ತಾಲಿಬಾನ್ ಆಕ್ರಮಣ: ಆಫ್ಘನ್‌ ಮೂರಾಬಟ್ಟೆ
ಅಭಿಮತ
ಮಾರುತೀಶ್ ಅಗ್ರಾರ
ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೆಡೆಮುರಿ ಕಟ್ಟಲು ಹೋದ ಅಮೆರಿಕ ಈಗ ಅದೇ ತಾಲಿಬಾನ್ ಜತೆ ಒಪ್ಪಂದ ಮಾಡಿಕೊಂಡು ಅಲ್ಲಿಂದ ಒಂದೊಂದೇ ಹೆಜ್ಜೆ ಹಿಂತೆಗೆಯುತ್ತಿದೆ.
90ರ ದಶಕದ ಮಧ್ಯಭಾಗದಲ್ಲಿ ಅಫ್ಘಾನಿಸ್ತಾನವನ್ನು ತನ್ನ ಮುಷ್ಟಿಯಲ್ಲಿ ಹಿಡಿದು ನಿಯಂತ್ರಿಸುತ್ತಿದ್ದ ತಾಲಿಬಾನ್ ಆಡಳಿತ,2001ರಲ್ಲಿ ಅಮೆರಿಕ ಸೇನೆಯ ಪ್ರವೇಶದೊಂದಿಗೆ ಹಿಂದೆ ಸರಿದಿತ್ತು. ಅಮೆರಿಕ ಸೇನೆ2ದಶಕಗಳ ಕಾಲ ಅಫ್ಘಾನಿಸ್ತಾನದಲ್ಲಿ ನೆಲೆನಿಂತು ತಾಲಿಬಾನ್‌ನ ಕುಕೃತ್ಯಗಳಿಂದ ಆಫ್ಘನ್ನರನ್ನು ರಕ್ಷಣೆ ಮಾಡುವ ಜವಾಬ್ದಾರಿ ವಹಿಸಿತ್ತು. ಅದರಿಂದ ತಾಲಿಬಾನ್2ದಶಕಗಳ ಕಾಲ ತನ್ನ ಪ್ರಭಾವವನ್ನು ಕಳೆದುಕೊಂಡು ತೆಪ್ಪಗಿತ್ತು. ಆದರೆ ಈಗ ಅಮೆರಿಕನ್ ಸೇನೆ ೨೦ ವರ್ಷಗಳ ಯುದ್ಧಕ್ಕೆ ವಿರಾಮ ಹಾಡಿದೆ.
ಇದರ ಬೆನ್ನ ತಾಲಿಬಾನ್ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಳ್ಳುವತ್ತಾ ಮುಂದಾಗಿದೆ. ತಾಲಿಬಾನಿಗಳ ದಾಳಿ ಯಿಂದ ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಯಿತು. ತಾಲಿಬಾನ್ ಆಫ್ಘನ್‌ನಿಂದ ಅಮೆರಿಕ ಸೇನೆ ವಾಪಸ್ ಹೋಗುವುದಾದರೆ ನಾವು ಶಾಂತಿ ಸ್ಥಾಪನೆಗೆ ಅನುವು ಮಾಡಿಕೊಡುವುದಾಗಿ ಷರತ್ತು ವಿಧಿಸಿತು. ಅಮೆರಿಕ ಕೂಡ ತಾಲಿಬಾನ್‌ನ ಷರತ್ತಿಗೆ ಒಪ್ಪಿ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ವಾಗ್ದಾನ ನೀಡಿತು. ಅಮೆರಿಕ ತಾನಾಡಿದ ಮಾತಿನಂತೆ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಹೊತ್ತಿನ ತಾಲಿಬಾನ್ ಆಫ್ಘನ್ ಸರಕಾರಕ್ಕೆ ನೀಡಿದ ಷರತ್ತನ್ನು ಧೂಳಿಪಟ ಮಾಡಿ ಹಿಂಸಾತ್ಮಕ ಕೃತ್ಯಕ್ಕೆ ಮುಂದಾಗಿರುವುದು ದೌರ್ಭಾಗ್ಯ.
ಹಿಂದಿನ ತಾಲಿಬಾನ್ ಆಡಳಿತದಲ್ಲಿದ್ದ ಮಾನವಹಕ್ಕುಗಳ ಉಲ್ಲಂಘನೆ, ಕಟು ಇಸ್ಲಾಮಿಕ್ ಕಾನೂನುಗಳು, ಕಠಿಣ ಶಿಕ್ಷೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ನಿಷೇಧ, ಹೆಣ್ಣುಮಕ್ಕಳ ಶಿಕ್ಷಣ ನಿಷೇಧದಂತಹ ಕಠಿಣ ನಿಯಮಗಳನ್ನು ಮರಳಿ ಸ್ಥಾಪಿಸುವುದಕ್ಕೆ ತಾಲಿಬಾನ್ ಈಗ ಮತ್ತೆ ಉಗ್ರ ಹೆಜ್ಜೆಯನ್ನಿಡುತ್ತಿದೆ. ಆದರೆ ಇದ್ಯಾವುದೂ ಸಹ ಅಲ್ಲಿನ ಜನರಿಗೆ ಸುತಾರಾಂ ಇಷ್ಟವಿಲ್ಲ. ಯಾಕೆಂದರೆ ಹಿಂದಿನ ತಾಲಿಬಾನ್‌ನ ಆಡಳಿತದ ಕಹಿ ಅನುಭವಗಳು ಅವರಿಂದ ಇನ್ನು ಮಾಸಿಲ್ಲ.
ಆದರೀಗ ಅಫ್ಘಾನಿಸ್ತಾನ್‌ನ ಶೇ.85ರಷ್ಟು ಭಾಗವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್ ‘ಧರ್ಮದ’ ಹೆಸರಿನಲ್ಲಿ ದಿನಕ್ಕೊಂದು ನಿಯಮಗಳನ್ನು ಹಿಂದಿನ ಆಡಳಿತದ ನಿಯಮಾನುಸಾರ ಜಾರಿಗೊಳಿಸುತ್ತಿದೆ. ತಾಲಿಬಾನ್‌ನ ನಿಯಮಗಳು ಎಷ್ಟು ಕಠಿಣವಾಗಿದೆಯೆಂದರೆ, ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಕಾಲಿಡು ವಂತಿಲ್ಲ, ಪುರುಷರು ಗಡ್ಡ ಬೋಳಿಸಿಕೊಳ್ಳುವಂತಿಲ್ಲ, 15 ವರ್ಷ ದಾಟಿದ ಹೆಣ್ಣುಮಕ್ಕಳು ತಾಲಿಬಾನ್ ಉಗ್ರರ ಜತೆ ಮದುವೆಯಾಗ ಬೇಕು. ಪುರುಷರು ಜತೆಗಿಲ್ಲದೆ ಹೆಣ್ಣುಮಕ್ಕಳು ಮಾರುಕಟ್ಟೆಗೆ ತೆರಳುವಂತಿಲ್ಲ,45ವರ್ಷಕ್ಕಿಂತ ಕಡಿಮೆ ಇರುವ ವಿಧವೆಯರು ಉಗ್ರರೊಂದಿಗೆ ಪುನರ್ ವಿವಾಹವಾಗಬೇಕು ಸೇರಿದಂತೆ ಇಸ್ಲಾಮಿನ ಹಲವು ನಿಯಮಗಳನ್ನು ಜಾರಿಗೊಳಿಸಿದೆ.
ಆಫ್ಘನ್‌ನ ಅನೇಕ ಪ್ರದೇಶಗಳಲ್ಲಿ ಜನರು ಹಾಲು-ದಿನಸಿ ತರಲು ಸಹ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಈಗಾಗಲೇ ಅನೇಕ ರಾಷ್ಟ್ರಗಳು ಆಫ್ಘನ್‌ನ ಲ್ಲಿರುವ ರಾಯಭಾರ ಕಚೇರಿಗಳನ್ನು ಮುಚ್ಚಿ ವಾಪಸು ಹೋಗಿದ್ದಾರೆ. ಮಾನವಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ಕಾನೂನಿನ ನಿಯಮಗಳು ಎಲ್ಲವೂ ಈಗತಾಲಿಬಾನ್‌ನ ಆಕ್ರಮಣಕ್ಕೆ ಸಿಲುಕಿ ಅಫ್ಘಾನಿಸ್ಥಾನದ ಸ್ಮಶಾನದಲ್ಲಿ ಸಮಾಧಿಯಾಗಿ ಬಿಟ್ಟಿವೆ! ಒಟ್ಟಿನಲ್ಲಿ ತಾಲಿಬಾನ್‌ನ ಈ ಹಿಂಸಾತ್ಮಕ ದಾಳಿಗೆ ಆಫ್ಘನ್ನರ ಬದುಕು ಮೂರಾಬಟ್ಟೆಯಾಗಿದೆ. ಇನ್ನು ದೌರ್ಭಾಗ್ಯವೆಂದರೆ ಆಫ್ಘನ್‌ನರು ತಾಲಿಬಾನಿಗಳಿಂದ ಅನುಭವಿಸುತ್ತಿರುವ ನರಕಯಾತನೆಯ ಕೂಗು ಪ್ರಗತಿಪರ, ಜೀವಪರ, ಮಾನವಹಕ್ಕು ಹೋರಾಟಗಾರರೆನಿಸಿಕೊಂಡಿರುವವರ ಕಣ್ಣು-ಕಿವಿಗೆ ಬಿದ್ದಿಲ್ಲ.
ಗ್ರೇಟಾ ಥನ್ ಬರ್ಗ್, ಮಿಯಾ ಖಾಲಿದ್, ರೆಹಾನ್ನಾ, ರಾಹುಲ್ ಗಾಂಧಿ, ಶಶಿ ತರೂರ್, ಅರವಿಂದ್ ಕೇಜ್ರಿವಾಲ, ಅರುಂಧತಿ ರಾಯ, ರಾಜ್‌ದೀಪ್ ಸರ್ದೇಸಾಯಿ, ಖಳನಟ ಪ್ರಕಾಶ್ ರೈ, ಕಮಲ್ ಹಾಸನ್, ಅಮೀರ್ ಖಾನ್, ಆ ದಿನಗಳು ಚೇತನ್ ಇವರೆಲ್ಲ ಯಾಕೆ ತಾಲಿಬಾನ್‌ನ ದೌರ್ಜನ್ಯದ ಧ್ವನಿ ಎತ್ತುತ್ತಿಲ್ಲ? ಇವರುಗಳ ಬಾಯಲ್ಲಿ ಬಿರಿಯಾನಿ ಮೂಳೆಗಳು ಸಿಕ್ಕಿಕೊಂಡಿವೆಯೇ?! ಅಮೆರಿಕ ಸೇನೆಯ ಈ ನಿರ್ಧಾರದಿಂದ ಆಫ್ಘನ್ ಮಹಿಳೆಯರು, ಯುವತಿಯರು ಹಾಗೂ ಜನ ಸಾಮಾನ್ಯರ ಬದುಕು ಎಲ್ಲವೂ ಅಯೋಮಯವಾಗಲಿದೆ ಎಂದಿದ್ದಾರೆ.
ಕಳೆದ20ವರ್ಷಗಳಿಂದ ಪ್ರತಿದಿನ ಒಂದಂದು ಹೊಸ ಭರವಸೆಯೊಂದಿಗೆ ದಿನಕಳೆಯುತ್ತಿದ್ದ ಆಫ್ಘನ್ನರ ಮೇಲೆ ಮತ್ತೆ ತಾಲಿಬಾನ್‌ನ ಕರಿನೆರಳು ಬಿದ್ದಿದೆ! ಮುಂದೇ ನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.