ಚಿಗುರೊಡೆಯುವ ಮುನ್ನ ಚಿವುಟದಿರಿ
ಆಭಿಪ್ರಾಯ
ಸೌಮ್ಯ ಕಾರ್ಕಳ
@.
ಅನಾದಿ ಕಾಲದಿಂದಲೂ ಹೆಣ್ಣು ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸಿಕೊಂಡು ಬಂದಿದ್ದಾಳೆ. ಸಮಾಜದಲ್ಲಿ ಪ್ರತ್ಯಕ್ಷ- ಪರೋಕ್ಷವಾಗಿ ದೌರ್ಜನ್ಯ ಗಳನ್ನು ನಿರಂತರ ಅನುಭವಿಸುತ್ತಿದ್ದಾಳೆ. ಯುಗ ಯುಗಗಳೇ ಕಳೆದರೂ ಮಹಿಳೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಪೈಕಿ ಭ್ರೂಣ ಹತ್ಯೆಯೂ ಒಂದು.21ನೇ ಶತಮಾನ ಆದರೂ ಹಿಂದಿನ ಶತಮಾನಗಳಿಗೆ ಹೋಲಿಸಿದರೆ ಇಂದು ಮಹಿಳೆ ಅಭಿವೃದ್ಧಿ ಹೊಂದಿದ್ದಾಳೆ.
ಸಮಾನತೆ ಜತೆ ಸ್ವಾತಂತ್ರ್ಯವನ್ನು ಕಂಡುಕೊಂಡಿದ್ದಾಳೆ. ಆದರೆ ಹೆಣ್ಣಿನ ವಿಷಯದಲ್ಲಿ ಸಮಾಜದ ಧೋರಣೆ ಎಷ್ಟೇ ಬದಲಾಗಿದೆಯೆಂದರೂ ಆಂತರ್ಯದಲ್ಲಿ ಎಲ್ಲೋ ಅವಳ ವಿಷಯದಲ್ಲಿ ತಪ್ಪುಗಳು ನಡೆಯುತ್ತಲೇ ಇವೆ. ಅವಳು ಸಬಲಳಾಗಿದ್ದಾಳೆಂದರೂ ಒಂದಲ್ಲ ಒಂದು ರೀತಿಯಲ್ಲಿ ಅವಳ ಮೇಲೆ ದೌರ್ಜನ್ಯ ವಾಗುತ್ತಲೇ ಇದೆ. ಸುದೀರ್ಘ ಕಾಲದಿಂದಲೂ ಸಮಾಜದಲ್ಲಿರುವ ತಪ್ಪು ಪರಿಕಲ್ಪನೆಗಳು, ಬದಲಾಗಲೊಪ್ಪದ ಜಡ ಮನಸ್ಥಿತಿಗಳು ಕಂಡೂ ಕಾಣದಂತೆ ಸೀಯನ್ನು ಶೋಷಣೆ ಮಾಡುತ್ತಲೇ ಇವೆ.
ಇದರಲ್ಲಿ ಮುಖ್ಯವಾದದ್ದು ಹೆಣ್ಣು ಭ್ರೂಣ ಹತ್ಯೆ. ತುಂಬಾ ವರ್ಷಗಳ ಹಿಂದೆಯೇ ಹೆಣ್ಣು ಭ್ರೂಣಹತ್ಯೆ ನಿಷೇಧ ಗೊಂಡಿದ್ದರೂ, ತೆರೆಯ ಹಿಂದೆ ಅವ್ಯಾಹತವಾಗಿ ನಡೆಯುತ್ತಿದೆ. ಅತ್ಯಾಧುನಿಕ ಅಲ್ಟ್ರಾ ಸೌಂಡ್ ಡಯಾಗ್ನೊಸ್ಟಿಕ್ ವಿಧಾನಗಳಂತಹ ನವೀನ ತಾಂತ್ರಿಕತೆಯ ಬೆಳವಣಿಗೆಯಿಂದಾಗಿ ತಾಯಿಯ ಗರ್ಭದಲ್ಲಿ ಭ್ರೂಣಾವಸ್ಥೆ ಯಲ್ಲಿರುವಾಗಲೇ ಅದರ ಲಿಂಗ ಪತ್ತೆ ಹಚ್ಚುವ ಅವಕಾಶಗಳಿರುವುದರಿಂದ ಹೆಣ್ಣು ಭ್ರೂಣ ಹತ್ಯೆಗೆ ರಾಜ ಹಾದಿ ತೆರೆದಂತಾಗಿದೆ. ಹೆಣ್ಣು ಮಗುವಿನ ಬಗೆಗಿರುವ ಮೂಢನಂಬಿಕೆಗಳು, ತಪ್ಪು ಕಲ್ಪನೆಗಳು, ಅನವಶ್ಯಕ ಹೊರೆ ಎಂಬ ಮನೋಭಾವಗಳು ಇಂದು ಈ ಎಲ್ಲಾ ಸಮಸ್ಯೆಗಳನ್ನು ಸೃಷ್ಟಿಸಿವೆ.
ಭ್ರೂಣ ಹತ್ಯೆಯ ಪರಿಣಾಮ ಇಂದು ನಮ್ಮ ದೇಶದಲ್ಲಿ ಲಿಂಗಾನುಪಾತ ಆತಂಕಕಾರಿ ಮಟ್ಟಕ್ಕೆ ಕುಸಿದಿದೆ. ಯುನಿಸೆಫ್ನ ವರದಿ ಹೇಳುವಂತೆ ಬಹುಪಾಲು ದೇಶ ಗಳಲ್ಲಿ ಪ್ರತಿ ನೂರು ಗಂಡು ಮಕ್ಕಳ ಜನನಕ್ಕೆ ಸರಿಸುಮಾರು105ಹೆಣ್ಣುಮಕ್ಕಳು ಜನಿಸುತ್ತಾರೆ. ಆದರೆ ಭಾರತದಲ್ಲಿ ನೂರು ಪುರುಷರಿಗೆ93ಕ್ಕೂ ಕಡಿಮೆಮಹಿಳೆಯರಿದ್ದಾರೆ. ಸಂಯುಕ್ತ ರಾಷ್ಟ್ರದ ವರದಿಯ ಪ್ರಕಾರ ಭಾರತದಲ್ಲಿ ಅಂದಾಜು2000ಹೆಣ್ಣುಮ ಕ್ಕಳು ಹುಟ್ಟಿಗೂ ಮುನ್ನ ಗರ್ಭಪಾತದಿಂದಾಗಿ ಭ್ರೂಣ ಹತ್ಯೆಗೊಳಗಾಗುತ್ತಾರೆ. ಲಿಂಗ ತಾರತಮ್ಯದ ಪರಿಣಾಮವಾಗಿ ನಮ್ಮ ಒಟ್ಟು ಜನ ಸಂಖ್ಯೆಯಲ್ಲಿ ೫೦ ಮಿಲಿಯನ್‌ನಷ್ಟು ಹುಡುಗಿಯರು ಮತ್ತು ಮಹಿಳೆಯರು ಕಣ್ಮರೆಯಾಗುತ್ತಿದ್ದಾರೆ.
ಪ್ರತಿವರ್ಷ ಹುಟ್ಟುವ12ಮಿಲಿಯನ್ ಬಾಲಕಿಯರಲ್ಲಿ ಸುಮಾರು ಒಂದೂವರೆ ಮಿಲಿಯನ್‌ಗಿಂತಲೂ ಹೆಚ್ಚಿನ ಬಾಲಕಿಯರು ಒಂದು ವರ್ಷದೊಳಗೇ ಅಸು ನೀಗುತ್ತಿದ್ದಾರೆ. ಅಂದರೆ ಶೇ.20ರಷ್ಟು ಹೆಣ್ಣು ಮಕ್ಕಳು ತಮ್ಮ ಮೊದಲ ಜನ್ಮ ದಿನವನ್ನಾಚರಿಸುವ ಮುನ್ನವೇ ಮಸಣ ಸೇರುತ್ತಿದ್ದಾರೆ. ಇತ್ತೀಚೆಗೆ ಬಂದಿರುವ ಸಮೀಕ್ಷಾ ವರದಿಗಳು ಲಿಂಗಾನುಪಾತದ ಬಗ್ಗೆ ಆಘಾತಕಾರಿ ಮಾಹಿತಿ ಹೊರಹಾಕುತ್ತವೆ. 2014-15ರಲ್ಲಿ ಪ್ರತಿ ಸಾವಿರ ಪುರುಷರಿಗೆ ಹೆಣ್ಣುಮಕ್ಕಳಿದ್ದರು. ಆದರೆ2015-16ರ ವೇಳೆಗೆ ಈ ಅನುಪಾತ 930 ಕ್ಕೆ ಕುಸಿದಿದೆ. ಛತ್ತೀಸ್‌ಗಡ, ಹಿಮಾಚಲ ಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಉತ್ತರಖಂಡ ಹಾಗೂ ಹರಿಯಾಣದಲ್ಲಿ ಲಿಂಗಾನುಪಾತದಲ್ಲಿ ವ್ಯತ್ಯಯವಾಗಿದ್ದು, ಕಾಯಿದೆಯ ಕಟ್ಟುನಿಟ್ಟಿನ ಅನುಷ್ಟಾನ ಮಾಡುವ ಅಗತ್ಯವನ್ನು ಆಯೋಗ ತಿಳಿಸಿದೆ.
ರಾಜ್ಯದಲ್ಲಿ ಕೆಲ ಖಾಸಗಿ ಪ್ರಯೋಗಾಲಯಗಳು ಹಾಗೂ ಆಸ್ಪತ್ರೆಗಳಲ್ಲಿ ಲಿಂಗ ಪತ್ತೆ ಕಾರ್ಯ ಈಗಲೂ ನಡೆಯುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಸಮಾಜದಲ್ಲಿ ಅತಿ ದೊಡ್ಡ ಅಸಮಾನತೆಯನ್ನೇ ಸೃಷ್ಟಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಸಮಾಜದಲ್ಲಿ ಹೆಣ್ಣುಮಕ್ಕಳೇ ಇಲ್ಲದ ಪರಿಸ್ಥಿತಿ ನಿರ್ಮಾಣ ವಾದರೂ ಆಗಬಹುದು. ಅದಕ್ಕಾಗಿ ಬುದ್ಧಿವಂತ ಸಮಾಜ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಗಂಡು ಜನಿಸಿದರೆ ವಂಶೋದ್ಧಾರಕನೆಂದು ಕೊಂಡಾಡುವ, ಸಾವಿ ನವರೆಗೂ ಜತೆಗಿರುವನೆಂಬ ನಂಬಿಕೆ, ಗಂಡು ಸಂತಾನವಿಲ್ಲದಿದ್ದಲ್ಲಿ ಸ್ವರ್ಗ ಪ್ರಾಪ್ತಿಯಾಗದೆಂಬ ಮೌಢ್ಯತೆಯಿಂದ ಹೊರ ಬಂದು ಸ್ತ್ರೀ ಕುಲದ ಅಸ್ತಿತ್ವದ ಉಳಿವಿಗಾಗಿ ಈ ದಿನ ನಾವೆಲ್ಲರೂ ದೃಢತೆಯಿಂದಲೇ ಪ್ರತಿ ಕೈಗೊಳ್ಳೋಣ.