ಬರಹ; ಸುಲಭ ಹಾಗೂ ಸರಳವಾಗಬೇಕು
ಅಭಿಮತ
ಪ್ರೊ.ಸಿದ್ದು ಯಾಪಲಪರವಿ
.@.
ನಾವೇಕೆ ಬರೆಯಬೇಕು? ನಾವು ಬರೆದದ್ದು ಇತರರು ಯಾಕೆ ಓದಬೇಕು? ಯಾರು ಓದುತ್ತಾರೆ? ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ. ಹಾಗೆ ಹಾಕಿಕೊಳ್ಳದೇ ಬರೆಯುತ್ತೇವೆ. ಇತರರು ಓದಲಿ, ಬಿಡಲಿ ಎಂಬ ತಾತ್ಸಾರ ಭಾವ. ಅದಕ್ಕಾಗಿ ನಮ್ಮ ಬರಹದಲ್ಲಿ ಜೀವಂತಿಕೆ ಇರುವುದಿಲ್ಲ. ಜೀವಂತಿಕೆ ಇರಬೇಕೆಂದರೆ ಸರಳ ವಾಗಿ ಆಲೋಚಿಸಬೇಕು. ಅಷ್ಟೇ ಸರಳವಾಗಿ ಬರೆಯಬೇಕು ಕೂಡ! ಸರಳವಾಗಿ ಬದುಕಲು ಅಸಾಧ್ಯವಾದರೂ!
ನಮ್ಮ ದಾರ್ಶನಿಕರು, ಶರಣರು, ಮತ್ತು ದಾಸರು ಬರೆದಷ್ಟು ಸರಳವಾಗಿ ನಮಗೆ ಬರೆಯಲು ಆಗದೇ ಇರಲು ಕಾರಣ ನಾವು ಸರಳವಾಗಿ ಬದುಕಲಾಗುತ್ತಿಲ್ಲ. ನಮಗೆ ಅನೇಕ ಗೊಂದಲಗಳಿವೆ, ಆಸೆ, ದುರಾಸೆಗಳಿವೆ. ಆದರೆ ಹೇಳಿಕೊಳ್ಳದೇ ಒzಡಿ ನಮ್ಮ ಬರಹವನ್ನು ಕೂಡ ಒದ್ದಾಡುವಂತೆ ಮಾಡುತ್ತೇವೆ. ಸಾವಿರಾರುವರ್ಷಗಳ ಹಿಂದೆ ಬದುಕಿದ ಶರಣರು, ಸಂತರಿಗೆ ಕಟ್ಟಳೆಗಳು ಮತ್ತು ಆಸೆಗಳು ಇರಲಿಕ್ಕಿಲ್ಲ ಅಂದುಕೊಳ್ಳೋಣ. ಆದರೆ ಇಪ್ಪತ್ತನೆಯ ಶತಮಾನದಲ್ಲಿ ಬದುಕಿದ ಓಶೋ, ಉರ್ಫ್‌ ಆಚಾರ್ಯ ರಜನೀಶ್ ಎಷ್ಟೊಂದು ಸರಳವಾಗಿ ಬರೆದರು, ಮಾತನಾಡಿದರು, ಅವರು ಹೇಳಿದ ಸತ್ಯಗಳನ್ನು ನಮ್ಮ ಧಾರ್ಮಿಕ ವ್ಯವಸ್ಥೆ ಒಪ್ಪಿ ಕೊಳ್ಳದೆ ಅವರಿಗೆ ‘ಸೆಕ್ಸ್ ಗುರು’ ಪಟ್ಟ ಕಟ್ಟಿತು. ಆದರೆ ಇಂದು ನಮಗೆ ತೋಚಿದ ಸಂಗತಿಗಳನ್ನು ಸರಳವಾಗಿ, ನೇರವಾಗಿ ಹೇಳಲಾಗದಂಥ ಸ್ಥಿತಿ ತಲುಪಿದ್ದೇವೆ.
ಗಾಂಧೀಜಿಯವರ ಜತೆಗೆ ಸಾರ್ವಜನಿಕ ವ್ಯಕ್ತಿಗಳ ಸರಳತೆಯೂ ಸತ್ತು ಹೋಯಿತು. ಗಾಂಧೀಜಿಯವರನ್ನು ಕೊಂದಂತೆ ಸರಳತೆಯನ್ನು ಕೊಲ್ಲಲಾಯಿತು. ಗಾಂಧೀಜಿಯವರು ಕೂಡ ಸರಳವಾಗಿ ಬದುಕಲಿಲ್ಲ, ದೊಡ್ಡ, ದೊಡ್ಡ ಉದ್ಯಮಿಗಳ ಆಸರೆಯಲ್ಲಿ ಬದುಕಿದರು ಎಂಬ ಅರ್ಥ ಬರುವ ಮಾತುಗಳನ್ನಾಡಲಾರಂಭಿಸಿ ದ್ದೇವೆ. ನಾವು ವಿದ್ಯಾರ್ಥಿಗಳಾಗಿದ್ದಾಗ ರೇಡಿಯೋದಲ್ಲಿ ಗಾಂಽ ಸ್ಮೃತಿ ಕೇಳಿ ಖುಷಿ ಪಡುತ್ತಿದ್ದೆವು.
ಏಕೆಂದರೆ ನಮಗೆ ಯಾವುದೇ ರೀತಿಯ ಸೈದ್ಧಾಂತಿಕ ಗೊಂದಲವಾಗಲಿ, ದ್ವೇಷವಾಗಲಿ ಇರದ ಕಾಲವದು. ಈಗ ಕಾಲ ತುಂಬಾ ಬದಲಾಗಿದೆ. ದೊಡ್ಡವರ, ಇತಿಹಾಸ ನಿರ್ಮಿಸಿ ಹೋದವರ ಇತಿಹಾಸ ಬದಲಾಯಿಸುವಷ್ಟು ನಾವು ಜಾಣರಾಗಿ ಬಿಟ್ಟಿದ್ದೇವೆ. ನಮ್ಮ ಜಾಣತನವನ್ನು ಒಪ್ಪಿಕೊಳ್ಳುವವರ ದಂಡನ್ನು ಸೃಷ್ಟಿ ಮಾಡಿದ್ದೇವೆ. ನಮಗೆ ನಾವೇ ಸೆಲೆಬ್ರಿಟಿಗಳಾಗಿ ಮೆರೆಯುತ್ತಿದ್ದೇವೆ. ನಮ್ಮಷ್ಟಕ್ಕೆ ನಾವೇ ಎ ಗೊತ್ತಿರುವ ಸರ್ವಜ್ಞರಾಗಿದ್ದೇವೆ ಎಂದು ಹೇಳಿಕೊಳ್ಳುವುದು ಸ್ವತಃ ಸರ್ವಜ್ಞನಿಗೆ ಅವಮಾನ ಮಾಡಿದಂತೆ.
ಆಧುನಿಕ ವಚನಗಳು, ಆಧುನಿಕ ಕಗ್ಗಗಳನ್ನು ಬರೆಯುವ ಸಂಪ್ರದಾಯ ಶುರುವಾಗಿದೆ. ನಾವು ಬರೆಯುವುದಾದರೆ ನಮ್ಮದೇ ಆದ ಪ್ರಕಾರದಲ್ಲಿ ಬರೆಯೋಣ, ಆಧುನಿಕತೆ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ವಚನಗಳನ್ನು ಮತ್ತು ಕಗ್ಗಗಳನ್ನು ದಯವಿಟ್ಟು ಬರೆಯುವುದು ಬೇಡ. ಏಕೆಂದರೆ ವಚನಕಾರರು ಬದುಕಿದಂತೆಬರೆದರು, ಬರೆದಂತೆ ಬದುಕಿದರು. ಆದರೆ ನಾವು ನಮ್ಮ ಕಡಿಮೆ ಜೀವನಾನುಭವದ ಆಧಾರದ ಮೇಲೆ ಬರೆಯುತ್ತೇವೆ ಎಂಬ ಸಾತ್ವಿಕ ಎಚ್ಚರ ಇರಬೇಕು ಎಂದು ನಮ್ರವಾಗಿ ನಿವೇದಿಸಿಕೊಳ್ಳುತ್ತೇನೆ. ನೂರು ಜನ್ಮಕ್ಕಾಗುವಷ್ಟು ನಮ್ಮ ಹಿರಿಯರು ಬರೆದು ಹೋಗಿದ್ದಾರೆ. ಅವರಷ್ಟು ಗೇಯತೆಯಿಂದ ಭಾವಪೂರ್ಣವಾಗಿಬರೆಯಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಆಧುನಿಕ ಕೃತಕ ಯುಗದಲ್ಲಿ ಬದುಕುವ ನಮಗೆ ಆ ಭಕ್ತಿ ಭಾವದ ಗೇಯತೆ ಅಷ್ಟೊಂದು ಸುಲಭವಾಗಿ ಒಲಿಯುವುದಿಲ್ಲ ಕೂಡ. ಆಧುನಿಕ ವಚನಗಳನ್ನು ಹಾಡಿನ ರೂಪದಲ್ಲಿ ಆಲಿಸುವಾಗ ಇವು ಶರಣರು ಬರೆದ ವಚನಗಳಲ್ಲ ಎಂದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಹಾಗಿರುವಾಗ, ಅವರು ಹೇಳಿದ ಸುಮಧುರ ಸಾಲುಗಳನ್ನು ನಮಗೆ ಸರಿ ಕಂಡಂತೆ ವಾಚ್ಯವಾಗಿ ಬರೆಯುವುದು ಯಾವ ನ್ಯಾಯ. ಗಂಭೀರವಾದ ವಿಷಯವನ್ನು ಸರಳವಾಗಿ ಹೇಳಿದರೆ ಅರ್ಥವಾಗುತ್ತದೆ, ಹೇಳುವ ವಿಷಯವನ್ನು ಸುತ್ತಿ ಬಳಸಿ ಹೇಳಿ ಕೇಳುಗರಿಗೆ, ಓದುಗರಿಗೆ ಬೇಸರ ಮೂಡಿಸಬಾರದು. ಇತ್ತೀಚಿಗೆ ‘ಕ್ಲಬ್ ಹೌಸ್’ ಎಂಬ ಹೊಸ ಮಾತಿನ ಮನೆ ಹುಟ್ಟಿಕೊಂಡು, ನೂರಾರು ಗುಂಪುಗಳು ದಾಂಗುಡಿ ಆರಂಭಿಸಿವೆ. ಅಲ್ಲಿನ ಅನೇಕ ಚರ್ಚೆಗಳನ್ನು ಕೇಳಿದ ಮೇಲೆ, ಬರಹ ದಂತೆ ಮಾತು ಮುತ್ತಿನ ಹಾರದಂತೆ ಇದ್ದರೆ ಛಂದ ಎನಿಸಿ, ಇಷ್ಟೆಲ್ಲ ಹೇಳ ಬೇಕೆನಿಸಿತು.