ಸಂಕಷ್ಟಗಳ ನಡುವೆಯೂ ಭಾರತದ ಯಶೋಗಾಥೆ
ಅಭಿವ್ಯಕ್ತಿ
ಗಣೇಶ್ ಭಟ್‌, ವಾರಣಾಸಿ
ಹೌದು.೨೦೨೦ಹಾಗೂ೨೦೨೧ನೇ ಇಸವಿಗಳು ಭಾರತದ ಪಾಲಿಗೆ ಅಷ್ಟಾಗಿ ಶುಭಕರವಾಗಿಲ್ಲ.೨೦೨೦ರಲ್ಲಿ ಕರೋನಾದ ಮೊದಲ ಅಲೆಯ ಹೊಡೆತಕ್ಕೆ ಸಿಕ್ಕಿದ ಭಾರತದಲ್ಲಿ ತಿಂಗಳುಗಳ ಕಾಲ ಲಾಕ್‌ಡೌನ್ ಮಾಡಬೇಕಾಯಿತು. ಕೋಟ್ಯಂತರ ಜನರು ಉದ್ಯೋಗವನ್ನು ಕಳೆದುಕೊಂಡರು, ಉದ್ದಿಮೆಗಳು ನೆಲಕಚ್ಚಿದವು ಹಾಗೂ ಇವುಗಳ ಪರಿಣಾಮವಾಗಿ ದೇಶದ ಆರ್ಥಿಕತೆ ನೆಲಕಚ್ಚಿತು.
೨೦೨೦-೨೧ರ ಜಿಡಿಪಿ ಶೇ.೭.೩ಗೆ ಕುಸಿಯಿತು.೨೦೨೧ರ ಜನವರಿ – ಫೆಬ್ರವರಿ ತಿಂಗಳಿಗಾಗುವಾಗ ಭಾರತದಲ್ಲಿ ಕರೋನಾ ನಿಯಂತ್ರಣಕ್ಕೆ ಬಂದು ಆರ್ಥಿಕತೆ ಇನ್ನೇನು ಚೇತರಿಕೆ ಆಗಲಿದೆ ಎನ್ನುವಾಗ ಕರೋನಾ ಎರಡನೇ ಅಲೆಯ ದಾಳಿಯಾಯಿತು. ಕರೋನಾ ಎರಡನೇ ಅಲೆಯು ಮೊದಲ ಅಲೆಗಿಂತ ನಾಲ್ಕು ಪಟ್ಟು ವೇಗವಾಗಿ ಹಬ್ಬುತ್ತಾ ಮೇ೭ರಂದು ದೇಶದಲ್ಲಿ ದಿನವೊಂದರ ಅತೀ ಹೆಚ್ಚು೪,೧೪,೧೮೩ಹೊಸ ಕರೋನಾ ಪ್ರಕರಣಗಳು ದಾಖಲಾದವು.
ದಿನನಿತ್ಯ ಸಾವಿರಾರು ಸೋಂಕಿತರು ಸಾವಿಗೀಡಾದರು. ದೇಶಾದ್ಯಂತ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ, ಆಕ್ಸಿಜನ್ ಕೊರತೆ ಹಾಗೂ ತೀವ್ರ ನಿಗಾ ಕೇಂದ್ರಗಳ ಕೊರತೆ ಎದುರಾಯಿತು. ಕರೋನಾದ ಹಬ್ಬುವಿಕೆಯ ವೇಗವನ್ನು ತಡೆಗಟ್ಟಲು ದೇಶದ ವಿವಿಧ ರಾಜ್ಯಗಳುಸಂಪೂರ್ಣ ಲಾಕ್‌ಡೌನ್ ಅಥವಾ ಆಂಶಿಕ ಲಾಕ್‌ಡೌನ್ ಅನ್ನು ಜಾರಿ ಮಾಡಬೇಕಾಯಿತು. ನ್ಯೂಯಾರ್ಕ್ ಟೈಮ್ಸ್, ವಾಲ್ಸ್ಟ್ರೀಟ್ ಜರ್ನಲ್‌, ಗಾರ್ಡಿಯನ್ ಮೊದಲಾದ ವಿದೇಶಿ ಪತ್ರಿಕೆಗಳ ಮುಖ ಪುಟಗಳಲ್ಲಿ ಭಾರತದ ಸ್ಮಶಾನಗಳಲ್ಲಿ ಸಾಲುಸಾಲಾಗಿಉರಿಯುತ್ತಿರುವ ಚಿತೆಗಳ ಫೊಟೋಗಳನ್ನು ಪ್ರಕಟಿಸಲಾಯಿತು.
ಎರಡನೇ ಅಲೆಗೆ ಸಿಲುಕಿದ ಭಾರತದ ಕಥೆ ಮುಗಿಯಿತು ಎಂದು ಅಂತಾರಾಷ್ಟ್ರೀಯ ಮಾಧ್ಯಮ ಪಂಡಿತರು ವರದಿ ಮಾಡಿದರು.ಆದರೆ ಕರೋನಾ ಒಂದನೇ ಅಲೆಯನ್ನು ನಿಯಂತ್ರಣ ಮಾಡಿ ಅನುಭವವಿದ್ದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕರೋನಾದಹಬ್ಬುವಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದವು. ಈಗ ದಿನವೊಂದರ ಕರೋನಾ ಹೊಸ ಕೇಸ್‌ಗಳ ಸಂಖ್ಯೆ೫೦ಸಾವಿರದಆಸುಪಾಸಿಗೆ ಇಳಿದಿದೆ. ಡಿಸೆಂಬರ್೨೦೨೧ರ ಒಳಗೆ ದೇಶದ೧೮ವಯಸ್ಸಿಗಿಂತ ಮೇಲ್ಪಟ್ಟ ಎಲ್ಲಾ ಪ್ರಜೆಗಳಿಗೆ ವ್ಯಾಕ್ಸಿನೇಷನ್ಲಭಿಸಲಿದೆ ಎಂದು ಅಂದಾಜಿಸಲಾಗುತ್ತಿದೆ.
ಭಾರತದ ಕೆಲವು ಛಿದ್ರಾನ್ವೇಷೀ ಮಾಧ್ಯಮಗಳು ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬಹಳ ಕೆಟ್ಟದಾಗಿ ಬಿಂಬಿಸುವು ದರಲ್ಲಿ ಎಲ್ಲಿಲ್ಲದ ಹುಮ್ಮಸ್ಸು. ಇವರು ಭಾರತವನ್ನು ಕೀಳಾಗಿ ಚಿತ್ರಿಸಲು ಪ್ರಯತ್ನಿಸಿದರೂ ಕಳೆದ ಕೆಲವು ವರ್ಷಗಳಲ್ಲಿ ಭಾರತ ದಲ್ಲಿ ಜನರ ಸಾಮಾಜಿಕ ಹಾಗೂ ಆರ್ಥಿಕ ಮಟ್ಟದಲ್ಲಿ ಬಹಳ ಸುಧಾರಣೆಯಾಗಿದೆ ಹಾಗೂ ದೇಶದ ಆರ್ಥಿಕತೆ ಹೊಸ ಮಜಲನ್ನು ಮುಟ್ಟುತ್ತಿದೆ ಎನ್ನುವ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ.
ದೇಶಿ ಹೂಡಿಕೆದಾರರಿಗೆ ಭಾರತದ ಮೇಲೆ ನಂಬಿಕೆ ಬರುತ್ತಿದೆ. ಇಲ್ಲಿ ಸುಧಾರಿಸಿದ ವಿದ್ಯುತ್, ರಸ್ತೆ, ನೀರಾವರಿ ಮೊದಲಾದಮೂಲಭೂತ ಸೌಕರ್ಯಗಳು ಹಾಗೂ ಕೇಂದ್ರ ಮಟ್ಟದಲ್ಲಿ ಇಳಿಕೆಯಾದ ಭ್ರಷ್ಟಾಚಾರವು ವಿದೇಶೀ ಹೂಡಿಕೆ ಸಂಸ್ಥೆಗಳನ್ನು ಆಕರ್ಷಿಸುತ್ತಿವೆ. ಭಾರತದಲ್ಲಿ ಸುಧಾರಿಸುತ್ತಿರುವ ವ್ಯವಸ್ಥೆಯ ಸೂಚಕವಾಗಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ (ಉದ್ಯಮಸ್ನೇಹೀ ದೇಶಗಳು) ಪಟ್ಟಿಯಲ್ಲಿ ಭಾರತವು ಗಮನೀಯ ಸುಧಾರಣೆಯನ್ನು ಕಂಡಿದೆ.
೨೦೧೪ರಲ್ಲಿ ಉದ್ಯಮ ಸ್ನೇಹೀ ದೇಶಗಳ ಪಟ್ಟಿಯಲ್ಲಿ೧೪೨ನೇ ಸ್ಥಾನದಲ್ಲಿದ್ದ ಭಾರತವು೨೦೨೦ರಲ್ಲಿ೭೯ಸ್ಥಾನಗಳಏರಿಕೆ ಯನ್ನು ಕಂಡು೬೩ನೇ ಸ್ಥಾನಕ್ಕೆ ಏರಿದೆ. ಇವುಗಳ ಪರಿಣಾಮವಾಗಿ ಭಾರತದಲ್ಲಾಗುತ್ತಿರುವ ನೇರ ವಿದೇಶಿ ಹೂಡಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗುತ್ತಿದೆ.೨೦೧೩-೧೪ರಲ್ಲಿಭಾರತದಗಿದ್ದ ಒಟ್ಟು ವಾರ್ಷಿಕ ನೇರ ವಿದೇಶಿ ಹೂಡಿಕೆ೨೪.೨೯ಶತಕೋಟಿ ಡಾಲರ್‌ಗಳಾಗಿದ್ದರೆ, ಜಾಗತಿಕ ಕರೋನಾ ಬಿಕ್ಕಟ್ಟಿನ ಎಡೆಯಲ್ಲೂ೨೦೨೦-೨೧ರಲ್ಲಿ ಭಾರತದದ ನೇರ ವಿದೇಶಿ ಹೂಡಿಕೆ೮೧.೭೨ಶತಕೋಟಿ ಡಾಲರ್‌ಗಳು. ಈ ವರ್ಷ ಜಾಗತಿಕವಾಗಿ ೫ನೇ ಅತೀ ಹೆಚ್ಚು ನೇರ ವಿದೇಶಿ ಹೂಡಿಕೆಯನ್ನು ಪಡೆದ ದೇಶ ಭಾರತ.
೧೯೪೭ರಿಂದ೨೦೧೩ರ ವರೆಗಿನ೬೩ವರ್ಷಗಳಲ್ಲಿ ಭಾರತದದ ಒಟ್ಟು ನೇರ ವಿದೇಶೀ ಹೂಡಿಕೆ೨೯೨ಶತಕೋಟಿ ಡಾಲರ್ ಗಳಾಗಿದ್ದರೆ೨೦೧೪-೧೫ರಿಂದ೨೦೨೦-೨೧ರ ವರೆಗಿನ ಒಟ್ಟು೭ವರ್ಷಗಳ ಅವಧಿಯಲ್ಲಿ ಭಾರತದ ನೇರ ವಿದೇಶಿ ಹೂಡಿಕೆ೪೪೦ಶತಕೋಟಿ ಡಾಲರ್ ಗಳು! ಇದು ಭಾರತದ ಬಗ್ಗೆ ವಿದೇಶಿ ಹೂಡಿಕೆದಾರರಲ್ಲಿ ವಿಶ್ವಾಸವು ಹೆಚ್ಚಿರುವುದನ್ನು ಸೂಚಿಸುತ್ತದೆ.
ನವೋದ್ಯಮಗಳ ಉಗಮತಾಣ: ೨೦೨೦ರ ಡಿಸೆಂಬರ್ ಅಂತ್ಯದವರೆಗೆ ಭಾರತದಲ್ಲಿ೪೧ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಸ್ಟಾರ್ಟ್ ಅಪ್‌ಗಳು ರೂಪುಗೊಂಡಿದ್ದವು. ಈ ನವೋದ್ಯಮಗಳು೪,೭೦,೦೦೦ಗಳಷ್ಟು ನೇರ ಉದ್ಯೋಗಗಳನ್ನು ಸೃಷ್ಟಿಸಿದ್ದರೆಇದರ ನಾಲ್ಕು ಪಟ್ಟು ಪರೋಕ್ಷ ಉದ್ಯೋಗಗಳನ್ನು ನಿರ್ಮಿಸಿವೆ.
ಇವುಗಳಲ್ಲಿ೫೧ನವೋದ್ಯಮಗಳು ಯುನಿಕಾರ್ನ್ ಸ್ಟಾರ್ಟ್ ಅಪ್ ಗಳಾಗಿ ಬೆಳೆದಿವೆ. ಶತಕೋಟಿ ಡಾಲರ್ (ಸುಮಾರು೭೩೦೦ಕೋಟಿ ರುಪಾಯಿಗಳು) ನಿಂದ ಹೆಚ್ಚು ಮೌಲ್ಯದ ನವೋದ್ಯಮಗಳನ್ನು ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳೆಂದು ಕರೆಯ ಲಾಗುತ್ತದೆ. ಈಗಿನ೫೧ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳಲ್ಲಿ೪೭ಸ್ಟಾರ್ಟ್‌ಅಪ್ ಗಳು ಯುನಿಕಾರ್ನ್ ಗಳಾಗಿ ರೂಪುಗೊಂಡದ್ದು೨೦೧೪ರ ನಂತರವೇ.೨೦೧೪ರವರೆಗೆ ಭಾರತದಲ್ಲಿ೪ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳು ಮಾತ್ರ ಇದ್ದವು.
೨೦೧೫ರಲ್ಲಿ೫, ೨೦೧೬ರಲ್ಲಿ೨,೨೦೧೮ರಲ್ಲಿ೮, ೨೦೧೯ರಲ್ಲಿ೯, ೨೦೨೦ರಲ್ಲಿ೯ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳು ರೂಪುಗೊಂಡಿವೆ.೨೦೨೧ರ ಜನವರಿಯಿಂದ ಮೇ ತಿಂಗಳವರೆಗಿನ೫ತಿಂಗಳಲ್ಲಿ೧೫ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳು ಭಾರತದಲ್ಲಿ ರೂಪುಗೊಂಡಿವೆ. ಈ ಅವಧಿಯಲ್ಲಿ ಚೀನಾದಲ್ಲಿ ರೂಪುಗೊಂಡ ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳ ಸಂಖ್ಯೆ ಕೇವಲ೩.
ಜಾಗತಿಕವಾಗಿ ಯುನಿಕಾರ್ನ್ ಸ್ಟಾರ್ಟ್ ಅಪ್ ಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ೧೨೪,೨ನೇ ಸ್ಥಾನದಲ್ಲಿರುವ ಚೀನಾದಲ್ಲಿ೧೦೪ಹಾಗೂ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ೫೧ಯುನಿಕಾರ್ನ್ ಸ್ಟಾರ್ಟ್ ಅಪ್ಗಳು ಇವೆ. ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ನಲ್ಲಿ೧೬ಯುನಿಕಾರ್ನ್ ನವೋದ್ಯಮಗಳಿವೆ. ಜಾಗತಿಕ ಉತ್ಪಾದನಾ ಕೇಂದ್ರ: ಭಾರತವಿಂದು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಬೆಳೆಯುತ್ತಿದೆ.
ಕ್ಸಿಯೋಮಿ, ರಿಯಲ್ ಮಿ, ಒಪ್ಪೋ, ವನ್ ಪ್ಲಸ್, ವಿವೋ, ಲೆನೋವೋ ಸಹಿತ ಚೀನಾ ಮೂಲದ೯ಮೊಬೈಲ್ ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ದೊಡ್ಡ ಪ್ರಮಾಣದ ಉತ್ಪಾದನಾ ಘಟಕಗಳನ್ನು ಹೊಂದಿವೆ. ಕೊರಿಯಾ ಮೂಲದ ಸ್ಯಾಂಮ್ಸಂಗ್ ಸಂಸ್ಥೆಗೆ ನೋಯಿಡಾದಲ್ಲಿ ಅತೀ ದೊಡ್ಡ ಸ್ಮಾರ್ಟ್ಫೋನ್ ಉತ್ಪಾದನಾ ಘಟಕವಿದೆ.
ಸ್ಯಾಂಮ್ಸಂಗ್ ತನ್ನ ಮೊಬೈಲ್ ಡಿಸ್ ಪ್ಲೇಯನ್ನು ತಯಾರಿಸುವ ಚೀನಾದ ಘಟಕವನ್ನು ಮುಚ್ಚಿ ಸಂಪೂರ್ಣವಾಗಿ ಭಾರತದನೋಯಿಡಾ ಘಟಕಕ್ಕೆ ಸ್ಥಳಾಂತರಗೊಂಡಿದೆ. ಅಮೆರಿಕದ ಆಪಲ್ ಮೊಬೈಲ್ ಫೋನ್ ಸಂಸ್ಥೆಗೆ ಕರ್ನಾಟಕ ಹಾಗೂತಮಿಳುನಾಡುಗಳಲ್ಲಿ ಉತ್ಪಾದನಾ ಘಟಕಗಳಿವೆ. ಆಪಲ್, ನೋಕಿಯಾ, ಕ್ಸಿಯೋಮಿ ಮೊದಲಾದ ಕಂಪನಿಗಳಿಗೆ ಸ್ಮಾರ್ಟ್ಫೋನ್ ತಯಾರಿಸಿ ಪೂರೈಸುತ್ತಿರುವ ತೈವಾನ್ ಮೂಲದ-ಕ್ಸ್ಕಾನ್ ಭಾರತದಲ್ಲಿ ಹಲವೆಡೆ ಉತ್ಪಾದನಾ ಘಟಕಗಳನ್ನುಹೊಂದಿದೆ.
೨೦೧೪ರಲ್ಲಿ ಭಾರತದಲ್ಲಿ೨ಮೊಬೈಲ್ ಪೋನ್ ಉತ್ಪಾದನಾ ಘಟಕಗಳಿದ್ದರೆ೨೦೨೦ರಲ್ಲಿ ಈ ಸಂಖ್ಯೆ೨೦೦ಕ್ಕೆ ಏರಿದೆ. ಚೀನಾದ ಹೊರತಾಗಿ ಜಾಗತಿಕವಾಗಿ ೨ನೇ ಅತೀ ಹೆಚ್ಚು ಮೊಬೈಲ್ ಫೋನ್‌ಗಳನ್ನು ಉತ್ಪಾದಿಸಿದ ದೇಶ ಭಾರತವೇ. ಭಾರತದಿಂದ೨೦೨೦ನೇ ಇಸವಿಯಲ್ಲಿ೮೮೦೬ಕೋಟಿ ರುಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ರಫ್ತು ಮಾಡಲಾಗಿದೆ. ಇದರಲ್ಲಿ ಸ್ಮಾರ್ಟ್ ಫೋನ್‌ಗಳ ನಿರ್ಯಾತದ ಮೌಲ್ಯ೩೦೬೧ಕೋಟಿ ರುಪಾಯಿಗಳು. ಕರೋನಾ ನಿಮಿತ್ತದ ಜಾಗತಿಕ ಆರ್ಥಿಕ ಕುಸಿತದ ನಡುವೆಯೂ೨೦೨೦ರಲ್ಲಿ೬,೭೭,೩೧೦ಪ್ರಯಾಣಿಕ ವಾಹನಗಳು ಹಾಗೂ೩೫,೨೦,೩೭೦ದ್ವಿಚಕ್ರ ವಾಹನಗಳು ಭಾರತದಿಂದನಿರ್ಯಾತ ವಾಗಿವೆ. ವಿದೇಶಗಳ ಅಟೋಮೊಬೈಲ್ ಉತ್ಪಾದಕರು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ತೆರೆದಿದ್ದಾರೆ.
ಜಪಾನ್‌ನ ಆಟೋ ಮೊಬೈಲ್ ಉತ್ಪಾದನಾ ಸಂಸ್ಥೆಗಳಾದ ಟೊಯೋಟೋ, ಸುಶೋ ಹಾಗೂ ಸುಮಿದಾಗಳು ಚೀನಾದಲ್ಲಿರುವ ಉತ್ಪಾದನಾ ಘಟಕಗಳನ್ನು ಮುಚ್ಚಿ ಭಾರತಕ್ಕೆ ಸ್ಥಳಾಂತರಗೊಂಡಿದ್ದಾರೆ. ಮುಂದಿನ೫ವರ್ಷಗಳಲ್ಲಿ ಭಾರತವು ಅಟೋ ಮೊಬೈಲ್ ಕ್ಷೇತ್ರದ ಜಾಗತಿಕ ಉತ್ಪಾದನಾ ಘಟಕವಾಗಿ ಹೊಮ್ಮಲಿದೆ.
ಬಲಗೊಳ್ಳುತ್ತಿರುವ ದೇಶದ ಆಂತರಿಕ ಆರ್ಥಿಕತೆ:ಭಾರತದ ಆಂತರಿಕ ಆರ್ಥಿಕತೆಯೂ ಬಲಿಷ್ಠವಾಗುತ್ತಿದೆ. ಒಟ್ಟು ದೇಶೀಯಉತ್ಪಾದನೆಯ (ಜಿಡಿಪಿ) ಆಧಾರದಲ್ಲಿ ಭಾರತವಿಂದು ಜಾಗತಿಕವಾಗಿ೬ನೇ ಸ್ಥಾನದಲ್ಲಿದೆ.೨೦೧೪ರಲ್ಲಿ ಭಾರತವು ೧೦ನೆಯಸ್ಥಾನದಲ್ಲಿತ್ತು.
೨೦೨೫ರ ಒಳಗಡೆ ಭಾರತವು೫೦೦೦ಶತಕೋಟಿ ಡಾಲರ್‌ಗಳ ಜಿಡಿಪಿಯನ್ನು ಹೊಂದಿ ಜಾಗತಿಕವಾಗಿ೪ನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಕರೋನಾದ ಮೊದಲ ಅಲೆಯ ಲಾಕ್‌ಡೌನ್‌ನಿಂದ ಚೇತರಿಸಿಕೊಂಡ ನಂತರ ಅಕ್ಟೋಬರ್೨೦೨೦ರಿಂದ ಮೇ೨೦೨೧ರ ವರೆಗೆ ಎಲ್ಲಾ ತಿಂಗಳುಗಳಲ್ಲಿ೧ಲಕ್ಷ ಕೋಟಿ ರುಪಾಯಿ ಗಳಿಗಿಂತಹೆಚ್ಚು ಜಿ ಎಸ್ ಟಿ ಭಾರತದಲ್ಲಿ ಸಂಗ್ರಹವಾಗಿದೆ.
ಏಪ್ರಿಲ್೨೦೨೧ರಲ್ಲಿ ಅತೀ ಹೆಚ್ಚು೧.೪೧ಲಕ್ಷ ಕೋಟಿ ರುಪಾಯಿಗಳ ಜಿಎಸ್‌ಟಿ ಸಂಗ್ರಹ ಆಗಿದೆ.೨೦೧೯-೨೦ರಲ್ಲಿ ಆದಾಯತೆರಿಗೆಯೂ ಸೇರಿದಂತೆ೧೧,೧೯,೨೪೭ಕೋಟಿ ರುಪಾಯಿಗಳ ನೇರ ತೆರಿಗೆ ಸಂಗ್ರಹ ಆಗಿತ್ತು.೨೦೨೦-೨೧ರ ಮಹಾ ಆರ್ಥಿಕಹಿಂಜರಿತದ ನಡುವೆಯೂ೯.೪೫,೦೦೦ಕೋಟಿ ರುಪಾಯಿಗಳಷ್ಟು ನೇರ ತೆರಿಗೆ ಸಂಗ್ರಹವಾಗಿತ್ತು.೨೦೧೩ – ೧೪ರಲ್ಲಿ ಸಂಗ್ರಹವಾದ ನೇರ ತೆರಿಗೆಯ ಪ್ರಮಾಣ೬,೪೧,೮೩೫ಕೋಟಿಗಳಾಗಿತ್ತು.
ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲೂ ಭಾರೀ ಏರಿಕೆಯಾಗಿದ್ದು ಇದೀಗ೬೦೦ಶತಕೋಟಿ ಡಾಲರ್‌ಗಳಿಗೆ ಏರಿ ಅತೀ ಹೆಚ್ಚು ವಿದೇಶಿ ವಿನಿಮಯ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು೫ನೇ ಸ್ಥಾನಕ್ಕೇರಿದೆ. ಕಳೆದ೧೨ತಿಂಗಳುಗಳಲ್ಲಿ೧೨೫ಶತಕೋಟಿ ಡಾಲರ್‌ಗಳಷ್ಟು ವಿದೇಶಿ ವಿನಿಮಯ ಭಾರತದ ಬೊಕ್ಕಸಕ್ಕೆ ಸೇರಿದೆ.೨೦೧೪ರಲ್ಲಿ ಭಾರತದಲ್ಲಿ ಸಂಗ್ರಹವಿದ್ದ ವಿದೇಶಿ ವಿನಿಮಯ ಪ್ರಮಾಣವು೩೦೩.೬೭ಶತಕೋಟಿ ಡಾಲರ್ ಗಳಾಗಿದ್ದವು.
ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿ:೨೦೧೪ರಲ್ಲಿ ಭಾರತದ ಶೇ.೭೫ರಷ್ಟು ಮನೆಗಳಿಗೆಮಾತ್ರ ವಿದ್ಯುತ್ ಸಂಪರ್ಕವಿತ್ತು.೧೮೪೫೨ಹಳ್ಳಿಗಳು ಹಾಗೂ೩.೫ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಪ್ರಧಾನ್ಮಂತ್ರಿ ಹರ್ ಘರ್ ಬಿಜಲೀ ಯೋಜನಾದ ಅಡಿಯಲ್ಲಿ ಈ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಯಿತು ಹಾಗೂ೩.೫ಕೋಟಿ ಬಡವರ ಮನೆಗಳಿಗೆ ಉಚಿತವಾಗಿ ವಯರಿಂಗ್ ಮಾಡಿಸಿ ವಿದ್ಯುತ್ ಸಂಪರ್ಕವನ್ನು ಕೊಡಲಾಯಿತು.
೨೦೨೦ನೇ ಇಸವಿಯಲ್ಲಿ ದೇಶದ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ಲಭಿಸಿ ದೇಶದಶೇ.೧೦೦ಮನೆಗಳು ವಿದ್ಯುದೀಕರಣ ಗೊಂಡವು.೨೦೧೪ರಲ್ಲಿ ದೇಶದ ಶೇ.೪೩ಮನೆಗಳಿಗೆ ಮಾತ್ರ ಶೌಚಾಲಯಗಳು ಲಭ್ಯವಿದ್ದವು. ಶೇ.೫೭ಭಾರತೀಯರು ಶೌಚಕ್ಕೆ ಬಯಲನ್ನೇ ಆಶ್ರಯಿಸುತ್ತಿದ್ದರು. ಸ್ವಚ್ಛ ಭಾರತ್ ಅಭಿಯಾನ ಯೋಜನೆಯಡಿಯಲ್ಲಿ೧೧ಕೋಟಿಗೂ ಅಧಿಕ ಮನೆಗಳಿಗೆ ಶೌಚಾಲಯಗಳನ್ನು ಕಟ್ಟಿಸಿಕೊಡಲಾಯಿತು. ಈಗ ದೇಶದ ಬಹುತೇಕ ಶೇ.೧೦೦ಮನೆಗಳಿಗೆ ಶೌಚಾಲಯವು ಉಪಲಬ್ಧವಿದೆ.
೨೦೧೫ರಲ್ಲಿ ಭಾರತದ ಶೇ.೪೫ರಷ್ಟು ಮನೆಗಳಲ್ಲಿ ಮಾತ್ರ ಅಡುಗೆ ಅನಿಲದ ಲಭ್ಯತೆಯಿತ್ತು. ಗ್ರಾಮೀಣ ಪ್ರದೇಶದಲ್ಲಂತೂ ಈ ಪ್ರಮಾಣ ಶೇ.೩೦ಕ್ಕಿಂತಲೂ ಕಡಿಮೆ ಇತ್ತು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ದೇಶದ೧೧ಕೋಟಿ ಬಡ ಮಹಿಳೆಯರ ಮನೆಗಳಿಗೆ ಉಚಿತ ಗ್ಯಾಸ್ ಸಂಪರ್ಕ ಕೊಡಲಾಗಿದೆ. ಈಗ ದೇಶದ ಶೇ.೯೭.೫ಮನೆಗಳಿಗೆ ಅಡುಗೆ ಅನಿಲ ಸಂಪರ್ಕವಿದೆ.
೨೦೧೯ರಲ್ಲಿ ದೇಶದ೩.೩ಕೋಟಿ ಗ್ರಾಮೀಣ ಮನೆಗಳಿಗೆ ಮಾತ್ರ ನಲ್ಲಿಯ ಮೂಲಕ ಕುಡಿಯುವ ನೀರಿನ ಸಂಪರ್ಕವಿದ್ದಿದ್ದು ಕಳೆದೊಂದು ವರ್ಷದಲ್ಲಿ ಪ್ರಧಾನ ಮಂತ್ರಿ ಜಲ್ ಜೀವನ್ ಯೋಜನೆಯಡಿಯಲ್ಲಿ೪.೨೫ಕೋಟಿ ಮನೆಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕವನ್ನು ನೀಡಲಾಗಿದೆ.೨೦೨೪ನೇ ಇಸವಿಯೊಳಗಾಗಿ ದೇಶದ ಎಲ್ಲ೧೯ಕೋಟಿ ಗ್ರಾಮೀಣ ಮನೆಗಳಿಗೆ ನಲ್ಲಿಯ ಮೂಲಕ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ಈ ಹಿಂದೆ೨೦,೦೦,೦೦೦ಕಿಲೋ ಮೀಟರ್‌ಗಳಷ್ಟಿದ್ದ ಗ್ರಾಮೀಣ ರಸ್ತೆಗಳು ದುಪ್ಪಟ್ಟಾಗಿ ಈಗ೪೧,೬೭,೦೦೦ಕಿಲೋ ಮೀಟರ್‌ ಗಳಿಗೆ ಏರಿದೆ. ದಿನವೊಂದಕ್ಕೆ೫ಕಿಲೋ ಮೀಟರ್‌ನಷ್ಟು ವೇಗದಲ್ಲಿ ತಯಾರಾಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದವೇಗ ವೃದ್ಧಿಯಾಗಿದ್ದು ಈಗ ದಿನವೊಂದಕ್ಕೆ೩೭ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ರೂಪೀಕರಣಗೊಳ್ಳುತ್ತಿದೆ. ದೇಶದ ಜನರಿಂದು ಡಿಜಿಟಲ್ ಜಗತ್ತಿಗೆ ತೆರೆದುಕೊಂಡಿದ್ದಾರೆ, ಸರಕಾರದ ಯೋಜನೆಗಳು ಡಿಜಿಟಲ್ ಮಾಧ್ಯಮದ ಮೂಲಕ ಜನರಿಗೆ ತಲುಪುತ್ತಿವೆ.
ಸರಕಾರದ ಸಬ್ಸಿಡಿ, ಪೆನ್ಷನ್‌ಗಳು ಸೋರಿಕೆಯಾಗದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿವೆ. ದೇಶದಲ್ಲಿ ಸೋಲಾರ್ ಕ್ರಾಂತಿಯಾಗಿದೆ.೨೦೧೪ರಲ್ಲಿ೨ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪತ್ತಿಯಾಗುತ್ತಿದ್ದ ಭಾರತಲ್ಲಿ ಇದೀಗ೪೦ಗಿಗಾವ್ಯಾಟ್ ಸೋಲಾರ್ ಉತ್ಪತ್ತಿಯಾಗುತ್ತಿದೆ. ಸೋಲಾರ್, ಪವನ ಯಂತ್ರಗಳು ಸೇರಿದಂತೆ, ಅಸಾಂಪ್ರದಾಯಿಕ ಮೂಲಗಳಿಂದ ಭಾರತದಲ್ಲಿಂದು೯೩ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
೯ರಷ್ಟು ಇದ್ದ ಏಮ್ಸ ಆಸ್ಪತ್ರೆಗಳನ್ನು೨೫ಕ್ಕೆ ಏರಿಸಲಾಗಿದೆ,೧೫ರಷ್ಟು ಇದ್ದ ಐಐಟಿಗಳು೨೩ಕ್ಕೆ ಏರಿವೆ,೯ರಷ್ಟು ಇದ್ದ ಐಐಟಿಗಳನ್ನು೨೫ಕ್ಕೆ ಏರಿಸಲಾಗಿದೆ. ಹಿಂದೆ ದೇಶಾದ್ಯಂತ೩೯೮ಮೆಡಿಕಲ್ ಕಾಲೇಜುಗಳು ಇದ್ದಿದ್ದು ಈಗ ಆ ಸಂಖ್ಯೆ೫೬೨ಕ್ಕೆ ಏರಿದೆ. ಹೀಗೆ ಲೆಕ್ಕ ಹೇಳುತ್ತಾ ಹೋದರೆ ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಆದ ಧನಾತ್ಮಕ ಬದಲಾವಣೆಗಳಿಗೆ ಲೆಕ್ಕವಿಲ್ಲ.ಸಾಮಾಜಿಕ ಅಭಿವೃದ್ಧಿ ಹಾಗೂ ಪರಿಸರದ ಸಂರಕ್ಷಣೆಯೊಂದಿಗೆ ಆರ್ಥಿಕ ಅಭಿವೃದ್ಧಿಯಾಗುತ್ತಿದೆ. ಇದುವೇ ಸುಸ್ಥಿರ ಅಭಿವೃದ್ಧಿ.