ಪ್ರೀತಿಗಿರುವ ತಾಕತ್ತು ಮತ್ತು ಗಮ್ಮತ್ತು !
ಅಭಿವ್ಯಕ್ತಿ
ಡಾ.ಕೆ.ಪಿ.ಪುತ್ತೂರಾಯ
@..
ಮನುಷ್ಯನ ಭಾವನೆಗಳಲ್ಲಿ ಪರಮ ಶ್ರೇಷ್ಠ ಹಾಗೂ ಪವಿತ್ರವಾದುದೆಂದರೆ ಪ್ರೀತಿ. ಪ್ರೀತಿಯೇ ಮನುಷ್ಯನ ಜೀವನದ ಮೂಲಸೆಲೆ – ನೆಲೆ – ಬಲೆ. ನೀರು ಆಹಾರ ಗಳನ್ನಾದರೂ ಬಿಟ್ಟಿರಬಹುದು; ಆದರೆ ಪ್ರೀತಿ ಇಲ್ಲದೆ ಬದುಕಲಾರೆವು.
ಪ್ರೀತಿ – ಪ್ರೇಮಗಳಿಲ್ಲದಿದ್ದರೆ, ಬದುಕು ಬರಡಾಗುತ್ತದೆ; ಜಗತ್ತೇ ಮಸಣ ಮೌನ ಆವರಿಸಿದ ಒಂದು ಸ್ಮಶಾನ ಭೂಮಿಯಂತಾಗುತ್ತದೆ. ಪ್ರೀತಿಯ ಸಿಂಚನ ಬಾಳಲ್ಲಿಸಂಚಲನವನ್ನೇ ನಿರ್ಮಿಸುತ್ತದೆ. ಜಗತ್ತಿನ ಸಮಸ್ತ ಜೀವಿಗಳ ಜೀವ – ಜೀವನವನ್ನು, ಸಂಬಂಧಗಳು ಪ್ರೀತಿ – ಪ್ರೇಮಗಳೆಂಬ ಅಗೋಚರ ಶಕ್ತಿ ನಿಯಂತ್ರಿಸುತ್ತದೆ.ನಾವು ಪ್ರೀತಿಸಬೇಕು ಹಾಗೂ ಪ್ರೀತಿಸಲ್ಪಡಬೇಕು. ಇದು ಎಲ್ಲರ ಜೀವನದ ಆಶಯ. ನಮಗೆ ನಮ್ಮ ಮೇಲೆ ಪ್ರೀತಿ ಇರುವುದರಿಂದಲೇ ಬದುಕಿ ಬಾಳಲುಸಾಧ್ಯವಾಗುತ್ತದೆ. ಮನುಷ್ಯ ತನ್ನನ್ನು ಪ್ರೀತಿಸುವುದರಿಂದಲೇ ಇತರರನ್ನೂ ಪ್ರೀತಿಸುತ್ತಾನೆ ಎಂಬುದು ಒಳಗಿನ ಸತ್ಯ.
ಆದುದರಿಂದಲೇ ಪ್ರತಿಯೋರ್ವನು ತನ್ನನ್ನು, ತನ್ನವರನ್ನು ಪ್ರೀತಿಸುತ್ತಿರುತ್ತಾನೆ. ಅಂತೆಯೇ ತನಗೆ ಅರಿವಿಲ್ಲದೇನೇ ತನ್ನನ್ನು ಪ್ರೀತಿಸುವವರನ್ನು ಪ್ರೀತಿಸಲಾ ರಂಭಿಸುತ್ತಾನೆ. ಈ ದೃಷ್ಟಿಯಲ್ಲಿ ಪ್ರೀತಿ ಎಂಬುದು ಒಂದು ಸುಂದರ ಸೋಂಕು. ಅದು ಬೇಗನೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಪ್ರೀತಿ ಪ್ರೇಮಗಳಿಗೆ ಗಂಟೆ ಜಾಗಟೆಗಳಿಲ್ಲ; ತುತ್ತೂರಿ, ತಂಬೂರಿಗಳಿಲ್ಲ. ಅದು ಸದ್ದು ಗದ್ದಲವಿಲ್ಲದೆ, ಮೌನವಾಗಿ ಹರಿಯುವ ಒಂದು ಪಾಶದ ಹೊಳೆ. ನಾವು ಇನ್ನೊಬ್ಬರನ್ನು ಪ್ರೀತಿಸುವ ಗುಣ ಹೆಚ್ಚಿಸಿಕೊಂಡಷ್ಟು ಅವರೂ ನಮ್ಮನ್ನು ಪ್ರೀತಿಸಲಾರಂಭಿಸುತ್ತಾರೆ.
ಗ್ರಂಥವನ್ನು ಓದಿದವರೆಲ್ಲಾ ಪಂಡಿತರಲ್ಲ; ಇದು ಖಂಡಿತ. ಪ್ರೀತಿ, ಪ್ರೇಮವೇನೆಂಬುದನ್ನು ಅರಿತವನೇ ಪಂಡಿತ. ಪ್ರೀತಿ ಎಂದರೆ ನನ್ನನ್ನು ಅವನಲ್ಲಿ, ಅವನಲ್ಲಿ ನನ್ನನ್ನು ಕಾಣುವ ಒಂದು ಪ್ರಾಮಾಣಿಕ ಪ್ರಯತ್ನ. ಊಟದಲ್ಲಿ ಉಪ್ಪು ಇರುವಾಗ, ಅದರ ಇರುವಿಕೆ ಗೊತ್ತಾಗದು. ಬಾಯಿ ಬತ್ತಿಹೋಗುವ ತನಕ ನೀರಿನ ಬೆಲೆತಿಳಿಯದು. ಇಲ್ಲವಾದಾಗಲೇ ಅದರ ಕೊರತೆ ಎದ್ದು ಕಾಣುತ್ತದೆ; ಅಂತೆಯೇ ಪ್ರೀತಿಯು ಕೂಡ. ಪ್ರೀತಿಸುವವರು ಇಲ್ಲವಾದಾಗಲೇ ಪ್ರೀತಿ ಏನೆಂಬುದರಅರಿವಾಗುವುದು. ಪ್ರೀತಿ ಎಂಬ ಒಂದೇ ಒಂದು ಶಬ್ದದಿಂದ, ಜಗತ್ತಿನ ಬಹುತೇಕ ವ್ಯವಹಾರಗಳು ನಡೆಯುತ್ತಿರುತ್ತದೆ; ಸಂಬಂಧಗಳು ಗಟ್ಟಿಗೊಳ್ಳುತ್ತಿರುತ್ತವೆ.
ಪ್ರೀತಿಗೆ ನಾನಾ ಅರ್ಥಗಳಿವೆ, ವ್ಯಾಖ್ಯಾನಗಳಿವೆ. ನಾವು ಕೇಳದೇನೆ ನಮಗೆ ಎಲ್ಲವನ್ನೂ ಕೊಟ್ಟ ಭಗವಂತನಿಗೆ ನಮ್ಮ ಮೇಲಿರುವ ಪ್ರೀತಿಯನ್ನೇ ನಾವು ಅವನ ಅನುಗ್ರಹವೆಂದು ಕರೆಯುತ್ತೇವೆ. ಪ್ರತಿಯಾಗಿ ಭಕ್ತನು ಭಗವಂತನ ಮೇಲೆ ಇಟ್ಟಿರುವ ಭಕ್ತಿಯೇ ಪ್ರೀತಿಯ ಇನ್ನೊಂದು ರೂಪ. ಹೆತ್ತವರಿಗೆ ಮಕ್ಕಳ ಮೇಲಿರುವ ಪ್ರೀತಿ ವಾತ್ಯಲ್ಯವೆನಿಸಿದರೆ, ಮಕ್ಕಳಿಗೆ ಹೆತ್ತವರ ಮೇಲಿರುವ ಕಾಳಜಿ – ಗೌರವ ಪ್ರೀತಿಯ ಇನ್ನೊಂದು ರೂಪ. ಗಂಡ ಹೆಂಡಿರ ನಡುವಣ ಪ್ರೀತಿ ಅನುರಾಗವೆಂದುಕರೆಯಲ್ಪಟ್ಟರೆ, ಪ್ರೇಮಿಗಳ ನಡುವಣ ಪ್ರೀತಿ ‘ಪ್ರಣಯ. ಬಂಧು – ಬಾಂಧವರ ಪ್ರೀತಿ, ‘ಒಲುಮೆ ಎನಿಸಿದರೆ, ಮಿತ್ರರ ನಡುವಿನ ಪ್ರೀತಿಯನ್ನು ‘ಸ್ನೇಹವೆಂದು ಕರೆಯುತ್ತೇವೆ.
ಕೆಲಸದವರಿಗೆ, ಮಾಲೀಕನ ಮೇಲಿರುವ ಪ್ರೀತಿ ‘ಸ್ವಾಮಿನಿಷ್ಠೆ’ ಯಾದರೆ, ಮಾಲೀಕನಿಗೆ ಕೆಲಸದವರ ಮೇಲಿರುವ ಪ್ರೀತಿ ‘ದಯೆ. ಪರಿಸರದ ಬಗ್ಗೆ ಇರುವ ಕಾಳಜಿ‘ಪರಿಸರ ಪ್ರೇಮವೆಂದು ಕರೆಯಲ್ಪಟ್ಟರೆ, ಪ್ರಾಣಿಗಳ ಮೇಲಣ ಪ್ರೀತಿ ‘ಪ್ರಾಣಿದಯೆ ಎಂದಾಗುತ್ತದೆ. ದೇಶದ ಮೇಲಿನ ಪ್ರೀತಿ ‘ರಾಷ್ಟ್ರಾಭಿಮಾನವೆಂದಾದರೆ,ನಮ್ಮ ಜಾತಿಯ ಬಗ್ಗೆ ಇರುವ ಪ್ರೀತಿ, ಜಾತಿಯ ಮೋಹವೆಂದು ಗುರುತಿಸಲ್ಪಡುತ್ತದೆ. ಒಬ್ಬ ವ್ಯಕ್ತಿ ತನ್ನ ಮತ್ತು ತನ್ನವರ ಹೊರತಾಗಿ, ಎಷ್ಟೆಷ್ಟು ವಸ್ತು – ವಿಷಯ – ವ್ಯಕ್ತಿಗಳನ್ನು ಪ್ರೀತಿಸಲಾರಂಭಿಸುತ್ತಾನೋ, ಅಷ್ಟಷ್ಟು ಅವನ ಬದುಕು ವಿಸ್ತಾರಗೊಳ್ಳುತ್ತದೆ, ಶ್ರೀಮಂತವಾಗುತ್ತದೆ.
ತನ್ನನ್ನು ಹೆತ್ತವರು, ಬಂಧು – ಬಳಗ, ಸಹೋದ್ಯೋಗಿಗಳು, ನೆರೆಹೊರೆ ಮಾತ್ರವೇ ಅಲ್ಲ, ತಾನು ಹುಟ್ಟಿದ ಊರು, ದೇಶ, ತಾನಾಡುವ ಭಾಷೆ, ಪಡೆದುಕೊಂಡ ಸಂಸ್ಕಾರ, ಹೀಗೆ ಪ್ರೀತಿಸಬಹುದಾದ ಪಟ್ಟಿಗೆ ಕೊನೆಯೇ ಇಲ್ಲ. ಇಷ್ಟೇ ಏಕೆ, ಪರೋಪಕಾರ ಸಮಾಜಸೇವೆ ಗೈಯೋದರಲ್ಲಿ ಪ್ರೀತಿ. ಹೀಗೆ ನಮ್ಮ ಪ್ರೀತಿಯನ್ನು ವಿಸ್ತರಿಸಿಕೊಳ್ಳೋದರಿಂದ, ಲಾಭ – ಸಂತಸ ನಮಗೇನೇ. ಹೀಗೆ ಪ್ರೀತಿಯನ್ನು ಊರಿಗೆಲ್ಲಾ ಹರಡಿದರೆ, ಪ್ರಪಂಚವನ್ನೇ ಸ್ವರ್ಗ ಮಾಡಿಕೊಳ್ಳಬಹುದು. ಪ್ರೀತಿಯನ್ನು ನೀಡಲು ಸಮಯವಿಲ್ಲವೆನ್ನುವುದು ಒಂದು ನೆಪಮಾತ್ರ. ಪ್ರೀತಿ ಇದ್ದಲ್ಲಿ ಸಮಯವೂ ಹೇಗೋ ಲಭ್ಯ ವಾಗುತ್ತದೆ.
ಇದಕ್ಕೆ ನಾವೇನೂ ಖರ್ಚು ಮಾಡಬೇಕಾಗಿಲ್ಲ; ಪ್ರೀತಿಸುವ ತವಕ ನಮ್ಮದಾಗಿಸಿ ಕೊಂಡರೆ ಸಾಕು. ಅಂತೆಯೇ ಪ್ರೀತಿ ವಿನಾಕಾರಣವಾಗಿದ್ದರೂ ಪರವಾಗಿಲ್ಲ; ಆದರೆ ತಿರಸ್ಕಾರ – ದ್ವೆಷಗಳು ಮಾತ್ರ ಸಕಾರಣವಾಗಿರಬೇಕು. ವಿನಾಕಾರಣ ನಮ್ಮನ್ನು ಯಾರಾದರೂ ಇಷ್ಟಪಡದಿದ್ದರೆ ನಾವು ಚಿಂತಿತರಾಗಬಾರದು. ಕಾರಣ ಅದು ಅವರ ಸಮಸ್ಯೆ, ನಮ್ಮದಲ್ಲ! ಅಂತೆಯೇ ಪ್ರೀತಿ, ದ್ವೇಷ ಅತಿಯಾಗಬಾರದು. ಕಾರಣ ಕಾಲಕ್ರಮೇಣ ಪ್ರೀತಿಸಿದವರನ್ನು ದ್ವೇಷಿಸುವ ಇಲ್ಲವೇ ದ್ವೇಷಿಸಿ ದವರನ್ನು ಪ್ರೀತಿಸುವ ಸಂದರ್ಭಗಳೂ ಹುಟ್ಟಿಕೊಳ್ಳಬಹುದು. ಪ್ರೀತಿ ಎಂದರೆ ಬಹಳ ಸೂಕ್ಷ್ಮವಾದುದು; ನೀರು ಕಡಿಮೆ ಯಾದರೆ ಬಾಡಿ ಹೋಗುವ, ಹೆಚ್ಚಾದರೆ ಕೊಳೆತು ನಾರುವ ಹೂವಿನಂತೆ!
ಯಾವುದೇ ಒತ್ತಡಕ್ಕೆ ಯಾರದೋ ಒತ್ತಾಯಕ್ಕೆ ಹೂ ಅರಳದು. ಅಂತೆಯೇ ಪ್ರೀತಿ ವಿಶ್ವಾಸಗಳು ಕೂಡಾ! ನಿಜವಾದ ಪ್ರೀತಿ ಎಂದರೆ ಅದು ಕಂಡಕಂಡಲ್ಲಿ ಬೆಳೆಯುವ ಕಾಡು ಗಿಡವಲ್ಲ. ಹೃದಯಾಳದಲ್ಲಿ ಬೇರು ಬಿಟ್ಟು ಅರಳುವ ಮಂದಾರ ಕುಸುಮ. ನಾವು ಯಾರನ್ನಾದರೂ ಪ್ರೀತಿಸುವುದು ಸುಂದರ; ಯಾರಾದರೂ ನಮ್ಮನ್ನು ಪ್ರೀತಿಸುವುದು ಅತಿ ಸುಂದರ. ಆದರೆ ನಾವು ಪ್ರೀತಿಸುವವರೇ ನಮ್ಮನ್ನು ಪ್ರೀತಿಸುವುದು ಅತಿ ಸುಂದರ! ದಂಪತಿಗಳು ‘ಯಾರಿರಲಿ, ಇರದಿರಲಿ, ನಾನಿಲ್ಲವೇ?’ ಎಂದು ಒಬ್ಬರಿಗೊಬ್ಬರು ಹೇಳಿದರೆ, ಅದುವೇ ಪರಿಶುದ್ಧವಾದ ಪ್ರೀತಿ! ನಮ್ಮ ಪ್ರೀತಿ – ಪಾತ್ರರಾದವರಿಗೆ ನಾವು ನೀಡಬಹುದಾದ ದೊಡ್ಡ ಕಾಣಿಕೆ ಎಂದರೆ, ನಮ್ಮ ಸಮಯ ಮತ್ತು ಕಾಳಜಿ.
ಪ್ರೀತಿಗಾಗಿ ನೋವನ್ನು ಸಹಿಸಬೇಕು; ನೋವುಂಡು ಪ್ರೀತಿಯನ್ನು ಅನುಭವಿಸಬೇಕು. ಹಾಗೆ ನೋಡಿದರೆ ಪ್ರೀತಿಸುವವರು ನೀಡುವ ಶಿಕ್ಷೆಯಲ್ಲಿ ನೋವೇ ಇಲ್ಲ.ಅದಕ್ಕೇ ನೋಡಿ ಅಮ್ಮ ಕೊಟ್ಟ ಗುದ್ದಲ್ಲಿ ನೋವೇ ಇಲ್ಲ. ಅಧಿಕಾರ – ಅಂತಸ್ತು, ವಿದ್ಯೆಬುದ್ಧಿಗಳಿಂದ ಗೆಲ್ಲಲಾಗದ್ದನ್ನು ಪಡೆಯಲಾಗದ್ದನ್ನು ಪ್ರೀತಿಯಿಂದ ಗೆಲ್ಲಬಹುದು; ಪಡೆದುಕೊಳ್ಳಬಹುದು. ಪ್ರೀತಿಗೆ ಜಾತಿ – ಮತ -ಧರ್ಮಗಳ ಅಡ್ಡಗೋಡೆಗಳಿಲ್ಲ, ಅಧಿಕಾರ, ಅಂತಸ್ತುಗಳು ಅಡ್ಡಿಯಾಗುವುದಿಲ್ಲ. ಸದ್ದುಗದ್ದಲವಿಲ್ಲದೆ ಹೃದಯದಿಂದ ಹೃದಯಕ್ಕೆ ಹರಿಯುವ ಒಂದು ಜಾಗತಿಕ ಭಾವ. ಪ್ರೀತಿ ಎಂಬುದು ಕಲಿತು ಬರುವ ವಿದ್ಯೆಯಲ್ಲ. ಅದನ್ನು ನೋಡಲಾಗದು – ಕೇಳಲಾಗದು – ಅನುಭವಿಸಿಆನಂದಿಸಬೇಕು. ಪ್ರೀತಿಸದೇ ಇರುವುದಕ್ಕಿಂತ ಪ್ರೀತಿಸಿ ವಿಫಲರಾಗೋದೇ ಲೇಸು. ಒಮ್ಮೆ ಬುದ್ಧನನ್ನು ಒಬ್ಬಾತ ಕೇಳಿದ ಬಯಕೆಗೂ ಪ್ರೀತಿಗೂ ಏನು ವ್ಯತ್ಯಾಸ? ಬುದ್ಧ ಉತ್ತರಿಸಿದ ‘ನೀನು ಒಂದು ಚಂದದ ಹೂವನ್ನು ಕಂಡು ಅದನ್ನು ಬಯಸಿದರೆ ಅದನ್ನು ಕೀಳುತ್ತೀಯಾ; ಬದಲಾಗಿ ಅದನ್ನು ಪ್ರೀತಿಸಿದರೆ ಅದಕ್ಕೆ ನೀರೆರೆ ಯುತ್ತೀಯಾ’.
ಇದುವೇ ಬಯಕೆಗೂ, ಪ್ರೀತಿಗೂ ಇರುವ ವ್ಯತ್ಯಾಸ. ಇಂಥ ಪ್ರೀತಿ ನಮ್ಮದಾಗಲಿ. ನಾವು ಇತರರನ್ನು ಪ್ರೀತಿಸಲು ಶುರುಮಾಡಿದರೆ, ಕ್ರಮೇಣ ಅವರ ಪ್ರೀತಿಗೂ ನಾವು ಪಾತ್ರರಾಗುತ್ತೇವೆ. ಪ್ರೀತಿಗೆ ನಾನಾ ಅರ್ಥಗಳಿವೆ, ಆಯಾಮಗಳಿವೆ. ಅಂತೆಯೇ ಗುಣವನ್ನು ಆರಿಸಿ ಬಂದ ಸ್ನೇಹ, ಹಣವನ್ನು ಆರಿಸಿ ಬಂದ ಸ್ನೇಹಕ್ಕಿಂತ ಯಾವತ್ತೂ ಮಧುರ ಹಾಗೂ ಶಾಶ್ವತ. ಒಬ್ಬ ವ್ಯಕ್ತಿ ತನ್ನ ಮತ್ತು ತನ್ನವರ ಹೊರತಾಗಿ, ಎಷ್ಟೆಷ್ಟು ವಸ್ತು – ವಿಷಯ – ವ್ಯಕ್ತಿಗಳನ್ನು ಪ್ರೀತಿಸಲಾರಂಭಿಸುತ್ತಾನೋ, ಅಷ್ಟಷ್ಟು ಅವನ ಬದುಕು ವಿಸ್ತಾರಗೊಳ್ಳುತ್ತೆ; ಹಾಗೂ ವಿಜೃಂಭಿಸಲಾರಂಭಿಸುತ್ತದೆ.
ನಮ್ಮ ಪ್ರೀತಿ ವಿಶ್ವಾಸಗಳು ವಿನಾಕಾರಣವಾದರೂ ಪರವಾಗಿಲ್ಲ. ಆದರೆ, ದ್ವೇಷ ತಿರಸ್ಕಾರಗಳು ಮಾತ್ರ ಸಕಾರಣ ವಾಗಿರಬೇಕು. ಪ್ರೀತಿ ಎಂದರೆ ಬಹಳ ಸೂಕ್ಷ್ಮ ವಾದುದು; ನೀರು ಕಡಿಮೆ ಆದರೆ, ಬಾಡಿ ಹೋಗುವ, ಜಾಸ್ತಿ ಆದರೆ ಕೊಳೆತು ನಾರುವ ಹೂವಿನಂತೆ. ಯಾವುದೇ ಒತ್ತಡಕ್ಕೆ ಯಾರದೋ ಒತ್ತಾಯಕ್ಕೆ ಹೂ ಅರಳದು; ಅಂತೆಯೇ ಪ್ರೀತಿ ವಿಶ್ವಾಸಗಳು ಕೂಡಾ. ನಿಜವಾದ ಪ್ರೀತಿ ಎಂದರೆ, ಅದು ಕಂಡು ಕಂಡಲ್ಲಿ ಬೆಳೆಯುವ ಕಾಡು ಗಿಡವಲ್ಲ; ಹೃದಯದಾಳದಲ್ಲಿ ಬೇರು ಬಿಟ್ಟು, ನಮ್ಮ ನಡೆ ನುಡಿಯಲ್ಲಿ ಅರಳುವ ಮಂದಾರ ಕುಸುಮ.
ಹೃದಯ ಕಮಲ ಅರಳಬೇಕಾದರೆ, ಪ್ರೀತಿಯ ಸಿಂಚನ, ಪ್ರೇಮದ ಚುಂಬನ ಬೇಕು. ನಾವು ಯಾರನ್ನಾದರೂ ಪ್ರೀತಿಸೋದು ಸುಂದರ; ಯಾರಾದರೂ ನಮ್ಮನ್ನು ಪ್ರೀತಿಸೋದು ಇನ್ನೂ ಸುಂದರ; ಆದರೆ ನಾವು ಪ್ರೀತಿಸುವವರೇ ನಮ್ಮನ್ನು ಪ್ರೀತಿಸೋದು ಅತಿ ಸುಂದರ! ಪ್ರೀತಿ ಎಂಬುದು ನೀಡುವ ಶಕ್ತಿ ಇಲ್ಲದವರಿಗೆ ನಾಮ ಪದ; ನೀಡುವ ಶಕ್ತಿ ಇದ್ದವರಿಗೆ ಕ್ರಿಯಾ ಪದ. ನಿಜವಾದ ಪ್ರೀತಿ ನೀಡುವುದರಲ್ಲಿದೆ; ಪಡೆಯುವುದರಲ್ಲಿ ಅಲ್ಲ. ಇದನ್ನು ಅನುಭವಿಸಿ ಆನಂದಿಸಬೇಕೇ ಹೊರತುವಿವರಿಸಲಾಗದು! ಆದುದರಿಂದ ನಮ್ಮ ಪ್ರೀತಿ ಪ್ರತಿಫಲಾಪೇಕ್ಷೆ ಇಲ್ಲದ ನಿಷ್ಕಾಮ ಪ್ರೀತಿಯಾಗಿರಬೇಕು. ಆಗಲೇ ಅದು ದೈವೀ ಸ್ವರೂಪವನ್ನು ಪಡೆಯುತ್ತದೆ. ಏನೋ ಲೋಭ – ಲಾಭಗಳ ದೃಷ್ಟಿಯನ್ನಿಟ್ಟುಕೊಂಡು, ಮಾಡಿದ ಸಕಾಮ ಪ್ರೀತಿ ಒಂದು ವ್ಯವಹಾರವೆನಿಸುತ್ತದೆ.
ಅದು ಬಹಳ ಕಾಲ ಬದುಕದು; ನಿಷ್ಕಾಮ ನಿಷ್ಕಳಂಕ ಪ್ರೀತಿ ಅಷ್ಟು ಬೇಗ ಅಲುಗದು. ಕೆಲವರು ಇತರರಿಗೆ ಎಲ್ಲವನ್ನೂ ಕೊಡುತ್ತಾರೆ. ಆದರೆ ಪ್ರೀತಿ ವಿಶ್ವಾಸ ಗಳನ್ನು ಕೊಡಲು ಮರೆಯುತ್ತಾರೆ. ಏನು ಕೊಟ್ಟರೇನು? ಎಷ್ಟು ಕೊಟ್ಟರೇನು? ಪ್ರೀತಿ ವಿಶ್ವಾಸಗಳಿಲ್ಲದ ಮೇಲೆ! ಕೆಲವು ಮನೆಗಳಲ್ಲಿ ಹೆತ್ತವರು ಮಕ್ಕಳಿಗೆ ಎಲ್ಲ ತರದ ಸೌಕರ್ಯ ಸೌಲಭ್ಯಗಳನ್ನು ಕೊಡುತ್ತಾರೆ; ಏನಾದರೂ ಮಾಡಿ, ಹೇಗಾದರೂ ಮಾಡಿ, ಅವರ ಹೆಸರಲ್ಲಿ ಆಸ್ತಿ, ಹಣ ಮಾಡಿಡುತ್ತಾರೆ; ಆದರೆ ಮಕ್ಕಳಿಗೆ ಅವಶ್ಯವಾದ ಪ್ರೀತಿಯನ್ನು ಕೊಡಲು ಮರೆಯುತ್ತಾರೆ. ಕೇವಲ ಧನಬಲದಿಂದ ಮಕ್ಕಳನ್ನು ಬೆಳೆಸಲಾಗದು; ಪ್ರೀತಿಯ ಸಿಂಚನವೂ ಬೇಕು; ಪ್ರೇಮದ ಅಪ್ಪುಗೆಯೂ ಬೇಕು.
ಅಂತೆಯೇ ವೃದ್ಧರಿಗೆ ಬರೇ ಊಟ ಉಪಚಾರಗಳಿದ್ದರೆ ಮಾತ್ರ ಸಾಲದು; ಮಕ್ಕಳ, ಮೊಮ್ಮಕ್ಕಳ ಒಲುಮೆಯೂ ಬೇಕು. ದಂಪತಿಗಳಿಗೂ ಅಷ್ಟೇ; ದೊಡ್ಡ ದೊಡ್ಡ ಮನೆಗಳಿದ್ದರೆ, ಮೆತ್ತನೆಯ ಪಲ್ಲಂಗವಿದ್ದರೆ ಮಾತ್ರ ಸಾಲದು; ಪ್ರೀತಿ ಪ್ರಣಯದ ಗಾಳಿಯೂ ಹರಿದಾಡಬೇಕು. ‘ಯಾರಿರಲಿ, ಇರದಿರಲಿ ನಾನಿಲ್ಲವೇ’ ಎಂದು ಮಡದಿ ಅಂದಾಗ ‘ನೀನಿಲ್ಲದೆ ಕ್ಷಣವೊಂದು ನಾನಿರಲಾರೆ’ ಎಂದು ಗಂಡ ಅಂದರೆ, ಅದುವೇ ಪರಿಶುದ್ಧವಾದ ಪ್ರೀತಿ. ಪ್ರೀತಿಯನ್ನು ಶಬ್ದಗಳ ಮೂಲಕವೇ ಹೇಳಬೇಕೆಂದಿಲ್ಲ; ಅದನ್ನು ವ್ಯಕ್ತಪಡಿಸಲು ನಾನಾ ವಿಧಾನಗಳಿವೆ.
ಅಂತೆಯೇ ನಮ್ಮನ್ನು ನಿಜವಾಗಿ ಪ್ರೀತಿಸುವವರಿಗೆ, ಒಮ್ಮೊಮ್ಮೆ ನಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುವ ಹಕ್ಕು ಕೂಡಾ ಇದೆ ಅನ್ನೋದನ್ನು ಮರೆಯಬಾರದು.ಒಟ್ಟಿನಲ್ಲಿ ಇಬ್ಬರೂ ಸ್ಪಽಸಿ, ಸೋಲುವ ಆಟವೆಂದರೆ ಮದುವೆ; ಆದರೆ, ಗೆಲ್ಲುವ ಆಟವೆಂದರೆ ಪ್ರೀತಿ. ಇತರರನ್ನು ಪ್ರೀತಿಸುವ ಇಲ್ಲವೇ ಅವರ ಸ್ನೇಹವನ್ನುಗಳಿಸುವ ಅವಕಾಶಗಳು ಜೀವನದಲ್ಲಿ ಪದೇ ಪದೆ ಬರೋದಿಲ್ಲ; ಬಂದಾಗ ಬಿಡಬಾರದು. ಕಾರಣ ಎಲ್ಲವೂ ಸಾಧ್ಯ ಪ್ರೀತಿಯ ಬಲದಿಂದ! ಒಟ್ಟಿನಲ್ಲಿ ಅಪ್ಪಿ ಕೊಂಡಷ್ಟು ಆಪ್ತರಾಗುವ ಆತ್ಮೀಯತೆ ಇರಲಿ; ಹಚ್ಚಿಕೊಂಡಷ್ಟು ಹೆಚ್ಚಾಗುವ ಹುಚ್ಚು ಪ್ರೀತಿ ಇರಲಿ. ಆಗಲೇ ಬದುಕು ಸುಂದರ. ಆದರೆ ನೆನಪಿರಲಿ, ಪ್ರೀತಿ– ಸ್ನೇಹವೆನ್ನುವುದು ದೀಪ ಇದ್ದಹಾಗೆ; ಹಚ್ಚೋದು ಸುಲಭ ಆದರೆ, ಆರದ ಹಾಗೆ ಕಾಪಾಡಿಕೊಳ್ಳೋದು ಅಷ್ಟು ಸುಲಭವಲ್ಲ!.