ದೇಶದ ಸಾಂಸ್ಕೃತಿಕ ಮಂಡಲವಾಗಲಿದೆ ಸೆಂಟ್ರಲ್ ವಿಸ್ತಾ
ಅವಲೋಕನ
ಪ್ರತಿಭಾ ಪ್ರಹ್ಲಾದ್‌, ಖ್ಯಾತ ನೃತ್ಯ ಕಲಾವಿದೆ
ಯಾವುದೇ ದೇಶದ ರಾಷ್ಟ್ರೀಯ ಮ್ಯೂಸಿಯಂನ ಬಹುಮುಖ್ಯ ಉದ್ದೇಶ ಆ ದೇಶದ ಆಳವಾದ ಐತಿಹಾಸಿಕ ಬೇರುಗಳನ್ನು ಇಂದಿನತಲೆಮಾರಿಗೆ ತೋರಿಸುವ ಮೂಲಕ ಯುವಜನರಲ್ಲಿ ತಮ್ಮ ಪೂರ್ವಜರ ಹಿರಿಮೆಯ ಬಗ್ಗೆ ಹಾಗೂ ತಮ್ಮ ದೇಶದ ಶ್ರೀಮಂತ ಇತಿಹಾಸದ ಬಗ್ಗೆ ಅರಿವು ಮೂಡಿಸುವು ದಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಆಗಾಗ ನಾವು ಪ್ರಾಚೀನ ಸಂಸ್ಕೃತಿ ಹಾಗೂ ಜನ ಜೀವನವನ್ನು ಎಡತಾಕಬೇಕಾಗುತ್ತದೆ.
ದೇಶದ ಈಗಿನ ಭೌತಿಕ ಗಡಿಯೊಳಗೆ ಹಿಂದೆ ಏನೆಲ್ಲಾ ಆಗಿಹೋಗಿದೆ ಹಾಗೂ ಇಲ್ಲಿ ರಾಜ್ಯಭಾರ ನಡೆಸಿದ ರಾಜಮನೆತನಗಳು ಏನೇನು ಸಾಧನೆಗೈದಿವೆ ಎಂಬುದನ್ನು ಎತ್ತಿ ತೋರಿಸಬೇಕಾಗುತ್ತದೆ. ಇವೆಲ್ಲದರ ಅಂತಿಮ ಗುರಿ ಏನೆಂದರೆ ನಮ್ಮ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹಾಗೂ ಇಲ್ಲಿನ ಸಾಂಸ್ಕೃತಿಕ ಗುರುತುಗಳನ್ನು ಪುನಃ ಪುನಃ ಸ್ಪರ್ಶಿಸುವುದು ಹಾಗೂ ತನ್ಮೂಲಕ ಈ ನೆಲದಲ್ಲಿ ಆಗಿಹೋದ ಜನರ ಕುರಿತು ಸಮಗ್ರವಾದ ಐತಿಹಾಸಿಕ ದೃಷ್ಟಿಕೋನವೊಂದನ್ನು ಕಟ್ಟಿಕೊಡುವುದು.
ಒಂದು ರಾಷ್ಟ್ರದ ಕಾಲ – ದೇಶದ ಚಿತ್ರಣವನ್ನು ತೆರೆದಿಡುವುದರ ಜತೆಗೆ ರಾಷ್ಟ್ರೀಯ ಮ್ಯೂಸಿಯಂಗಳು ಆ ದೇಶದ ನೆನಪುಗಳನ್ನು ಹಾಗೂ ಆಯಾ ಕಾಲಘಟ್ಟದ ಕ್ರಿಯೆಗಳ ಅರ್ಥವ್ಯಾಪ್ತಿಯನ್ನು ಕೂಡ ನಿರಂತರವಾಗಿ ವಿಮರ್ಶೆ ಮಾಡುತ್ತಿರುತ್ತವೆ. ತಮ್ಮ ಸಂಗ್ರಹ ದಲ್ಲಿರುವ ವಸ್ತುಗಳ ಅರ್ಥವನ್ನು ಮರುವ್ಯಾಖ್ಯಾನ ಮಾಡುವ ಮೂಲಕ ದೇಶದ ಒಟ್ಟಾರೆ ಸೈದ್ಧಾಂತಿಕ ಚೌಕಟ್ಟಿನ ಮೇಲೆ ಬೆಳಕು ಚೆಲ್ಲುವ ಹಾಗೂ ಅದನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುವ ಕೆಲಸವನ್ನೂ ಮಾಡುತ್ತವೆ.
‘ಮ್ಯೂಸಿಯಂನಲ್ಲಿರುವ ವಸ್ತುಗಳಿಗೆ ಹಲವು ಅರ್ಥಗಳಿರುತ್ತವೆ. ಇತಿಹಾಸದ ವಿವಿಧ ವ್ಯಾಖ್ಯಾನಗಳನ್ನು ಶ್ರುತಪಡಿಸಲು ಅವುಗಳನ್ನು ಸಾಕ್ಷ್ಯವಾಗಿ ಬಳಸಬಹುದು’ ಎನ್ನುತ್ತಾರೆ ಸೈಮನ್ ನೆಲ್. ಮ್ಯೂಸಿಯಂನ ಸರಿಯಾದ ಸ್ಥಳದಲ್ಲಿ ಒಂದು ವಸ್ತು ವನ್ನು ಇರಿಸಿದಾಗ ಅದಕ್ಕೆ ಅದರದೇ ಆದ ಮೌಲ್ಯ ಹಾಗೂ ಅರ್ಥವೊಂದು ಪ್ರಾಪ್ತವಾಗುತ್ತದೆ. ಸಾಮಾನ್ಯವಾಗಿ ಅದನ್ನು ಮುದ್ರಿತ ಅಕ್ಷರ, ಗೋಡೆಬರಹ, ಕೆಟಲಾಗ್, ಆಡಿಯೋ ಕ್ಲಿಪ್, ವಿಡಿಯೋ ಕ್ಲಿಪ್‌ಗಳ ಮೂಲಕ ಪ್ರದರ್ಶಿಸಲಾಗುತ್ತದೆ. ಆ ವಸ್ತುವಿನ ಕಾಲ ಹಾಗೂ ಮಹತ್ವದ ಬಗ್ಗೆ ಅವುಗಳಲ್ಲಿ ಹೇಳಲಾಗಿರುತ್ತದೆ. ಈ ವಿವರಣೆಗಳೇ ಆ ವಸ್ತುವಿನ ಬಗೆಗಿನ ನಮ್ಮ ದೃಷ್ಟಿಕೋನವನ್ನು ವಿಸ್ತರಿಸುತ್ತವೆ. ಇಂದು ತಂತ್ರಜ್ಞಾನ ಸಾಕಷ್ಟು ಬೆಳೆದಿದೆ.
ಈಗ ಮ್ಯೂಸಿಯಂಗಳಲ್ಲಿ3ಡಿ ಮಲ್ಟಿ ಮೀಡಿಯಾಗಳನ್ನು ಬಳಸಿ ಸುಧಾರಿತ ಪ್ರಯೋಗಗಳನ್ನು ಮಾಡಲು ಅವಕಾಶವಿದೆ.ಇಷ್ಟೆಲ್ಲ ಮಾಡಿದಾಗ ಒಂದು ದೇಶದ ಸಮಗ್ರ ನೆನಪಿನ ಚರಿತ್ರೆಯನ್ನು ಮತ್ತೆ ಮತ್ತೆ ನಾವು ಮೆಲುಕು ಹಾಕಲು ಸಾಧ್ಯವಾಗುತ್ತದೆ. ಇದೊಂದು ನಿರಂತರ ಪ್ರಕ್ರಿಯೆ.
ದೆಹಲಿಯ ಸೆಂಟ್ರಲ್ ವಿಸ್ತಾ ಯೋಜನೆಯಡಿ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ಸ್ಥಳಾಂತರಗೊಳಿಸುವ ನಿರ್ಧಾರವನ್ನು ಅನೇಕರು ತೀವ್ರವಾಗಿ ಟೀಕಿಸುತ್ತಿದ್ದಾರೆ. ನನಗೊಂದು ಅನುಮಾನವಿದೆ. ಹೀಗೆ ಟೀಕೆ ಮಾಡುತ್ತಿರುವವರಲ್ಲಿ ಎಷ್ಟು ಜನರಿಗೆ ಈ ಮ್ಯೂಸಿಯಂನ ನೀಲನಕ್ಷೆ ಸಿದ್ಧವಾಗಿದ್ದು1946ರ ಮೇ ತಿಂಗಳಲ್ಲಿ ಎಂಬುದು ಗೊತ್ತಿದೆ? ಮೌರೀಸ್ ಗ್ವೇಯರ್ ಎಂಬ ಬ್ರಿಟಿಷ್ ಅಧಿಕಾರಿ ಹೆಚ್ಚುಕಮ್ಮಿ100ವರ್ಷದ ಹಿಂದೆ, ಭಾರತಕ್ಕೆ ಸ್ವಾತಂತ್ರ್ಯ ಬರುವುದರ ಹಿಂದಿನ ವರ್ಷ ಈ ಮ್ಯೂಸಿಯಂ ವಿನ್ಯಾಸ ಗೊಳಿಸಿದ್ದ.
ಮರುವರ್ಷ ಲಂಡನ್ನಿನ ರಾಯಲ್ ಅಕಾಡೆಮಿಯಲ್ಲಿ ಭಾರತೀಯ ಕಲೆಗಳ ಪ್ರದರ್ಶನ ಆಯೋಜಿಸಲಾಗಿತ್ತು. ಭಾರತದಲ್ಲಿರುವ ವಿವಿಧ ಮ್ಯೂಸಿಯಂಗಳಿಂದ ಆಯ್ದ ಕಲಾಕೃತಿಗಳನ್ನು ಅಲ್ಲಿಗೆ ಕೊಂಡೊಯ್ಯಲಾಗಿತ್ತು. ಲಂಡನ್ನಿನ ಬರ್ಲಿಂಗ್ಟನ್ ಹೌಸ್‌ನಗ್ಯಾಲರಿಯಲ್ಲಿ 1947-48ರ ಚಳಿಗಾಲದ ಕೆಲ ತಿಂಗಳ ಕಾಲ ಈ ಪ್ರದರ್ಶನ ನಡೆದಿತ್ತು. ಹೊಸ ಸ್ವತಂತ್ರ ಭಾರತದ ನಾಗರಿಕತೆಯ ಇತಿಹಾಸವನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಹಾಗೂ ಇನ್ನಿತರ ಮುಂದುವರಿದ ದೇಶಗಳಿಗೆ ತೋರಿಸುವುದು ಅದರ ಉದ್ದೇಶವಾಗಿತ್ತು. ಇಡೀ ಪ್ರದರ್ಶನ ಬ್ರಿಟಿಷ್ ದೃಷ್ಟಿಕೋನದಿಂದ ಆಯೋಜಿತವಾಗಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ನಂತರ ಅಲ್ಲಿ ಪ್ರದರ್ಶನಕ್ಕಿಟ್ಟಿದ್ದ ಕಲಾಕೃತಿಗಳನ್ನು ಅವುಗಳ ಮೂಲ ಮ್ಯೂಸಿಯಂಗಳಿಗೆ ಮರಳಿಸುವುದಕ್ಕಿಂತ ಮೊದಲು1949ರಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಕೆಲ ಕಾಲ ಪ್ರದರ್ಶನಕ್ಕಿಡಬೇಕು ಎಂದು ನಿರ್ಧರಿಸ ಲಾಯಿತು. ನ್ಯಾಷನಲ್ಮ್ಯೂಸಿಯಂ ಸ್ಥಾಪನೆಗೆ ಇದೇ ಮುನ್ನುಡಿ ಯಾಯಿತು. ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ ಕಲಾ ಪ್ರದರ್ಶನ ಎಷ್ಟು ಯಶಸ್ವಿ ಯಾಯಿತು ಅಂದರೆ, ಹೀಗೆ ದೇಶದ ಎಲ್ಲ ಕಡೆಯಿಂದ ಕಷ್ಟಪಟ್ಟು ಕಲಾಕೃತಿಗಳನ್ನು ಒಂದೆಡೆಗೆ ತರಿಸಿ ಅದ್ಭುತವಾದ ಸಂಗ್ರಹ ವೊಂದನ್ನು ಮಾಡಿರುವುದರ ಹೆಚ್ಚಿನ ಲಾಭ ಪಡೆಯಲು ಅವುಗಳ ಪ್ರಾತಿನಿಧಿಕ ಸಂಗ್ರಹವಾಗಿ ದೆಹಲಿಯಲ್ಲೊಂದು ರಾಷ್ಟ್ರೀಯ ಮ್ಯೂಸಿಯಂ ಸ್ಥಾಪಿಸಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು.
ಅಂದರೆ, ಈ ಮ್ಯೂಸಿಯಂ ಸ್ಥಾಪಿಸಿದ್ದರ ಹಿಂದೆ ಆಳವಾದ ಚಿಂತನೆಯಾಗಲೀ, ಕ್ರಮಬದ್ಧವಾದ ಯೋಜನೆ ಯಾಗಲೀ ಇರಲಿಲ್ಲ. ತಜ್ಞರಾರೂ ಅದಕ್ಕಾಗಿ ಬದ್ಧತೆಯಿಂದ ಕೆಲಸ ಮಾಡಿರಲಿಲ್ಲ. ಭಾರತೀಯ ಚಿಂತಕರು ಹಾಗೂ ಪಂಡಿತರಾರೂ ಅದಕ್ಕೆ ತಮ್ಮ ಕೊಡುಗೆ ನೀಡಿರಲಿಲ್ಲ.1950ರ ದಶಕದಲ್ಲಿ ದೇಶದ ರಾಷ್ಟ್ರೀಯ ಮ್ಯೂಸಿಯಂ ಸ್ಥಾಪಿಸುವುದಕ್ಕೆ ವಸ್ತು ಸಂಗ್ರಹಾಲಯ ತಜ್ಞರಿಂದ ಮೌಲ್ಯಯುತ ಸಲಹೆ ಕೂಡ ಪಡೆದುಕೊಂಡಿರಲಿಲ್ಲ. ಹೀಗಾಗಿ ದೇಶದ ಇತಿಹಾಸಕ್ಕೆ ನ್ಯಾಯ ಒದಗಿಸುವ ಮ್ಯೂಸಿಯಂ ಇದಾಗಲಿಲ್ಲ ಎಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಈ ದೇಶವನ್ನು ಆಳಿದ ರಾಜ ಮನೆತನಗಳು, ಇಲ್ಲಿನ ಸಾಂಸ್ಕೃತಿಕ ವೈವಿಧ್ಯ, ಇಲ್ಲಿನ ಜನಜೀವನವನ್ನು ಬಿಂಬಿಸುವ ವಸ್ತುಗಳು ಹಾಗೂ ಕಲಾಕೃತಿಗಳು ಸಮಗ್ರವಾಗಿ ಇಲ್ಲಿನನಾಗರಿಕತೆಯ ಇತಿಹಾಸವನ್ನು ಸಾರುವ ರೀತಿಯಲ್ಲಿ ಈ ಮ್ಯೂಸಿಯಂನಲ್ಲಿ ಸಂಗ್ರಹವಾಗಲಿಲ್ಲ. ಆರಂಭದಲ್ಲಿ ಈ ಕಟ್ಟಡದಲ್ಲಿಬ್ರಿಟಿಷರಿಗೆ ಹಾಗೂ ಇಂಗ್ಲೆಂಡ್‌ಗೆ ಆಸಕ್ತಿ ಹುಟ್ಟಿಸುವಂಥ ವಸ್ತುಗಳು ಮಾತ್ರ ಇದ್ದವು.
ಇದರ ಬಗ್ಗೆ ಯೋಚಿಸಿ.75ವರ್ಷವೆಂಬುದು ಬಹಳ ಸುದೀರ್ಘ ಕಾಲ. ಭಾರತಕ್ಕೆ ಸ್ವಾತಂತ್ರ್ಯ ದೊರೆತು ಮುಕ್ಕಾಲು ಶತಮಾನ ವಾಯಿತು. ಇಷ್ಟು ಸಮಯದಲ್ಲಿ ಈ ದೇಶದ ವೈವಿಧ್ಯಮಯ ಇತಿಹಾಸವನ್ನು ನೆನಪಿನಲ್ಲಿಡಲು ಸಾಕಷ್ಟು ಮ್ಯೂಸಿಯಂಗಳನ್ನು ನಿರ್ಮಿಸಿ ಬಹಳಷ್ಟು ಹಣ ಖರ್ಚು ಮಾಡಿದ್ದೇವೆ. ದೇಶದ ರಾಜಧಾನಿಯ ಹೃದಯದಲ್ಲೇ ಇಂತಹ ಹಲವು ಮ್ಯೂಸಿಯಂಗಳಿವೆ. ಅವೆಲ್ಲವುಗಳ ಪೈಕಿ ರಾಷ್ಟ್ರೀಯ ಮ್ಯೂಸಿಯಂ ಬಹಳ ಮುಖ್ಯವಾದುದು.
ರೈಸಿನಾ ಹಿಲ್‌ನ ನಾರ್ತ್ ಮತ್ತು ಸೌತ್ ಬ್ಲಾಕ್‌ನ ಪ್ರತಿಷ್ಠಿತ ಜಾಗದಲ್ಲಿ ಇದು ದೇಶದ ಹೆಮ್ಮೆಯ ಪ್ರತೀಕದಂತೆ ಈ ಮ್ಯೂಸಿಯಂ ವಿರಾಜಮಾನವಾಗಲಿದೆ. ಸೆಂಟ್ರಲ್ ವಿಸ್ತಾ ಯೋಜನೆಗೆ ಮಾಡುತ್ತಿರುವ ‘ವ್ಯರ್ಥ’ ಖರ್ಚನ್ನು ಹಾಗೂ ಇದರ ಹಿಂದೆ ‘ನಮ್ಮ ಪರಂಪರೆಯ ಬಗ್ಗೆ ಇರುವ ಕಾಳಜಿಯ ಕೊರತೆ’ಯನ್ನು ವಿರೋಧಿಸಲು ತಮ್ಮ ಮನೆಗಳ ಐಷಾರಾಮದಿಂದ ಏಕಾಏಕಿ ಹೊರಬಂದಿರುವ ಸಿಆರ್‌ಟಿಬಿ (ಕನ್ಸರ್ನ್ಡ್ ರಿಟೈರ‍್ಡ್ ಟಾಪ್ ಬ್ಯೂರೋಕ್ರಾಟ್ಸ್ – ಕಳಕಳಿಯುಳ್ಳ ನಿವೃತ್ತ ಉನ್ನತ ಅಧಿಕಾರಿಗಳು)ಗಳಿಗೆ ನಾನು ಕೇಳುವುದಿಷ್ಟೆ: ‘ಪರಂಪರೆ’ಯ ಹೆಸರಿನಲ್ಲಿ ನೀವು ನಮ್ಮನ್ನಾಳಿದ ಬ್ರಿಟಿಷರು ಹೇಳಿದ ಇತಿಹಾಸಕ್ಕೇ ಈಗಲೂಜೋತುಬೀಳಲು ಇಷ್ಟಪಡುತ್ತೀರಾ? ನಮ್ಮ ಅಮೂಲ್ಯ ಕಲೆ, ವಾಸ್ತುಶಾಸ, ಕೆತ್ತನೆ, ಕಲಾಕೃತಿಗಳನ್ನು ಮರುಜೋಡಿಸಿ ಶ್ರೀಮಂತಇತಿಹಾಸದ ವೈಭವವನ್ನು ಮರಳಿ ಜಗತ್ತಿಗೆ ಸಾರುವ ಜವಾಬ್ದಾರಿಯಿಂದ ನುಣುಚಿಕೊಳ್ಳಬೇಕು ಎಂದು ಬಯಸುತ್ತೀರಾ? ಈ ನೆಲದಲ್ಲಿ ಹಲವಾರು ನೂರು ಶತಮಾನಗಳ ಕಾಲ ನಡೆದಾಡಿದ ನಾಗರಿಕ ಮನುಷ್ಯನ ಹಾಗೂ ಅವನಿಂದ ಶ್ರೀಮಂತವಾದ ನಾಗರಿಕತೆಯ ಸಮಗ್ರ ನೆನಪನ್ನು ಸಂರಕ್ಷಿಸುವ ಕೆಲಸ ಮಾಡುವುದು ಬೇಡವಾ? ನಮ್ಮ ಅಮೂಲ್ಯ ಸಂಪತ್ತನ್ನು ಪ್ರಸ್ತುತ ಎಷ್ಟು ಕೆಟ್ಟದಾಗಿ ಪ್ರದರ್ಶನಕ್ಕಿಟ್ಟಿದ್ದಾರೆ ಎಂಬುದಕ್ಕೆ ನಾವೆಲ್ಲ ಕುರುಡಾಗಬೇಕಾ? ಹೇಗೆ ನಮ್ಮ ಸಂಗ್ರಹದಲ್ಲಿರುವ ಅಗಾಧವಾದ ಅಮೂಲ್ಯ ವಸ್ತುಗಳಲ್ಲಿ ಕೆಲವನ್ನು ಮಾತ್ರ, ಅವುಗಳನ್ನೂ ಕಿರಿದಾದ ಜಾಗದಲ್ಲಿ, ಸರಿಯಾಗಿ ಗಾಳಿ – ಬೆಳಕು ಬಾರದ ಮಬ್ಬುಪರಿಸರದಲ್ಲಿ, ಒದ್ದೆಯಾದ ಗೋಡೆಗಳ ಹಿಂದೆ, ಸೋರುವ ಚಾವಣಿಗಳ ಕೆಳಗೆ ನಿರ್ಲಕ್ಷ್ಯದಿಂದ ಇರಿಸಿದ್ದಾರೆಂಬುದನ್ನು ನೋಡಿಕೊಂಡೂ ಸುಮ್ಮನಿರಬೇಕಾ? ಅದ್ಭುತ ನಾಗರಿಕತೆಯೊಂದರ ಇತಿಹಾಸವನ್ನು ಸಾರುವ, ಈ ನೆಲದ ಜನರ ಬದುಕನ್ನು ಹೊಸ ತಲೆಮಾರಿನವರಿಗೆ ಕಟ್ಟಿಕೊಡುವ ಈಗಿನ ರಾಷ್ಟ್ರೀಯ ಮ್ಯೂಸಿಯಂ ಎಷ್ಟು ಅಸ್ತವ್ಯಸ್ತವಾಗಿದೆ ಎಂಬುದು ನಿಮಗೆ ಕಾಣಿಸುತ್ತಿಲ್ಲವಾ? ಈಗ ವಿರೋಧಿಸುತ್ತಿರುವವರಲ್ಲಿ ಎಷ್ಟು ಜನರಿಗೆ ಒಂದು ನ್ಯಾಷನಲ್ ಮ್ಯೂಸಿಯಂ ಹೇಗಿರಬೇಕು ಎಂಬುದರ ಕಲ್ಪನೆಯಿದೆ? ಕನಿಷ್ಠ ಪಕ್ಷ ಒಂದು ಮ್ಯೂಸಿಯಂ ಹೇಗಿರಬೇಕು, ಮ್ಯೂಸಿಯಂ ಅಂದರೆ ಏನು ಎಂಬುದನ್ನು ಇವರು ಸರಕಾರದ ಸೇವೆಯಲ್ಲಿರುವಾಗ ಯಾವತ್ತಾದರೂ ಯೋಚಿಸಿದ್ದಾರಾ? ಇವರಲ್ಲಿ ಹೆಚ್ಚಿನವರು ನ್ಯೂಯಾರ್ಕ್‌ನ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ (ಮೋಮಾ) ಅಥವಾ ಅಲ್ಲೇ ಇರುವ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ (ಎಂಇಟಿ)ಗೆತಮ್ಮ ಕುಟುಂಬದವರ ಜತೆಗೆ ಹೋಗಿ ಫೋಟೋ ತೆಗೆಸಿಕೊಂಡಿರುತ್ತಾರೆ ಎಂಬುದು ನನಗೆ ಗೊತ್ತು.
ಆದರೆ ತಮ್ಮ ಅಧಿಕಾರಾವಧಿಯಲ್ಲಿ ಅವರು ಆ ಮ್ಯೂಸಿಯಂಗಳಲ್ಲಿ ನೋಡಿದ ಒಳ್ಳೆಯ ಅಂಶಗಳಲ್ಲಿ ಯಾವುದಾದರೂ ಒಂದನ್ನಾದರೂ ಭಾರತದ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಅಳವಡಿಸಿಕೊಳ್ಳುವ ಕನಿಷ್ಠ ಪ್ರಯತ್ನ ಮಾಡಿದ್ದಾರಾ? ಸಿಆರ್‌ಟಿಬಿಯಲ್ಲಿರುವ ಹೆಚ್ಚಿನ ಜನರು ನ್ಯಾಷನಲ್ ಮ್ಯೂಸಿಯಂಗೆ ಹಾಗೂ ನ್ಯಾಷನಲ್ ಆರ್ಕೈವ್ಸ್‌ಗೆ ಒಂದು ಸಲ ಭೇಟಿ ನೀಡುವ ಕಷ್ಟ ಕೂಡ ತೆಗೆದುಕೊಂಡಿರುವುದಿಲ್ಲ ಬಿಡಿ. ಆದರೆ ಅವರಿಗೆಲ್ಲ ಇವತ್ತು ಈ ಮ್ಯೂಸಿಯಂ ಬಗ್ಗೆ ಬಹಳ ಕಾಳಜಿ ಹುಟ್ಟಿಬಿಟ್ಟಿದೆ. ಒಂದು ವೇಳೆ ಇವರೇನಾದರೂ ಅಲ್ಲಿಗೊಮ್ಮೆ ಭೇಟಿ ನೀಡಿದ್ದಿದ್ದರೆ; ಅಲ್ಲಿನ ಅಮೂಲ್ಯ ವಸ್ತುಗಳ ಸಂಗ್ರಹವನ್ನು ಸೂಕ್ಷ್ಮವಾಗಿ ಗಮನಿಸಿದ್ದಿದ್ದರೆ; ಅಲ್ಲಿರುವ ನಾಣ್ಯಗಳು, ಕೆತ್ತನೆಗಳು, ಬಟ್ಟೆಗಳು, ಕಲಾಕೃತಿಗಳು, ಫಲಕಗಳು, ಚಿತ್ರಗಳು, ಕೈಬರಹ ಹೀಗೆ ಲಕ್ಷಾಂತರ ವಸ್ತುಗಳನ್ನು ನೋಡಿ ಬೆರಗಾಗಿದ್ದಿದ್ದರೆ; ಅವುಗಳ ಮೂಲಕ ನಮ್ಮ ದೇಶದ ಇತಿಹಾಸದ ಸಮಗ್ರತೆಯನ್ನು ಅರ್ಥ ಮಾಡಿಕೊಂಡಿದ್ದಿದ್ದರೆ; ಈ ಅಮೂಲ್ಯ ವಸ್ತುಗಳನ್ನು ಸಂರಕ್ಷಿಸಿ ಇನ್ನಷ್ಟು ಉತ್ತಮ ರೀತಿಯಲ್ಲಿ ಹೇಗೆ ಪ್ರದರ್ಶಿಸಬಹುದು ಎಂಬ ಬಗ್ಗೆ ಯೋಚಿಸಿದ್ದಿದ್ದರೆ ಅವರಿಗೆ ಈಗ ಈ ಮ್ಯೂಸಿಯಂ ಬಗ್ಗೆ ಮಾತನಾಡುವ ನೈತಿಕ ಹಕ್ಕಿರುತ್ತಿತ್ತು.
ಮ್ಯೂಸಿಯಂಗೆ ಭೇಟಿ ನೀಡುವವರ ಸಂಖ್ಯೆಯನ್ನು ಹೆಚ್ಚಿಸಲು ಯತ್ನಿಸಿದ ವೇಣು ವಾಸುದೇವನ್ ಹಾಗೂ ನ್ಯಾಷನಲ್ ಆರ್ಕೈವ್ಸ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ತೊಡಗಿಸಿಕೊಂಡು ಅದರ ಪ್ರಸ್ತುತತೆಯನ್ನು ಹೆಚ್ಚಿಸಿರುವ ಈಗಿನ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ರಾಘವೇಂದ್ರ ಸಿಂಗ್ ಅವರನ್ನು ಬಿಟ್ಟರೆ ಕಳೆದ ಮೂರು ದಶಕದಲ್ಲಿ ಇದರ ಬಗ್ಗೆ ಕನಿಷ್ಠ ಆಸಕ್ತಿ ತೋರಿಸಿದ ಒಬ್ಬನೇ ಒಬ್ಬ ಅಧಿಕಾರಿ ನಮಗೆ ಕಾಣಿಸುವುದಿಲ್ಲ.
ಚೀನಾ ಸೇರಿದಂತೆ ಎಲ್ಲಾ ದೇಶಗಳಲ್ಲೂ ಇಂದು ಪ್ರತಿಯೊಂದು ವಿಷಯದ ಕುರಿತು ಮ್ಯೂಸಿಯಂಗಳಿವೆ. (ಚೀನಾದಲ್ಲಿ ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ ಧರೆಗುರುಳಿದ ಮ್ಯೂಸಿಯಂಗಳನ್ನು ಅದ್ಭುತವಾಗಿ ಪುನರ್ ನಿರ್ಮಾಣ ಮಾಡಲಾಗಿದೆ.) ಅವು ಚಿಕ್ಕದಿರಬಹುದು, ದೊಡ್ಡದಿರಬಹುದು ಅಥವಾ ಮಧ್ಯಮ ಗಾತ್ರದ್ದಿರಬಹುದು, ಆದರೆ ಬೇರೆ ಬೇರೆ ವಿಷಯಗಳನ್ನು ಥೀಮ್ ಆಗಿ ಇರಿಸಿಕೊಂಡು ನಿರ್ಮಾಣವಾದ ಆ ಮ್ಯೂಸಿಯಂಗಳು ಆಯಾ ದೇಶದ ಇತಿಹಾಸದಿಂದ ಸಂಪದ್ಭರಿತವಾಗಿವೆ. ಇತಿಹಾಸದ ನಿರ್ದಿಷ್ಟ ಕಾಲಘಟ್ಟ ಹಾಗೂ ಸಮಯಕ್ಕೆ ಸೀಮಿತವಾದ ಮ್ಯೂಸಿಯಂಗಳೂ ಸಾಕಷ್ಟಿವೆ. ಅಲ್ಲಿ ಜನರು, ಭಾಷೆ, ಸಂಸ್ಕೃತಿ, ವಿಜ್ಞಾನದಲ್ಲಿನ ಸಾಧನೆ, ಬಾಹ್ಯಾಕಾಶ ವಿಜ್ಞಾನ, ಸಮುದ್ರ ಶಾಸ, ಕೃಷಿ, ಔದ್ಯೋಗೀಕರಣ, ರೈಲ್ವೆ, ವಿಮಾನ ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಆಯಾ ದೇಶಗಳು ಮಾಡಿರುವ ಸಾಧನೆಯ ಪ್ರತಿಯೊಂದು ತುಣುಕನ್ನೂ ದಾಖಲಿಸಲಾಗಿದೆ.
ಇಂಗ್ಲೆಂಡ್, ಜಪಾನ್, ಚೀನಾ ಹಾಗೂ ಅಮೆರಿಕದಲ್ಲಿ ನಾನು ಭೇಟಿ ನೀಡಿದ ಕೆಲ ಮ್ಯೂಸಿಯಂಗಳು ಯುದ್ಧ, ಸಮುದ್ರ, ಬಟ್ಟೆ, ಚಪ್ಪಲಿ, ಕೊನೆಗೆ ಡೈನೋಸಾರ್ ಹೀಗೆ ವಿಚಿತ್ರ ಸಂಗತಿಗಳ ಮೇಲೆ ನಿರ್ಮಾಣವಾಗಿದ್ದವು. ರಾಷ್ಟ್ರೀಯ ದುರಂತಗಳನ್ನು ಕೂಡ ಮ್ಯೂಸಿಯಂಗಳ ಮೂಲಕವೇ ದಾಖಲಿಸಲಾಗುತ್ತದೆ. ಇಸ್ರೇಲ್‌ನಲ್ಲಿರುವ ಹೋಲೋಕಾಸ್ಟ್ ಹಿಸ್ಟರಿ ಮ್ಯೂಸಿಯಂ, ಪೋಲೆಂಡ್‌ನಲ್ಲಿರುವ ಆಶ್ವಿಟ್ಜ್ – ಬರ್ಕೆನೌ ಮೆಮೋರಿಯಲ್ ಮ್ಯೂಸಿಯಂ ಅಥವಾ ಬೋಸ್ನಿಯಾದಲ್ಲಿರುವ ಮ್ಯೂಸಿಯಂ ಆಫ್ ಕ್ರೈಮ್ಸ್ ಅಗೇನಸ್ಟ್ ಹ್ಯುಮಾನಿಟಿ ಮುಂತಾದವು ಈ ದೇಶಗಳ ನಾಗರಿಕ ಇತಿಹಾಸದಲ್ಲಿ ನಡೆದ ಘನಘೋರ ಅಧ್ಯಾಯವನ್ನುಸಾರಿ ಹೇಳುತ್ತವೆ.
ಭೇಟಿ ನೀಡುವವರ ನೆನಪಿನ ಕೋಶಕ್ಕೆ ತಿದಿಯೊತ್ತಿ, ಅವರಿಗೆ ಜಗತ್ತಿನ ಇತಿಹಾಸದಲ್ಲಿ ಇಂಥ ಘಟನೆಗಳೂ ನಡೆದಿವೆ ಎಂಬುದನ್ನು ತಿಳಿಸಿ, ಅವರ ಪ್ರಜ್ಞೆಯನ್ನು ಉದ್ದೀಪನಗೊಳಿಸುವ ಮೂಲಕ ಮಾನವ ಕುಲದ ಜವಾಬ್ದಾರಿಯನ್ನೂ, ಮನುಷ್ಯನೇ ನಡೆಸಿದಅಮಾನವೀಯ ನರಮೇಧವನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತವೆ. ಮ್ಯೂಸಿಯಂಗಳು ತಮ್ಮಲ್ಲಿರುವ ವಸ್ತುಗಳ ಸಂಗ್ರಹದ ಮೂಲಕ ಇಂದಿನ ತಲೆಮಾರಿನ ಜನರ ಜತೆಗೆ ಹಿಂದಿನ ತಲೆಮಾರಿನ ಜನರ ಕುರಿತು ಒಳನೋಟಗಳೊಂದಿಗೆ ಮಾತನಾಡಬೇಕು. ತನ್ಮೂಲಕ ನಿರಂತರವಾಗಿ ಇತಿಹಾಸವನ್ನು ವರ್ತಮಾನದ ಜತೆಗೆ ಬೆಸೆಯುವ ಕೆಲಸ ಮಾಡುತ್ತಿರಬೇಕು.
‘ಮ್ಯೂಸಿಯಂನಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಸಂಗ್ರಹಿಸಿಡುವ ಭೌತಿಕ ವಸ್ತುಗಳು ನಮ್ಮ ಇತಿಹಾಸವನ್ನು ಸಂರಕ್ಷಿಸುವುದಿಲ್ಲ; ಬದಲಿಗೆ ಪ್ರತಿಯೊಂದು ಮ್ಯೂಸಿಯಂ ಕೂಡ ಇತಿಹಾಸದ ಕ್ಷಣಗಳಿಗೆ ಒಂದು ರಕ್ಷಣೆಯನ್ನು ಒದಗಿಸುತ್ತದೆ. ಹಾಗೆ ಮಾಡುವ ಮೂಲಕ ಇತಿಹಾಸವನ್ನು ಗ್ರಹಿಸುವ, ಅದನ್ನೊಂದು ಚೌಕಟ್ಟಿನಲ್ಲಿ ನೋಡುವ ಹಾಗೂ ಅದಕ್ಕೊಂದು ಮರುಜೀವ ನೀಡುವಅವಕಾಶವನ್ನು ನಮಗೆಲ್ಲ ನೀಡುತ್ತದೆ’ ಎನ್ನುತ್ತಾರೆ ಮೋಲಿನೆಕ್ಸ್.
ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಹಲವಾರು ಮ್ಯೂಸಿಯಂಗಳನ್ನು ಸ್ಥಾಪಿಸುವ ಸಂಕಲ್ಪ ಮಾಡಲಾಗಿದೆ. ವಿಶ್ವ ದರ್ಜೆಯ ನಗರಗಳಲ್ಲಿರುವ ಮ್ಯೂಸಿಯಂಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳ ವಿನ್ಯಾಸ ಮಾಡಲಾಗುತ್ತಿದೆ. ಮೊದಲೇ ಹೇಳಿದಂತೆ ನ್ಯಾಷನಲ್ ಮ್ಯೂಸಿಯಂ ಅನ್ನು ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್‌ನಲ್ಲಿ ಸ್ಥಾಪಿಸಲಾಗುತ್ತದೆ.
ಇದು ರಾಷ್ಟ್ರ ರಾಜಧಾನಿಯ ಅತ್ಯಂತ ಪ್ರತಿಷ್ಠಿತ ಸ್ಥಳ. ಇಲ್ಲಿ ನ್ಯಾಷನಲ್ ಮ್ಯೂಸಿಯಂ ಇರುವುದು ದೇಶಕ್ಕೊಂದು ಹೆಮ್ಮೆ. ಈ ಪಾರಂಪರಿಕ ಕಟ್ಟಡಗಳನ್ನು ಮರುವಿನ್ಯಾಸಗೊಳಿಸಿ, ಅವುಗಳಲ್ಲಿ ರಾಷ್ಟ್ರದ ಐತಿಹಾಸಿಕ ಸಂಪತ್ತುಗಳನ್ನೂ, ಅಮೂಲ್ಯ ಇತಿಹಾಸದ ತುಣುಕುಗಳನ್ನೂ ಜೋಡಿಸಿದ ಮೇಲೆ ಸಾರ್ವಜನಿಕರ ಭೇಟಿಗೆ ಮುಕ್ತಗೊಳಿಸಲಾಗುತ್ತದೆ.
ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಕಟಣೆಯೊಂದರಲ್ಲಿ ‘ಹೊಸ ನ್ಯಾಷನಲ್ ಮ್ಯೂಸಿಯಂ ಈ ದೇಶದ ಅತಿದೊಡ್ಡ ಮ್ಯೂಸಿಯಂ ಆಗಲಿದೆ. ಅಷ್ಟೇ ಅಲ್ಲ, ಜಗತ್ತಿನ ಅತ್ಯಂತ ಪ್ರತಿಷ್ಠಿತ ಸಾಂಸ್ಕೃತಿಕ ತಾಣಗಳಲ್ಲಿ ಒಂದಾಗಲಿದೆ. ಈ ಮ್ಯೂಸಿಯಂ ಮೂಲಕ ಭಾರತದ ಶ್ರೀಮಂತ ಇತಿಹಾಸವನ್ನೂ, ಉಜ್ವಲ ವರ್ತಮಾನವನ್ನೂ ಹಾಗೂ ಭವ್ಯ ಭವಿಷ್ಯವನ್ನೂ ನೋಡಬಹುದು’ ಎಂದು ಹೇಳಲಾಗಿದೆ.
ರಾಜಕೀಯ ವಿವಾದಕ್ಕೊಳಗಾಗಿರುವ ಇನ್ನೊಂದು ಕಟ್ಟಡ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ (ಐಜಿಎನ್‌ಸಿಎ). ಇದನ್ನು ದೆಹಲಿಯ ಜಾಮ್‌ನಗರ ಹೌಸ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ. ಸಿ-ಹೆಕ್ಸಾಜನ್‌ನಲ್ಲಿರುವ ಪ್ರತಿಷ್ಠಿತ ಸ್ಥಳವದು. ಅಲ್ಲಿ ಜಾಗತಿಕ ದರ್ಜೆಯ ಎಲ್ಲಾ ಸೌಕರ್ಯಗಳನ್ನೂ ಕಲ್ಪಿಸಲಾಗುತ್ತದೆ. ಜಾಮ್‌ನಗರ ಹೌಸ್ ಸಿದ್ಧವಾಗುವವರೆಗೆ ಐಜಿಎನ್‌ಸಿಎಯನ್ನು ಹೋಟೆಲ್ ಜನಪಥ್‌ನಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಹೋಟೆಲ್ಲನ್ನು ಈಗಾಗಲೇ ಸಂಪೂರ್ಣ ಮರುವಿನ್ಯಾಸಗೊಳಿಸಲಾಗಿದೆ. ಈಗಿನ ಐಜಿಎನ್‌ಸಿಎ ಕಟ್ಟಡವನ್ನು ಧ್ವಂಸಗೊಳಿಸಲಾಗುತ್ತಿದೆ.
ಇದು ಕಲಾ – ಸಂಶೋಧನಾ ಸಂಸ್ಥೆ ಎಂದು ಹೇಳಲಾಗುತ್ತದೆಯಾದರೂ ಇಲ್ಲಿ ಒಳ್ಳೆಯ ಲೈಬ್ರರಿ ಅಥವಾ ಕೊನೆಯ ಪಕ್ಷ ಸೃಜನ ಶೀಲ ಸಂಶೋಧನಾರ್ಥಿಗಳು ಕುಳಿತು ಮಾತನಾಡಲು ಒಂದು ಒಳ್ಳೆಯ ಜಾಗ ಕೂಡ ಇಲ್ಲ. ಇಲ್ಲಿ ನಡೆದ ಯಾವುದಾದರೂ ಪ್ರದರ್ಶನಗಳು ಯಶಸ್ಸು ಕಂಡಿದ್ದರೆ ಅದಕ್ಕೆ ಕಾರಣ ಭಾರತೀಯ ಕಲೆ ಹಾಗೂ ಕಲಾವಿದರ ಸೌಂದರ್ಯ ಮತ್ತು ಪ್ರತಿಭೆಯೇ ಹೊರತು ಈ ಕೇಂದ್ರದ ಮೂಲಸೌಕರ್ಯದ ಪಾತ್ರ ಅದರಲ್ಲಿ ಕಿಂಚಿತ್ತೂ ಇಲ್ಲ. ಈ ವಿಷಯದಲ್ಲಿ ಜುಗಾಡ್ ಮಾಡಿದ್ದು ಸಾಕು. ಈಗ ನಿರ್ಮಾಣವಾಗುತ್ತಿರುವ ‘ಸೆಂಟ್ರಲ್ ವಿಸ್ತಾ’ ಭಾರತದ ಮಾಂತ್ರಿಕ ‘ಸಾಂಸ್ಕೃತಿಕ ಮಂಡಲ’ವಾಗಿ ರೂಪಾಂತರಗೊಳ್ಳ ಲಿದೆ. ಇದರಲ್ಲಿ ಯಾವ ಅನುಮಾನವೂ ಬೇಡ.