ಜನಪರ ತುಡಿತದ ಸಾಧಕ ವಿಠಲ ಭಂಡಾರಿ
ಸ್ಮರಣೆ
ನಾರಾಯಣ ಯಾಜಿ
@..
ನಮ್ಮೆದುರು ಓಡಾಡುತ್ತಾ ಬೆಳೆದ ಕುಡಿ ನಾಲ್ಕು ಜನರಿಗೆ ಸಹಾಯ ಮಾಡುತ್ತಾ ಬೆಳೆದಾಗ ನೋಡಿ ಸಂತಸ ಮತ್ತು ಹೆಮ್ಮೆ ಪಡುತ್ತೇವೆ. ಅದರಲ್ಲೂ ಡಾ.ಆರ್.ವಿ. ಭಂಡಾರಿಯವರು ಎಂದರೆ ನಮಗೆಲ್ಲ ಬೆಳಕಿಂಡಿ. ಅವರ ಸಾಹಿತ್ಯ ಮತ್ತು ಶಿಕ್ಷಣತಜ್ಞತೆಯನ್ನು ನೋಡುತ್ತಾ ಕಲಿತವರು ನಾವು.
ಅವರ ಮಗ ವಿಠಲ ತನ್ನದೇ ತುಂಟಾಟ, ಸ್ವಲ್ಪ ಹುಂಬತನ, ಅನ್ಯಾಯದ ವಿರುದ್ಧ ಸೆಟೆದುನಿಲ್ಲುವ ಛಲಗಾರನಾಗಿ ಆಮೇಲೆ ಇವೆಲ್ಲವನ್ನೂ ಮೀರಿದ ದೃಢ ಮನಸ್ಕನಾಗಿ ಸದಾ ಮಾನವೀಯತೆಯೆಡೆಗಾಗಿ ಧಾವಿಸುವ ವ್ಯಕ್ತಿ. ಬದುಕಿ ಇನ್ನೊಬ್ಬರ ಬದುಕಿಗೆ ನೆರವಾಗುವ ಮತ್ತು ಈ ಕಾರ್ಯದಲ್ಲಿ ಅನೇಕರನ್ನು ತನ್ನ ಈ ಯಾತ್ರೆಗೆ ಸಹಪಥಿಕರನ್ನಾಗಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸುವ ಸಹಾಯಾನದ ನಮ್ಮ ಈ ಹುಡುಗನ ಮೇಲೆ ಅದೇಕೆ ವಿಧಿ ತನ್ನ ಕ್ರೂರದೃಷ್ಟಿ ಬೀರಿತೋ ಎನ್ನುವುದು ತಿಳಿಯದೇ ಅನೇಕ ದಿನಗಳ ಕಾಲ ಈತನ ಕುರಿತು ಬರೆಯಲು ಸಾಧ್ಯವಾಗದೇ ಒದ್ದಾಡಿದ್ದೆ.
ನಾನು ಕಾಲೇಜಿನಲ್ಲಿ ಕಲಿತು ಬೇಗ ಉದ್ಯೋಗದಲ್ಲಿ ಸೇರಿಕೊಂಡು ಊರಿನಿಂದ ದೂರವಿದ್ದೆ.. ಆದರೆ ಹೊನ್ನಾವರದಲ್ಲಿ ನಡೆಯುವ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಪ್ರೇಕ್ಷಕನಾಗಿಯಾದರೂ ಸೇರಿಕೊಳ್ಳುತ್ತಿದ್ದೆ… ಹೊತ್ತಿನಲ್ಲಿ ಒಮ್ಮೆ ಸ್ವಲ್ಪ ಸಣಕಲಿರುವ ಆದರೆ ತುಂಬಾ ಚಟುವಟಿಕೆಯಿಂದಿರುವ ಹುಡುಗನ ಪರಿಚಯವಾಯಿತು. ಆತ ಡಾ.ಆರ್.ವಿ. ಭಂಡಾರಿಯವರ ಮಗ ಎಂದು ತಿಳಿದ ಮೇಲೆ ಕುತೂಹಲ ಹುಟ್ಟಿತು. ಮುಖದಲ್ಲಿ ಒಂದು ರೀತಿಯ ಕೆಚ್ಚು ಇದ್ದರೂ ಲಕ್ಷಣವಾಗಿದ್ದ. ತೀಕ್ಷ್ಣವಾಗಿದ್ದ ಕಣ್ಣುಗಳು ಎದೆಯಾಳಕ್ಕೆ ಇಳಿಯುತ್ತಿತ್ತು. ಯೌವನದ ಉತ್ಸಾಹ ಮತ್ತು ಸಮಾಜವನ್ನು ಸರಿಪಡಿಸಲೇ ಬೇಕೆನ್ನುವ ಆತನ ನಡೆ ಇಷ್ಟವಾಯಿತು. ಆದರೆ ಆತ ತನ್ನ ತಂದೆಯವರ ಎದುರು ಬರುತ್ತಲೇ ಇರಲಿಲ್ಲ.
ಆರ್.ವಿ. ಯವರು ಇರುವಾಗ ಮಾತನಾಡದೇ ಸುಮ್ಮನೇ ಇರುತ್ತಿದ್ದ. ಅವರ ಕುರಿತು ಅಪಾರವಾದ ಮೆಚ್ಚುಗೆ ಮೌನವಾಗಿರುವ ಈತನ ಮುಖದಲ್ಲಿ ವ್ಯಕ್ತವಾಗು ತ್ತಿತ್ತು. ಅಲ್ಲಿಯೇ ಗೆಳೆಯ ಕಿರಣ ಭಟ್ಟ, ರಾಜು ಹೆಗಡೆ ಇವರೆ ಸೇರಿ ಹರಟೆ ಹೊಡೆಯುವಾಗಲೂ ಈತ ಮೌನದಿಂದ ಇರುತ್ತಿದ್ದ. ಅದೇ ಹೊತ್ತಿಗೆ ವಿಡಂಬಾರಿಯವರು ಅಲ್ಲಿಗೆ ಬಂದಿದ್ದರು. ಅವರನ್ನು ನೋಡಿದವನೇ ಅವರ ಸಮೀಪ ಹೋಗಿ ಅವರೊಡನೆ ಆತ್ಮೀಯವಾಗಿ ಮಾತನ್ನಾಡುತ್ತಾ ಅವರ ಆರೋಗ್ಯದ ಕುರಿತು ಕಾಳಜಿ ಯನ್ನು ವಹಿಸುತ್ತಿರುವ ಈತ ನನಗೆ ಮತ್ತೂ ಇಷ್ಟವಾದ. ಆ ದಿವಸ ನಾನೇ ಮೇಲೆ ಬಿದ್ದು ಒಂದೋ ಎರಡೋ ಮಾತುಗಳನ್ನು ಆತನೊಡನೆ ಆಡಿರಬೇಕು. ಆತ ಸಂಕೋಚದಿಂದ ನಗುತ್ತಾ ಸರಿದು ಹೋದ.
ವಿಠಲ ನನಗೆ ನೆನಪಾಗುವುದು ಹೀಗೆ. ನನಗಿಂತ ಸುಮಾರು ಎಂಟು ವರ್ಷ ಚಿಕ್ಕವನಾದ ಈತ ನಂತರ ಪತ್ರಿಕೆಗಳ ಮೂಲಕ ತನ್ನ ಚಳವಳಿಗಳ ಮೂಲಕಪರಿಚಯವಾಗುತ್ತಲೇ ಹೋದ. ನನ್ನ ಉದ್ಯೋಗದ ಆರಂಭದ ದಿನಗಳು ಜೋಯಿಡಾದ ಗುಂದ ಎನ್ನುವ ದಟ್ಟಾರಣ್ಯದ ನಡುವೆ ಇರುವ ಊರಿನಲ್ಲಿ. ನಮ್ಮ ಬ್ಯಾಂಕಿನ ಹೊಸ ಶಾಖೆಯ ಮೊದಲ ಮ್ಯಾನೇಜರ್ ನಾನಾದುದರಿಂದ ಅಲ್ಲಿನ ಬಂಗ್ಲೆಯಲ್ಲಿ ಶಾಖೆಯ ಉದ್ಘಾಟನಾ ದಿವಸ ಕನ್ನಡ ಶಾಲೆಯ ಹೆಣ್ಣು ಮಕ್ಕಳು ಸ್ವಾಗತ ಗೀತೆಯನ್ನು ಹಾಡಿದ್ದರು. ಅದರಲ್ಲಿ ಯಮುನಾ ಗಾಂವ್ಕರ ಅವರೂ ಓರ್ವರು. ಅವರ ತಂದೆ ನಮ್ಮ ಬ್ಯಾಂಕಿನ ಗ್ರಾಹಕರು. ನನಗೆ ಗುಂದ ಇಂದಿಗೂ ತುಂಬಾ ಮೆಚ್ಚಿನ ಪ್ರದೇಶ.
ಅಲ್ಲಿನ ಜನಗಳ ಆ ನಿಸ್ಪೃಹತೆ, ಕಷ್ಟದ ಬದುಕು, ದಟ್ಟಾರಣ್ಯದಲ್ಲಿ ಆನೆಹಿಂಡಿನೊಡನೆ, ಬದುಕು ಸವೆಸುವ ಅವರನ್ನು ನೆನೆದಾಗ, ಅಲ್ಲಿನ ಮನೆ ಮನೆಗಳಲ್ಲಿ ತಾಳ ಮದ್ದಳೆ, ಯಕ್ಷಗಾನ, ಪ್ರತೀ ಆದಿತ್ಯವಾರ ನಡೆಯುವ ಕ್ರಿಕೆಟ್ ಮ್ಯಾಚುಗಳು, ಹೀಗೆ ಹಲವಾರು ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಾನು ತೊಡಗಿ ಕೊಂಡಿದ್ದೆ. ಅವರ ಮಗಳನ್ನು ಈತ ಲಗ್ನವಾದ ಎನ್ನುವುದನ್ನು ತಿಳಿದಾಗ ಗುಂದದ ಅಳಿಯ ಎನ್ನುವ ಕಾರಣದಿಂದ ಮತ್ತೂ ಹತ್ತಿರವಾದ. ಈ ದಂಪತಿಗಳುಹೋರಾಟದ ಸಂದರ್ಭಗಳಲ್ಲಿ ನಮ್ಮ ಶಾಖೆಗೂ ಬಂದು ಒಮ್ಮೆ ಭೇಟಿಯಾಗಿದ್ದರು. ಸಣ್ಣಗೆ ಇದ್ದ ವಿಠಲ ಈಗ ಸಂಕೋಚ ಬಿಟ್ಟು ಮಾತಾಡತೊಡಗಿದ್ದ.
ಸಾಂಸ್ಕೃತಿಕ ಲೋಕ, ಕಲೆ, ಅರಣ್ಯವಾಸಿಗಳ ಬದುಕು, ಅವರ ಬವಣೆಗಳ ಕುರಿತು ನಡೆಸಿದ ಹೋರಾಟ ಇವೆಲ್ಲವನ್ನೂ ಗಮನಿಸಿಸುತ್ತಿದ್ದೆ. ಅದೇ ಹೊತ್ತಿನಲ್ಲಿಗೆಳೆಯ ಶ್ರೀಪಾದ ಮತ್ತು ಈತ ಇಬ್ಬರೂ ನಾಟಕ, ಜಾತಾ, ಸಾಕ್ಷರತೆ ಅಂತೆ ಜಿಲ್ಲೆಯಾದ್ಯಂತ ತಿರುಗುತ್ತಿದ್ದರು. ಕಿರಣ ಸಹ ಅದೇ ಹೊತ್ತಿಗೆ ಮಂಗಳೂರಿನಿಂದ ಈ ಜಿಲ್ಲೆಗೆ ಬಂದಿದ್ದ. ಇವರೆಲ್ಲರ ಚಟುವಟಿಕೆಗಳಿಗೆ ಚೈತನ್ಯ ಬಂದಿತ್ತು. ಆದರೆ ಎಂದೂ ವಿಠಲ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಎಲ್ಲಾ ಸಂಘಟನೆಯನ್ನು ಮಾಡಿ ಹಿಂದೆ ಉಳಿದು ಆ ಸಂಘಟನೆಯ ಯಶಸ್ಸನ್ನು ಗಮನಿಸಿ ಹಿಗ್ಗುತ್ತಿದ್ದ. ಈ ಗಂಡ ಹೆಂಡತಿ ಇಬ್ಬರೂ ಜಿಲ್ಲೆಯಾದ್ಯಂತ ಕಾರ್ಮಿಕರ ಕುರಿತು ಹೋರಾಟ ಮಾಡುವು ದನ್ನು ಕಂಡಾಗ ಒಂದು ಕಾಲದಲ್ಲಿ ದಿನಕರ ದೇಸಾಯಿಯವರು ರೈತರ ಕುರಿತು ಹೋರಾಟ ಮಾಡುತ್ತಿದ್ದರು ಎನ್ನುವುದನ್ನು ನನ್ನ ಅಪ್ಪನಿಂದ ಕೇಳಿದ್ದೆ. ಅದೊಂದು ಬಹುದೊಡ್ಡ ಜನಪರ ಹೋರಾಟವಾಗಿತ್ತು.
ಭೂಸುಧಾರಣೆಯ ಕುರಿತು ಅವರ ಆ ದಿನಗಳನ್ನು ಇದೀಗ ಮರೆತು ಬಿಟ್ಟಿದ್ದೇವೆ. ಆ ನಂತರ ಈ ಜಿಲ್ಲೆಯಲ್ಲಿ ಕಾರ್ಮಿಕ ಹೋರಾಟದ ಕಾವು ಸಿಕ್ಕಿದ್ದು ವಿಠಲ ಮತ್ತು ಯಮುನಾ ಅವರಿಂದಲೇ ಎನಿಸತೊಡತು. ದಿನಕರ ದೇಸಾಯಿಯವರ ಚಳವಳಿಯನ್ನು ನಾನು ಕಂಡವನಲ್ಲ. ಹಾಗಾಗಿ ಅದರ ಹೋಲಿಕೆಯೂ ಇದಲ್ಲ. ಇಲ್ಲಿ ಇವರ ಹೋರಾಟ, ಅದು ಅರಣ್ಯ ಕಾಪಿಡುವತ್ತ ಆಗಲಿ, ಮೀನುಗಾರರ ಸಮಸ್ಯೆ ಯಾಗಲಿ, ಕಲ್ಲಿದ್ದಲು ಬಂದರದ ವಿರುದ್ಧವಾಗಲಿ; ಎಲ್ಲಾ ಕಡೆ ಜನ ಜಾಗೃತಿಮೂಡಿಸಿದ್ದಂತೂ ನಿಜ. ಡಾ. ಆರ್. ವಿಯವರ ಸಂಗಡ ಸಂಕೋಚವಿಲ್ಲದೇ ವಿಠಲ ಸಹ ಇರುತ್ತಿದ್ದದ್ದಲ್ಲದೇ ಆ ಹೊತ್ತಿನಲ್ಲಿ ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದ.
ಅವಧಾನಿಯವರ ಜೊತೆಗಿನ ತಾಳಮದ್ದಳೆಯಲ್ಲಿ ನಾನು ಭಾಗವಹಿಸಿದಾಗ ಈತ ಅಲ್ಲಿದ್ದು ನನ್ನ ಅರ್ಥಗಾರಿಕೆಯನ್ನು ಮೆಚ್ಚಿ ವ್ಯಕ್ತಪಡಿಸಿದ್ದ. ಇದಾದ ಮೇಲೆ ಆತನಿಗೆ ನನ್ನ ಕುರಿತು ಆತ್ಮೀಯತೆ ಬೆಳೆಯಿತು ಎಂದು ನಾನೆಂದುಕೊಳ್ಳುವೆ. ನಂತರ ಎಲ್ಲೇ ಸಿಗಲಿ, ತುಂಬಾ ಮಾತುಗಳನ್ನಾಡುತ್ತಿದ್ದ. ನನಗೂ ಈತನಲ್ಲಿ ಒಂದು ರೀತಿಯ ಅಭಿಮಾನ ಬೆಳೆಯಿತು. ಡಾ.ಆರ್.ವಿ. ಭಂಡಾರಿಯವರು ತೀರಿದ ಮೇಲೆ ವಿಠಲ ಅವರ ಚಿಂತನೆಯನ್ನು ಸಾಕಾರಗೊಳಿಸಲು ಮಾಡಿದ ಕೆಲಸ ಮಾತ್ರ ತುಂಬಾ ಶ್ಲಾಘನೀಯ.
ಸಿದ್ಧಾಪುರದ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಇರುತ್ತಲೇ ಹೊನ್ನಾವರದ ಕೆರೆಕೋಣಿನಲ್ಲಿ ಅಣ್ಣನ (ಆರ್.ವಿ) ಕುರಿತು; ಅವರ ಸಿದ್ಧಾಂತಗಳ ಕುರಿತು ಕಾರ್ಯ ಕ್ರಮಗಳ ಮೇಲೆ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದ. ಅರೆ ಅಂಗಡಿ, ಕೆರೆಕೋಣು, ಹೆಬ್ಬಾರ್ನಕೆರೆ ಭಾಗದ ಎಲ್ಲಾ ಜನಗಳೂ ನಮ್ಮ ವಿಠಲ ಎನ್ನುವಷ್ಟರ ಮಟ್ಟಿಗೆ ಈತನನ್ನು ಹಚ್ಚಿಕೊಂಡಿದ್ದರು. ಅದರಲ್ಲೂ ಜ. ನಾಗಮೋಹನದಾಸ ಅವರಿಂದ ಸಂವಿಧಾನದ ಓದಂತೂ ಒಂದು ಹೊಸ ಕ್ರಾಂತಿಯನ್ನೇ ಸೃಷ್ಟಿಸಿತು. ಬಂಡಾಯ ಪ್ರಕಾಶನ ಇನ್ನಷ್ಟು ಬೆಳೆಯಿತು. ಮೌಲಿಕವಾದ ಪುಸ್ತಕಗಳನ್ನು ಹೊರತಂದದ್ದಷ್ಟೇ ಅಲ್ಲ, ಅದಕ್ಕೆ ಯಾರಿಂದಲೂ ಸಹಾಯಕೇಳದೇ ಸಮಾಜ ಮುಖಿಯಾಗಿ ಚಳವಳಿ ನಡೆಯಬೇಕೆನ್ನುವುದು ಆತನ ಆಶಯಗಳಾಗಿದ್ದವು. ಮಕ್ಕಳ ಯಕ್ಷಗಾನ, ನಾಟಕ, ಹಿಂದುಳಿದ ವರ್ಗಗಳ ಯಕ್ಷಗಾನ ಕಲಾವಿದರ ಕುರಿತು ಕಾಳಜಿ ಹೀಗೆ ಹಲವು ಕ್ರಿಯೆಗಳಲ್ಲಿ ತೊಡಗಿದ್ದ. ಈ ಹೊತ್ತಿನಲ್ಲಿ ಸಾಮಾಜಿಕವಾಗಿ ಜನಪರ ಚಳವಳಿಗಳಿಗೆ ಸ್ವಲ್ಪ ಹಿನ್ನಡೆಯಾಗುತ್ತಿತ್ತು. ಆ ಕುರಿತು ನೋವೂ ಈತನಲ್ಲಿ ಇತ್ತು. ಅದನ್ನು ಬಾಯಿಬಿಟ್ಟು ಹೇಳದಿದ್ದರೂ ಅನೇಕ ಸಾರಿ ಅದು ನನ್ನ ಅನುಭವಕ್ಕೆ ಬಂದಿತ್ತು.
ಯಾರೇ ಬಡ ಕಲಾವಿದರಿರಲಿ ಅವರಿಗೆ ಮಾಸಾಶನ ಕೊಡಿಸಲು ಈತ ಹೋರಾಡುತ್ತಿದ್ದ. ತನ್ನ ಕೈಯಿಂದಲೇ ಹಣ ಖರ್ಚುಮಾಡಿಕೊಂಡು ಬೆಂಗಳೂರಿಗೆ ಹೋಗಿಬರುವುದಷ್ಟೇ ಅಲ್ಲದೇ ಆ ಕೆಲಸ ಆಗುವವರೆಗೂ ಸುಮ್ಮನಿರುತ್ತಿರಲಿಲ್ಲ. ಯೌವನದ ಸಿಟ್ಟು ಸೆಡವಿನ ವಿಠಲ ತುಂಬಾ ಪ್ರೌಢನಾಗಿ ಬದಲಾಗಿದ್ದ. ಅವಧಿಯಲ್ಲಿ ಅಂಕಣವನ್ನು ಬರೆಯುತ್ತಾ ಸಾಹಿತ್ಯಿಕವಾಗಿ ಬೆಳೆದಿದ್ದ. ಅಂಕಣಬರಹ ಎನ್ನುವುದು ನಿರಂತರ ಅಧ್ಯಯನ ಮತು ಅವಲೋಕನದ ಪರಿಣಾಮವಾಗಿರುತ್ತದೆ. ಪ್ರತಿ ಅಂಕಣವೂ ಒಂದು ಹೆರಿಗೆ ನೋವಿನಂತೆ. ಬರೆದಾಯಿತು ಎಂದು ನಿಟ್ಟಿಸಿರು ಬಿಡುವಷ್ಟರ ಮುಂದಿನದ್ದು ಏನು ಎನ್ನುವ ಚಿಂತೆ ಪ್ರಾರಂಭವಾಗುತ್ತದೆ.
ಎರಡು ವರ್ಷಗಳ ಹಿಂದೆ ನಾನು ವಿಜಯಪುರದಲ್ಲಿ ಇದ್ದಾಗ ಅಲ್ಲಿನ ಮಹಿಳಾ ವಿಶ್ವವಿದ್ಯಾಲಯಕ್ಕೆ ಬಂದಿದ್ದ. ಆಗ ನಮ್ಮ ಮನೆಗೂ ಬಂದಿದ್ದ. ಮೊದಲ ಸಲ ನಾವಿಬ್ಬರೂ ಅಷ್ಟೊತ್ತು ಸೇರಿ ಹರಟೆ ಹೊಡೆದಿದ್ದೆವು. ಪ್ರಚಲಿತ ಸಾಮಾಜಿಕ ಸಮಸ್ಯೆಗಳ ಕುರಿತು ತುಂಬಾ ವಿಷಯಗಳ ಕುರಿತು ಮಾತಾಡಿದ್ದೆವು. ಅದಾದ ಮೇಲಂತೂ ನಾವು ಇನ್ನಷ್ಟು ಹತ್ತಿರವಾದೆವು. ಆತನಲ್ಲಿರುವ ಜನಪರ ಕಾಳಜಿಯ ಕುರಿತು ಯಾವತ್ತಿಗೂ ಪ್ರಶ್ನೆಮಾಡುವಂತೆಯೇ ಇರಲಿಲ್ಲ.
ನನಗೆ ಗೊತ್ತಿರುವಂತೆ ಕೈತುಂಬಾ ಸಂಬಳ ಬಂದರೂ ತಿಂಗಳಿಗೆ ಮೊದಲೇ ಯಾರಾದರೂ ಅಶಕ್ತರಿಗೆ ಅವುಗಳಲ್ಲಿ ಹೆಚ್ಚಿನ ಪಾಲನ್ನು ವಿನಿಯೋಗಿಸಿ ತನ್ನ ಕೈಯಿಂದಲೇ ಖರ್ಚುಮಾಡಿಬಿಡುತ್ತಿದ್ದ. ಆದರೆ ಹಣ ಇಲ್ಲ ಎಂದು ಯಾರ ಹತ್ತಿರವೂ ಕೈಯೊಡ್ಡಿ ಕೇಳದ ಸ್ವಾಭಿಮಾನ ಆತನಲ್ಲಿತ್ತು. ಜಲವಳ್ಳಿ ವೆಂಕಟೇಶರಾವ್ ಯಕ್ಷಗಾನದ ದೊಡ್ಡ ಹೆಸರು. ಅವರ ಕುರಿತು ಸ್ಮರಣ ಸಂಚಿಕೆಯನ್ನು ತರಬೇಕೆನ್ನುವುದು ಆತನ ಹಂಬಲವಾಗಿತ್ತು. ಅದಕ್ಕಾಗಿ ನನ್ನ ಹತ್ತಿರ ಲೇಖನವನ್ನು ಬರೆಸಿದ್ದ. ಅದೇ ರೀತಿ ಧಾರೇಶ್ವರ ಮಾಸ್ತರರ ಯಕ್ಷಗಾನ ಸೇವೆಯನ್ನು ಗಮನಿಸಿ ಅವರ ಹೆಸರಿನಲ್ಲಿ ಮೊದಲ ವರ್ಷ ಪ್ರಶಸ್ತಿ ಪ್ರಧಾನ ಮಾಡುವಾಗ ನನ್ನ ಹತ್ತಿರ ಲೇಖನವನ್ನು ಬರೆಸಿದ್ದ. ಆ ವರ್ಷದ ಪ್ರಶಸ್ತಿ ಪ್ರಸಿದ್ಧ ಯಕ್ಷಗಾನ ವಿದ್ವಾಂಸರಾದ ಸಾಗರದ ಡಾ.ಜಿ.ಎಸ್. ಭಟ್ಟರಿಗೆ ಪ್ರಧಾನ ಮಾಡಲಾಗಿತ್ತು.
ಧಾರೇಶ್ವರ ಮಾಸ್ತರರ ಸಂಗಡ ನಾನೂ ಕೆಲ ಬಯಲಾಟಗಳಲ್ಲಿ ವೇಷ ಹಾಕಿರುವುದನ್ನು ತಿಳಿದು ಅದರ ವಿವರವನ್ನೆಲ್ಲ ಕೇಳಿ ಅವರ ಸೇವೆಯ ಕುರಿತು ಅಭಿಮಾನ ಪಟ್ಟಿದ್ದ. ಈ ವರ್ಷದ ಮಾರ್ಚ್ ತಿಂಗಳಲ್ಲಿ ನಾನು ಸಾಗರದಲ್ಲಿ ಇದ್ದೆ. ಅಲ್ಲಿಗೆ ವಿಠಲನ ಫೋನ್ ಬಂತು. ಈ ವರ್ಷದ ಧಾರೇಶ್ವರ ಮಾಸ್ತರರ ಸಂಸ್ಮರಣೆ ಮತ್ತು ವಿಶ್ವ ರಂಗಭೂಮಿ ದಿನಾಚರಣೆಯನ್ನು ಮಾರ್ಚ್೨೮ರಂದು ಇದೆ. ಎಲೆಮರೆಯ ಕಾಯಿಯಂತೆ ಇರುವ ಬೊಮ್ಮಯ್ಯ ಗಾಂವ್ಕರರಿಗೆ ಈ ವರ್ಷದ ಪ್ರಶಸ್ತಿ ಕೊಡುತ್ತೇವೆ. ನೀವು ಬರಬೇಕು ಎಂದು ಕೇಳಿದ್ದ. ಸಹಾಯಾನದಲ್ಲಿ ಭಾಗವಹಿಸಬೇಕೆನ್ನುವ ತುಡಿತ ನನ್ನಲ್ಲೂ ಇತ್ತು. ಬರುತ್ತೇನೆಂದೆ.
ಮಾರ್ಚ್೨೮ರಂದು ಕಾರ್ಯಕ್ರಮಕ್ಕೆ ಹೋದಾಗ ಆತ, ಯಮುನಾ ಮತ್ತು ಮಾಧವಿ ತೋರಿದ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅಷ್ಟೆ ಬಿಡುವಿಲ್ಲದ ಕೆಲಸದ ಮಧ್ಯೆಯೂ ಇಡೀ ಸಹಾಯಾನದ ಆವರಣದಲ್ಲಿ ಸುತ್ತಾಡಿಸಿ ಅಲ್ಲಿನ ಕಣ ಕಣದಲ್ಲೂ ಆರ್.ವಿ. ಭಂಡಾರಿಯವರ ಇರುವಿಕೆಯನ್ನು ಗುರುತಿಸಿ ನಮಗೆ ತೋರಿಸಿದ್ದ. ಹೊಸದಾಗಿ ಕಟ್ಟಿದ ರಂಗಕಲಾವಿದರಿಗೆ ಉಳಿಯುವ ಬಿಡಾರ ಅಲ್ಲಿನ ಮಕ್ಕಳ ಚಟುವಟಿಕೆಗಳು ಎಲ್ಲದರಲ್ಲಿ ಆರ್.ವಿ.ಯವರ ಕನಸನ್ನು ಸಾಕ್ಷಾತ್ಕರಿಸುವ ತೃಪ್ತಿಯಿತ್ತು. ಆ ದಿನದ ಕಾರ್ಯಕ್ರಮವೂ ತುಂಬಾ ಚಂದವಾಗಿತ್ತು. ಅಂದು ತಾಳಮದ್ದಳೆ ಆಗಬೇಕು. ನಾನು ಬೊಮ್ಮಯ್ಯ ಗಾಂವ್ಕರಎಲ್ಲರೂ ಬರಬೇಕೆಂದು ಅಕ್ಕ, ತಮ್ಮ ಯಮುನಾ ಎಲ್ಲರೂ ಹೇಳಿದ್ದರು.
ಅಲ್ಲಿನ ಆತ್ಮೀಯವಾದ ವಾತಾವರಣದಲ್ಲಿ ಹೊತ್ತು ಹೋದದ್ದೇ ತಿಳಿದಿರಲಿಲ್ಲ. ಎದೆ ತುಂಬಿ ಅಲ್ಲಿಂದ ಬಂದಿದ್ದೆ. ದೂರದಲ್ಲಿ ನಿಂತು ನನ್ನನ್ನು ಸೆಳೆದು ಹತ್ತಿರವಾಗಿ ಎದೆಯಗೂಡಿನೊಳಗೆ ಹೊಕ್ಕ ವಿಠಲ ಇಷ್ಟು ಬೇಗ ಹೋಗಿಬಿಡುತ್ತಾನೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಸದಾ ಮಾನವೀಯತೆಯೆಡೆ ಪ್ರಾಮಾಣಿಕವಾಗಿ ಮಿಡಿಯುವ ಈ ದಂಪತಿಗಳಲ್ಲಿ ಸ್ವಂತದ್ದೂ ಏನೇನೂ ಇಲ್ಲ. ಎಲ್ಲವನ್ನೂ ಸಮಾಜಕ್ಕೆ ಎಂದು ಬದುಕುವದಷ್ಟೇ ಅಲ್ಲ ಇನ್ನಿತರಿಗೂ ಬಾಳಿಗೂ ಆಶ್ರಯವಾಗಿದ್ದರು. ಇದ್ದಕ್ಕಿಂತೆ ಸಿಡಿಲಿನಂತೆ ಖ್ಯಾತ ಹಿಂದುಸ್ಥಾನಿ ಗಾಯಕ ಮತ್ತು ಅದೇ ಊರಿನವರೇ ಆದ ಪಂ. ಪರಮೇಶ್ವರ ಹೆಗಡೆಯವರು ತಮ್ಮ ಫೇಸ್‌ಬುಕ್ ಗೋಡೆಯಮೇಲೆ ನಮ್ಮ ವಿಠಲ ಆದಷ್ಟು ಬೇಗ ಗುಣವಾಗಲಿ ಎಂದು ಬರೆದು ಕೊಂಡಾಗ ಅಘಾತಕ್ಕೊಳಗಾಗಿ ಆತನಿಗೆ ಗುಣವಾಗಲಿ ಎಂದು ದಿನನಿತ್ಯವೂ ಕೇಳಿಕೊಳ್ಳುತ್ತಿದ್ದೆ.
ಕೋವಿಡ್ ತನ್ನ ಕಬಂಧ ಬಾಹುವಿನಲ್ಲಿ ವಿಠಲನನ್ನು ಬಲಿ ಪಡೆಯಿತು. ಅಸಹಾಯಕರ ನೆರವಿಗೆ ಸದಾ ಧಾವಿಸುವ ಮತ್ತು ತನ್ನಿಂದಾಗದಲ್ಲಿ ಆಗುವವರ ಹತ್ತಿರ ಜಗಳಮಾಡಿಯಾದರೂ ಮಾಡಿಸಿ ತಣ್ಣಗೆ ಮರೆಯಲ್ಲಿ ಪ್ರಚಾರ ಬಯಸದೇ ಇರುತ್ತಿದ್ದ ನಮ್ಮ ವಿಠಲ ತಣ್ಣಗೆ ಸರಿದೇ ಬಿಟ್ಟ.