ಮದಗಜಗಳ ಕಾಳಗದ ವಿವಿಧ ಮಜಲುಗಳು
ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್‌
ರಾಮಕೃಷ್ಣ ಹೆಗ್ಡೆ ವಿಧಾನ ಸೌಧಕ್ಕೆ ನಾಗರಿಕರ ಪ್ರವೇಶವನ್ನು ಮುಕ್ತಗೊಳಿಸಿದ್ದರು. ಅವರ ಸಂಪುಟದಲ್ಲಿ ಕಾನೂನು ಮತ್ತುಸಂಸದೀಯ ವ್ಯವಹಾರಗಳ ಹೊಣೆ ಹೊತ್ತ ಲಕ್ಷ್ಮೀಸಾಗರರಿಗೆ ನಾಗರಿಕ ಕುಂದುಕೊರತೆಗಳನ್ನು ಆಲಿಸುವ ಜವಾಬ್ದಾರಿಯನ್ನೂ ನೀಡಲಾಗಿತ್ತು.
ಸಾಗರ್ ಸರಳರೆಂದು ಹೆಸರು ವಾಸಿಯಾಗಿದ್ದರು. ಅವಿವಾಹಿತರಾದ ಅವರು ಬೆಂಗಳೂರಿನ ಗಾಂಧಿನಗರದಲ್ಲಿ ಆಸ್ಬೆಸ್ಟಾಸ್ ಛಾವಣಿಯ ಪುಟ್ಟ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಆದರೆ ಸೇದುತ್ತಿದ್ದುದು ವಿಲಾಯತಿಯ ಬ್ರಾಂಡ್ ಎಂದು ನಾನು ಗೇಲಿ ಮಾಡಿದ್ದನ್ನು ಓದಿ ಮುನಿಸಿಕೊಂಡಿದ್ದರು.
ಕುಂದುಕೊರತೆಗಳನ್ನು ಹೇಗೆ ನಿಭಾಯಿಸುತ್ತಿದ್ದರು ಎಂದು ತಿಳಿಯಲು ಒಂದೆರಡು ದಿನ ನಾನೂ ಅವರ ಕ್ಯಾಬಿನ್‌ನ ಬದಿಯಲ್ಲಿ ಕೂಡುತ್ತಿದ್ದೆ. ಯಾವುದೆಲ್ಲ ರೀತಿಯ ಅಹವಾಲುಗಳನ್ನು ಸಾರ್ವಜನಿಕರು ತರುತ್ತಾರೆ ಎನ್ನುವುದನ್ನು ಗಮನಿಸುತ್ತಿದ್ದೆ. ಎರಡನೆಯ ದಿನ ಸಂಜೆ ಒಬ್ಬ ವ್ಯಕ್ತಿ ಬಂದರು. ಅಷ್ಟು ಹೊತ್ತಿಗೆ ಸಾರ್ವಜನಿಕರ ಹರಿವು ಕಡಿಮೆಯಾಗಿತ್ತು. ಸಚಿವರಿಗೆ ಹತ್ತಿರವಾಗಿ ಕುಳಿತು ಮಾತಿಗೆ ಶುರುವಿಟ್ಟುಕೊಂಡರು. ನಾನಂದು ಬ್ರಿಗೇಡ್ ರಸ್ತೆಯ ರೋಮಿಯೋನಂತೆ ದಿರಿಸು ಧರಿಸಿದ್ದೆ.
ಯಾವೋನೊ ನಿರುದ್ಯೋಗಿ ಕೆಲಸ ಕೇಳಿಕೊಂಡು ಬಂದಿರಬಹುದೆಂದು ಊಹೆ ಮಾಡಿಕೊಂಡರೇನೊ. ಹಾಗಾಗಿ ನನ್ನ ಉಪಸ್ಥಿತಿಅವರ ಮಾತುಕತೆಗೆ ಎಚ್ಚರದ ಕಡಿವಾಣ ಹಾಕಲಿಲ್ಲ. ಯುರೋಪ್ ಪ್ರವಾಸ ಮಾಡಲು ಸಚಿವರಿಗೆ ಆಪ್ತವಾಗಿ ಸಲಹೆ ನೀಡಿದರು. ಪ್ಯಾರಿಸ್‌ನ ನೈಟ್ ಕ್ಲಬ್‌ಗಳ ಆಕರ್ಷಣೆಯನ್ನು ಒಡ್ಡಿದರು. ಸಾಗರ್ ಸಮ್ಮತಿಸಿದರೆ ಸಾಕು, ಉಳಿದೆಲ್ಲ ವ್ಯವಸ್ಥೆಯನ್ನು ತಾವೇ ಮಾಡುವುದಾಗಿ ತಮ್ಮ ಸೇವಾ ಮನೋಭಾವವನ್ನು ತೋರಿದರು.
ಸರಳ ಅವಿವಾಹಿತ ಸಾಗರ್‌ಗೆ ನಾನಿದ್ದುದು ಹಿಂಸೆಯಾಗುತ್ತಿತ್ತು. ಎಲ್ಲಿ ಅವರು ಆ ಸೇವಾಸಕ್ತನಿಗೆ ಕಣ್ಸನ್ನೆ ಮಾಡಿ ತೆಪ್ಪಗಿರಲು ಹೇಳಿಯಾರೊ ಎಂಬ ಎಚ್ಚರದಲ್ಲಿ ನಾನು ಅವರ ಮೇಲೆ ನಾಟಿದ್ದ ದೃಷ್ಟಿಯನ್ನು ತೆಗೆಯಲಿಲ್ಲ. ಅವರು ಮುಜುಗರದಿಂದ ತೊಪ್ಪೆಯಾಗುವ ಮುನ್ನ ನಾನು ಬಂದ ಕೆಲಸ ಮುಗಿಯಿತು, ಹೊರಡುತ್ತೇನೆ, ಮಿಸ್ಟರ್ ಲಕ್ಷ್ಮೀಸಾಗರ್ ಎಂದು ಹೇಳಿ ಹೊರಬಿದ್ದೆ. ಅವರ ಮೇಲೆ ನೈಟ್ ಕ್ಲಬ್ಬಿನ ಸಮ್ಮೋಹನಾಸ ಬೀರಿದ ವ್ಯಕ್ತಿ ಮುನಿಯಪ್ಪ ಎಂಬ ಬೆಂಗಳೂರು ನಗರ ಪಾಲಿಕೆಯ ಒಬ್ಬ ಅಧಿಕಾರಿ.ಐಎಎಸ್ ಅಲ್ಲ.
ಐಎಎಸ್ ಪ್ರಯತ್ನಿಸುವಂತೆ ನನ್ನ ಮೇಧಾವಿ ಅಣ್ಣ ಉತ್ತೇಜಿಸುತ್ತಿದ್ದ. ಡಿಗ್ರಿ ಪಾಸಾದ ನಂತರ, ನಿರುದ್ಯೋಗಿ ಎಂದು ಹೇಳಿಕೊಳ್ಳುವ ಬದಲು ಐಎಎಸ್‌ಗೆ ತಯಾರು  ನಡೆಸುತ್ತಿದ್ದೀನಿ ಎಂದು ಹೇಳಿಕೊಡಿzನೆಂಬ ಅನುಮಾನ ವಿದೆ. ವಿಜ್ಞಾನದ ವಿದ್ಯಾರ್ಥಿಯಾದ ನಾನು ಐಎಎಸ್ ಬರೆಯುವುದಕ್ಕೋಸ್ಕರ ಅರೆಮನಸ್ಸಿನಿಂದ ಇತಿಹಾಸವನ್ನು ಓದುತ್ತಿದ್ದೆ. ಅಣ್ಣ ಅವನ ಓದಿಗಾಗಿ ತರಿಸುತ್ತಿದ್ದ ಕಾಂಪಿಟಿಷನ್ ಮಾಸ್ಟರ್‌ನ ಮಾಸಲಾದ ಹಳೆಯ ಸಂಚಿಕೆಗಳನ್ನು ತಿರುವಿ ಹಾಕುತ್ತಿದ್ದೆ.
ಕಾಂಪಿಟಿಶನ್ ಸಕ್ಸಸ್ ರೆವ್ಯೂ ತರಿಸಿ ಓದುತ್ತಿದ್ದೆ. ಐಎಎಸ್‌ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದವರ ಸಂದರ್ಶನಗಳು ನನ್ನ ಆಸಕ್ತಿಯನ್ನು ಹಿಡಿದಿಡುತ್ತಿತ್ತು. ಪ್ರವೇಶ ಪರೀಕ್ಷೆಗಾಗಿ ಅವರು ತಯಾರಾಗುತ್ತಿದ್ದ ವಿಧಾನ, ಅವರು ಆಯ್ಕೆಮಾಡಿಕೊಳ್ಳುತ್ತಿದ್ದ ವಿಷಯಗಳನ್ನು ಕುತೂಹಲದಿಂದ ಒರೆಗೆ ಹಚ್ಚುತ್ತಿದ್ದೆ. ಅದಕ್ಕೂ ಮಿಗಿಲಾಗಿ ಅವರ ಧ್ಯೇಯೋದ್ದೇಶಗಳು, ಆದರ್ಶಗಳು ಮನಸ್ಸಿನಲ್ಲಿ ಅಚ್ಚೊತ್ತಿದ್ದವು.
ನಾನು ಹತ್ತೊಂಬತ್ತೂವರೆ ವರ್ಷಕ್ಕೇ ಪದವಿ ಪರೀಕ್ಷೆ ಪಾಸ್ ಮಾಡಿದ್ದ ಕಾರಣ, ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಆತುರವಿರಲಿಲ್ಲ. ಪತ್ರಿಕೋದ್ಯಮದ ಸೆಳೆತವಿತ್ತು. ಆದರೂ, ಪತ್ರಿಕಾರಂಗ ಪ್ರವೇಶ ಮಾಡುವುದು ತುಸು ತಡವಾಯಿತು. ಪ್ರವೇಶಿಸಿದ ಮೊದಲದರ ವಿದ್ಯಾವಂಚಿತರಾದ, ವಿನಯದ ಸೋಂಕಿಲ್ಲದ ಉನ್ನತ ಶಿಕ್ಷಣ ಸಚಿವರೊಬ್ಬರು ವಿಧಾನ ಸೌಧದ ತಮ್ಮ ಕಾರ್ಯಾಲಯದಲ್ಲಿ ನನ್ನ ಸಮ್ಮುಖದ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಕ್ಯಾಕರಿಸಿ ಉಗಿಯುವುದನ್ನು ಕಂಡೆ. ಅವರು ಉಗಿಸಿಕೊಂಡು ಸುಮ್ಮನಿದ್ದುದನ್ನೂ ಕಾಣದಿರಲಾಗಲಿಲ್ಲ.
ಐಎಎಸ್ ನಿನ್ನ ರಕ್ತದ ಗುಂಪಿಗೆ ಆಗಬರುವುದಿಲ್ಲ, ವಿಜಯೇಂದ್ರ ರಾಯ ಎಂದು ನನ್ನ ಅಂತರ್ಬೋಧೆಯೇ ಅಶರೀರವಾಣಿಯಾಗಿ ಕಿವಿಯಲ್ಲಿ ಉಲಿಯಿತು. ಮತ್ತೆಂದೂ ನಾನು ಯಾರಲ್ಲಿಯೂ ಐಎಎಸ್ ತಯಾರಿ ನಡೆಸುತ್ತಿದ್ದೇನೆಂದು ಹೇಳಲಿಲ್ಲ. ಬರುತ್ತಿದ್ದ ಅಲ್ಪ ವರಮಾನದಲ್ಲಿ ಐಶ್ವರ್ಯ ಲಕ್ಷ್ಮಿಯನ್ನು ಕಂಡುಕೊಂಡೆ. ಬರಸಿಡಿಲಿನಂತೆ ಬಡಿದ ಸಿಪಾಯಿ ದಂಗೆಯಿಂದ ಎಚ್ಚೆತ್ತಬ್ರಿಟಿಷರು ರಚಿಸಿದ್ದೇ ಚಕ್ರಾಧಿಪತ್ಯ ನಾಗರಿಕ ಸೇವೆ. ಭಾರತೀಯ ನಾಗರಿಕ ಸೇವೆ ಎಂದೂ ಕರೆಯಲಾಗುತ್ತಿತ್ತು. ಮೊದಲಿಗೆ ಸೇವೆಗೆ ನೇಮಕವಾಗುತ್ತಿದ್ದವರೆಲ್ಲರೂ ಆಂಗ್ಲರೇ.
ಜಮೀನನ್ನು ಗುತ್ತಿಗೆಗೆ ಕೊಡುವಂತೆ ಭರತ ಖಂಡವನ್ನು ತಮ್ಮ ದೇಶದ ಎಲೀಟ್ ವರ್ಗಕ್ಕೆ ಗುತ್ತಿಗೆಗೆ ಬಿಟ್ಟು, ರಾಣಿಗೂನಿಯಮಿತವಾಗಿ ಫಲವನ್ನರ್ಪಿಸುತ್ತಾ, ಗುತ್ತಿಗೆದಾರರೂ (ಸಂಬಳದ ಮೇಲೆ) ಮೊಣಕೈ ವರೆಗೂ ನೆಕ್ಕುವ ವ್ಯವಸ್ಥೆಯೇ ಐಸಿಎಸ್. ಖಂಡವಿದೆಕೋ, ಮಾಂಸವಿದೆಕೋ ಎಂದು ಗೇಯುತ್ತಾ ಹೈರಾಣಾದವರು ಭಾರತದ ಜನ ಸಾಮಾನ್ಯರು. ಲೇಖಕ ಆರ್ ಕೆ ನಾರಾಯಣ್‌ರ ‘ಲಾಲೆ ರೋಡ್’ನಲ್ಲಿ ಲಾಲೆ ಎಂಬ ಬ್ರಿಟಿಷ್ ಅಧಿಕಾರಿಯ ಕಿರು ಚಿತ್ರಣವಿದೆ.
ಸ್ಥಳೀಯರು (ಭಾರತೀಯರು) ಅವನ ಮುಂದೆ ಮಂಡಿಯೂರಿ ನಿಲ್ಲಬೇಕಿತ್ತಂತೆ. ಕಾಲಾಂತರದಲ್ಲಿ ಭಾರತೀಯರೂ ಐಸಿಎಸ್‌ಗೆ ನೇಮಕವಾದರು; ಬೇಗನೆ ಕಲಿತ ಬುದ್ಧಿ, ದೊರೆಗೆ ಗಾಳಿ ಬೀಸುವುದರಲ್ಲಿ ಪರಿಣತಿ ಪಡೆದು ಜನಸಾಮಾನ್ಯರನ್ನು ತುಚ್ಛವಾಗಿ ಕಂಡರು. ಅವರ ಉಳಿವಿಗೆ ಅದು ಅವಶ್ಯಕವಾಗಿತ್ತು. ಒಂದು ವ್ಯವಸ್ಥೆಯಲ್ಲಿ, ಪ್ರಭುಗಳ (ಸಂದರ್ಭಕ್ಕೆ ತಕ್ಕಂತೆ ಮಾಲೀಕರ ಅಂತಲೂ ಓದಿಕೊಳ್ಳಬಹುದು) ಮತ್ತು ಪ್ರಜೆಗಳ (ನೌಕರರ) ನಡುವೆ ಸಂಬಂಧ ಕಲ್ಪಿಸಬೇಕಾದವರೇ ಬಾಬುಗಳೆಂದು ಕರೆಸಿ ಕೊಳ್ಳುವ ಐಎಎಸ್‌ಗಳು (ಮ್ಯಾನೇಜರ್‌ಗಳು). ಅವರ ಮುಖ್ಯ ಉದ್ದೇಶವೇ ಪ್ರಭುಗಳನ್ನು ಸಂತೃಪ್ತಿಗೊಳಿಸುವುದು.
ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂಬಂತೆ ಚಿತ್ರ ಬಿಡಿಸುವುದು. ಪ್ರಜೆಗಳನ್ನು ಅಲ್ಪದರ ಸಂಭಾಳಿಸಿ ಅವರನ್ನು ತೆಪ್ಪಗಾಗಿಸುವುದು. ಸಮಸ್ಯೆಯನ್ನು ಬಗೆಹರಿಸುವುದು ಅವರ ಉದ್ದೇಶವಲ್ಲ, ಅತೃಪ್ತ ಜನಸಾಮಾನ್ಯರ ದೂರು ಮೇಲಿನವರಿಗೆ ಮುಟ್ಟದಂತೆ ಮ್ಯಾನೇಜ್ ಮಾಡುವುದು ಅವರ ಗುಟ್ಟು. ಜೀವನಪರ್ಯಂತ ಅದನ್ನು ಮಾಡಿಕೊಂಡೆ ತಮ್ಮ ಬುಡವನ್ನು ಭದ್ರ ಮಾಡಿಕೊಳ್ಳುವುದು ಐಸಿಎಸ್‌ಗಳ ಕುಲಕಸುಬಾಯಿತು. ಇದರಲ್ಲಿ, ನಾಗರಿಕ () ಆದದ್ದು ಏನೂ ಇಲ್ಲ, ಸೇವೆಯೂ () ಇಲ್ಲ, ಭಾರತೀಯ () ಆದದ್ದಂತೂ ಇಲ್ಲವೇ ಇಲ್ಲ ಎಂಬ ಹಳೆಯ ಉಕ್ತಿಯನ್ನು ಸ್ವಾತಂತ್ರ್ಯೋತ್ತರ ಪ್ರಧಾನಿ ಸ್ವಯಂ ನೆಹರೂ ಅವರೇ ಪುನರುಚ್ಚರಿಸಿದ್ದರು.
ಐಸಿಎಸ್ ರೂಪಾಂತರವಾಗಿ ಐಎಎಸ್ ಆಯಿತು. ಆದರೆ, ನಮ್ಮ ಬಾಬುಗಳು ರೂಪಾಂತರವಾಗಲೇ ಇಲ್ಲ. ಪ್ರಜೆಗಳಿಗೆ ಸ್ಪಂದಿಸ ಲಾಗದವರಾಗೇ ಮುಂದುವರಿದರು. ಇದಕ್ಕೆ ಯಾರಾದರೂ ಅಪವಾದವೆಂಬಂತ್ತಿದ್ದರೆ ಅವರು ಅಪವಾದ ವಷ್ಟೆ. ಬಹುತೇಕ ಐಎಎಸ್‌ಗಳದ್ದು ಇಂದಿಗೂ ಬ್ರಿಟಿಷರ ಆತ್ಮವೇ. ಪ್ರೌಢಾವಸ್ಥೆಗೆ ಬಂದವರಿಗೆ ಹೇಗೆ ನೆಲ ಕಾಣುವುದಿಲ್ಲವೋ, ಹಾಗೆಯೇ ಐಎಎಸ್ ಫಲಿತಾಂಶ ಪ್ರಕಟವಾದ ದಿನವೇ ಪಾಸಾದವುಗಳ ಮುಂದಿನ ನೆಲ ಕಾಣೆಯಾಗುತ್ತದೆ. ಇದನ್ನು ಮೆಗಲೋಮೇನಿಯಾ ಎಂದುಕರೆಯಲಾಗುತ್ತದೆ.
ಇತ್ತೀಚಿನ, ವೈಯಕ್ತಿಕ ಉದಾಹರಣೆಗಳನ್ನು ಕೊಡುತ್ತೇನೆ. ಮೊನ್ನೆ ವರ್ಗಾವಣೆಗೊಂಡ ಶಿಲ್ಪಾ ನಾಗ್ ಈ ಮುನ್ನವೂ ಮೈಸೂರು ನಗರಪಾಲಿಕೆಯ ಆಯುಕ್ತರಾಗಿ ನೇಮಕಗೊಂಡಾಗ ಸ್ವಚ್ಛತಾ ಆಂದೋಲನವೊಂದರ ರೂಪುರೇಷೆಯನ್ನು ಮೇಲ್ ಮಾಡಿದ್ದೆ. ಅದನ್ನು ಪರಿಗಣಿಸುವುದಾಗಿ ವಾಟ್ಸಪ್ ಸಂದೇಶ ನೀಡಿ ರಜೆ ಹೋದರು. ತಾವು ಅಲಭ್ಯ ಎಂಬ ಒಂದು ಸಣ್ಣ ಮಾತಿಲ್ಲ.
ಇತ್ತೀಚೆಗೆ ಅವರು ಹಿಂತಿರುಗಿದಾಗ, ಅವರ ಹಿಂದಿನ ಸಂದೇಶವನ್ನು ಲಗತ್ತಿಸಿ ಮತ್ತೆ ಸಂಪರ್ಕಿಸಿದೆ. ಉತ್ತರ ಬರಲೇ ಇಲ್ಲ. ಆಕೆಯನ್ನೂ ಸೇರಿದಂತೆ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಹೈರಾಣಾಗಿಸಿರುವ ಕೋವಿಡ್ ಪಿಡುಗನ್ನು ನಿಯಂತ್ರಣ ಗೊಳಿಸುವ ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸುವುದು ನನ್ನ ಉದ್ದೇಶವಾಗಿತ್ತು. ಕೊನೆಗೆ, ಆಕೆಯನ್ನಿನ್ನು ಸಂಪರ್ಕಿಸ ಬಾರದೆಂದು ನಿರ್ಧರಿಸಿ, ಥ್ಯಾಂಕ್ ಯೂ ಎಂದಷ್ಟೆ ಮೆಸೇಜ್ ಮಾಡಿದೆ. ಆಗ ಉತ್ತರಿಸಿದರು.
ಅಂದೇ ರಾತ್ರಿ ಫೋನ್ ಮಾಡಿ ನನ್ನ ಬಗ್ಗೆ ಮತ್ತು ನನ್ನ ಕಾರ್ಯಕ್ರಮದ ಬಗ್ಗೆ ಆಲಿಸಿದರು. ಅವರು ಕಿವಿಗೊಟ್ಟದ್ದು ಕೇಳಿ ನನಗೇ ಆಶ್ಚರ್ಯ. ನನ್ನ ಯೋಜನೆಯನ್ನು ಮೌಖಿಕವಾಗಿ ಒಪ್ಪಿಕೊಂಡ ಅವರು ವಿಶ್ವ ಪರಿಸರ ದಿನದಂದು ಅದನ್ನು ಸಾಂಕೇತಿಕವಾಗಿಯಾದರೂ ಉದ್ಘಾಟಿಸುವುದಾಗಿ ಹೇಳಿದರು. ಏನೇನು ಮಾಡಬಹುದೆಂಬ ವಿವರಗಳನ್ನೊಳಗೊಂಡ ಮೇಲನ್ನು ಮರುದಿನ ವೇ ಕಳಿಸಿದೆ. ಅದನ್ನು ಅಧಿಕೃತಗೊಳಿಸಲು ಅವರಿಗೆ ಬೆನ್ನಟ್ಟಿದೆ.
ಸಾಲಗಾರನಂತೆ ಪದೇ ಪದೇ ನೆನಪು ಮಾಡಿದೆ. ನಾನು ನಡೆಸಿದ ಸಿದ್ಧತೆಗಳ ಬಗ್ಗೆ ಹೇಳಿದೆ. ಊಹುಂ, ಶಿಲೆಯಾಗಿಹೋಗಿದ್ದರು.ಇನ್ನು ಅಭಿರಾಮ್ ಶಂಕರ್ ಎಂಬ ಮುಂಚಿನ ಡಿಸಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ದುಂಬಾಲು ಬಿದ್ದು, ಒಮ್ಮೆ ಕೊನೆಗೂ ಸಂದರ್ಶನ ನೀಡಿ ಅಂದು ಕಚೇರಿಯಿಂದ ನಾಪತ್ತೆಯಾಗಿದ್ದರು. ಆ ಕುರಿತು, ಕ್ಷಮೆಯ ಮಾತು ಬಿಡಿ, ಸಂದೇಶವೂ ಇಲ್ಲ. ಇಂಥ ದುರ್ವರ್ತನೆಯನ್ನು ತಡೆದುಕೊಳ್ಳದ ನಾನು ಮತ್ತೊಂದಿಷ್ಟು ಅವಧಿ ಅವರನ್ನು ಭೇಟಿ ಮಾಡಲೆತ್ನಿಸಿ ಕೊನೆಗೆ ನಿಮ್ಮನ್ನು ಸಂದರ್ಶನಕ್ಕೆ ಮತ್ತೆ ಯತ್ನಿಸಿದರೆ ನನ್ನ ಗೌರವಕ್ಕೆ ಕಡಿಮೆ, ಅದಕ್ಕೆ ನಾನು ಚ್ಯುತಿ ತಂದುಕೊಳ್ಳುವುದಿಲ್ಲ ಎಂದು ಅಂತಿಮ ಸಂದೇಶ ಕಳಿಸಿದೆ.
ವಿವಾದವೆಂಬ ಸಿಂಧೂ ನದಿಯಲ್ಲಿ ಈಗಷ್ಟೆ ಮಿಂದೆದ್ದ ಸಿಂಧೂರಿಯೇ ವಾಸಿ, ಆಕೆಯನ್ನು ಭೇಟಿ ಮಾಡುವ ಅವಕಾಶವನ್ನು ಕೋರಿ ಕಳೆದ ಅಕ್ಟೊಬರ್ ಒಂದರಂದು ಕಳಿಸಿದ ಸಂದೇಶಕ್ಕೆ ಉತ್ತರಿಸುವ ಗೋಜಿಗೇ ಹೋಗಲಿಲ್ಲ, ಹಾಗಾಗಿ, ನಗರಕ್ಕಾಗಿ ನನ್ನ ಯೋಜನೆಯನ್ನು ಅವರು ಕೈಗೆತ್ತಿಕೊಳ್ಳುತ್ತಾರೆಂಬ ಭರವಸೆಯನ್ನೇ ಎಂದೂ ಹುಟ್ಟಿಸಲಿಲ್ಲ. ಮೊನ್ನೆ ಸುದ್ದಿಯಾದ ಇಬ್ಬರೂ ಮಹಿಳಾ ಐಎಎಸ್‌ಗಳು ಕೋವಿಡ್ ನಿಯಂತ್ರಣದಲ್ಲಿ ಮುಳುಗಿರಬೇಕೆಂದುಕೊಂಡಿದ್ದೆ.
ಅವರು ಸುದ್ದಿಯಾದಾಗಷ್ಟೇ ಅವರು ನಿರತರಾಗಿದ್ದುದು ಜಟಾಪಟಿಯಲ್ಲಿ ಎಂದು ಗೊತ್ತಾಗಿದ್ದು. ರಂಪ ಮಾಡಿಕೊಂಡು ಸ್ಟೇಷನ್ನಿಗೆ ಹೋಗಿ, ರಾಜಿಗೆ ಒಪ್ಪದೆ ಅಲ್ಲಿಯೂ ಕಿತ್ತಾಟವನ್ನು ಮುಂದುವರಿಸುವರನ್ನು ಕಂಡು ರೋಸೆತ್ತು ಹೋದ ಇನ್ಸ್‌ಪೆಕ್ಟರ್ ಅವರಿಬ್ಬರನ್ನೂ ಅರ್ಧ ದಿನ ಲಾಕಪ್ಪಿನಲ್ಲಿ ಹಾಕು ಎನ್ನುವ ಪರಿಹಾರದಂತೆ ಸರಕಾರ ವರ್ಗಾವಣೆಯ ಮೂಲಕ ಇಬ್ಬರೂ ಮಹಿಳಾಮಣಿಗಳನ್ನು ಬೇರ್ಪಡಿಸಿದೆ.
ಸಿಂಧೂರಿ ವರ್ಗವಾದದ್ದನ್ನು ಸಂಭ್ರಮಿಸುತ್ತಿರುವ ಪ್ರತಾಪ ಸಿಂಹ ಮತ್ತು ಈ ಮುನ್ನ ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ. ಮಹೇಶರ ಅಹಮಿಕೆ ಈ ಈರ್ವ ಶಿಕ್ಷಿತ ಮಹಿಳಾಮಣಿಯರ ಅಹಮಿಕೆಯನ್ನು ಮೀರಿಸುತ್ತದೆ. ಅದರ ನೇರ ಅನುಭವ ನನಗಾಗಿದೆ. ನಾನೆಷ್ಟೇ ಅವರನ್ನು ವಿರೋಧ ಮಾಡಿದ್ದರೂ, ತಾವು ರತ್ನಗಂಬಳಿಯ ಮೇಲೆ ಚಕ್ಕಂಬಕ್ಕಳ ಕೂತು ನನ್ನನ್ನು ತಮ್ಮೆದುರಿನ ಸೋಫಾ ಮೇಲೆ ಆಸೀನನ್ನಾಗಿಸಿದ ರಾಜ ವಂಶಸ್ಥ ಮತ್ತು ಮಾಜಿ ಸಂಸದ, ದಿವಂಗತ ಶ್ರೀಕಂಠ ದತ್ತ ಒಡೆಯರ್ ಮತ್ತೆ ನೆನಪಾ ಗುತ್ತಾರೆ. ಅಂಥ ಮರ್ಯಾದೆ ನಾನೆಲ್ಲೂ ಅಪೇಕ್ಷಿಸಲಾರೆ. ಅದು ಉಚಿತವೂ ಅಲ್ಲ.
ವ್ಯಾಯಾಮ ಮಾತ್ರದಿಂದ ತೂಕ ಕಡಿಮೆ ಮಾಡಿಕೊಳ್ಳಲಾಗದ ಸ್ಥೂಲಕಾಯರನ್ನು ಲೈಪೋಸಕ್ಷನ್ ಎಂಬ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಹೆಚ್ಚಿನ ಮೇದಸ್ಸನ್ನು ಕರಗಿಸಲಾಗುತ್ತದೆ. ಈ ಲೇಖನದಲ್ಲಿ ಪ್ರಸ್ತಾಪಿಸಲಾದ ಕೆಲವು ಮದಗಜಗಳಿಗೆ ಆ ಚಿಕಿತ್ಸೆ ಒದಗದು. ಒಂದು ವೇಳೆ, ಒಳಪಡಿಸಿದರೆ ಕೊಬ್ಬು ಪೂರಾ ಕರಗಿ ವ್ಯಕ್ತಿಯೇ ಪತ್ತೆ ಇರುವುದಿಲ್ಲ. ಪ್ರಧಾನ ಸೇವಕನೆಂದು ಕರೆದು ಕೊಂಡು, ನರನಾರಾಯಣರ ಪ್ರತಿನಿಧಿಗಳ ಆಲಯವಾದ ಸಂಸತ್ತಿಗೆ ಮೈಬಗ್ಗಿ ನಮಸ್ಕರಿಸಿದ ವಿನಯ, ಅವನ ಪ್ರಾಮುಖ್ಯತೆ ಯನ್ನು ಗುರುತಿಸುವಲ್ಲಿ ಕಸಗುಡಿಸುವ ದಲಿತನೋರ್ವನ ಪಾದಗಳನ್ನು ತೊಳೆದು ತನ್ನ ಸರಳತೆಯನ್ನು ಮನೆ ಮಾತಾಗಿಸಿದ ನರೇಂದ್ರ ಮೋದಿ ಇವರೆಲ್ಲರಿಗೆ ಆದರ್ಶಪ್ರಾಯರಾದರೆ, ಲೈಪೋಸಕ್ಷನ್ನಿನ ಅವಶ್ಯಕತೆ ಇವರಿಗೆ ಬೀಳಲಾರದು.
ಕೊನೆಗೆ, ಸಿಂಧೂರಿಯ ಪಾತ್ರದ ಬಗ್ಗೆ ನನಗೆ ನನ್ನದೇ ಆದ ಸಕಾರಣ ಸಂಶಯಗಳಿವೆ. ಆಕೆ ಸಂತ್ರಸ್ತೆಯಂತೂ ಅಲ್ಲ. ಜೆಸಿಬಿ ಬಳಸಿ ಆಕೆಯನ್ನು ದೂರ ಬಿಸುಟಿದ್ದರ ಹಿಂದಿರುವ ಸ್ಥಳೀಯ ದುಷ್ಟ ಶಕ್ತಿಗಳಿಗೆ ಚಾಮರಾಜನಗರದಿಂದಲೂ ಬೆಂಬಲ ಬಂದಿರುವ ಸಾಧ್ಯತೆ ಇದ್ದೇ ಇದೆ. ಈ ಇಡೀ ಪ್ರಸಂಗದಲ್ಲಿ ಯಾವ ಪಾತ್ರಧಾರಿಯೂ ಸಂತನ(ಳ)ಲ್ಲ. ಹಾಗಿದ್ದೂ, ಸರಕಾರ ಭೂಗಳ್ಳರ ರಕ್ಷಣೆಗೆ ನಿಂತದ್ದು ಅಕ್ಷಮ್ಯ. ಕೋವಿಡ್ ಕಾಲದಲ್ಲಿ ಇವರೆಲ್ಲರ ಗಮನ ಬೇರೆಡೆ ಹರಿದದ್ದು ಮತ್ತಷ್ಟು ಅಕ್ಷಮ್ಯ. ಎಂಭತ್ತರ ದಶಕದಲ್ಲಿ ಜನಪ್ರಿಯಗೊಂಡ ಟಿವಿ ಸರಣಿ ,   ನೀವು ವೀಕ್ಷಿಸಿದ್ದಲ್ಲಿ ಐಎಎಸ್ -ಟಿಂಗರ, ಲಫಂಗ ನೇತಾರರ ಕಳ್ಳಾಟಗಳು ಅರ್ಥವಾಗಲು ಸಹಾಯಕ.