ಸರಕಾರ ಜೀವಂತವಾಗಿದ್ದರೆ ಕೋರ್ಟುಗಳೇಕೆ ಪ್ರಶ್ನಿಸುತ್ತಿದ್ದವು ?
ಪ್ರಚಲಿತ
ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ
ಸರಕಾರವೊಂದು ಜೀವಂತವಾಗಿದ್ದರೆ, ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ವಿರೋಧ ಪಕ್ಷದ ನಾಯಕರು ಕೇಳಿದ ಮಾಹಿತಿಯನ್ನು ನೀಡಬೇಕು. ಜನ ಕೊಟ್ಟ ಅಧಿಕಾರವನ್ನು ಕಲ್ಯಾಣ ಕಾರ್ಯಕ್ರಮಗಳ ಮೂಲಕ, ಜನಭಾಗ್ಯ ಯೋಜನೆ ಗಳ ಮೂಲಕ ಜನರಿಗೇ ಹಿಂದಿರುಗಿಸುವ ಕಾಳಜಿ ಹೊಂದಿರುವ ಸರಕಾರಕ್ಕೆ ಮಾತ್ರ ವಿರೋಧ ಪಕ್ಷದ ನಾಯಕರು ಕೇಳಿದ ಮಾಹಿತಿಯನ್ನು ಒದಗಿಸುವ ಹೊಣೆಗಾರಿಕೆ ಇರುತ್ತದೆ.
ಜನ ಕೊಟ್ಟ ಅಧಿಕಾರವನ್ನು ತಮ್ಮ ಹಿಡೆನ್ ಅಜೆಂಡಾಗಳ ಜಾರಿಗೆ, ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುವ ಸರಕಾರಕ್ಕೆ ವಿರೋಧ ಪಕ್ಷದನಾಯಕರು ಕೇಳುವ ಮಾಹಿತಿ ಕೊಡಲು ಭಯ ಇರುತ್ತದೆ. ಈಗ ಆಗಿರುವುದೂ ಇದೆ. ನಾನು ಮೇ17ರಂದು ಒಂದು ಪತ್ರ ಬರೆದಿದ್ದೆ. ಕರೋನಾ ಸಾಂಕ್ರಾಮಿಕವನ್ನು ನಿರ್ವಹಿಸಲು ಸರಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಝೂಮ್ತಂತ್ರಾಂಶದ ಮೂಲಕ ಮಾಹಿತಿ ಪಡೆಯಲು ಉದ್ದೇಶಿಸಿ ರಾಜ್ಯದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಬಿಬಿಎಂಪಿ ಆಯುಕ್ತರು ಮತ್ತು ನಗರ ಪಾಲಿಕೆಗಳ ಆಯುಕ್ತರುಗಳಿಗೆ ಬರೆದಿದ್ದ ಪತ್ರ ಅದಾಗಿತ್ತು.
ಝೂಮ್ ತಂತ್ರಾಂಶದ ಮೂಲಕ ಹಾಜರಾಗಿ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೂ ಕೂಡ ಪತ್ರ ಬರೆದಿದ್ದೆ. ಮೂರು ದಿನಗಳ ನಂತರ ನನಗೆ ಆಶ್ಚರ್ಯದ ಉತ್ತರ ಸಿಕ್ಕಿತು. ಮುಖ್ಯ ಕಾರ್ಯದರ್ಶಿಗಳು ನನಗೆ ಪತ್ರ ಬರೆದು, ವಿರೋಧ ಪಕ್ಷದ ನಾಯಕರು ಸಭೆ ನಡೆಸಬಾರದು, ಬೇಕಿದ್ದರೆ ಪತ್ರ ಬರೆದು ಮಾಹಿತಿ ಪಡೆಯಬಹುದಾಗಿದೆ ಎಂದು ಮುಖ್ಯ ಮಂತ್ರಿಗಳು ಅನುಮೋದನೆ ಮಾಡಿದ್ದಾರೆ ಎಂದು ನನಗೆ ತಿಳಿಸಿದ್ದಾರೆ.
ನಾನು ಈ ಪತ್ರ ಬರೆಯುವುದಕ್ಕೂ ಒಂದು ಕಾರಣ ಇತ್ತು.21ತಿಂಗಳಲ್ಲಿ ಸರಕಾರಕ್ಕೆ ಹಲವು ಪತ್ರಗಳನ್ನು ಬರೆದಿದ್ದೇನೆ.ಕೋವಿಡ್ ಸಂದರ್ಭದಲ್ಲೂ ಸುಮಾರು15ಕ್ಕೂ ಹೆಚ್ಚು ಪತ್ರಗಳನ್ನು ಬರೆದು ಹಲವು ಮಾಹಿತಿಗಳನ್ನು ಕೇಳಿದ್ದೆ. ಇವುಗಳಿಗೆ ಇದುವರೆಗೂ ಸಹ ಒಂದು ಅಕ್ಷರದ ಉತ್ತರವೂ ಬಂದಿಲ್ಲ. ಸರಕಾರವೊಂದು ಜೀವಂತವಾಗಿದ್ದರೆ, ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ವಿರೋಧ ಪಕ್ಷದ ನಾಯಕರು ಪತ್ರ ಬರೆದ ಕೂಡಲೇ ಮಾಹಿತಿ ನೀಡುತ್ತದೆ ಎನ್ನುವುದು ನನ್ನ ನಂಬಿಕೆ.
ಪಂಚೇಂದ್ರಿಯಗಳೆ ಇಂಗಿ ಹೋಗಿ, ಭ್ರಷ್ಟಾಚಾರದಲ್ಲಿ ಮುಳುಗಿರುವ, ಚೈತನ್ಯ ಕಳೆದುಕೊಂಡಿರುವ ಸರಕಾರದಿಂದ ಉತ್ತರಪಡೆಯುವುದಾದರೂ ಹೇಗೆ ಎಂಬ ಪರಿಸ್ಥಿತಿ ಈಗ ಉದ್ಭವವಾಗಿದೆ. ನನಗೆ ಆಶ್ಚರ್ಯ ತರಿಸಿದ್ದು, ಸರಕಾರ ನಾನು ಪತ್ರ ಬರೆದಸಂದರ್ಭ ಮತ್ತು ಪತ್ರದಲಿದ್ದ ಸಂಗತಿಗಳನ್ನು ಈ ಪ್ರಮಾಣಕ್ಕೆ ನಿರ್ಲಕ್ಷಿಸಿದ್ದು. ಕರೋನಾ ಎರಡನೇ ಅಲೆ ಪ್ರಾರಂಭವಾದಾಗಿ ನಿಂದ ಆಸ್ಪತ್ರೆ ಬೆಡ್‌ಗಳು, ವೆಂಟಿಲೇಟರ್, ಆಕ್ಸಿಜನ್ನು, ಅಗತ್ಯ ಔಷಧಗಳು, ಆಂಬ್ಯುಲನ್ಸ್‌ಗಳು, ವೈದ್ಯಕೀಯ ಸಿಬ್ಬಂದಿ, ವ್ಯಾಕ್ಸಿನ್ ಮುಂತಾದವುಗಳು ಸಮರ್ಪಕವಾಗಿ ಸಿಗದೆ ಜನ ಅನಾಥರಂತೆ ಬೀದಿ ಬೀದಿಗಳಲ್ಲಿ ಮರಣ ಹೊಂದಿದರು.
ಕಡೆಗೆ ಕೋವಿಡ್ ಪರಿಸ್ಥಿತಿ ನಿಯಂತ್ರಿಸುವಲ್ಲಿ ಕೇಂದ್ರ, ರಾಜ್ಯ ಸರಕಾರಗಳು ವಿ-ಲವಾಗಿದ್ದನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ಕೂಡ ಗಮನಿಸಿವೆ. ಮಾತ್ರವಲ್ಲ. ಸರಕಾರಗಳಿಗೆ ಕಿವಿ ಹಿಂಡಿವೆ. ಲಸಿಕೆ ವಿತರಣೆಯ ವಿಚಾರದಲ್ಲಿ ಸರಕಾರದ ಅನಾಗರಿಕ ಬೇಜವಾಬ್ದಾರಿ ನ್ಯಾಯಾಲಯಗಳಿಗೂ ಸಿಟ್ಟು ತರಿಸಿತ್ತು. ಸುಪ್ರೀಂಕೋರ್ಟ್ ಪರಿಣಾಮಕಾರಿ ವಿರೋಧಪಕ್ಷದಂತೆ ಸಂಪೂರ್ಣ ಜನಪರವಾಗಿ ನಿಂತು ತೀರ್ಪುಗಳನ್ನು ನೀಡಿದ್ದು ಮಾತ್ರವಲ್ಲ, ನಿರಂತರ ನಿಗಾ ಇಡುವ ಮೂಲಕ ಸರಕಾರದ ಕಿವಿ ಹಿಂಡುತ್ತಲೇ ಹೋಯಿತು.
ಸರಕಾರ ಜೀವಂತವಾಗಿದ್ದರೆ ಕೋರ್ಟುಗಳೇಕೆ ಇಷ್ಟು ನಿಷ್ಠುರವಾಗಿ ಪ್ರಶ್ನಿಸುತ್ತಿದ್ದವು? ಈ ಸಂಕಷ್ಟದ ಕಾಲದಲ್ಲಿ ವಿರೋಧ ಪಕ್ಷವಾಗಿ ನಾವೂ ಸಹ ಜನರ ಜತೆ ಅಚಲವಾಗಿ ನಿಂತೆವು. ಕರೋನಾ ವಿಕೋಪಕ್ಕೆ ಹೋಗಿದ್ದ ಸಂದರ್ಭದಲ್ಲೂ ನಮ್ಮ ವಿಧಾನಸೌಧದ ಕಚೇರಿ ಮತ್ತು ಗೃಹ ಕಚೇರಿ ಒಂದು ದಿನವೂ ಲಾಕ್ ಆಗದೆ ನಿತ್ಯ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಶಾಸಕರು, ಮಾಜಿ ಶಾಸಕರುಗಳ ಜತೆ ಹಲವು ಸುತ್ತಿನ ಝೂಮ್ ಸಭೆಗಳನ್ನು ನಡೆಸಿ ಜನರ ಜತೆ ನಿಂತು ಕೆಲಸ ಮಾಡಲು ನಿರಂತರ ಸೂಚನೆಗಳನ್ನು ನೀಡುತ್ತಲೇ ಬರುತ್ತಿದ್ದೇನೆ.
ಇದರ ಭಾಗವಾಗಿಯೇ ರಾಜ್ಯದ ಆರೋಗ್ಯ, ಆರ್ಥಿಕ ಮತ್ತು ಕೃಷಿ ವಲಯಗಳಲ್ಲಿ ಏನಾಗುತ್ತಿದೆ? ಎಂದು ತಿಳಿದುಕೊಂಡುಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಬೇಕಾದುದು, ಸಲಹೆಗಳನ್ನು ನೀಡಬೇಕಾದುದು ವಿರೋಧ ಪಕ್ಷದ ನಾಯಕನಶಾಸನಾತ್ಮಕ ಅಧಿಕಾರ. ವಿಳಂಬ ಮಾಡದೆ ವಿರೋಧ ಪಕ್ಷದ ನಾಯಕರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಬೇಕಾಗಿರು ವುದು ಸರಕಾರದ ಸಂವಿಧಾನಾತ್ಮಕ ಜವಾಬ್ದಾರಿ. ಆದರೆ ಈ ಜವಾಬ್ದಾರಿಗಳನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದ್ದನ್ನು ಹತ್ತಿರದಿಂದ ಅನುಭವಿಸಿದ್ದ ಕಾರಣಕ್ಕೇ ನಾನು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಮುಂದಾಗಿದ್ದು.
ಆದರೆ, ಸರಕಾರ ಉದ್ದೇಶ ಪೂರ್ವಕವಾಗಿ ಮಾಹಿತಿ ಕೊಡದೆ ಸಂವಿಧಾನ ವಿರೋಧಿಯಾಗಿ ವರ್ತಿಸಿದ್ದರಿಂದ ಇದು ಹಕ್ಕು ಚ್ಯುತಿಯನ್ನುಂಟು ಮಾಡಿದೆ ಎಂಬ ನಿಲುವಿಗೆ ನಾನು ಬರುವಂತಾಗಿದೆ. ಈ ಕಾರಣಕ್ಕೆ ಸ್ಪೀಕರ್ ಅವರಿಗೂ ಪತ್ರ ಬರೆದು ನಾನು ಈ ಸಂಗತಿಗಳನ್ನೆ ತಿಳಿಸಿದ್ದೇನೆ. ನನಗೆ ಅಧಿಕಾರಿಗಳ ಕಾರ್ಯವೈಖರಿಗಳ ಕುರಿತು ಪರಿಶೀಲನೆ ನಡೆಸುವ, ನಿರ್ದೇಶನಗಳನ್ನು ನೀಡುವ ಅಧಿಕಾರ ವ್ಯಾಪ್ತಿ ಇಲ್ಲ ಎನ್ನುವ ಸಾಂವಿಧಾನಿಕ ಅರಿವು ಇದೆ.
ನನ್ನ ಉದ್ದೇಶವೂ ಅದಾಗಿರಲಿಲ್ಲ. ಕೆಲವು ಮಾಹಿತಿ ಪಡೆಯುವುದಷ್ಟೇ ನನ್ನ ಉದ್ದೇಶ. ಮಾಹಿತಿ ನೀಡಬೇಕಾದ ನಮೂನೆ ಯನ್ನು ಸಿದ್ಧಪಡಿಸಿ ಅಧಿಕಾರಿಗಳಿಗೆ ನೀಡಲಾಗಿತ್ತು. ಆದರೆ, ಆ ನಮೂನೆಯನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡು ಭರ್ತಿ ಮಾಡುವಷ್ಟು ತಿಳಿವಳಿಕೆ ಇರುವವರೂ ಕಡಿಮೆ ಇzರೆ ಎನ್ನುವುದೂ ನನ್ನ ಗಮನಕ್ಕೆ ಬಂದಿದೆ. ಕಳೆದ ಎರಡು ವರ್ಷಗಳಿಂದ ನಾನು ಬರೆದ ಪತ್ರದಲ್ಲಿ ಕೇಳಿದ ಮಾಹಿತಿಯೊಂದಾದರೆ ಅಧಿಕಾರಿಗಳು ಕೊಟ್ಟ ಮಾಹಿತಿ ಬೇರೆಯೇ ಇರುತ್ತಿತ್ತು. ಈ ಗೊಂದಲ ಗಳಿಗೆ ಅವಕಾಶ ನೀಡಬಾರದೆಂಬ ಉದ್ದೇಶದಿಂದಲೇ ನೇರವಾಗಿ ಮುಖತಃ ಮಾಹಿತಿ ಪಡೆಯಲು ಉದ್ದೇಶಿಸಿದ್ದೆ. ಅದಕ್ಕಾಗಿ ಒಂದು ಜಿಲ್ಲೆಗೆ ಅರ್ಧ ಗಂಟೆಯಿಂದ ಒಂದು ಗಂಟೆಯಷ್ಟು ಮಾತ್ರ ಕಾಲ ನಿಗದಿಪಡಿಸಿದ್ದೆ.
ಖುದ್ದು ಮಾಹಿತಿ ಪಡೆಯುವ ನನ್ನ ಹಕ್ಕನ್ನು ಸರಕಾರವು ನಿರಾಕರಿಸಿರುವುದರಿಂದ ಅದು ಹಕ್ಕುಚ್ಯುತಿ ಆಗುವುದಿಲ್ಲವೆ? ಜೊತೆಗೆ ನಾನು ಕಳುಹಿಸಿದ್ದ ನಮೂನೆಯಲ್ಲಿ ಕೇವಲ ಮೂರು ಜಿಗಳ ಜಿಲ್ಲಾಧಿಕಾರಿಗಳು ಮಾತ್ರ ಮಾಹಿತಿ ಕಳುಹಿಸಿದ್ದಾ. ಉಳಿದವರು ಮಾಹಿತಿ ನೀಡಿಲ್ಲ. ಇದು ಬೇಜವಾಬ್ಧಾರಿ ವರ್ತನೆ ಅಲ್ಲವೇ? ಅವರ ವರ್ತನೆಗೆ ನಿಯಮಾನುಸಾರ ಕ್ರಮ ಆಗಬೇಕಲ್ಲವೇ ?ಇಲ್ಲಿ ಮತ್ತೊಂದು ಸಂಗತಿಯನ್ನು ಸ್ಪಷ್ಟಪಡಿಸುತ್ತೇನೆ. ಮುಖ್ಯ ಕಾರ್ಯದರ್ಶಿಗಳು ನನಗೆ ಕಳಿಸಿರುವ ಪತ್ರದಲ್ಲಿ2009ರ ಸುತ್ತೋಲೆಯನ್ನು ನಮೂದಿಸಿದ್ದಾರೆ.
2009ರ ಸುತ್ತೋಲೆಯನ್ನು2016ರಲ್ಲಿ ಪುನರುಚ್ಛರಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಹಿಂದೆ ಸುತ್ತೋಲೆಗಳನ್ನುಹೊರಡಿಸಿದಾಗ ಸರಕಾರಕ್ಕೆ ತಂತ್ರಜ್ಞಾನ ಸಂಬಂಧಿ ಅನುಕೂಲಗಳಿರಲಿಲ್ಲ. ಹಾಗಾಗಿ ಸಭೆ ಕರೆದು ಮಾಹಿತಿ ಪಡೆಯಬೇಕಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಝೂಮ, ಗೂಗಲ್ ಮುಂತಾದ ಅಪ್ಲಿಕೇಷನ್ನುಗಳ ಮೂಲಕ ಮಾಹಿತಿ ಪಡೆಯಬಹು ದಾಗಿದೆ. ಇದಕ್ಕಾಗಿ ಸರಕಾರವೇನೂ ವ್ಯವಸ್ಥೆ ಮಾಡಬೇಕಾಗಿರಲಿಲ್ಲ. ಸರಕಾರ ಇದಿಷ್ಟನ್ನೂ ಅರ್ಥಮಾಡಿಕೊಳ್ಳದ ಸ್ಥಿತಿಗೆ ತಲುಪಿದೆ.
ಬಿಜೆಪಿಗೆ ಒಂದು ರೀತಿಯ ಜಾಣ ಮರೆವಿನ ಸಮಸ್ಯೆ ಇದೆ. ಅವರು ವಿರೋಧ ಪಕ್ಷದಲ್ಲಿದ್ದಾಗ ಹೇಳಿದ್ದನ್ನು , ಮಾಡಿದ್ದನ್ನುಅಧಿಕಾರಕ್ಕೇರಿದಾಗ ತಾವೇ ಉಲ್ಲಂಘಿಸುತ್ತಾರೆ. ಹಿಂದೆ ನಾನು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಗಿನ ವಿರೋಧ ಪಕ್ಷದ ನಾಯಕರು ಜಿಲ್ಲಾಧಿಕಾರಿಗಳ ಕಛೇರಿಗೆ ಹೋಗಿ ಬರ ಮುಂತಾದ ವಿಚಾರಗಳ ಕುರಿತು ಖುದ್ದು ಮಾಹಿತಿ ಪಡೆದಿದ್ದರು. ಅದಕ್ಕೆ ನನ್ನ ಸರಕಾರ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ ಅದೇ ರೀತಿಯಲ್ಲಿ ತಂತ್ರಜ್ಞಾನದ ನೆರವು ಪಡೆದು ಮಾಹಿತಿ ಸಂಗ್ರಹಿ ಸುವುದನ್ನು ವಿರೋಧ ಪಕ್ಷದ ನಾಯಕನಾದ ನನಗೆ ಈ ಸರಕಾರ ನಿರಾಕರಿಸುತ್ತಿದೆ.
ಸರಕಾರದ ಈ ಕ್ರಮ ಸಂವಿಧಾನದ ಹಲವು ಅನುಚ್ಛೇದಗಳ ಪ್ರಕಾರ ಹಕ್ಕುಚ್ಯುತಿಯಾಗುತ್ತದೆ. ಈ ಕಾರಣಕ್ಕೇ ನಾನು ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ತಿಳಿಸಿದ್ದೆ. ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ, ಮಾಹಿತಿ ಕೇಳಿದ್ದಕ್ಕೆ ಸರಕಾರ ಹೆದರುತ್ತಿದೆ ಎಂದರೆ ಈ ಸರಕಾರ ಜನದ್ರೋಹಿ ಆಗಿದೆ ಎಂದೇ ಅರ್ಥ. ವಿರೋಧ ಪಕ್ಷದ ನಾಯಕರಿಗೆ ಮಾಹಿತಿ ಸಿಕ್ಕರೆ ಅದು ಜನರಿಗೆ ತಲುಪುತ್ತದೆ.ಜನರಿಗೆ ಸತ್ಯ ಗೊತ್ತಾಗಬಾರದು ಎನ್ನುವ ಭಯ ಸರಕಾರಕ್ಕೆ ಇದ್ದರೆ ಆಗ ಮಾತ್ರ ಅದು ವಿರೋಧ ಪಕ್ಷದ ನಾಯಕರಸಂವಿಧಾನ ಬದ್ದ ಹಕ್ಕನ್ನು ಚ್ಯುತಿಗೊಳಿಸಲು ಮುಂದಾಗುತ್ತದೆ.