ಕೊಂದವರನ್ನು ಖಂಡಿಸುವ ಎದೆಗಾರಿಕೆ ತೋರಬೇಕಿದೆ
ಅಭಿಮತ
ಪ್ರಕಾಶ್ ಶೇಷರಾಘವಾಚಾರ್‌
@.
ಭಾರತೀಯ ಮೂಲದ ಪುಲಿಟ್ಜರ್ ಪ್ರಶಸ್ತಿ ವಿಜೇತ ಛಾಯಾಗ್ರಾಹಕ 38 ವರ್ಷದ ಡ್ಯಾನಿಶ್ ಸಿದ್ದಕಿ ಆಫ್ಘಾನಿಸ್ಥಾನ ಮತ್ತು ತಾಲೀಬಾನ್ ನಡುವೆ ನಡೆಯುತ್ತಿರುವಕಾಳಗವನ್ನು ಫೋಟೋ ತೆಗೆಯುತ್ತಿರುವ ಸಂದರ್ಭದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಭಯೋತ್ಪಾದಕ ಸಂಘಟನೆ ತಾಲಿಬಾನ್ ಗುಂಡಿಗೆ ಬಲಿಯಾದರು.
ಇವರ ಸಾವು ಎಡ ಮತ್ತು ಬಲಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟಕ್ಕೆ ವೇದಿಕೆಯಾಗಿದೆ. ಪರ ಮತ್ತು ವಿರೋಧಗಳ ಅಭಿಪ್ರಾಯಗಳಿಂದ ಸಾಮಾಜಿಕ ಜಾಲತಾಣದ ವೇದಿಕೆ ಸುಡುತ್ತಿದೆ. ಟ್ವೀಟರ್, ಫೇಬುಕ್ ತೆರೆದ ಕೂಡಲೇ ಪರಸ್ಪರ ದೋಷಾರೋಪಣೆಗಳು ಮತ್ತು ಕಟುವಾದ ಟೀಕೆ ಟಿಪ್ಪಣಿಗಳು ಮುಖಕ್ಕೆ ರಾಚುತ್ತದೆ.
ಈತನ ಸಾವಿನ ಸುದ್ದಿಯು ಬಂದ ತರುವಾಯ ಡ್ಯಾನಿಶ್ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ಫೋಟೋ ತೆಗೆದು ವಿದೇಶಿ ಪತ್ರಿಕೆಗಳಿಗೆ ಮಾರಾಟ ಮಾಡಿದ ಸುದ್ದಿಯೂ ದೊಡ್ಡದಾಗಿ ಚರ್ಚೆಯಾಗುತ್ತಿದೆ. ಮೋದಿ ಸರಕಾರವು ದೆಹಲಿ ಗದ್ದುಗೆಯನ್ನು ಹಿಡಿದ ತರುವಾಯ ಎಡ-ಬಲಗಳ ಜಟಾಪಟಿ ಅವರವರ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಂಡ ವಿಶ್ಲೇಷಣೆಗಳು ಪ್ರತಿಯೊಂದು ವಿಚಾರದಲ್ಲಿಯೂ ನಡೆಯುವುದು ಸಾಮಾನ್ಯವಾಗಿದೆ. ಡ್ಯಾನಿಶ್ ಅವರ ಸಾವಿನ ಸುದ್ದಿಯೂ ಸಹ ಎರಡು ಬಣಗಳ ಸಂಘಷಕ್ಕೆ ದಾಳವಾಗಿದೆ.ಬದುಕಿದ್ದಾಗಿಂತಗುಂಡಿಗೆ ಬಲಿಯಾದ ತರುವಾಯ ಡ್ಯಾನಿಶ್ ಹೆಚ್ಚು ಪ್ರಚಾರದಲ್ಲಿ ಇದ್ದಾರೆ ಎಂದರೆ ತಪ್ಪಾಗಲಾರದು.
2014ರ ನಂತರ ಸುದ್ದಿಗಳು ತಮ್ಮ ಸೈದ್ಧಾಂತಿಕ ನಿಲುವಿಗೆ ಅನುಗುಣವಾಗಿಯೇ ವರದಿಯಾಗುತ್ತಿರುವುದು. ಸ್ಟಾನ್ ಸ್ವಾಮಿ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟರೆ ಅದಕ್ಕೆ ಪ್ರಭುತ್ವದ ಅಮಾನ ವೀಯ ನಡೆಯೇ ಕಾರಣ. ಅವರು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರ ಸಾವನ್ನು ತಮ್ಮ ಕಾರ್ಯಸೂಚಿಗೆ ತಕ್ಕ ಹಾಗೆ ತಿರುಚಿ ವರದಿ ಮಾಡಿದರು. ಡ್ಯಾನೀಶ್ ಸಿದ್ದಕಿ ಸಹಾ ತನ್ನ ನಂಬಿಕೆಯ ವಿಚಾರಕ್ಕೆ ಪೂರಕವಾಗಿಯೇ ಕೆಲಸ ಮಾಡುತ್ತಿದ್ದದ್ದು. ದೆಹಲಿ ಗಲಭೆ, ರೈತರ ಹೆಸರಲ್ಲಿ ಜನವರಿ26ರಂದು ನಡೆಸಿದ ದಾಂಧಲೆ ಮತ್ತು ಸಿಎಎ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಕೇವಲ ಸರಕಾರ ವನ್ನು ಇಕ್ಕಟಿಗೆ ಸಿಲುಕಿಸುವ ಚಿತ್ರಗಳಿಗೆ ಪ್ರಾಶಸ್ತ್ಯ ಇವರ ಕೈಚಳಕದಲ್ಲಿ ಕಾಣುತ್ತಿತ್ತು.
ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಏಕಾಏಕಿ ಹೆಚ್ಚಳವಾದ ಸೋಂಕಿನ ಸಂಖ್ಯೆಯಿಂದ ಕೊಂಚ ದಿನ ಮೂಲಭೂತ ಸೌಕರ್ಯ ಕುಸಿದು ದೇಶ ಪರದಾ ಡಿತ್ತು. ಸಾವಿನ ಸಂಖ್ಯೆಯೂ ಒಮ್ಮೆಗೆ ಏರಿಕೆ ಕಂಡಿತ್ತು. ನಮ್ಮ ಸಂಸ್ಕೃತಿಯಲ್ಲಿ ದೇಹವನ್ನು ದಹನ ಮಾಡಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ವಿಶೇಷವಾಗಿ ಕೋವಿಡ್‌ನಿಂದ ಸಾವನ್ನಪ್ಪಿದವರನ್ನು ಹೂಳುವ ಪದ್ಧತಿಯವರು ಸಹಾ ದಹನ ಮಾಡಿದ್ದರು. ದಿನವೊಂದಕ್ಕೆ ಹತ್ತು ಅಥವಾ ಹನ್ನೆರಡು ಸಾವು ಸಂಭವಿಸಿದಾಗ, ಈಗಿರುವ ಚಿತಾಗಾರಗಳೇ ಸಾಕಾಗಿತ್ತು. ಆದರೆ ದಿನಕ್ಕೆ300ರಿಂದ400ಸಾವು ಸಂಭವಿಸಿದಾಗ ಚಿತಾಗಾರಗಳು ಸಾಕಾಗದೇ ಬಯಲು ಪ್ರದೇಶದಲ್ಲಿ ಒಮ್ಮೆಗೆ ಹತ್ತಾರು ಹೆಣಗಳ ಅಂತ್ಯಸಂಸ್ಕಾರಕ್ಕೆ ವಿಶೇಷ ವ್ಯವಸ್ಥೆಯನ್ನು ಮಾಡುವುದು ಅನಿವಾರ್ಯವಾಯಿತು.
ಬಯಲಿನಲ್ಲಿ ಒಮ್ಮೆಗೆ15ರಿಂದ20ಚಿತೆಗಳು ಉರಿಯುವ ದೃಶ್ಯ ಎಂಥವರನ್ನೂ ತಲ್ಲಣಗೊಳಿಸುವಂತಹದು. ಈ ರೀತಿ ಹಲವಾರು ಹೆಣಗಳು ಅಗ್ನಿಸ್ಪರ್ಶ ವಾಗುವ ಸಂಕಟದ ಹಾಗೂ ನೋವಿನ ಚಿತ್ರಗಳನ್ನು ಡ್ರೋನ್ ಕ್ಯಾಮರಾ ಮೂಲಕ ಡ್ಯಾನೀಶ್ ಕ್ಲಿಕ್ಕಿಸಿ ಅವನ್ನು ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಮುಂತಾದ ವಿದೇಶಿ ಮಾಧ್ಯಮಗಳಗೆ ನೀಡಿ ದೇಶದ ಮಾನವನ್ನು ಹರಾಜು ಹಾಕಿದರು ಎಂಬುದು ಇವರ ಮೇಲೆ ಇದ್ದ ಆರೋಪ.35ಕೋಟಿ ಜನಸಂಖ್ಯೆಯ ಅಮೆರಿಕದಲ್ಲಿ ಆರು ಲಕ್ಷ ಜನ ಕೋವಿಡ್‌ಗೆ ಬಲಿಯಾಗಿ ಸ್ಮಶಾನದಲ್ಲಿ ಸಮಾಧಿ ಮಾಡಿದರು.
ಎಲ್ಲಿಯಾದರು ಒಂದೇ ಒಂದು ಚಿತ್ರವು ಸಾಮೂಹಿಕವಾಗಿ ಮಣ್ಣು ಮಾಡುವ ಫೋಟೋ ಕಾಣಲು ಸಿಗುವುದಿಲ್ಲ. ಹಾಗೊಮ್ಮೆ ಯಾರಾದರು ಆ ರೀತಿಯ ಚಿತ್ರವನ್ನು ಪ್ರಕಟ ಮಾಡಿದರೆ ಕುಟುಂಬಸ್ಥರು ಸಾವಿರಾರು ಡಾಲರ್ ಗಳಿಗೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಪತ್ರಿಕೆಯವರಿಂದ ಕಕ್ಕಿಸುತ್ತಿದ್ದರು. ಸಾವಿನ ಅಂತ್ಯವಿಧಿ ಯೂ ಕುಟುಂಬಸ್ಥರ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟಿದ್ದು. ಅದು ಸಾರ್ವಜನಿಕ ಪ್ರದರ್ಶನಕ್ಕೊ ಅಥವಾ ಯಾವುದೊ ಸಿದ್ಧಾಂತದ ಕಾರ್ಯಸೂಚಿ ಭಾಗ ವಾಗಲು ಸಾಧ್ಯವಿಲ್ಲ. ತಮ್ಮ ಕುಂಟುಬದ ಸದಸ್ಯರ ಅಂತ್ಯಕ್ರಿಯೆ ಪತ್ರಿಕೆಗಳಿಗೆ ಆಹಾರವಾದರೆ ಮನೆಯವರಿಗೆ ಅದೆಷ್ಟು ದುಃಖವಾಗುವುದಿಲ್ಲ. ಆದರೆ ಹೆಸರು ಹಾಳು ಮಾಡುವ ಉದ್ದೇಶವೇ ಪ್ರಬಲವಾಗಿzಗ ಸಂವೇದನಾಶೀಲತೆ ಯಾಗಲೀ ಸರಿ ತಪ್ಪುಗಳು ಮಸಕಾಗಿ ಹೋಗುತ್ತದೆ.
ವಿದೇಶಿ ಮಾಧ್ಯಮಗಳು ಭಾರತವನ್ನು ಕಳಪೆಯಾಗಿ ಬಿಂಬಿಸಲು ದೊರೆಯುವ ಎಲ್ಲಾ ಅವಕಾಶವನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ ಮತ್ತು ಪುಲಿಟ್ಜರ್ ಮುಂತಾದ ಪ್ರಶಸ್ತಿಗಳನ್ನು ನೀಡಿ ಅವರನ್ನು ಉತ್ತೇಜಿಸುತ್ತಾರೆ. ಚನ್ನಿ ಆನಂದ್, ಮುಖ್ತಾರ್ ಖಾನ್ ಮತ್ತು ದಾರ್ ಯಾಸೀನ್ ಎಂಬ ಮೂವರು ಜಮ್ಮು ಕಾಶ್ಮೀರದ ಅಸೋಸಿಯೇಟಡ್ ಪ್ರೆಸ್ ಸಂಸ್ಥೆಗೆ ಸೇರಿದ ಛಾಯಾಗ್ರಾಹಕರಿಗೆ ಕಾಶ್ಮೀರದ370ನೇ ವಿಧಿಯನ್ನು ತೆಗೆದು ಹಾಕಿದ ತರುವಾಯ ವಿಧಿಸಿದಕರ್ಫ್ಯೂಮತ್ತು ಪೊಲೀಸ್ ಕಾರ್ಯಾಚರಣೆಯ ಫೊಟೋಗಳಿಗೆ2020ರ ಪುಲಿಟ್ಜರ್ ಪ್ರಶಸ್ತಿಯನ್ನು ನೀಡಲಾಗಿತ್ತು.
ಇದನ್ನು ಖಂಡಿಸಿ ಕಾಶ್ಮೀರದ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಮೀರ್ ಅವರು ತನ್ನ ಪೊಲೀಸ್ ಅಧಿಕಾರಿಯೊಬ್ಬರು ಭಯೋತ್ಪಾದಕರ ಗುಂಡಿಗೆ ಬಲಿಯಾದಾಗ ಅವರ ಚಿಕ್ಕ ಮಗಳು ತೀವ್ರ ದುಃಖದಿಂದ ಅಳುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿ ಈ ಚಿತ್ರಕ್ಕೆ ಪ್ರಶಸ್ತಿ ಇಲ್ಲವಾ ಎಂದು ಪ್ರಶ್ನಿಸಿದ್ದರು. ಇವರಿಗೆ ಉತ್ತರಿಸುವ ಧೈರ್ಯ ಪ್ರಶಸ್ತಿ ನೀಡುವವರಿಗೂ ಮತ್ತು ಪಡೆದವರಿಗೂ ಇರಲಿಲ್ಲ. ಆಫ್ಗಾನಿಸ್ತಾನದಿಂದ ಅಮೆರಿಕ ಸೈನ್ಯ ರಾತ್ರೋ ರಾತ್ರಿ ತಮ್ಮ ಡೇರಾ ಕಿತ್ತುಕೊಂಡು ವಾಪಸ್ಹೋಗಿಬಿಟ್ಟರು. ಈ ಸಮಯಕ್ಕೆ ಕಾಯುತ್ತಿದ್ದ ತಾಲಿಬಾನ್ ತನ್ನ ಹಿಡಿತವನ್ನು ಭದ್ರಪಡಿಸಿಕೊಳ್ಳಲು ಆರಂಭಿಸಿತು.
ತತ್ಪರಿಣಾಮವೇ ಈಗ ಆಫ್ಘಾನಿಸ್ತಾನದಲ್ಲಿ ಯುದ್ಧ ಆರಂಭವಾಗಿರುವುದು. ಡೊನಾಲ್ಡ್ ಟ್ರಂಪ್ ಶತಾಯ ಗತಾಯ ಸೋಲಲಿ ಎಂದು ಬಯಸುತ್ತಿದ್ದ ಎಡಪಂಥೀ ಯರು ಮತ್ತು ಮೋದಿ ವಿರೋಽಗಳು ಜೋ ಬೈಡನ್ ಪರ ಬಲವಾದ ವಕಾಲತ್ತು ವಹಿಸಿದ್ದರು. ಇಂದು ಇವರ ಬೈಡನ್‌ನ ಆತುರದ ನಿರ್ಧಾರವೇ ಡ್ಯಾನಿಶ್ ಸಾವಿಗೆ ಕಾರಣವಾಗಿರುವುದು ಎಂತಹ ವಿಪರ್ಯಾಸ. ಡ್ಯಾನಿಶ್ ಸಿದ್ದಕಿ ಸಾವು ತಾಲಿಬಾನ್‌ನಿಂದ ಸಂಭವಿಸಿದರೂ ನಮ್ಮ ದೇಶದ ಡೋಂಗಿ ಜಾತ್ಯತೀತ ವಾದಿಗಳಿಗೆ ತಾಲಿಬಾನ್ ಹೆಸರಿಸಿ ಖಂಡಿಸುವ ಧೈರ್ಯವೇ ಇಲ್ಲವಾಗಿದೆ.
ಡ್ಯಾನಿಶ್ ಸಾವು ಗುಂಡೇಟಿನಿಂದ ಸಂಭವಿಸಿದೆ. ಆಫ್ಘನ್ ಮತ್ತು ತಾಲಿಬಾನ್ ನಡುವಿನ ಚಕಮಕಿಯಲ್ಲಿ ಮೃತಪಟ್ಟ ಎಂದು ತಾಲೀಬಾನ್ ಕ್ರೌರ್ಯವಾಗಲಿ ಅಥವಾ ಅವರ ಭಯೋತ್ಪಾದಕ ಕೃತ್ಯವನ್ನಾಗಲೀ ಖಂಡಿಸುವ ಎದೆಗಾರಿಕೆಯೇ ಬೇಡವಾ? ಅಯ್ಯೋ ತಮ್ಮ ನಡುವಿನ ಅಪ್ರತಿಮ ಪ್ರತಿಭೆಯೂ ತಮ್ಮದೇ ಬಂಧು ಇಂದು ಮೂಲ ಭೂತವಾದಿಗಳ ಕೈಯಲ್ಲಿ ಮರಣವನ್ನಪ್ಪಿದರೂ ಅಪ್ಪಿ ತಪ್ಪಿಯೂ ಸಹಾ ತಾಲಿಬಾನ್ ಎಂದು ಇವರ ಬಾಯಲ್ಲಿ ಬರಲೇ ಇಲ್ಲ. ಜೀವಪರರಿಗೆ ತಮ್ಮಜೀವದ ಭಯವಾ? ಇಲ್ಲ ತಾಲಿಬಾನ್ ಖಂಡಿಸುವುದು ತಮ್ಮ ಜಾತ್ಯತೀತ ಸಿದ್ಧಾಂತಕ್ಕೆ ಧಕ್ಕೆಯಾಗುತ್ತದೆ ಎಂಬ ಕೊರಗಾ? ನ್ಯಾಷನಲ್ ಕಾನರೆನ ಉಮರ್ ಅಬ್ದುಡ್ಯಾನಿಶ್ ಸಾವಿಗೆ ಶೋಕ ವ್ಯಕ್ತಪಡಿಸುತ್ತಾ ಇವನ ಸಾವನ್ನು ಸಂಭ್ರಮಿಸಿದವರು ಬಾಸ್ಟರ್ಡ್ ಎಂದು ತುಚ್ಛ ಭಾಷೆಯಲ್ಲಿ ನಿಂದಿಸಿದ.
ಈ ಮಹಾನುಭಾವ ತಾಲಿಬಾನ್ ರಾಕ್ಷಸಿ ಕೃತ್ಯದಿಂದ ಡ್ಯಾನಿಶ್ ಸಾವು ಸಂಭವಿಸಿರುವುದು ಎಂದು ಖಂಡಿಸುವ ತಂಟೆಗೆ ಹೋಗಲಿಲ್ಲ. ಖ್ಯಾತ ಪತ್ರಕರ್ತ ರಾಜ್‌ ದೀಪ್ ಸರ್ದೆಸಾಯಿಯವರು ಡ್ಯಾನಿಶ್ ಸಾವಿಗೆ ದುಃಖ ವ್ಯಕ್ತಪಡಿಸುತ್ತಾರೆ. ಆದರೆ ಕೊಂದವರ ಬಗ್ಗೆ ಚಕಾರವಿಲ್ಲ ಎನ್‌ಡಿಟಿವಿ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಡ್ಯಾನಿಶ್ ಕ್ಲಿಕ್ಕಿಸಿದ ದೆಹಲಿ ದಂಗೆಯ ಚಿತ್ರವನ್ನು ಹಾಕಿ ತಮ್ಮ ಸಂತಾಪ ಹೇಳುತ್ತಾರೆ ಯಾರಿಂದ ಮೃತಪಟ್ಟ ಎಂದು ಹೇಳುವ ಗೋಜಿಗೆ ಹೋಗಲ್ಲ.ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಬಹಳ ನಾಜೂಕಾಗಿ ಟ್ವೀಟ್ ಮಾಡಿ ಒಂದಕ್ಷರವೂ ಕೊಂದವರ ಬಗ್ಗೆ ಉಖಿಸುವುದಿಲ್ಲ.
ಪ್ರಾಯಶಃ2013ರಲ್ಲಿ ತಾಲಿಬಾನ್ ಸ್ಥಾಪಕ ಮು ಅಬ್ದುಲ್ಸಲೀಂ ಜಾಫಿಗೆ ಭಾರತದಲ್ಲಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಕೆಂಪುಗಂಬಳಿ ಹಾಸಿ ಸ್ವಾಗತಿಸಿದ್ದ ಕಾರಣ ತಾಲಿಬಾನ್ ಖಂಡಿಸಲು ರಾಹುಲ್ ಗಾಂಽಗೆ ಬಾಯಿ ಕಟ್ಟಿರಬೇಕು. ಎಡಿಟರ್ ಗಿಲ್ಡ್ ಆಫ್ ಇಂಡಿಯಾ ದೇಶದ ಪತ್ರಕರ್ತರ ಅತ್ಯುನ್ನತ ಪತ್ರಿಕಾ ಬಳಗ. ಗಿಲ್ಡ್’ನವರು ಡ್ಯಾನಿಶ್ ಸಾವಿಗೆ ಸಂತಾಪ ವ್ಯಕ್ತ ಪಡಿಸುವಾಗ ಇವರ ಖಂಡನೆಯ ಗುರಿಯೂ ರೈಟ್ ವಿಂಗ್ ಟ್ರೋಲ್ ಗಳನ್ನು ಖಂಡಿಸಿ, ನಿರ್ಣಯ ಮಾಡುವಷ್ಟು ಭೌದ್ಧಿಕ ದಿವಾಳಿತನವನ್ನು ತೋರುತ್ತಾರೆ. ಇಂತಹ ಪ್ರತಿಷ್ಠಿತ ಸಂಸ್ಥೆಯು ಟ್ರೋಲ್‌ಗಳಿಗೆ ಪ್ರಾಮುಖ್ಯತೆಯನ್ನು ನೀಡಿ ಕೊಂದವರ ಹೆಸರೂ ಹೇಳಲು ಭಯ ಬಿದ್ದಿದ್ದಾರೆ.
ಇವರ ಹೇಡಿತನ ಆ ಸಾಹಸಿ ಛಾಯಾಗ್ರಾಹಕನಿಗೆ ಅಪಮಾನ ಮಾಡಿದಂತಲ್ಲವಾ? ಬಹುತೇಕ ಎಡಪಂಥೀಯ ಪತ್ರಕರ್ತರು ಸ್ವಯಂಘೋಷಿತ ಬುದ್ಧಿಜೀವಿಗಳ ವರ್ತನೆಯು ಇದಕ್ಕಿಂತ ಭಿನ್ನವಾಗಿಲ್ಲ. ಇವರೆಲ್ಲರಿಗೂ ಡ್ಯಾನಿಶ್ ಕೊಂದವರಿಗಿಂತ ಅವನ ಸಾವನ್ನು ಸಂಭ್ರಮಿಸಿದವರು ಮಹಾಪರಾಧಿಗಳಾಗಿ ಕಂಡಿದ್ದಾರೆ.ಕೆಲವು ತಿಂಗಳ ಹಿಂದೆ ಆಜ್‌ತಕ್ ಸಂಪಾದಕ ರೋಹಿತ್ ಸರ್ಡಾನಾ ಕರೋನಾಗೆ ಬಲಿಯಾದರು. ಆ ಸಂದರ್ಭದಲ್ಲಿ ಇವರ ಸಾವನ್ನು ಒಂದು ವರ್ಗದ ಜನ ತುಂಬಾ ಸಂಭ್ರಮಿಸಿದ್ದರು, ಆ ವೇಳೆಯಲ್ಲಿ ಇಂದು ಬಲಪಂಥೀಯರ ಮೇಲೆ ಕಿಡಿ ಕಾರುತ್ತಿರುವವರು ಮೌನಕ್ಕೆ ಶರಣಾಗಿದ್ದರು.
ಅಮಿತ್ ಶಾ ಅವರಿಗೆ ಕರೋನಾ ಎಂದು ಸುದ್ದಿ ಬಿತ್ತರವಾದ ತರುವಾಯ ಅದೆಷ್ಟು ಜನ ಅವರಿಗೆ ಕೇಡು ಬಗೆದು ಟ್ವೀಟ್ ಮಾಡಲಿಲ್ಲ? ಆಗ ಮಾನವೀಯತೆಯ ಪಾಠವು ಮಂಜುಪೆಟ್ಟಿಗೆಯನ್ನು ಸೇರಿತ್ತು. ಆದರೆ ಇಂದು ಕಂಡ ಕಂಡವರೆ ಮಾನವೀಯ ಮೌಲ್ಯಗಳ ಬಗ್ಗೆ ಪ್ರವಚನ ನೀಡುತ್ತಿದ್ದಾರೆ. ಸತ್ತವರ ಸಾವನ್ನು ಸಂಭ್ರಮಿಸುವುದು ಎಷ್ಟು ತಪ್ಪೊ ಅಷ್ಟೇ ತಪ್ಪು ಕೊಂದವರನ್ನು ಖಂಡಿಸದಿರುವುದು ಎಂಬುದನ್ನು ಈ ಡೋಂಗಿ ಮಾನವತಾವಾದಿಗಳು ಅರಿತುಕೊಳ್ಳಬೇಕು. ಡ್ಯಾನಿಶ್ ಸಿದ್ದಕಿಯ ಸಾವಿಗೆ ಕಾರಣರಾದ ಭಯೋತ್ಪಾದಕ ಸಂಘಟನೆಯನ್ನು ಕಟುವಾಗಿ ಖಂಡಿಸದೇ ಅವನ ಸಹೋದ್ಯೊಗಿಗಳು ಮೃತಪಟ್ಟ ಪೋಟೋ ಗ್ರಾಫರ್‌ಗೆ ಬಹುದೊಡ್ಡ ಅಪಚಾರವೆಸಗಿರುವುದಲ್ಲದೆ ಅಪಮಾನವನ್ನು ಇಂದು ಮಾಡಿದ್ದಾರೆ.