ಬುದ್ಧನಾಗದಿದ್ದರೂ ಬದ್ಧನಾಗಿರಬಲ್ಲ
ಅನಿಸಿಕೆ
ಅಮರನಾಥ ವಿ.ಬಿ
ಚಿಕ್ಕವರಿದ್ದಾಗ ನಾವು ಕಲಿಯಲಿ ಎಂದು ತಾಯಿ ಸಮಾನ ಗುರುಗಳು ಶಿಕ್ಷೆ ಕೊಟ್ಟಾದರೂ ಸರಿಯೇ ತಿದ್ದಿ ಬೆಳೆಸಿದರು. ದೊಡ್ಡವರಾದ ಮೇಲೆಯೂ ಆ ಗುರು-ಶಿಷ್ಯ ಸಂಬಂಧ ಎಲ್ಲರಿಗೂ ಸಿಗೋದಿಲ್ಲ. ಅಂತಹ ಒಂದು ಪುಣ್ಯಾತ್ಮರ ಸಮಾವೇಶ ವಿಶ್ವವಾಣಿ ವತಿಯಿಂದ ವಿಶ್ವೇಶ್ವರ ಭಟ್ ಅವರ ಮುಂದಾಳತ್ವದಲ್ಲಿ ಒಂದು ಹೊಸ ಆಲೋಚನೆಯಿಂದ ಅಂಕಣಕಾರರ ಸಮಾವೇಶವನ್ನು ಕ್ಲಬ್‌ಹೌಸ್‌ನಲ್ಲಿ ಮಾಡಿದ್ದು ನನಗಂತೂ ತುಂಬಾ ಸಂತೋಷ ತಂದಿತು.
ಜೂನ್26ನನ್ನ ಹುಟ್ಟಿದ ಹಬ್ಬ ಆಗಿದ್ದರಿಂದ ಏನಾದರೂ ಹೊಸತು ಮಾಡಬೇಕೆಂದುಕೊಂಡಿದ್ದೆ. ಆದರೆ ಕಚೇರಿಯಲ್ಲಿ ಮುಗಿಯದ ಕೆಲಸದ ಜವಾಬ್ದಾರಿ,  ವ್ಯಾಕ್ಸೀನ್ ಹಾಕಿಸಿಕೊಂಡು ಬಂದು ಸ್ವಲ್ಪ ಆರಾಮಾಗಿದ್ದು, ಪುಸ್ತಕದ ಬಗ್ಗೆ ಏನಾದರು ಮಾಡೋಣ ಅಂದುಕೊಂಡಿದ್ದನ್ನು ಬುಡಮೇಲು ಮಾಡಿತು. ಕೆಲವರ ಬದ್ಧತೆ ಬಗ್ಗೆ ಸಹೋದ್ಯೋಗಿ ಹತ್ತಿರ ಮಾತಾಡಿ ಸ್ವಲ್ಪ ಹೊತ್ತಾಗಿತ್ತಷ್ಟೆ ನೋಡೋಣ ಏನ್ ನಡಿತಾ ಇದೆ ಅಂತ ಮೊದಲ ಬಾರಿಗೆ ಕ್ಲಬ್‌ಹೌಸ್ ಒಳಹೊಕ್ಕೆ.
ಆಗತಾನೆ ಶುರುವಾಗಿದ್ದ ‘ವಿಶ್ವವಾಣಿ’ ಸಮಾವೇಶದಲ್ಲಿ ವಿಶ್ವೇಶ್ವರ ಭಟ್ ಅವರನ್ನು ನೋಡಿ ಕೌತುಕದಿಂದ ಒಳಹೊಕ್ಕೆ. ಎಷ್ಟೋ ದಿನಗಳಿಂದ ಏನೋ ಅಮೂಲ್ಯ ವಾದುದ್ದನ್ನು ಕಳೆದುಕೊಂಡವರಿಗೆ ವಾಪಾಸು ಸಿಕ್ಕರೆ ಹೇಗಾಗಬೇಡ ಖುಷಿ, ಹಾಗೆ ಅದಮ್ಯ ಸಂತೋಷ ನನ್ನಲ್ಲಿ ಆವರಿಸಿತು. ಒಂದೆಡೆ ಕಚೇರಿ ಕೆಲಸ ಹಾಗೆಯೇ ನಡಿತಾ ಇತ್ತು, ಅರ್ಧಾಂಗಿ ನನ್ನಾಕೆ ಶನಿವಾರ, ಭಾನುವಾರ ಬಂದರೂ ನಿಮ್ಮ ಕೆಲಸ ಮುಗಿಯಲ್ಲ ಅಂತ ಬೈದುಕೊಂಡು ಓಡಾಡುತ್ತಾ ಇದ್ದಳು. ಕಚೇರಿ ಒತ್ತಡ, ಅಡುಗೆ ಮನೆಯಲ್ಲಿ ಕುಕ್ಕಿಸಿ ಕೊಳ್ಳೋ ಕುಕ್ಕರು ಸಾಮಾನ್ಯ ಮನೆಯಲ್ಲಿ. ಅಂತಹುದರಲ್ಲಿ ಮೊಬೈಲ್‌ನಲ್ಲಿ ಮಾತುಗಳನ್ನು ಕೇಳಿ ಇನ್ನಾ ಕಣ್ಣು ಕೆಂಪಾಗಿತ್ತು. ಆದರೂ ಛಲದಂಕ ಮಲ್ಲನಂತೆ ಎಷ್ಟೇ ಬೈದರೂ ಪಟ್ಟು ಬಿಡದೇ ಕೇಳುತ್ತಲಿದ್ದೆ.
ಅಂಕಣಕಾರರ ಮಾತು ಕೇಳುವ ಖುಷಿ ಒಂದೆಡೆ, ಕೆಲಸದ ಒತ್ತಡ ಇನ್ನೊಂದೆಡೆ, ಹೆಂಡತಿ ರೌದ್ರತೆ ಮತ್ತೊಂದೆಡೆ. ವಾರಪೂರ್ತಿ ಹತ್ತು ಹನ್ನೆರಡು ತಾಸು ಕೆಲಸ ಮಾಡಿ, ಮಾತಿಗೂ ಸಿಗದೆ ಇರೋನು, ವಾರಾಂತ್ಯ ಸಹ ಮಾತು ಆಡದೇ, ಕೆಲಸದ ಜತೆ ಯಾವುದೋ ಕಾಡು ಹರಟೆ ಅಂತ ಮುನಿಸಿಕೊಂಡ ಹೆಂಡತಿ ಬಗ್ಗೆ ಕೋಪಕ್ಕಿಂತ ಅನುಕಂಪವೇ ಹೆಚ್ಚಾಯಿತು. ಅಷ್ಟರಲ್ಲಿ ಭಟ್ಟರು ಒಂದು ಮಾತು ಹೇಳಿದರು, ಬದ್ಧತೆ ಎಂದರೆ ಹೇಗಿರಬೇಕು ಅಂತ. ಪಕ್ಕಕ್ಕೆ ಶವವಿದ್ದರೂ ಕೆಲಸದ ಬದ್ಧತೆಯನ್ನು, ಮುಗಿಸಿ ಮುಂದುವರೆಯು ವಂತಿರಬೇಕು ಅಂತ. ಒಂದು ಕ್ಷಣ ಅವಾಕ್ಕಾದೆ ಕೆಲವೇ ನಿಮಿಷಗಳ ಹಿಂದೆ ಬದ್ಧತೆ ಬಗ್ಗೆ ನಾನು ಸಹೋದ್ಯೋಗಿಯ ಹತ್ತಿರ ಮಾತಾಡಿದ್ದಕ್ಕೂ ಇಲ್ಲಿ ಕೇಳುತ್ತಾ ಇರೋದಕ್ಕೂ ಎಷ್ಟೊಂದು ತಾಳೆ ಆಗುತ್ತಿದೆಯೆ ಅನ್ನಿಸ್ತು.
   ಅಂದರೆ ಇದೆನಾ?!! ಬರೆಯಿರಿ ನಿಮಗೆ ಆಗುತ್ತೆ ಅಂತ ಎಷ್ಟೊಂದು ಮಾತುಗಾರರಿಗೆ ಬಾಯಿಗೆ ಬೀಗ ಹಾಕಿದ್ದರೋ ಇಲ್ಲವೋ ಗೊತ್ತಿಲ್ಲ ಆದರೆ ಕೈ ಬೆರಳುಗಳಿಗೆ ಅವರೇ ಹಾಕಿಕೊಂಡಿದ್ದ ಬೇಡಿಯನ್ನು ಬಿಡಿಸಿzರೆ ಭಟ್ಟರು ಅಂದರೆ ಅತಿಶಯೋಕ್ತಿಯಲ್ಲ. ಪ್ರಾಣೇಶ್ ಅವರು ಲೇಖನ ಕಳುಹಿಸಲು ಪಟ್ಟ ಕಷ್ಟ ಜತೆಗೆ ಇತರರು ಪಟ್ಟಪಾಡುಗಳನ್ನು ಕೇಳುತ್ತಿದ್ದರೆ. ಒಬ್ಬರಿಂದ ಒಂದು ಅಮೂಲ್ಯವಾದ ಕೆಲಸ ಆಗಬೇಕೆಂದರೆ ಹಿಂದುಗಡೆ ನಿಂತು ಪ್ರೋತ್ಸಾಹ ನೀಡೋ ಕೈಗಳ ಅಗತ್ಯದ ಪ್ರಾಮುಖ್ಯತೆ ಎಂತಹುದು ಅಂತ ಗೊತ್ತಾಗುತ್ತೆ.
ರೂಪಾ ಗುರುರಾಜ್ ಮಾತಾಡಿ, ಇನ್ನು ಕೇವಲ ಆರು ತಿಂಗಳ ಹಸುಗೂಸು ಬರವಣಿಗೆಯಲ್ಲಿ, ಆದರೂ ತಮ್ಮನ್ನ ವೇದಿಕೆಗೆ ಕರೆದು ಮಾತಾನಾಡಿಸುತ್ತಾ ಇರೋದು, ಎಂತಹ ಪ್ರೋತ್ಸಾಹಿಸುವ ಗುಣ ಭಟ್ಟರದು ಅನ್ನಿಸಿತ್ತು. ಆಗಿನ ಕಾಲದಲ್ಲಿ ಅರಸರಿಗೆ ಖುಷಿಗೊಳಿಸಲು ಹೊಗಳೋ ಭಟ್ಟರು ಇರುತ್ತಿದ್ದರು, ಆದರೆ ಇಲ್ಲಿ ಭಟ್ಟರಿಗೆ ಹೊಗಳೋರು ಇದ್ದರು. ಕಾರಣ ಅವರ ಜೀವನದಲ್ಲಿ ಭಟ್ಟರು ತಂದ ಬದಲಾವಣೆ, ಹಾಗೆ ಮಾತನಾಡಿಸಿತ್ತು. ಯಾರೋ ಪುಣ್ಯಾತ್ಮ ಹೇಳಿದ್ದಾರೆ ನಿನ್ನ ಐದು ಜನ ಸ್ನೇಹಿತರ ಹೆಸರು ಹೇಳು ನೀನು ಎಂಥವನು ಅಂತ ಹೇಳುತ್ತೀನಿ ಅಂತ. ಇದು ಅಕ್ಷರಕ್ಷ ಸತ್ಯ. ನಿಲ್ಲದ ಕೆಲಸದ ಒತ್ತಡದಿಂದ ಒಂದು ಪುಟದಷ್ಟು ಲೇಖನ ಬರೆದು ಎರಡು ವರುಷಗಳೇ ಆಗಿದ್ದವು.
ಮಗಳಿಗೆ ಲೇಖನ ಅಂತ ಹೆಸರಿಟ್ಟದ್ದು ಬಿಟ್ಟರೆ, ನನ್ನ ಬರವಣಿಗೆಯ ಲೇಖನ ಒಂದೂ ಮೂಡಿ ಬಂದಿರಲಿಲ್ಲ. ಆದರೆ ಒಂದೇ ಒಂದು ಸಮಾವೇಶದ ಕೇಳುಗನಾಗಿಪ್ರಭಾವಿತನಾಗಿ ನನಗೆ ಗೊತ್ತಿಲ್ಲದೆ ಇದು ಹಾಗೆಯೆ ಸುಮ್ಮನೆ ಬರೆಯಿಸಿಕೊಂಡಿದೆ. ಗೆಳೆಯ ಭರತ ದಿನಕ್ಕೊಂದು ಚುಟುಕ ಬರೆಯಿರಿ ಅಂದಿದ್ದಕ್ಕೆ ಮಾನಸ ಗುರುಗಳಾದ ಡುಂಡಿರಾಜ್ ಮತ್ತು ವಿಶ್ವೇಶ್ವರ ಭಟ್ಟರ ಹನಿಗವನ ಮತ್ತು ವಕ್ರತುಂಡೋಕ್ತಿಗಳ ಪ್ರಭಾವದಿಂದ ಹೊರ ಬರುತ್ತಿರುವ ಹಾಗೆ ಸುಮ್ಮನೆ ಫೇಸ್‌ಬುಕ್ ಸರಣಿ ಸತತ418ದಿನ ಮುಗಿಸಿದೆ ಇವತ್ತಿಗೆ. ಒಂದು ದಿನಾನೂ ತಪ್ಪಿಸದಂತೆ ಬರೆಯಲು ನಾನೂ ಸಾಕಷ್ಟು ಪರದಾಡಿರುವೆ.
ಲೇಖನ ಒಂದು ವರುಷದವಳಿದ್ದಾಗ, ಮೂರು ದಿನ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ, ಕಚೇರಿ ಕೆಲಸ ರಾತ್ರಿ ಒಂದೆರಡು ಘಂಟೆವರೆಗೂ ಹೋದಾಗ, ಸುಸ್ತಾಗಿ ಹಾಗೆಯೆ ಮಲಗಿದಾಗ, ರಾತ್ರಿ ಎರಡು-ಮೂರು ಘಂಟೆಗೆ ಎದ್ದು ಬರೆದು ಫೋನ್‌ ಮಾಡಿದ್ದೆ ಫೇಸ್‌ಬುಕ್‌ನಲ್ಲಿ. ಈ ಒಂದು ಪ್ರಯತ್ನ ನನ್ನಲ್ಲಿರುವ ಬರಹಗಾರನನ್ನು ಸಾಯದಂತೆ ಬದುಕಿಸಿದೆ ಅಂದರೆ ತಪ್ಪಲ್ಲ. ಬದ್ಧತೆ ಹುಟ್ಟುಗುಣವಲ್ಲ ದಿದ್ದರೂ ಒಳ್ಳೆಯ ಗುರು ಹಿಂದೆ ಇದ್ದಾಗ ಮೈಗೂಡಿಸಿಕೊಳ್ಳಲು ಸಾಧ್ಯ.