ಜಯಚಾಮರಾಜ ಒಡೆಯರ್‌: ಬೆಳವಣಿಗೆಗೆ ಮಹಾನ್ ಪ್ರೇರಕಶಕ್ತಿ
ತನ್ನಿಮಿತ್ತ
ರಂಜಿತ್ ಸಿಂಗ್‌ ರಜಪೂತ
rajaput3989@.
ಮೈಸೂರು ನಮ್ಮ ಸಾಂಸ್ಕೃತಿಕ ರಾಜಧಾನಿ, ಭೌಗೋಳಿಕವಾಗಿ ಅತಿ ಹೆಚ್ಚು ವಿಸ್ತಾರಗೊಂಡ ಪ್ರದೇಶ. ಪ್ರಾಚೀನ ಕಾಲದಿಂದಲೂ ಮಾನವ ನಾಗರಿಕತೆಯಉಗಮಕ್ಕೆ ಅತಿ ಹೆಚ್ಚು ಯೋಗ್ಯವಾಗಿತ್ತು. ಇಲ್ಲಿನ ಫಲವತ್ತಾದ ಭೂಮಿ, ಬೆಟ್ಟ ಗುಡ್ಡಗಳ ಪ್ರದೇಶ, ಬಯಲು ಪ್ರದೇಶ, ಅರಣ್ಯ, ಪ್ರಾಣಿ ಸಂಪತ್ತು ಮತ್ತು ವಾಸಿಸಲು ನೈಸರ್ಗಿಕ ಗುಹೆಗಳು ಇಂತಹ ಸ್ವಾಭಾವಿಕ ಸಂಪನ್ಮೂಲಗಳು ಮಾನವನ ಬೆಳವಣಿಗೆಗಳಿಗೆ ಅತಿ ಹೆಚ್ಚು ಪ್ರಭಾವ ಬೀರುವ ಅಂಶಗಳೆಂದು ಹೇಳಬಹುದು.
ಇಲ್ಲಿನ ಚಾಮುಂಡಿ ಬೆಟ್ಟ, ವರಕೋಡ ಬೆಟ್ಟಗಳ ಗಿರಿ ತಪ್ಪಲಿನ ಪ್ರದೇಶ ಒಂದು ಅದ್ಭುತವೇ ಸರಿ! ಈ ಪ್ರದೇಶದಲ್ಲಿ ಕಾವೇರಿ ಮತ್ತು ದಕ್ಷಿಣದಲ್ಲಿ ನಂಜನಗೂಡು ತಾಲೂಕಿನ ಕಪಿಲಾ ನದಿಯೂ ತನ್ನ ಭಾಗವನ್ನು ಆಕ್ರಮಿಸಿಕೊಂಡಿವೆ. ಅಷ್ಟೇ ಅಲ್ಲದೆ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳಲ್ಲಿನ ಮಹಾನ ಪುರುಷರು ಮೈಸೂರು ಭಾಗದ ಕೆಲವು ಪ್ರದೇಶಗಳಲ್ಲಿ ತಂಗಿದ್ದರೆಂದು, ಕೆಲ ಕಾಲ ಸಂಚರಿಸಿದ್ದರೆಂದು ನಂಬಿಕೆ ಕೂಡಾ ಇದೆ.
ಮೈಸೂರು ಭಾಗ ಸಾವಿರಾರು ವರ್ಷಗಳಿಂದ ಮಾನವನ ವಸತಿ ಕೇಂದ್ರವಾಗಿತ್ತೆಂಬುದರಲ್ಲಿ ಅಚ್ಚರಿಯಿಲ್ಲ! ಮೈಸೂರಿನ ಕಾವೇರಿಕೊಳ್ಳ, ಸೋಮನಹಳ್ಳಿ ಮತ್ತು ವರಕೋಡ ಬೆಟ್ಟದ ಸಾಲಿನಲ್ಲಿ ಹಳೆ ಶಿಲಾಯುಗದಿಂದ ನವಶಿಲಾಯುದ ವರೆಗಿನ ಸಾಂಸ್ಕೃತಿಕ ಮತ್ತು ಮಾನವನ ಕುರುಹುಗಳು ದೊರಕಿವೆ. ಮೈಸೂರು ನಗರ ಭೌಗೋಳಿಕವಾಗಿ ಮಾತ್ರ ಆಕರ್ಷಣೆಯಾಗಿಲ್ಲ, ಆಡಳಿತ್ಮಾತಕ ಮತ್ತು ರಾಜಕೀಯವಾಗಿಯೂ ತನ್ನದೇ ಆದ ಛಾಪನ್ನು ಮೂಡಿಸಿದೆ.
ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಮೈಸೂರು ಸಂಸ್ಥಾನದ ಒಡೆಯರ್‌ರವರು, ಕೆಳದಿ ಅರಸರು, ಚಿತ್ರದುರ್ಗದ ನಾಯಕರು ಮತ್ತು ಪಾಳೆಗರರು ಇನ್ನೂ ಸಣ್ಣಪುಟ್ಟ ಮನೆತನಗಳು ತಮ್ಮ ಆಳ್ವಿಕೆಯನ್ನು ನಡೆಸಿದರು. ಇವರಲ್ಲಿ ದೃಢವಾಗಿ ಸಾಮ್ರಾಜ್ಯ ಸ್ಥಾಪಿಸಿದವರು ಮೈಸೂರು ಸಂಸ್ಥಾನದ ಒಡೆಯರ್ ಮನೆತನ. ಸುಮಾರು550ಕ್ಕೂ ಹೆಚ್ಚು ಅವಧಿಗೆ ಯದುರಾಯರಿಂದ ಹಿಡಿದು ಜಯಚಾಮರಾಜ ಒಡಯರ್‌ವರೆಗೆ (1399-1948) ತಮ್ಮ ಆಳ್ವಿಕೆನಡೆಸಿದರು. ಈ ಸಂಸ್ಥಾನದ ಸ್ಥಾಪಕರಾದ ಯದುರಾಯ ಮತ್ತು ಕೃಷ್ಣರಾಯರು. ಈ ವಂಶದ ದೊರೆಗಳು ಯದುವಂಶ ಅಥವಾ ಯಾದವ ವಂಶಕ್ಕೆ ಸೇರಿದ್ದರೆಂಬ ಪ್ರತೀತಿಯಿದೆ. ಈ ಒಡೆಯರ್‌ರ ಕಾಲಾವಽಯಲ್ಲಿ ಅತಿ ಹೆಚ್ಚು ಜನಪ್ರಿಯರಾದವರು. ಜಯಚಾಮರಾಜ ಒಡೆಯರವರು. ಇವರು ಮೈಸೂರಿನ ಕೊನೆಯ ಆಡಳಿತಗಾರರು. ಇವರು ಮಹಾನ ತತ್ವಜ್ಞಾನಿ, ಸಂಗೀತಗಾರ, ಮತ್ತು ಆಡಳಿತ್ಮಾತಕ ವಿಷಯದಲ್ಲಿ ಮಹಾನ್ ಮೇಧಾವಿ ಕೂಡಾ ಹೌದು.
ಜೀವನ ಚರಿತ್ರೆ:ಕಂಠೀರವ ನರಸಿಂಹರಾಜ ಒಡೆಯರ್ ಮತ್ತು ಚೆಲುವಾಜಮಣ್ಣಿಯುವರ ಏಕೈಕ ಪುತ್ರರಾಗಿ1919ಜುಲೈ18ರಂದು ಮೈಸೂರುಸಂಸ್ಥಾನದಲ್ಲಿ ಜನಿಸಿದರು. ತಮ್ಮ ಬಾಲ್ಯದ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಮೈಸೂರಿನ ಲೋಕರಂಜನ ಮಹಲನ ವಿಶೇಷ ಶಾಲೆಯಲ್ಲಿ ಪಡೆದುಕೊಂಡರು. ಮುಂದೆ1938ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ.ಪದವಿಯನ್ನು ಪಡೆದುಕೊಂಡರು. ಪದವಿಯಲ್ಲಿ ಕನ್ನಡ ,ಇಂಗ್ಲಿಷ್ ಭಾಷೆಗಳ ಜತೆಗೆ ರಾಜನೀತಿ ಮತ್ತು ಅರ್ಥಶಾಸ್ತ್ರ ವಿಷಯಗಳನ್ನು ತಗೆದುಕೊಂಡರು. ಪದವಿಯನ್ನು ಐದು ಸುವರ್ಣ ಪದಕಗಳೊಂದಿಗೆ ತೇರ್ಗಡೆ ಹೊಂದಿದರು. ಇದು ಅವರಲ್ಲಿರುವ ಪಾಂಡಿತ್ಯಕ್ಕೆ ಉತ್ತಮ ನಿದರ್ಶನ.
ಶೈಕ್ಷಣಿಕ ಸಾಧನೆಗಳು:1)1942ರಲ್ಲಿ ಬನಾರಸ್ ವಿಶ್ವವಿದ್ಯಾಲಯದಿಂದ ಡಾರ್ಕ್ಟ ಆಫ್ ಲಾಸ್ ನಲ್ಲಿ ಪದವಿ. 2)1955ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ.3)1945ರಲ್ಲಿ ಲಂಡನಿನ ಟ್ರಿನಿಟಿ ಗೌರವ ಫೆಲೋ ಕೊಡಾ ಆಗಿದ್ದರು. 4)ಇವರ ಸಾಧನೆಗಳನ್ನು ಮನಗಂಡು ಆಸ್ಟ್ರೇಲಿಯಾದ ಕ್ವಿನ್ಸಲೆಂಡ್ ವಿಶ್ವವಿದ್ಯಾಲಯ ಡಿ.ಲಿಟ್ ಪದವಿಯನ್ನು ನೀಡಿತು. 5)1945ರಲ್ಲಿ ಬ್ರಿಟಿಷ್ ಸರ್ಕಾರ ಜಿ.ಸಿ.ಎಸ್ .ಐ ಬಿರುದು ನೀಡಿತು ಮತ್ತು1946ರಲ್ಲಿ ಜೆ.ಸಿ.ಬಿಬಿರುದು ನೀಡಿತು.
ಜಯಚಾಮರಾಜ್ ಒಡೆಯರವರ ಪಟ್ಟಾಭಿಷೇಕ:ಕೃಷ್ಣರಾಜ ಒಡೆಯರವರು ತಮಗೆ ಮಕ್ಕಳಿಲ್ಲದ ಕಾರಣ ತಮ್ಮ ಕಿರಿಯ ಸಹೋದರನಾದ ನರಸಿಂಹರಾಜ ಒಡೆಯರವರ ಪುತ್ರ ಜಯಚಾಮರಾಜ ಒಡೆಯರವರಿಗೆ ಪಟ್ಟಕಟ್ಟಲು ಶ್ರಮ ಪಟ್ಟರು. ಅವರಿಗೆ ಮೌಲ್ಯಯುತವಾದ ಶಿಕ್ಷಣವನ್ನು ಕೊಟ್ಟರು. ಮುಂದೆ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಉತ್ತರಾಽಕಾರಿಯಾಗಿ1940ಸೆಪ್ಟೆಂಬರ್08ರಂದು ಸಿಂಹಾಸನವನ್ನೇರಿದರು.
ಇವರ ಮುಖ್ಯ ಗುರಿ ವಿಶಾಲ ಕರ್ನಾಟಕದ ಸ್ಥಾಪನೆ. ಈ ಗುರಿ ತಲುಪಲು ನಾನು ನನ್ನ ಸಿಂಹಾಸನವನ್ನೇ ತ್ಯಜಿಸಲು ಸಿದ್ಧನೆಂದು ಹೇಳಿದರು.1947ರಲ್ಲಿ ಭಾರತ ಸ್ವತಂತ್ರಗೊಂಡಾಗ ಮೈಸೂರು ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸಲು ಸಮ್ಮತಿಸಿದ ಮೊದಲ ದೊರೆ.1950ಜನವರಿ-26ರವರೆಗೂ ಮೈಸೂರಿನ ಮಹಾರಾಜರಾಗಿ ಮುಂದುವರೆದರು. 1956-64ರವರೆಗೆ ವಿಶಾಲ ಮೈಸೂರಿನ ಪ್ರಥಮ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದರು. 1964-1967ರವರೆಗೆ ಮದ್ರಾಸ್ ರಾಜ್ಯದ ರಾಜ್ಯಪಾಲರಾದರು.
ಸತ್ಯ ಪ್ರೇಮ ಕುಮಾರಿ ಮತ್ತು ತ್ರಿಪುರಸುಂದರಮ್ಮಣ್ಣಿಯರನ್ನು ಮಡದಿಯರನ್ನಾಗಿ ಹೊಂದಿದ್ದರು. ಇವರಿಗೆ ಐವರು ಹೆಣ್ಣುಮಕ್ಕಳು ಮತ್ತು ಓರ್ವ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆಡಳಿತ್ಮಾತಕ ಸಾಧನೆಗಳು: 1) ಇವರ ಆಡಳಿತ ಕಾಲದಲ್ಲಿ ಜಯಚಾಮರಾಜ ಗ್ರಂಥಮಾಲಾ ಎಂಬ ಯೋಜನೆ ಯನ್ನು ಚಾಲನೆಗೆ ತಂದರು.ಇದರಿಂದ ಹಲವಾರು ವೇದ ಶಾಸಗಳು,ಪುರಾಣಗಳು ಪ್ರಸಿದ್ಧಿ ಪಡೆದವು ಮತ್ತು ಕನ್ನಡಕ್ಕೆ ಭಾಷಾಂತರಗೊಂಡವು.2) 1950-56ರವರೆಗೆ ಭಾರತ ಗಣರಾಜ್ಯವಾದಾಗ ಇವರು ರಾಜ ಪ್ರಮುಖರಾದರು. 3) ಭಾರತೀಯ ಸಂಸ್ಕ್ರತಿ ಮತ್ತು ತತ್ವಶಾಸ್ತ್ರದ ವಿಷಯಗಳಿಗೆ ಸಂಬಂಧಿಸಿದಂತೆ ರಾಯಭಾರಿಯಾಗಿ ಹಲವಾರು ದೇಶಗಳಿಗೆ ಪ್ರವಾಸ ಕೈಗೊಂಡರು. 4) ಭಾರತೀಯ ವನ್ಯ ಮೃಗಗಳ ಮಂಡಳಿಯ ಅಧ್ಯಕ್ಷರಾಗಿದ್ದರು. ಅಷ್ಟೇಅಲ್ಲದೇ ತಮ್ಮ ಸ್ವಂತ ಮೃಗಾಲಯವನ್ನು ಸರಕಾರದ ಅಧೀನಕ್ಕೆ ಒಳಪಡಿಸಿದರು. 5) ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆಯ ಸ್ಥಾಪನೆಗೆ ಮತ್ತು ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಕ್ಕೆ ಸ್ವಂತ ಆಸ್ತಿಗಳನ್ನು ದಾನ ನೀಡಿದರು. 6) ಇವರ ಕಾಲದಲ್ಲಿ ಮೈಸೂರಿನಲ್ಲಿವೈಭವಪೂರಿತವಾಗಿ ಆಚರಿಸುವ ನಾಡಹಬ್ಬ ದಸರಾ ಉತ್ಸವಕ್ಕೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಸ್ಥಾನವನ್ನು ಪಡೆದುಕೊಂಡಿತು.
ಇವರ ಪ್ರಮುಖ ಕೃತಿಗಳು:1) ದತ್ತಾತ್ರೇಯ -ದಿ ವೇ ಆಂಡ್ ದಿ ಗೋಲ್. 2) ದಿ ಗೀತಾ ಆಂಡ್ ಇಂಡಿಯನ್ ಕಲ್ಚರ್. 3) ಭಾರತೀಯ ಸೌಂದರ್ಯಶಾಸದ ಹಲವು ಮುಖಗಳು. 4) ದಿ ರಿಲಿಜನ್ ಆಂಡ್ ದಿ ಮ್ಯಾನ್. 5) ಆತ್ಮ ಮತ್ತು ಬೃಹ್ಮ ಜಯಚಾಮರಾಜ ಒಡೆಯರ್ ಅವರು ತಮ್ಮ ಅಂತಿಮ ದಿನಗಳಲ್ಲಿ ಸಂಗೀತ, ಪುರಾಣ ಮತ್ತು ಧಾರ್ಮಿಕ ಗ್ರಂಥಗಳ ಅಧ್ಯಯನದಲ್ಲಿ ಕಾಲ ಕಳೆಯುತ್ತಿದ್ದರು.
1974ಸೆಪ್ಟೆಂಬರ್23ರಂದು ಬೆಂಗಳೂರಿನ ಅರಮನೆಯಲ್ಲಿ ಶ್ವಾಸಕೋಶದ ಉರಿಯೂತಕ್ಕೆ ಸಂಬಂಧಿಸಿ ನಿಧನ ಹೊಂದಿದರು. ಅವರ ಪಾರ್ಥಿವ ಶರೀರ ವನ್ನು ಮೈಸೂರಿನ ಮಧುವನದಲ್ಲಿ ಅಗ್ನಿ ಸಂಸ್ಕಾರ ಮಾಡಲಾಯಿತು. ಜಯಚಾಮರಾಜ ಒಡೆಯರ್‌ರವರು ತಮ್ಮ ಆಡಳಿತ ವ್ಯವಸ್ಥೆ ಮತ್ತು ಪ್ರಜೆಗಳ ಹಿತಕಲ್ಯಾಣದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು ಮತ್ತು ನಾಡಿನ ಶ್ರೇಯೋಭಿವೃದ್ಧಿಗಾಗಿ ತಮ್ಮ ದೇಹವನ್ನೆ ತೇಯ್ದುಬಿಟ್ಟರು.