ಸಮಾಜದ ಸ್ವಾಸ್ಥ್ಯ ಕೆಡಿಸುವ ಮಾದಕವಸ್ತುಗಳು
ತನ್ನಿಮಿತ್ತ
ಡಾ.ಕರವೀರಪ್ರಭು ಕ್ಯಾಲಕೊಂಡ
 ’  ,    !   , ’     . ,  ಸಾಮಾಜಿಕ ಬದುಕನ್ನೇ ಕುಲಗೆಡಿಸಿ ಭಯಂಕರ ವಾದ ಒಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗ ವಾಗುತ್ತಿರುವ ಮಾದಕವಸ್ತು ಸೇವನೆ ಈಗಾಗಲೇ ಭಾರತದ ನಗರಗಳನ್ನು ಕಬಳಿಸತೊಡಗಿದೆ.
ಸಮಾಜದ ಮಧ್ಯಮವರ್ಗ ಮತ್ತು ಕೆಳವರ್ಗದ ಜನ ಮದ್ಯಪಾನಕ್ಕೆ ಬಲಿಯಾಗುವುದೇ ಸಾಕಷ್ಟು ಆತಂಕಕಾರಿ ಹಾಗೂ ಭಯಾನಕ. ಮಾದಕವಸ್ತುಗಳ ಸೇವನೆಚಟಕ್ಕೆ ಬಲಿಯಾದರಂತೂ ನಿಜವಾದ ಅರ್ಥದಲ್ಲಿ ತನ್ನ ಬದುಕಿನ ಅಂತ್ಯವನ್ನು ಆರಂಭಿಸಿರುತ್ತಾನೆ. ಮಾದಕವಸ್ತುಗಳ ಸೇವನೆ ಪಿಡುಗು ಕೈಮೀರಿ ಹೋಗುವ ಮುನ್ನ ಸರಕಾರ ಮತ್ತು ಜನತೆ ಜಾಗೃತವಾಗದಿದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಈ ಸಾಂಕ್ರಾಮಿಕ ರೋಗ ನಮ್ಮ ದೇಶದ ಸಣ್ಣ ಪುಟ್ಟ ಹಳ್ಳಿಗಳಿಗೂ ಹರಡಿ ನಾವು ನಮ್ಮ ಕಣ್ಮುಂದೆಯೇ ಸದಾ ಮಾರಕ ಮಾದಕವಸ್ತುಗಳ ಗುಂಗಿನಲ್ಲಿರುವ ನಿರುಪಯೋಗಿ ಹಾಗೂ ಸಮಾಜಕ್ಕೆ ಆಪಾಯಕಾರಿಯಾದ ತಲೆಮಾರೊಂದರ ಕರಿ ನೆರಳಲ್ಲಿಯೇ ಬದುಕಬೇಕಾದೀತು!
ಆಧುನಿಕ ನಾಗರಿಕತೆಯ ಕಾವೇರಿದ ನಗರಗಳಲ್ಲಿ ಮಾದಕವಸ್ತು ಎಲ್ಲಿಲ್ಲದ ಸಂಪತ್ತನ್ನು ಹಾಗೂ ವಿಪತ್ತನ್ನು ತರುವ ತಡೆಯಲಾರದ ಭಯಂಕರ ಆಕರ್ಷಣೆ ಯಾಗಿದೆ. ಮಾದಕವಸ್ತು ವ್ಯಕ್ತಿಯ ಮಾನವೀಯ ಮೌಲ್ಯಗಳನ್ನು ಅಳಿದು, ಅಸುರಿ ಶಕ್ತಿಯನ್ನು ಉದ್ರೇಕಿಸಿ ಹೀನ ಅಪರಾಧ ಗಳನ್ನು ಮಾಡಲು ಪ್ರಚೋದಿಸುವ ಭಯಂಕರ ಸಾಧನವಾಗಿದೆ. ಇದಕ್ಕೆ ತನ್ನದೇ ಆದ ಬಹುದೊಡ್ಡ ಚರಿತ್ರೆಯಿದೆ. ಅನಾದಿಕಾಲದಿಂದ ಇಂದಿನವರೆಗೆ ಅದರ ಆಕರ್ಷಣೆ, ಚೆಟ ನಿರಂತರವಾಗಿ ನಡೆದಿದೆ. ಮಾನವ ಆನಂದದ ಆರಾಧಕ ಮತ್ತು ಆನ್ವೇಷಕ. ಅವನಲ್ಲಿ ಆನಂದದ ಪರಮಾವಧಿ ತಲುಪುವ ತವಕ.
ತಾನು ಸಾಧಿಸುವ ಪ್ರತಿಯೊಂದು ಕಾರ್ಯಗಳೂ ಆನಂದ ಪಡೆಯುವುದಕ್ಕಾಗಿಯೇ ಎಂಬ ಭಾವುಕ. ಎಷ್ಟೋ ವಿಷಯಗಳನ್ನು ಕಂಡುಹಿಡಿದರೂ ತೃಪ್ತನಾಗದ ಮಾನವ ಕೊನೆಗೊಂದು ವಸ್ತುವನ್ನು ಸಂಪಾದಿಸಿಯೇ ಬಿಟ್ಟ. ಅದೇ ಮಾದಕವಸ್ತು. ಅಂದು ಅದು ಮಾನವನಿಗೊಂದು ಹೊಸ ಸ್ವರ್ಗೀಯ ಅನುಭವವನ್ನೇ ತೆರೆದಿಟ್ಟಿತು. ಸುಖ, ಶಾಂತಿ, ಆನಂದ, ಮಾನವ ಜೀವನದ ಪ್ರಬಲ ಆಸೆಗಳು, ಆಕರ್ಷಣೆಗಳು. ಸುಖಪಡುವುದು ಮನುಷ್ಯನ ಹುಟ್ಟಾಸೆ ಎಂದಿದ್ದಾನೆ ಪ್ರಸಿದ್ಧ ಮನೋವಿಜ್ಞಾನಿ ಸಿಗ್ಮಂಡ್ ಫಾಯ್ಡ್. ಅದರ ಸುತ್ತ ಆಸೆಯ ಬಲೆಯನ್ನು ನೇಯುತ್ತಾ, ಯೋಜನೆಗಳನ್ನು ಹಾಕಿ ಹಮ್ಮುತ್ತ, ಅತೀ ಕಡಿಮೆ ಕ್ರಮದಲ್ಲಿ ಅತೀ ಹೆಚ್ಚು ಸುಖ ಅನುಭವಿಸಲು ಪ್ರತಿಯೊಬ್ಬ ಜೀವಿ ತನ್ನ ಜೀವಿತವನ್ನೇ ಮುಡುಪಾಗಿಡುತ್ತಾನೆ.
ದೈನಂದಿನ ಜೀವನದ ಕಷ್ಟ ನಷ್ಟಗಳ, ನೋವು ನಿರಾಶೆಗಳ, ಏಕಾಕಿತನ, ಅನಾಥಪ್ರಜ್ಞೆ, ಕೈಗೆಟುಕದ ಪ್ರೀತಿಯ ಮರೀಚಿಕೆ, ಹುಸಿಯಾಗುತ್ತಿರುವ ಮಾನವೀಯ ಮೌಲ್ಯಗಳ, ಸಂಬಂಧಗಳ, ಬಂಧನಗಳಿಂದ ಬಿಡುಗಡೆಯಾಗಿ ದೂರ ಬಹುದೂರ ಸಾಗಲು, ಅರೆಗಳಿಗೆ ಮರೆಯಲು, ಮರೆತು ಮೆರೆದಾಡಲು ‘ಮುಕ್ತತೆ’ಯಅನುಭವ ಪಡೆಯಲು, ಜಗತ್ತಿನ ಸಂಬಂಧ ಸಡಿಲಿಸಿಕೊಂಡು ಸಿಮೋಲಂಘನ ಮಾಡಿ, ಶೂನ್ಯಸ್ಥಿತಿಯಲ್ಲಿ ಸಂತೋಷದಿಂದ ಸಮಯ ಕಳೆಯಲು ಮಾದಕವಸ್ತುಗಳ ಸೀಮೆಯಲ್ಲಿ ಸಿಕ್ಕು ಶರಣಾಗತರಾಗುವರು.
ವಂಚನೆಯಿಲ್ಲದ, ಜಾತಿಭೇದ ಗಳಿಲ್ಲದ, ಮೇಲುಕೀಳುಗಳಿಲ್ಲದ, ಜನಿವಾರ ಶಿವದಾರ ಗಳಿಲ್ಲದ ಸೆರೆಮನೆಯಲ್ಲಿ ನಿಧಾನ ಸಾವಿನ ಸುಳಿಯಲ್ಲಿ ಗಿರಕಿ ಹೊಡೆಯು ವರು. ಹೊರಬರಲು ಹಾದಿ ಕಾಣದೆ ಹೊರಳಾಡುವರು. ವಿಲಿ ವಿಲಿ ಒzಡುವರು. ಅಮಲಿನ ಅಲ್ಪ ಸುಖಕ್ಕೆ ಮರುಳಾಗಿ ಜೀವನ ಪರ್ಯಂತ ಗೋಲಾಕಾರದ ಗೋಳದಲ್ಲಿ ಗೋಳಾಡುವರು. ಮತ್ತಿನ ಹಿರಿಯುಂಡವಗೆ/ ಉರಿಯ ಮೇಲುಡುಕುವಗೆ ಹರಿಯುವ ಹಾವ ಪರನಾರಿ/ಪಡಿದಂಗೆ ಮರಣದ ನೆರಳು ಸರ್ವಜ್ಞ. ಇಂದು ದಾರ್ಶನಿಕ ಕವಿ ಹೇಳಿರುವ ಮಾತುಗಳು ಎಷ್ಟೊಂದು ಅರ್ಥಪೂರ್ಣವಾಗಿವೆಯಲ್ಲವೇ? ಮಾದಕವಸ್ತುಗಳ ಸೇವನೆ ಭಾರತಕ್ಕೆ ಹೊಸದೇನೂ ಅಲ್ಲ. ಸಾಧು ಸಂತರು ಗಾಂಜಾ ಹೊಡೆದು, ಕಳ್ಳು ಕುಡಿದು, ಆತ್ಮ – ಪರಮಾತ್ಮನ ನಡುವಿನ ಸಂಬಂಧಗಳ ಬಗ್ಗೆ ಮಾತಾಡುತ್ತಿದ್ದ ದೇಶ ಇದು.
ಚಟಕ್ಕೆ ಅಧೀನ ರಾಗುವವರು ಯಾರು?:ಕಲಿತ ಚಟಕ್ಕೆ ಕಲ್ಲು ಹಾಕಿದರೂ ಬಿಡುವುದಿಲ್ಲ ಎಂಬುದು ಮತ್ತಿನ ವಸ್ತುಗಳ ವಿಷಯದಲ್ಲಂತೂ ಸತ್ಯ. ಬಹಳ ಮಂದಿ ಆಗೊಮ್ಮೆ ಈಗೊಮ್ಮೆ ಮೋಜಿಗಾಗಿ, ಕುತೂಹಲಕ್ಕಾಗಿ, ಖುಷಿಗಾಗಿ ಮಾದಕವಸ್ತು ಗಳನ್ನು ಸೇವಿಸುತ್ತಾರೆ. ಕೆಲವರು ಅದರ ದಾಸಾನುದಾಸರಾಗುತ್ತಾರೆ. ಮಾದಕವಸ್ತುಗಳ ಮನಮೋಹಕ ಮಾಯಾಜಾಲದಲ್ಲಿ ವ್ಯಾಮೋಹಕ್ಕೆ ಬಲಿಯಾಗಿ ಚಟಾದೀನ ರಾಗುವವರು. ಅವರ ಯಾರು? ಅವರ ಸಾಮಾನ್ಯ ಲಕ್ಷಣಗಳೇನು? ಅವರಲ್ಲಿ ಏನು ಕೊರತೆಯಿರುತ್ತದೆ. ಅವನ್ನು ಮೊದಲೇ ಗಮನಿಸಿ, ಎಚ್ಚರವಹಿಸಿ, ಅವರು ಚಟಕ್ಕೆ ಬೀಳದಂತೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗಳುಸಹಜವಾಗಿ ಉದ್ಭವಿಸುತ್ತವೆ.
ಚಟಕ್ಕೆ ತುತ್ತಾಗುವವರನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು. ಅಸಹಾಯಕರು ಮತ್ತು ದುಃಖಿತರು, ಮಾನಸಿಕ ಅಸ್ವಸ್ಥರು, ವ್ಯಕ್ತಿತ್ವ ದೋಷವುಳ್ಳವರು. ಜೈವಿಕ ಕಾರಣಗಳಿಂದ ಅಥವಾ ಬೆಳೆದ ವಾತಾವರಣದಲ್ಲಿನ ಕೆಟ್ಟ ಮಾದರಿ – ನ್ಯೂನತೆಗಳಿಂದ ಅಥವಾ ತಂದೆ ತಾಯಿಗಳ, ಪೋಷಕರ, ಹಿರಿಯರ ಅನಾರೋಗ್ಯಕರ ದ್ವಂದ್ವ ಧೋರಣೆಯ ಮತ್ತು ತಪ್ಪು ಪ್ರೋತ್ಸಾಹ, ಮಾರ್ಗದರ್ಶನ ಗಳಿಂದ ವ್ಯಕ್ತಿಯ ವ್ಯಕ್ತಿತ್ವ ಪರಿಪೂರ್ಣವಾಗಿ, ಆರೋಗ್ಯಕರವಾಗಿ ವಿಕಾಸ ವಾಗುವುದಿಲ್ಲ. ಅವನ ವ್ಯಕ್ತಿತ್ವ ದೋಷಪೂರ್ಣವಾಗಿ ದುರ್ಬಲವಾಗುತ್ತದೆ.
ಆತ ವಿಪರೀತ ಸ್ವಾರ್ಥಿ, ಸುಖಲೋಲನಾಗಬಹುದು. ಮೈಮನಸ್ಸುಗಳ ಕಾಮನೆಗಳನ್ನು ಹತೋಟಿಯಲ್ಲಿಡಲು ವಿಫಲನಾಗಬಹುದು. ಹಿಂದಿನ ಅನುಭವಗಳಿಂದ, ಪಡೆದ ಶಿಕ್ಷೆಗಳಿಂದ ಪಾಠ ಕಲಿಯುವುದಿಲ್ಲ. ಸಾಮಾಜಿಕ, ನೈತಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಆತ ಕಲಿಯುವುದಿಲ್ಲ. ಅವುಗಳಿಗೆ ಗೌರವವನ್ನೂ ಕೊಡು ವುದಿಲ್ಲ. ಇಂಥ ವ್ಯಕ್ತಿ ಮಾದಕವಸ್ತುವನ್ನು ಸೇವಿಸಲಾರಂಭಿಸಿದರೆ ಸೀಮೆಎಣ್ಣೆ, ಬೆಂಕಿ ಜತೆ ಸೇರಿದಂತಾಗುವುದು.
ಇಂಜೆಕ್ಷನ್ ಮೂಲಕವಾಗಲಿ, ಗುಳಿಗೆಗಳನ್ನು ನುಂಗುವುದರಿಂದಾಗಲಿ, ಪಾನೀಯಗಳ ಮೂಲಕ ಸೇವಿಸುವುದರಿಂದಾಗಲಿ ದೇಹ ಸೇರುವ ಮಾದಕವಸ್ತುಗಳು ಅಂತಿಮ ಹಂತದಲ್ಲಿ ರಕ್ತದಲ್ಲಿ ಸಂಚರಿಸಿ, ಕಾರ್ಯನಿರ್ವಹಣೆಯ ಕ್ಷೇತ್ರದ ಕೇಂದ್ರಗಳಿಗೆ ಲಗ್ಗೆ ಹಾಕುವವು. ನಿದ್ರಾಜನಕಗಳು ನಡುಮಿದುಳಿ ನಲ್ಲಿರುವ ನಿದ್ರಾಕೇಂದ್ರದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಮಿದುಳಿನ ಹೊರಾವರಣದಲ್ಲಿಯ ಜೀವಕೋಶ ಗಳನ್ನು ನಿರುತ್ಸಾಹಗೊಳಿಸುತ್ತವೆ. ಇವೆರಡರಪೂರಕ, ಪೋಷಕ, ಪರಿಪೂರಕ ಪ್ರೇರಣೆಯಿಂದ ಸೇವಿಸಿದ ವ್ಯಕ್ತಿ ನಿದ್ರಾದೇವಿಯ ಮಡಿಲಲ್ಲಿ ಮಲಗುತ್ತಾನೆ.
ನೆಮ್ಮದಿಕಾರಕಗಳು () ನರಮಂಡಲದ ಮೇಲೆ ಪ್ರಭಾವ ಬೀರುವ ನಿಶ್ಚಿತ ಕೇಂದ್ರ ನಿಖರವಾಗಿ ತಿಳಿದು ಬಂದಿಲ್ಲ. ಭ್ರಾಂತಿಜನಕವಾದ ಲೈಸರ್ಜಿಕ್ ಆಸಿಡ್ ಡೈ ಇಥೈಲ್ ಅಮೈಡ್‌ಗೆ ಅಡ್ಡಿಯನ್ನೊಡ್ಡಿ ಅಳಿಯದೇ ಉಳಿಯು ವಂತೆ ಮಾಡುವ ಮೂಲಕ ಭ್ರಮಾಲೋಕದ ಬ್ರಹ್ಮಾಂಡದಲ್ಲಿ ವಿಹರಿಸುವಂತೆ ಮಾಡು ತ್ತವೆ. ಬುದ್ಧಿಮತ್ತೆಯ ಕಾರ್ಯ ಕಲಾಪಗಳ ಕೇಂದ್ರಗಳಿಗೆ ಕೀಲಿಹಾಕಿ, ಭಾವಾವೇಶದ ಬಾನಿನಲ್ಲಿ ಗೊತ್ತುಗುರಿಯಿಲ್ಲದೇ ಗರಿಬಿಚ್ಚಿ ಹಾರಾಡುವ ವಾತಾ ವರಣ ನಿರ್ಮಿಸುವುದರಿಂದಾಗಿ ಇದಕ್ಕೆ ವೈದ್ಯಕೀಯ ನಿರ್ವಾಣ ಎನ್ನುವರು. ನಿದ್ರಾಜನಕಗಳ ಪರಿಣಾಮಗಳು ಪ್ರಭಾವಶಾಲಿ ಯಾಗುವಲ್ಲಿ ನೆಮ್ಮದಿಕಾರಕಗಳು ನೆರವಾಗುತ್ತವೆ.
ಮಂಪರಿಕಗಳು () ಬೇಸಲ್ ಗ್ಯಾಂಗ್ಲಿಯಾದಿಂದ ಹೊರಟು ಮಿದುಳಿನ ಹೊರವಲಯದತ್ತ ಹರಡುವ ನರಗಳ ಹಾದಿಯಲ್ಲಿ ಅಡ್ಡಿಯನ್ನೊಡ್ಡುವುದರಿಂದಸರ್ವೋಚ್ಚ ಕೇಂದ್ರಗಳಿಗೆ ನೋವಿನ ಅರಿವು ಆಗುವುದಿಲ್ಲ. ನೋವು ನಿವಾರಕವಾಗಿ ಕಾರ್ಯ ನಿರ್ವಹಿಸುತ್ತವೆ. ಪ್ರಶ್ನಾವಳಿಗಳ ಪ್ರವಾಹ ಬತ್ತುವಂತೆ ಮಾಡಿ, ವಿಚಾರ ವಿನಿಮಯಗಳ ಚಾಕಚಕ್ಯತೆಯ ಚಕಮಕಿಗಳಿಗೆ ತೆರೆ ಎಳೆಯುವುದರಿಂದಾಗಿ ನಿದ್ರಾದೇವಿ ಮಡಿಲಲ್ಲಿ ಖುಷಿ ನೀಡುವ ಕನಸು ಕಾಣುವಂತೆ ಮಾಡುತ್ತವೆ. ಶ್ವಾಸೋಛ್ವಾಸ ಕೇಂದ್ರ ನಿರುತ್ಸಾಹಗೊಳ್ಳುವುದು. ಪರಿಣಾಮವಾಗಿ ಉಸಿರಾಟದ ತಾಳ ತಪ್ಪುವುದು.
‘ವೇಗಲ್ ಕೇಂದ್ರ’ ಪ್ರಚೋದನೆಗೊಳಪಡುವುದರಿಂದ ಸ್ನಾಯು ನರಗಳ ಕೂಟದಲ್ಲಿ ‘ಆಸಿಟೈಲ್ ಕೋಲಿನ್’ ಬಿಡುಗಡೆಯಾಗುವುದು. ಹೃದಯ ಬಡಿತ ಕುಗ್ಗುವುದು. ಮಾರ್ಫಿನ್ ಮತ್ತು ಹೈಯೋಸಿನ್ ಒಟ್ಟಿಗೆ ತೆಗೆದುಕೊಂಡಾಗ ಅಪೂರ್ಣ ಪ್ರಜ್ಞಾಸ್ಥಿತಿಯನ್ನು ಬಳುವಳಿಯಾಗಿ ನೀಡುತ್ತವೆ. ಮಾದಕ ಪಾನೀಯಗಳು ಯಕೃತ್‌ನಲ್ಲಿ ಉತ್ಕರ್ಷಣೆಗೊಳಗಾಗಿ ಪೆರಾಲ್ಡಿಹೈಡ್ ಆಗಿ ರೂಪಾಂತರಗೊಳ್ಳುವವು. ರಕ್ತದಲ್ಲಿ ಸಂಚರಿಸಿ, ಕೇಂದ್ರ ನರಮಂಡಲದ ಜೀವಕೋಶಗಳಿಗೆ ಮುತ್ತಿಗೆಹಾಕಿ, ದೈಹಿಕ ಮಾನಸಿಕ ಚಟುವಟಿಕಾ ಕೇಂದ್ರ, ವಿಚಾರಿಸುವ ಕೇಂದ್ರ, ಮಾತನಾಡುವ ಕೇಂದ್ರ, ಉಷ್ಣ ನಿಯಂತ್ರಣ ಕೇಂದ್ರಗಳ ಮೇಲೆ ಪ್ರಭಾವ ಬೀರಿ, ಕಾರ್ಯನಿರ್ವಹಣೆಯ ನಿಯಂತ್ರಣ ತಪ್ಪಿಸುತ್ತವೆ.
ಅಯಸ್ಕಾಂತದಂಥ ಆಕರ್ಷಣೆ:ಜಗದ ಜಂಜಾಟವನ್ನು ಮರೆಸಿ, ರಂಗುರಂಗಿನ ರಮ್ಯ ರಮಣೀಯ ಲೋಕಕ್ಕೆ ಕೊಂಡೊಯ್ದು, ಊಹಾತೀತವಾದ ಚಿತ್ರ ವಿಚಿತ್ರ ಅನುಭವಗಳನ್ನಿತ್ತು, ಆನಂದಾನುಭೂತಿಯನ್ನು ನೀಡಿ, ಮನಸ್ಸನ್ನು ಆಯಸ್ಕಾಂತದಂತೆ ಆಕರ್ಷಿಸಿ, ವ್ಯಕ್ತಿಗಳ ದೌರ್ಬಲ್ಯ ದಮನ ಮಾಡುವಂತೆ ನಟಿಸಿ, ಆ ದೌರ್ಬಲ್ಯದ ಸುತ್ತ ನೂಲು ನೇಯ್ದು, ಮರಳು ಮಾಡಿ, ಹೆಡಮುರಿಗೆ ಕಟ್ಟಿ ಅತ್ತಿತ್ತ ಮಿಸುಕದಂತೆ ಮಾಡುತ್ತವೆ.
ಮದ್ಯವು ಆಲಸ್ಯ, ಆಯಾಸಗಳನ್ನು ಅಳಿಸಿ, ಹಸಿವನ್ನು ಹೆಚ್ಚಿಸಿ, ಲವಲವಿಕೆ ಲಾಸ್ಯವಾಡುವಂತೆ ಮಾಡಬಲ್ಲುದಾದರೆ, ಪೆಡಂಭೂತಗಳಂತೆ ಪೀಡಿಸುವ ನೋವನ್ನು ನಿವಾರಿಸಿ ಕಣ್ತುಂಬ ನಿದ್ರೆ ತರಬಲ್ಲವು ಬಾರ್ಬಿಚುರೇಟ್, ಮಾರ್ಫಿನ್ ಗುಂಪಿನ ಮದ್ದುಗಳು. ಮನಸ್ಸಿನ ವ್ಯಾಕುಲತೆ, ಉದ್ರೇಕ, ಉದ್ವೇಗವನ್ನು ನೆಮ್ಮದಿಕಾರಿ ಔಷಽಗಳು ಬಗ್ಗುಬಡಿದರೆ, ಗಾಂಜಾ, ಎಲ.ಎಸ್.ಡಿ.ಗಳು ಭ್ರಮೆಯ ಕಿನ್ನರ ಲೋಕವನ್ನೇ ಸೃಷ್ಟಿಸುತ್ತವೆ.
ಸೇವಿಸುವವರಿಗೆ ಮೊದಮೊದಲು ಹಿತವನ್ನು ನೀಡಿ, ಬುಟ್ಟಿಗೆ ಹಾಕಿಕೊಳ್ಳುತ್ತವೆ. ಕ್ರಮೇಣ ತಮ್ಮ ಶರಪಂಜರದಲ್ಲಿ ಬಂಽಸಿ ಅವರ ಮೇಲೆ ಸವಾರಿ ಮಾಡಿ,ಅವರನ್ನೇ ನುಂಗಿ ನೀರು ಕುಡಿಯುತ್ತವೆ. ಕಾಲಿಗೆ ಬಿದ್ದು ಕಾಲುಂಗುರ ಬಿಚ್ಚಿಕೊಳ್ಳುವ ಹಾಗೆ. ಪ್ರಾರಂಭದಲ್ಲಿ ಅಲ್ಪಸ್ವಲ್ಪ ಪ್ರಮಾಣಕ್ಕೆ ಖುಷಿ ಕೊಡುವಮಾದಕ ವಸ್ತುಗಳು ಆ ಖುಷಿಯನ್ನು ದಿನಗಳೆದಂತೆ ಕೊಡುವಲ್ಲಿ ವಿಫಲವಾಗುವವು. ಮೊದಲಿನ ಖುಷಿಯನ್ನು ಪಡೆಯುವ ಮನೋಭಾವಕ್ಕೆ ಮಣಿದು ಹೆಚ್ಚು ಹೆಚ್ಚುಪ್ರಮಾಣ ಸೇವಿಸುತ್ತ ಹೋಗುವುದು ಅನಿವಾರ್ಯವಾಗುತ್ತದೆ. ತಾಳಿಕೆ (), ಮಾನಸಿಕ ಅವಲಂಬನೆ()ಯ ನಂತರ, ವ್ಯಸನಿ ಗಳಾಗುವರು.
ಮನಸ್ಸಿದ್ದರೆ ಮಾತ್ರ ಮಾರ್ಗ:ಸ್ವಭಾವತಃ ಯಾರೂ ವ್ಯಸನಿಗಳಲ್ಲ. ಅವರು ಪರಿಸ್ಥಿತಿಯ ಕೈಗೊಂಬೆಯಾಗಿರುವುದು ಸಹಜ. ಮಾದಕವಸ್ತುಗಳು ಸೃಷ್ಟಿಸಿರುವ  ಸಮಸ್ಯೆಗಳಿಗೆ ಏಕೈಕ ಉತ್ತರ ತಡೆಗಟ್ಟುವಿಕೆ. ಜಗದ ಜಂಜಾಟದ ಬದುಕಿನಲ್ಲಿ ಜರ್ಜರಿತರಾಗಿ ಮಾದಕವಸ್ತುಗಳ ದಾಳಿಯ ಗಾಳಕ್ಕೆ ಸಿಕ್ಕಿಕೊಳ್ಳಬಾರದು. ಕೆಲಸದಲ್ಲಿನ ಬದಲಾವಣೆಯಿಂದ ಬೇಸರ ಕಳೆಯಲು ಸಾಧ್ಯ ಎಂಬ ಹಿರಿಯರ ಹೇಳಿಕೆ ನಮಗೆ ಆಸ್ತಿಯಾಗಬೇಕು. ಕ್ಷಣಿಕ ಸುಖಕ್ಕೆ ಬಾಳು ಹಾಳು ಮಾಡಿಕೊಳ್ಳ ಬಾರದು. ಮಾನವನಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಽಸಲೇಬೇಕು. ಸಾಧನೆ ಸರಳವಲ್ಲ.
ನಿಜ. ಆ ದಿಶೆಯಲ್ಲಿಯ ಪ್ರಯತ್ನದಿಂದ ಅಸಾಧ್ಯವೇನಲ್ಲ ಎಂಬುದು ಸತ್ಯ. ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಬೇಕು. ಇದರಿಂದ ಅಸ್ತಿತ್ವ ಗಟ್ಟಿಗೊಳ್ಳುವುದು. ವ್ಯಕ್ತಿತ್ವ ವಿಕಾಸಗೊಳ್ಳುವುದು. ಮೊದಲು ಮಾದಕವಸ್ತುಗಳ ಚಕ್ರವ್ಯೂಹ ಭೇದಿಸಿ ಹೊರಗೆ ಬರಲು ಮನೋನಿರ್ಧಾರ ಅತ್ಯಗತ್ಯ. ಮನಸ್ಸಿದ್ದಲ್ಲಿ ಮಾರ್ಗವಿದೆ. ಹಿಂದೆಗೆತದ ಚಿಹ್ನೆ ( )ಗಳನ್ನು ಸಂಯಮ ಹಾಗೂ ತಾಳ್ಮೆಯಿಂದ ತೆಗೆದುಕೊಳ್ಳುವ ದೃಢಸಂಕಲ್ಪ ಬೇಕು. ಚಿಕಿತ್ಸೆ ಎಷ್ಟರಮಟ್ಟಿಗೆ ಯಶಸ್ವಿಯಾಯಿತು ಅನ್ನುವುದು. ರೋಗಿ ಯಾವ ಹಂತದಲ್ಲಿ ಚಿಕಿತ್ಸೆಗೆ ಬರುತ್ತಾನೆ, ಚಟ ಬಿಡಲು ಪ್ರಾಮಾಣಿಕ ಪ್ರಯತ್ನ ಮತ್ತು ಆಸೆ ಎಷ್ಟಿದೆ, ರೋಗಿಯ ಸಂಬಂಧಿಕರು, ಮಿತ್ರರು ಎಷ್ಟು ಸಹಾಯ, ಸಹಾನುಭೂತಿ ತೋರಿ ಚಿಕಿತ್ಸೆಯಲ್ಲಿ ಭಾಗವಹಿಸಬಲ್ಲರು, ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳು, ಪರಿಸರ ಎಷ್ಟು ಅನುಕೂಲಕರ ಹಾಗೂ ಆರೋಗ್ಯಕರ ಆಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ತಡೆಗಾಗಿ ಏನು ಮಾಡಬೇಕು?:ಮೊಟ್ಟ ಮೊದಲು ಇಚ್ಛಾಶಕ್ತಿ ಬೇಕು. ಮುಂದಾಗುವ ಅನಾಹುತಗಳನ್ನು, ಅಪಾಯಗಳನ್ನು, ಗಂಡಾಂತರಗಳನ್ನು ತಡೆಗಟ್ಟ ಬೇಕಾದರೆ, ಅಗತ್ಯ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಂಡು ಅಕ್ರಮ ಜಾಲ ಭೇದಿಸುವುದು ಅನಿವಾರ್ಯವಾಗಿದೆ. ಇಡೀ ದೇಶವನ್ನು ಪಂಜಾಬ್ (ಮಾದಕ ವಸ್ತುಗಳ ರಾಜಧಾನಿ) ಮಾಡದೇ, ಆರೋಗ್ಯವಾಗಿಡಬೇಕಾದ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲಿದೆ. ದೇಶದಲ್ಲಿನ ಕಾನೂನುಗಳು ಬೆದರುಗೊಂಬೆ ಆಗದಿರಲಿ. ನಿಷ್ಪಕ್ಷವಾಗಿ, ನಿರ್ದಾಕ್ಷಿಣ್ಯವಾಗಿ ಸಮಗ್ರ ತನಿಖೆಯಾಗಿ, ಸರಿಯಾದ ನ್ಯಾಯ ಒದಗಿಸಿ ಜನರಿಗೂ ಅವುಗಳ ಮೇಲೆ ಭರವಸೆಮೂಡುವ ಹಾಗೆ ಮಾಡಿ, ಜನರು ನಿಟ್ಟುಸಿರು ಬಿಟ್ಟು, ನೆಮ್ಮದಿಯಿಂದ ಬದುಕುವ ಹಾಗೆ ಮಾಡಲಿ.
ನಿಮ್ಮ ಶತ್ರು ಮಾದಕವಸ್ತುವಿನ ರೂಪದಲ್ಲಿ ಬಂದು ನಿಮ್ಮ ಮನೆ ಬಾಗಿಲು ತಟ್ಟಿದರೆ, ಬಾಗಿಲು ತೆರೆಯದಿರಿ. ಜೋಕೆ! ತೆರೆದಿದ್ದೇ ಆದರೆ ನಿಮ್ಮ ಮನವನ್ನು, ನಿಮ್ಮ ಮನೆಯನ್ನೂ ನಾಶ ಮಾಡುವುದು ಖಂಡಿತ.