ಮಳೆ ಇಳೆಗೆ ಸುರಿವ ವಿಸ್ಮಯಕ್ಕೆ ಎಣೆ ಎಲ್ಲಿ !
ಶಶಾಂಕಣ
ಶಶಿಧರ ಹಾಲಾಡಿ
.@.
ಬೀಚಿಯವರು ಹಿಂದೊಮ್ಮೆ ಹೇಳಿದ್ದರಂತೆ – ಅವರ ಊರಿನಲ್ಲಿ ಎರಡೇ ಕಾಲ – ಬೇಸಿಗೆ ಮತ್ತು ಬಿರುಬೇಸಿಗೆ. ಅದು ನಿಜವೂ ಹೌದು – ಡಿಸೆಂಬರ್ ತಿಂಗಳಿನಲ್ಲಿ ನಾನು ಅಲ್ಲಿ ಒಂದು ತಿಂಗಳು ಕಾಲ ಇದ್ದಾಗ, ನಾವೆಲ್ಲಾ ಚಳಿಗಾಲ ಎಂದು ಕರೆವ ಆ ದಿನಗಳಲ್ಲೂ ಬೆವರು, ಬಿಸಲನ್ನು ಅನುಭವಿಸ ಬೇಕಾಯ್ತು. ಬೀಚಿಯವರು ಅವರ ಊರಿನ ಅನುಭವ ಹೇಳಿದ್ದರೆ, ನಾನು ನಮ್ಮೂರಿನ ಕಾಲಗಳ ಕುರಿತು ಹೇಳಬಲ್ಲೆ. ನಮ್ಮ ಹಳ್ಳಿಯಲ್ಲಿ ಮೂರು ಕಾಲಗಳು – ಬೇಸಿಗೆ ಕಾಲ, ಮಳೆಗಾಲ,  ಚಳಿಗಾಲ. ಇದರಲ್ಲಿ ಮಳೆಗಾಲ ಮಾತ್ರ ಬಲು ವಿಶೇಷ, ವಿಭಿನ್ನ, ವಿಶಿಷ್ಟ, ನೋಸ್ಟಾಲ್ಜಿಕ್, ವಿಸ್ಮಯಕಾರಿ.
ಒಂದೊಂದು ವರ್ಷ ನಮ್ಮ ಹಳ್ಳಿಯಲ್ಲಿ ದಿನದ24ಗಂಟೆ, ವಾರದ ಏಳೂ ದಿನ ಸತತವಾಗಿ ಮಳೆ ಸುರಿದದ್ದೂ ಉಂಟು! ಜೂನ್ ಮೊದಲನೆಯ ವಾರ ಆರಂಭ ವಾದ ಮಳೆಗಾಲ, ಅಕ್ಟೋಬರ್ ಆದರೂ ಬಿಡದೆ, ಸದಾ ಸುರಿದು, ಊರನ್ನೆಲ್ಲಾ ಥಂಡಿಯ ಮೂಟೆಯಲ್ಲಿ ಮುಳುಗಿಸಿದ್ದುಂಟು! ಮಲೆನಾಡು ಮತ್ತು ಕರಾವಳಿಯವ ರಿಗೆ ಈ ರೀತಿಯ ಮಳೆಗಾಲದ ಸೊಗಡು, ಸೊಗಸು ಮತ್ತು ಸಂಕಷ್ಟಗಳನ್ನು ಅನುಭವಿಸುವ ಅವಕಾಶವಿದೆ. ಆದರೆ, ಮಲೆನಾಡು ದಾಟಿ ಒಂದೈವತ್ತು ಕಿಮೀ ಪೂರ್ವಕ್ಕೆ ಬಂದರೆ, ‘ಮಳೆಗಾಲ ಹಾಗಿರುತ್ತಾ?’ ಎಂದು ಅಚ್ಚರಿಪಡುವವರುಂಟು.
ಈಗ ಬಿಡಿ, ಮೊಬೈಲ್‌ನಲ್ಲಿ ವಿಡಿಯೋ ಕಳಿಸುವ ಕಾಲ, ಮಳೆ ಸುರಿಯುವುದನ್ನು ಲೈವ್ ಆಗಿ ಟಿವಿಗಳಲ್ಲಿ ನೋಡುವ ಕಾಲ. ಇದರಿಂದಾಗಿ, ಅಚ್ಚರಿ, ವಿಸ್ಮಯ ಎಂಬ ಪದಗಳು ನಮ್ಮ ಮನೋಕೋಶದ ನಿಘಂಟಿನಿಂದ ಬಹುಮಟ್ಟಿಗೆ ಕಣ್ಮರೆಯಾಗಿಬಿಟ್ಟಿವೆ. ಮೂರು ದಶಕಗಳ ಹಿಂದೆ, ಅರಸೀಕೆರೆ ಸನಿಹದ ಹಳ್ಳಿಯೊಂದರಲ್ಲಿ ನಾನು ವಾಸವಿದ್ದೆ. ನಮ್ಮ ಹಳ್ಳಿಯಲ್ಲಿ ಮಳೆಗಾಲದ ರಭಸ, ಸೊಗಸು, ಮಾಯೆಗಳನ್ನು ನೋಡಿ ಬಂದಿದ್ದ ನನಗೆ, ಆ ಹಳ್ಳಿಯವರಿಗೆ ಮಳೆಗಾಲ ಎಂಬ ಅರಿವು,ಪರಿಕಲ್ಪನೆಯೇ ಇಲ್ಲದ್ದನ್ನು ಕಂಡು ಅಚ್ಚರಿ. ನಮ್ಮೂರಿನಲ್ಲಿ ಜುಲೈ ತಿಂಗಳಲ್ಲಿ ದಿನದ24ಗಂಟೆ ಮಳೆ ಬರುವುದುಂಟು ಎಂದು ನಾನು ಹೇಳಿದರೆ, ಅಲ್ಲಿದ್ದವರಿಗೆ ನಾನು ಬುರುಡೆ ಬಿಡುತ್ತಿದ್ದೇನೆಂದೇ ಅನಿಸಿತ್ತು. ಆ ಹಳ್ಳಿಯ ಆಗಸದಲ್ಲಿ ಕಪ್ಪನೆ ಮೋಡಗಳು ಸಂಚರಿಸಿದರೆ ಆಷಾಢ! ಒಂದು ತಿಂಗಳಲ್ಲಿ ಮೂರು ಅಥವಾ ನಾಲ್ಕು ಬಾರಿ ಅರ್ಧ ಗಂಟೆ ಮಳೆ ಸುರಿದರೆ, ‘ಒಳ್ಳೆಯ ಮಳೆ’ ಎಂದು ಅವರು ಆಗಸ ನೋಡಿ, ಮಳೆರಾಯನಿಗೆ ನಮಸ್ಕರಿಸುತ್ತಿರುವುದನ್ನು ಕಂಡು ನನಗೆ ಸೋಜಿಗ.
ನಾಲ್ಕಾರು ದಿನ ಎಡೆಬಿಡದೇ ಜಡಿಮಳೆ ಸುರಿದಾಗ ಮಾತ್ರ ‘ಒಳ್ಳೆ ಮಳೆ ಮಾರಾಯ್ರೆ’ ಎನ್ನುತ್ತಿದ್ದ ನಮ್ಮ ಹಳ್ಳಿಯಿಂದ, ಈ ಬಯಲಸೀಮೆಯ ಬೆಂಗಾಡಿಗೆಬಂದಿಳಿದಿದ್ದ ನನಗೆ, ಅವೆಲ್ಲವೂ ಅಚ್ಚರಿಗಳ ಸರಮಾಲೆ. ಈ ರೀತಿ, ಉದ್ಯೋಗ ನಿಮಿತ್ತವೋ, ಮದುವೆ ಯಾಗಿಯೋ ದೂರದ ಬೇರೊಂದು ಊರಿನಲ್ಲಿನೆಲೆಸಿದಾಗಲೇ, ಮಳೆಗಾಲದ ನೆನಪು ಬಿಡದೇ ಕಾಡುವುದು. ಬಯಲುಸೀಮೆಯಲ್ಲೋ, ಬೀಚಿ ಹೇಳಿದ ಬಳ್ಳಾರಿಯಂತಹ ಬೆಂಗಾಡಿನಲ್ಲೋ, ಹೊತ್ತು-ಗೊತ್ತು-ಋತು-ಮಾಸಗಳ ವ್ಯತ್ಯಾಸವನ್ನೇ ಮರೆಯಿಸಿಬಿಡುವಂತಹ ಬೆಂಗಳೂರಿನಂತಹ ಮಹಾನಗರಗಳಲ್ಲೋ ನೆಲೆಸಿರುವವರಿಗೆ ಅಚ್ಚರಿ ಎನಿಸಬಹುದು – ನಮ್ಮ ಹಳ್ಳಿಯಲ್ಲಿ ಮೇ28– ಜೂನ್2ರ ನಡುವೆ ಪ್ರತಿವರ್ಷ ಮಳೆಗಾಲ ಪ್ರಾರಂಭವಾಗುತ್ತಿತ್ತು.
ಈಗಲೂ ಬಹುಮಟ್ಟಿಗೆ ಆ ಕ್ಯಾಲೆಂಡರ್ ಚಾಲ್ತಿಯಲ್ಲಿದೆ. ಈಗೇನೋ ಮುಂಗಾರು ಕೇರಳವನ್ನು ಪ್ರವೇಶಿಸುವ ವಿದ್ಯಮಾನ ವನ್ನು ಹವಾಮಾನ ಇಲಾಖೆಯವರು ಹೇಳುತ್ತಿರುವರು. ನನ್ನ ಬಾಲ್ಯದ ದಿನಗಳಲ್ಲಿ, ಮೇ೨೮ರ ಸಮಯದಲ್ಲಿ ಗುಡುಗು, ಮಿಂಚು, ಸಿಡಿಲು ಮಿಶ್ರಿತ ಮಳೆ ಬರುವುದಂತೂ ಪ್ರತಿವರ್ಷದ ವಿದ್ಯಮಾನ. ಅದಕ್ಕೆ ಸರಿಯಾಗಿ ಹಳ್ಳಿಯವರು ತಮ್ಮ ತಮ್ಮ ಶಕ್ತ್ಯನುಸಾರ, ಮಳೆಗಾಲದ ತಯಾರಿಯನ್ನು ಒಂದೆರಡು ತಿಂಗಳುಗಳ ಹಿಂದಿನಿಂದಲೇ ಮಾಡಿಕೊಳ್ಳುತ್ತಿದ್ದರು. ಮುಂದಿನ ಮೂರು ತಿಂಗಳು ಗಳಿಗಾಗುಷ್ಟು ಸೌದೆ ಸಂಗ್ರಹ, ಹಟ್ಟಿಯಲ್ಲಿರುವ ಗಂಟಿ ಕಾಲಡಿಗೆ ಹಾಕುವ ದರಲೆ ಸಂಗ್ರಹ, ಒಂದೆರಡು ಮೂಟೆ ಉಪ್ಪಿನ ಸಂಗ್ರಹ,ಆಹಾರ ಧಾನ್ಯ ಮತ್ತು ಇತರ ತಿನಿಸುಗಳ ಸಂಗ್ರಹ, ಹಪ್ಪಳ ತಯಾರಿ ಎಲ್ಲವೂ ಮೇ೨೫ರ ಒಳಗೆ ಮುಗಿಯಲೇಬೇಕು.
ಏಕೆಂದರೆ ಜೂನ್ ಮೊದಲ ವಾರ ಆರಂಭವಾಗುವ ಜಡಿಮಳೆಯು, ಆ ಸುತ್ತಲಿನ ಇಡೀ ಜಗತ್ತನ್ನೇ ನೀರಿನ ಲೋಕದಲ್ಲಿ ಅದ್ದಿ, ತೋಯಿಸಿ, ಕೆಲವು ಬಾರಿ ತೇಲಿಸಿ,ತನ್ನ ಪ್ರತಾಪವನ್ನು ಕಡಿಮೆ ಮಾಡುವುದು ಮೂರು ತಿಂಗಳು ಕಳೆದ ಮೇಲೆ ಮಾತ್ರ. ಆ ಮೂರು ತಿಂಗಳುಗಳಲ್ಲಿ ಬೀಳುವ ಮಳೆಯ ಸ್ವರೂಪ, ದರ್ಶನ,ನರ್ತನವಾದರೂ ಅದೆಂತಹದ್ದು! ಆರಂಭದ ಗಾಳಿ, ಕಪ್ಪನೆಯ ಮೋಡ, ಗುಡುಗಳ ಆರ್ಭಟ. ಮೇ ತಿಂಗಳ ಕೊನೆಯಲ್ಲಿ ಎಲ್ಲೆಡೆ ಸೆಕೆಯು ಬೆವರಿಳಿಸಿ,ಬೇಯಿಸುತ್ತಿರುವಾಗ ಬೀಸಿ ಬರುವ ಗಾಳಿಯು ಆ ಒಂದು ದಿನ ಮೂಡಿಸುವ ತಂಪು ಅದೆಷ್ಟು ಆಪ್ಯಾಯಮಾನ!
ಆ ಗಾಳಿಯ ಜತೆಯಲ್ಲೇ ಗುಟುರುಹಾಕಿ ಬರುವ ಕಪ್ಪನೆಯ ಮೋಡಗಳು ಆಗಸವನ್ನೆಲ್ಲಾ ತುಂಬಿ ಬಿಡುತ್ತಿದ್ದವು. ದಪ್ಪನೆಯ, ಕಪ್ಪನೆಯ ಕಾಡುಕೋಣಗಳಂತೆ ಆಕಾಶದಲ್ಲಿ ಅವು ಓಡುವ ಸೊಗಸೇ ಸೊಗಸು. ಆ ಕಪ್ಪನೆಯ ಗೂಳಿಗಳು ಪರಸ್ಪರ ಡಿಕ್ಕಿ ಹೊಡೆದು, ಗುಡುಗಿಸಿ, ಘರ್ಜಿಸಿ, ಕೋಲ್ಮಿಂಚನ್ನು ಝಳಪಿಸಿ ಮಳೆ ಸುರಿಸಲು ಆರಂಭಿಸಿದವೆಂದರೆ, ಮನೆ ಮುಂದಿನ ಗದ್ದೆ ಬೈಲಿನ ತುಂಬಾ ನೀರು ತುಂಬಿದ ನಂತರವೇ, ತುಸು ವಿರಾಮ. ಗದ್ದೆಯಂಚಿನುದ್ದಕ್ಕೂ ಸಾಗುವ ತೋಡು, ತೊರೆಗಳಲ್ಲಿ ಕೆಂಪನೆಯ ನೀರು ರಭಸದಿಂದ ಓಡಲುಪಕ್ರಮಿಸಿದ್ದೇ ತಡ, ಕಪ್ಪೆಗಳ ವಾದ್ಯಗೋಷ್ಠಿಗೆ ಬಿಡುವೇ ಇರದು!
ಕೇವಲ ಒಂದೆರಡು ವಾರಗಳ ಹಿಂದೆ ಇಡೀ ಭೂಮಿಯನ್ನೇ ಬಿಸಿ ಮಾಡಿದ್ದ ಸುಡುಸುಡು ಬಿಸಿಲಿನ ದಿನಗಳಲ್ಲಿ ಈ ಕಪ್ಪೆಗಳು ಅಡಗಿ ಕುಳಿತಿದ್ದಾದರೂ ಎಲ್ಲಿ?ಇತ್ತ ಆಗಸದಲ್ಲಿ ಗುಡುಗು, ಮಿಂಚಿನಿಂದೊಡಗೂಡಿದ ಮಳೆ ಮೋಡಗಳ ಪರಿಶೆ ಸೇರಿದ ಕೂಡಲೆ, ನೆಲದಾಳದ ತಮ್ಮ ಠಾವಿನಿಂದ ಹೊರಬಂದು, ಒಂದೇ ಸಮನೆಒಟಗುಟ್ಟಬೇಕೆಂದು ಅವುಗಳಿಗೆ ಹೇಳಿಕೊಟ್ಟವರಾದರೂ ಯಾರು? ನಮ್ಮ ಮನೆ ಮುಂದಿನ ಅಗೇಡಿಯಲ್ಲಿ ಎರಡು ಇಂಚು ನೀರು ನಿಂತಿದ್ದೇ ತಡ, ನೂರಾರುಕಪ್ಪೆಗಳು ರಾತ್ರಿಯಿಡೀ ಕೂಗಲು ಆರಂಭಿಸುತ್ತವೆ!
ಅವುಗಳ ವಟವಟ ಸದ್ದು ಅದೆಷ್ಟು ನಿರಂತರ ಮತ್ತು ಏಕತಾನತೆಯನ್ನು ತುಂಬುತ್ತದೆಂದರೆ, ತಲೆಚಿಟ್ಟು ಹಿಡಿಸಿ, ರೇಜಿಗೆ ಹುಟ್ಟಿಸುವಷ್ಟು! ಆದರೆ, ಮಾಯಕದಿಂದ ಅವತರಿಸಿದ ಮಳೆಗಾಲವು ನಮ್ಮೂರಿನ ಇಳೆಗೆ ಮಾಡುವ ಮೋಡಿಯನ್ನು ಕಂಡಾಗ ಮಾತ್ರ, ಅಂತಹ ಸಣ್ಣ ಪುಟ್ಟ ರೇಜಿಗೆಗಳಗೆಲ್ಲ ಮಾಯ! ಮೊದಲ ಮಳೆ ಯೊಂದಿಗೆ ಬೀಸುವ ಗಾಳಿಯಿಂದಾಗಿ, ಮನೆ ಹಿಂದಿನ ಕಾಟು ಮಾವಿನ ಮರದ ತುದಿಯಲ್ಲಿದ್ದ ನೂರಾರು ಹಣ್ಣುಗಳು ಕೆಳಗೆ ಉದುರಿಬಿದ್ದು, ಅವನ್ನು ಬುಟ್ಟಿ ತುಂಬಾ ತುಂಬಿಸಿಕೊಂಡು ಮನೆಗೆ ತರುವ ಕೆಲಸ ಮಕ್ಕಳದ್ದು. ಆ ಹಣ್ಣುಗಳನ್ನು ಹಿಂಡಿ, ರಸ ತೆಗೆದು ಮಾವಿನ ರಸದ ‘ಹಣ್‌ಚಟ್’ ಮಾಡಿ, ಅಕಸ್ಮಾತ್ ಬಿಸಿಲು ಬಂದರೆ ಒಣಗಿಸಿ, ಬಿಸಿಲಿಲ್ಲದಿದ್ದರೆ ಒಲೆ ಮೇಲ್ಭಾಗದ ಹಲಗೆಯ ಮೇಲಿಟ್ಟು ಗರಂ ಮಾಡಿ, ಒಣ ದೂಪದ ಎಲೆಯಲ್ಲಿ ಕಟ್ಟಿಡುವ ಕೆಲಸ ಅಮ್ಮಮ್ಮನದ್ದು. ಜಿರಾಪತಿ ಮಳೆ ಸುರಿವ ಆಷಾಡದಲ್ಲಿ ಆ ‘ಹಣ್‌ಚಟ್’ ನ್ನು ಅರೆದು, ಚಟ್ನಿ ಅಥವಾ ಸಾಸಿವೆ ಮಾಡುವ ಕೈರುಚಿ ಅಮ್ಮನದ್ದು!
ಮೊದಲ ಒಂದೆರಡು ದಿನ ಮಳೆ ಬಿದ್ದ ಕೂಡಲೆ, ಮನೆ ಹಿಂದಿನ ಹಾಡಿಯಲ್ಲಿ ನೂರಾರು ಮೊಳಕೆಗಳು. ನೆಲದಲ್ಲಿ ಮುದುಡಿ ಮಲಗಿದ್ದ ಅದೆಷ್ಟೋ ಬೀಜಗಳು, ಪುಟಾಣಿ ಎಲೆಯನ್ನು ಒಡಮೂಡಿಸಿಕೊಂಡು, ಮೇಲಕ್ಕೆದ್ದು ಚಿಮ್ಮುವ ಆ ಜೀವನೋತ್ಸಾಹವನ್ನು ವರ್ಣಿಸುವುದಾದರೂ ಹೇಗೆ! ಅವುಗಳ ನಡುವೆ, ಎರಡು ದೊಡ್ಡಪಕಳೆಗಳನ್ನು ಅಂಟಿಸಿಕೊಂಡು, ಒಂದಿಂಚು ಎತ್ತರದ ಪುಟ್ಟ ಗಿಡವಾಗಿ ಪ್ರತ್ಯಕ್ಷವಾಗುವ ಗೋಡಂಬಿ ಬೀಜವನ್ನು ಕಂಡ ಮಕ್ಕಳು, ಗೋಡಂಬಿ ಪಕಳೆಯನ್ನು ಆರಿಸಿ ಸ್ವಾಹಾ ಮಾಡುವುದುಂಟು. ಇಳೆಗೆ ಸುರಿದ ಮಳೆಯ ಸೇಚನದಿಂದ ಮನೆ ಸುತ್ತಲಿನ ನೆಲ, ಹಾಡಿ, ಹಕ್ಕಲು, ಕಾಡು ಎಲ್ಲೆಡೆ ಒಮ್ಮೆಗೇ ಹಸಿರಿನ ಸಿರಿಯೇ ಪ್ರತ್ಯಕ್ಷ ವಾಗುತ್ತದೆ – ಒಂದೊಂದು ಗಿಡದ ಚಿಗುರು ಒಂದೊಂದು ಬಣ್ಣ – ಹಸಿರು, ಎಲೆಹಸಿರು, ತಿಳಿಹಸಿರು, ಕಡು ಹಸಿರು – ಇವುಗಳ ಮಧ್ಯೆ ದೊಡ್ಡದಾದ ಬಿಳಿ ಎಲೆ ಬಿಡುವ ಗುಳ ಸೊಪ್ಪಿನ ಬಳ್ಳಿಯೂ, ದೂರದಿಂದಲೇ ಹಸಿರು ಕಾಡಿಗೆ ಬಿಳಿಯ ತೋರಣಕಟ್ಟಿದಂತೆ ಕಾಣುತ್ತವೆ.  ಜೂನ್‌ನಲ್ಲಿ ನಿರಂತರ ಸುರಿವ ಮಳೆಯು ಆ ಎಳೆಯ ಚಿಗುರುಗಳಿಗೆ ಕಿರಿಕಿರಿ ಮಾಡುವುದೂ ನಿಜ. ಆದರೆ ಬಿರು ಬೇಸಗೆಯ ಬೆನ್ನ ಹಿಂದೆಯೇ ಸುರಿವ ಸೋನೆ ಮಳೆಯನ್ನು ಗಿಡಗಂಟಿಗಳು, ಸಸ್ಯಕೋಟಿಯು ಸಂಭ್ರಮದಿಂದ ಸ್ವಾಗತಿಸುವ ಪರಿಯೇ ಅದ್ಭುತ!
ಗದ್ದೆ, ಬಯಲು, ತೊರೆ, ತೋಡು, ಹಾಡಿ, ಕಾಡು, ಬಾವಿಗಳಲ್ಲಿ ಒಮ್ಮೆಗೇ ತುಂಬಿದ ಮಳೆ ನೀರನ್ನು ಕಂಡು, ಪ್ರಾಣಿ-ಕೀಟ ಪ್ರಪಂಚ ಸಂಭ್ರಮಿಸುವ ಪರಿ ಬೇರೊಂದೇ ಮಜಲಿನದು. ಅಷ್ಟು ದಿನ ಕಾಣದ, ದೂರದ ಮಾಯದ ಲೋಕದಲ್ಲೆಲ್ಲೋ ಅಡಗಿ ಕುಳಿತಿದ್ದ ಮಿಣುಕುಹುಳಗಳು, ಮಳೆಗಾಲದ ರಾತ್ರಿಗಳಲ್ಲಿ ತಮ್ಮ ಸಭೆಯನ್ನು ನಡೆಸುವ ಶೈಲಿಗೆ ಆ ಭೂರಮೆಯೇ ಸಂತಸದಿಂದ ದಂಗಾಗಿರಬಹುದು! ಸಂಜೆ ಎಂಟು ಗಂಟೆಯ ಸಮಯದಲ್ಲಿ ತೋಡಿನ ಅಂಚಿನ ಮರವೊಂದನ್ನು ಮುತ್ತಿ ಕೂರುವ ಮಿಣುಕುಹುಳಗಳು, ಸೀರಿಯಲ್ ಸೆಟ್ ಬೆಳಕಿನಂತೆ ಆಗಾಗ ಹೊಮ್ಮಿಸುವ ಬೆಳಕು, ಆ ಕತ್ತಲ ಲೋಕದಲ್ಲಿ ಚಿನ್ನದ ಪ್ರಭೆಯನ್ನು ತುಂಬುತ್ತದೆ. ಝಗ್ ಎಂದು ನೂರಾರು ಕೀಟಗಳು ತಮ್ಮ ಬಾಲದಿಂದ ಒಟ್ಟಾಗಿ ಬೀರುವ ಬೆಳಕು, ನಿರಂತರವಾಗಿ ಒಂದೆರಡು ಗಂಟೆಗಳ ಕಾಲ ಮುಂದುವರಿದು, ಅಲ್ಲೊಂದು ಅಲೌಕಿಕ ಜಗತ್ತನ್ನೇ ಸೃಷ್ಟಿಸುತ್ತದೆ.
ಮರವನ್ನು ಆತು ಕೂತ ಮಿಣುಕುಹುಳಗಳ ಸಂಗಾತಿಗಳು ಒಮ್ಮೆಮ್ಮೆ ಆಚೀಚೆ ಹಾರಾಡುತ್ತಾ, ಬೆಳಕು ಬೀರಿ, ‘ನೀ ಸುರಿವ ರಭಸಕ್ಕೆ ನಾವು ಹೆದರುವುದಿಲ್ಲ’ಎಂದು ಆ ಕತ್ತಲರಾತ್ರಿಯಲ್ಲಿ ಮಳೆರಾಯನಿಗೇ ಸವಾಲು ರೀತಿ ತುಸು ಕಾವ್ಯತ್ಮಕ! ಒಂದೆರಡು ವಾರ ಮಳೆ ಸುರಿದ ನಂತರ, ರೈತರು ಬತ್ತದ ಗದ್ದೆಯಲ್ಲಿ ಹೂಟಿ ಮಾಡಲು ಆರಂಭಿಸುತ್ತಾರೆ. ಕಂಬಳಿ ಕೊಪ್ಪೆಯನ್ನು ತಲೆಗೆ ಸಿಕ್ಕಿಸಿಕೊಂಡು ಸುರಿಮಳೆಯಲ್ಲೇ ಕೋಣಗಳ ಹಿಂದೆ ಗದ್ದೆಯಲ್ಲಿ ಸುತ್ತುತ್ತಾ, ಗದ್ದೆಯನ್ನು ಕೆಸರು ಮಾಡಿ, ನಾಟಿಗೆ ಹಸನುಗೊಳಿಸುವ ಈ ರೈತನನ್ನು ಕಂಡೇ ಅಲ್ಲವೇ ಕುವೆಂಪು ಉದ್ಗರಿಸಿದ್ದು -‘ಉಳುವಾ ಯೋಗಿಯ ನೋಡಲ್ಲಿ!’ ನೆರೆ ಬಂದರೂ, ಗದ್ದೆ ಉಳುವ ನೇಗಲಯೋಗಿಯು, ‘ಓ ಓ’ ಎಂದು ಏರುದಿನದಲ್ಲಿ ಒಳಲು ಹಾಕುತ್ತಿರುವಾಗಲೇ, ಮಹಿಳೆಯರು ಬೆತ್ತದ ಬುಟ್ಟಿ ಹಿಡಿದು ಏಡಿ ಸಂಗ್ರಹಿಸಲು ತೋಡಿನಲ್ಲಿ ಓಡಾಡುವುದುಂಟು.
ಇಕ್ಕಳದ ಹಿಡಿತದ ಏಡಿಗಳೂ ಅಷ್ಟೆ – ಬೇಸಿಗೆಯಲ್ಲಿ ಅದಾವುದೋ ಭೂಗರ್ಭದಲ್ಲಿ ಅಡಗಿ ಕುಳಿತು, ತೋಡಿನಲ್ಲಿ ನೀರು ಹರಿಯಲು ಆರಂಭಿಸಿದ ಕೂಡಲೇ ಹೊರಬಂದು, ಗದ್ದೆಯಂಚಿನಲ್ಲಿ ಬಿಲ ತೋಡುವ ತಮ್ಮ ಕರಾಮತ್ತು ಆರಂಭಿಸುತ್ತವೆ. ಅವುಗಳ ನಡುವೆಯೇ, ಗದ್ದೆಯ ನೀರಿನಲ್ಲಿ, ಅಂಚಿನಲ್ಲಿ ತೆವಳುವ ಜಾಗಟೆ ಹುಳಗಳ ಮೆರವಣಿಗೆ, ಇವುಗಳನ್ನು ಹಿಡಿದು ಪದಾರ್ಥ ಮಾಡುವುದೆಂದರೆ, ಕೃಷಿಕ ಮಹಿಳೆಯ ನೆಚ್ಚಿನ ಹವ್ಯಾಸ. ಈ ನೀರಿನ ಜಗತ್ತಿನಲ್ಲಿ ಸಂಭ್ರಮದಿಂದ ಈಜಾಡುವ ಮತ್ತೊಂದು ಜೀವ ಸಂಕುಲವೆಂದರೆ ‘ಒಳ್ಳೆ ಹಾವು’ಗಳು. ತೋಡು, ಗದ್ದೆಗಳ ನಡುವೆ ಹರಿದು, ತೆವಳಿ, ನೆಗೆದು, ಈಜಿ ಓಡಾಡುವ ಈ ಒಳ್ಳೆ ಹಾವುಗಳು ನಿಜಕ್ಕೂ ಒಳ್ಳೆಯವೇ – ಅಂದರೆ, ಅವು ಅಕಸ್ಮಾತ್ ಕಚ್ಚಿದರೂ ವಿಷವಿಲ್ಲ!
ಗದ್ದೆಯಲ್ಲಿ ಒಳ್ಳೆ ಹಾವು ಹರಿದು ಬಂದರೆ, ಕಾಲಿನಿಂದಲೇ ನೀರು ಚಿಮ್ಮಿಸಿ ಅದನ್ನು ಬೆದರಿಸಿ, ಓಡಿಸಿ, ತನ್ನ ಉಳುಮೆಯನ್ನು ಮುಂದುವರೆಸುತ್ತಾನೆ ನಮ್ಮೂರಿನ ಉಳುವಾ ಯೋಗಿ. ಕೆಸರು ತುಂಬಿದ ಗದ್ದೆಯಲ್ಲಿ ಈ ಹಿಂದೆ ನಾಟಿ ಮಾಡಿದ್ದ, ಗದ್ದೆ ಅಂಚಿನಲ್ಲಿ ಆಗಾಗ ಹುಲ್ಲು ಕತ್ತರಿಸುತ್ತಿದ್ದ ನಮ್ಮ ಅಮ್ಮಮ್ಮನಿಗೆ ಎರಡು ಬಾರಿ ಒಳ್ಳೆ ಹಾವು ಕಚ್ಚಿತ್ತಂತೆ! ಸ್ವಲ್ಪ ನಂಜು, ತುರಿಕೆ ಬಿಟ್ಟರೆ ಬೇರೇನೂ ಆಗಿಲ್ಲ ಎಂದು ಅವರೇ ಆಗಾಗ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಒಂದೆರಡು ವಾರ ಸುರಿವ ಮಳೆಯಲ್ಲೇ ಕೃಷಿ ಕೆಲಸ ಮಾಡಿ, ಗದ್ದೆ ನಾಟಿ ಮಾಡಿದ ನಂತರ ನಮ್ಮೂರಿನ ಎಲ್ಲರಿಗೂ ಬಿಡುವು. ಮಳೆರಾಯನಿಗೆ ಮಾತ್ರ ಬಿಡುವಿಲ್ಲ.
ಮುಂದಿನ ಎರಡು ಮೂರು ತಿಂಗಳು ಮಳೆಯದೇ ರಾಜ್ಯ – ಒಮ್ಮೊಮ್ಮೆ ನಾಲ್ಕಾರು ದಿನ ಹೊಳ ಕಂಡರೂ, ಮತ್ತೆ ಆರಂಭವಾಗುವ ಮಳೆಯು, ಆಷಾಢದಲ್ಲಿ ಚಳಿಸುಳಿಯನ್ನೇ ತಂದಿಟ್ಟುಬಿಡುತ್ತದೆ. ಮಳೆ ಸುರಿದ ನಂತರ ಹಸಿರಾಗುವ ಭೂರಮೆಯ ಚಂದವೇನೋ ಅದ್ಭುತ, ಅನನ್ಯ ಎನಿಸಬಹುದು. ಆದರೆ ನಿರಂತರ ಮಳೆಯಆಷಾಢದ ದಿನಗಳು, ನಮ್ಮ ಹಳ್ಳಿಯವರಿಗೆ ಸಂಕಷ್ಟಗಳನ್ನು ತಂದಿಡುವ ಕಾಲವೂ ಹೌದು. ಜ್ವರ, ಕೆಮ್ಮು, ನೆಗಡಿಗಳ ಕಾಟ ಒಂದೆಡೆಯಾದರೆ, ವಯಸ್ಸಾದವರಿಗೆ ಅವೇ ಮಾರಣಾಂತಿಕವಾಗುವುದೂ ಉಂಟು. ಕೃಷಿ ಕಾರ್ಮಿಕರಿಗೆ ಕೂಲಿ ದೊರೆಯದೇ, ಕಷ್ಟಗಳು ಎದುರಾಗುವ ದಿನಗಳೂ ಮಳೆಗಾಲದಲ್ಲಿ ಎದುರಾಗುವು ದುಂಟು.
ಅಂಥ ದಿನಗಳಲ್ಲಿ ಗುಡ್ಡೆಗಳಲ್ಲಿ ಬೆಳೆದ ಅಣಬೆ ಸಂಗ್ರಹಿಸಿ, ಬೇಸಿಗೆಯಲ್ಲಿ ಒಣಗಿಸಿಟ್ಟ ಗೆಣಸು, ಹಲಸಿನ ಬೀಜವನ್ನು ಬೇಯಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕುಟುಂಬಗಳೂ ಇದ್ದವು. ಈಗ ಅಂತಹ ಕಡು ಕಷ್ಟದ ಸಂದರ್ಭ ಕಡಿಮೆ – ಸರಕಾರ ನೀಡುವ ರೇಷನ್ ಕೃಪೆಯಿಂದಾಗಿ. ಅಂದಹಾಗೆ, ಜಿರ್ ಎನ್ನುತ್ತಾ ಜಿರಾಪತಿ ಮಳೆ ಸುರಿವಾಗ, ನಮ್ಮ ಹಳ್ಳಿಮನೆ ಮುಂದಿನ ಗದ್ದೆ ಸಾಲನ್ನು ಅದರಾಚೆಯ ಹಾಡಿ, ಕಾಡನ್ನು ನೋಡುವ ಅನುಭವವೇ ಬಹು ಆಪ್ಯಾಯಮಾನ. ಬೇಸಿಗೆಯಲ್ಲಿ ಮಾಡಿಟ್ಟ ಹಲಸಿನ ಹಪ್ಪಳವನ್ನು ಸುಟ್ಟು, ಅದರ ಮೇಲೆ ಸುಟ್ಟ ಗೋಡಂಬಿಯನ್ನಿಟ್ಟುಕೊಂಡು ತಿನ್ನುತ್ತಾ, ಸೋನೆ ಮಳೆಯ ನಿರಂತರ ಗಾನವನ್ನು ಕೇಳುವ, ವೀಕ್ಷಿಸುವ ಆ ಕ್ಷಣಗಳ ಅನುಭೂತಿಗೆ, ಬೇರೆಲ್ಲಿದೆ ಹೋಲಿಕೆ!