ಅನಂತನಾ‌ಗ್‌ಗೆ ಪದ್ಮಪ್ರಶಸ್ತಿ ಬೇಡವೇ ?
ಅಭಿವ್ಯಕ್ತಿ
ಎಲ್.ಪಿ.ಕುಲಕರ್ಣಿ
kulkarnilp007@.
ಇಂತಹ ಪದ್ಮ ಪ್ರಶಸ್ತಿಗಳು ಯಾವುದೇ ನಗದು ರೂಪದ ಬಹುಮಾನವನ್ನು ಹೊಂದಿರುವುದಿಲ್ಲ. ಬದಲಾಗಿ, ರಾಷ್ಟ್ರಪತಿಗಳ ಹಸ್ತಾಕ್ಷರವನ್ನೊಳಗೊಂಡ ಪ್ರಶಸ್ತಿ ಪತ್ರ ಮತ್ತು ಪದಕದ ಒಂದು ಪುಟ್ಟ ಪ್ರತಿಕೃತಿ ಜತೆಗಿರುತ್ತದೆ.
ಚಲನಚಿತ್ರಗಳಲ್ಲಿ ನಾಯಕ ನಟ ಎಂದರೆ ಮುಗಿದೇ ಹೋಯಿತು. ಅವರ ಥಳಕು- ಬಳಕು, ಉದ್ದುದ್ದ ಡೈಲಾಗ್ ಹೊಡೆಯುವುದು. ಡಿಶುಂ-ಡಿಶುಂ ಎಂದು ಒಟ್ಟಿಗೆಏಳೆಂಟು ಜನರ ಜತೆ ಫೈಟ್ ಮಾಡಿ, ಅವರನ್ನೆ ನೆಲಕ್ಕೆ ಕೆಡವಿ ಬಿಡುವುದು. ರೋಮಾನ್ಸ್, ಫೈಟಿಂಗು. ಒಟ್ಟಿನಲ್ಲಿ ಅಲ್ಲಿ ನಾಯಕನ ವಿಜ್ರಂಭಣೆಯೇ ವಿಜ್ರಂಭಣೆ! ಆದರೆ ,ಇಂತಹ ನಾಯಕ ನಟರಲ್ಲಿ ಕೇವಲ ತಮ್ಮ ಸಹಜ ನಟನೆಯಿಂದ ಸಾಮಾನ್ಯ ಜನರ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದವರು ಬೆರಳೆಣಿಕೆಯಷ್ಟು ಮಾತ್ರ. ಅಂಥವರ ಸಾಲಿನಲ್ಲಿ ಎದ್ದು ಕಾಣುವ ವ್ಯಕ್ತಿತ್ವ ಅನಂತನಾಗ್.
ಅನಂತನಾಗ್ ಭಾರತೀಯ ಚಿತ್ರಲೋಕ ಕಂಡ ಒಂದು ಅದ್ಭುತ ಪ್ರತಿಭೆ. ತಮ್ಮ ಸ್ವಾಭಾವಿಕ ನಟನಾಶೈಲಿ ಯಿಂದಲೇ ಗಮನ ಸೆಳೆಯುವ ಇವರು ಕನ್ನಡ ಮಾತ್ರವಲ್ಲದೇ ಮರಾಠಿ,ತಮಿಳು,ತೆಲುಗು,ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. 6 ಫಿಲ್ಮ ಫೇರ್ ಮತ್ತು5ಕರ್ನಾಟಕ ಚಲನಚಿತ್ರ ಪ್ರಶಸ್ತಿ ಗಳನ್ನು ಪಡೆದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿಯೂ ತಮ್ಮ ಛಾಪನ್ನು ಮೂಡಿಸಿರುವ ಇವರು1994ರ ಜೆ.ಎಚ್. ಪಟೇಲ್ ಸರಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಚಿವರಾಗಿ ಕೆಲಸ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ದಂತಕಥೆ ದಿ.ಶಂಕರನಾಗ್ ಇವರ ನಲ್ಮೆಯ ಸಹೋದರ. ಈಗ72ವರ್ಷ ನಡೆಯು ತ್ತಿದ್ದರೂ, ಅನಂತನಾಗ್ ಇನ್ನೂ ಚಿರಯುವಕನೇ. ಅವರ ಖಡಕ್ ಮಾತು, ಗಾಂಭೀರ್ಯದ ನಡಿಗೆ, ಹೀಗೆ ಅವರನ್ನು ವರ್ಣಿಸುತ್ತಾ ಹೋದರೆ ಪದಗಳೇ ಸಾಲವು. ತೊಂಬತ್ತರ ದಶಕದಲ್ಲಿ ತೆರೆಕಂಡ, ಖ್ಯಾತ ನಿರ್ದೇಶಕಫಣಿರಾಮಚಂದ್ರರ‘ಗಣೇಶನ ಮದುವೆ’, ‘ಗೌರಿ ಗಣೇಶ’ ಚಲನಚಿತ್ರಗಳು ಕನ್ನಡ ಚಿತ್ರರಂಗದ ದಾಖಲೆ ಬರೆದುಬಿಟ್ಟವು. ಈ ಚಿತ್ರಗಳು ಈಗಿನಂತೆ ಬಹುಕೋಟಿ ಹಣ ಖರ್ಚುಮಾಡಿ, ಬರಿ ನಾಯಕ ನಟ, ನಾಯಕ ನಟಿಯರ ವಿಜ್ರಂಭಣೆಯಿಂದ ಕೂಡಿದ ಚಿತ್ರಗಳಲ್ಲ. ಅತಿ ಕಡಿಮೆ ಖರ್ಚಿನಲ್ಲಿ ತಯಾರಾದ ಇವು, ಶ್ರೀ ಸಾಮಾನ್ಯನ ಬದುಕು ಹೇಗಿರುತ್ತದೆ ಎಂದು ತೋರಿಸಿಕೊಟ್ಟ ಚಿತ್ರಗಳವು.
ಆ ಚಿತ್ರಗಳು ನಮ್ಮ ಮನೆಯ, ನಾವು ವಾಸಿಸುವ ವಠಾರದಲ್ಲೇ ನಡೆಯುತ್ತಿವೆ ಏನೋ ಎಂಬಂತೆ ಮನಸ್ಸಿಗೆ ಬಹಳ ಹತ್ತಿರವಾದ ಚಿತ್ರಗಳು. ಅಲ್ಲಿ ಶ್ರೀ ಸಾಮಾನ್ಯನ ಬದುಕಿನ ಬಡತನ, ಹತಾಶೆ, ಮೋಸ ಹೋಗುವಿಕೆ ಮುಂತಾದ ಎಲ್ಲ ಕಾನ್ಸೆಪ್ಡ್’ಗಳು ಚಿತ್ರ ವೀಕ್ಷಕನಿಗೆ ಬಹಳ ಹತ್ತಿರದಿಂದ ಕಾಣುವುದಲ್ಲದೇ ಮನಸ್ಸಿಗೆ ನಾಟುತ್ತವೆ. ಅನಂತನಾಗ್ ಅಂದಾಗ ನೆನಪಾಗೋದು ಅವರು ಡಾ.ರಾಜಕುಮಾರ್ ನಟಿಸಿರುವ ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿನ ನಾರದನ ಪಾತ್ರ. ಈ ನಾರದನ ಪಾತ್ರಕ್ಕೆ ಮತ್ತೊಂದು ಮೆರುಗುಕೊಟ್ಟ ಚಿತ್ರ ,‘ನಾರದ ವಿಜಯ’.
ಇಲ್ಲಿ ಅನಂತ ನಾಗ್ ನಾರದ ಹಾಗೂ ವಿಜಯನ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಗಳನ್ನು ನೋಡುತ್ತಿದ್ದರೆ ಸಾಕ್ಷಾತ್ ನಾರದರೇ ಭೂಮಿಗೆ ಇಳಿದು ಬಂದಂತೆಭಾಸವಾಗುತ್ತದೆ. ಅದು ನಾಯಕ ನಟನ ಪಾತ್ರವಾಗಲಿ, ಪೋಷಕ ನಟನ ಪಾತ್ರವಾಗಲಿ ಎಲ್ಲ ಪಾತ್ರಗಳಲ್ಲೂ ನಟಿಸಲು ಅನಂತನಾಗ್ ಎತ್ತಿದ ಕೈ. ಇಂತಹಅನಂತನಾಗ್ ಅವರಿಗೆ ಭಾರತದ ಸರಕಾರ ಕೊಡಮಾಡುವ ಪದ್ಮ ಪ್ರಶಸ್ತಿಗಳಲ್ಲಿ ಒಂದೂ ಪದ್ಮಗಳು ಇದುವರೆಗೂ ಸಲ್ಲದಿರುವುದು ಕನ್ನಡಿಗರಾದ ನಮಗೆ ಬೇಸರದ ಸಂಗತಿ. ಇದನ್ನು ಮನಗಂಡ ಕನ್ನಡಿಗರು ಈಗ ದೊಡ್ಡ ಪ್ರಮಾಣದಲ್ಲಿ ‘ಅನಂತನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಲೇ ಬೇಕು’ ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಕನ್ನಡಿಗರ ಈ ನಡೆ ಸರಿಯಾಗೇ ಇದೆ. ಸದ್ಯ, ಕನ್ನಡದ ಎಲ್ಲ ಸುದ್ಧಿವಾಹಿನಿಗಳಲ್ಲಿ ಈ ಕುರಿತು ಪ್ರತಿ ದಿನವೂ ಚರ್ಚೆ ನಡೆಯುತ್ತಿದೆ. ಹಾಗಾದರೆ, ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಎಂಬ ಸಾಲು ಸಾಲು ಈ ಪದ್ಮ ಪ್ರಶಸ್ತಿಗಳ ಮಹತ್ವ ವೇನು ಎಂದು ಈ ಸಂದರ್ಭದಲ್ಲಿ ತಿಳಿದು ಕೊಳ್ಳುವುದು ಬಹಳ ಮುಖ್ಯವೆನಿಸುತ್ತದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ಪುರಸ್ಕಾರಕ್ಕೆ ಕೆಳಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಇಲ್ಲವೇ ಅಸಾಧಾರಣ ಸೇವೆ ಸಲ್ಲಿದವರನ್ನು ನಾಮನಿರ್ದೇಶನ ಮಾಡಲು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಜನತೆಗೆ ಕರೆಕೊಟ್ಟಿದ್ದಾರೆ.
ಇದೇ ಸೆ.೧ಕ್ಕೆ ಈ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಕೊನೆಯ ದಿನವಾಗಿರುತ್ತದೆ. ಹೀಗಾಗಿ ಕನ್ನಡಿಗರು ಈ ಪದ್ಮಪುರಸ್ಕಾರಕ್ಕೆ ನಟ,ಅನಂತನಾಗ್ ಸೂಕ್ತ ವ್ಯಕ್ತಿ ಎಂದು, ಅವರಿಗೆ ಈ ಸಾಲಿನ ಪದ್ಮ ಪುರಸ್ಕಾರವನ್ನು ಕೇಂದ್ರ ಸರಕಾರ ನೀಡಲೇಬೇಕೆಂದು ಒತ್ತಾಯಿಸುತ್ತಿದ್ದಾರೆ.1954ರಿಂದ ಕೊಡಮಾಡಲು ಪ್ರಾರಂಭಿಸಿದ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಜತೆಗೆ ಈ ಪದ್ಮಪುರಸ್ಕಾರವನ್ನೂ ಸಹ ಕೊಡಲು ತೀರ್ಮಾನಿಸಲಾಯಿತು. ಆರಂಭದಲ್ಲಿ ಪದ್ಮವಿಭೂಷಣವೆಂದು ಹೆಸರಿಸಲಾಗಿದ್ದ ಈ ಪ್ರಶಸ್ತಿಯು ಮೊದಲ ವರ್ಗ, ಎರಡನೇ ವರ್ಗ ಹಾಗೂ ಮೂರನೇ ವರ್ಗವೆಂದುಒಟ್ಟು ಮೂರು ವಿಧಗಳಲ್ಲಿ ವಿಂಗಡಿಸಲಾಗಿತ್ತು.
ನಂತರ ಈ ಪ್ರಶಸ್ತಿಗಳನ್ನು ಕ್ರಮವಾಗಿ ಪದ್ಮವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀ ಎಂದು ವರ್ಗೀಕರಿಸಿ1955ರಲ್ಲಿ ರಾಷ್ಟ್ರಪತಿಗಳಿಂದ ಅನುಮತಿ ಪಡೆಯಲಾಯಿತು. ಪದ್ಮವಿಭೂಷಣ ಪ್ರಶಸ್ತಿಯನ್ನು ಅಸಾಧಾರಣ ಮತ್ತು ವಿಶಿಷ್ಟ ಸೇವೆಗೆ, ಪದ್ಮ ಭೂಷಣವನ್ನು ವಿಶಿಷ್ಠ ಸೇವೆಗೆ ಜತೆಗೆ ಅದ್ವಿತೀಯ ಸಾಧನೆಗಳಿಗೆ ಪದ್ಮಶ್ರೀ ಪುರಸ್ಕಾರಗಳನ್ನು ಶಿಫಾರಸ್ಸು ಮಾಡುವುದು ರೂಢಿಗೆ ಬಂದಿತು. ಆಗಿನಿಂದ ಪದ್ಮ ಪ್ರಶಸ್ತಿಗಳನ್ನು1978ರಿಂದ1979ಹಾಗೂ1993ರಿಂದ1997ರ ನಡುವಿನ ವರ್ಷಗಳನ್ನು ಹೊರತುಪಡಿಸಿ ಅಸಾಧಾರಣ ಸೇವೆಮಾಡಿದವರನ್ನು ಗುರುತಿಸಿ ಪದ್ಮ ಪ್ರಶಸ್ತಿಗಳಿಂದ ಪುರಸ್ಕರಿಸಿ ಗೌರವಿಸಲಾಗುತ್ತಿದೆ. ಪ್ರತೀ ವರ್ಷ ಭಾರತ ಸರಕಾರ ಒಟ್ಟು120ಇಂತಹ ಪದ್ಮಪ್ರಶಸ್ತಿ ಗಳನ್ನು ತನ್ನ ವಿಶಿಷ್ಟ ಸಾಧಕರಿಗೆ ನೀಡುತ್ತಾ ಬರುತ್ತಿದೆ.
ಭಾರತದ ನಾಗರಿಕ ಪ್ರಶಸ್ತಿಗಳ ಸಾಲಿನಲ್ಲಿ ಪರಮೋಚ್ಚ ಸ್ಥಾನ ‘ಭಾರತ ರತ್ನ’ಕ್ಕಾದರೆ, ಎರಡನೇ ಸ್ಥಾನ ಪದ್ಮ ವಿಭೂಷಣ ಪುರಸ್ಕಾರದ್ದಾಗಿದೆ. ಇದು ಒಂದು ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ. ಇದನ್ನು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ. ಮೂರನೇ ಸ್ಥಾನದಲ್ಲಿ ಪದ್ಮ ಭೂಷಣ ಪ್ರಶಸ್ತಿ ಇದೆ. ಜನವರಿ 2,1955ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.
ಯಾವುದೇ ಕ್ಷೇತ್ರ ದದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮಶ್ರೀ ಪುರಸ್ಕಾರವು ನಾಗರಿಕ ಪ್ರಶಸ್ತಿ ಗಳ ಶ್ರೇಣಿಯಲ್ಲಿ ಭಾರತ ರತ್ನ, ಪದ್ಮ ವಿಭೂಷಣ ಮತ್ತು ಪದ್ಮ ಭೂಷಣಗಳ ನಂತರ ನಾಲ್ಕನೆಯದಾಗಿ ಬರು ತ್ತದೆ. ಅದರ ಅಗ್ರಭಾಗದ ಮೇಲೆ, ದೇವನಾಗರಿ ಯಲ್ಲಿ ಪದ್ಮ ಮತ್ತು ಶ್ರೀ ಶಬ್ದಗಳು ಕಮಲ ಹೂವಿನ ಮೇಲೆ ಮತ್ತು ಕೆಳಗೆ ಕಾಣಿಸುತ್ತವೆ.
ಇಂತಹ ಪದ್ಮ ಪ್ರಶಸ್ತಿಗಳು ಯಾವುದೇ ನಗದು ರೂಪದ ಬಹುಮಾನವನ್ನು ಹೊಂದಿರುವುದಿಲ್ಲ. ಬದಲಾಗಿ, ರಾಷ್ಟ್ರಪತಿಗಳ ಹಸ್ತಾಕ್ಷರವನ್ನೊಳಗೊಂಡಪ್ರಶಸ್ತಿ ಪತ್ರ ಮತ್ತು ಪದಕದ ಒಂದು ಪುಟ್ಟ ಪ್ರತಿಕೃತಿ ಜತೆಗಿರುತ್ತದೆ. ಭಾರತ ಸರಕಾರದ ಕೇಂದ್ರ ಗೃಹ ಸಚಿವಾಲಯದಿಂದ ನಿರ್ವಹಿಸಲ್ಪಡುತ್ತಿರುವ ಈಪದ್ಮಪ್ರಶಸ್ತಿಗಳನ್ನು ಪಡೆಯಲು ಭಾರತದ ಯಾವುದೇ ನಾಗರಿಕನೂ ಅರ್ಹ. ಆದರೆ, ಆತ ಶ್ರೇಷ್ಠವಾದದನ್ನು ಸಾಧಿಸಿರಬೇಕು. ಈ ಪ್ರಶಸ್ತಿಗಳಿಗೆ ಜಾತಿ, ವರ್ಣ,ವೃತ್ತಿ, ಸ್ಥಾನ, ಲಿಂಗವನ್ನು ಆಧರಿಸದೇ ಕೇವಲ ಆ ವ್ಯಕ್ತಿಯ ಸಾಧನೆಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಸರಕಾರಿ ನೌಕರರು, ಸಾರ್ವಜನಿಕ ವಲಯದ ಸಂಸ್ಥೆಗಳು ಈ ಪ್ರಶಸ್ತಿಗಳಿಗೆ ಅರ್ಹರಲ್ಲ ಎಂಬ ನಿಯಮವಿದೆ. ಆದರೆ, ವೈದ್ಯರು ಮತ್ತು ವಿಜ್ಞಾನಿಗಳಿಗೆ ಈ ನಿಯಮಗಳು ಪಾಲಿಸುವುದಿಲ್ಲ.
ಸಾಮಾಜಿಕ ಕಾರ್ಯ, ನಾಗರಿಕ ವ್ಯವಹಾರಗಳು, ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಉದ್ದಿಮೆ, ಕ್ರೀಡೆ, ಔಷಧಿ, ಕಲೆಹಾಗೂ ಸಂಗೀತ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಪದ್ಮ ಪ್ರಶಸ್ತಿಗಳಿಗೆ ಪರಿಗಣಿಸಲಾಗುತ್ತದೆ.2018ರಲ್ಲಿ ಭಾರತ ಸರಕಾರದ ಕೇಂದ್ರ ಸಚಿವಾಲಯ, ಪದ್ಮ ಪ್ರಶಸ್ತಿಯ ವಾರ್ಷಿಕ ಗೌರವಕ್ಕೆ ಹೆಸರುಗಳನ್ನು ಕೇವಲ ಪದ್ಮ ಪ್ರಶಸ್ತಿ ಪೋರ್ಟಲ್‌ನಲ್ಲಿ ಆನ್ ಲೈನ್ ಮೂಲಕವೇ ಹೆಸರುಗಳನ್ನು ಸಲ್ಲಿಸಬೇಕು ಎಂದು ಸೂಚಿಸಿತ್ತು. ಹೀಗೆ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವಾಗ ಆ ಸಾಧಕ ವ್ಯಕ್ತಿಯ ಸಾಧನೆ ಬಗ್ಗೆ ಗರಿಷ್ಠ800ಪದಗಳಲ್ಲಿ ವಿವರಗಳನ್ನು ಕೊಡಬೇಕಾಗುತ್ತದೆ. ಪ್ರತಿ ವರ್ಷ ಮೇ ತಿಂಗಳ ಒಂದನೇ ತಾರೀಖಿನಿಂದ ಸೆಪ್ಟೆಂಬರ್15ರವರೆಗೆ ಎಲ್ಲ ರಾಜ್ಯ ಸರಕಾರ, ಕೇಂದ್ರಾಡಳಿತ ಪ್ರದೇಶ, ಕೇಂದ್ರ ಸರಕಾರದ ಸಚಿವರು ಹಾಗೂ ಇಲಾಖೆಗಳಿಂದ ಪ್ರಶಸ್ತಿ ಪಟ್ಟಿಗೆ ಶಿಫಾರಸುಗಳನ್ನು ಮಾಡಲಾಗುತ್ತದೆ.
ಇದರ ಜತೆಗೆ ಭಾರತ ರತ್ನ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು ಹಾಗೂ ಸಂಸ್ಥೆಗಳು ಪ್ರಶಸ್ತಿಗೆ ಸಾಧಕರ ಹೆಸರುಗಳನ್ನು ನಾಮನಿರ್ದೇಶನ ಮಾಡಬಹುದು. ಇದಷ್ಟೇ ಅಲ್ಲದೇ, ಆಯಾ ರಾಜ್ಯಗಳ ಸಚಿವರು, ಕ್ಷಿಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ಸಂಸದರು ಸಹ ಅಸಾಧಾರಣ ಸೇವೆ ಸಲ್ಲಿಸಿರುವಮಹನೀಯರನ್ನು ಪದ್ಮ ಪ್ರಶಸ್ತಿಗೆ ನಾಮ ನಿರ್ದೇಶ ನವನ್ನು ಮಾಡುವ ಮೂಲಕ ಪ್ರಶಸ್ತಿಗೆ ಶಿಫಾರಸು ಮಾಡಬಹುದು. ಒಂದು ವರದಿಯ ಪ್ರಕಾರಇದುವರೆಗೂ ಪದ್ಮ ವಿಭೂಷಣ ಪಡೆದವರ ಸಂಖ್ಯೆ321, ಪದ್ಮಭೂಷಣ1270, ಪದ್ಮಶ್ರೀ ಪುರಸ್ಕೃತರು3123.
ಕಳೆದ ಸಾರಿ ಪದ್ಮಶ್ರೀಗೆ ಮಂಜಮ್ಮ ಜೋಗುತಿ, ಪದ್ಮವಿಭೂಷಣಕ್ಕೆ ಖ್ಯಾತ ವೈದ್ಯ ಡಾ.ಬಿ.ಎಂ.ಹೆಗಡೆ ಹಾಗೂ ಪದ್ಮ ಭೂಷಣಕ್ಕೆ ಸಾಹಿತಿ ಚಂದ್ರಶೇಖರ ಕಂಬಾರರಂತಹ ಕನ್ನಡದ ಕಣ್ಮಣಿಗಳು ಆಯ್ಕೆಯಾಗಿದನ್ನು ನಾವಿಲ್ಲಿ ಸ್ಮರಿಸಬಹುದು. ಈ ಸಾರಿ ಅನಂತನಾಗ್ ಅವರನ್ನು ಒಳಗೊಂಡಂತೆ ಇನ್ನೂಯಾರ್ಯಾರು ಈ ಪದ್ಮ ಪ್ರಶಸ್ತಿಗಳನ್ನು ಸ್ವೀಕರಿಸುತ್ತಾರೆ ಎಂಬುದನ್ನು ಕಾಲವೇ ಉತ್ತರಿಸಬೇಕು. ಅಲ್ಲಿಯವರೆಗೂ ನಾವು ಕಾಯಬೇಕಷ್ಟೆ.