ಸಿದ್ದಲಿಂಗಯ್ಯ ಇಲ್ಲ ಎನ್ನುವುದನ್ನು ಜೀರ್ಣಿಸಿಕೊಳ್ಳಲು ಹೇಗೆ ಸಾಧ್ಯ ?
ಅಭಿವ್ಯಕ್ತಿ
ಮುದಲ್‌ ವಿಜಯ್‌
ಮನುಜನ ಬದುಕನ್ನು ನೀರಿನ ಮೇಲಿನ ಗುಳ್ಳೆಗೆ ಹೋಲಿಸಿದವರಾರು ಎಂಬುದನ್ನು ಚರ್ಚಿಸಲು ಈ ಲೇಖನ ಬರೆದುದಲ್ಲ.2021ಮಾರ್ಚ್ ತಿಂಗಳಲ್ಲಿ ನನ್ನ ಪ್ರೀತಿಯ ಗುರುಗಳಾದ ಡಾ.ಸಿದ್ಧಲಿಂಗಯ್ಯ ನವರ ಜತೆ ಓಡಾಡಿಕೊಂಡಿದ್ದ ನನಗೆ2021ಜೂನ್ ತಿಂಗಳಷ್ಟೊತ್ತಿಗೆ ಅವರು ಇಲ್ಲ ಎನ್ನುವುದನ್ನು ಹೇಗೆ ಜೀರ್ಣಿಸಿಕೊಳ್ಳಲು ಸಾಧ್ಯ? ಗುರುಗಳನ್ನು ಮಾರ್ಚ್ ತಿಂಗಳಿನಲ್ಲಿ ಐದಾರು ಸಲ ಅವರ ಮನೆಯಲ್ಲಿ ಭೇಟಿಯಾಗಿದ್ದೆ.
ಭೇಟಿಯಾದಾಗ ಸುಮಾರು ವಿಚಾರಗಳ ಬಗ್ಗೆ ನಾವು ಮಾತಾಡಿದ್ದುಂಟು. ಒಮ್ಮೆ ಹೀಗೆ ಮಾತಾಡುತ್ತಿದ್ದಾಗ ಅವರು ನನ್ನ ಬಳಿ ಹೇಳಿದ ಮಾತು ‘ವಿಜಯ್, ನನಗೆ ಈಗ ಅರವತ್ತೇಳು ವರ್ಷ. ಇನ್ನು ಹೆಚ್ಚೆಂದರೆ ಮೂರು ಇಲ್ಲ ನಾಲ್ಕು ವರ್ಷ ಬದುಕಬಲ್ಲೆ, ನನಗಿರುವ ಆರೋಗ್ಯ ಸಮಸ್ಯೆಗೆ ಎಪ್ಪತ್ತು ವರ್ಷ ಸಾಕಲ್ವೇ’ ಎಂದಿದ್ದರು. ಅವರು ಅಂದು ಯಾಕೆ ಆ ರೀತಿ ಹೇಳಿದರೋ ನನಗೆ ಗೊತ್ತಿಲ್ಲ.
ಬಹಳ ಭಾವನಾತ್ಮಕವಾಗಿ ಮಾತಿಗಿಳಿದಿದ್ದ ಅವರ ಮುಖವನ್ನೊಮ್ಮೆ ನೋಡಿದೆ. ಗುರುಗಳ ಮುಖದಲ್ಲಿ ನಿಸ್ತೇಜ ಭಾವವಿತ್ತು. ಮನಸ್ಸಿನಲ್ಲಿ ಯಾವುದೋ ಕೊರಗು ಇದ್ದಂತೆ ಕಂಡಿತು. ಯಾವತ್ತೂ ನಕಾರಾತ್ಮಕ ಚಿಂತನೆಗಳಿಗೆ ಒತ್ತು ಕೊಡದವರು ಇಂದೇಕೆ ಈ ರೀತಿ ಮಾತಾಡುತ್ತಿದ್ದಾರೆಂಬ ಗೊಂದಲ ನನ್ನೊಳಗೆ ಬಹಳವಾಗಿ ಕಾಡ ತೊಡಗಿತು. ನಾನು ಕೂಡಲೇ ‘ಗುರುಗಳೇ ದಯವಿಟ್ಟು ಇನ್ನೊಮ್ಮೆ ಈ ರೀತಿ ಮಾತಾಡಿದರೆ ನಾನು ಇತ್ತ ಕಡೆ ಬರೋದಿಲ್ಲ. ನೀವು ಇನ್ನು ಇಪ್ಪತ್ತರಿಂದ ಇಪ್ಪತ್ತೈದು ವರ್ಷಗಳು ನಮ್ಮ ಜತೆ ಇರಬೇಕು. ನಮಗೆ ನೀವೇ ಆಸರೆ ಗುರುಗಳೇ. ನೀವೇ ಹೀಗೆ ಮಾತಾಡಿದರೆ ಹೇಗೆ’ ಎಂದು ಹೇಳಿದ್ದೆ.
ನನ್ನ ಕಣ್ಣಾಲಿಗಳು ಒದ್ದೆಯಾಗಿದ್ದವು. ನನ್ನ ಮಾತಿಗೆ ಗುರುಗಳು ತಲೆಯಾಡಿಸುತ್ತ ಸಣ್ಣದಾಗಿ ನಗು ಬೀರಿದ್ದರು. ನೋವು – ದುಃಖ ಆವರಿಸಿಕೊಂಡ ಅದೆಷ್ಟೋ ಮಂದಿ ಗುರುಗಳನ್ನು ಕಂಡು ಅವರ ಹಾಸ್ಯದ ಮಾತುಗಳಿಂದ ಮನಸ್ಸನ್ನು ಹಗುರ ಮಾಡಿಕೊಂಡು ಬಂದಿದ್ದೇ ಹೆಚ್ಚು. ಬೇರೆಯವರ ದುಃಖಗಳನ್ನು ಕ್ಷಣದಲ್ಲಿ ಅರ್ಥ ಮಾಡಿಕೊಳ್ಳುವ ಅಗಾಧ ಶಕ್ತಿ ಅವರಲ್ಲಿತ್ತು. ಆದರೆ ಆ ದಿನ ಅವರಾಡಿದ ಮಾತು ಬಹುಶಃ ಅವರ ಕೊನೆಯ ದಿನಗಳು ಬಹಳ ಹತ್ತಿರದಲ್ಲೇ ಇದೆ ಎಂದು ಅವರಿಗನಿಸಿತ್ತೇನು ಎಂಬ ವಿಚಾರ ನನಗೆ ಈಗ ಆಳವಾಗಿ ಕೊರೆಯುತ್ತಿದೆ.
2021ಮಾರ್ಚ್27ರಂದು ಬೆಂಗಳೂರಿನ ಆವಲಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಗುರುಗಳ ಜತೆ ಬೆಳಗ್ಗೆ ಹೋದ ವನು ಸಂಜೆ ನಾಲ್ಕು ಗಂಟೆಯವರೆಗೂ ಅವರೊಡನೆಯೇ ಇದ್ದೆ. ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಅವರ ಭಾಷಣವನ್ನು ಕೇಳಿ ಆನಂದಿಸಿದ್ದೆ. ವಾಪಸ್ಸು ಹಿಂದಿರುಗುವಾಗ ತುರ್ತು ಕೆಲಸದ ನಿಮಿತ್ತ ನಾನು ಕಬ್ಬನ್ ಪಾರ್ಕ್ ಬಳಿ ಇಳಿದು ಕೊಳ್ಳುವಂತಾಯಿತು. ‘ವಿಜಯ್ ನೀವು ಎಲ್ಲಿಗೆ ಹೋಗಬೇಕೋ ಅಲ್ಲೇ ಡ್ರಾಪ್ ಮಾಡಿಸುವೆ’ ಎಂದಿದ್ದರು. ಆದರೆ ಗುರುಗಳಿಗೆ ತೊಂದರೆ ಕೊಡುವುದು ನನಗಿಷ್ಟ ವಿರಲಿಲ್ಲ. ಹಾಗಾಗಿ ‘ಇಲ್ಲ ಗುರುಗಳೇ ನೀವು ಹೊರಡಿ, ನಾನು ಓಲಾ ಟ್ಯಾಕ್ಸಿ ಮಾಡಿಕೊಂಡು ಹೊರಡುತ್ತೇನೆ’ ಎಂದು ಹೇಳಿ ಅವರನ್ನು ಕಳುಹಿಸಿದ್ದೆ.
ಮಾರನೇ ದಿನ ಮಾರ್ಚ್28, ಮತ್ತೊಂದು ಕಾರ್ಯಕ್ರಮಕ್ಕೆ ನಾವುಗಳೆಲ್ಲ ಸೇರಿದ್ದೆವು. ಸೆಂಟ್ರಲ್ ಕಾಲೇಜಿನಲ್ಲಿ ಸಂಜೆ ಆರು ಗಂಟೆಗೆ ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮವದು. ಸಾಹಿತಿ ಡಾ.ಬ್ಯಾಡರಹಳ್ಳಿ ಶಿವರಾಜು ಅವರ ಸಂಪಾದಕತ್ವದಲ್ಲಿ ಮುದ್ರಣ ಗೊಂಡಿದ್ದ ಡಾ.ಡಿ.ಆರ್. ನಾಗರಾಜ್ ಅವರ ಸಾಹಿತ್ಯ – ಸಂಸ್ಕೃತಿ, ವಿಮರ್ಶೆ, ಸಂಶೋಧನೆ, ಅನುವಾದ ಗ್ರಂಥಗಳ ಕುರಿತ ವಿಮರ್ಶಾ ಬರಹಗಳ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಗುರುಗಳೇ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸ್ಪೀಕರ್ ರಮೇಶ್ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇನ್ನು ಹಲವಾರು ಗಣ್ಯರೂ ಇದ್ದರು. ಇಡೀ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್ ಮತ್ತು ಡಾ.ಸಿದ್ಧಲಿಂಗಯ್ಯನವರ ಮಾತು ಗಳಿಗೆ ಎಲ್ಲರೂ ಬೆರಗಾಗಿ ಹೋಗಿದ್ದೆವು.
ಅದರಲ್ಲೂ ಗುರುಗಳ ಹಾಸ್ಯಭರಿತ ಭಾಷಣಕ್ಕೆ ಸಭೆಯಲ್ಲಿದ್ದವರೆಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆವು. ಅದರಲ್ಲಿ ಒಂದು ವಿಶೇಷತೆ ಏನೆಂದರೆ ಪ್ರತಿ ಸಲವೂ ತಮ್ಮ ಮಾತುಗಳ ವರಸೆಯಿಂದ ಬೇರೆಯವರನ್ನು ನಗಿಸುತ್ತಿದ್ದ ಗುರುಗಳು ಅಂದು ಅವರೇ ಸ್ವತಃ ಮನ ಬಿಚ್ಚಿ ನಗಾಡಿದ್ದು ನಮ್ಮೆಲ್ಲರಿಗೂ ಆಶ್ಚರ್ಯ ಉಂಟು ಮಾಡಿತ್ತು. ಕಾರ್ಯಕ್ರಮ ಮುಗಿದ ಮೇಲೆ ಗುರುಗಳನ್ನು ಭೇಟಿ ಮಾಡಿದ ಸುಮಾರು ಮಂದಿ, ‘ಇದೇನು ಸರ್, ಇವತ್ತು ನಮ್ಮನ್ನೆಲ್ಲ ನಗಿಸುವುದರ ಜತೆಗೆ ನೀವು ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ರಲ್ಲ, ನಿಜಕ್ಕೂ ಆಶ್ಚರ್ಯ’ ಎಂದಿದ್ದರು. ಇದಾದ ಒಂದೆರಡು ದಿನಗಳಲ್ಲಿ ನಾನು ಮತ್ತು ಡಾ.ಬ್ಯಾಡರಹಳ್ಳಿ ಶಿವರಾಜುಗುರುಗಳ ಮನೆಗೆ ಹೋಗಿದ್ದೆವು.
ಡಾ.ಡಿ.ಆರ್.ನಾಗರಾಜು ಅವರ ಫೋಟೋಫ್ರೇಂಕೊಡುವುದಾಗಿ ಶಿವರಾಜು ಕಾರ್ಯಕ್ರಮದಲ್ಲಿ ಗುರುಗಳಿಗೆ ಹೇಳಿದ್ದರಂತೆ. ಆದ್ದರಿಂದ ಗುರುಗಳು ಶಿವರಾಜು ಅವರಿಗೆ ಎರಡು ಮೂರು ಸಲ ಕರೆ ಮಾಡಿ ಡಿ.ಆರ್.ಎನ್ ಅವರ ಫೋಟೋಫ್ರೇಂತಂದುಕೊಡು ವಂತೆ ನೆನಪಿಸಿದ್ದರು. ಶಿವರಾಜು ಮತ್ತು ನಾನು ಡಿ.ಆರ್.ಎನ್ ಅವರ ಫೋಟೋಫ್ರೇಂಜತೆ ಗುರುಗಳ ಮನೆಗೆ ಹೋದಾಗ ಅವರ ಮನೆಯಲ್ಲಿರುವ ಬೃಹತ್ ಗ್ರಂಥಾಲಯ ದಲ್ಲಿದ್ದ ಸೋಫಾ ಮೇಲೆ ಮಲಗಿದ್ದರು.
ನಮ್ಮನ್ನು ನೋಡುತ್ತಲೇ ‘ಬನ್ನಿ, ಬನ್ನಿ, ಕೂತ್ಕೊಳ್ಳಿ’ ಎಂದು ಬಹಳ ಆತ್ಮೀಯವಾಗಿ ಬರಮಾಡಿಕೊಂಡರು. ‘ಕೋವಿಡ್ ವ್ಯಾಕ್ಸಿನ್ಹಾಕಿಸಿಕೊಂಡೆ, ಸ್ವಲ್ಪ ಮೈ ಕೈ ನೋವು’ ಎನ್ನುತ್ತಾ ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಅವರ ಭಾಷಣ ಹೇಗಿತ್ತು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲು ಶುರುವಿಟ್ಟು ಕೊಂಡರು. ನಂತರ ಅವರ ಹೋರಾಟದ ಬದುಕಿನ ಅದೆಷ್ಟೋ ವಿಷಯಗಳ ಬಗ್ಗೆ ನಮ್ಮೊಡನೆ ಹಂಚಿಕೊಂಡರು. ಸಮಯ ಸರಿದದ್ದೇ ಗೊತ್ತಾಗಲಿಲ್ಲ.
ನಾನು ಮತ್ತು ಶಿವರಾಜು ಇಬ್ಬರೂ ಗುರುಗಳಿಗೆ ನಮಸ್ಕರಿಸಿ ಮತ್ತೆ ಭೇಟಿಯಾಗುತ್ತೇವೆಂದು ಎಂದು ಹೇಳಿ ಮನೆ ಕಡೆ ಹೊರಟೆವು. ನಂತರದ ದಿನಗಳಲ್ಲಿ ದೇಶದಲ್ಲಿ ಕರೋನಾ ಎರಡನೇ ಅಲೆ ಹೆಚ್ಚಾಗಿ ಗುರುಗಳನ್ನು ಭೇಟಿ ಮಾಡುವ ಅವಕಾಶ ನಮಗೆಸಿಗಲೇ ಇಲ್ಲ. ಗುರುಗಳೇ ಒಂದೆರಡು ಸಲ ಕರೆ ಮಾಡಿ ಮಾತಾಡಿದ್ದು ಬಿಟ್ಟರೆ ಭೇಟಿಗೆ ಅವಕಾಶ ವಿರಲಿಲ್ಲ. ೨೦೨೧ ಏಪ್ರಿಲ್ ೨೩ರಂದು ನನಗೆ ಕರೆ ಮಾಡಿ, ‘ವಿಜಯ್ ನನಗೊಂದು ಸಹಾಯ ಬೇಕಿತ್ತಲ್ಲ’ ಎಂದಿದ್ದರು.
ಗುರುಗಳ ವ್ಯಕ್ತಿತ್ವವೇ ಅಂತಹದ್ದು. ಅವರು ನಮಗೆ ಅಽಕಾರಯುತವಾಗಿ ಕೆಲಸ ಹೇಳಬಹುದಾಗಿತ್ತಾದರೂ ಎಂದೂ ಅಽಕಾರ ವನ್ನು ಚಲಾಯಿಸಿದವರಲ್ಲ. ಬಹಳ ನಮ್ರತೆ ಯಿಂದಲೇ ಹೇಳುವುದು ಅವರ ವಿಶೇಷವಾದ ಗುಣ. ನಾನು ‘ಹೇಳಿ ಗುರುಗಳೇ, ಏನಾಗಬೇಕಿತ್ತು’ ಎಂದೆ. ‘ಏನೂ ಇಲ್ಲ, ಇವತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವೆಬಿನಾರ್ ಮೀಟಿಂಗ್ ಇದೆ. ಆ ಕಾರ್ಯಕ್ರದಲ್ಲಿನಾನು ತಮಿಳು ಕವಿ ಸುಬ್ರಮಣಿ ಭಾರತಿಯಾರ್ ಅವರ ಒಂದು ಕವಿತೆಯನ್ನು ವಾಚಿಸುವುದರ ಮೂಲಕ ಭಾಷಣವನ್ನು ಪ್ರಾರಂಭ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕೆಲವು ತಮಿಳು ಕವಿಗಳಿಗೆ ಸಂತೋಷ ಪಡಿಸಬೇಕೆಂದುಕೊಂಡಿದ್ದೇನೆ. ಆ ಕವಿತೆಯು ಹೀಗೆ ಶುರುವಾಗುತ್ತೆ.
ವಿಡುದಲೈ…ವಿಡುದಲೈ…ವಿಡುದಲೈ ಅಂತ. ನೀವು ಸ್ವಲ್ಪ ಗೂಗಲ್‌ನಲ್ಲಿ ಹುಡುಕಿ ಆ ಕವಿತೆಯ ಮೊದಲನೇ ಪ್ಯಾರಾವನ್ನು ನನಗೆ ಕನ್ನಡದಲ್ಲಿ ಟೈಪ್ ಮಾಡಿ ವಾಟ್ಸಪ್ ಕಳುಹಿಸಿ’ ಎಂದು ಕೇಳಿಕೊಂಡಿದ್ದರು. ಮತ್ತೊಬ್ಬರ ಸಂತೋಷದಲ್ಲಿ ತಮ್ಮ ಸಂತೋಷವನ್ನು ಕಾಣುವ ಗುರುಗಳ ವ್ಯಕ್ತಿತ್ವ ಬಹಳ ವಿಶಾಲವಾದದ್ದು. ನಾನು ಆಫೀಸಿನಲ್ಲೇ ಇದ್ದುದರಿಂದ ಕೂಡಲೇಗೂಗಲ್‌ನಲ್ಲಿ ಹುಡುಕಿ ವಿಡದಲೈ ಪದ್ಯದ ಮೊದಲ ಪ್ಯಾರಾವನ್ನು ಟೈಪ್ ಮಾಡಿ ಗುರುಗಳಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದೆ.
ಆ ಪದ್ಯದ ಸಾಲುಗಳು ಹೀಗಿತ್ತು;‘ವಿಡುದಲೈ ವಿಡುದಲೈ ವಿಡುದಲೈಪರಯರುಕ್ಕುಂ ಇಂಗುತೀಯರ್ ಪುಲೈಯರುಕ್ಕುಂ ವಿಡುದಲೈಪರವರೋಡು ಕುರವರುಕ್ಕುಂಮರವರುಕ್ಕುಂ ವಿಡುದಲೈವಿಡುದಲೈ ವಿಡುದಲೈ ವಿಡುದಲೈ’
ಜಾತಿ ವ್ಯವಸ್ಥೆಯನ್ನು ಖಂಡಿಸುವ ಮತ್ತು ಎಲ್ಲಾ ಜಾತಿಯವರಿಗೂ ಬಿಡುಗಡೆಬೇಕೆಂಬ ಅರ್ಥವಿರುವ ಈ ತಮಿಳು ಕವಿತೆಯನ್ನು ಗುರುಗಳು ಕಾರ್ಯಕ್ರಮದಲ್ಲಿ ಬಹಳ ಅದ್ಭುತವಾಗಿ ತಮಿಳು ಭಾಷೆಯಲ್ಲೇ ವಾಚನ ಮಾಡಿ ಭಾಷಣ ಮಾಡಿದ್ದಾಗಿ ಕಾರ್ಯಕ್ರಮಮುಗಿದ ಕೂಡಲೇ ನನಗೆ ಕರೆ ಮಾಡಿ ಹೇಳಿದ್ದರು.
ನಾನು ಮಾಡಿದ ಸಣ್ಣ ಕೆಲಸಕ್ಕೆ ಎರಡು ಮೂರು ಸಲ ಧನ್ಯವಾದಗಳನ್ನು ಹೇಳಿದ್ದರು. ನನ್ನ ಜತೆ ಗುರುಗಳು ಮಾತಾಡಿದ್ದು ಅದೇ ಕೊನೆ. ಭಾರತಿಯಾರ್ ಅವರ ವಿಡುದಲೈ (ಬಿಡುಗಡೆ) ಕವಿತೆಗಾಗಿ ಕರೆ ಮಾಡಿದ್ದ ನನ್ನ ಪ್ರೀತಿಯ ಗುರುಗಳು ಈ ಲೋಕದಿಂದ ಅವರ ಬಿಡುಗಡೆಗೆ ಅಣಿಯಾಗುತ್ತಿದ್ದರೆಂಬುದು ನನಗೆ ತಿಳಿಯದೆ ಹೋಯಿತು.
ಕೊರೊನಾ ಅವರ ದೇಹವನ್ನು ಹೊಕ್ಕು ರಂಗದೊರೆ ಆಸ್ಪತ್ರೆಗೆ ಸೇರಿ ಎರಡು ದಿನಗಳಾದ ಮೇಲೆ ಆಸ್ಪತ್ರೆಯಲ್ಲಿರುವ ವಿಷಯಡಾ.ಬೈರಮಂಗಲ ರಾಮೇಗೌಡ ಸರ್ ಅವರಿಂದ ತಿಳಿಯಿತು. ಕೊರೊನಾ ಹಾವಳಿಯಿಂದ ಎಲ್ಲರೂ ಕಂಗೆಟ್ಟಿದ್ದರಿಂದ ಯಾರೂ ಎಲ್ಲೂ ಹೋಗುವಂತಿರಲಿಲ್ಲ ಯಾರನ್ನೂ ನೋಡುವಂತಿರಲಿಲ್ಲ ಎಂಬ ಸಂದಿಗ್ಧ ಪರಿಸ್ಥಿತಿ ಉಂಟಾಗಿತ್ತು.
ನಾನು ನಾಲ್ಕಾರು ಸಲ ಗುರುಗಳಿಗೆ ಕರೆ ಮಾಡಿದ್ದೆ. ಆಸ್ಪತ್ರೆಯಲ್ಲಿದ್ದುದರಿಂದಲೋ ಏನೋ ನನ್ನ ಕರೆಗಳನ್ನು ಅವರುಸ್ವೀಕರಿಸಲಿಲ್ಲ. ಮೇ4ನೇ ತಾರೀಖಿನಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿಸುವಾಗ ಆದಷ್ಟು ಬೇಗ ಗುಣಮುಖರಾಗಿ ಗುರುಗಳು ಮತ್ತೆ ನಮ್ಮನ್ನು ಸೇರಿಕೊಳ್ಳುತ್ತಾರೆಂಬ ನಿರೀಕ್ಷೆಯೇ ಎಲ್ಲರಲ್ಲಿಯೂ ಇತ್ತು. ಪ್ರತಿ ಕ್ಷಣವೂ ಶುಭ ವಾರ್ತೆಯನ್ನು ಕೇಳಿಸಿಕೊಳ್ಳಲು ತುಡಿಯುತ್ತಿದ್ದ ನಾವುಗಳು2021ರ ಜೂನ್11ನೇ ತಾರೀಖು ಕರಾಳ ದಿನವಾಗುತ್ತದೆಂಬುದು ಕನಸಿನಲ್ಲಿಯೂಅಂದುಕೊಂಡಿರಲಿಲ್ಲ.
ಸುಮಾರು ನಲವತ್ತು ದಿನಗಳ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕವನ್ನು ತ್ಯಜಿಸಿದ ಗುರುಗಳು ನಮ್ಮನ್ನೆಲ್ಲ ಅನಾಥರನ್ನಾಗಿ ಮಾಡಿದ್ದು ಎದೆಯ ಮೇಲೆ ಬಂಡೆಯೊಂದು ಅಪ್ಪಳಿಸಿದಂತಾಗಿತ್ತು. ಅವರೊಡನೆ ಅದೆಷ್ಟೋ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ನನ್ನ ಅವರ ಸಂಬಂಧ ಗುರು – ಶಿಷ್ಯ ಎನ್ನುವುದಕ್ಕಿಂತಲೂ ಅಲ್ಲಿ ಅತ್ಯಂತ ಮಧುರವಾದ ಸ್ನೇಹ ಬಾಂಧವ್ಯ ಬೆಸೆದುಕೊಂಡಿತ್ತು.ನನ್ನನ್ನು ಬೇರೆಯವರಿಗೆ ಪರಿಚಯಿಸುವಾಗೆಲ್ಲ ಕವಿ ಮುದಲ್ ವಿಜಯ್ ಎಂದೇ ಪರಿಚಯಿಸುತ್ತಿದ್ದ ತಾಯಿ ಹೃದಯವದು.
ಅವರೊಡನೆ ಅತೀ ಹೆಚ್ಚು ಒಡನಾಟ ಇದ್ದವರಲ್ಲಿ ನಾನೂ ಒಬ್ಬ ಎಂಬ ಹೆಮ್ಮೆ ನನಗಿದೆ. ಅವರಿಲ್ಲದೆ ಈಗ ಅನಾಥ ಪ್ರಜ್ಞೆಯಸುಳಿಯೊಳಗೆ ಬಿದ್ದಿರುವ ನನಗೆ ಬೆಂಕಿ ಮಳೆ ಇಡೀ ದೇಹವನ್ನು ಸುಟ್ಟು ಕರಕಲು ಮಾಡುತ್ತಿರುವ ಅನುಭವ. ಸ್ನೇಹಿತರು, ಹಿತೈಷಿಗಳು ದುಃಖದಲ್ಲಿ ಮುಳುಗಿರುವವನಿಗೆ ಸಾಂತ್ವನ ಹೇಳುತ್ತಿದ್ದರೂ ಗುರುಗಳನ್ನು ಇನ್ನೆಂದಿಗೂ ನೋಡಲು ಸಾಧ್ಯವೇ ಇಲ್ಲಎಂಬುದು ನೆನಪಾದಾಗ ಹೃದಯ ಚೂರು ಚೂರಾಗಿ ಕೆಂಡದಲ್ಲಿ ಬಿದ್ದು ಬೇಯುತ್ತಿರುವಂತೆ ಭಾಸವಾಗುತ್ತದೆ.
ತಿಂಗಳಿಗೊಮ್ಮೆ ಬರುವ ಹುಣ್ಣಿಮೆ ಎಲ್ಲರಿಗಿದ್ದರೆ ನನ್ನ ಗುರುಗಳ ನೆನಪಾದಗೆಲ್ಲ ಪ್ರತಿ ನಿತ್ಯವೂ ಹುಣ್ಣಿಮೆಯ ದರ್ಶನವಾಗುತ್ತಿದ್ದಕಾಲವೊಂದಿತ್ತು. ಆದರೀಗ ಗುರುಗಳು ಅಗಲಿರುವ ನೆನಪುಗಳು ಎದೆ ಗೂಡನ್ನು ಮುತ್ತಿಕೊಳ್ಳುವಾಗ ನನಗೆ ತಿಂಗಳು ಪೂರ್ತಿ ಅಮಾವಾಸ್ಯೆಯೇ ಆಗಿ ಸಂಭವಿಸಿ ಬಿಟ್ಟಿದೆ. ಬದುಕು ನಶ್ವರ ಶಾಶ್ವತವಲ್ಲ ಎಂಬುದು ನಿಜಕ್ಕೂ ಸತ್ಯ.