ಅಪರಾಧಿ ನಾನಲ್ಲ, ಅಪರಾಧ ಎನಗಿಲ್ಲ !
ಪ್ರಚಲಿತ
ಜಿ.ಪ್ರತಾಪ ಕೊಡಂಚ
.@.
ಕರ್ನಾಟಕದ ಹಿರಿಯ ಸಚಿವರೊಬ್ಬರ ಅಧಿಕೃತ ನಿವಾಸದಿಂದ ಅವರ ಆಪ್ತ ಸಹಾಯಕನೊಬ್ಬನನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದರು ಎಂಬ ಸುದ್ದಿ ಮಿಂಚಿನಂತೆ ಕಾಣಿಸಿ ಮರೆಯಾಯಿತು. ಮರು ದಿನದ ಹೊತ್ತಿಗೆ ಅದು ಬಂಧನವಲ್ಲ ಬರೀ ವಿಚಾರಣೆ ಎನಿಸಿಕೊಂಡಿತು. ಪೊಲೀಸರು ಕರೆದೊಯ್ದಿದ್ದ ಮಹಾತ್ಮ, ‘ನಾನವನಲ್ಲ, ನಾನವನಲ್ಲ’ ಎಂಬುದನ್ನು ಬಿಟ್ಟು ಬೇರೇನೂ ಹೇಳಿಯೇ ಇಲ್ಲವೆನ್ನಿ!
ಹಾಗೆಯೇ ಕರ್ನಾಟಕದ ಕಂದಾಯ ಸಚಿವರ ಆಪ್ತ ಸಹಾಯಕರೊಬ್ಬರು ಹಿಂದೊಮ್ಮೆ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಕೆಲಸ ಕಳೆದುಕೊಂಡರೆಂಬ ಸುದ್ದಿ ಎಲ್ಲಾ ಮಾಧ್ಯಮಗಳ ಮೂಲೆಯಲ್ಲಿ ಕಾಣಿಸಿ ಮರೆಯಾಯಿತು. ಇಂತಹ ಸುದ್ದಿಗಳು ಸಮಾಜದಲ್ಲಿರುವ ತಪ್ಪು ಒಪ್ಪುಗಳನ್ನು ಸಾರುವುದರ ಮೂಲಕ ಜನ ಸಾಮಾನ್ಯ ರನ್ನು ಎಚ್ಚರಿಸುವುದು ಹೌದಾದರೂ, ರೋಚಕತೆ ಇಲ್ಲವಲ್ಲ ಹಾಗಾಗಿಯೂ ಇರಬಹುದು. ಈ ಸುದ್ದಿಗಳು ಸುದ್ದಿ ಮನೆಗಳ ರದ್ದಿಗೆ ಸೇರುವುದು. ಇನ್ನು ಕೆಲವೇ ದಿನ ಗಳಲ್ಲಿ ಬಂಽಸಲು ಬಂದಿದ್ದ ಪೊಲೀಸರೆ, ತಪ್ಪನ್ನು ಧೃಢಪಡಿಸಿದ್ದ ನ್ಯಾಯಾಧೀಶರದ್ದೇ ತಪ್ಪು ಎಂಬ ತೀರ್ಮಾನ ಹೊರಬಿದ್ದು, ಮುಖಪುಟದ ವರದಿಯಾದರೂ ಅಚ್ಚರಿಯೇನಿಲ್ಲ ಬಿಡಿ.
ಹಿಂದಿನ ಸರಕಾರದ ಆಡಳಿತದ ಸಮಯದೊಮ್ಮೆ ವಿಧಾನಸೌಧದ, ಅಧಿಕಾರಿಯೊಬ್ಬರನ್ನು ಹಣದ ಥೈಲಿ ಸಹಿತ ಹಿಡಿಯಲಾಗಿತ್ತು. ಆ ಅಧಿಕಾರಿ ಅದನ್ನು ಸರಕಾರದ ಮಂತ್ರಿಯೊಬ್ಬರಿಗೆ ತಲುಪಿಸಲು ಕೊಂಡೊಯ್ಯು ತ್ತಿದ್ದೇನೆ ಎಂದದ್ದು ಬಹಿರಂಗವಾದ್ದದ್ದು, ಬಿಟ್ಟರೆ ಬೇರೇನೂ ಕ್ರಮವಾದ ಸುಳಿವಿಲ್ಲ. ಹಾಗೆಯೇ ಇತ್ತೀಚಿಗಿನ ಪ್ರಕರಣಗಳು ಕೂಡ ಸದ್ಯದ ಸಾರ್ವಜನಿಕ ನೆನಪಿನಿಂದ ಮರೆಯಾಗಲಿದೆ. ಇಂತಹ ಘಟನೆಗಳು ಹೊಸತಲ್ಲ, ಇವತ್ತಿನ ಸರಕಾರಕ್ಕೆ ಸೀಮಿತವೂ ಅಲ್ಲ.
ಸಚಿವ ಆಪ್ತಸಹಾಯಕನ ವಿರುದ್ಧ ದೂರು ನೀಡಿದ್ದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮುಖ್ಯಮಂತ್ರಿಗಳ ಸುಪುತ್ರ, ಈ ದೂರಿನ ದೂರುದಾರರು ಎಂಬುದು ವಿಶೇಷ. ಅಕಳಂಕ ಚರಿತರಾಗಿರುವ ಇವರ ಆರೋಪ, ಆ ವ್ಯಕ್ತಿ ನನ್ನ ಹೆಸರಿನ ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜೀವನದಲ್ಲಿರುವ ನನ್ನಂತವರ ಹೆಸರಿಗೆಕಳಂಕ ತರುತ್ತಿದ್ದಾನೆ ಎಂಬುದು. ತಮ್ಮದೇ ಪಕ್ಷದ, ಸರಕಾರದ ಪ್ರಬಲ ಮಂತ್ರಿಗಳ ಆಪ್ತ ಕಾರ್ಯದರ್ಶಿಯೊಬ್ಬರ ವಿರುದ್ಧ ದೂರು ಕೊಟ್ಟು ಕಾರ್ಯಾಚರಣೆಗೆ ಮುನ್ನುಡಿ ಬರೆದ ಯುವ ನೇತಾರರ ನಡೆ, ನಿಜಕ್ಕೂ ಶ್ಲಾಘನೀಯ.
ಪೋಲೀಸರ ಕಾರ್ಯಾಚರಣೆಯಂತೂ, ಮೊಟ್ಟ ಮೊದಲ ಬಾರಿಗೆ ನಮ್ಮ ಗೃಹ ಸಚಿವರು, ಆಗ್ಗಾಗೆ ಪುನರುಚ್ಚರಿಸುವ, ಕಾನೂನು ಅದರ ಕಾರ್ಯ ಯಾವುದೇ ಅಡೆತಡೆಯಿಲ್ಲದೇ ಸಮರ್ಥವಾಗಿ ನಿರ್ವಹಿಸುತ್ತದೆ ಎಂಬುದನ್ನು ಸ್ವಲ್ಪ ಹೊತ್ತು ಸಾಕಾರಗೊಳಿಸಿತ್ತು. ಸರಕಾರಿ ವ್ಯವಸ್ಥೆಯಲ್ಲಿ ಕೂಲಿಗಾಗಿ ಕಾಳು ರೀತಿಯೇ, ಗುತ್ತಿಗೆಗಾಗಿ ಪಾಲು ಎಂಬುದೂ ಅಲಿಖಿತ ಯೋಜನೆಯೇ! ಆದರೂ, ಎಷ್ಟಿರಬಹುದು ಬೇಡಿಕೆ? ಎಂಬ ಕುತೂಹಲಕ್ಕೊಳಗಾದ ನಾನು ನೋಡಿದ ಅಂಶ ನನ್ನನ್ನು ಒಂದು ಕ್ಷಣ ಬೆಚ್ಚಿಬೀಳಿಸಿತು. ಆಡಿಯೊದಲ್ಲಿ ಮಾತನಾಡಿದ ವ್ಯಕ್ತಿ ಗುತ್ತಿಗೆದಾರರ ಬಳಿ ಇತ್ತ ಬೇಡಿಕೆ ಬರೀ ನೂರು, ಇನ್ನೂರು, ಮುನ್ನೂರು ರುಪಾಯಿಗಳ ಶ್ರೇಣಿಗಳಲ್ಲಿತ್ತು! ಛೇ, ಇವರ‍್ಯಾರೋ ಸಜ್ಜನ ವ್ಯಕ್ತಿಯೇ ಇರಬೇಕು. ಸರಕಾರದ ಮಟ್ಟದಲ್ಲಿ ಕುದುರುವ ಗುತ್ತಿಗೆ, ವ್ಯಾಪಾರಗಳು ಕೋಟಿಗಳಲ್ಲಿರುತ್ತೆ ಅಂತ ಕೇಳಿದ್ದೆ. ಇಷ್ಟು ಕಡಿಮೆ ಬೇಡಿಕೆ ಇಡುತ್ತಿದ್ದಾರಲ್ಲ!
ಬೇಡಿಕೆಯ ಮೊತ್ತ ಕಮ್ಮಿ ಎಂದೇನಾದರೂ ಇವರ ಮೇಲೆ ದೂರು ದಾಖಲಿಸಿರಬಹುದೇ? ಎಂಬ ಸಂಶಯವೂ ಒಂದು ಕ್ಷಣ ಮೂಡಿತ್ತು. ಕೊನೆಗೆ ಗೊತ್ತಾಗಿದ್ದು, ನೂರೆಂದರೆ ಒಂದು, ಇನ್ನೂರೆಂದರೆ ಎರಡು, ಮುನ್ನೂರೆಂದರೆ ಮೂರು ಕೋಟಿಗಳೆಂದು! ನೂರರ ಶ್ರೇಣಿ ಬರೀ ಸಾಂಕೇತಿಕವಾಗಿ ಕೋಟಿಯ ಸೂಚಕವಂತೆ! ಹಾಗೆಯೇ, ಸರಕಾರಿ ಸವಲತ್ತು ಜನರನ್ನು ತಲುಪಿಸುವಲ್ಲೂ ಇವರು ಸೊನ್ನೆ ತಿಂದು ಬಿಡುತ್ತಾರೆನ್ನಿ. ಅರ್ಥಾತ್, ನೂರು ಕೋಟಿಯ ಯೋಜನೆಯೊಂದು ಜನರನ್ನು ತಲುಪುವಲ್ಲಿ ಕೇವಲ10ಕೋಟಿ ತಲುಪಿರುತ್ತೆ. ನೂರಿನ್ನೂರು ಇತ್ಯಾದಿ ಬರಿಯ ಕೋಡ್ ಲ್ಯಾಂಗ್ವೇಜ! ಇವರೆಲ್ಲ, ಪರಿಪಕ್ವ ಗಣಿತ ತಜ್ಞರೇ ಇರಬೇಕು ಬಿಡಿ! ಸೊನ್ನೆಗೆ ಬೆಲೆಯಿಲ್ಲ ವೆಂಬ ಲೆಕ್ಕದ ಮೇಷ್ಟ್ರುಗಳ ಪಾಠ, ನಾವು ನೀವು ಮರೆತಿದ್ದರೂ, ಇವರಿನ್ನೂ ಯಥಾವತ್ತಾಗಿ ನೆನಪಿಟ್ಟುಕೊಂಡು, ಸೂಕ್ತ ಬಳಕೆ ಮಾಡುತ್ತಿರುವನಿಪುಣ ಸಮಾಜ ಸೇವಕರು!
ಇಷ್ಟೆ ಆದಾಗ ಕನ್ನಡ ಸುದ್ದಿ ವಾಹಿನಿಗಳು ಸುಮ್ಮನೇ ಇರುವುದಾದರೂ ಹೇಗೆ? ಒಂದೆರಡು ದಿನದ ಮಟ್ಟಿಗೆ ಕರೋನಾ ಪಕ್ಕಕ್ಕಿಟ್ಟು, ಈ ಸುದ್ದಿಗೆ ಮಹತ್ವ ಕೊಟ್ಟರು. ಒಮ್ಮೆ ಮಂತ್ರಿಗಳು, ಮಾಧ್ಯಮದಿಂದಲೇ ತನಗಿದು ತಿಳಿಯಿತು. ಸದ್ಯ ವಿಚಾರಣೆಯ ಹಂತದಲ್ಲಿರುವುದರಿಂದ ನಾನೇನೂ ಹೇಳುವುದು ಸಮಂಜಸವಲ್ಲ ಎಂದು ನುಣುಚಿಕೊಂಡರು. ಆದರೆ ಮಾಧ್ಯಮಗಳ ಪ್ರಕಾರ, ತಮಗೆ ಮಾಹಿತಿ ನೀಡದೆ, ತಮ್ಮ ಅಧಿಕೃತ ನಿವಾಸದಿಂದ ಆಪ್ತನನ್ನು ಎತ್ತೊಯ್ದಿದ್ದಕ್ಕೆ ತಮ್ಮದೇ ಸರಕಾರದ ಮೇಲೆ ಮುನಿಸಿಕೊಂಡಿದ್ದರು. ಇನ್ನೇನು ಅವರು ಸಿಡಿದೆದ್ದು, ನಮಗೆಲ್ಲ ಕನಿಷ್ಟ ಇನ್ನೆರಡು ದಿನಕ್ಕಾಗುವಷ್ಟಾದರೂ ಮೇವು ಒದಗಿಸಲಿದ್ದಾರೆ, ಎಂಬ ಆಸೆ ಕಣ್ಣಿನಿಂದ ಸುದ್ದಿ ಮಾಧ್ಯಮಗಳು ಕಾದಿದ್ದೇ ಕಾದಿದ್ದು. ಮರುದಿನ ಮುಂಜಾವಿನ ಹೊತ್ತಿಗೆ, ಸುದ್ದಿ ಮಾಧ್ಯಮಕ್ಕೆ ಮರೀಚಿಕೆಯಾದ ಮಂತ್ರಿಗಳು ವಿಧಾನಸೌಧಕ್ಕೆ ತೆರಳಿ ತಮ್ಮಇಲಾಖೆಯ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದೆಹೊರಟು ನಿಂತ ಮುಖ್ಯಮಂತ್ರಿಗಳು, ಸಚಿವರನ್ನು ಕೈ ತಟ್ಟಿ ಕರೆದುಕೊಂಡೂ ಹೋದದ್ದು ಆಕರ್ಷಕವಾಗಿತ್ತು.
ಆಮೇಲೇನೋ ಸಮಾಲೋಚನೆ? ಸಂಧಾನ? ನಡೆದು ಎಲ್ಲವೂ ಬಗೆಹರಿಸಿಕೊಂಡರೆಂಬುದು ಮಾಧ್ಯಮದ ವರದಿ. ಸಮಾಲೋಚನೆಯ ನಂತರ ಹೊರಬಂದ ಮಂತ್ರಿಗಳು, ನಮ್ಮೊಂದಿಗೆ ಹಲವಾರು ಜನ ಸಿಬ್ಬಂದಿಗಳು ಆತ್ಮೀಯವಾಗಿ ಕಾರ್ಯನಿರ್ವಹಿಸುತ್ತಾರೆ. ಹಾಗೆಂದ ಮಾತ್ರಕ್ಕೆ, ಅವರೆಲ್ಲರ ಮನದಿಂಗಿತ ನಾನರಿಯಲು ಹೇಗೆ ಸಾಧ್ಯ ಹೇಳಿ? ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು. ತಕ್ಕ ಮಟ್ಟಿಗಿನ ಅಂತರ ಬಾಹ್ಯವಾಗಿಯಂತೂ ಕಾಯ್ದು ಕೊಂಡರು. ದೂರುದಾರರು ನನ್ನ ಗಮನಕ್ಕೆ ತಂದಿದ್ದರೆ, ನಾನೇ ಕೂತು ಮಾತುಕತೆಯ ಮೂಲಕ ಬಗೆಹರಿಸುತ್ತಿದ್ದೆ ಎನ್ನುವ ಆಶಯ ಕೂಡ ವ್ಯಕ್ತ ಪಡಿಸಿದರು.
ಹಾಗೆಂದರೆ ಏನು? ವ್ಯವಹಾರದ ಮೊತ್ತ ಚರ್ಚೆಯ ಮೂಲಕ ಸರಿ ಪಡಿಸಿಕೊಳ್ಳಬಹುದಿತ್ತು ಎಂತಲೇ? ಅಥವಾ ಆವಾಗಲೇ ತಪ್ಪಿತಸ್ಥನನ್ನು, ನಾನೇ ವಿಚಾರಣೆನಡೆಸಿ, ಸರಿ ದಾರಿಗೆ ತರುತ್ತಿದ್ದೆ ಅಂತಲೇ? ಅವರ ಗಮನಕ್ಕೆ ತರದೇ ಅಽಕೃತ (?) ವಿಚಾರಣೆ ಆರಂಭಿಸಿದ್ದು, ಮಂತ್ರಿಗಳ ಸಾರ್ವಜನಿಕ ಮೌಲ್ಯಕ್ಕೆ ಧಕ್ಕೆ ತಂದಿದ್ದು ನಿಜವಾದರೂ, ಈಗ ಆರೋಪಿಯನ್ನು ತೆರೆಮರೆ ಯಲ್ಲಿ ರಕ್ಷಿಸುವುದರಿಂದ ಅವರ ಸಾರ್ವಜನಿಕ ಜೀವನಕ್ಕೆ ಇನ್ನಷ್ಟು ಕಳಂಕ ಅಂಟಿಕೂಳ್ಳುವುದಿಲ್ಲವೇ?ಪೋಲೀಸರ ವಿಚಾರಣೆಯಲ್ಲಿ, ಆರೋಪಿಯಿಂದ ಇಂತಹ ಮೂರು ಸಂಭಾಷಣೆಗಳ ಆಡಿಯೊ,-ನಿನಿಂದ ಅವಶ್ಯ ಮಾಹಿತಿಗಳನ್ನು ವಶಪಡಿಸಿಕೊಂಡು,ಧ್ವನಿ ಮಾದರಿ ಸಂಗ್ರಹಿಸಿಕೊಂಡು ಕಳುಹಿಸಲಾಗಿದೆ ಎಂಬುದು ಸದ್ಯದ ಮಾಧ್ಯಮ ವರದಿ.
ಆರೋಪಿತ ಎಲ್ಲರಂತೆ ನಾನವನಲ್ಲ, ನಾನಂತವನಲ್ಲ, ಆ ಧ್ವನಿ ನನ್ನದಲ್ಲ ಎಂಬುದನ್ನೇ ಪುನರುಚ್ಚರಿಸಿ ಮರಳಿದ್ದಾನೆ ಎಂಬುದು ಮಾಧ್ಯಮ ಉವಾಚ. ಎಲ್ಲ ಆರೋಪಿಗಳು, ಎಲ್ಲ ಕಾಲದಲ್ಲೂ ಬಳಸಬಹುದಾದ ಜೀವರಕ್ಷಕ ಘೋಷವಾಕ್ಯಗಳೇ ಇವು. ಅದನ್ನೊಪ್ಪಿಸಿ ಬಂದ ಆರೋಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ, ನಾನವನಲ್ಲ, ಸಂವಹನ (?) ಕೊರತೆಯಿಂದ ಗೊಂದಲ ಸೃಷ್ಟಿಯಾಗಿದೆ ಅಷ್ಟೇ, ಎಂಬರ್ಥದಲ್ಲಿ ತನ್ನನ್ನು ಸಮರ್ಥಿಸಿಕೊಂಡಿದ್ದಾನೆ. ನಮ್ಮವನೇ ಆದರೂ,ತಪ್ಪಾಗಿದ್ದರೆ ಶಿಕ್ಷೆಯಾಗಲಿ ಎಂಬ ಆರಂಭಿಕ ನಿಲುವು ಈಗ ಎರಡೂ ಕಡೆ ಕಾಣಿಸುತ್ತಿಲ್ಲದ್ದು ಕಳವಳಕಾರಿ.
ತಮಗೆ ಬೇಕಾದ ಆಡಿಯೊ ಮತ್ತಿತರ ಸರಕನ್ನು ಆರೋಪಿಯಿಂದ ವಶಪಡಿಸಿಕೊಂಡು ಸುಮ್ಮನಾದರೆ? ಎಂಬ ಪ್ರಶ್ನೆಯೂ ಕಾಡುತ್ತದೆ. ಮಾಧ್ಯಮಗಳೂ ಈ ಸುದ್ದಿ ಮರೆತಾಗಿವೆ. ತನಿಖೆಯೂ ಮುಗಿದು ನೆಲ ಕಚ್ಚಿ ಕುಳಿತಿರಬೇಕೆನ್ನಿ. ಸದ್ಯದ ನಮ್ಮ ರಾಜ್ಯದ ವಿಶೇಷವೆಂದರೆ, ಇಲ್ಲಿ ಆಳುವ ಪಕ್ಷದ ಜನರೇ ಆರೋಪ, ಪ್ರತ್ಯಾ ರೋಪ ಮಾಡಿಕೊಂಡು ಗುzಡಬೇಕು. ಸಂಧಾನವೇ ಎಲ್ಲದಕ್ಕೂ ಪರಿಹಾರ ಎಂಬ ಏಕ ಗವಾಕ್ಷಿ ಯೋಜನೆಯಲ್ಲಿ ಸರಕಾರ ನಡೆಯುತ್ತಿದೆಯೆಂಬ ಶಂಕೆ ಮೂಡುತ್ತಿದೆ. ಪ್ರತಿಪಕ್ಷಗಳು ಆಡಳಿತದ ವೈಫಲ್ಯವನ್ನು ಎತ್ತಿಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿವೆ.
ಅವರಿಗೆ ಅವರವರದೇ ಗಲಾಟೆ ಶಮನಗೊಂಡರೆ ಸಾಕೆಂಬ ಸ್ಥಿತಿ ತಲುಪಿರುವುದು ಕರ್ನಾಟಕದ ಸದ್ಯದ ದುರ್ದೈವ. ಈಗಾಗಲೇ ಹಲವು ಪ್ರಕರಣಗಳಂತೆಇಲ್ಲಿಯೂ. ಆರೋಪಿ ಸದ್ಯದ ನಿರ್ದೋಷಿಯಾದರೆ ಅಚ್ಚರಿಯೇನಲ್ಲ. ಮುಂಚಿನ ಕೆಲ ಪ್ರಕರಣಗಳಲ್ಲಿ ದೂರುದಾರನೇ ಶಿಕ್ಷೆಗೊಳಗಾದ ಉದಾಹರಣೆಗಳೂ ಇವೆ. ಈ ಪ್ರಕರಣದಲ್ಲಿ ಮಾತ್ರ ಅದಾಗಲಿಕ್ಕಿಲ್ಲ ಬಿಡಿ. ಇವೆಲ್ಲದರಲ್ಲೂ, ಹಣದ ವ್ಯವಹಾರಕ್ಕೂ ಮಿಗಿ ಲಾದ ಇನ್ನೊಂದು ಕಳವಳಕಾರಿ ಅಂಶ, ಅಧಿಕಾರವಂತರ ಹೆಸರಿನ ದುರ್ಬಳಕೆ. ಇತ್ತೀಚಿಗೆ ಕನ್ನಡದ ಖ್ಯಾತ ಚಲನಚಿತ್ರ ನಟರೊಬ್ಬರ ಆಪ್ತರ ನಡುವೆಯೂ ಇಂತಹ ಅಧಿಕಾರ, ಹೆಸರಿನ ದುರ್ಬಳಕೆಯ ಪ್ರಕರಣ ಮಿಂಚಿ ಮರೆಯಾಗಿದೆ.
ಆ ಪ್ರಕರಣದಲ್ಲೂ ಆರೋಪ, ಹೆಸರಿನ, ದಾಖಲೆಗಳ ದುರ್ಬಳಕೆ ಮತ್ತು ಇಪ್ಪತೈದು ಕೋಟಿಗಳ ಅವ್ಯವಹಾರದ ಸಂಚು. ಒಂದೆರಡು ದಿನ, ಆರೋಪ, ಪ್ರತ್ಯಾ ರೋಪ, ಹಲವಡೆ ದೂರು ದಾಖಲಿಸುವ ಪ್ರಹಸನ ನಡೆದು ಮತ್ತೆ ಪ್ರಕರಣ ಸುಖಾಂತ್ಯ! ಇತ್ತೀಚಿನ ದಿನಗಳಲ್ಲಂತೂ ಇದು ಬಹಳಷ್ಟು ಹೆಚ್ಚುತ್ತಿದೆ. ಕರೋನಾ ಲಾಕ್ಡೌನ್ ಸಮಯದಲ್ಲಿ ಮಾಧ್ಯಮಗಳು ಇಂತಹ ಹಲವು ಪ್ರಕರಣಗಳನ್ನು ನಮ್ಮ ಮುಂದೆ ಹಂಚಿಕೊಂಡಿವೆ. ಮಾರ್ಗ ಮಧ್ಯೆ ತಮ್ಮನ್ನು ತಡೆದ ಪೊಲೀಸರಿಗೆ ತಾವು ಸಾಕ್ಷಾತ್ ಮುಖ್ಯ ಮಂತ್ರಿಗಳ, ಮಂತ್ರಿಗಳ, ಜಿಽಕಾರಿಗಳ, ಪೊಲೀಸ್ ವರಿಷ್ಠಾಧಿಕಾರಿಗಳ ಸಂಬಂಧಿಗಳು, ಆಪ್ತರು ಎಂದುಕೊಂಡು ಪ್ರಭಾವ ಬೀರುವ ಬೀದಿನಾಟಕ ಮಾಡಿದ್ದಾರೆ.
ಇಂತಹವರು ಅಧಿಕಾರಿಗಳ, ಪೋಲೀಸರ ಕರ್ತವ್ಯ ನಿರ್ವಹಣೆಗೆ ತೊಡಕಾದ ಹಲವಾರು ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ. ಎಲ್ಲಕ್ಕಿಂತ ಕಳವಳಕಾರಿ, ಕಾನೂನು, ನಿಯಮಗಳು ಜನಸಾಮಾನ್ಯರಿಗೆ ಮಾತ್ರ ಅನ್ವಯ, ತಾವದನ್ನು ಮೀರಬಲ್ಲ ಅತಿಮಾನುಷರು ಎಂಬ ಉತ್ಕ್ರಷ್ಟ ಮನೋಭಾವನೆ. ಅಧಿಕಾರವಂತರ ಹತ್ತಿರದಲ್ಲಿರುವವರು ಈ ರೀತಿಯ ದುರ್ಬಳಕೆ ಮಾಡಿದ್ದನ್ನು ತಿಳಿದ ಮೇಲೂ ಅವರದನ್ನು ಸಹಿಸಿಕೊಂಡರೆ, ಸಾರ್ವಜನಿಕ ಜೀವನದಲ್ಲಿ ತಮ್ಮ ಹೆಸರಿಗೆ ಮಸಿ ಬಳಿಯುವ ಆತ್ಮಾಹುತಿ ಪಡೆ ಪೋಷಿಸಿಟ್ಟು ಕೊಂಡಂತಾಗುವುದಷ್ಟೇ.