ಪರಿಸರ ದಿನವೆಂದರೆ ಕೇವಲ ಗಿಡಗಳನ್ನು ನೆಡುವುದಲ್ಲ
ತನ್ನಿಮಿತ್ತ
ಗ.ನಾ.ಭಟ್ಟ
ವಿಶ್ವ ಪರಿಸರ ದಿನಾಚರಣೆಯಂದು ಸಾಮಾನ್ಯವಾಗಿ ಎಲ್ಲಾ ಪತ್ರಿಕೆಯ ಪುಟ ಪುಟಗಳೂ ಹಸಿರು ಬಣ್ಣಗಳಲ್ಲಿ ಪ್ರಕಟಗೊಳ್ಳುತ್ತವೆ.ಸಮೃದ್ಧಿಯೇ ಮೈದಳೆದು ಬಂತು ಎಂಬಂತೆ ಕಣ್ಮನಗಳಿಗೆ ಹಬ್ಬ, ಉತ್ಸಾಹವನ್ನು ಉಂಟುಮಾಡುತ್ತವೆ.
ಅಂದು ಟಿ.ವಿ. ನಿರೂಪಕರು ಹಸಿರು ಬಟ್ಟೆಗಳನ್ನುಟ್ಟು ನೋಡುವವರನ್ನು ಸಂತೋಷದಲ್ಲಿ ಮೀಯಿಸುತ್ತಾರೆ. ಶಾಲಾ ಕಾಲೇಜು ಗಳು ಅಂದು ತಮ್ಮ ಶಾಲಾ ಮೈದಾನದಲ್ಲಿ ಒಂದೆರಡು ಗಿಡಗಳನ್ನು ನೆಟ್ಟು, ಅವಕ್ಕೆ ನೀರು ಹಾಕಿ, ಸುತ್ತ ಮಣ್ಣುಹಾಕಿ, ಫೋಟೋ ಹೊಡೆದು, ಅದನ್ನು ಮೇಲಾಧಿಕಾರಿಗಳಿಗೆ ಕಳುಹಿಸಿಕೊಡುತ್ತಾರೆ. ಅಂದರೆ -ಅಲ್ಲಿಗೆ ಆ ವರ್ಷದ ಪರಿಸರ ದಿನಾಚರಣೆ ಅಥವಾವನಮಹೋತ್ಸವ ಮುಗಿದಂತೆ. ಇನ್ನೇನಿದ್ದರೂ ಮುಂದಿನ ವರ್ಷವಷ್ಟೇ!
ಅದು ಅದೇ ಪ್ರಕಾರ. ಯಾವ ವ್ಯತ್ಯಾಸವೂ ಇರುವುದಿಲ್ಲ. ಕಳೆದ ವರ್ಷ ನೆಟ್ಟಿದ್ದು ಏನಾಯಿತೋ ಗೊತ್ತಿಲ್ಲ. ಅದು ಚಿಗುರಿ, ಬೆಳೆದಿದ್ದಕ್ಕೆ ಯಾವ ಕುರುಹೂ ಇರುವುದಿಲ್ಲ. ಇನ್ನು ಕೆಲವು ಶ್ರೀಮಂತರು ಮನೆಗೆ ಬಂದವರಿಗೆ ಯಾವುದೋ ಗಿಡವನ್ನು ಕೊಟ್ಟು ಕೈಮುಗಿಯುತ್ತಾರೆ. ಉದ್ಯಮಿಗಳಾದರೆ ಅವರ ಅಂಗಡಿಗಳಿಗೊ, ಕಂಪನಿಗಳಿಗೋ ಹೋದವರಿಗೆ ಗಿಡಗಳನ್ನು ಕೊಟ್ಟು, ಪೋಟೋ ಹೊಡೆಸಿ ತಮ್ಮ ಅಗಾಧ ಪರಿಸರ ಪ್ರೇಮವನ್ನು ಮೆರೆಯುತ್ತಾರೆ.
ಇಂತಹವನ್ನು ವಿಡಂಬನೆ ಎನ್ನಬೇಕೋ, ವಿಪರ್ಯಾಸ ಎನ್ನಬೇಕೋ, ನಿಜ ಕಾಳಜಿ ಎನ್ನಬೇಕೋ ತಿಳಿಯುವುದಿಲ್ಲ. ಆದರೆಒಂದಂತೂ ಸತ್ಯ. ಇಂಥಹವು ಪರಿಸರ ದಿನಾಚರಣೆ ಅಂತ ಅನ್ನಿಸಿಕೊಳ್ಳುವುದಿಲ್ಲ. ಇವು ಕೇವಲ ತೋರಿಕೆಯ ಆಚರಣೆ; ವಿಡಂಬನೆಯ ಆಚರಣೆ. ನಿಜ ಆಚರಣೆ ಬೇರೆಯೇ ಇರುತ್ತದೆ.
ಸರಕಾರವೋ, ಇಲಾಖೆಗಳೋ ಘೋಷಿಸಿದಂತೆಯೇ ಗಿಡ ನೆಡುವುದಾಗಲೀ, ಮರ ಕಡಿಯದೇ ಇರುವುದಾಗಲೀ ಪರಿಸರ ದಿನಾ ಚರಣೆಯಲ್ಲ. ಗಿಡ ನೆಟ್ಟಮೇಲೆ ಆದರ ಆರೈಕೆಯ ಹೊಣೆಗಾರಿಕೆ ಬರುತ್ತದೆ. ಮುಖ್ಯವಾಗಿ ಅದರ ರಕ್ಷಣೆ, ಕಾಲಕಾಲಕ್ಕೆ ನೀರು-ಗೊಬ್ಬರ, ಗಾಳಿ-ಬೆಳಕುಗಳನ್ನು ಒದಗಿಸುವುದು, ಕ್ರಿಮಿಕೀಟಗಳು ಗಿಡದ ಎಲೆಗಳನ್ನು ಭಕ್ಷಿಸದಂತೆ ನೋಡಿಕೊಳ್ಳುವುದು ಹೀಗೆ ಹಲವು ಜವಾಬ್ದಾರಿಗಳು ಒದಗಿಬರುತ್ತವೆ.
ಸಾಮಾನ್ಯವಾಗಿ ಗಿಡಗಳನ್ನು ನೆಟ್ಟಮೇಲೆ ಅದರ ಗೊಡವೆಗೆ ಹೋಗದಿರುವವರೇ ಹೆಚ್ಚು; ಮರೆಯುವವರೇ ಅಧಿಕ. ಅದನ್ನು ನೋಡುವವರಿಲ್ಲದೆ ನಾಲ್ಕೈದು ದಿನಗಳಲ್ಲೇ ಅದು ಕಣ್ಣು ಮುಚ್ಚಿರುತ್ತದೆ. ಮರ ಕಡಿಯಬಾರದು ಎನ್ನುವುದು ಸರಕಾರದ ಧ್ಯೇಯವಾಕ್ಯ. ಅದೇ ಸರಿಯಾದುದು, ಸಮಂಜಸ ಅನ್ನುವುದಾದರೆ ರಸ್ತೆಗಳ ಮೇಲೆ, ಮನೆಗಳ ಮೇಲೆ, ವಾಹನಗಳ ಮೇಲೆ,ವಿದ್ಯುತ್ ತಂತಿಯ ಮೇಲೆ ಬೀಳುವ ಮರಗಳನ್ನು ಏನು ಮಾಡಬೇಕು? ಇದಕ್ಕೆ ಸರಕಾರದಲ್ಲಿ ಉತ್ತರವಿಲ್ಲ. ಬರೀ ಕುರುಡು ಮಾದರಿಯನ್ನು ಅನುಸರಿಸುತ್ತದೆ ಅದು. ಇದು ಒಂದು ಮುಖವಾದರೆ ಅದರ ಇನ್ನೊಂದು ಮುಖ ಮೇಜು, ಕುರ್ಚಿ, ಕಪಾಟು, ಮಂಚ, ಬಾಗಿಲುಗಳನ್ನು ಮಾಡುವುದು ಹೇಗೆ? ಎಂಬ ಪ್ರಶ್ನೆ ಹಾಗೆಯೇ ಉಳಿದುಕೊಳ್ಳುತ್ತದೆ. ಇದಕ್ಕೆಲ್ಲ ಉತ್ತರ ಇದೆ.
ತೀರಾ ಅನಿವಾರ್ಯವಾದ, ಮುದಿಯಾದ ಮರಗಳನ್ನು ಕಡಿದರೆ ಚಿಂತೆಯಿಲ್ಲ. ಆದರೆ ಅದರ ಬದಲಿಗೆ ಮತ್ತೊಂದು ಗಿಡವನ್ನು ನೆಡಬೇಕು ಎಂಬ ಆಜ್ಞೆಯನ್ನು ಹೊರಡಿಸಬೇಕು. ಅಷ್ಟೇ ಅಲ್ಲ. ಅದನ್ನು ಅನುಷ್ಠಾನಗೊಳಿಸುವುದರಲ್ಲಿ ದೃಢ ಸಂಕಲ್ಪ ಮಾಡಬೇಕು. ಜತೆಗೆ ಎಂತಹ ಗಿಡಗಳನ್ನು ನೆಡಬೇಕು ಎಂಬ ತಿಳಿವಳಿಕೆಯನ್ನೂ ಅದು ಹೊಂದಬೇಕು. ಆಗ ಪರಿಸರ ದಿನಾ ಚರಣೆಗೆ ಅರ್ಥ ಬರುತ್ತದೆ.
‘ಅರಣ್ಯವನ್ನು ನಾಶ ಮಾಡಬಾರದು; ಅರಣ್ಯವನ್ನು ರಕ್ಷಿಸಬೇಕು; ಅದನ್ನು ಬೆಳೆಸಬೇಕು’ ಎಂದು ಅರಣ್ಯ ಇಲಾಖೆಯೋ, ಪರಿಸರಪ್ರೇಮಿಗಳೋ ಅಥವಾ ಸರಕಾರ ವೊ ಆಗಾಗ ಹೇಳುತ್ತಿರುತ್ತದೆ. ಆದರೆ ಇವರು ಯಾರಿಗೂ ಎಲ್ಲಿ ಅರಣ್ಯ ಬೆಳೆಸಬೇಕು? ಹೇಗೆ ಬೆಳೆಸಬೇಕು? ಹೇಗೆ ರಕ್ಷಿಸಬೇಕು? ಎಂಬ ಅರಿವೇ ಇದ್ದಂತಿಲ್ಲ ಅರಣ್ಯ ಬೆಳೆಸುವುದೆಂದರೆ ಸರಕಾರಕ್ಕೆ ಅರ್ಥಿಕವಾಗಿ ಲಾಭತರುವ ತೇಗ, ಬೀಟೆ, ಅಕೇಶಿಯಾ, ನೀಲಗಿರಿ, ಮಾಂಜಿಯಮ್, ರಬ್ಬರ್ ಮುಂತಾದ ಗಿಡಗಳಲ್ಲ.
ಆಲ, ಅರಳಿ, ನೇರಳೆ, ಅತ್ತಿ, ಹೆಬ್ಬೆಲಸು, ರೆಂಜೆ, ನೆಲ್ಲಿ, ಮಾವು, ಅಳಲೆ, ಹೆಬ್ಬೇವು, ಮೊದಲಾದ ಮರಗಳನ್ನೂ ಜತೆಗೆ ಚಕ್ರಮುನಿ, ಅಮೃತಬಳ್ಳಿ, ಆಡುಸೋಗೆ, ಮಂಗರವಳ್ಳಿ, ಅತಿಬಲ, ನೆಲಬೇವು, ಲೋಳೆಸರ, ಪಚ್ಚೆತೆನೆ ಮೊದಲಾದ ಔಷಧಿಯ ಸಸ್ಯಗಳನ್ನೂ ಬೆಳೆಸಬೇಕಾಗುತ್ತದೆ. ಇವನ್ನು ಬೆಳೆದರೆ ಅರಣ್ಯವನ್ನು ಬೆಳೆಸಿದಂತೆಯೇ. ಇವುಗಳ ಬಗ್ಗೆ ನಮಗೆ ತಿಳಿವಳಿಕೆ ಇಲ್ಲದಿದ್ದರೆ ಸಸ್ಯ ಶಾಸ್ತ್ರಜ್ಞರನ್ನೋ, ಪರಿಸರತಜ್ಞರನ್ನೋ ಕರೆಸಿ ತಿಳಿದುಕೊಳ್ಳಬೇಕು. ಇಂತಹ ಕೆಲಸವನ್ನು ಸರಕಾರವೋ, ಆಯಾ ಇಲಾಖೆಗಳುಮಾಡಿವೆಯೇ ಎಂದು ಕೇಳಿದರೆ ನಾವು ನಿಷ್ಠುರರಾಗ ಬೇಕು ಅಷ್ಟೇ!
ಮೇಲೆ ನಮೂದಿಸಿದ ಮರಗಳ ಪೈಕಿ ನಾನು ನೇರಳೆಮರವನ್ನು ಉಲ್ಲೇಖಿಸಿದೆ. ನೇರಳೆಹಣ್ಣು ಇಂದು ಮಧುಮೇಹಿಗಳಿಗೆ ಎಷ್ಟು ಉಪಯುಕ್ತ? ಎಂತಹ ಪರಿಣಾಮಕಾರಿ ಔಷಧ? ಅನ್ನುವುದು ಇಡೀ ಜಗತ್ತಿಗೆ ಗೊತ್ತಾಗಿದೆ. ಅದರ ಬೀಜಸಹಿತ ಜೂಸ್ ಮಾಡಿ ಕೊಂಡು ಕುಡಿಯುವುದು ಸಕ್ಕರೆಕಾಯಿಲೆಯನ್ನು ಬಹುಬೇಗ ನಿಯಂತ್ರಣಕ್ಕೆ ತರುತ್ತಿರುವುದು ಎಲ್ಲರಿಗೂ ಗೊತ್ತಿರುವಸಂಗತಿ. ವಿಚಿತ್ರ ಸಂಗತಿಯೆಂದರೆ ಈ ಮರವನ್ನು ಯಾರೂ ಬೆಳೆಯುವುದಿಲ್ಲ.
ಅದು ತನ್ನಷ್ಟಕ್ಕೆ ತಾನೇ ಅಡವಿಯಲ್ಲಿ ಬೆಳೆದಿರುತ್ತದೆ. ತನ್ನ ಪಾಡಿಗೆ ತಾನು ಬೆಳೆದ ಮರ ಮನುಷ್ಯನಿಗೆ ಎಂತಹ ಉಪಕಾರ ಮಾಡುತ್ತದೆ ಅಂತ ಯೋಚಿಸಿದರೆ ಅಚ್ಚರಿಯಾಗುತ್ತದೆ. ಇಂಥಾದ್ದನ್ನು ಬೆಳೆಸುವುದರ ಕಡೆಗೆ ಇಲಾಖೆಗಳು ಯಾಕೆ ಗಮನಕೊಡುವುದಿಲ್ಲವೋ ಗೊತ್ತಾಗುವುದಿಲ್ಲ. ಅವರು ಗಮನ ಕೊಟ್ಟಿದ್ದೇ ಆದರೆ ಅರಣ್ಯವೂ ಬೆಳೆಯುತ್ತದೆ. ಮನುಷ್ಯನೂ ಸುಖ ವಾಗಿರುತ್ತಾನೆ.
ಇವುಗಳ ಜತೆಗೆ ಇನ್ನೂ ಒಂದು ಸಂಗತಿಯಿದೆ. ಸಸ್ಯಗಳನ್ನು ಬೆಳಸುವಲ್ಲಿ, ಅರಣ್ಯವನ್ನು ಸೃಷ್ಟಿಸುವಲ್ಲಿ ಪಕ್ಷಿಗಳ ಪಾತ್ರ ಬಹಳ ಹಿರಿದಾದುದು. ಈ ಮಾತು ಅನೇಕರಿಗೆ ಆಶ್ಚರ್ಯವನ್ನುಂಟುಮಾಡಬಹುದು! ಪಕ್ಷಿಗಳು ಎಂತಹ ಉಪಕಾರಕ ಕೆಲಸಗಳನ್ನು ಮಾಡುತ್ತವೆಯೆಂದರೆ ಅವು ಎಲ್ಲಿಂದಲೋ, ಯಾವ ಮರದಿಂದಲೋ ಹಣ್ಣುಗಳನ್ನು ಕಚ್ಚಿ ತಂದು ಇನ್ಯಾವುದೋ ಜಾಗದಲ್ಲಿ ಹಣ್ಣನ್ನು ತಿನ್ನುತ್ತವೆ. ಆಗ ಅವುಗಳ ಬಾಯಿಂದ ಬಿದ್ದ ಬೀಜಗಳು ಅಲ್ಲೇ ಹುಟ್ಟಿ, ಚಿಗುರಿ, ಗಿಡವಾಗಿ, ಮರವಾಗಿ ಬೆಳೆಯುತ್ತವೆ. ಇದು ಪಕ್ಷಿಗಳು ಮಾಡುವ ಪ್ರಕೃತಿಸೇವೆ; ಮನುಷ್ಯೋಪಕಾರ.
ನಾವು ಯಾವುದನ್ನು ನೈಸರ್ಗಿಕ ಅರಣ್ಯ ಅಂತ ಕರೆಯುತ್ತೇವೋ ಅದು ನಿರ್ಮಾಣಗೊಂಡಿದ್ದು ಪಕ್ಷಿಗಳಿಂದ. ಹಾಗಾಗಿ ಪರಿಸರ ರಕ್ಷಣೆಯೆಂದರೆ ಮೃಗ ಪಕ್ಷಿಗಳ ರಕ್ಷಣೆಯೂ ಹೌದು. ಇದನ್ನು ಅರಿತು ನಡೆದುಕೊಂಡರೆ ಅದೇ ನಿಜವಾದ ವಿಶ್ವ ಪರಿಸರ ದಿನಾಚರಣೆ. ವಿಶ್ವ ಪರಿಸರ ದಿನಾಚರಣೆ ನಿಜ ಅರ್ಥದಲ್ಲಿ ನಡೆಯುವುದು ಇರಲಿ. ಕೆಲವೊಮ್ಮೆ ಅದು ಎಷ್ಟು ಬೇಜವಾಬ್ದಾರಿ ಯುತಾಗಿರುತ್ತದೆ ಅಂದರೆ ಅದಕ್ಕೊಂದು ಉದಾಹರಣೆ ಇಲ್ಲಿದೆ. ನಮ್ಮ ಸರಕಾರ ಅನೇಕ ಇಲಾಖೆಗಳಿಗೆ ಹಣ ಮಂಜೂರು ಮಾಡುತ್ತಿರುತ್ತದೆ.
ಆದರೆ ಆ ಹಣ ಪಡೆದ ಇಲಾಖೆ ಎಷ್ಟರಮಟ್ಟಿಗೆ ಕೆಲಸ ಮಾಡುತ್ತಿದೆ? ಆ ಹಣ ಸದ್ವಿನಿಯೋಗವಾಗುತ್ತಿದೆಯೇ? ಎಂದು ಕೇಳಿದರೆ ಅದಕ್ಕೆ ಉತ್ತರ ಅತ್ಯಂತ ಖೇದಕರವಾಗಿರುತ್ತದೆ. ಕೇಂದ್ರ ಸರಕಾರ ರಾಷ್ಟ್ರಮಟ್ಟದಲ್ಲಿ ಪ್ರತಿಗ್ರಾಮಗಳಲ್ಲೂ ಇರುವ ಜೀವಜಂತು, ಗಿಡಗಂಟಿ, ಜಲಚರಗಳನ್ನು ದಾಖಲಿಸುವುದಕ್ಕಾಗಿಯೇ ಪ್ರತಿ ಗ್ರಾಮಪಂಚಾಯಿತಿಯಲ್ಲೂ ಜೀವಿ ವೈವಿಧ್ಯ ರಕ್ಷಣಾ ಸಮಿತಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದೆ. ಇದರ ವ್ಯಂಗ್ಯವೆಂದರೆ- ನಮ್ಮ ರಾಜ್ಯದ5660ಗ್ರಾಮಪಂಚಾಯಿತಿಗಳ ಪೈಕಿ ನೂರೋ ಇನ್ನೂರೋ ಪಂಚಾಯಿತಿಗಳಲ್ಲಿ ಮಾತ್ರ ಸಮಿತಿ ರಚನೆಗೊಂಡಿದೆ.
ಅದು ಹೆಸರಿಗಷ್ಟೇ! ಅದರ ಮಹತ್ವ ಗೊತ್ತಿಲ್ಲದವರು, ಅವಿದ್ಯಾವಂತರು, ಅಶಿಕ್ಷಿತರು, ಕೆಲಸಕ್ಕೆ ಬಾರದ ರಾಜಕೀಯ ಮುಖಂಡರು ಯಾರೋ ಅದಕ್ಕೆ ಅಧ್ಯಕ್ಷರಾಗುತ್ತಾರೆ. ಇಂಥಹವರಿಂದ ಎಂತಹ ಪರಿಸರ ರಕ್ಷಣೆಯನ್ನು ಬಯಸಬಹುದು? ನೀವೇ ಯೊಚಿಸಿ. ನಮ್ಮ ಸುತ್ತಲೂ ಇರುವ ಸಜೀವ ಮತ್ತು ನಿರ್ಜೀವ ವಸ್ತುಗಳೆಲ್ಲವೂ ಪರಿಸರದ ವ್ಯಾಪ್ತಿಗೆ ಬರುತ್ತವೆ. ಮನುಷ್ಯನೂ ಕೂಡಾ ಪರಿಸರದ ಒಂದು ಭಾಗವೇ. ನಮ್ಮ ಸುತ್ತಮುತ್ತ ಇರುವ ಗಿಡ, ಮರ, ಬಳ್ಳಿ, ಗಾಳಿ, ನೀರು, ಬೆಳಕು, ನದಿ, ಪರ್ವತ, ಸಮುದ್ರ, ಕಾಡು, ನಗರ, ಹಳ್ಳಿ ಎಲ್ಲವೂ ಪರಿಸರವೇ ಆಗಿವೆ.
ಇವೆಲ್ಲದರ ಮೇಲೂ ಮನುಷ್ಯನ ಹಲ್ಲೆ, ಅತ್ಯಾಚಾರ ಸತತವಾಗಿ ನಡೆದಿವೆ. ಸಣ್ಣ ಉದಾಹರಣೆ ಕೊಡಬೇಕೆಂದರೆ- ಸಮುದ್ರದ ಮೇಲೆ ನಡೆದಿರುವ ಮನುಷ್ಯನ ಹಲ್ಲೆ, ಅನಾಚಾರಗಳನ್ನು ಒಮ್ಮೆ ಗಮನಿಸಿದರೆ ಸಾಕು. ಎದೆ ಒಡೆಯುತ್ತದೆ. ‘2018ರಲ್ಲಿ ಥಾಯ್ಲೆಂಡಿನ ಸಮುದ್ರ ತಿರದ ಸೋಂಖ್ಲಾ ಕಾಲುವೆಯ ದಡದಲ್ಲಿ30ಅಡಿ ಉದ್ದದ ಪೈಲಟ್ ತಿಮಿಂಗಲ ಬಂದು ನರಳುತ್ತ ಪ್ಲಾಸ್ಟಿಕ್ ಚಿಂದಿಗಳನ್ನು ವಾಂತಿ ಮಾಡಿಕೊಂಡಿತಂತೆ. ನಾಲ್ಕಾರು ದಿನಗಳ ಕಾಲ ಅಲ್ಲಿನ ಪಶುವೈದ್ಯರು ಏನೆಲ್ಲ ಚಿಕಿತ್ಸೆನಡೆಸಿದರೂ ಅದು ಬದುಕುಳಿಯಲಿಲ್ಲ. ಶವದ ಹೊಟ್ಟೆ ಸೀಳಿ ಸುಮಾರು80ಪ್ಲಾಸ್ಟಿಕ್ ಚೀಲಗಳನ್ನು ಎಳೆದು ಹೊರತೆಗೆದರು. ಅದೇ ವರ್ಷ ನಾರ್ವೆಯಲ್ಲೂ ದಡ ಸೇರಿ ಸತ್ತಿದ್ದ ತಿಮಿಂಗಲವೊಂದರ ಹೊಟ್ಟೆಯಲ್ಲಿ ಆಹಾರವಿರಲಿಲ್ಲ. ಬದಲಿಗೆ ಬರೀ ಪ್ಲಾಸ್ಟಿಕ್ಚೀಲಗಳಿದ್ದವು.
ಒಂದು ಚೀಲದ ಮೇಲೆ ಚಿಕನ್ ಪ್ಯಾಕ್ ಮಾಡಿದ್ದ ಕಂಪನಿಯ ಹೆಸರಿತ್ತು. ಚಿಕನ್ ಮನುಷ್ಯನಿಗೆ, ಖಾಲಿ ಪ್ಯಾಕೆಟ್ಟು ತಿಮಿಂಗಲ ಗಳಿಗೆ” ಎಂದು ಇದರ ಬಗ್ಗೆ ಪರಿಸರ ತಜ್ಞ ನಾಗೇಶ್ ಹೆಗಡೆ ಮಾರ್ಮಿಕವಾಗಿ ಬರೆಯುತ್ತಾರೆ. ಇವೆಲ್ಲ ಏನನ್ನು ಹೇಳುತ್ತವೆ.?ಮನುಷ್ಯನಿಗೆ ಪರಿಸರದ ಬಗ್ಗೆ ಇದ್ದ ನಿಷ್ಕಾಳಜಿಯಲ್ಲವೆ? ಸಮುದ್ರ ನಮಗೆ ಎಷ್ಟು ಉಪಕಾರಕ ಅನ್ನುವುದನ್ನು ನಾವಿಂದು ಮರೆತಿದ್ದೇವೆ. ಅದು ಭೂಮಿ ಮತ್ತು ಗ್ರಹಗಳ ಹೃದಯ. ಅದು ಜಗತ್ತಿನ ಮೂರನೆ ಎರಡರಷ್ಟು ವ್ಯಾಪಿಸಿಕೊಂಡಿದೆ ಎಂದರೆ ಅದರ ಅಗಾಧತೆ ಅರಿವಿಗೆ ಬರುತ್ತದೆ.
ವಾತಾವರಣದ ಸಮತೊಲನ ಕಾಪಾಡುವಲ್ಲಿ ಅದರ ಪಾತ್ರ ಅತ್ಯಂತ ದೊಡ್ಡದು. ಅದರ ಇನ್ನೊಂದು ಮುಖ್ಯ ಕೆಲಸವೆಂದರೆ-ಪ್ರತಿಶತ೭೦ರಷ್ಟು ಆಮ್ಲಜನಕವನ್ನು ಒದಗಿಸುತ್ತಾ ವಾತಾವರಣದಲ್ಲಿ ಇರುವ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳು ವುದು. ಲಕ್ಷಾಂತರ ಜಲಚರಗಳು ಸಮುದ್ರದಲ್ಲಿ ವಾಸಮಾಡುತ್ತವೆ. ಅದು ಮನುಷ್ಯನಿಗೆ ಆಹಾರವನ್ನೂ ಒದಗಿಸುತ್ತದೆ; ಲಕ್ಷಾಂತರ ಜನಕ್ಕೆ ಉದ್ಯೋಗವನ್ನೂ, ಬದುಕನ್ನೂ ಕಲ್ಪಿಸಿಕೊಡುತ್ತದೆ.
ಮೈನವಿರೇಳಿಸುವ ಬೋಟಿಂಗ್‌ನಂತಹ ಮನರಂಜನೆ ನೀಡುವುದೂ ಅದೇ. ಇಂತಹ ಸಮುದ್ರವನ್ನು ಮಲಿನಗೊಳಿಸದೇ ಸಂರಕ್ಷಿಸುವ ಹೊಣೆಗಾರಿಕೆ ಮನುಷ್ಯನ ಮೇಲೇ ಇದೆ. ಇನ್ನು ನದಿಯ ಮಾಲಿನ್ಯವನ್ನು ಕುರಿತು ಕೇಳುವುದೇ ಬೇಡ. ದೇವರಿಗೆ ಮುಡಿಸಿದ ಹೂಗಳ ರಾಶಿ, ಹರಿದುಹೋದ ಹಾಸಿಗೆ- ದಿಂಬು, ದೇವರ ಪೋಟೋ, ಪ್ಲಾಸ್ಟಿಕ್‌ಬ್ಯಾಗ್, ಗಾಜು ಮೊದಲಾದತ್ಯಾಜ್ಯವಸ್ತುಗಳನ್ನೆಲ್ಲ ಎಸೆಯುವುದಕ್ಕೆ ನಮಗೆ ನದಿಯೇ ಬೇಕು. ಇದು ಇರಲಿ. ಇದು ತಲೆ ತಲಾಂತರದಿಂದ ಬಂದ ದುರಭ್ಯಾಸ. ಎಷ್ಟು ಹೇಳಿದರೂ ಮನುಷ್ಯ ಕೇಳುವುದಿಲ್ಲ.
ನೀರನ್ನು ಕೆಡಿಸಬಾರದು ಎಂಬ ಭಾವ ಅವನಿಗೇ ಉದಿಸಿದಾಗ ಮಾತ್ರ ಜಲಮಾಲಿನ್ಯವನ್ನು ತಡೆಗಟ್ಟಬಹುದು. ಮಾಲಿನ್ಯವನ್ನು ತಡೆಗಟ್ಟುವುದು ಮಾತ್ರ ಅಲ್ಲ. ನೀರಿನ ರಕ್ಷಣೆ, ಅದರ ಸದ್ಬಳಕೆಯೂ ಕೂಡ ಪರಿಸರ ದಿನಾಚರಣೆಯ ಒಂದು ಭಾಗವೇ ಆಗಿದೆ. ಆದರೆ ಅದರ ಕಡೆಗೆ ಮನುಷ್ಯ ಗಂಭೀರವಾಗಿ ಲಕ್ಷ್ಯ ಹರಿಸದಿರುವುದು, ಅದರ ಬಗ್ಗೆ ಯೊಚಿಸದಿರುವುದು ಎಷ್ಟೋ ಕಡೆಗೆ ನೀರಿನ ಅಭಾವಕ್ಕೆ ಕಾರಣವಾಗಿದೆ. ಅದಕ್ಕೆ ಮನುಷ್ಯ ಮಾಡಬೇಕಾದುದು ಇಷ್ಟೇ! ತನ್ನ ಊರಿನ ಕೆರೆಗಳಲ್ಲಿ ಹೂಳು ಇದ್ದರೆ ಅದನ್ನು ಎತ್ತುವ ಕೆಲಸ ಮಾಡಬೇಕು.
ತಮ್ಮ ಊರಿನ ಕೆರೆಕಟ್ಟೆಗಳು ಆದಷ್ಟೂ ಹೆಚ್ಚು ನೀರನ್ನು ತುಂಬಿಕೊಂಡು ಅಂತರ್ಜಲ ಭರ್ತಿಯಾಗುವಂತೆ ಮಾಡಬೇಕು. ತನ್ನ ಮನೆಯ ಛಾವಣಿಯಿಂದ ಹರಿದುಹೋಗುವ ಮಳೆಯ ನೀರು ವ್ಯರ್ಥವಾಗಿ ಹರಿದುಹೋಗದಂತೆ ಅದು ನೆಲದಲ್ಲೇ ಇಂಗುವಂತೆಮಾಡಬೇಕು. ಹಾಗೆ ಮಾಡಿದ್ದೇ ಆದರೆ ಆ ನೀರು ಮೆಲ್ಲಗೆ ಭೂಮಿಯ ಅಂತರಾಳಕ್ಕೆ ಇಳಿದು ಅಕ್ಕಪಕ್ಕದ ತೊರೆಗಳಲ್ಲಿ ವರ್ಷವಿಡೀ ಹರಿಯುವಂತಾಗುತ್ತದೆ.
ಪ್ರಾಣಿಪಕ್ಷಿಗಳಿಗೆ, ಪಾಚಿ ಸಸ್ಯಗಳಿಗೆ, ಗಿಡಮರಗಳ ಸಮೇತ ಇಡೀ ಜೀವಲೋಕಕ್ಕೆ ಆಸರೆ ನೀಡಿದಂತಾಗುತ್ತದೆ. ಸಂತೋಷದ ಸಂಗತಿಯೆಂದರೆ- ಕೆಲವರು ಇದನ್ನು ಮಾಡಿ ಜನಕ್ಕೆ ಮಾದರಿಯಾಗಿದ್ದಾರೆ. ಇಂದು ಪರಿಸರವನ್ನು ಕೆಡಿಸುವದರಲ್ಲಿ ಪ್ಲಾಸ್ಟಿಕ್ಉತ್ಪನ್ನಗಳ ಬಳಕೆಯು ಪ್ರಧಾನಪಾತ್ರ ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲೂ ಪಾಲಿಥಿನ್ ಬ್ಯಾಗುಗಳ ಬಳಕೆ ಇನ್ನಿಲ್ಲದಷ್ಟು ಹಾನಿಗಳನ್ನು ತಂದಿವೆ. ತ್ಯಾಜ್ಯವಸ್ತುಗಳಲ್ಲಿ  ,  ,  ,  wasteಎಂದು ವಿಂಗಡಿಸುತ್ತಾರೆ.
ಅವುಗಳಲ್ಲಿ ಪಾಲಿಥಿನ್ ಬ್ಯಾಗು, ಹಳೆಯ ಪಿನ್ನುಗಳು, ಕತ್ತರಿಸಿ ಬಿಸಾಕಿದ ಉಗುರುಗಳು, ಪೆನ್‌ರಿಫಿಲ್ಲುಗಳು, ಒಡೆದ ಕಪ್ಪುಗಳು,ಗ್ಲಾಸುಗಳು, ನೀರುಬಾಟ್ಲುಗಳು, ಕೆಲಸಕ್ಕೆ ಬಾರದ ಸಿಡಿಗಳು, ಕಂಪ್ಯೂಟರಿನ ಕೀಬೋರ್ಡ್, ಒಡೆದುಹೋದ ಟಿವಿಸೆಟ್ಟುಗಳು, ಮಾನಿಟರುಗಳು ಇವೇ ಮೊದಲಾದವು ಅತ್ಯಂತ ಕೆಟ್ಟ ತ್ಯಾಜ್ಯ ವಸ್ತುಗಳೆನಿಸಿಕೊಂಡಿವೆ. ಇವನ್ನು ನಾಶ ಮಾಡುವುದು ಅಷ್ಟು ಸುಲಭವಲ್ಲ. ಉದಾಹರಣೆಗೆ- ಪಾಲಿಥಿನ್ ಬ್ಯಾಗುಗಳನ್ನೇ ತೆಗೆದುಕೊಳ್ಳೋಣ. ಇವನ್ನು ಎಸೆದರೆ ಗಾಳಿಯಲ್ಲಿ ಹಾರುತ್ತಾಎಲ್ಲೆಲ್ಲೋ ಬೀಳುತ್ತವೆ. ಸುಟ್ಟುಹಾಕಿದರೆ ವಿಷಪೂರಿತ ಗ್ಯಾಸ್ ಆಗಿ ಗಾಳಿಯಲ್ಲಿ ಸೇರಿ ನಮ್ಮ ಶ್ವಾಸಕೋಶದ ಮೂಲಕ ನಮ್ಮ ಶರೀರವನ್ನೇ ಹೊಕ್ಕು ಅನೇಕ ರೋಗಗಳಿಗೆ ಕಾರಣವಾಗುತ್ತವೆ.
ನೆಲದಲ್ಲಿ ಹೂತರೂ ಸಾವಿರಾರು ವರ್ಷ ಇರುವಂಥಾದ್ದು. ಇದಕ್ಕೆ ಏನು ಮಾಡಬೇಕು? ಪರಿಹಾರವೇ ಇಲ್ಲದ ಸಮಸ್ಯೆಗಳು ಇವು.ಇರುವುದರಲ್ಲೇ ಇವುಗಳ ಬಳಕೆಯನ್ನು ವರ್ಜಿಸಿ ಬಟ್ಟೆ ಅಥವಾ ಕಾಗದದ ಬ್ಯಾಗನ್ನು ಬಳಸಬೇಕು. ಹೀಗೆ ಪರಿಸರವನ್ನು ಮಲಿನ ಗೊಳಿಸುವುದರಲ್ಲಿ, ಕೆಡಿಸುವುದರಲ್ಲಿ ಸಾವಿರ ಸಾವಿರ ಸಂಗತಿಗಳಿವೆ. ಮನುಷ್ಯನ ವಿವೇಚನೆ, ವಿವೇಕವೊಂದೇ ಪರಿಸರವನ್ನು ಕಾಪಾಡಬೇಕಾಗಿದೆ.