ಮಾದೇಗೌಡ ಛಲಬಿಡದ ಸಮಾಜಮುಖಿ ಚಿಂತಕ
ತನ್ನಿಮಿತ್ತ
ಎಸ್.ಎಂ.ಕೃಷ್ಣ
ವಿದೇಶಾಂಗ ಮಾಜಿ ಸಚಿವರು, ಮಾಜಿ ಮುಖ್ಯಮಂತ್ರಿ
ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಚಾಪು ಮೂಡಿಸಿ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ಕಳೆದ6ದಶಕಗಳಿಂದ ಸಾರ್ವಜನಿಕ ಬದುಕು ಸವೆಸಿದ ನನ್ನ ಸನ್ಮಿತ್ರ ಹಾಗೂ ಹಿರಿಯ ಸೋದರ ಸಮಾನರಾದ ಜಿ.ಮಾದೇಗೌಡ ಅವರಿಗೆ95ನೇ ಹುಟ್ಟುಹಬ್ಬದ ಶುಭ ಕಾಮನೆಗಳು. ತೀವ್ರ ಅನಾರೋಗ್ಯ ಸಮಸ್ಯೆಯಿಂದ ಕಳೆದ ಕೆಲವು ಸಮಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೌಡರ ಆರೋಗ್ಯ ಬೇಗ ಸುಧಾರಿಸಿ ಮತ್ತೆ ನಮ್ಮೊಂದಿಗೆ ಬೆರೆತು ನಾಡಿನ ಒಳಿತಿಗಾಗಿ ಮತ್ತಷ್ಟು ಮಾರ್ಗದರ್ಶನ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
1962ರಲ್ಲಿ ನಾನು ಮತ್ತು ಗೌಡರು ಒಟ್ಟಿಗೆ ಶಾಸನ ಸಭೆ ಪ್ರವೇಶಿಸಿ ಅಲ್ಲಿಂದ ಇಲ್ಲಿಯವರೆಗೆ ಹಲವು ಏಳು ಬೀಳುಗಳ ನಡುವೆ ನಾಡಿನ ಒಳಿತಿಗೆ ಶ್ರಮಿಸಿದ್ದೇವೆ. ತಮ್ಮ ಛಲಬಿಡದ ಹೋರಾಟಗಳಿಂದ ಸದಾ ಸಮಾಜ ಮುಖಿಯಾಗಿ ಚಿಂತಿಸುವ ಗೌಡರ ಜೀವನ ಆದರ್ಶನೀಯ. ಮಳವಳ್ಳಿ ಮತ್ತು ಕಿರುಗಾವಲು ಕ್ಷೇತ್ರವನ್ನು ಸತತ7ಬಾರಿ ಪ್ರತಿನಿಧಿಸಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು2ಬಾರಿ ಪ್ರತಿನಿಧಿಸಿದ್ದ ಶ್ರೀಯುತರಿಗೆ ರಾಜಕೀಯ ಜೀವನದಲ್ಲಿ ಮತ್ತಷ್ಟು ಅವಕಾಶಗಳು ಲಭಿಸಬೇಕಾಗಿತ್ತು ಎಂಬುದು ನನ್ನ ಭಾವನೆ.ತಾವು ಗುರಿಯಿಟ್ಟ ಕಾರ್ಯಕ್ಕೆ ಯಶಸ್ಸು ಲಭಿಸಲು ಹಠವಾದಿಯಂತೆ ಹೋರಾಟ ನಡೆಸುತ್ತಿದ್ದ ಗೌಡರ ಶ್ರಮಕ್ಕೆ ಕೆ.ಎಂ.ದೊಡ್ಡಿಯಂಥ ಗ್ರಾಮೀಣ ಪ್ರದೇಶದಲ್ಲಿ ಭಾರತೀ ವಿದ್ಯಾಸಂಸ್ಥೆ ಸ್ಥಾಪಿಸಿ, ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾದದ್ದು ಜೀವಂತಸಾಕ್ಷಿಯಾಗಿದೆ. ಕೆ.ಎಂ. ದೊಡ್ಡಿಯಲ್ಲೇ ರೈತರ ಒಳಿತಿಗಾಗಿ ಚಾಮ್ ಷುಗರ್ ಕಾರ್ಖಾನೆ ಸ್ಥಾಪಿಸಲು ಅವರು ಪಟ್ಟ ಶ್ರಮ ಅನನ್ಯವಾದುದು.
ನಾನು ಮತ್ತು ಅವರು ಒಂದೇ ತಾಲೂಕಿನವರಾಗಿದ್ದು ಹಲವು ಬಾರಿ ಒಟ್ಟಿಗೆ ಶಾಸನ ಸಭೆಯಲ್ಲಿ ಕಾರ್ಯನಿರ್ವಹಿಸಿದ್ದು, ತಮ್ಮ ಗ್ರಾಮೀಣ ಶೈಲಿಯ ನಡವಳಿಕೆ ಯಿಂದ ಆಳುವ ವರ್ಗದ ಗಮನ ಸೆಳೆದು ತನ್ನ ಕ್ಷೇತ್ರಕ್ಕೆ ಸಲ್ಲಬೇಕಾದ ಕಾರ್ಯಗಳನ್ನು ಕಾರ್ಯಗತಗೊಳಿಸುತ್ತಿದ್ದರು. ಎಂದಿಗೂ ಯಾರ ಮುಂದೆ ತಲೆತಗ್ಗಿಸದೆ ಆಳುವ ವರ್ಗದೊಂದಿಗೆ ಸದಾ ಸಂಘರ್ಷಮಯ ರಾಜಕಾರಣ ನಡೆಸಿದ್ದ ಗೌಡರು ನೋಡಲು ಒರಟರಂತೆ ಕಂಡರೂ ಸ್ನೇಹಜೀವಿಯಾಗಿದ್ದರು. ಆದರೆ ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಯಾವುದೋ ವಿಷಗಳಿಗೆಯಿಂದ ನಮ್ಮಿಬ್ಬರ ಮಧ್ಯೆ ಕಂದಕ ಉಂಟಾಗಿದ್ದು ವಿಪರ್ಯಾಸ.
1991ರಲ್ಲಿ ಕಾವೇರಿಯ ಮಧ್ಯಂತರ ತೀರ್ಪು ಬಂದಾಗ ಮಂಡ್ಯ ಜಿಲ್ಲೆ ಅಕ್ಷರಶಃ ರಣಾಂಗಣವಾಗಿತ್ತು. ಅಂದು ಸಂಸತ್ ಸದಸ್ಯರಾಗಿದ್ದ ಗೌಡರು ಜನರಆಕ್ರೋಶವನ್ನು ಅರಿತು ಶಾಸನ ಸಭೆ ಅಧ್ಯಕ್ಷನಾಗಿದ್ದ ನನ್ನೊಂದಿಗೆ ಅಂದಿನ ಮುಖ್ಯಮಂತ್ರಿ ಬಂಗಾರಪ್ಪನವರ ಮೇಲೆ ಒತ್ತಡ ತಂದು ಯಾವುದೇ ಕಾರಣಕ್ಕೂ ಕಾವೇರಿ ಮಧ್ಯಂತರ ತೀರ್ಪನ್ನು ಪಾಲಿಸಲು ಸಾಧ್ಯವಿಲ್ಲವೆಂದು ಶಾಸನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲು ಮಾದೇಗೌಡರು ಕಾರಣೀಭೂತರಾದರು.
ಅಂದೇ ಕಾವೇರಿ ಚಳುವಳಿಯ ಮುಂದಾಳತ್ವ ವಹಿಸಿಕೊಂಡು ಮಂಡ್ಯ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿಯನ್ನು ಸ್ಥಾಪಿಸಿ ಹೋರಾಟಕ್ಕಿಳಿದರು.1994-95ರಲ್ಲಿ ತಾವು ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯರಾಗಿದ್ದು ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್‌ರವರು ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ ನೀಡಿದಾಗ ಅದನ್ನು ಧಿಕ್ಕರಿಸಿ ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಜನರೊಂದಿಗೆ ಅಹೋರಾತ್ರಿ ಹೋರಾಟಕ್ಕಿಳಿದರು. ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೆಗೌಡರು ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಪ್ರತಿಭಟಿಸಿ ಇಡೀ ವಿರೋಧ ಪಕ್ಷವನ್ನು ಮಂಡ್ಯದಲ್ಲಿ ಜಮಾವಣೆಗೊಳಿಸಿ ಚಳವಳಿಯನ್ನು ಉಗ್ರ ರೂಪಗೊಳಿಸಿದರು. ಆ ಚಳವಳಿಯಲ್ಲಿ ನಾನೂ ಸೇರಿದಂತೆ ಹಾಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರೈತಸಂಘದ ಪ್ರೊ.ನಂಜುಂಡಸ್ವಾಮಿ ಸೇರಿದಂತೆ ಹಲವು ಘಟಾನುಘಟಿಗಳು ಮಂಡ್ಯದ ಸಿಲ್ವರ್ ಜ್ಯುಬ್ಲಿ ಪಾರ್ಕ್ ಹಾಗೂ ರೈತ ಸಭಾಂಗಣದಲ್ಲಿ ಸರಣಿ ಪ್ರತಿಭಟನಾ ಸಭೆಗಳನ್ನು ಗೌಡರ ನೇತೃತ್ವದಲ್ಲಿ ನಡೆಸಿದ್ದು ಅಚ್ಚಹಸಿರಾಗಿದೆ.
ಇಷ್ಟೆಲ್ಲಾ ಜನಪರ ಬದ್ಧತೆಯನ್ನು ಹೊಂದಿರುವ ಮಾದೇಗೌಡರ ಸೇವೆ ಮತಷ್ಟು ಅಗತ್ಯವಿದೆ. ಭಗವಂತನ ದಯೆಯಿಂದ95ವಸಂತಗಳನ್ನು ಪೂರೈಸಿರುವ ಗೌಡರು ಶೀಘ್ರಗುಣಮುಖರಾಗಿ ಮತ್ತೆ ನಮ್ಮೊಂದಿಗೆ ಬೆರೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ.