ಯಡಿಯೂರಪ್ಪನವರು ಓಕೆ ! ಸ್ವಾಮೀಜಿಗಳು ಏಕೆ ?
ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@.
ಕಳೆದ ಆರು ದಶಕಗಳಿಂದಾಚೆ ನಮ್ಮ ದೇಶದಲ್ಲಿ ಜಾತಿ ಎಂಬುದು ತೀರಾ ಮನೆತನಗಳ ನಡುವಿನ ವಿಚಾರವಾಗಿತ್ತು. ಸಿನಿಮಾ ಕ್ರೀಡೆ ಶಿಕ್ಷಣ, ಕ್ಷೇತ್ರ ಅಷ್ಟೇ ಏಕೆ ರಾಜಕೀಯದಲ್ಲೂ ಜಾತಿ ಎಂಬುದು ತೀರಾ ಆಂತರಿಕವಾಗಿತ್ತು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ಜಾತಿಯ ಪ್ರಶ್ನೆಗಳು ಮುಜುಗರ ತರುವಂಥ ಪ್ರಶ್ನೆಯಾಗಿತ್ತು . ಹೀಗಾಗಿ ವಿಶ್ವೇಶ್ವರಯ್ಯನವರು, ಕುವೆಂಪು, ಬೇಂದ್ರೆ, ಡಾ.ರಾಜ್ ಒಳಗೊಂಡ ಎಲ್ಲಾ ಚಿತ್ರನಟರು, ಕ್ರೀಡಾಪಟುಗಳ, ವಿeನಿಗಳು, ವೈದ್ಯರುಗಳು ಆ ಕಾಲದ ಯಾವುದೇ ಖ್ಯಾತ ವ್ಯಕ್ತಿಗಳ ಜಾತಿಗಳು ಅದೃಶ್ಯವಾಗಿತ್ತು.
ಆಗೆ ಮಕ್ಕಳು ತಪ್ಪುಮಾಡಿದರೆ ಹೆತ್ತವರು ‘ಇವನ್ನ ತಗೋಂಡೋಗಿ ಸಿದ್ದಗಂಗೆ ಮಠಕ್ಕೆ ಹಾಕ್ತೇನೆ’ ಎಂದು ಗದರಿಸುತ್ತಿದ್ದರು. ಮಠಕ್ಕೆ ಸೇರಿಸುತ್ತಿದ್ದ ಪೋಷಕರಿಗೂ ಅದೊಂದು ಲಿಂಗಾಯತ ಮಠ ಎಂದಾಗಲಿ, ಮಠಕ್ಕೆ ಸೇರುವ ಮಗು ಯಾವ ಜಾತಿಯೆಂದಾಗಲಿ (ಈಗಲೂ) ಇರಲಿಲ್ಲ. ಆಗೆ ಭ್ರಷ್ಟಾಚಾರವೊಂದೇ ಸಾಮಾಜಿಕ ಪಿಡುಗಾಗಿತ್ತು. ಆದರೆ ಇಂದು ಜಾತಿಯೆಂಬುದೇ ಒಂದು ದೊಡ್ಡ ಭಯೋತ್ಪಾದನೆ ಮತ್ತು ಆತಂಕವಾದವಾಗಿ ಸಾಮಾಜಿಕ ಪೀಡೆಯಾಗಿ ಬೆಳೆದು ನಿಂತಿದೆ.
ಸ್ವಜಾತಿ ವಾದ ವ್ಯಾಮೋಹಗಳೆಂಬುದು ಎಲ್ಲವನ್ನೂ ಮೀರಿ ನಿಂತಿದೆ. ಇದು ದೇಶದ ಭವಿಷ್ಯದ ದೃಷ್ಟಿಯಲ್ಲಿ ಮಾರಕ ಎಂದು ಗ್ರಹಿಸಿದ ಬಿಜೆಪಿ ಪಕ್ಷದ ಹಿಂದಿರುವ ರಾಷ್ಟ್ರೀಯತೆಯ ಚಿಂತರಕರು ಮಾಡಿದ ಮೊದಲ ಕೆಲಸ ವೆಂದರೆ ತಮ್ಮ ರಾಜಕೀಯದಲ್ಲಿ ಜಾತಿಯನ್ನು ಮೀರಿ ವ್ಯಕ್ತಿಯನ್ನು ಬೆಳೆಸುವ ಮಹಾಯಾಗಕ್ಕೆ ಪಣ ತೊಟ್ಟರು. ಮೊದಲಿಗೆ ಅಬ್ದುಲ್ ಕಲಾಂರಂಥ ಸಜ್ಜನರನ್ನು ದೇಶದ ಪ್ರಥಮ ಪ್ರಜೆಯಾಗಿಸಿದರು.
ಪಟೇಲರೇ ಬಹುಸಂಖ್ಯಾತರಾಗಿರುವ ಗುಜರಾತಿನಲ್ಲಿ ನರೇಂದ್ರ ಮೋದಿಯವರಂಥ ಹಿಂದುಳಿದ ವರ್ಗವರನ್ನು ಮುಖ್ಯಮಂತ್ರಿಯಾಗಿಸಿದರು. ದಲಿತ ಜಾತಿಯನ್ನು ದಾಟಿ ಬೆಳೆದ ರಾಮನಾಥ ಕೋವಿಂದ ಅವರನ್ನು ರಾಷ್ಟ್ರಪತಿಯನ್ನಾಗಿಸಿದರು. ತೀರಾ ಇತ್ತೀಚಿನ ಬೆಳವಣಿಗೆಯನ್ನೇ ನೋಡಿ, ತಮಿಳುನಾಡಿನಲ್ಲಿ ಕೂನೂರು ಜಿಲ್ಲೆಯಲ್ಲಿ ಲೋಕನಾಥನ್ ಮತ್ತು ವರುದಮ್ಮಾಳ್ ದಂಪತಿಗಳಿಬ್ಬರೂ ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ದಲಿತ ಉಪಪಂಗಡದ ಅರುಂತತಿಯಾರ್ ಸಮುದಾಯಕ್ಕೆ ಸೇರಿದ ಇವರು ತಮ್ಮ ಮಗನನ್ನು ದೇಶಸೇವೆ ಮಾಡಲು ಕಳಿಸಿದ್ದು ಬಿಜೆಪಿ ಪಕ್ಷದೊಂದಿಗೆ. ಈಗ ಈ ಮಗ ಏನಾಗಿದ್ದಾನೆ ಗೊತ್ತೇ? ಮೊನ್ನೆ ಕೇಂದ್ರ ಸಚಿವ ಸಂಪುಟದಲ್ಲಿ ಸೇರ್ಪಡೆಗೊಂಡು ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವರಾಗಿದ್ದಾರೆ. ಅವರ ಹೆಸರು ಎಲ್.ಮುರುಗನ್. ತಮಿಳುನಾಡಿನಲ್ಲಿ ನಡೆದ ಕಳೆದ ಚುಣಾವಣೆಯಲ್ಲಿ ನಿರೀಕ್ಷಿಸಿದಷ್ಟು ಕ್ಷೇತ್ರಗಳನ್ನು ಗೆಲ್ಲದಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಅವರನ್ನುಕೈಬಿಡದೆ ಕೇಂದ್ರ ಮಂತ್ರಿಯನ್ನಾಗಿಸುವ, ಉದಾರತೆ ಯಾವ ಪಕ್ಷಕ್ಕೆ ಯಾವ ರಾಜಕೀಯ ಮುಖಂಡನಿಗಿದೆ ಹೇಳಿ.
ಅದ್ಭುತವೆಂದರೆ ಮುರುಗನ್ ಅವರ ಹೆತ್ತವರು ಇಂದಿಗೂ ತಮ್ಮ ಕೂಲಿ ಕಾಯಕವನ್ನು ಬಿಟ್ಟಿಲ್ಲ. ಹಾಗೆಯೇ ಪಶ್ಚಿಮ ಬಂಗಾಳದ ಸಲ್ತೋರ ಕ್ಷೇತ್ರದಲ್ಲಿ ದಿನಗೂಲಿ ನೌಕರ ಮಹಿಳೆ ಚಂದನಬೌರಿ ಎಂಬಾಕೆ ಕಳೆದ ಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿದ್ದಾಳೆ. ಒರಿಸ್ಸಾದ ಗೋಪಿನಾಥಪುರದಲ್ಲಿ ಜೋಪಡಿಯಲ್ಲಿ ವಾಸವಿರುವ ಬ್ರಾಹ್ಮಣ ವರ್ಗದ ಪ್ರತಾಪಚಂದ್ರ ಸಾರಂಗಿ ಎಂಬ ಬಡಪಾಯಿಗೆ ಲೋಕಸಭಾ ಚುನಾವಣೆಯ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಅವರನ್ನು ಕೇಂದ್ರ ಮಂತ್ರಿ ಮಾಡಲಾಗಿದೆ.
ಇನ್ನು ಕರ್ನಾಟಕದಲ್ಲಿ ಮೊನ್ನೆಯಷ್ಟೇ, ಪ್ರಥಮ ಬಾರಿಗೆ ಸಂಸದರಾದ ದಲಿತ ವರ್ಗದ ನಾಯರಾಯಣ ಸ್ವಾಮಿಯನ್ನು ಕೇಂದ್ರ ಮಂತ್ರಿ ಮಾಡಲಾಯಿತು.ಇಷ್ಟೇ ಅಲ್ಲ, ಸಾಲುಮರದ ತಿಮ್ಮಕ್ಕರಂಥ ಗ್ರಾಮೀಣ ಭಾಗದ ಸಾಧಕರನ್ನು ಹುಡುಕಿ ಹುಡುಕಿ ಅವರಿಗೆ ಸೈಫ್ ಆಲಿ ಖಾನ್‌ನಂಥ ಅಯೋಗ್ಯರಿಗೆ ನೀಡಲಾಗುತ್ತಿದ್ದ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈಗ ಹೇಳಿ, ಇಂಥ ಎಲೆಮರೆಕಾಯಿ ಸಾಧಕರಿಗೆ ಪ್ರಶಸ್ತಿಗಳನ್ನು, ಧರ್ಮ-ಜಾತಿ ಖ್ಯಾತಿಯನ್ನು ತಿಪ್ಪೆಗೆ ಸೆದು ದಲಿತ ಹಿಂದುಳಿದ ಬಡಪಾಯಿ ಬ್ರಾಹ್ಮಣರಿಗೆ ವ್ಯಕ್ತಿ ಆಧಾರಿತವಾಗಿ ಪದವಿ ಹುದ್ದೆಗಳನ್ನು ನೀಡಿ ಎಂದು ಯಾವ ಮಠದ ಸ್ವಾಮೀಜಿಗಳು ಸರಕಾರಕ್ಕೆ ಒತ್ತಡ ಹಾಕುತ್ತಾರೇಳಿ? ಇಂಥ ಯೋಗ್ಯರು ಅರ್ಹರು ಸಮರ್ಥ ವ್ಯಕ್ತಿಗಳು ಇಂದು ಯಾವ ಮಠಾಧಿಪತಿಗಳಿಗೂ ಕಾಣುವುದಿಲ್ಲ. ಅವರಿಗೆ ಕಾಣುವುದೆ ಸ್ವಜಾತಿ ಕುಳಗಳು, ಸ್ವಜಾತಿ ಹಿತರಕ್ಷಕರು, ಸ್ವಜಾತಿ ಉದ್ಧಾರಕರುಗಳು ಮಾತ್ರ.
ನಮ್ಮಲ್ಲಿ ಕಾವಿ ತೊಟ್ಟ ಬಸವಣ್ಣನವರು ಪುರಂದರ ಕನಕದಾಸರು ಸರ್ವಜ್ಞ ಮೂರ್ತಿಯಂಥ ಸಂತರು ಬೀದಿಬೀದಿ ಬರಿಗಾಲಿನಲ್ಲಿ ನಡೆದು ಸಮಾಜದ ಡೊಂಕನ್ನು ತಿದ್ದಿ ಜೋಳಿಗೆ ತುಂಬಿಸಿಕೊಂಡು ಮಹಾಪುರುಷರಾದರು. ಆದರೆ ಇಂದು ಮಠ ಮಂದಿರ ಸಮಾಧಿಗಳೆಲ್ಲವೂ ಜಾತಿ ಜೋಳಿಗೆಗಳಾಗಿವೆ. ಈಗ ನೋಡಿ ಯಡಿಯೂರಪ್ಪನವರನ್ನು ಬಿಜೆಪಿಯವರು, ಸಂಘ ಪರಿವಾದವರು, ಹಿಂದುತ್ವವಾದಿ, ಕೋಮುವಾದಿ, ಎಂದೆ ಪರಿಗಣಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಅವರೊಬ್ಬ ಹೋರಾಟಗಾರ ರೈತ ನಾಯಕ ಎಂದು ಆಧರಿಸಿ ಬಿಜೆಪಿಯಲ್ಲಿ ಅಗ್ರಸ್ಥಾನ ನೀಡಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿ ಪಕ್ಷ ಅವರನ್ನು ಗೌರವಿಸಿ ಕೊಂಡು ಬಂದಿತು. ಆದರೆ ಕಳೆದೆರಡು ದಿನಗಳಿಂದ ಅವರನ್ನು ಕರ್ನಾಟಕ ಕೇವಲ ಒಬ್ಬ ವೀರಶೈವ- ಲಿಂಗಾಯತ ನಾಯಕನಷ್ಟೇ ಎಂಬಂತೆ ಪ್ರತಿಬಿಂಬಿಸಲಾಗುತ್ತಿದೆ.
ಇದು ನಿಜಕ್ಕೂ ಯಡಿಯೂರಪ್ಪನವರು ನಡೆದು ಬಂದ ಜೀವನಕ್ಕೆ ಮಾಡಿದ ದೊಡ್ಡ ಅವಮಾನ. ಕೇವಲ ಜಾತಿಯೊಂದನ್ನು ಪರಿಗಣಿಸಿ ರಾಜಕೀಯ ನಾಯಕರು ಮತ್ತು ಅವರಿಗಿಂತ ಮಿಗಿಲಾಗಿ ಸರ್ವಸಂಘ ಪರಿತ್ಯಾಗಿಗಳಾದ (?!) ಲೌಕಿಕ ಜೀವನ ಽಕ್ಕರಿಸಿದ(!) ಕಾವಿತೊಟ್ಟು ಸ್ವಾಮೀಜಿಗಳೆಂದು ಕರೆಸಿಕೊಂಡಿರುವ ಮಂದಿಯೆ ನಾಡಿನ ರಾಜಕೀಯವನ್ನೇ ಆಪೋಶನ ತೆಗೆದುಕೊಳ್ಳುತ್ತಿರುವ ಬೆಳವಣೆಗೆಯನ್ನು ನೋಡಿದರೆ ಸಮಾಜದಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಮತ್ತು ಇನ್ನಿತರ ಜಾತಿಗಳಿಗೆ ಕೆಟ್ಟ ಸಂದೇಶ ಮತ್ತು ಪ್ರಚೋದನೆ ನೀಡುತ್ತಿದೆ.
ಯಡಿಯೂರಪ್ಪನವರನ್ನು ಇಂದು ಸ್ವಜಾತಿ ಸ್ವಾಮೀಜಿಗಳು ಕೇವಲ ಜಾತಿನಾಯಕನೆಂದು ನೋಡುತ್ತಿರಬಹುದು. ಆದರೆ ಅವರು ನಾಡಿನ ಪ್ರತಿಯೊಂದು ಜಾತಿ ಯನ್ನೂ ಆಕರ್ಷಿಸಿ ಪ್ರತಿಯೊಂದು ಜಿಯಲ್ಲೂ ಒಬ್ಬ ರಾಜಕೀಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ ಹೊರತು ಒಂದು ಜಾತಿಯ ಮುಖಂಡನಾಗಿ ಅಲ್ಲವೇ ಅಲ್ಲ. ಆದರೆ ಈಗ ಯಡಿಯೂರಪ್ಪನವರ ಜಾತಿಯನ್ನು ಬಳಸಿಕೊಂಡು ಅನೇಕ ಮಠಗಳು ಸ್ವಾಮೀಜಿಗಳು ತಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳುವ ಪ್ರಯತ್ನಕ್ಕಿಳಿ ದಂತಿದೆ. ಇಂಥ ಪರಿಸ್ಥಿತಿಯಲ್ಲಿ ಪ್ರಮುಖ ಸ್ವಾಮೀಜಿಗಳೆನಿಸಿರುವ ಸಿದ್ಧಗಂಗಾ ಮಠ, ಸುತ್ತೂರು ಮಠ, ಮುರುಘಾ ಮಠದ ಹಿರಿಯ ಶ್ರೀಗಳು ಬಿಜೆಪಿ ಹೈಕಮಾಂಡ್‌ಗೆ ಒಂದು ಸಲಹೆ ಸೂಚನೆ ಕೊಟ್ಟರೆ ತಪ್ಪಲ್ಲ.
ಜತೆಗೆ ಎಲ್ಲಾ ಜಾತಿಗಳ ಸ್ವಾಮೀಜಿಗಳು ಯಡಿಯೂರಪ್ಪನವರ ಪರ ನಿಂತಿದ್ದರೆ ಯಡಯೂರಪ್ಪನವರಿಗೆ ಹೊಳಪು ಬರುತಿತ್ತು. ಮುಖ್ಯಮಂತ್ರಿಯಾದ ತಕ್ಷಣ ಎಲ್ಲಾ ಜಾತಿಯ ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದು ಬಂದು ಕೋಟ್ಯಂತರ ರುಪಾಯಿಗಳ ಅನುದಾನಗಳನ್ನು ನೀಡಿದ ಯಡಿಯೂರಪ್ಪನವರು ಇಂದು ಬೇರೆ ಜಾತಿಯ ಮಠಗಳಿಗೆ ಬೇಡವಾದರೇ? ದುರಂತವೆಂದರೆ ಆಯಾ ಜಾತಿಮಠಗಳು ‘ಈ ಯಡಿಯೂರಪ್ಪ ಕೆಳಗಿಳಿದರೆ ಸಾಕು’ ನಮ್ಮ ಜಾತಿಯ ಮುಖಂಡ ನೊಬ್ಬನನ್ನು ಮುಖ್ಯಮಂತ್ರಿಯನ್ನಾಗಿ ಕಂಡು ಧನ್ಯರಾಗಿ ಜೀವಬಿಡಬಹುದು ಎಂದು ತುದಿಗಾಲಿನಲ್ಲಿ ನಿಂತಿರುತ್ತಾರೆ.
ನಾಳೆ ಏನಾದರೂ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದರೆ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಬೇಕೆಂದು ದಲಿತ ಸಮುದಾಯದ ಮಠಗಳು, ಸಿದ್ದರಾಮಯ್ಯ ನವರನ್ನು ಮಾಡಲೇ ಬೇಕೆಂದು ಕುರುಬ ಸಮುದಾಯದ ಸ್ವಾಮೀಜಿಗಳು, ಡಿ.ಕೆ.ಶಿವಕುಮಾರ್ ಅವರನ್ನು ಮಾಡಲೇ ಬೇಕೆಂದು ಒಕ್ಕಲಿಗ ಮಠಗಳು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರೆ ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಗತಿಯೇನು?. ಈಗಲೂ ಅಷ್ಟೇ ಪ್ರಲ್ಹಾದ ಜೋಶಿ ಯವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಬ್ರಾಹ್ಮಣ ಸಮುದಾಯಗಳು ಮಠಗಳು (ಅಷ್ಟೊಂದು ಧೈರ್ಯ ಅವರಿಗೆಲ್ಲಿ ಬರಬೇಕು!) ಮುತ್ತಿಗೆ ಹಾಕಿ ನೋಡಲಿ. ಆಗ ಅದು ಸಂವಿಧಾನದ ಕಗ್ಗೊಲೆ, ರಾಜಕೀಯ ಅತ್ಯಾಚಾರ (!) ಕೋಮುವಾದಿಗಳ ಬಲಪಂಥೀಯರ ಮೇಲ್ಜಾತಿಯವರ ದಬ್ಬಾಳಿಕೆ ಎಂದೆ ಅಲಕಲವಾಗದಿದ್ದರೆ ನೋಡಿ.
ಇಷ್ಟಕ್ಕೂ ಈ ಸ್ವಾಮೀಜಿಗಳು ಯಡಿಯೂರಪ್ಪನವರು ಎದುರಿಸಿದ ಕೆಟ್ಟದಿನಗಳಲೆ ಅವರ ಪರ ನಿಂತರೇ? ಮೊದಲನೆಯದಾಗಿ20-20ಸರಕಾರದಲ್ಲಿಜೆಡಿಎಸ್ ಅಧಿಕಾರ ಅನುಭವಿಸಿ, ಯಡಿಯೂರಪ್ಪನವರ ಊಟದ ಎಲೆಯನ್ನು ಎಳೆದು ಕೊಂಡಂತೆ ವಚನಭ್ರಷ್ಟರಾದಾಗ ಇವರು ದಂಗೆಯೆದ್ದರೇ? ಜೈಲಿಗೆ ಹೋಗುವ ಸಂದರ್ಭ ಬಂದಾಗಲೂ ಹೀಗೆಯೇ ಎಲ್ಲರೂ ಒಗ್ಗೂಡಿ ಅವರಿಗೆ ನೈತಿಕ ಬೆಂಬಲ ನೀಡಬಹುದಿತ್ತು ಅಲ್ಲವೇ? ಅಂದು ಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಹೊರತಾಗಿ ಮತ್ತಾರೂ ಅವರಿಗೆ ಮಮಕಾರ ತೋರಲಿಲ್ಲ. ಆದರೆ ಈಗ ಯಡಿಯೂರಪ್ಪನವರನ್ನು ಇಳಿಸಿದರೆ ಬಿಜೆಪಿ ಪಕ್ಷಕ್ಕೆ ನಷ್ಟವಾಗುತ್ತದೆಂದು ಬಿಜೆಪಿಯ ಭವಿಷ್ಯದ ಬಗ್ಗೆ ಕಾಳಜಿ ವಹಿಸುವ ಮಂದಿ ಬಿಜೆಪಿಯ ಮೂಲ ಸಿದ್ಧಾಂತವಾದ ಹಿಂದೂತ್ವ ಮತ್ತು ಸನಾತನ ಪರಪರೆಯ ಉಳಿವಿಗೆ ಎಷ್ಟು ಮಂದಿ ಸ್ವಾಮೀಜಿಗಳು ಬೆಂಬಲ ನೀಡುತ್ತಾರೆ. ಈಗಾಗಲೇ ವೀರಶೈವ- ಲಿಂಗಾಯತ ಸಮುದಾಯ ಪ್ರತ್ಯೇಕ ಧರ್ಮದ ಸ್ಥಾನಕ್ಕಾಗಿ ಆಗ್ರಹಿಸಿದೆ.
ಅವರ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಆರಂಭದಲ್ಲಿ ಗಣಪತಿ ಸರಸ್ವತಿ ಪ್ರಾರ್ಥನೆಗಳು ಮರೆಯಾಗಿ ಗಿಡಕ್ಕೆ ನೀರೆರೆದು ಆರಂಭಿಸುವ ಪದ್ಧತಿ ವಿಕಸನಗೊಂಡಿದೆ. ಬಸವಣ್ಣ ನವರ ಹೊರತಾಗಿ ಅಲ್ಲಿ ರಾಮ ಕೋದಂಡರಾಮ ನಾರಾಯಣ ಸುಬ್ರಹ್ಮಣ್ಯ ಹನುಮ ದೇವರುಗಳು ಅಸಂಬದ್ಧ ದೈವಗಳಾಗಿವೆ.ಇಂಥ ಅಪಾಯವನ್ನು ಗ್ರಹಿಸಿದ ಹಿರಿಯ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿಗಳು ಸ್ವತಃ ವೀರಶೈವರಾದರೂ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಖಂಡಿಸಿದ್ದರು. ಇದೆ ಹಿಂದೂ ಧರ್ಮಕ್ಕೆ ದೊಡ್ಡ ಹೊಡೆತವಾಗುತ್ತದೆಂದು ಮನಗಂಡು ಬಹಳ ನೊಂದಿದ್ದರು. ಅದಕ್ಕಾಗಿ ದೊಡ್ಡ ಅಭಿಯಾನಕ್ಕೆ ಸಿದ್ಧರಾಗಿದ್ದರು. ಅದರ ವಿಷಯವಾಗೇ ದಾಖಲೆಗಳನ್ನು ಕಲೆಹಾಕಿ ಪುಸ್ತಕವನ್ನೇ ಬರೆದರು.
ಒಂದು ದಿನ ಪ್ರತ್ಯೇಕ ಧರ್ಮಕ್ಕೆ ಶಿವಕುಮಾರಸ್ವಾಮಿಗಳ ಬೆಂಬಲವಿದೆ ಎಂಬ ಸುದ್ದಿಯನ್ನು ಕೇಳಿ ಸ್ವತಃ ಸ್ವಾಮೀಜಿಗಳಿಗೆ ದೂರವಾಣಿ ಕರೆಮಾಡಿ ಅದು ಸುಳ್ಳುಎಂದು ಖಚಿತಪಡಿಸಿಕೊಂಡಿದ್ದರು. ವೀರಶೈವ ವರ್ಗದ ಅನೇಕ ವೇದಿಕೆಗಳ ‘ಬಸವಣ್ಣನವರು ಮೊದಲು ಬ್ರಾಹ್ಮಣರು ನಂತರ ಲಿಂಗಧರಿಸಿ ಲಿಂಗಾಯತನಾಗಿ, ಪರಶಿವನನ್ನು ಆರಾಧಿಸುವ ನಂದಿಯಂತೆ ವೀರಶೈವ (ವೀರಭದ್ರನಂತೆ) ತಾನೆಂದು ಹೆಮ್ಮೆ ಪಟ್ಟರೆಂದು’ ಉಪನ್ಯಾಸ ನೀಡಿರುವುದನ್ನು ಅವರೊಂದಿಗೆ ಕಳೆದ25ವರ್ಷಗಳಿಂದ ಅವರ ಅನುಯಾಯಿಯಾಗಿ ಸೇವೆ ಸಲ್ಲಿಸಿದ ನಾನು ಕಂಡಿದ್ದೇನೆ.
ಜತೆಗೆ ಸಿದ್ದಗಂಗೆ ಮಠದಲ್ಲಿರುವ ವೇದ ಸಂಸ್ಕೃತ ಪಾಠ ಶಾಲೆಯನ್ನು ಪ್ರಸ್ತಾಪಿಸಿ ಎಲ್ಲಾ ಜಾತಿಗಳೂ ಹಿಂದೂ ಧರ್ಮದ ಒಂದು ಭಾಗವೆಂದೇ ತಮ್ಮ ಕೊನೆಯ ದಿನದವರೆಗೂ ಆಧಾರ ಸಹಿತ ವಾದಿಸಿದ್ದರು. ಇಂಥ ಹಿಂದೂ ಧರ್ಮವನ್ನು ರಕ್ಷಿಸುವ ಏಕೈಕ ಪಕ್ಷವೆಂದು ನಂಬಿಕೆ ಸೃಷ್ಠಿಸಿರುವ ಸಂಘಪರಿವಾರ ಆಧರಿತ ಬಿಜೆಪಿ ಹಿತವನ್ನು ಯಡಿಯೂರಪ್ಪನವರ ಮೂಲಕ ಕಾಯ್ದುಕೊಳ್ಳುವ ಅಭಿಲಾಷೆ ಸ್ವಾಮೀಜಿಗಳಿಗಿದ್ದರೆ ಅದು ಬಿಜೆಪಿಯ ಸೌಭಾಗ್ಯ. ಹಾಗೆಯೇ ಯಡಿಯೂರಪ್ಪನವರನ್ನು ಈಗಲೇ ಮುಖ್ಯಮಂತ್ರಿಯಿಂದ ಕೆಳಗಿಳಿಸುವುದು ರಾಜಕೀಯ ದೃಷ್ಟಿಯಿಂದ ಖಂಡಿತಾ ಅಕ್ಷಮ್ಯ.
ಉಣ್ಣುವಾಗ ತಟ್ಟೆಯನ್ನು ಕಿತ್ತುಕೊಂಡಂತೆ ನಾಳೆ ಅವರಿಂದ ರಾಜೀನಾಮೆ ಪಡೆಯುವುದು ಬಿಜೆಪಿಯ ಒಂದು ಯಮ ಸಾಹಸವೇ ಹೌದು. ಬಿಜೆಪಿ ಪಕ್ಷಕರ್ನಾಟಕದಲ್ಲಿಅಽಕಾರಹಿಡಿಯುವ ಮಟ್ಟಕ್ಕೆ ಬಂದಿರಬೇಕಾದರೆ ಅದಕ್ಕೆ ಯಡಿಯೂರಪ್ಪನವರ ಕೊಡುಗೆ ಮಾತ್ರವ ಅವರ ಬದುಕೇ ಸವೆದಿದೆ. ಅವರು ಅಧಿಕಾರ ಪೂರ್ಣಾವಧಿಯಾಗಬೇಕೆಂದು ಕೇವಲ ಸ್ವಜಾತಿಗಳವರಲ್ಲ, ಅವರನ್ನು ಅಭಿಮಾನಿಸುವ ಎಲ್ಲಾ ಜಾತಿಗಳ ಮುಗ್ಧ ಅನಕ್ಷರಸ್ಥರಲ್ಲೂ ಇದೆ, ಪಕ್ಷಕ್ಕೆ ಮತನೀಡಿದ ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ರಾಜಕೀಯದ ಕೊನೆಯ ಹಂತದಲ್ಲಿ ಕೇವಲ ಜಾತಿ ಹಣೆಪಟ್ಟಿ ಅಂಟಿಸಿ ಉಳಿಸಿಕೊಳ್ಳುವುದು ಮತ್ತು ಮತ್ತೊಬ್ಬ ವೀರಶೈವ ನಾಯಕನಿಗೇ ಮುಖ್ಯಮಂತ್ರಿ ಪದವಿ ನೀಡಬೇಕೆಂದು ಆಗ್ರಹಿಸುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನಾಧರಿತ ವ್ಯವಸ್ಥೆಯಲ್ಲಿ ಎಷ್ಟು ಸರಿ?. ನಾಡಿನ-ಧರ್ಮದ-ಸಾಂಸ್ಕೃತಿಕ ಸಮಾಜದ ಸಾಕ್ಷಿ ಪ್ರಜ್ಞೆ ಎನಿಸಿರುವ ಸಿದ್ಧಗಂಗೆಯ ಸಿದ್ದಲಿಂಗ ಶ್ರೀಗಳು, ಮುರುಘಾ ಮಠದ ಶ್ರೀಗಳು ಹಾಗೂ ಸುತ್ತೂರು ಮಠದ ಶ್ರೀಗಳಂಥ ಹಿರಿಯರು ಇದನ್ನೆ ಮನಗಂಡು ಸಮಾಜದಲ್ಲಿನ ಸ್ವಾರ್ಥಿಗಳನ್ನು ಸಮಯಸಾಧಕರನ್ನು ಸಮಯವಂಚಕರನ್ನು ದೂರವಿಟ್ಟು ಸಕಲಜಾತಿಗಳನ್ನು ಸಲಹುವ ಅನ್ನದಾಸೋಹದ ಭೋಜನಪಂಕ್ತಿಯಂತೆ ಒಗ್ಗೂಡಿಸಿಕೊಂಡು ನಾಡನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ದು ಸಾಮಾಜಿಕ ನ್ಯಾಯವನ್ನು ಹಂಚಬೇಕೆಂದು ಈ ಮೂಲಕ ಕೋರಲಾಗಿದೆ.
ಈ ಮಧ್ಯೆ ಯಡಿಯೂರಪ್ಪನವರನ್ನು ಇಷ್ಟು ಅನಿವಾರ್ಯವಾಗಿ ಕೆಳಗಿಳಿಸಲು ಬರಿಯ ಅವರ ವಯಸ್ಸಿನ ಕಾರಣವೋ ಅಥವಾ ಇನ್ನಾವುದಾದರು ಗಂಭೀರಆಂತರಿಕ ಕಾರಣಗಳಿವೆಯೋ ಎಂಬುದೂ ರಾಜ್ಯದ ಎಲ್ಲಾ ವರ್ಗದ ಜನರಲ್ಲಿ ಕಾಡುತ್ತಿರುವ ಪ್ರಶ್ನೆ.