್ಲಿಯೇ ಮರೆಯಾಗುತ್ತದೆ. ಎಲ್ಲರೂ ಕಡಿದಿಟ್ಟ ಮೂರ್ತಿಯನ್ನು ಹುಡುಕಿ ದರೆ, ಕೆಲವರಾದರೂ ಮೂರ್ತಿಯನ್ನು ಕಡಿಯಲು ಕಲ್ಲನ್ನೂ ಹುಡುಕ ಬೇಕಲ್ಲ. ಅದೇ ರೀತಿ ಈ ಸಂಶೋಧನೆಗಳ ಪರಿಮಳದ ಜಾಡನ್ನು ಹಿಡಿದುmRNAತಂತ್ರಜ್ಞಾನದ ಅಭಿ ವೃದ್ಧಿಗೆ ಅಮೆರಿಕದಲ್ಲಿ ಡಾ.ಡೆರಿಕ್ ರೊಸ್ಸಿ, ಡಾ.ತಿಮೋಥಿ ಸ್ಪ್ರಿಂಗರ್ ಮತ್ತು ಡಾ.ಜಸ್ಟಿನ್ ಲಾಂಗರ್ ಜತೆಗೂಡಿ ’ಮೊಡರ್ನಾ’ ಕಂಪನಿಯನ್ನು 2010 ರಲ್ಲಿ ಹುಟ್ಟು ಹಾಕುತ್ತಾರೆ.
ಪೆಸಿಫಿಕ್ ಸಮುದ್ರದ ಈಚೆ ಜರ್ಮನಿಯಲ್ಲಿ ಡಾ.ಕಾರಿಕೊ ಅವರ ಸಂಶೋಧನೆಯಿಂದ ಪುಳಕಿತರಾಗಿ, ರೈನ್ ನದಿಯ ತೀರದ ಮೈ ನಗರದಲ್ಲಿ ಟರ್ಕಿಶ್ ಮೂಲದ ವಿಜ್ಞಾನಿ ದಂಪತಿಗಳಾದ ಡಾ.ಉಗುರ್ ಸಾಹಿನ್ ಮತ್ತು ಡಾ.ಇಜ್ಲೆಮ್ ಟೆರೆಸಿ ಕೂಡ 2008ರಲ್ಲಿಯೇ (2 ವರ್ಷ ಮೊದಲು) ಬಯೋ- ಏನ್ -ಟೆಕ್ ಎಂಬ ಕಂಪನಿಯನ್ನು ಸ್ಥಾಪಿಸುತ್ತಾರೆ.
ಇಂತಹ ತಂತ್ರಜ್ಞಾನದ ಹರಿಕಾರರಾದ ಡಾ.ಕಟಾಲಿನ್ ಕಾರಿಕೊ ಅವರನ್ನು ಮರೆಯದೇ 2014ರಲ್ಲಿ ಬಯೋ-ಏನ್ ಫೋಟೆಕ್ ಸಂಸ್ಥೆಯ ಪದಾಧಿಕಾರಿಯ ಹುದ್ದೆ ನೀಡಿ, ವೈಜ್ಞಾನಿಕ ಸಲಹೆಗಾರರನ್ನಾಗಿಯೂ ನೇಮಿಸಿಕೊಳ್ಳುತ್ತಾರೆ. ಆದರ್ಶವೂ ವಿeನದಒಂದು ಭಾಗವೇ! ಬಯೋ-ಏನ್ ಫೋಟೆಕ್ ಮೂಲ ಉದ್ದೇಶ ವಯಕ್ತಿಕ ಕ್ಯಾನ್ಸರ್ ಮದ್ದುಗಳ ಅನ್ವೇಷಣೆಯೇ ಹೊರತು ವೈರಾಣುಗಳ ಲಸಿಕೆಯ ಉದ್ದೇಶ ಆಗಿರುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ.
2018ರಲ್ಲಿ ಸಾಹಿನ್ ಬರ್ಲಿನ್‌ನಲ್ಲಿ ನಡೆದ ಕಾನ್ಸರ್ ತಜ್ಞರ ಒಂದು ಸಮ್ಮೇಳನದಲ್ಲಿmRNAತಂತ್ರಜ್ಞಾನದ ಬಗ್ಗೆ ವಿವರಿಸುತ್ತಾ, ಸಾಂಕ್ರಾಮಿಕ ರೋಗಗಳ ಮಟ್ಟ ಹಾಕಲು ಕೂಡ ಬಳಸಿಕೊಳ್ಳಬಹುದಾಗಿದೆ ಎಂದಿದ್ದರು. ಆಗ ನೆರೆದಿದ್ದ ವೈರಾಣುಶಾಸ್ತ್ರಜ್ಞರು, ಉಗುರ್ ಸಾಹಿನ್ ಅವರ ಮಾತನ್ನು ಒಪ್ಪಿರಲಿಲ್ಲ. ಅಂತಹ ಒಂದು ಸಾಧ್ಯತೆಯನ್ನು ಆಲೋಚಿಸಿಯೂ ಇರಲಿಲ್ಲ. ನೀವು ಕ್ಯಾನ್ಸರ್ ಜೀವ ಕೋಶಗಳ ನಿರೋಧಕ ಗುಣಗಳ ಬಗ್ಗೆ ಮಾತ್ರ ಚಿಂತಿಸಿ ಸಾಕು ಎಂದು ಅಪಹಾಸ್ಯ ಮಾಡಿದ್ದರಂತೆ. ಆಗಬಯೋ-ಏನ್ -ಟೆಕ್ ಸಂಸ್ಥೆಯ ಯಾವುದೇ ಔಷಧವು ಮಾರುಕಟ್ಟೆಯಲ್ಲಿ ಇರಲಿಲ್ಲ. ಅದರ ಹೆಸರೂ ಹಲವರಿಗೆ ಮೊದಲ ಬಾರಿಗೆ ಕೇಳಿಸಿತ್ತು.
2020ರ ಜನವರಿ24ನೇ ತಾರೀಖು ಶುಕ್ರವಾರ ಸಂಜೆ ಡಾ.ಉಗುರ್ ಸಾಹಿನ್ ಅವರು ಚೀನಾದಲ್ಲಿ ಕಾಣಿಸಿಕೊಂಡ ಹೊಸ ಮಾದರಿಯ ಕೋವಿಡ್-19ರ ಬಗೆಗಿನ ಪ್ರತಿಷ್ಠಿತ ಲಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನವನ್ನು ಓದುತ್ತಾರೆ. ಅದಾಗಲೇಅವರಿಗೆ ಮುಂದೆ ಒದಗಬಹುದಾದ ಆಪತ್ತಿನ ಬಗ್ಗೆ ಸುಳಿವು ಸಿಗುತ್ತದೆ. ಅವರೇ ಹೇಳುವ ಪ್ರಕಾರ, ಈ ವೈರಾಣುಗಳು ಒಬ್ಬರಲ್ಲಿ ರೋಗದ ಲಕ್ಷಣವಿಲ್ಲದೆಯೇ ಮತ್ತೊಬ್ಬರಿಗೆ ಹರಡಬಲ್ಲದು ಎಂಬ ಮಾಹಿತಿ ದಿಗಿಲು ಉಂಟು ಮಾಡುತ್ತದೆ.
ಮರುದಿನ ಬೆಳಗ್ಗೆ ಅಂದರೆ ಶನಿವಾರ (25ರ) ದ ಉಪಹಾರದ ಸಂದರ್ಭದಲ್ಲಿ ತಮ್ಮ ಪತ್ನಿ, ನುರಿತ ವಿಜ್ಞಾನಿ, ಬಯೋ-ಏನ್ ಫೋಟೆಕ್ ಕಂಪನಿಯ ಚೀಫ್ ಮೆಡಿಕಲ್ ಆಫೀಸರ್ ಹಾಗೂ ಸಂಸ್ಥಾಪಕ ಸದಸ್ಯೆ ಡಾ.ಇಜ್ಲೆಮ್ ಟೆರೆಸಿ ಜತೆ ಈ ವಿಷಯವಾಗಿ ಚರ್ಚಿಸುತ್ತಾರೆ. ಸೋಮವಾರ27ರ ಬೆಳಗ್ಗೆ ಬಯೋ-ಏನ್ ಫೋಟೆಕ್ ಕಂಪನಿಯ ಎಲ್ಲ ವಿಜ್ಞಾನಿಗಳನ್ನು ಇದೇ ವಿಷಯದಲ್ಲಿ ತೊಡಗಿಕೊಳ್ಳುವಂತೆ ಹೇಳುತ್ತಾರೆ.
ಸದ್ಯಕ್ಕೆ ಬೇರೆ ಎಲ್ಲ ಸಂಶೋಧನೆ ಮತ್ತು ಕೆಲಸಗಳಿಗೆ ವಿರಾಮ ಒದಗಿಸಿ, ಹೊಸ ಸಂದೇಶವಾಹಕಗಳ ಲಸಿಕೆಯ ಸಂಶೋಧನೆಗೆ ಒತ್ತು ನೀಡುತ್ತಾರೆ. ಅದಾಗಲೇ ಕಂಪನಿ ಕೆಲವು ಕ್ಯಾನ್ಸರ್ ಸಂಬಂಧಿ ಔಷಧಗಳನ್ನು ಮಾರುಕಟ್ಟೆಗೆ ತರಲು ತಯಾರಿ ನಡೆಸಿತ್ತು. ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ಜನ ಕೆಲಸಗಾರರು ಇದ್ದರು ಎಂಬುದನ್ನು ತಿಳಿಯಬೇಕು.2020ರಫೆಬ್ರವರಿಎರಡನೇ ವಾರದಲ್ಲಿ ಹತ್ತು ವಿವಿಧ ರೀತಿಯ ಸಂಯುಕ್ತಗಳು ಮಾರ್ಚ್ ಮೊದಲನೇ ವಾರದಲ್ಲಿ ಇನ್ನೂ ಹತ್ತು ಬಗೆಯ ಸಂಯುಕ್ತಗಳು ಕ್ಲಿನಿಕಲ್ ಟ್ರೈಲ್‌ಗೆ ಸಿದ್ಧವಾದವು.
ಅಂದರೆ ಕೇವಲ ನಾಲ್ಕು ವಾರಗಳಲ್ಲಿ, ಎಪ್ಪತ್ತು ರೀತಿಯ ಸಂದೇಶವಾಹಕಗಳು ಸಾಹಿನ್ ಅವರ ಪ್ರಯೋಗಶಾಲೆಯಲ್ಲಿ ಸಿದ್ಧವಾಗಿ ಕುಳಿತಿದ್ದವು. ಕೊನೆ ಹಂತದ ಪರೀಕ್ಷೆಯಲ್ಲಿ ಇಪ್ಪತ್ತರಲ್ಲಿ ನಾಲ್ಕನ್ನು ಮೊದಲನೇ ಹಂತದ ಕ್ಲಿನಿಕಲ್ ಟ್ರೈಲ್‌ಗೆ ಆಯ್ದುಕೊಳ್ಳು ತ್ತಾರೆ. ಕೆಲವರು ಹೇಳುವ ಪ್ರಕಾರ ಆ ನಾಲ್ಕರಲ್ಲಿ ಒಂದು ಸಂಯೋಗವನ್ನು ಸೂಕ್ಮದರ್ಶಕದಲ್ಲಿ ನೋಡಿದಾಗಲೇ ಸಾಹಿನ್ ಅವರು ಪುಳಕಿತರಾಗಿದ್ದರು ಮತ್ತು ಅದರ ಬಗ್ಗೆ ಹೆಚ್ಚಿನ ಭರವಸೆ ಹೊಂದಿದ್ದರು. ಅಲ್ಲಿಗೆ ಸುಮ್ಮನಾಗದೆ ಮುಂದಾಲೋಚನೆ ನಡೆಸಿದ ಉಗುರ್ ಸಾಹಿನ್, ಬಯೋ-ಏನ್ ಫೋಟೆಕ್ ಕಂಪನಿಯ ದೊಡ್ಡಮಟ್ಟದ ಉತ್ಪಾದನೆಯ ಮಿತಿ ಮತ್ತು ಜಾಗತಿಕವಾಗಿಉಂಟಾಗಬಹುದಾದ ಬೇಡಿಕೆಯನ್ನು ಗಮನಿಸಿ ’ಫೈಝರ್’ ಕಂಪನಿಯ ಮುಖ್ಯಸ್ಥ ಆಲ್ಬರ್ಟ್ ಬೊರ್ಲಾ ಅವರಿಗೆ ಕರೆ ಮಾಡು ತ್ತಾರೆ.
ಫೈಝರ್ ಜಗತ್ತಿನ ಬೃಹತ್ ಫಾರ್ಮಾ ಕಂಪನಿಗಳಲ್ಲಿ ಒಂದು, ಅಮೆರಿಕ ಮತ್ತು ಯೂರೋಪಿನ ಹಲವೆಡೆ ಉತ್ಪಾದನಾ ಘಟಕಗಳನ್ನು ಹೊಂದಿರುವುದು ಸಾಹಿನ್ ಅವರಿಗೆ ತಿಳಿದಿತ್ತು. ಅವರು ಬಯಸಿದಂತೆ ಫೈಝರ್, ಬಯೋ-ಏನ್-ಟೆಕ್mRNAತಂತ್ರಜ್ಞಾನದ ಅನುಗುಣವಾಗಿ ಲಸಿಕೆಯ ಉತ್ಪಾದನೆಗೆ ಕಳೆದ ಮಾರ್ಚ್‌ನ ಒಪ್ಪಿಗೆ ಸೂಚಿಸಿತ್ತು. ಒಮ್ಮೆ ಯೋಚಿಸಿ ಜಗತ್ತಿನ ಹಲವು ದೇಶಗಳು ಮೊದಲಿನ ಲಾಕ್‌ಡೌನ್ ಘೋಷಿಸುವ ಮುನ್ನವೇ ಜಾಗತಿಕವಾಗಿ ಲಸಿಕೆ ತಯಾರಿಕೆಗೆ ಒಪ್ಪಂದ ಸಿದ್ಧವಾಗಿತ್ತು. ನಾವೆಲ್ಲ ಲಾಕ್‌ಡೌನ್ ಪರಿವೆಯೂ ಇಲ್ಲದೇ ಬೆಚ್ಚಗೆ ಹೊದ್ದು ಮಲಗಿದ್ದೆವು.
2020ರ ನವೆಂಬರ್ ತಿಂಗಳಿನಲ್ಲಿ ಕ್ಲಿನಿಕಲ್ ಟ್ರೈಲ್ ಮೂರನೇ ಹಂತದ ಫಲಿತಾಂಶ ಕೈ ಸೇರಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಶೇ.95ಕ್ಕೂ ಹೆಚ್ಚು ದಕ್ಷತೆಯ ಅನೂಹ್ಯ ಸಂಭ್ರಮದ ಸಮಯ! ಅದೊಂದು ಯುರೇಕಾ ಮೊಮೆಂಟ್! ಎಂದುಬಣ್ಣಿಸುತ್ತಾರೆ ಡಾ.ಇಜ್ಲೆಮ್ ಟೆರೆಸಿ. ಅಂದು ಸಾಹಿನ್ ಅವರು ಭರವಸೆ ವ್ಯಕ್ತಪಡಿಸಿದ್ದ ಸಂಯೋಗವೇ ಕೊನೆಯಲ್ಲಿ ಗೆದ್ದಿದ್ದು ಎಂಬುದು ಕೂಡ ಸತ್ಯವೇ.
ವಿಜ್ಞಾನಿಯ ಅಂತರಂಗವೂ ತರಬೇತಿ ಪಡೆದಿರುತ್ತದೆ ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿ ಅಷ್ಟೇ. ನಂತರ ನಡೆದzಲ್ಲವೂಇತಿಹಾಸವೇ. ಮೊದಲು ಗ್ರೇಟ್ ಬ್ರಿಟನ್, ನಂತರ ಅಮೆರಿಕದ FDA2020ರ ಡಿಸೆಂಬರ್ ಮೊದಲ ವಾರದಲ್ಲಿ ಲಸಿಕೆಯ ಬಳಕೆಗೆ ಅನುಮತಿಯನ್ನೂ ನೀಡಿತು. ಜಗತ್ತಿನ ಲಸಿಕೆಗಳ ಪೈಪೋಟಿಯಲ್ಲಿ, ಹಿಂದೆದೂ ಹೆಸರು ಕೇಳಿರದ ಸಂಸ್ಥೆಯೊಂದು ಕಂಡು ಹಿಡಿದು ಅಭಿವೃದ್ಧಿಪಡಿಸಿದ ಲಸಿಕೆಯೊಂದು ತನ್ನ ಹೊಸ ಸಾಮ್ರಾಜ್ಯದ ಚುಕ್ಕಾಣಿ ಹಿಡಿಯಿತು.
ಹಿಂದೆಂದೂ ಕಂಡು ಕೇಳರಿಯದ ವೇಗದಲ್ಲಿ; ಬೆಳಕಿನ ವೇಗದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಅಂದಹಾಗೆ ಲಸಿಕೆಯ ಓಟದಲ್ಲಿ ಎರಡನೇ ಸ್ಥಾನ ಕೂಡmRNAತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಲಸಿಕೆಗೇ ಸಿಕ್ಕಿತು. ಮೊಡರ್ನಾ ಕಂಪನಿಯ ಲಸಿಕೆಗೆ ಡಿಸೆಂಬರ್ 2ನೇ ವಾರದಲ್ಲಿ ಅಧಿಕೃತ ಒಪ್ಪಿಗೆ ದೊರೆಯಿತು.
ಅದರ ದಕ್ಷತೆಯೂ ಶೇ.95 ರಷ್ಟು ಇದ್ದಿದ್ದು ಗಮನಾರ್ಹ. ಲಸಿಕೆಯೇನೂ 10-12 ತಿಂಗಳಿನಲ್ಲಿ ಮಾರುಕಟ್ಟೆಗೆ ಬಂದದ್ದು ನಿಜವೇ. ಲಸಿಕೆಯ ರಾಸಾಯನಿಕ ಸಂಯೋಜನೆ ಕೇವಲ ಎರಡೇ ವಾರದಲ್ಲಿ ಸಿದ್ಧವಾಗಿದ್ದೂ ನಿಜವೇ. ಇಂದು ಮಾರುಕಟ್ಟೆ ಯಲ್ಲಿರುವ ಲಸಿಕೆ ಬಯೋ-ಏನ್ ಫೋಟೆಕ್ ಕಂಪನಿಯ ಪ್ರಯೋಗಾಲಯದಲ್ಲಿ 20202 ರ ಫೆಬ್ರವರಿಯ ಹುಟ್ಟಿದ್ದೂ ನಿಜವೇ.
ಆದರೆ ಅಂತಹದೊಂದು ಮೂಲ ಆಲೋಚನೆ ವಿಜ್ಞಾನಿ ಡಾ.ಕಾರಿಕೊ ಅವರಿಗೆ1995ರಲ್ಲಿ ಬಂದಾಗ ಯಾರೂ ಒಪ್ಪದಿ ದ್ದದ್ದೂ ಸತ್ಯವೇ! ಸಾಹಿನ್ ದಂಪತಿ ಗಳು ಕಳೆದ ಹತ್ತು ವರ್ಷ ಈ ತಂತ್ರಜ್ಞಾನದ ಮೇಲೆ ಬದುಕನ್ನು ಸವೆಸದಿದ್ದರೆ, ಅಥವಾ ಮೊಡರ್ನಾ ಕಂಪನಿಯ ವಿಜ್ಞಾನಿಗಳು ತಮ್ಮನ್ನು ತೊಡಗಿಸಿಕೊಳ್ಳದಿದ್ದರೆ, ಹೊಸ ತಂತ್ರಜ್ಞಾನ ನಮ್ಮ ಮುಂದೆ ಇರುತ್ತಿರಲಿಲ್ಲ ಅಲ್ಲವೇ?
ಕೊನೆಮಾತು:ನುರಿತ ವಿಜ್ಞಾನಿಯ ಇಂದಿನ ಆಲೋಚನೆ ಇಪತ್ತು ವರ್ಷಗಳ ನಂತರ ಅಳತೆಗೆ ಸಿಗುತ್ತದೆ.