ಸುರಕ್ಷತೆಗೆ ಆದ್ಯತೆ ವೈದ್ಯರ ದಿನಕ್ಕೆ ನೀಡುವ ಉಡುಗೊರೆ
ಸಲಹೆ
ಡಾ.ಮೋಹನ್‌ ಕೇಶವಮೂರ್ತಿ
ಇಂದು ವಿಶ್ವ ವೈದ್ಯರ ದಿನಾಚರಣೆ. ಕಳೆದೆರಡು ವರ್ಷಗಳಿಂದ ವೈದ್ಯರಾದ ನಾವುಗಳು ಜನರ ಜೀವ ಉಳಿಸಲು ಅವಿರತ ಶ್ರಮಿಸುತ್ತಿದ್ದೇವೆ. ವೈದ್ಯ ವೃತ್ತಿ ಆಯ್ಕೆ ಮಾಡಿಕೊಳ್ಳುವುದೇ ಸವಾಲಿನ ಕೆಲಸ. ಒಮ್ಮೆ ಆಯ್ಕೆ ಮಾಡಿಕೊಂಡರೆ, ಇಡೀ ಜೀವನ ಜನರಿಗೋಸ್ಕರ ಮುಡುಪಾಗಿಟ್ಟು ಬಿಡಬೇಕು.
ಜನರ ಆರೋಗ್ಯವೇ ಮೊದಲ ಆದ್ಯತೆ ಆಗಬೇಕು. ಇಂದು ಎ ವೈದ್ಯರು ಅದನ್ನು ಸಾಬೀತು ಮಾಡುತ್ತಿದ್ದಾರೆ. ಕೋವಿಡ್ ಇಡೀ ವಿಶ್ವದ ಜನರನ್ನೇ ಮನೆಯಲ್ಲಿ ಇರುವಂತೆ ಮಾಡಿದ್ದರೆ, ವೈದ್ಯರನ್ನು ಮಾತ್ರ ಮನೆಗೆ ಹೋಗದಂತೆ ಮಾಡಿದೆ. ಇಡೀ ವೈದ್ಯಕುಲವೇ, ತಮ್ಮ ಜೀವನದ ಹಂಗು ತೊರೆದು ರಾತ್ರಿ ಹಗಲೆನ್ನದೇ ದುಡಿಯುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಕೂಡ. ಅಷ್ಟೇ ನೋವಿನ ಸಂಗತಿ ಎಂದರೆ, ಕೆಲವೇ ಮಂದಿ ವೈದ್ಯರ ಮೇಲೂ ಹಲ್ಲೆ ನಡೆಸುತ್ತಿರುವುದು.ತಮ್ಮ ಕುಟುಂಬವನ್ನೂ ತೊರೆದು ಕೆಲಸ ಮಾಡುವ ವೈದ್ಯರ ಮೇಲೆ ಹಲ್ಲೆ ನಡೆದರೆ, ಯಾವ ಧೈರ್ಯದ ಮೇಲೆ ಕೆಲಸ ಮಾಡಲು ಸಾಧ್ಯ? ವೈದ್ಯರಾದ ನಾವುಗಳು ನಮ್ಮ ವೃತ್ತಿ ಧರ್ಮವನ್ನು ಎಂದೂ ಮರೆಯುವುದಿಲ್ಲ.
ಪ್ರತಿಯೊಬ್ಬರನ್ನೂ ಬದುಕಿಸುವ ಪ್ರಯತ್ನ ನಮ್ಮದಾಗಿರುತ್ತದೆ. ಒಮ್ಮೊಮ್ಮೆ ನಮ್ಮ ಕೈ ಮೀರಿ ನಡೆಯುವ ಸಾವಿಗೆ ನಾವು ಕಾರಣಕರ್ತರಲ್ಲ. ಒಬ್ಬರನ್ನು ಉಳಿಸ ಲಾಗಿಲ್ಲವಲ್ಲ ಎಂಬ ನೋವು ಸಹ ನಮ್ಮಲ್ಲಿ ಇರುತ್ತದೆ. ಆದರೆ, ಅದೇ ಕಾರಣಕ್ಕೆ ವೈದ್ಯರನ್ನು ಥಳಿಸಿದರೆ ಅದು ನ್ಯಾಯವೇ? ನನ್ನ ವೃತ್ತಿ ಬದುಕಿನಲ್ಲಿ ಸಾಕಷ್ಟು ಜನರಿಗೆ ಚಿಕಿತ್ಸೆ ನೀಡಿದ್ದೇನೆ. ವಿಭಿನ್ನ ರೀತಿಯ ಕೇಸ್‌ಗಳನ್ನು ನಿರ್ವಹಿಸಿದ್ದೇನೆ. ಆದರೆ, ಈ ಕೋವಿಡ್ ಅತ್ಯಂತ ಭಯಾನಕ ಸನ್ನಿವೇಶಗಳನ್ನ ನೋಡುವಂತೆ ಮಾಡಿತು. ಸಾಕಷ್ಟು ಕೋವಿಡ್ ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೇ ಜೀವ ಬಿಡುತ್ತಿದ್ದರೆ ವೈದ್ಯರಾದ ನಮ್ಮ ಜೀವವೂ ನಡುಗಿ ಹೋಗುತ್ತದೆ. ಮೊದಲೂ ಸಹ ಸಾವನ್ನು ನೋಡಿದ್ದೇವೆ. ಆದರೆ, ಕರೋನಾ ಆರೋಗ್ಯವಂತರನ್ನೂ ಸಾವಿನ ಮನೆಗೆ ದೂಡುವುದನ್ನು ನೋಡುತ್ತಿದ್ದರೆ ಮೈ ನಡುಕವೆಬ್ಬಿಸುತ್ತದೆ. ನನಗೂ ಕೋವಿಡ್ ಬಂದಿತ್ತು: ಎಷ್ಟೇ ಮುನ್ನೆಚ್ಚರಿಕೆ ವಹಿಸಿದ್ದರೂ ಕರೋನಾ ರೋಗಿಯನ್ನು ಚಿಕಿತ್ಸೆ ಮಾಡುವ ನಮಗೆ ಬಾರದೇ ಇರದು. ನನಗೂ ಎರಡು ಬಾರಿ ಕೋವಿಡ್ ಬಂದು ಹೋಗಿದೆ. ಮನೆಯವರು ಹೆಚ್ಚು ಭಯಭೀತರಾಗಿದ್ದರು.
ಅವರ ಸಹಕಾರ ಇಲ್ಲದಿದ್ದರೆ ಖಂಡಿತ ವೈದ್ಯರಾಗಿ ಕೆಲಸ ಮಾಡಲು ಅಸಾಧ್ಯ. ನನ್ನ ಕುಟುಂಬ ಸಹ ಭಯಭೀತರಾದರೂ ಮತ್ತೊಬ್ಬರ ಜೀವ ಉಳಿಸುವ ಮಹತ್ ಕಾರ್ಯದಲ್ಲಿ ನನ್ನ ಮಗ ತೊಡಗಿದ್ದೇನೆ ಎಂಬ ಹೆಮ್ಮೆ ಅವರಿಗಿದೆ. ತಾಯಿಯನ್ನು ಕಳೆದುಕೊಂಡೆ: ಸ್ವತಃ ವೈದ್ಯರಾದರೂ ನನ್ನ ತಾಯಿಯನ್ನು ಕರೋನಾ ಕಿತ್ತು ಕೊಂಡಿತು.೯೧ವರ್ಷದ ಅವರನ್ನು ಬದುಕಿಸಿಕೊಳ್ಳುವ ಎಷ್ಟೋ ಪ್ರಯತ್ನ ಮಾಡಿದೆ. ಆದರೆ ಅಸಾಧ್ಯವಾಯಿತು. ತಂದೆಗೆ ಕರೋನಾ ಬಂದರೂ ಅವರು ಗುಣಮುಖರಾದರು. ಆದರೂ ನಾನು ಧೃತಿಗೆಡದೆ ನನ್ನ ಕರ್ತವ್ಯಕ್ಕೆ ಮರಳಿದೆ.
ನನ್ನಿಂದ ಬೇರೊಬ್ಬರ ತಂದೆ – ತಾಯಿಯನ್ನು ಉಳಿಸುವ ಜವಾಬ್ದಾರಿ ಇದೆ. ಅದನ್ನು ನಾನು ಎಂದಿಗೂ ಮರೆಯಕೂಡದು. ಜನರ ಧನ್ಯವಾದದ ಮುಂದೆ ಎಲ್ಲವೂ ಗೌಣ: ಕೋವಿಡ್ ರೋಗಿಗಳನ್ನು ಹತ್ತಿರದಿಂದ ನೋಡುವ ವೈದ್ಯರ ಮನಸ್ಸು ಸಹ ವಿಚಲಿತಗೊಂಡು ದುರ್ಬಲವಾಗುವ ಸಾಧ್ಯತೆ ಇದೆ. ಕೆಲಸಕ್ಕಿಂತ ಜೀವಮುಖ್ಯ ಎಂಬ ಭಾವನೆಯೂ ಆಗಾಗ್ಗೆ ಮೂಡುತ್ತದೆ. ಆದರೆ, ನಾವು ಚಿಕಿತ್ಸೆ ನೀಡಿದ ನಂತರ ಗುಣಮುಖನಾದ ವ್ಯಕ್ತಿ ಹಾಗೂ ಅವರ ಕುಟುಂಬದವರು ನಮಗೆ ತುಂಬು ಹೃದಯದ ಧನ್ಯವಾದ ಹೇಳುವಾಗ ಎಂಥ ಭಯವಾದರೂ ಮಾಯವಾಗಿ ಬಿಡುತ್ತದೆ. ಇನ್ನಷ್ಟು ಸೇವೆ ಮಾಡಬೇಕು ಎನ್ನುವ ಹೊಸ ಚೈತನ್ಯ, ಹುಮ್ಮಸ್ಸು ಹುಟ್ಟುತ್ತದೆ. ಪ್ರತಿಯೊಬ್ಬ ವೈದ್ಯನು ತನ್ನ ಸೇವೆಯನ್ನು ಈಗಲೂ ಪ್ರೀತಿಯಿಂದ ಮುಂದುವರಿಸಲು ಇದೇ ಪ್ರಮುಖ ಕಾರಣ.
ಮನೆಯ ಇರಿ ಅದು ನಮಗೆ ನೀವು ನೀಡುವ ಬಹುಮಾನ:ಇಂದು ವೈದ್ಯ ದಿನ, ನಮ್ಮನ್ನು ಫ್ರಂಟ್‌ಲೈನ್ ವಾರಿಯರ್ಸ್‌ಗಳೆಂದು ಇಡೀ ವಿಶ್ವವೇ ಗೌರವ ಸಲ್ಲಿಸು ತ್ತಿದೆ. ಇಡೀ ವಿಶ್ವ ನಮಗೆ ಗೌರವ ಸಲ್ಲಿಸುವ ಮತ್ತೊಂದು ವಿಧಾನವೆಂದರೆ ನೀವು ಆರೋಗ್ಯವಾಗಿರುವುದು. ಕೋವಿಡ್ ಮಾರ್ಗಸೂಚಿಗಳಾದ ಮಾಸ್ಕ್ ಧರಿಸು ವುದು, ಅಂತರ ಕಾಯ್ದುಕೊಳ್ಳುವುದು, ಕೈಯನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದು, ಅನಗತ್ಯ ಓಡಾಟವನ್ನು ತಪ್ಪಿಸುವುದು. ಈ ನಿಯಮಗಳನ್ನು ನೀವು ಪಾಲಿಸು ತ್ತಿದ್ದರೆ ಇದೇ ಎಲ್ಲಾ ವೈದ್ಯರಿಗೆ ಈ ವೈದ್ಯರ ದಿನಾಚರಣೆಯಂದು ನೀವು ನೀಡುವಬಹುದೊಡ್ಡ ಉಡುಗೊರೆ. ಹೀಗಾಗಿ ಎಲ್ಲರೂ ಕ್ಷೇಮವಾಗಿರಿ.