ಇಂದಿನ ಸಮಾಜದಲ್ಲಿ ನಾವೆಷ್ಟು ನಾಗರಿಕರು ?
ವಿಚಾರ
ಜಯಶ್ರೀ ಕಾಲ್ಕುಂದ್ರಿ
@.
ನಮ್ಮ ಸಮಾಜದಲ್ಲಿ ಗುರುತಿನ ಚೀಟಿ ಹೊಂದಿದವರನ್ನು ನಾಗರಿಕರೆಂದು ಪರಿಗಣಿಸಲಾಗುತ್ತದೆ. ಮನುಷ್ಯನ ವೇಷಭೂಷಣ, ಮಾತನಾಡುವ ರೀತಿ, ಮಾತನಾಡುವಾಗ ಸಭ್ಯ ಭಾಷೆಯ ಬಳಕೆ ಮತ್ತು ಇತರರೊಂದಿಗೆ ಆತನ ವರ್ತನೆಗಳನ್ನು ಗಮನಿಸಿದಾಗ ಸಮಾಜದಲ್ಲಿ, ಆತ ನಾಗರಿಕನೋ ಅಥವಾಅನಾಗರಿಕನೋ ಎಂದು ಪ್ರಮಾಣೀಕರಿಸಲ್ಪಡುತ್ತಾನೆ.
ಸಮಾಜದ ಕಟ್ಟಳೆಗಳ ಮಧ್ಯೆ ಬದುಕುವನೂ ನಾಗರಿಕನೆನಿಸುತ್ತಾನೆ. ಪ್ರಾಚೀನ ಕಾಲದಲ್ಲಿ ಒಂಟಿಯಾಗಿ ಅಥವಾ ತನ್ನ ಕುಟುಂಬದ ಜತೆಗೆ ಬದುಕುತ್ತಿದ್ದ ಮಾನವನಿಗೆ ಸಮುದಾಯದ ಅನುಕೂಲತೆಗಳ ಬಗ್ಗೆ ಹೆಚ್ಚಿನ ಅರಿವುಂಟಾಗಿ ಆತನ ಬದುಕುವ ಕ್ರಮ, ಯೋಚನಾ ಲಹರಿಗಳಲ್ಲಿ ಬದಲಾವಣೆ ಕಾಣಿಸಿ ಕೊಳ್ಳಲಾರಂಭಿಸಿತೆನ್ನಲಾಗಿದೆ. ತನ್ನ ಬದುಕು ಮಾತ್ರ ನೇರವಾಗಿದ್ದರೆ ಸಾಲದು, ಇತರರಿಗೆ ತೊಂದರೆ ನೀಡದೆ, ಸಮಾಜಮುಖಿ ಚಿಂತನೆಗಳನ್ನುಅಳವಡಿಸಿಕೊಂಡು ಬದುಕುವುದು ನಾಗರಿಕತೆ ಮಾತ್ರವಲ್ಲ, ಸುಸಂಸ್ಕೃತ ನಡತೆ ಎಂಬುದು ನಿರ್ವಿವಾದ.
ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ ನಿಜಕ್ಕೂ ನಾವು ನಾಗರಿಕರೇ, ಬರಿ ದೇಶದ ಪ್ರಜೆಗಳೇ ಅಥವಾ ಸುಸಂಸ್ಕೃತರೇ ಎಂಬ ಅನುಮಾನ ಮೂಡಿ ಮರೆಯಾಗುತ್ತದೆ. ಹಣ ಗಳಿಕೆ, ಆಧುನಿಕ ಸೌಲಭ್ಯ ಹಾಗೂ ಸೌಕರ್ಯಗಳ ಬೆನ್ನಟ್ಟಿರುವ ನಾವು, ನಾಗರಿಕತೆ, ಮಾನವೀಯತೆಗಳನ್ನು ಪಕ್ಕಕ್ಕಿರಿಸಿಜೀವಿಸುತ್ತಿದ್ದೇವೆ ಎಂಬ ಭಾವನೆಯೂ ಮೂಡುವುದು ಸಹಜ. ನಗರಗಳಲ್ಲಿ ವಾಸಿಸುವರೇ ನಾಗರಿಕರೆಂಬ ಭ್ರಮೆಯೂ ಸಮಾಜದಲ್ಲಿ ಅಲ್ಲಲ್ಲಿ ಹರಿದಾಡುತ್ತಿದೆ.ಕೇವಲ ನಾಗರಿಕನಾದರೆ ಸಾಲದು. ಪ್ರಬುದ್ಧ ನಾಗರಿಕನಾದರೆ ಮಾತ್ರ ಸ್ವಸ್ಥ ಸಮಾಜವೊಂದನ್ನು ನಿರ್ಮಿಸಲು ಸಾಧ್ಯ.
ನಮ್ಮ ಮನೆ, ಅಂಗಳಗಳು ಸ್ವಚ್ಛವಿದ್ದರಾಯಿತು ಎನ್ನುತ್ತಾ, ಹಸಿಕಸ-ಒಣಕಸಗಳನ್ನು ಬೇರ್ಪಡಿಸದೆ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿರಿಸಿ, ಮನೆಯಾಚೆ ಇಲ್ಲವೇಖಾಲಿ ನಿವೇಶನಗಳಲ್ಲಿ ಬಿಸಾಡಿ, ನಮ್ಮ ಪರಿಸರವನ್ನು ನಾವೇ ಹಾಳು ಗೆಡುವುತ್ತಿದ್ದೇವೆ. ಸಾಂಕ್ರಾಮಿಕ ವ್ಯಾಧಿಗಳು ಕದ ತಟ್ಟಿ, ಬದುಕನ್ನು ಬೆಂಡಾಗಿಸಿದರೂ ನಮಗೆ ಪರಿವೆಯಿಲ್ಲ. ಅಂಕಿ ಅಂಶಗಳು ಸೂಚಿಸುವಂತೆ, ೫೦ರ ದಶಕದಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಸುಮಾರು ೧೫ಲಕ್ಷ ಟನ್ ಇದ್ದರೆ, ಇಂದಿನ ದಿನಗಳಲ್ಲಿ ಸುಮಾರು ೨೫ಕೋಟಿ ಟನ್‌ಗೆ ಏರಿಕೆಯಾಗಿರುವುದು ನಿಜಕ್ಕೂ ಕಳವಳಕಾರಿ.
ಸರಕಾರದ ಆದೇಶ, ಕಾನೂನುಗಳ ಪಾಲನೆಗಿಂತ, ನಾವು ಪ್ರಕೃತಿಗೆ ಪೂರಕವಾಗಿರುವುದನ್ನೇ ಬಳಸುತ್ತೇವೆಂಬ ಇಚ್ಛಾಶಕ್ತಿ ಎಲ್ಲಾ ಪ್ರಜೆಗಳಲ್ಲಿ ಮೂಡಿದರೆ ಸ್ವಚ್ಛ ಪರಿಸರದ ಒಡೆಯರು ನಾವಾಗುವುದು ಸಾಧ್ಯ. ಪರಿಸರವನ್ನು ಸ್ವಚ್ಛವಾಗಿರಿಸಬೇಕೆಂಬ ಸ್ವಯಂ ಶಿಸ್ತು ಸರ್ವರಲ್ಲೂ ಮೂಡಿದರೆ, ಸ್ವಚ್ಛ ಭಾರತ ಮಾತ್ರವಲ್ಲ, ಸ್ವಸ್ಥ ಭಾರತದ ಪ್ರಬುದ್ಧ ನಾಗರಿಕರು ನಾವಾಗಲು ಸಾಧ್ಯ.
ಭಾರತದಲ್ಲಿ ಆಹಾರವನ್ನು ಭಗವಂತನ ಸ್ವರೂಪವೆಂದೇ ಭಾವಿಸಲಾಗುತ್ತದೆ. ಊಟ ಮಾಡುವ ಮುಂಚೆ, ‘ಅನ್ನ ಪೂರ್ಣೇ ಸದಾಪೂರ್ಣೇ ಶಂಕರಪ್ರಾಣವಲ್ಲಭೇ, eನವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತಿ,’ ಎಂದು ಮಾತೆಯನ್ನು ಪ್ರಾರ್ಥಿಸುವ ಪರಿಪಾಠವಿದೆ. ಒಂದೇ ಒಂದು ತುತ್ತಾದರೂ ಸರಿ, ಬಡಿಸಿಕೊಳ್ಳುವ ಮುಂಚೆ, ಈ ಪದಾರ್ಥ ನನಗೆ ಹಿಡಿಸಬಹುದೇ? ನಾನು ವ್ಯರ್ಥ ಮಾಡದೆ, ಪೂರ್ತಿಯಾಗಿ ಊಟ ಮಾಡಬಹುದೇ ಎಂದು ಯೋಚಿಸಿ ಬಡಿಸಿಕೊಳ್ಳುವುದು ಅಗತ್ಯ. ಅವಶ್ಯಕತೆಗಿಂತ ಹೆಚ್ಚಿನ ಆಹಾರದ ತಯಾರಿಕೆಯೂ ಸಮಂಜಸವೆನಿಸದು.
ದೇಶದಲ್ಲಿ, ದಿನಕ್ಕೆ ಸುಮಾರು ೨೫೦ ಕೋಟಿ ಬೆಲೆಬಾಳುವಷ್ಟು ಆಹಾರ ವ್ಯರ್ಥವಾಗುತ್ತದೆಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ವಿಶ್ವದಾದ್ಯಂತ ಸಾಂಕ್ರಾಮಿಕ ಕಾಯಿಲೆಗಳಿಂದ ಬಲಿಯಾಗುವವರಿಗಿಂತ ಹಸಿವು, ಅಪೌಷ್ಟಿಕತೆಯಿಂದ ಸಾವಿಗೀಡಾಗುವವರ ಸಂಖ್ಯೆಯೇ ಹೆಚ್ಚು ಎಂದು ಅಂಕಿ-ಅಂಶಗಳಿಂದ ನಿರೂಪಿತವಾಗಿದೆ. ಅನ್ನವನ್ನು ಪರಬ್ರಹ್ಮರೂಪಿಯಾಗಿ ಕಾಣುತ್ತೇವೆ, ಸಭೆ-ಸಮಾರಂಭಗಳಲ್ಲಿ ಮಾಡಿರುವ ಅಡಿಗೆ ಹೆಚ್ಚಾಗಿ ಕಸದ ತೊಟ್ಟಿಗೆ ಬೀಳುವ ಅನ್ನದ ರಾಶಿ, ಅದಕ್ಕಾಗಿ ಕಾದು ಕುಳಿತಿರುವ ಕಂದಮ್ಮಗಳ ದೃಶ್ಯ, ಕೇವಲ ಮನಸ್ಸನ್ನು ಕಲಕಿದರೆ ಏನೇನೂ ಸಾಲದು, ಬದಲಾವಣೆ, ಸರಕಾರದ ಕಾನೂನಿ ಗಳಿಂದಾಗಲೀ ಅಥವಾ ಸರಕಾರೇತರ ಸಂಸ್ಥೆಗಳಿಂದಾಗಲೀ ಸಾಧ್ಯವಿಲ್ಲ. ಪ್ರಬುದ್ಧ ನಾಗರಿಕರು ಮಾತ್ರ ಸಕಾರಾತ್ಮಕ ಬದಲಾವಣೆಯನ್ನು ತರಲು ಸಾಧ್ಯ.ವಿದ್ಯಾವಂತ ಹಾಗೂ ಪ್ರeವಂತ ಮತದಾರರು, ಕೆಲ ರಾಜಕೀಯ ನಾಯಕರ ದುರಾಡಳಿತದ ವಿಚಾರಗಳನ್ನು ಮಾಧ್ಯಮಗಳಿಂದ ತಿಳಿದು, ಮನೆಯಲ್ಲಿ ವಾಹಿನಿಗಳ ಮುಂದೆ ಕುಳಿತು ಗಂಟೆಗಟ್ಟಲೇ ಚರ್ಚೆ ಮಾಡಬಲ್ಲರೇ ಹೊರತು ಮತ ಚಲಾಯಿಸಲು ಮತಗಟ್ಟೆಗಳಿಗೆ ಹೋಗುವುದಿಲ್ಲವೆಂಬ ಆಕ್ಷೇಪಣೆ ಎಡೆಯಿಂದ ಕೇಳಿಬರುತ್ತಿದೆ. ಈ ಆಕ್ಷೇಪಣೆಯಲ್ಲಿ ಸತ್ಯಾಂಶವಿಲ್ಲದಿಲ್ಲ. ‘ಪ್ರತಿ ಬಾರಿಯೂ ಇದೇ ಕಥೆ ಕಣ್ರೀ, ಯಾರು ಆರಿಸಿ ಬಂದರೂ ನಮಗೆ ರಾಗಿ ಬೀಸೋದು ತಪ್ಪೋದಿಲ್ಲ’. ಎಂದು ಕೆಲ ದೋಷದರ್ಶಿಗಳು, ಮಹಿಳಾ ಮಣಿಗಳು ತೀರ್ಪು ನೀಡಿ ಮನೆಯಲ್ಲಿ ವಾಹಿನಿಗಳ ಮುಂದೆ ಆಸೀನರಾಗಿ ಬಿಡುತ್ತಾರೆ ಎಲ್ಲಾ ಪಕ್ಷಗಳ ಹಣೆಬರಹ ಇಷ್ಟೇ ನಂಬಿಕೆಗೆ ಅರ್ಹರು ಯಾರೂ ಇಲ್ಲ.
ಬರಗಾಲ, ಮಹಾಪೂರ, ಭೂಕಂಪ, ಸುನಾಮಿಗಳಂತಹ ನೈಸರ್ಗಿಕ ವಿಕೋಪಗಳಲ್ಲಿ ಒಂದನ್ನು ಆರಿಸಲು ಸೂಚಿಸಿದರೆ, ಆಯ್ಕೆ ಸುಲಭವೇ?’ ಎಂದುಪ್ರಶ್ನಿಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಮತದಾನ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವ ಸಾಧನ. ಜಾಗೃತ ಮತದಾನದಿಂದ ಜನಪರ ಸರಕಾರ ವನ್ನು ಆರಿಸಿ ತರುವ, ಜನವಿರೋಽ ಸರಕಾರವನ್ನು ಅಽಕಾರದಿಂದ ಕಿತ್ತೊಗೆಯಲು ಮತದಾರರಿಗೆ ಸಾಧ್ಯ. ಕೆಲವೊಂದು ದೇಶಗಳಲ್ಲಿ ಮತದಾನಕ್ಕೆ ಗೈರು ಹಾಜರಾಗುವ ನಾಗರಿಕರು, ಕಾನೂನಿನ ರೀತ್ಯಾ ಶಿಕ್ಷಾರ್ಹರೆನಿಸುತ್ತಾರೆ. ಭ್ರಷ್ಟಾಚಾರ, ಜಾತಿ ರಾಜಕಾರಣ, ಸ್ವಜನ ಪಕ್ಷಪಾತಗಳ ಸುಳಿಯಲ್ಲಿ ಸಿಲುಕಿದರೆ ಪ್ರಜಾಪ್ರಭುತ್ವ ನಲುಗುತ್ತದೆ. ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಸಂಪದ್ಭರಿತ ಭಾರತ ದೇಶವೇ, ನಮ್ಮ ಮುಂದಿನ ಜನಾಂಗಕ್ಕೆ ಪ್ರಭುತ್ವರೆನಿಸಿದ ನಾಗರಿಕರು ನೀಡಬಹುದಾದ ಪವಿತ್ರ ಉಡುಗೊರೆಯಾಗಿದೆ. ಅದಕ್ಕಾಗಿಯೇ ಭಾರತೀಯರೆಲ್ಲರೂ ಪ್ರಜ್ಞಾವಂತ ನಾಗರಿಕರಾಗಿ ಮತ ಚಲಾಯಿಸಲೇಬೇಕಾಗಿದೆ.
ಮತದಾನದ ದಿನದಂದು, ಮತ ಕೊಡುಗೆ ನೀಡುವವರನ್ನು ಪ್ರಬುದ್ಧ ನಾಗರಿಕರೆಂದು ಪರಿಗಣಿಸಲಾಗುತ್ತದೆ. ಇಂದಿನ ದಿನಗಳಲ್ಲಿ, ದೇಶಪ್ರೇಮ ಮತ್ತು ರಾಷ್ಟ್ರೀಯತೆಯ ಭಾವ ಕೆಲವರ ಮನದಿಂದ ದೂರವಾಗುತ್ತಿದೆಯೇ ಎಂಬ ಭಾವ ಮೂಡುತ್ತಿದೆ. ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಗೀತೆಗಳಿಗೆ ನಿರೀಕ್ಷಿತ ಗೌರವ ದೊರಕದಿರುವ ಬೇಸರದ ಉದಾಹರಣೆಗಳೂ ಉಂಟು. ಯಾವುದೇ ಕಾನೂನು ಇಲ್ಲವೇ ಆದೇಶಗಳಿಂದ ದೇಶಪ್ರೇಮವನ್ನು ಉದ್ದೀಪಿಸಲಾಗದು. ರಾಷ್ಟ್ರಧ್ವಜ, ರಾಷ್ಟ್ರಗೀತೆಗಳು ನಮ್ಮ ದೇಶದ ಹೆಮ್ಮೆಯ ಸಂಕೇತಗಳು. ಇವುಗಳನ್ನು ಗೌರವ ಭಾವದಿಂದ  ಣುವುದು ಪ್ರತಿಯೊಬ್ಬ ದೇಶವಾಸಿಯ ಕರ್ತವ್ಯವೂ ಹೌದು.
ಮಾತೆತ್ತಿದರೆ ಬಂದ್ ಎಂಬ ಆಚರಣೆ, ಸರಕಾರದ ಕ್ರಮಗಳ ವಿರುದ್ಧ ರೇಜಿಗೆ ಹುಟ್ಟಿಸುವ ಪ್ರತಿಭಟನಾಸವಾಗಿ ಬಳಕೆಯಾಗುತ್ತಲಿದೆ. ಸಾರಿಗೆ ಸಂಪರ್ಕವಿಲ್ಲದೆ, ವ್ಯೆದ್ಯಕೀಯ ಸೇವೆಯ ಉಪಲಬ್ದವಿಲ್ಲದೆ, ದಿನಗೂಲಿಯಿಲ್ಲದೆ ಒಪ್ಪೊತ್ತಿನ ಊಟಕ್ಕೂ ಸಂಚಕಾರ ಅನುಭವಿಸಿದ ಕೂಲಿಕಾರರಿಂದ, ಬಂದ್ ಎಂಬುದು ಅನಪೇಕ್ಷಿತ ಹಾಗೂ ಅಶಕ್ತವಾದ ಹೋರಾಟವೆಂದೇ ಬಿಂಬಿತವಾಗುತ್ತಲಿದೆ. ಅವಹೇಳನಕಾರಿ ಭಾಷೆಯ ಬಳಕೆ, ಸಾರ್ವಜನಿಕ ಸಂಪತ್ತುಗಳ ಲೂಟಿ, ಉದ್ರಿಕ್ತ ವಾತಾವರಣ ಗಳಿಂದ ಯಾವ ಸಮಸ್ಯೆಗೂ ಪರಿಹಾರ ದೊರಕದು. ಇಂತಹ ಸಮಾಜ ವಿರೋಧಿ ಕೃತ್ಯಗಳಿಗೆ ಮುಂದಾಗುವ ನಾಗರಿಕರು ಪ್ರಬುದ್ಧರೆನಿಸಲಾರರು.
ಕಳೆದ ಸುಮಾರು ಒಂದೂವರೆ ವರ್ಷಗಳಿಂದ ಕೋವಿಡ್-೧೯ಸೋಂಕು ಅನಪೇಕ್ಷಿತ ಅತಿಥಿಯಂತೆ ವಿಶ್ವದ ಅಂಗಳ ಪ್ರವೇಶಿಸಿ, ಇಡೀ ವಿಶ್ವವನ್ನೇ ತನ್ನನೆಲೆಯಾಗಿಸಿಕೊಂಡು ತಲ್ಲಣಗಳನ್ನು ಹುಟ್ಟು ಹಾಕಿದೆ. ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಕರೋನಾ ಸೋಂಕಿತರ ಶವಸಂಸ್ಕಾರದ ದೃಶ್ಯಾವಳಿಗಳು ವೀಕ್ಷಕರ ಕಣ್ಣಂಚಿನಲ್ಲಿ ಕಂಬನಿ ಜಿನುಗುವಂತೆ ಮಾಡುತ್ತಲಿವೆ. ಸೋಂಕಿತರು ಸಾವೀಗೀಡಾದಾಗ ಬಂಧು-ಬಳಗದ ಉಪಸ್ಥಿತಿ ಮತ್ತು ಅಶ್ರುತರ್ಪಣವಿಲ್ಲದೆ, ಯಾವ ಧಾರ್ಮಿಕ ಸಂಸ್ಕಾರವೂ ಇಲ್ಲದೇ ಶವಸಂಸ್ಕಾರಗಳನ್ನು ನಡೆಸಲಾಗುತ್ತಿದೆ.
ನಾಗರಿಕರು ಮತ್ತೆ ಎಚ್ಚರ ತಪ್ಪಿದರೆ, ದೇಶದೆಡೆ ತೆಗೆದುಕೊಂಡ ಕಠಿಣ ಕ್ರಮಗಳು, ಪ್ರಯತ್ನಗಳೆ ವ್ಯರ್ಥವಾಗಿ ಹೋಗುವುದರಲ್ಲಿ ಸಂಶಯವಿಲ್ಲ. ಕೋವಿಡ್ ಹೊಸದೊಂದು ರೂಪ ತೊಟ್ಟು ಬಂದು, ತನ್ನ ಇರುವನ್ನು ಪ್ರಕಟಿಸುತ್ತಲೇ ಇದೆ. ಕರೋನಾ ಸೋಂಕಿನ ಅಲೆ ದೇಶದಾದ್ಯಂತ ಹರಡಿ ಮತ್ತಷ್ಟು ಸಂಕಷ್ಟಗಳಿಗೆ ತಾವು ಮತ್ತು ತಮ್ಮ ಜತೆಗಾರರು ಗುರಿಯಾಗದಂತೆ ಜಾಗ್ರತೆ ವಹಿಸಿ, ಸೂಚಿತವಾಗಿರುವ ಕ್ರಮಗಳನ್ನು ಮುಂದುವರಿಸುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಕರೋನಾ ಸೋಂಕಿಗೆ ಮಾನವರೇ ವಾಹಕರೆಂಬ ಅಂಶ ಬಾರಿ ಬಾರಿ ನಿರೂಪಿತವಾಗುತ್ತಲೇ ಇದೆ. ಮಾಸ್ಕ್ ಧರಿಸದೆ ಓಡಾಡುವುದು, ಕೆಲಸ-ಕಾರ್ಯಗಳಿಲ್ಲದಿದ್ದರೂ ಮನಬಂದಂತೆ ಓಡಾಟ, ಗುಂಪುಗೂಡಿ ಹರಟೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು, ಎಂದರಲ್ಲಿ ಉಗಿಯುವುದು, ಸ್ವಚ್ಛತೆಯ ಬಗ್ಗೆ ಉದಾಸೀನ ಮನೋಭಾವವನ್ನು ತೋರಿದರೆ, ಕರೋನಾ ಸೋಂಕಿನ ಅಲೆಯ ತೀವ್ರತೆ ಹೆಚ್ಚಾಗಿ, ಸೋಂಕಿತರ ಸಂಖ್ಯೆ ಮತ್ತೆ ಗಣನೀಯಪ್ರಮಾಣದಲ್ಲಿ ಹೆಚ್ಚುವುದರಲ್ಲಿ ಅನುಮಾನವಿಲ್ಲ.
ಶರಾಬು ಅಂಗಡಿಗಳನ್ನು ಲಾಕ್‌ಡೌನ್‌ನಿಂದ ತೆರವುಗೊಳಿಸುತ್ತಿದ್ದಂತೆಯೇ, ಅಂಗಡಿಗಳ ಮುಂದೆ ಕಾಣಿಸಿದ ಉದ್ದವಾದ ಸರತಿ ಸಾಲು ನಿಜಕ್ಕೂ ಖೇದಕರ.ಮಧ್ಯಪಾನಿಗಳ ಕುರಿತು ಸಮಾಜದಲ್ಲಿ ತಿರಸ್ಕಾರದ ನೋಟವಿದ್ದರೂ ಚಿಂತೆಯಿಲ್ಲ. ಮಧ್ಯಪಾನ ಮಾರಾಟವನ್ನು ನಿಷೇಧಿಸಲಿ ಎಂದು ಗೃಹಿಣಿಯರು ಮುಷ್ಕರಹೂಡಿದರೂ ಇವರಿಗೆ ಬೇಸರವಲ್ಲ. ಶರಾಬು ಅಂಗಡಿಗಳು ಸದಾ ತೆರದಿರಲಿ ಎಂದು ಮಧ್ಯಪಾನ ವ್ಯಸನಿಗಳು ಸರಕಾರವನ್ನು ಒತ್ತಾಯಿಸುವುದು, ಸಮಂಜಸ ವೆನಿಸದು. ಕೋವಿಡ್ ಸೋಂಕಿನಿಂದಾಗಿ ನಗರದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ತುರ್ತುನಿಗಾ ವಿಭಾಗದಲ್ಲಿ ಮತ್ತು ವೆಂಟಿಲೇಟರ್ ಸೌಲಭ್ಯವಿರುವ ಆಸ್ಪತ್ರೆಗಳಲ್ಲಿ ಪ್ರವೇಶ ಸಿಗದೆ, ಎಷ್ಟೋ ಸೋಂಕಿತರು ಅಸ್ಪತ್ರೆಯ ಹೊರ ಆವರಣದಲ್ಲಿ ಪ್ರಾಣಕಳೆದುಕೊಂಡ ದಾರುಣ ದೃಶ್ಯಗಳನ್ನು ವಾಹಿನಿಯಲ್ಲಿ ವೀಕ್ಷಿಸುವಾಗ ಕಣ್ಣುಗಳಲ್ಲಿ ಕಂಬನಿ ಜಿನುಗದಿರಲಾರದು. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಬೆಡ್ ಬ್ಲಾಕಿಂಗ್ ಮಾಡುವುದು, ಆಂಬ್ಯುಲೆನ್ಸ್‌ಗಳಿಗೆ ದುಬಾರಿ ಬಾಡಿಗೆ ಬೇಡುವುದು, ಆಕ್ಸಿಜನ್ ಸಿಲಿಂಡರ್‌ಗಳಿಗೆ ದುಬಾರಿ ಶುಲ್ಕ ವಿಽಸುವುದು, ರೋಗಿಗಳಿಂದ ಲಕ್ಷಾಂತರ ರುಪಾಯಿ ವಸೂಲಿ ಮಾಡುವಂತಹ ಕೃತ್ಯಗಳನ್ನು ನೋಡಿದಾಗ ಮಾನವೀಯತೆಯನ್ನು ಮರೆತು ಬದುಕುತ್ತಿರುವ ನಾಗರಿಕರ ಬಗ್ಗೆ ಬೇಸರ ವುಂಟಾಗುವುದು ಸಹಜ. ಜನಸಾಮಾನ್ಯರಲ್ಲಿ, ಧರ್ಮಪ್ರe ಮತ್ತು ಪಾಪಪ್ರಜ್ಞೆಗಳು ಮರೆಯಾಗುತ್ತಿವೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.
ನಾಗರಿಕರು ಪ್ರಬುದ್ಧರಂತೆ ವರ್ತಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದಿದ್ದರೆ, ತೆರೆಮರೆಯಲ್ಲಿ ಕುಳಿತು ಹೊಂಚು ಹಾಕುತ್ತಿರುವ ಕೋವಿಡ್-೧೯ಸೋಂಕಿನ ಅಲೆಗಳ ಕಪಿಮುಷ್ಟಿಯಲ್ಲಿ ಮತ್ತೊಂದು ಬಾರಿ ಸಿಕ್ಕಿ ಬೀಳುವುದು ಖಂಡಿತ. ರಸ್ತೆಯಲ್ಲಿ ಅಪಘಾತವಾದಾಗ, ರಸ್ತೆಯುದ್ದಕ್ಕೂ ರಕ್ತ ಚೆಲ್ಲಿದ ದೃಶ್ಯವನ್ನು ನೋಡಿದಾಗ ದಿಗಿಲುಂಟಾಗುತ್ತದೆ. ಏಕೆಂದರೆ ನಮ್ಮಂತಹದ್ದೇ ಜೀವ ಅವರದ್ದೂ ಎನ್ನುವ ಭಾವ ಎಲ್ಲರೊಳಗೆ ಇದ್ದೇ ಇರುತ್ತದೆ. ಹಿಂದಿನ ದಿನಗಳಲ್ಲಿ ಒಂದುಅಪಘಾತವಾದರೆ, ಅದನ್ನು ನೋಡಿ ಅಲ್ಲಿಯೇ ಓಡಾಡುತ್ತಿದ್ದ ಜನರು ಧಾವಿಸಿ ಬಂದು ಉಪಚರಿಸಿ, ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಆಸ್ಪತ್ರೆಗೆ ಸೇರಿಸುತ್ತಿದ್ದರು.ಇತ್ತೀಚೆಗೆ ಜನರಲ್ಲಿ ಪರೋಪಕಾರದ ಮನೋಭಾವ ಕಡಿಮೆಯಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ.
ಇಂದಿನ ದಿನಗಳಲ್ಲಿ ಸ್ವಂತ ಹಿತಾಸಕ್ತಿಯೇ ಮೇಲುಗೈ ಪಡೆದಿದೆ ಎನ್ನಲೂಬಹುದು. ಕೆಲದಿನಗಳ ಹಿಂದೆ, ರಸ್ತೆಯೊಂದರಲ್ಲಿ ಪೊಲೀಸ್ ಅಧಿಕಾರಿಗಳಿಬ್ಬರು ವಾಹನ ಅಪಘಾತಕ್ಕೆ ಸಿಲುಕಿದಾಗ, ನೆರವಿಗಾಗಿ ಅಂಗಲಾಚಿದರೂ ದಾರಿಹೋಕರು ನೆರವಿಗೆ ಬರಲಿಲ್ಲವೆಂಬುದು ವಿಪರ್ಯಾಸದ ಸಂಗತಿ. ಕೊನೆಗೆ ಆ ಅಧಿಕಾರಿಗಳಿಗೆ ನಿರೀಕ್ಷಿತ ವೈದ್ಯಕೀಯ ಸೌಲಭ್ಯ ಸಿಗದೆ, ಪ್ರಾಣ ಬಿಟ್ಟ ಪ್ರಕರಣ ನೋವಿನ ಸಂಗತಿ. ದಾರಿಹೋಕರು ನೆರವು ನೀಡಿ, ಇಬ್ಬರ ಪ್ರಾಣ ಉಳಿಸಲು ಸಾಧ್ಯವಿತ್ತು. ಇಂತಹ ಸನ್ನಿವೇಶದಲ್ಲಿಯೂ ಕೆಲವರು ಅಪಘಾತದ ಸನ್ನಿವೇಶಗಳನ್ನು ಫೋಟೊ ಮತ್ತು ವಿಡಿಯೊ ಮೂಲಕ ಸೆರೆ ಹಿಡಿದು, ಸಂದೇಶಗಳನ್ನು ಹಂಚಿಕೊಳ್ಳು ತ್ತಿದ್ದರಂತೆ.
ಪೊಲೀಸ್ ಅಧಿಕಾರಿಗಳ ಬದಲು ನಮ್ಮವರೇ ಯಾರಾದರೂ ಅಪಘಾತಕ್ಕೆ ಸಿಲುಕಿದ್ದರೆ, ಆಗಲೂ ಇದೇ ಧೋರಣೆಯನ್ನು ಅನುಸರಿಸಲು ಸಾಧ್ಯವೇ? ಪೊಲೀಸ್ಠಾಣೆ, ಆಸ್ಪತ್ರೆಗಳಿಗೆ ವೃಥಾ ಅಲೆದಾಡುವ ಪೇಚಾಟ ನಮಗೇಕೇ? ನಮ್ಮಷ್ಟಕ್ಕೆ ನಾವು ಇದ್ದು ಬಿಟ್ಟರಾಯಿತು ಎಂಬ ಮನೋಭಾವ ಹೆಚ್ಚಿನಂಶ ಜನರಲ್ಲಿದೆ. ಅಪಘಾತದಲ್ಲಿ ನಮ್ಮವರೇ ಗಾಯಾಳುಗಳಾದರೆ, ನಾವು ಅನುಭವಿಸುವ ನೋವು-ಸಂಕಟಗಳನ್ನು ಅಳೆಯಲಾದೀತೇ? ಇಂತಹ ದಾರುಣ ಸನ್ನಿವೇಶಗಳಲ್ಲಿ, ಪ್ರಬುದ್ಧತೆ ತೋರಿ, ನೆರವಿನ ಹಸ್ತ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.
ನಮ್ಮ ದೇಶದಲ್ಲಿ ಇಂದಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ, ನಾವೆಷ್ಟು ನಾಗರಿಕರು? ಎಂಬ ಪ್ರಶ್ನೆಗಿಂತ ನಿಜವಾಗಿಯೂ ನಾವುನಾಗರಿಕರೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಿರಿಯರು ಉಪದೇಶಿಸಿದ ಜೀವನಮೌಲ್ಯಗಳನ್ನು ಗಾಳಿಗೆ ತೂರಿ ಹಣ ಗಳಿಕೆಯನ್ನೇ ಬದುಕಿನ ಬೀಜಮಂತ್ರ ವಾಗಿಸಿಕೊಳ್ಳುವುದು ಉಚಿತವೆನಿಸದು. ಎಂದರಲ್ಲಿ ಬಾಳೆಹಣ್ಣಿನ ಸಿಪ್ಪೆ ಬಿಸಾಕುವುದು, ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳ್ಳುವುದು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವೆಸಗುವುದು, ಅವಶ್ಯಕವಲ್ಲದ ಸಾಮಾನುಗಳನ್ನು ಕೊಳ್ಳುವುದು, ಉದ್ದೇಶ ಪೂರ್ವಕವಾಗಿ ಕಾನೂನು ಕಟ್ಟಳೆಗಳನ್ನು ಮುರಿಯುವುದು,ಉನ್ನತ ಸ್ಥಾನ ಗಳಲ್ಲಿರುವವರನ್ನು ಅವಮಾನಿಸುವುದು, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಕಾನೂನನ್ನು ಪರಿಪಾಲಿಸುವವರಿಗೆ ಕಿರುಕುಳ ನೀಡುವುದು, ಧರ್ಮಗಳನ್ನು ವಿಭಜಿಸಿ ನಾಯಕನಂತೆ ವಿಜೃಂಭಿಸುವಂತಹ ಮುಂತಾದ ಪ್ರವೃತ್ತಿಗಳು ಜನಸಾಮಾನ್ಯರಲ್ಲಿ ಮೂಡುತ್ತಿರುವುದು ನಿಜಕ್ಕೂ ಕಳವಳಕಾರಿ. ಅದಕ್ಕಾಗಿಯೇ, ನಾವು ನಾಗರಿಕರೇ? ಎಂಬ ಪ್ರಶ್ನೆಯೇ ಹೆಚ್ಚು ಸಮಂಜಸವೆನಿಸದಿರಲಾರದು.