ಕನ್ನಡ ಚಿತ್ರರಂಗಕ್ಕೆ ಹೇಳುವವರು, ಕೇಳುವವರು ಇಲ್ಲವೇ?
ಹಂಪಿ ಎಕ್ಸ್‌ಪ್ರೆಸ್ದೇವಿ ಮಹೇಶ್ವರ ಹಂಪಿನಾಯ್ಡು
ಚಿತ್ರರಂಗವೆಂಬುದು ಬಲು ಪ್ರಭಾವಿ ಮಾಧ್ಯಮ. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ನಾವುಗಳಾರೂ ಕಾಣಲು ಸಾಧ್ಯವಿಲ್ಲದ ಗತಿಸಿದ ಕಾಲವನ್ನು ಇತಿಹಾಸದ ಘಟನಾವಳಿಗಳನ್ನು ಇತಿಹಾಸ ಪುರುಷರನ್ನು ಪ್ರತ್ಯೇಕ್ಷವಾಗಿ ನೋಡಿದಂತೆ ಪರದೆಯಲ್ಲಿ ಕಾಣಲು ಸಾಧ್ಯವಾಗಿಸುವ ಮಾಂತ್ರಿಕ ಮಾಧ್ಯಮ ಚಲನಚಿತ್ರರಂಗ. ರಾಮ, ಕೃಷ್ಣ, ಈಶ್ವರ, ಶ್ರೀ ಕೃಷ್ಣದೇವರಾಯ, ರಾಘವೇಂದ್ರಸ್ವಾಮಿ, ಕನಕ ಪುರಂದರದಾಸರು ಇನ್ನು ಅನೇಕ ಮಹಾಪುರುಷರ ಬದುಕು ಡಾ. ರಾಜ್ ಅವರಮುಖಾಂತರ ಕನ್ನಡಿಗರಿಗೆ ಅನುಭೂತಿಯಾಯಿತು.
ಹಾಗೆಯೇ ಮನರಂಜನೆ, ತಿಳಿವಳಿಕೆ, ಜ್ಞಾನ ಮತ್ತು ಮಾನಸಿಕ ವಿಕಸನಕ್ಕೂ ಈ ಸಿನಿಮಾ ರಂಗವನ್ನು ಪರಿಣಾಮಕಾರಿ ಮಾಧ್ಯಮವಾಗಿ ಬಳಸಬಹುದಾಗಿದೆ. ರಾಜಕಾರಣದಲ್ಲಿ ಮನೆ ಬಾಗಿಲಿಗೆ ಬಂದು ಹಣ ಆಮಿಷ ನೀಡಿ ಮತ ಪಡೆಯುವ ನೀಚರುಗಳು ಜಾತಿ ಕಾರಣಕ್ಕೆ ಸ್ವಾರ್ಥ ಫಲಾಪೇಕ್ಷಿತ ಅಭಿಮಾನಿಗಳನ್ನು ’ಇಟ್ಟು ಕೊಂಡಿರುತ್ತಾರೆ’. ಆದರೆ ತನ್ನ ಪಾಲಿನ ಅಮೂಲ್ಯವಾದ ಮೂರು ಗಂಟೆಗಳನ್ನು ಮೀಸಲಿಟ್ಟು ದುಡಿದ ಹಣದಲ್ಲಿ ಟಿಕೆಟ್ ಖರೀದಿಸಿ ಚಿತ್ರಮಂದಿರದ ಒಳಗೆ ಬಂದು ಕುಳಿತು ಆನಂದಿಸಿ ಅಭಿಮಾನಿಸಿ ತನ್ನ ದೇಹದ ಮೇಲೂ ನಟರ ಹೆಸರನ್ನು ಹಚ್ಚೆ ಹಾಕಿಸಿಕೊಂಡು ಅವರಿಂದ ಏನನ್ನೂ ನಿರೀಕ್ಷಿಸದೆ ಪ್ರಾಣ ನೀಡಲೂ ಸಿದ್ಧರಾಗಿ ನಿಲ್ಲುತ್ತಾರ, ಅಂಥ ಅಭಿಮಾನಿ ದೇವರುಗಳನ್ನು ಸೃಷ್ಠಿಸುವ ತಾಕತ್ತು ಇರುವುದು ಈ ಚಿತ್ರರಂಗಕ್ಕೆ ಮಾತ್ರ.
ಇಂಥ ಚಿತ್ರರಂಗ ಒಂದು ಕಾಲದಲ್ಲಿ ಡಾ. ರಾಜ್ ಅವರ ಸಾರಥ್ಯದಲ್ಲಿ ಕನ್ನಡ ಸಾರಸತ್ವ ಲೋಕವನ್ನೇ ಹಿಂದಿಕ್ಕಿ, ರಾಜಕೀಯ ಮೇಲಾಟಗಳನ್ನು ಹತ್ತಿಕ್ಕಿ, ಆಡಳಿತ ಸರಕಾರಗಳನ್ನೇ ನಡುಗಿಸಿ ಕನ್ನಡ ನಾಡುನುಡಿ ನೆಲಜಲಕ್ಕೆ ಸಂಬಂಽಸಿದಂತೆ ಕೈಂಕರ್ಯಗಳನ್ನು ಮಾಡಿಸಿದಂಥ ಸೈದ್ಧಾಂತಿಕ ಮಾಧ್ಯಮವಾಗಿತ್ತು. ರಾಜಣ್ಣ ನವರು ಇರುವವರೆಗೂ ಕನ್ನಡ ಚಿತ್ರರಂಗ ನಾಡಿನ ಸಾಂಸ್ಕೃತಿಕ ಭಾಗವಾಗಿದ್ದು, ಭಾಷಾ ಸ್ವಾಭಿಮಾನದ ಪ್ರತೀಕ ದಂತಿತ್ತು. ಅವರ ನಂತರ ಅಂಬರೀಶ್ ಅವರು ಕೇವಲ ಗದರುವಿಕೆ ಬೈಯುವಿಕೆಯಿಂದಲೇ ಹಿರಿಯ ಕಲಾವಿದರಾಗಿ ಚಿತ್ರರಂಗವನ್ನು ಹದ್ದುಬಸ್ತಿನಲ್ಲಿಟ್ಟಿದ್ದರು. ಆದರೆ ಅವರೂ ಅಗಲಿದ ಮೇಲೆ ಕನ್ನಡ ಚಿತ್ರರಂಗ ದಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತ್ತಾಗಿ ದಿಕ್ಕಾಪಾಲಾಗುತ್ತಿದೆ.
ಹೀಗಾಗಿ ಇಂದು ಅಡ್ಡಕಸುಬಿಗಳು ವಿಕೃತಿಗಳು ತಿಕ್ಕಲು ತೀಟೆ ತೆವಲು ಹುಚ್ಚುತನಗಳನ್ನು ತೀರಿಸಿಕೊಳ್ಳಲು ರಾಜಕೀಯದ ಭವಿಷ್ಯವನ್ನು ರೂಪಿಸಿಕೊಳ್ಳಲು ಹಣಬಂದಂತೆ ಮನಬಂದಂತೆ ಚಿತ್ರರಂಗವನ್ನು ಉಪಯೋಗಿಸಿಕೊಳ್ಳುತ್ತಿರುವುದು ದುರಂತ. ಈಗ ನಡೆಯುತ್ತಿರುವ ಬೆಳವಣೆಗೆಗಳನ್ನೇ ನೋಡಿ, ಮಂಡ್ಯದ ಲೋಕ ಸಭೆ ಸದಸ್ಯೆ ಸುಮಲತಾ ಅಂಬರೀಶ್ ಅವರು ತಮ್ಮ ಪತಿಯೊಂದಿಗೆ ಚಿತ್ರರಂಗ ದಿಂದ ಬಂದು ರಾಜಕೀಯದಲ್ಲಿ ಅಸ್ತಿತ್ವ ಕಂಡುಕೊಂಡಿದ್ದರೂ ಸುಮಲತಾ ಅವರ ರಾಜಕೀಯ ಜ್ಞಾನ, ಆಡಳಿತದಲ್ಲಿ ತೋರುತ್ತಿರುವ ಅನುಭವ, ಮಾತಿನಲ್ಲಿನ ಪ್ರಬುದ್ಧತೆ ಗಮನಿಸಿದರೆ ಅಂಬರೀಶ್ ಅವರಿಗಿಂತ ಇವರೇ ಮೊದಲು ರಾಜಕೀಯಕ್ಕೆ ಬಂದಿದ್ದರೆ ಇಷ್ಟೊತ್ತಿಗೆ ಇನ್ನೂ ದೊಡ್ಡ ತಲುಪುತ್ತಿದ್ದರು ಎಂಬುದು ರಾಜಕೀಯ ತಜ್ಞರ ಆಶ್ಚರ್ಯವೂ ಅಭಿಪ್ರಾಯವೂ ಹೌದು.
ಇಂಥ ಹೆಣ್ಣು ಮಗಳ ಬೆಳವಣೆಗೆಯನ್ನು ಕಂಡ ಎದುರಾಳಿಗಳು ಸಹಿಸಲಾರದ ಮುಖಭಂಗ ಅನುಭವಿಸಿ ತಮ್ಮ ಪುಕ್ಕವನ್ನು ತಾವೇ ತರಿದುಕೊಂಡು ಕರಿಭೂತ ದಂತೆ ಕಂಗಾಲಾಗುತ್ತಿzರೆ. ಮೊನ್ನೆ ಸುಮಲತಾರನ್ನು ಅನಾಗರಿಕವಾಗಿ ದೂಷಿಸಿದಾಗ ಸುಮಲತಾ ಪರ ದನಿಯೆತ್ತಿದ ಕನ್ನಡದ ಸೃಜನಶೀಲ ನಿರ್ಮಾಪಕರಾಕ್‌ಲೈನ್ ವೆಂಕಟೇಶ್ ಅವರಿಗೆ ಧಮಕಿ ಹಾಕಿದ ರಾಜಕೀಯ ನಾಯಕರ ಆರ್ಭಟವನ್ನು ನೋಡಿ ದರೆ ಚಿತ್ರರಂಗ ತನ್ನ ಘನತೆ, ಪ್ರಭಾವ, ಶಕ್ತಿಯನ್ನು ಕಳೆದು ಕೊಂಡಿರುವುದು ಸಾಬೀತಾ ಗಿದೆ.
ಅದರಲ್ಲೂ ಹಿರಿಯನಟ ದೊಡ್ಡಣ್ಣನವರಿಗಾದ ಅವಮಾನ ಅಯ್ಯೋ ಎನಿಸುವಂತ್ತಿದೆ. ’ಸಿರಿವಂತ’ ಚಿತ್ರ ದಲ್ಲಿ ವಿಷ್ಣುವರ್ಧನ್ ಪಾತ್ರ ಸತ್ತ ನಂತರ ಅವರ ಮಕ್ಕಳ ಮುಂದೆ ಗೋಳಿಡುವ ದೊಡ್ಡಣ್ಣನವರ ಪಾತ್ರ ದಂತೆ ನಿಜ ಬದುಕಿನಲ್ಲೂ ಅಂಬರೀಶ್ ಅವರ ಸ್ಮಾರಕಕ್ಕಾಗಿ ಅಯೋಗ್ಯರ ಮುಂದೆ ತಲೆಬಾಗಿ ಅವಮಾನ ಅನುಭವಿಸುತ್ತಿರುವುದು ದುರಾದೃಷ್ಟ. ಬಂಗಾರದಂಥ ಕೆಲಸ ಮಾಡುವು ದನ್ನು ಬಿಟ್ಟು ಪುಟಗೋಸಿ ರಾಜಕೀಯದಲ್ಲಿ ಬಿಸಿ ರಾಗಿಮುದ್ದೇ ಕಟ್ಟಿದರೂ ದೀರ್ಘಕಾಲ ಹೇಳಿ ಕೊಳ್ಳುವಂಥ ಒಂದು ದೊಡ್ಡ ಸ್ಥಾನಮಾನ ಗಿಟ್ಟಿಸಲು ಯೋಗ್ಯತೆಗಳಿಲ್ಲದವರೆ ಇಡೀ ನಾಡು ಮೆಚ್ಚಿಕೊಳ್ಳುವಂಥ ಚಿತ್ರಗಳನ್ನು ನೀಡಿರುವ ಸದಭಿರುಚಿ ನಿರ್ಮಾಪಕನಿಗೆ ಬಾಯಿಗೆ ಬಂದಂತೆ ತೆಗಳುವ ಮೂಲಕ ಬಕೇಟು ಬಾರಿಸುತ್ತಿದ್ದಾರೆ.
ಅದೇ ಅಲ್ಪಸಂಖ್ಯಾತ ಮುಖಂಡನೊಬ್ಬ ಈ ಮುದ್ದೆ ಗಿರಾಕಿಯ ಮಾಲೀಕನಿಗೆ ಬಾಯಿಗೆ ಬೈಯ್ದಾಗ ಮೆತ್ತಗಿದ್ದು ಈಗ ರಾಕ್‌ಲೈನ್‌ಗೆ ಮುತ್ತಿಗೆ ಹಾಕುತ್ತಿದ್ದಾರೆ. ಇಂಥ ದರ್ಪದ ಮತ್ತು ಆಕ್ರಮಣದ ಬೆದರಿಕೆ ಪರಿಸ್ಥಿತಿಯಲ್ಲೂ ರಾಕ್‌ಲೈನ್ ಪರ ಚಿತ್ರರಂಗದ ಯಾವೊಬ್ಬ ನಟರೂ ನಿರ್ಮಾಪಕರೂ ನಿಲ್ಲದೆ ಮೌನವಾಗಿರುವು ದನ್ನು ನೋಡಿದರೆ ಚಿತ್ರರಂಗದಲ್ಲಿ ಒಗ್ಗಟ್ಟು ಒಗ್ಗೂಡುವುದು ಇಲ್ಲದಂತಾಗಿದೆ. ಇನ್ನೊಂದು ಕಡೆ ಕಳೆದ ಒಂದು ವಾರದಿಂದ ಬಹುಕೋಟಿ ವಂಚನೆ ಹಗರಣ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಮತ್ತು ಒಂದು ಹೆಣ್ಣಿನ ಸುತ್ತ ಸುತ್ತಿಕೊಂಡು ವಿವಾದವಾಗಿದೆ. ಜತೆಗೆ ದರ್ಶನ್ ಕೆಲವರ ಮೇಲೆ ಹಲ್ಲೆ ಮಾಡಿದ ಆರೋಪಗಳು ಕೇಳಿಬಂದಿದೆ. ಇಂಥದ್ದನೆ ಚಿತ್ರರಂಗದ ಯಾವ ದೊಡ್ಡ ಮನುಷ್ಯನೂ ವಿಚಾರಿಸಿ ತಪ್ಪು ಸರಿಯನ್ನು ಕೇಳಿ ವಿವಾದವನ್ನು ತಿಳಿಮಾಡು ವಂಥ ಕೆಲಸವಾಗಿಲ್ಲ. ಅಸಲಿಗೆ ಅಂಥ ಪ್ರಮುಖ ಹಿರಿಯರು ಇದ್ದರೂ ಅವರ ಹಿರಿತನಕ್ಕೆ ನಯಾಪೈಸೆ ಬೆಲೆಯಿಲ್ಲ. ಚಿತ್ರರಂಗವನ್ನು ಉಳಿಸಲು ಬೆಳೆಸಲು ಇನ್ನಿತರೆ ಅನುಕೂಲ ಸೌಲಭ್ಯಗಳಿಗಾಗಿ ಸರಕಾರದ ಮುಂದೆ ಒಗ್ಗಟ್ಟಾಗಿ ನಿಲ್ಲುವ ಮಂದಿ, ಅದೇ ಚಿತ್ರರಂಗದ ಹಿರಿಯರು ಕೊಳಕು ರಾಜಕಾರಣಿಗಳಿಂದ ಅಪಮಾನ ಬೆದರಿಕೆಗೆ ಒಳಗಾದಾಗ ಯಾರ ಪರವಾಗಿ ಯಾರೂ ಇಲ್ಲದಂತ್ತಾಗಿದೆ.
ಇನ್ನು ರಾಜಕಾರಣದ ಪುಟಗೋಸಿಗಳೆ ದರ್ಶನ್ ರಂಥ ನಟರನ್ನು ’ಯಾವನು ಅವನು ಡಿ ಬಾಸ್’ ಎಂದು ಹಾದಿಬೀದಿಯಲ್ಲಿ ಪ್ರಶ್ನಿಸುತ್ತಾರೆ. ಇಂಥವರು ನಾಳೆ ’ಯಾರೀ ಅದು ರಾಕ್‌ಕುಮಾರ್’ ಎಂದು ಬೊಗಳಿದರೂ ಆಶ್ಚರ್ಯವಿಲ್ಲ. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಹೊಣೆಗಾರಿಕೆಯುಳ್ಳ ಒಬ್ಬ ಮಾರ್ಗದರ್ಶಕರಿಲ್ಲದೆ ಅಸಂಘಟಿತ ಉದ್ಯಮವಾಗಿದೆ. ಇವರಿಗಿಂತ ಎಲ್ಲವನ್ನೂ ಬಿಟ್ಟ ಸ್ವಾಮೀಜಿಗಳೇ ಲೇಸು, ತಮ್ಮ ಜಾತಿಗಳಿಗಾಗಿ ಬೇಡಿಕೆಗಳಿಗಾಗಿ ಪಾದಯಾತ್ರೆಗಳನ್ನುಪ್ರತಿಭಟನೆಗಳನ್ನು ಮಾಡಿಕೊಂಡು ತಮ್ಮ ಬೇಡಿಕೆಗಳನ್ನೆ ಕಾಲಕಾಲಕ್ಕೆ ಈಡೇರಿಸಿಕೊಳ್ಳುತ್ತಿದ್ದಾರೆ.
ಸಣ್ಣ ಪುಟ್ಟ ಕಾರ್ಮಿಕರ ವರ್ಗದವರು, ಮಂಗಳಮುಖಿಗಳು, ಅಷ್ಟೇ ಏಕೆ ಪಾಕ್‌ನಲ್ಲಿ ವಾಕಿಂಗ್ ಮಾಡುವವರೆ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಒಗ್ಗೂಡುತ್ತಾರೆ. ಹೀಗಿರುವಾಗ ಸಮಾಜದ ಒಂದು ಭಾಗವಾಗಿರುವ ಒಂದು ಜವಾಬ್ದಾರಿ, ಪ್ರಭಾವಿ ಕ್ಷೇತ್ರವಾಗಿರುವ ಚಿತ್ರರಂಗವನ್ನು ಸಲಹುವ ಒಬ್ಬ ಆದರ್ಶ ಹಿರಿಯರ ಉಸ್ತುವಾರಿ ಇರಬೇಕಲ್ಲವೇ?. ಆದರೆ ಇರುವ ಹಿರಿಯ ನಟರುಗಳ ಮಧ್ಯೆಯೇ ಸೋದರತ್ವ ನಶಿಸಿ ಅವರುಗಳ ಮಧ್ಯೆಯೇ ಚಾಲೆಂಜು ಟಾಂಗು ಟ್ರೋಲು ಕೌಂಟರ್ ಇಗೋಗಳು ಚಾಲ್ತಿಯಲ್ಲಿದೆ. ಅಸಲಿಗೆ ಇವರುಗಳ ಮಧ್ಯೆ ಆರೋಗ್ಯಕರ ಸಂಬಂಧವನ್ನು ಏರ್ಪಡಿಸಬೇಕಾದ ವಾಣಿಜ್ಯ ಮಂಡಳಿಯೇ ಇಬ್ಭಾಗವಾಗಿ ಕುಳಿತಿದೆ. ಹಳೆಯ ’ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ’ ಅಧ್ಯಕ್ಷ ಜೈರಾಜ್ ಅವರದ್ದು ಒಂದಾದರೆ, ’ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ’ಯೊಂದು ಕೃಷ್ಣೇಗೌಡ ಎಂಬುವವರ ಅಧ್ಯಕ್ಷತೆಯಲ್ಲಿದೆ.
ಇನ್ನು ಖ್ಯಾತ ನಿರ್ದೇಶಕ ಎಸ್.ಅರ್.ಪುಟ್ಟಣ್ಣ ಕಣಗಾಲ್ ಅವರು ಸ್ಥಾಪಿಸಿದ ನಿರ್ದೇಶಕರ ಸಂಘ ಅಯೋಗ್ಯರುಗಳ ಪಾಲಾಗುತ್ತಿದೆ. ನಿರ್ದೇಶಕ ಸಂಘದಲ್ಲಿನ ಅಧ್ಯಕ್ಷರು ಪದಾಽಕಾರಿಗಳ ಸ್ಥಾನದಲ್ಲಿ ಕೂರುವವರು ಆ ಕಾಲಘಟ್ಟದಲ್ಲಿ ಯಶಸ್ವಿ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿ ಗೆದ್ದಿರುವ ಹಿರಿಯರು ಅಧ್ಯಕ್ಷರಾಗುವುದು ಆ ಸ್ಥಾನಕ್ಕೇ ಸಮಂಜಸ ಮತ್ತು ಗೌರವ. ಶಿಕ್ಷಕರ ಸಂಘಕ್ಕೆ ಹಿರಿಯ ಅನುಭವಿ ಶಿಕ್ಷಕರು ಅಧ್ಯಕ್ಷರಾಗದೆ ಶಾಲೆಯಲ್ಲಿ ಗಂಟೆ ಬಾರಿಸುತ್ತಿದವರು ಅಧ್ಯಕ್ಷರಾದರೆ ಹೇಗಿರುತ್ತದೆ? ಹಾಗಾಗಿದೆ ಚಿತ್ರರಂಗದ ಆಯಾಕಟ್ಟಿನ ಸ್ಥಾನಗಳು.
ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಕ್ಷೇತ್ರದಿಂದ ಬಂದವರು. ನಾಲ್ಕೈದು ಚಿತ್ರಗಳನ್ನು ನಿರ್ದೇಶಿಸಿರಬಹುದು. ಇನ್ನು ನಿರ್ದೇಶಕನಿಗಿಂತ ವೆಂಕಟೇಶ್ ಹೆಸರು ವಿವಾದಗಳ ಹೆಚ್ಚು ಪ್ರಚಾರಪಡೆದುಕೊಳ್ಳುತ್ತಿದೆ. ಅಸಲಿಗೆ ಇವರುಗಳಾರೂ ಒಂದು ರಾಜ್ಯವನ್ನು ಪ್ರತಿನಿಧಿಸುವ ಸ್ಟಾರ್ ನಿರ್ದೇಶಕರುಗಳೇ ಅ.ಎಸ್.ವಿ.ರಾಜೇಂದ್ರಸಿಂಗ್ ಬಾಬು, ಉಪೇಂದ್ರ, ಎಸ್.ಮಹೇಂದ್ರ, ಸುನಿಲಕುಮಾರದೇಸಾಯಿ, ಸುರೇಶ್ ಹೆಬ್ಳೀಕರ್, ನಾಗಾಭರಣ, ಗಿರೀಶ್‌ ಕಾಸರವಳ್ಳಿ ಇಂಥವರಿಂದ ನಿರ್ದೇಶಕರ ಸಂಘದ ಘನತೆ ಹೆಚ್ಚಾಗುತ್ತದೆ.
ಇನ್ನು ಬಂಡವಾಳ ಇದ್ದವರೆ ನಿರ್ಮಾಪಕರ ಸಂಘದಲ್ಲಿದ್ದಾರೆ. ಹೀಗಾಗಿ ಹಿರಿಯ ನಿರ್ದೇಶಕರಿಗಾಗಲಿ ನಿರ್ಮಾಪಕರಿಗಾಗಲಿ ಯಾವ ಸ್ಥಾನಮಾನ ಗೌರವಗಳೂ ಇಲ್ಲದಂತ್ತಾಗಿ ಮನೆ ಸೇರಿಕೊಂಡಿದ್ದಾರೆ. ಅನಂತ ನಾಗ್, ರಮೇಶ್ ಅರವಿಂದ್, ಜಗ್ಗೇಶ್, ದೇವರಾಜ್ ಶಶಿಕುಮಾರ್‌ರಂಥ ಒಂದು ತಲೆಮಾರಿನ ನಟರುಯಾರನ್ನೂ ನಿಯಂತ್ರಿಸುವ ಗೋಜಿಗೆ ಹೋಗುವುದಿಲ್ಲ. ಇನ್ನು ಕನ್ನಡದ ಅಗ್ರಪಂಕ್ತಿ ನಿರ್ಮಾಪಕ ನಿರ್ದೇಶಕ ರವಿಚಂದ್ರನ್, ಶಿವಣ್ಣ, ಪುನೀತ್ ರಾಜಕುಮಾರ್,ಉಪೇಂದ್ರರಂಥವರು ಇಂದಿನ ’ಬಹುಮುಖ ಪ್ರತಿಬೆಗಳ’ ನಿರ್ದೇಶಕ ನಿರ್ಮಾಪಕರ ಅವಾಂತರಗಳನ್ನು ನೋಡಿಕೊಂಡು ಸುಮ್ಮನಿರುತ್ತಾರಷ್ಟೆ.
ಇನ್ನು ಸುದೀಪ್ ತನ್ನದೇ ಆದ ಕೋಟೆಯಲ್ಲಿ ಮದಕರಿನಾಯಕರಾಗಿದ್ದಾರೆ. ಇನ್ನು ಸ್ಟೂಡಿಯೋಗಳು, ಮಂಡಳಿಗಳು, ಚಲನಚಿತ್ರ ಅಕಾಡೆಮಿಯಂಥ ಸರಕಾರಿ ಸ್ಥಾನಗಳೆ ರಾಜಕೀಯದ ಮುಲಾಜಿನಲ್ಲಿದೆ. ಇನ್ನೊಂದಷ್ಟು ಮಂದಿ ಚಿತ್ರೋತ್ಸವಗಳು ಪ್ರಶಸ್ತಿಗಳನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿಯೇ ಗುಂಪು ಕಟ್ಟಿಕೊಂಡಿzರೆ. ಹೀಗಾಗಿ ಅಂದು ಯಾವ ಸಾಹಿತಿಗಳು ಹಿರಿಯ ನಟರುಗಳು ಡಬ್ಬಿಂಗ್ ಅನ್ನು ವಿರೋಧಿಸಿಕೊಂಡು ಬಂದರೋ ಅಂಥ ದಂಧೆಯ ಪ್ರವಾಹವನ್ನು ಇಂದು ಯಾರೂ ತಡೆಯಲಾಗಲಿಲ್ಲ.
ಇನ್ನು ಉಳಿದ ನಟರುಗಳಿಗಾಗಲಿ ಅವರ ಚಿತ್ರಗಳಿಗಾಗಲಿ ಮೊದಲಿದ್ದಂಥ ಕ್ರೇಝ್ ಕಾಣುತ್ತಿಲ್ಲ. ಇನ್ನು ಹೊಸದಾಗಿ ಬರುತ್ತಿರುವ ನಿರ್ದೇಶಕರಿಗೆ ಪ್ರತಿಭೆಗಳಿಗೆಒಳ್ಳೆಯ ನಿರ್ಮಾಪಕರೇ ಸಿಗುತ್ತಿಲ್ಲ. ಅಕಸ್ಮಾತ್ ಸಿಕ್ಕರೆ ಅದೇ ನಿರ್ಮಾಪಕ ಹೀರೋ ಆಗಿ ಕ್ರಿಯಾಶೀಲ ನಿರ್ದೇಶಕ ಮತ್ತು ನಟರುಗಳನ್ನೇ ಡಮ್ಮಿ ಮಾಡುವುದೇಹೆಚ್ಚು. ಎಲ್ಲಕ್ಕಿಂತ ಮಿಗಿಲಾಗಿ ಇಂದು ಚಿತ್ರಮಂದಿರಗಳೇ ಉರುಳಿ ಬೀಳುತ್ತಿವೆ. ಒಂದು ಕಾಲದಲ್ಲಿ ಗಾಂಧಿನಗರದಲ್ಲಿ ಕನ್ನಡ ಚಿತ್ರಗಳ ’ಕಾಶಿ’ ಆಗಿದ್ದ ಕೆಂಪೇಗೌಡರಸ್ತೆ ಇಂದು ಮಾಲ್‌ಗಳ ಮಹಲುಗಳಾಗಿವೆ. ಇನ್ನು ಇದೇ ರೀತಿ ಕರೋನಾ ಅಲೆಅಲೆಯಾಗಿ ಇನ್ನೊಂದೆರಡು ವರ್ಷ ಮುಂದುವರೆದರೆ ಪ್ರೇಕ್ಷಕ ಚಿತ್ರಮಂದಿರವನ್ನು ಮತ್ತು ಚಿತ್ರರಂಗವನ್ನೇ ಮರೆತುಬಿಡುವ ಅಪಾಯವಿದೆ.
ಬೇರೆ ಕ್ಷೇತ್ರಗಳಲ್ಲಿ ನಾಗರಿಕರು ಐದತ್ತು ನಿಮಿಷಗಳಲ್ಲಿ ಅಂತರ ಕಾಯ್ದುಕೊಳ್ಳಬಹುದು. ಆದರೆ ಚಿತ್ರಮಂದಿರ ಮತ್ತು ಶಾಲೆಗಳಲ್ಲಿ ಎರಡು ಮೂರು ಗಂಟೆಗಳ ಕಾಲ ಪಕ್ಕಪಕ್ಕದ ಕೂರಬೇಕಿರುವುದರಿಂದ ಚಿತ್ರಮಂದಿರಗಳು ತೆರೆಯುವುದು ಅಷ್ಟು ಸುಲಭವಲ್ಲ. ಇದರ ಮಧ್ಯೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಡ್ರಗ್ಸ್ ಹಗರಣದ ಆರೋಪಿ ರಾಗಿಣಿಯಂಥ ನಟಿ ಪಡೆದಿದ್ದಾರೆಂದು ಇತ್ತೀಚೆಗೆ ಸುದ್ದಿವಾಹಿನಿಯೊಂದರಲ್ಲಿ ಸುದ್ದಿಯಾಗಿದ್ದರೂ ಕನ್ನಡ ಚಿತ್ರರಂಗ ನಿಬ್ಬೆರಗಾಗಿ ಸಂಭ್ರಮ ಆಚರಿಸಲೇ ಇಲ್ಲ. ಕಾರಣ ಈ ಪ್ರಶಸ್ತಿ ಕೇಂದ್ರ ಸರಕಾರ ನೀಡುವ ಅಸಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯಲ್ಲ. ಯಾವುದೋ ಗುಜರಿ ಸಂಸ್ಥೆ ನೀಡಲಾದ ‘ಲೆಜೆಂಡ್ ದಾದಾ ಸಾಹೇಬ್ ಪಾಲ್ಕೆ ಅವಾರ್ಡ್’.
ಇಂಥ ಪ್ರಶಸ್ತಿಗಳು, ಗೌರವ ಡಾಕ್ಟರೇಟ್ ಗಳು ಈಗ ಕೆಜಿಗೆ ಇಷ್ಟು ಎಂದು ಕೇಳಿ ಪ್ರೀಪೇಡ್ ಮಾಡಿದರೆ ಸಾಕು, ಜೈಲಿನಲ್ಲಿ ಕುಳಿತ ಖೈದಿಯೂ ಸಹ ಪಡೆದುಕೊಳ್ಳ ಬಹುದಾಗಿದೆ. ನಾಳೆ ಭಾರತರತ್ನ ಪದ್ಮಭೂಷಣ ಪದ್ಮಶ್ರೀ ಪ್ರಶಸ್ತಿಗಳ ಹೆಸರಿಗೂ ಒಂದೊಂದು ಅಡ್ಡ ಹೆಸರಿಟ್ಟು ಮೂಟೆಗಟ್ಟಲೆ ಪ್ರಶಸ್ತಿ ನೀಡಿದರೂಆಶ್ಚರ್ಯವಿಲ್ಲ. ಇಂಥ ವ್ಯಾದಿಗಳಿಂದ ಅಯೋಗ್ಯ ನಾಲಾಯಕ್ಕು ನಟನಟಿಯರುಗಳನ್ನು ನಿರ್ದೇಶಕ ನಿರ್ಮಾಪಕರುಗಳನ್ನು ಅಸಹ್ಯವಾಗಿ ಅಲಂಕರಿಸಿಮೆರೆಸುವ ಕಾಲ ಶುರುವಾಗಿದೆ. ಆದ್ದರಿಂದ ಅನಂತ್ ನಾಗ್ ರವಿಚಂದ್ರನ್ ಶಿವಣ್ಣರಂಥ ಹಿರಿಯರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿ ಇಂಥಎಡವಟ್ಟುಗಳನ್ನೆ ತಡೆದು ಕನ್ನಡ ಚಿತ್ರರಂಗದ ಘನತೆ ಗೌರವ ಸಾಂಸ್ಕೃತಿಕ ಸ್ಥಾನವನ್ನು ಮುಖ್ಯವಾಗಿ ಪ್ರೇಕ್ಷಕರನ್ನು ಉಳಿಸಿಕೊಂಡು ಹೋಗಬೇಕಿದೆ.