ಕ್ಲಬ್‌ ಹೌಸ್‌ನಲ್ಲಿ ಹೆಚ್ಚಾದ ಮಾತು
ಅಭಿಮತ
ಗ.ನಾ.ಭಟ್ಟ
ಇಂದು ನಿಜಕ್ಕೂ ಮಾತು ಹೆಚ್ಚಾಗಿದೆ. ‘ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಮಾತು ಸುಳ್ಳಾಗುತ್ತಿದೆ. ಮಾತು ಬಲ್ಲದವರೇ ಇಂದು ಅತಿಯಾಗಿ ಮಾತನಾಡುತ್ತಿದ್ದಾರೆ. ಕೇಳುವುದಕ್ಕೇ ಆಗದಷ್ಟು ಅಸಹ್ಯಕರವಾಗಿ ಮಾತನಾಡುತ್ತಿದ್ದಾರೆ.
ಮಾತಿನ ಬೀಭತ್ಸತೆ, ಮಾತಿನ ಅನಾರೋಗ್ಯ, ಮಾತಿನ ಅಸೂಕ್ಷ್ಮ, ಮಾತಿನ ಟೊಳ್ಳುತನ, ಮಾತಿನ ನಿರ್ಜೀವತೆ ನೋಡುವುದಾದರೆ ನಾವು ಕ್ಲಬ್ ಹೌಸ್‌ಗೆ ಹೋಗಬೇಕು. ಅಲ್ಲಿ ಅದರ ವಿರಾಟ ಸ್ವರೂಪ ಮೈದಳೆದದ್ದು ಕಂಡುಬರುತ್ತದೆ. ಬರೀ ಶುಭೋದಯ, ಶುಭರಾತ್ರಿ ಹೇಳುವುದಕ್ಕೆ, ತನಗೆ ಗೊತ್ತಿಲ್ಲದ ವಿಚಾರ ಗೊತ್ತಿದೆ ಅಂತ ತೋರಿಸಿಕೊಳ್ಳುವ ಹಪಹಪಿಗಳಿಗೆ, ಯಾವುದೇ ವಿಷಯದಲ್ಲೂ ಗಟ್ಟಿಯಾದ ಅಧ್ಯಯನ ಇಲ್ಲದೆ ಬಡಬಡಿಸುವವರಿಗೆ, ವಿಷಯವನ್ನು ತಿರುಚಿ ಹೇಳುವವರಿಗೆ, ವಾದ-ಸಂವಾದದ ಬದಲು ವಿವಾದ (ಜಗಳ) ಸೃಷ್ಟಿಸುವವರಿಗೆ, ಸಂವಹನದ ಮರ್ಮ ಗೊತ್ತಿಲ್ಲದವರಿಗೆ, ಸಂವೇದನಾಶೀಲತೆ ಇಲ್ಲದವರಿಗೆಈ ಕ್ಲಬ್‌ಹೌಸ್ ವೇದಿಕೆಯಾಗುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ.
ಇಂದು ಮನುಷ್ಯನಿಗೆ ಎಟುಕದಷ್ಟು ವಿಜ್ಞಾನ-ತಂತ್ರಜ್ಞಾನ ಮುಂದುವರಿದಿದ್ದೇನೋ ಹೌದು. ಅದರ ಉಪಯುಕ್ತತೆಯೂ ಮನುಷ್ಯನ ಗರಿಷ್ಠ ಮಟ್ಟದಲ್ಲಿ ದೊರೆಯು ತ್ತಿರುವುದೂ ಹೌದು. ಆದರೆ ಅದರ ಇನ್ನೊಂದು ಮಗ್ಗುಲಲ್ಲಿ ಅಷ್ಟೇ ಋಣಾತ್ಮಕ ಸಂಗತಿಗಳೂ ರಾಶಿರಾಶಿಯಾಗಿ ಗೋಚರಿಸುತ್ತಿರುವುದೂ ಅಷ್ಟೇ ಸತ್ಯ. ಜಗತ್ತಿನಾದ್ಯಂತ ಇರುವ ಯಾರೊಡನೆಯೂ ಸಂವಹನ, ಸಂಭಾಷಣೆ ಮಾಡಲು ಸೂಕ್ತ ಅವಕಾಶ ಕಲ್ಪಿಸಿರುವ ಈ ಕ್ಲಬ್‌ಹೌಸ್ ಎಷ್ಟು ವೈಭವಯುತವಾಗಿದ್ದ ರೇನು? ಎಷ್ಟು ಲಕ್ಷಜನರಿಗೆ ತಲುಪಿದರೇನು? ಮಾತೇ ಮುಖ್ಯ ಬಂಡವಾಳವಾಗಿದ್ದರೇನು? ಆದರೆ ಅದರ ಆತ್ಮವೇ ಸಿಗದಿದ್ದರೆ ಎಲ್ಲವೂ ಇದ್ದು ಏನು ಪ್ರಯೋಜನ? ಅದಕ್ಕಾಗಿಯೋ ಎಂಬಂತೆ ಕವಿಯೊಬ್ಬ ಒಂದು ಹೃದಯಂಗಮ ಶ್ಲೋಕವನ್ನು ಹೇಳಿದ್ದಾನೆ.
‘ಅವಳ ನಿತಂಬ ತೂಗಿತೊನೆಯುತ್ತಿದೆ. ಸೊಂಟ ತೆಳ್ಳಗಿದೆ. ಸ್ತನಜೋಡಿ ಕಣ್ಣುಕುಕ್ಕುವಂತಿದೆ. ಮುಖವೂ ಅಷ್ಟೇ ಆಹ್ಲಾದಕರ. ಆದರೇನು? ಮಾತು ಮಾತ್ರ ನೀರಸ. ಸ್ವಲ್ಪವೂ ಸೆಳೆದುಕೊಳ್ಳುವ ಗುಣವಿಲ್ಲ. ಹೀಗಾಗಿಬಿಟ್ಟರೆ ಬೇರೆಲ್ಲ ಎಷ್ಟು ಅದ್ಭುತವಾಗಿದ್ದು ಏನು ಪ್ರಯೋಜನ?’ ಎಂದು ಆತ ಕೇಳುತ್ತಾನೆ. ಆಕೆ ಕಡೆದಿಟ್ಟ ಬೊಂಬೆಯಂತಿದ್ದಾಳೆ. ಅಸಾಧಾರಣ ರೂಪವತೀ. ಆದರೆ ಶತದಡ್ಡಿ. ಅವಳ ರೂಪವೋ ಇನ್ನಿಲ್ಲದಂತೆ ಸೆಳೆಯುತ್ತದೆ. ನೋಡಿದವನ ಮನಸ್ಸನ್ನು ಚಂಚಲ ಗೊಳಿಸುವಷ್ಟು ಶಕ್ತಿಶಾಲಿಯಾದ ರೂಪ ಆವಳದು. ಅವಳ ಹಾವ-ಭಾವ ಎಲ್ಲವೂ ಸುಮನೋಹರ. ಆದರೆ ಚುರುಕಿಲ್ಲದ, ಜೊಳ್ಳು, ಟೊಳ್ಳು ವ್ಯಕ್ತಿತ್ವ. ಮಾತನಾಡ ತೊಡಗಿದರೆ ಮಾತಿನಲ್ಲಿ ಆಕರ್ಷಣೆಯೇ ಇಲ್ಲ.
ಮಾತಿನಲ್ಲಿ ವಿಚಾರವೇ ಇಲ್ಲ. ವಿಷಯ ದಾರಿದ್ರ್ಯ ಹೆಜ್ಜೆ ಹೆಜ್ಜೆಗೆ ಕಾಣುತ್ತದೆ. ವಾಕ್ಯರಚಿಸುವಾಗ ಸೂಕ್ತ ಶಬ್ದಗಳಿಗಾಗಿ ತಡಕಾಡುತ್ತಾಳೆ. ಏನೋ ಹೇಳಲು ಹೋಗಿ ಇನ್ನೇನೋ ಹೇಳುತ್ತಾಳೆ. ಎಲ್ಲವೂ ನೀರಸ. ಅವಳ ಈ ದಯನೀಯ ಸ್ಥಿತಿಯನ್ನು ಕಂಡಮೇಲೆ ಮೊದಲು ಕಂಡ ಅವಳ ಬಾಹ್ಯರೂಪವೆಲ್ಲ ಅಸಹ್ಯವಾಗಿ ಕಾಣತೊಡಗುತ್ತದೆ. ಪ್ರಕೃತ ಕ್ಲಬ್ ಹೌಸ್‌ನ ಸ್ಥಿತಿಯೂ ಇದೇ ಆಗಿದೆ. ಮಾತನಾಡಲು ಬಾರದವರು ಮಾತನಾಡುತ್ತಾರೆ. ಯಾವುದೋ ಕ್ಷುಲ್ಲಕ ಸಂಗತಿಗಳನ್ನು ದೊಡ್ಡದಾಗಿ ಬಿಂಬಿಸುತ್ತಾರೆ.
ವಾದ ಹೋಗಿ ವಿವಾದವಾಗುತ್ತದೆ. ದುರ್ವಾದವಾಗುತ್ತದೆ. ತರ್ಕಹೋಗಿ ಕುತರ್ಕವಾಗುತ್ತದೆ. ಸಂವಾದ ಹೋಗಿ ವಿಸಂವಾದವಾಗುತ್ತದೆ. ಎಲ್ಲದಕ್ಕೂ ಮುಖ್ಯ ಕಾರಣ ವಿಷಯ ದಾರಿದ್ರ್ಯ. ಅಧ್ಯಯನಶೀಲತೆಯಿಲ್ಲ. ವಿಷಯ ತಿಳಿದುಕೊಂಡು ಮಾತನಾಡಬೇಕೆಂಬ ವಿಧೇಯತೆಯಿಲ್ಲ. ಅರೆಬರೆ ಜ್ಞಾನ. ಅದನ್ನೇ ಕಕ್ಕುವ ಆತುರತೆ. ಇಂತಹ ಅಪಸವ್ಯಗಳ ಮಧ್ಯೆಯೇ ಶತಾವಧಾನಿ ಡಾ. ಆರ್. ಗಣೇಶ್ ಅವರಂತವರ ಪ್ರವಚನ ಇರುತ್ತಿರುವುದು ಒಂದು ಸಂತೋಷದಾಯಕ ಸಂಗತಿ. ಆದರೆ ಇದು ಒಂದು ಕೊಳಗದಷ್ಟು ಅರಳುಹಿಟ್ಟಿನಲ್ಲಿ ಒಂದು ಸಾಸಿವೆಕಾಳಿನಷ್ಟು ಜೀವಪೋಷಕ ಸಾಮಗ್ರಿಯಿದ್ದಂತೆ.