ಜನರ ಆರ್ಥಿಕ ಏಳಿಗೆಗಾಗಿ ಅನಿಲ ಬೆಲೆ ಇಳಿಸಿ
ಅಭಿಮತ
ಡಾ.ಎಸ್‌.ಆರ್‌.ಕೇಶವ
ಪೆಟ್ರೋಲ್, ಡಿಸೇಲ್ ಹಾಗೂ ಸಿಲಿಂಡರ್ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿರುವುದರಿಂದ ಬಹುಸಂಖ್ಯಾತ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪೆಟ್ರೋಲ್ ಡೀಸೆಲ್‌ನ ಬೆಲೆಗಳ ಹೆಚ್ಚಳದಿಂದ ಸಾರಿಗೆ ವೆಚ್ಚ ಹೆಚ್ಚಾಗಿ ತರಕಾರಿ, ಹಣ್ಣು, ಆಹಾರ ಧಾನ್ಯಗಳು, ಬೇಳೆ ಕಾಳುಗಳು, ಅಡುಗೆ ಎಣ್ಣೆ , ಮೊಟ್ಟೆ, ಮೀನಿನ ಬೆಲೆಗಳು ಮತ್ತಷ್ಟು ಹೆಚ್ಚಾಗಿವೆ.
ಹಾಗೆಯೇ ಇಂಧನದ ವೆಚ್ಚವೂ ಹೆಚ್ಚಾಗಿರುವುದರಿಂದ ಸಾರಿಗೆ ಸಂಸ್ಥೆಗಳು, ಆಟೋ, ಟ್ಯಾಕ್ಸಿ, ಕ್ಯಾಬ್ ಮಾಲೀಕರ ಆದಾಯ ಕುಸಿತ ಕಂಡು, ಅವರು ಸಾರಿಗೆ ದರದ ಹೆಚ್ಚಳಕ್ಕೆ ಒತ್ತಾಯಿಸುತ್ತಿzರೆ. ಅನಿಲಭಾಗ್ಯ ಯೋಜನೆಯ ಫಲಾನುಭವಿಗಳು ಸಿಲಿಂಡರ್ ಬೆಲೆ ಹೆಚ್ಚಳವಾದ ನಂತರ ಸಿಲಿಂಡರ್ ಖರೀದಿ ಮಾಡದೆ ಮತ್ತೆ ಮೊದಲಿನಂತೆ ಪರಿಸರ ಸ್ನೇಹಿಯಲ್ಲದೆ ಸೌದೆ, ಬೆರಣಿ ಮುಂತಾದ ಇಂಧನ ಮೂಲಗಳ ಮೊರೆ ಹೋಗಿದ್ದಾರೆ.
ಕೋವಿಡ್ –19ಜನಸಾಮಾನ್ಯರ ಜೀವ ಹಾಗೂ ಜೀವನಕ್ಕೆ ಬಹುದೊಡ್ಡ ನಷ್ಟವನ್ನು ಉಂಟುಮಾಡಿದೆ. ನಾಲ್ಕು ಕೋಟಿಗಿಂತ ಹೆಚ್ಚು ಜನರು ಕೋವಿಡ್ –19ನಿಂದಾಗಿ ಬಡವರಾಗಿದ್ದಾರೆ. ಹಾಗಾಗಿ ಭಾರತದಲ್ಲಿ ಬಡವರ ಸಂಖ್ಯೆ ವಿಶ್ವ ಬ್ಯಾಂಕಿನ ವರದಿಯಂತೆ 12 ಕೋಟಿ ಆಗಿದೆ. ಕೋವಿಡ್ ಸೋಂಕು ನಿಯಂತ್ರಿಸಲು ಲಾಕ್‌ಡೌನ್ ಮಾಡಿದ್ದರಿಂದ ಲಕ್ಷಾಂತರ ಶ್ರಮಿಕರು ಕೆಲಸ ಕಳೆದುಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರಕಾರ ಬೆಲೆಗಳು ನಿಯಂತ್ರಿಸಲು ಏಕೆ ಕ್ರಮ ಕೈಗೊಳ್ಳು ತಿಲ್ಲ ಎಂಬುದು ಜನಸಾಮಾನ್ಯರಿಗೆ ಯಕ್ಷಪ್ರಶ್ನೆಯಾಗಿದೆ.
ಜನಸಾಮಾನ್ಯರ ಜೀವನ ಸುಲಭಗೊಳಿಸಿ, ಉತ್ತಮ ಗುಣಮಟ್ಟದ ಜೀವನ ನಡೆಸುವಂತಾಗಲು ಹಲವು ಕ್ರಮಗಳನ್ನು ಕೈಗೊಳ್ಳಬೇಕಾದ ಸರಕಾರಕ್ಕೆ ಜನ ಸಾಮಾನ್ಯರ ಸಂಕಷ್ಟ ಅರಿವಾಗುತಿಲ್ಲವೆ?. ಕೋವಿಡ್ –19ಸರಕಾರದ ಬೊಕ್ಕಸಕ್ಕೆ ಬಾರಿ ಹಾನಿಯನ್ನು ಮಾಡಿದೆ. ನೇರ ಹಾಗೂ ಪರೋಕ್ಷ ತೆರಿಗೆ ಸಂಗ್ರಹ ನಿಗದಿತ ಗುರಿ ತಲುಪಿಲ್ಲ. ಆದರೆ ಸರಕಾರ ಕೋವಿಡ್ –19ಸೋಂಕು ತಡೆಯಲು ಹಾಗೂ ಆರ್ಥಿಕತೆಯ ಪುನಶ್ಚೇತನ ಕೈಗೊಂಡ ಕ್ರಮಗಳ ಕಾರಣದಿಂದ ಸಾರ್ವಜನಿಕ ವೆಚ್ಚ ಇಂದಿನ ವರ್ಷಗಳಿಂತಲೂ ಹೆಚ್ಚಾಗಿದೆ. ಇದರ ಪರಿಣಾಮ ವಿತ್ತೀಯ ವರ್ಷ 2020-21ರಲ್ಲಿ 1884655ಕೋಟಿ ವಿತ್ತೀಯ ಕೊರತೆ ಉಂಟಾಗಿದೆ. ಅದು ಜಿಡಿಪಿಯ ಶೇ.9.5ಷ್ಟು ಆಗಿದೆ ಎಂಬುದು ಆತಂಕದ ವಿಚಾರ.
2021-22ರ ವಿತ್ತೀಯ ವರ್ಷದ ಆರಂಭದ ಕೋವಿಡ್ –19ರ ಎರಡನೆ ಅಲೆಯು ಮೊದಲ ಅಲೆಗಿಂತ ಹೆಚ್ಚಿನ ಪರಿಣಾಮವನ್ನು ಜೀವ, ಜೀವನ ಹಾಗೂ ಆರ್ಥಿಕತೆಯ ಮೇಲೆ ಬೀರಿದ್ದರಿಂದ ಅದನ್ನು ಸರಿದೂಗಿಸಲು ಸರಕಾರದ ವೆಚ್ಚ ಹೆಚ್ಚಾಗಿದೆಯೇ ಹೊರತು ಅದಕ್ಕೆ ಬರಬೇಕಿದ್ದ ಆದಾಯವಲ್ಲ. ಬಂಡವಾಳ ಹಿಂತೆಗೆತಕ್ಕಾಗಲಿ, ಸರಕಾರಿ ಒಡೆತನದ ಆಸ್ತಿ ನಗದೀಕರಣಕ್ಕಾಗಲಿ ಇದು ಸಕಾಲವಲ್ಲ. ಇಂಥ ಪರಿಸ್ಥಿತಿಯಲ್ಲಿ ಸರಕಾರಕ್ಕೆ ಸಾಲದ ಹೊರತಾಗಿ ಪರ್ಯಾಯ ಮಾರ್ಗಗಳು ಬಹುತೇಕ ಕ್ಷೀಣಿಸಿದವು. ಆದರೆ ಅತಿಯಾಗಿ ಸಾಲ ಮಾಡಿದರೆ ಅದು ವಿತ್ತಿಯ ಆಶಿಸ್ತಿಗೆ ಕಾರಣವಾಗಿ ಅದು ಮೊತ್ತಷ್ತು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಕೇಂದ್ರ ಸರಕಾರಕ್ಕೆ ಇಂಥ ಸಂದರ್ಭದಲ್ಲಿ ಆಪತ್ಭಾಂಧವರಾಗಿ ಪೆಟ್ರೋಲ್ ಹಾಗೂ ಡೀಸೆಲ್ ಕಾಣಿಸಿದ್ದು, ರಾಜ್ಯ ಸರಕಾರಗಳಿಗೆ ಮದ್ಯ, ಡೀಸೆಲ್ ಹಾಗೂ ಪೆಟ್ರೋಲ್ ಕಾಣಿಸಿದವು.
ಆದ್ದರಿಂದ ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು, ರಾಜ್ಯ ಸರಕಾರಗಳು ವ್ಯಾಟ್, ಮಾರಾಟ ತೆರಿಗೆಯನ್ನು ಕ್ರಮೇಣ ಹೆಚ್ಚಿಸಿತ್ತು. ಜನಸಾಮಾನ್ಯರು ಸಾಮಾನ್ಯವಾಗಿ ಲೀಟರ್ ಬದಲಾಗಿ50ರು.,100ರು., 200ರು., ಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳುವುದು ರೂಢಿಯಲ್ಲಿಇದ್ದುದರಿಂದ ಆರಂಭದಲ್ಲಿ ಬೆಲೆ ಹೆಚ್ಚಳದ ಪರಿಣಾಮ ಅಷ್ಟಾಗಿ ಕಾಡಲಿಲ್ಲ, ಕೆಲವರಿಗೆ ಕಾಡಿದರೂ ಎಲ್ಲರಿಗೂ ಆಗುತ್ತಿರುವ ತೊಂದರೆ ತಮಗೂ ಆಗುತ್ತಿದೆ ಎಂದು ಸುಮ್ಮನಾದರು. ಒಟ್ಟಾರೆಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೆಟ್ರೋಲ್ ಡೀಸೆಲ್ ಮೇಲೆ ಶೇ.60ರಷ್ಟು ತೆರಿಗೆ ಹಾಕಿ, ಕೊರತೆಯಾಗಿದ್ದ ತಮ್ಮ ಖಜಾನೆಯ ಒಂದು ಭಾಗವನ್ನು ತುಂಬಿಸಲು ಪ್ರಯತ್ನಿಸಿದವು.
ಇದರ ಪರಿಣಾಮ2020-21ವಿತ್ತಿಯ ವರ್ಷದ ಮೊದಲ ಹತ್ತು ತಿಂಗಳುಗಳಲ್ಲಿ ಕೇಂದ್ರ ಸರಕಾರ2.94ಲಕ್ಷ ಕೋಟಿ ಹಣ ವನ್ನು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ತೆರಿಗೆಯಿಂದಗಳಿಸಿತು. ಒಂದು ಅಂದಾಜಿನ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಮಾತ್ರದಿಂದ ಬರೋಬರಿ ೧೪ಲಕ್ಷ ಕೋಟಿ ಆದಾಯಗಳಿಸಿದವು. ಆತಿಯಾದರೆ ಅಮೃತವೂ ವಿಷವೇ ಅನ್ನುವಂತೆ ಬೆಲೆ ಏರಿಕೆ ಅತಿಯಾದರೆ, ಅದು ಜನಸಾಮಾನ್ಯರ ಪಾಲಿಗೆ ವಿಷವೇ. ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಅನಿಲ ಸಿಲಿಂಡರ್ ಮೇಲೆ ತೆರಿಗೆಯ ಹೊರೆಯು ಗರಿಷ್ಠ ಮಟ್ಟವನ್ನು ತಲುಪಿದ್ದು, ದರವನ್ನು ಕಡಿಮೆಗೊಳಿಸಬೇಕು. ಜತೆಗೆ ಸರಕಾರ ಆದಾಯ ತರುವ ಹೊಸ ಮೂಲಗಳನ್ನು ಹುಡುಕಬೇಕು.