ಕರೋನಾ ಮೂರನೇ ಅಲೆ ಮಕ್ಕಳನ್ನೇ ಕಾಡುವುದೇ ?
ಅವಲೋಕನ
ಡಾ.ಕರವೀರಪ್ರಭು ಕ್ಯಾಲಕೊಂಡ
@.
ಪ್ರವಾಸ, ಯಾತ್ರೆ, ಧಾರ್ಮಿಕ ಉತ್ಸವಗಳು ನಮಗೆ ಬೇಕು ಎಂಬುದು ನಿಜ. ಆದರೆ, ಇನ್ನೂ ಕೆಲವು ತಿಂಗಳು ಇವುಗಳನ್ನು ಮುಂದೂಡಬೇಕು. ಸರಿಯಾಗಿ ಎಲ್ಲರಿಗೂ ಲಸಿಕೆ ಸಿಗದೆ, ಸಾಮೂಹಿಕವಾಗಿ ಜನರು ಒಂದೆಡೆ ಸೇರಲು ಅವಕಾಶ ಮಾಡಿಕೊಟ್ಟರೆ ಅಲ್ಲಿ ಸೇರುವ ಜನರೆಲ್ಲ 3ನೇ ಅಲೆಗೆ ಸೂಪರ್ ಸ್ಪ್ರೆಡರ್‌ಗಳಾಗಬಹುದು. ಕಳೆದ ಒಂದೂವರೆ ವರ್ಷದ ಅನುಭವದಲ್ಲಿ ಹೇಳುವುದಾದರೆ, ಎಲ್ಲರಿಗೂ ಲಸಿಕೆ ನೀಡುವುದು ಹಾಗೂ ಕೋವಿಡ್ ಸನ್ನಡತೆಯನ್ನು ಕಾಪಾಡಿಕೊಳ್ಳುವು ದರಿಂದ3ನೇ ಅಲೆಯ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.
ಕರೋನಾ ಕಾಟ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ವೈದ್ಯ ವಿಜ್ಞಾನಿಗಳು ಚಾಪೆ ಕೆಳಗೆ ನುಗ್ಗಿದರೆ, ಕರೋನಾ ವೈರಸ್ ರಂಗೋಲಿ ಕೆಳಗೆ ನುಗ್ಗುವುದನ್ನು ರೂಢಿಸಿ ಕೊಂಡಿದೆ. ರೂಪಾಂತರಗೊಳ್ಳುತ್ತಿದೆ. ತ್ವರಿತವಾಗಿ ಹರಡುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದೆ. ಸೋಂಕಿನ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಕೋವಿಡ್ ಮಾರಿಯ ಎರಡನೇ ಅಲೆ, ಪ್ರಾರಂಭದಲ್ಲಿ ಅಪ್ಪಳಿಸುವುದೇ ಅನುಮಾನವೆಂದರು ಮಂತ್ರಿ ಮಹೋದರರು. ದಿನಗಳೆದಂತೆ ಮುಖವಾಡ ಬದಲಿಸಿದರು.ಬಂದರೂ ಬರಬಹುದು. ಅಂಜಿಕೆ, ಆತಂಕ ಬೇಡ, ಎಚ್ಚರಿಕೆ ಇರಲಿ ಎಂದು ಹೇಳಿದರು. ಬ್ರಿಟನ್‌ನಲ್ಲಿ ರೂಪಾಂತರಿ ಕರೋನಾ ಹಾವಳಿ ಹೂಂಕರಿಸಿದಾಗ, ಅಲ್ಲಿಯಭಾರತೀಯರು ಜೀವ ಕೈಯಲ್ಲಿ ಹಿಡಿದು ಸ್ವದೇಶಕ್ಕೆ ಓಡಿ ಬಂದರು.
ಆಗ, ನಮ್ಮ ಆಡಳಿತ ಯಂತ್ರ ಜಡತ್ವದಿಂದ ಹೊರ ಬರಲಿಲ್ಲ. ಬಂದವರು ದೇಶದ ನಾನಾ ಕಡೆ ನುಗ್ಗಿದರು. ತಗ್ಗಿದ್ದ ಕರೋನಾ ಸೋಂಕಿನ ಪ್ರಕರಣಗಳು ದಿನ ದಿಂದ ದಿನಕ್ಕೆ ಹೆಚ್ಚಾದಾಗ ದೇಶ ಎಚ್ಚರಗೊಂಡಿತು. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೊಡುವ ಜಾಯಮಾನದವರು ನಾವು! ಮೊದಲನೆಯ ಅಲೆಯಲ್ಲಿ ಮಾಡಿದ ತಪ್ಪುಗಳು ಮರುಕಳಿಸಿದವು. ಕರೋನಾ ಕೇಕೆ ಮುಗಿಲು ಮುಟ್ಟಿತು. ಜನ ತಬ್ಬಿಬ್ಬಾದರು. ಸಾರ್ವಜನಿಕರು ಕೋವಿಡ್ ನಿಯಮ ಗಳನ್ನು ಗಾಳಿಗೆ ತೂರಿದರು. ಮದುವೆ ಸಮಾರಂಭಗಳು ಅದ್ದೂರಿ ಯಾಗಿ ನಡೆದವು. ಸಭೆ, ಸಮಾರಂಭಗಳು ಜರುಗಿದವು.
ಚುನಾವಣೆ ಪ್ರಚಾರ ಆದವು. ನಮ್ಮ ನಾಯಕರೇ ಜನರನ್ನು ಕೂಡಿಸಿದರು. ಭಾಷಣ ಬಿಗಿದರು. ಕೂಡಿದ ಜನ ಕೂಗಾಡಿದರು. ಕುಣಿದಾಡಿದರು. ಸಾರ್ವಜನಿಕ ಅಂತರ ಅಡಗಿ ಹೋಗಿತ್ತು. ಮುಖದ ಮೇಲೆ ಮಾಸ್ಕ್ ಇರಲಿಲ್ಲ. ಸಾಧು ಸಂತರಿಂದ ಕುಂಬಮೇಳ, ಹೋಮ – ಹವನ ನಡೆದವು. ಸೋಂಕಿನ ಪ್ರಕರಣ ಹೆಚ್ಚಿತು. ಲಾಕ್ ಡೌನ್ ಹೇರಲು ಸರಕಾರ ಮೀನಾಮೇಷ ಮಾಡಿತು. ಗೊಂದಲದ ಗೂಡೇ ಸೃಷ್ಟಿಯಾಯಿತು!
ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಯಿತು. ಅದರ ಬಗ್ಗೆ ಅಪಸ್ವರ ಎದ್ದಿತು. ಅಪಪ್ರಚಾರವೂ ಆಯಿತು. ಹಿರಿಯ ನಾಗರಿಕರಿಗೆ, ಕರೋನಾ ವಾರಿಯರ್ಸ್‌ಗೆ ಆದ್ಯತೆ ಮೇಲೆ ಲಸಿಕೆ ನೀಡಲಾಯಿತು. ಮೊದಮೊದಲು ಲಸಿಕೆ ತಗೆದುಕೊಳ್ಳಲು ಜನ ಹಿಂದೇಟು ಹಾಕಿದರು. ಲಸಿಕಾ ಅಭಿಯಾನ ಮುಗ್ಗರಿಸಿತು. ಲಸಿಕೆಯನ್ನು ಭಾರತದ ಸುತ್ತಮುತ್ತಲಿನ ದೇಶಗಳಿಗೆ ರಫ್ತು ಮಾಡಲಾಯಿತು. ಹಂತ ಹಂತವಾಗಿ45+ , 18 -45ವಯೋಮಾನದವರಿಗೆ ಎರಡನೆ ಮತ್ತು ಮೂರನೆ ಹಂತದಲ್ಲಿ ಲಸಿಕೆ ನೀಡಿಕೆ ಆರಂಭವಾಯಿತು.
ನಮ್ಮಲ್ಲಿಯ ಜನರಿಗೆ ಲಸಿಕೆ ಮಹತ್ವದ ಬಗ್ಗೆ ಜ್ಞಾನೋದಯವಾಯಿತು. ಲಸಿಕೆ ಪಡೆಯಲು ದಿನಗಟ್ಟಲೇ ಸಾಲುಸಾಲಾಗಿ ನಿಂತರು. ಲಸಿಕೆ ಸಿಗದೆ ಇದ್ದಾಗ ಶಪಿಸಿ ಮನೆಗೆ ಬಂದರೂ, ಮಾರನೇ ದಿನ ಹೋಗಲು ಮರೆಯಲಿಲ್ಲ. ಎಲ್ಲಾ ಕಡೆ ಗದ್ದಲ. ನಿಗದಿ ಪಡಿಸಿದ ದಿನಕ್ಕೆ ಲಸಿಕೆ ಬರಲಿಲ್ಲ. ಜನ ರೊಚ್ಚಿಗೆದ್ದರು. ಕೋರ್ಟ್ ಮಧ್ಯೆ ಪ್ರವೇಶಿಸಿ, ಸರಕಾರಕ್ಕೆ ಮಾರ್ಗಸೂಚಿ ನೀಡಲು ನಿರ್ದೇಶಿಸಿತು. ಮೊದಲನೇ ಅಲೆಯಲ್ಲಿ ಹಿರಿಯನಾಗರಿಕರು ಹೆಚ್ಚು ಸಾವು ನೋವುಗಳನ್ನು ಕಂಡರು. ಬಹುಶಃ ಆ ವಯೋಮಾನ ದವರಲ್ಲಿ ಮಧುಮೇಹ, ಬಿಪಿ, ಕ್ಯಾನ್ಸರ್‌ನಂಥ ಭೀಕರ ಕಾಯಿಲೆಗಳ ಹಾವಳಿ ಹೆಚ್ಚು.
ಆ ವಯೋಮಾನದವರಲ್ಲಿ ರೋಗ ನಿರೋಧಕ ಶಕ್ತಿಯೂ ಕಡಿಮೆ. ಹೀಗಾಗಿ ಮೊದಲನೇ ಅಲೆಯ ಅಬ್ಬರವನ್ನು ಹಿರಿಯ ನಾಗರಿಕರ ಪರಿದಿಗೆ ಪರಿಮಿತಿಗೊಳಿಸಿತು.ಕರೋನಾ ಮೊದಲನೆ ಅಲೆಯ ಅಬ್ಬರ ತಗ್ಗಿದಂತೆ, ಜನ ಮೈ ಮರೆತರು. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರು. ಅಷ್ಟೋತ್ತಿಗಾಗಲೇ ಕರೋನಾ ವೈರಸ್ ರೂಪಾಂತರಗೊಂಡಿತ್ತು. ಹೊಸ ವೇಷ ತೊಟ್ಟಿತ್ತು. ಹೊಸ ಶಕ್ತಿ ಪಡೆದಿತ್ತು. ಮೈಮರೆತ ಜನರ ಮೇಲೆ ಮಾರುವೇಷದಲ್ಲಿ ದಾಳಿ ಮಾಡಿತು. ಸೋಂಕಿನ ತೀವ್ರತೆಗೆ, ವೇಗಕ್ಕೆ ಜನ ತತ್ತರಿಸಿ ಹೋದರು. ಹಿರಿಯ ನಾಗರಿಕರು ಆಗಲೇ ಎರಡು ಡೋಸ್ ಲಸಿಕೆ ಪಡೆದದ್ದರಿಂದ ಯುವಜನಾಂಗ ಲಸಿಕೆಯಿಂದ ವಂಚಿತರಾಗಿದ್ದರಿಂದ, ಕೋವಿಡ್ ನಿಯಮಗಳನ್ನು ನಿರ್ಲಕ್ಷಿಸಿದ್ದರಿಂದ ಯುವಕರಲ್ಲಿ ಸಾವು ನೋವುಗಳು ಹೆಚ್ಚಾದವು. ಈಗ ಆ ವಯೋಮಾನದವರಿಗೆ ಲಸಿಕೆ ನೀಡಿಕೆ ಪ್ರಾರಂಭವಾಗಿದೆ.
ಮಾರನೇ ಅಲೆ ಮಕ್ಕಳನ್ನೇ ಕಾಡುವುದೇ?:ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಕಿರಿಕಿರಿ ಮಾಡಬಹುದು ಎಂದು ಒಂದು ಅಂದಾಜು. ಆದರೆ, ಇದನ್ನು ಎಲ್ಲ ತಜ್ಞರು ಒಪ್ಪುತ್ತಿಲ್ಲ. ಇದೊಂದು ಊಹೆ ಅಷ್ಟೇ ! ಮಕ್ಕಳಿಗೆ ಇನ್ನೂ ಲಸಿಕೆ ಆವಿಷ್ಕಾರಗೊಂಡಿಲ್ಲ. ಅವರ ರೋಗ ನಿರೋಧಕ ಶಕ್ತಿಯೂ ಕಡಿಮೆ. ಈಗಾಗಲೇ ಕರೋನಾ ಮಧ್ಯ ವಯಸ್ಕರಿಗೆ ಮುತ್ತಿಗೆ ಹಾಕಿ ಮೆತ್ತಗೆ ಮಾಡಿರುವುದರಿಂದ ಮೂರನೇ ಅಲೆ ಮಕ್ಕಳನ್ನೇ ಗುರಿಯಾಗಿಟ್ಟುಕೊಳ್ಳಬಹುದು. ಆದರೆ ಹಾಗೆ ಆಗಬೇಕೆಂಬ ಕಡ್ಡಾಯ ನಿಯಮವೇನೂ ಇಲ್ಲ.
ಇಲ್ಲಿಯವರೆಗೆ ಯಾವ ಸಾಂಕ್ರಾಮಿಕಗಳಲ್ಲೂ ಈ ವಿಂಗಡನೆ ಕಂಡು ಬಂದಿಲ್ಲ. ಕರೋನಾ ಮೊದಲನೇ ಅಲೆಯು ಹಿರಿಯರಿಗೆ ಹೈರಾಣ ಮಾಡಿರಬಹುದು. ಹಾಗೆಂದು ಅದು ಯುವಕರನ್ನು, ಮಕ್ಕಳನ್ನು ಮಾತನಾಡಿಸು ವುದನ್ನು ಬಿಟ್ಟಿಲ್ಲ. ಎರಡನೇ ಅಲೆ ಅಬ್ಬರ ಯುವಕರ ಮೇಲೆ ಹೆಚ್ಚಾಗಿದ್ದರೂ, ಹಿರಿಯರನ್ನು, ಮಕ್ಕಳನ್ನು ಕಾಡದೇ ಬಿಟ್ಟಿಲ್ಲ. ಹೀಗಾಗಿ ಒಂದೊಂದು ಅಲೆಯನ್ನು ಒಂದೊಂದು ವಯೋಮಾನ ದವರಿಗಾಗಿ ಸೀಮಿತಗೊಳಿಸಲು ಬರುವುದಿಲ್ಲ.
ಹಿಂದಿನ ಎರಡೂ ಅಲೆಗಳ ವಿಶ್ಲೇಷಣೆ ಮಾಡಿದಾಗ, ಎರಡರಲ್ಲೂ ವೈರಸ್ ಎಲ್ಲ ವಯೋಮಾನದವರ ಮೇಲೂ ದಾಳಿ ಮಾಡಿದೆ. ಹಿರಿಯ ನಾಗರಿಕರಿಗೆ ಪ್ರತಿಶತ22ಜನರಿಗೆ ಮುತ್ತಿಗೆ ಹಾಕಿ ಮೆತ್ತಗೆ ಮಾಡಿದ್ದರೆ, ಮಕ್ಕಳಲ್ಲಿ ಇದರ ಪ್ರಮಾಣ ಕೇವಲ ಶೇ.೦.೩ರಷ್ಟು. ಇದು ನಮ್ಮ ದೇಶದಲ್ಲಷ್ಟೇ ಕಂಡು ಬಂದಿಲ್ಲ. ಬೇರೆ ಬೇರೆ ದೇಶಗಳಿಂದಲೂ ಇದೇ ರೀತಿಯ ಪರಿಣಾಮಗಳ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ – ಮೂರನೇ ಅಲೆಯಲ್ಲೂ, ವೈರಸ್ ಎಲ್ಲ ವಯೋಮಾನ ದವರನ್ನು ಕಾಡಬಹುದು.
ಆದರೆ, ಮಕ್ಕಳಿಗೆ ಈ ವರೆಗೂ ಲಸಿಕೆ ನೀಡಿಲ್ಲ ಮತ್ತು ಅವರಲ್ಲಿ ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುವುದರಿಂದ, ಮೂರನೇ ಅಲೆಗೆ ಕಾರಣೀಭೂತವಾಗಿರುವ ರೂಪಾಂತರಿ ವೈರಸ್ ಉಗ್ರ ಸ್ವರೂಪದ್ದಾಗಿರುವುದರಿಂದಾಗಿ ಮಕ್ಕಳಲ್ಲಿ ಇದರ ಕಾಟ ಹೆಚ್ಚಾಗಿ ಕಂಡು ಬರಬಹುದು. ಎರಡನೇ ಅಲೆಯಲ್ಲಿ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣದಲ್ಲಿ ಗಮನಾರ್ಹವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ, ಮೂರನೇ ಅಲೆ ಇದಕ್ಕಿಂತಲೂ ಹೆಚ್ಚಿಗೆ ಅಪಾಯಕಾರಿಯಾಗ ಬಹುದೆಂದುಅಂದಾಜಿಸಲಾಗಿದೆ.
ಭಾರತದ ‘ಏಜ್ ಪಿರಾಮಿಡ್’ ( ) ಮನಸ್ಸಿನಲ್ಲಿ ಇರಬೇಕು. ಜನಸಂಖ್ಯೆಯ ಪ್ರತಿಶತ40, 0 -18ವಯೋಮಾನ ದವರಿದ್ದು, ಅವರಿಗೆ ಲಸಿಕೆ ಕೊಟ್ಟಿಲ್ಲ. ನಾವು ಫೈಜರ್ ಲಸಿಕೆ ಪಡೆಯುವಲ್ಲಿ ಯಶಸ್ವಿಯಾದರೆ12-18 ವಯೋಮಾನ ದವರನ್ನು, ಗರ್ಭಿಣಿಯರನ್ನು ಲಸಿಕೆ ನೀಡಿ ರಕ್ಷಿಸಬಹುದು. ನಗರ ಪ್ರದೇಶದಲ್ಲಿ ತುಂಬಾ ಜನರಿಗೆ ಈಗಾಗಲೇ ಕೋವಿಡ್ ಬಂದು ಹೋಗಿದೆ. ಗ್ರಾಮೀಣ ಇದು ಈಗಾಗಲೇ ಪಾದಾರ್ಪಣೆ ಮಾಡಿದೆ. ಮೂರನೇ ಅಲೆಯು ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಹಾವಳಿ, ಹಾಹಾಕಾರ ಎಬ್ಬಿಸುವ ಸಾಧ್ಯತೆ ಇದೆ. ಈ ಪ್ರದೇಶಗಳಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಲಸಿಕೆ ನೀಡಿಕೆಗೆ ಒತ್ತು ಕೊಡಬೇಕು. ಕ್ರಿಯಾ ಯೋಜನೆ ಈಗಲೇ ಸಿದ್ಧಪಡಿಸಿ ಕೊಳ್ಳಬೇಕು. ರೋಗ ತಡೆಗೆ ನಮ್ಮಲ್ಲಿರುವ ಬ್ರಹ್ಮಾಸ್ತ್ರವೆಂದರೆ ಲಸಿಕೆ. ಹೆಚ್ಚು ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡರೆ ಮೂರನೇ ಅಲೆಯ ಅಟ್ಟಹಾಸಕ್ಕೆ ಅಡ್ಡಿಯೊಡ್ಡಬಹುದು.
ವೈದ್ಯರಿಗೆ, ಸಹಾಯಕ ಸಿಬ್ಬಂದಿಗೆ ಸಾಕಷ್ಟು ತರಬೇತಿ ಕೊಟ್ಟು ಸಜ್ಜುಗೊಳಿಸಬೇಕು. ‘ಸ್ಟೇ ಹೋಂ, ಸ್ಟೇ ಸೇಫ್’ ಎನ್ನುವುದಕ್ಕಿಂತ, ‘ಸ್ಟೇ ಆಕ್ಟೀವ್, ಬಿ ಸೇಫ್’ ಎಂಬುದು ಮುಂಬರುವ ದಿನಗಳಲ್ಲಿಯ ಮಂತ್ರ ಆಗಬೇಕು. ಎಲ್ಲರೂ ಮನೆಯಲ್ಲಿ ಕುಳಿತು ‘ಮನೆಯೇ ಮಂತ್ರಾಲಯ’ಎಂದು ಜಪಿಸಿದರೆ, ಜೀವನ ನಡೆಯುವುದಿಲ್ಲ. ಬದುಕಿನ ಬಂಡಿ ಸಾಗಿಸಲು ದುಡಿಯಲು ಹೊರಗೆ ಹೋಗುವುದು ಅನಿವಾರ್ಯವಾಗುತ್ತದೆ.
ಮೂರನೇ ಅಲೆಗೆ ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕು. ಸಾಮಾನ್ಯ ಹಾಸಿಗೆ ಬದಲು ಐಸಿಯು ಹಾಸಿಗೆಗಳ ಹೆಚ್ಚಳಕ್ಕೆ ಗಮನಕೊಡಬೇಕು. ಲಾಕ್ ಡೌನ್ ಸಡಿಲಿಕೆಯ ನಂತರವೂ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಹಾಗೂ ಸುರಕ್ಷತಾ ನಿಯಮ ಪಾಲನೆ ಕಡ್ಡಾಯವಾಗಬೇಕು. ಮಾಸ್ಕ್ ಧರಿಸಬೇಕು. ಸೋಂಕಿನ ಸೌಮ್ಯ ಲಕ್ಷಣಗಳನ್ನು ಹೊಂದಿರುವ ಸೋಂಕಿತರಿಗೆ ಆಟದ ಮೈದಾನ, ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಬೇಕು. ಈಗಾಗಲೇ ಬಹುತೇಕರಲ್ಲಿ ಕೋವಿಡ್ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚುತ್ತಿದೆ.’ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ’ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಮಧ್ಯವಯಸ್ಕರು ಮತ್ತು ಹಿರಿಯ ನಾಗರಿಕರ ಮೇಲೆಯೂ ಮೂರನೇ ಅಲೆ ಪ್ರಭಾವ, ಪರಿಣಾಮ ಬೀರಬಹುದು.
ಜೂನ್ ಅಂತ್ಯಕ್ಕೆ ಎರಡನೇ ಅಲೆಯು ನಿಯಂತ್ರಣಕ್ಕೆ ಬಂದಿದೆ. ಆದರೆ, ಮೂರು ತಿಂಗಳ ಬಳಿಕ ಮೂರನೇ ಅಲೆ ಕಾಣಿಸಿಕೊಳ್ಳುವುದು ನಿಶ್ಚಿತ. ಮೂರನೇ ಅಲೆಕಾಣಿಸಿಕೊಳ್ಳುವ ವೇಳೆಗೆ ಮಕ್ಕಳಿಗೆ ಲಸಿಕೆ ವಿತರಣೆ ಪ್ರಾರಂಭವಾಗದಿದ್ದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿ, ಸಮಸ್ಯೆ ಎದುರಿಸಬೇಕಾಗ ಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ ತಜ್ಞರು. ಎರಡನೇ ಅಲೆ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದ90ದಿನಗಳ ಬಳಿಕ ಮೂರನೇ ಅಲೆ ಪ್ರಾರಂಭ ವಾಗಲಿದೆ.
ಹೀಗಾಗಿ ‘ಚಳಿಗಾಲದಲ್ಲಿ ಈ ವೈರಸ್ ಮತ್ತೆ ರೂಪಾಂತರಗೊಂಡು ಕಾಣಿಸಿಕೊಳ್ಳಬಹುದು. ಅದರ ತೀವ್ರತೆ ಮತ್ತು ಹರಡುವಿಕೆಯ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಇದರ ವರ್ತನೆ ಮತ್ತು ರೋಗ ಎದುರಿಸಲು ಮಾಡಿಕೊಳ್ಳುವ ಸಿದ್ಧತೆಯನ್ನು ಅವಲಂಬಿಸಿರುತ್ತದೆ’ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹೇಳಿರುವರು. ಬಹುಶಃ ಅಕ್ಟೋಬರ್ – ಡಿಸೆಂಬರ್ ಹೊತ್ತಿಗೆ ಮೂರನೇ ಅಲೆಯ ಆತಂಕವೂ ಎದುರಾಗಬಹುದು. ಯುರೋಪ್‌ನಲ್ಲಿ ಈಗ ಮೂರನೇ ಅಲೆ ಇದೆ. ಅಮೆರಿಕದಲ್ಲಿ ನಾಲ್ಕನೇ ಅಲೆ. ಸಾಂಕ್ರಾಮಿಕದಲ್ಲಿ ಅಲೆಗಳಿಂದ ತಪ್ಪಿಸಿಕೊಳ್ಳಲಾಗದು. ಜನರಿಗೆ ಎಷ್ಟು ಬೇಗ ಲಸಿಕೆ ಹಾಕಿಸಲಾಗುವುದು ಎಂಬುದರ ಮೇಲೆ ಸೋಂಕು ತಡೆಯು ಅವಲಂಬಿತ. ನಮ್ಮ ದೇಶದಲ್ಲಿ ವಯಸ್ಕರ ಒಂದು ವರ್ಗಕ್ಕೆ ಮಾತ್ರ ಲಸಿಕೆ ಹಾಕಲಾಗಿದೆ.
ಈಗಿನ ಲಸಿಕೆ ಅಭಿಯಾನವು ಪೂರ್ಣಗೊಳ್ಳಲು ಮೂರರಿಂದ ಆರು ತಿಂಗಳು ಬೇಕು. ಆ ಹೊತ್ತಿಗೆ ಶೇ.50ರಷ್ಟು ಜನರಿಗೆ ಮಾತ್ರ ಲಸಿಕೆ ಹಾಕಲಾಗಿರುತ್ತದೆ. ಇವರಲ್ಲಿ ಯಾರೂ ಮಕ್ಕಳಲ್ಲ. ಏಕೆಂದರೆ ಮಕ್ಕಳ ಲಸಿಕೆ ಇನ್ನೂ ಸಿದ್ದವೇ ಆಗಿಲ್ಲ. ಸೋಂಕಿಗೆ ಒಳಗಾಗುವ ಅಪಾಯ ಇರುವ ಮಕ್ಕಳ ಬಗ್ಗೆ ನಾವು ಮಾತಾಡು ತ್ತಿದ್ದೇವೆ. ಸೆರೊ ಸಮೀಕ್ಷೆಗಳ ಪ್ರಕಾರ ದೇಶದಲ್ಲಿರುವ ಮಕ್ಕಳ ಪೈಕಿ ಶೇ.೨೫ರಷ್ಟು ಮಕ್ಕಳು ಕಳೆದ17ತಿಂಗಳಲ್ಲಿ ಸೋಂಕಿಗೆ ತೆರೆದುಕೊಂಡಿದ್ದಾರೆ. ಸುಮಾರು ಶೇ.60ರಷ್ಟು ಮಕ್ಕಳು ಸೋಂಕಿಗೆ ಒಳಗಾಗುವ ಅಪಾಯ ಹೊಂದಿದ್ದಾರೆ.
ಸಂಖ್ಯೆಯಲ್ಲಿ ಹೇಳುವುದಾದರೆ ಇದು18ಕೋಟಿ. ಶೇ.20ರಷ್ಟು ಮಕ್ಕಳು ಸೋಂಕಿಗೆ ಒಳಗಾಗಬಹುದು ಎಂದಿಟ್ಟುಕೊಂಡರೂ ಆ ಸಂಖ್ಯೆಯು3.6ಕೋಟಿ. ಹೆಚ್ಚಿನ ಮಕ್ಕಳಲ್ಲಿ ಲಕ್ಷಣಗಳು ಸೌಮ್ಯವಾಗಿಯೇ ಇರಬಹುದು. ಆದರೆ, ಶೇ.ಒಂದರಷ್ಟು ಮಕ್ಕಳಲ್ಲಿ ಗಂಭೀರ ಸಮಸ್ಯೆ ಉಂಟಾದರೂ3.6ಲಕ್ಷ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಈ ಪರಿಸ್ಥಿತಿ ನಿಭಾಯಿಸಲು ಶಿಶು ತೀವ್ರ ನಿಗಾ ಸೌಲಭ್ಯಗಳು ನಮ್ಮಲ್ಲಿ ಇವೆಯೇ? ಇಲ್ಲ. ಹಾಗಾಗಿಯೇ ನಮ್ಮ ಸಿದ್ಧತೆಗಳು ಈಗಲೇ ಆರಂಭಗೊಳ್ಳಬೇಕು. ಶಿಶು ಒಳರೋಗಿ ಮೂಲಸೌಕರ್ಯ ಹೆಚ್ಚಿಸಬೇಕು.
ಮೂರನೇ ಅಲೆ ಅನಿವಾರ್ಯವೇ?:ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಬರಬಹುದಾದ ಮೂರನೇ ಅಲೆಯ ಬಗ್ಗೆ ನಿಖರವಾಗಿ ಯಾವಾಗಬರಬಹುದು ಎಂಬುದನ್ನು ಹೇಳಲು ಬರುವುದಿಲ್ಲ. ಎರಡನೇ ಅಲೆಯ ಆರ್ಭಟ, ಸೋಂಕಿನ ಸಂಖ್ಯೆಯಲ್ಲಿಯ ತ್ವರಿತ ಹೆಚ್ಚಳ, ಸಾವು ನೋವುಗಳ ಏರಿಕೆ ಕಣ್ಣಾರೆ ಕಂಡ ತಜ್ಞರು ಮೂರನೇ ಅಲೆಯು ಆರ್ಭಟ ಇದಕ್ಕೂ ಹೆಚ್ಚಾಗಬಹುದು ಎಂದು ತರ್ಕಿಸಿದ್ದಾರೆ.
ಮಾರನೇ ಅಲೆಗೆ ಕಾರಣವಾಗಬಹುದಾದ ರೂಪಾಂತರಿ ವೈರಸ್ ಡೆಲ್ಟಾ ಪ್ಲಸ್ ಲಸಿಕೆಯಿಂದ ಪಡೆದಿರುವ ಹಾಗೂ ಸೋಂಕಿನಿಂದಾಗಿ ಗಳಿಸಿಕೊಂಡಿರುವ ರೋಗ ನಿರೋಧಕ ಶಕ್ತಿಯನ್ನೇ ಕುಗ್ಗಿಸುವಷ್ಟು ಬಲಶಾಲಿಯಾಗಿದೆ. ಈ ರೂಪಾಂತರಿಯು ಅಸಲಿ ಡೆಲ್ಟಾ ರೂಪಾಂತರಿಯ ಎಲ್ಲ ಗುಣ ವಿಶೇಷಗಳನ್ನು ಹೊಂದಿದೆ ಮಾತ್ರವಲ್ಲದೇ, ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ ಬೀಟಾ ರೂಪಾಂತರಿಯ ಲಕ್ಷಣಗಳನ್ನೂ ಮೈಗೂಡಿಸಿಕೊಂಡಿದೆ. ಇದರಿಂದಾಗಿಯೇ ಇದು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ.
ಭಾರತಕ್ಕೆ ಅಕ್ಟೋಬರ್ – ಡಿಸೆಂಬರ್ ಹೊತ್ತಿಗೆ ಮೂರನೇ ಅಲೆ ಬರಬಹುದು. ಮಹಾರಾಷ್ಟ್ರ ಸರಕಾರ ಪ್ರಕಾರ ಪ್ರತಿ ಜಿಲ್ಲೆಯಲ್ಲಿ8000ಮಕ್ಕಳು ಸೋಂಕಿಗೆ ತುತ್ತಾಗಬಹುದೆಂದು ಅಂದಾಜಿಸಲಾಗಿದೆ. ಎರಡನೇ ಅಲೆಯ ಹಾವಳಿ108ದಿನಗಳದ್ದಾಗಿದ್ದರೆ, ಮೂರನೇ ಅಲೆ98ದಿನಗಳಿಗೆ ಸೀಮಿತವಾಗಿರಬಹುದು. ರೂಪಾಂತರಗೊಂಡ ವೈರಸ್ಸೇ ಮೂರನೇ ಅಲೆಗೆ ಕಾರಣವಾಗುವುದು. ಎರಡನೇ ಅಲೆಯಷ್ಟೇ ಅಬ್ಬರಿಸಬಹುದು. ಜನರಲ್ಲಿ ಆತಂಕ ಹುಟ್ಟಿಸಬಹುದು. ಅವಘಡಗಳಿಗೆ ಕಾರಣವಾಗಬಹುದು.
ಕೊನೆಯ ಮಾತು:ಸದ್ಯಕ್ಕೆ ಕೆಲ ವರ್ಷಗಳ ಕಾಲ ಕರೋನಾ ನಮ್ಮ ನಡುವೆಯೇ ಇರುತ್ತದೆ. ಅದರ ಜತೆಗೆ ಬದುಕಲು ಕಲಿಯುವುದು ಅನಿವಾರ್ಯ ಎಂದು ತಜ್ಞರುಹೇಳುತ್ತಿದ್ದಾರೆ. ಹೀಗಾಗಿ ಕಠಿಣ ಲಾಕ್ ಡೌನ್‌ನಂಥ ಕ್ರಮ ಗಳನ್ನು ಜನರ ಮೇಲೆ ಬಹುಕಾಲ ಹೇರುವುದಕ್ಕಾಗುವುದಿಲ್ಲ. ಎಲ್ಲರೂ ಮುನ್ನೆಚ್ಚರಿಕೆಗಳ ಜತೆಗೆ ಬದುಕಲು ಕಲಿಯಬೇಕು. ಎಲ್ಲಿಯವರೆಗೆ ಮುನ್ನೆಚ್ಚರಿಕೆ ಇರಬೇಕು ಎಂಬುದಕ್ಕೆ ಕಾಲವೇ ಉತ್ತರ ಹೇಳುತ್ತದೆ. ಅಲ್ಲಿಯ ವರೆಗೆ ಸರಕಾರಗಳು ಕೂಡ ಅಗತ್ಯ ಚಿಕಿತ್ಸೆ, ಔಷಧ ಮತ್ತು ಮೂಲಸೌಕರ್ಯಗಳ ವಿಷಯದಲ್ಲಿ ಸನ್ನದ್ಧವಾಗಿರಬೇಕು. ಈಗಿನ ಅನ್‌ಲಾಕ್ ವೇಳೆ ಜನರು ಮತ್ತು ಸರಕಾರ ಮೈಮರೆತರೆ ಮತ್ತೆ ಲಾಕ್‌ಡೌನ್ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ!