ಸರಳ, ವಿರಳ ಮಂತ್ರಿ ಮಹೋದಯವರಿವರು
ನಾಡಿಮಿಡಿತ
ವಸಂತ ನಾಡಿಗೇರ
.@.
ಚುನಾವಣೆ ಎಂದ ಮೇಲೆ ನಾಮಪತ್ರ ಸಲ್ಲಿಕೆ, ಪ್ರಚಾರ, ಸೋಲು-ಗೆಲುವು ಇವೆಲ್ಲ ಇದ್ದದ್ದೇ. ಈ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ತಮ್ಮ ಆಸ್ತಿ ಮೊದಲಾದ ವಿವರ ಗಳನ್ನು ಸಲ್ಲಿಸುವ ಔಪಚಾರಿಕ ಪ್ರಕ್ರಿಯೆಯೂ ನಡೆಯುತ್ತದೆ. ಚುನಾವಣೆ ಮುಗಿದ ಮೇಲೆ ನೂತನ ಸರಕಾರ ಅಸ್ತಿತ್ವಕ್ಕೆ ಬರುತ್ತದೆ.
ಇದರ ಬೆನ್ನಲ್ಲೇ, ‘ಹೊಸ ಸಂಸತ್ತಿನಲ್ಲಿ ಇಷ್ಟು ಸಂಖ್ಯೆಯ ಸದಸ್ಯರ ಮೇಲೆ ಕ್ರಿಮಿನಲ್ ಸ್ವರೂಪದ ಕೇಸ್‌ಗಳಿವೆ; ಇಷ್ಟು ಮಂದಿಕೋಟ್ಯಽಶರಿದ್ದಾರೆ; ಇಂತಿಂಥವರ ಶಿಕ್ಷಣಾರ್ಹತೆ ಹೀಗಿದೆ ಎಂಬಿತ್ಯಾದಿ ವಿವರಗಳು ಪ್ರಕಟವಾಗುತ್ತವೆ. ಇದನ್ನೆಲ್ಲ ನೋಡಿದರೆ ರಾಜಕೀಯ ಕ್ಷೇತ್ರವು ಜನಸಾಮಾನ್ಯರಿಗೆ, ಸುಶಿಕ್ಷಿತರು, ಪ್ರಜ್ಞಾವಂತರಿಗಲ್ಲ. ಅದೇನಿದ್ದರೂ ಹಣ-ತೋಳ್ಬಲ, ಪ್ರಭಾವ ಇರುವಂಥವ ರಿಗೆ ಎಂಬ ಭಾವನೆ ಬರುವುದು ಸಹಜ.
ಬಹುತೇಕವಾಗಿ ಈಗಿನ ಪರಿಸ್ಥಿತಿ ಇರುವುದೂ ಹೀಗೆಯೇ. ನಮ್ಮಲ್ಲಿ ಯಾರ‍್ಯಾರೋ ಮಿನಿಸ್ಟರ್ ಗಳಾಗುತ್ತಾರೆ. ಏನೇನೂ ಓದಿರದವರು ಶಿಕ್ಷಣ ಮಂತ್ರಿ; ಹಳ್ಳಿಯ ಮುಖವನ್ನೇ ನೋಡದವರು ಕೃಷಿ ಮಂತ್ರಿ ಈ ರೀತಿಯ ಅಪಸವ್ಯಗಳಿರುತ್ತವೆ. ವಿದೇಶಗಳಲ್ಲಾದರೆ ಆಯಾ ಕ್ಷೇತ್ರಗಳ ಪರಿಣತರೇ ಸಚಿವರಾಗುತ್ತಾರೆ ಎಂಬಿತ್ಯಾದಿ ಗೊಣಗಾಟ, ಆರೋಪಗಳು ಸಾಮಾನ್ಯ. ಆದರೆ ಇದರ ನಡುವೆಯೇ ಒಂದಷ್ಟು ಅಹುದಹುದು ನ್ನಬಹುದಾದ ಇಲ್ಲವೆ ಹೌದಾ ಎಂದು ಹುಬ್ಬೇರಿಸು ವಂಥವರೂ ನಮಗೆ ಕಾಣಸಿಗುತ್ತಾರೆ.
ಸಂಸದರು, ಸಚಿವರಾಗುತ್ತಾರೆ. ನರೇಂದ್ರ ಮೋದಿ ಸರಕಾರ ಎರಡನೇಅವಧಿಯಲ್ಲಿಅಧಿಕಾರಕ್ಕೆ ಬಂದಾಗ ಇಂಥ ಕೆಲವು ಅಚ್ಚರಿಯ ಆಯ್ಕೆಗಳಾಗಿದ್ದವು. ಆ ಪೈಕಿ ಒಡಿಶಾದ ಪ್ರತಾಪ್ ಚಂದ್ರ ಸಾರಂಗಿ ಎಂಬುವರೂ ಒಬ್ಬರಾಗಿದ್ದರು. ಈ ಬಾರಿಯ ವಿಸ್ತರಣೆಯಲ್ಲಿ ಸಂಪುಟ ಸೇರಿದವರೊಬ್ಬರ ವಿವರಗಳನ್ನು ನೋಡಿದರೆ ಯಾರಾ ದರೂ ದಂಗಾಲೇಬೇಕು. ಇವರ ಹೆಸರು ಅಶ್ವಿನಿ ವೈಷ್ಣವ್. ಪಿಯುಷ್ ಗೋಯಲ್ ನಿರ್ವಹಿಸುತ್ತಿದ್ದ ರೈಲ್ವೆ ಖಾತೆ ಹಾಗೂ ರವಿ ಶಂಕರ್ ಪ್ರಸಾದ್ ಬಳಿ ಇದ್ದ ಐಟಿ ಖಾತೆಯ ಡಬಲ್ ಧಮಾಕಾ ಇವರಿಗೆ ದೊರೆತಿದೆ.
ಏನು? ಅಷ್ಟೇನೂ ಪರಿಚಿತರಲ್ಲದ, ಅನುಭವ ಇರದಿರುವವರಿಗೆ ಏಕ್‌ದಂ ಈ ರೀತಿ ಎರಡು ಪ್ರಮುಖ ಖಾತೆಗಳ ಜವಾಬ್ದಾರಿ ನೀಡುವುದೇ ಎಂದು ಹುಬ್ಬೇರಿಸದಿರಿ. ಅವರಿಗೆ ಅವುಗಳನ್ನು ನಿರ್ವಹಿಸುವ ಸಾಮರ್ಥ್ಯ ಇದೆ ಎಂಬುದು ಪ್ರಧಾನಿಯ ವಿಶ್ವಾಸ.2019ರ ಚುನಾವಣೆಯ ಬಳಿಕವೂ ಇಂಥದೊಂದು ಅವಕಾಶವನ್ನು ರಾಜತಾಂತ್ರಿಕರಾಗಿದ್ದ ಜೈಶಂಕರ್ ಅವರಿಗೆ ನೀಡಲಾಗಿತ್ತು. ಆಗ ಅದು ಅಚ್ಚರಿಗೆ ಕಾರಣವಾಗಿತ್ತಾದರೂ ಒಂದಷ್ಟು ಸುಳಿವಿತ್ತು. ಆದರೆ ಈ ಬಾರಿ ವೈಷ್ಣವ್ ಆಯ್ಕೆ ಸಂಪೂರ್ಣ ಅನಿರೀಕ್ಷಿತ. ಆವರು ಸಚಿವರಾಗಬಹುದು, ಇವರಾಗ ಬಹುದು ಎಂಬ ಸುದ್ದಿ ಹರಿದಾಡುತ್ತಿದ್ದರೂ ಯಾರಿಗೂ ಖಚಿತತೆಯಾಗಲೀ, ಸುಳಿವಾಗಲೀ ಇರಲಿಲ್ಲ. ಆದರೆ ವೈಷ್ಣವ್ ನೇಮಕದ ಬಳಿಕ ಅವರು ಮೋದಿಯವರ ಆಯ್ಕೆ ಎಂಬುದು ಖಚಿತವಾಯಿತು.
ಏಕೆಂದರೆ ಅಶ್ವಿನಿ ವೈಷ್ಣವ್‌ಗೆ ಗುಜರಾತ್ ಕನೆಕ್ಷನ್ ಇತ್ತು. ಅವರು ಮೋದಿಯವರ ನಜರಿನಲ್ಲಿದ್ದರು. ಮೊದಲ ಸಂಪುಟದಲ್ಲೇ ವೈಷ್ಣವ್ ಅವರನ್ನು ಸೇರಿಸಿಕೊಳ್ಳಲುಬಯಸಿದ್ದರಾದರೂ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಆದರೂ ವೈಷ್ಣವ್ ಅವರಲ್ಲಿ ಏನೈತಿ ಅಂಥಾದ್ದೇನೈತಿ ಎಂದು ಹುಡುಕುತ್ತ ಹೊರಟರೆ ಕೆಲವು ಪ್ರಮುಖ ವಿಷಯಗಳು ಗೊತ್ತಾಗುತ್ತವೆ. ಅವರ ಶೈಕ್ಷಣಿಕ ಅರ್ಹತೆ ನೋಡಿದರೆ ಎಂಥವರೂ ದಂಗಾಗಲೇಬೆಕು.
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಚಿನ್ನದ ಪದಕದೊಂದಿಗೆ ಎಂಜಿನಿಯರಿಂಗ್ ಪದವಿ; ಐಐಟಿ ಕಾನ್ಪುರದಿಂದ ಎಂ.ಟೆಕ್; ವ್ಹಾರ್ಟನ್ ವಿಶ್ವವಿದ್ಯಾಲಯದಿಂದಎಂಬಿಎ; ಐಎಎಸ್ ಪರೀಕ್ಷೆಯಲ್ಲಿ47ನೇ ರ‍್ಯಾಂಕ್. ಎಂಥ ಅದ್ಭುತವಾದ ರೆಸ್ಯೂಮೆ ಇದು ಎಂದು ಯಾರಿಗಾದರೂ ಅನಿಸದೇ ಇರದು. ಇಂಥ ವೈಷ್ಣವ್ ಅವರು ರಾಜಸ್ಥಾನದ ಜೋಧಪುರದವರು. ಐಎಎಸ್ ಬಳಿಕ ಒಡಿಶಾದ ಬಾಲಸೋರ್‌ನ ಜಿಲ್ಲಾಽಕಾರಿಯಾಗಿದ್ದಾಗ ಆವರ ಸಾಮರ್ಥ್ಯವೇನೆಂಬುದು ಗೊತ್ತಾಯಿತು.
1999ರಲ್ಲಿ ಅಲ್ಲಿ ಬಂದ ಮಹಾ ಚಂಡಮಾರುತದಿಂದ ಅಲ್ಲೋಲ ಕಲ್ಲೋಲ ಉಂಟಾಯಿತು. ಈಗ ನಮಗೆ ಸಾಕಷ್ಟು ತಂತ್ರಜ್ಞಾನದ ಸೌಲಭ್ಯವಿದೆ. ಮುನ್ಸೂಚನೆ ಸಿಗುತ್ತದೆ. ಆದರೆ ಆ ಸಮಯದಲ್ಲಿ ವೈಷ್ಣವ್ ಅವರು ಅಮೆರಿಕದ ನೌಕಾಪಡೆ ನೀಡಿದ್ದ ಮುನ್ನೆಚ್ಚರಿಕೆಯನ್ನು ಅನುಸರಿಸಿ ಕಾರ್ಯಪ್ರವೃತ್ತರಾದರು. ಇದರಿಂದ ಸುಮಾರು10ಸಾವಿರ ಜನರ ಪ್ರಾಣ ಉಳಿಯಿತು.2003ರಲ್ಲಿ ದೆಹಲಿಗೆ ಹೋಗಿ ಅಂದಿನ ಪ್ರಧಾನಿ ವಾಜಪೇಯಿ ಅವರ ಉಪ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಈ ನಡುವೆಯೇ ವ್ಹಾರ್ಟನ್ ವಿವಿಗೆ ತೆರಳಿ ಎಂಬಿಎ ಪದವಿ ಪಡೆದರು. ವಾಪಸಾದ ಮೇಲೆ ಸರಕಾರಿ ಸೇವೆ ತೊರೆದು ಅನೇಕ ಬಹುರಾಷ್ಟ್ರೀಯಕಂಪನಿಗಳಲ್ಲಿ ಕೆಲಸ ಮಾಡಿದರು. ಅನಂತರ ಸ್ವತಃ ಕೆಲವು ಕಂಪನಿಗಳನ್ನು ಸ್ಥಾಪಿಸಿದರು. ಈ ಸಂದರ್ಭದಲ್ಲೇ ಅವರು ಮೋದಿ ಅವರ ಗಮನ ಸೆಳೆದಿದ್ದು.
ಆಗ ಮೋದಿಯವರು ವೈಷ್ಣವ್ ಅವರ ಸಲಹೆ ಪಡೆಯುತ್ತಿದ್ದರು. ಹೀಗಿರುವಾಗಲೇ2017ರಲ್ಲಿ ಬಿಜೆಪಿಗೆ ಬಂದ ಅವರನ್ನು2019ರಲ್ಲಿ ರಾಜ್ಯಸಭೆ ಸದಸ್ಯ ರನ್ನಾಗಿ ಮಾಡಲಾಯಿತು. ಹೀಗೆ, ಅತ್ಯುತ್ಕೃಷ್ಟ ಶೈಕ್ಷಣಿಕ ಅರ್ಹತೆ, ತಂತ್ರಜ್ಞಾನ, ಔದ್ಯಮಿಕ ಕ್ಷೇತ್ರದ ಅನುಭವ, ಆಡಳಿತ ಸೇವೆಯ ಹಿನ್ನೆಲೆಯಲ್ಲಿ ಅವರಿಗೆ ರೈಲ್ವೆ ಮತ್ತು ಐಟಿ ಖಾತೆ ಒಲಿದುಬಂದಿದೆ. ಆದರೆ ಈ ಖಾತೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದು ವೈಷ್ಣವ್ ಅವರ ಸಂಗತಿಯಾದರೆ ಮತ್ತೊಬ್ಬ ಸಚಿವ ಎಲ್. ಮುರುಗನ್ ಅವರ ಕಥೆಯೇ ಬೇರೆ ಥರದ್ದು. ಅದನ್ನು ಕೇಳಿದರೆ ಹೀಗೂ ಉಂಟೆ ಎನಿಸುತ್ತದೆ. ಯಾಕೆ ಎಂದು ಕೇಳುವ ಬದಲು ಈ ಕಥೆ ಕೇಳಿ. ಕೇಂದ್ರ ಸಚಿವ ಸಂಪುಟ ಸೇರಿದ ಎಲ್. ಮುರುಗನ್ ವಾರ್ತಾ ಮತ್ತು ಪ್ರಸಾರ ಖಾತೆಯ ಸಹಾಯಕ ಸಚಿವರು. ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದವರು. ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ನಾಲ್ಕು ದಶಕಗಳಲ್ಲಿ ಇಂಥ ಸಾಧನೆ ಇದೇ ಮೊದಲು.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು ಕೊಂಡು ಪಕ್ಷದ ಬಲವರ್ಧನೆ ಮಾಡಿದ ಕಾರಣ ಸಾಧ್ಯವಾಗಿದೆ. ಈ ಸಾಧನೆಗೆಪ್ರತಿಫಲಎಂಬಂತೆ ಆವರಿಗೀಗ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ. ಇದೆಲ್ಲ ಸರಿ. ಆದರೆ ಮುರುಗನ್ ಅವರು ಅತ್ತ ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಇತ್ತ ತಮಿಳುನಾಡಿನ ತಮ್ಮ ಹಳ್ಳಿಯಲ್ಲಿ ಅವರ ತಂದೆ ತಾಯಿ ತಮ್ಮ ಪಾಡಿಗೆ ಕೃಷಿ ಮತ್ತು ಕೂಲಿ ಕೆಲಸ ಮಾಡುತ್ತಿದ್ದರು. ಎಂಥ ವಿಚಿತ್ರವಲ್ಲವೆ? ತಮ್ಮ ಮಗ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣವನ್ನು ಕಣ್ತುಂಬಿ ಕೊಳ್ಳಲು ಯಾರು ತಾನೆ ಒಲ್ಲೆ ಎನ್ನುತ್ತಾರೆ ಹೇಳಿ? ಯಾರಿಗುಂಟು ಯಾರಿಗಿಲ್ಲ ಎಂಬಂಥ ಅಪರೂಪದ ಅವಕಾಶವಿದು.
ಆದರೆ ಅವರಿಗೆ ಇದರ ಬಗ್ಗೆ ಆಸಕ್ತಿಯಾಗಲೀ, ತವಕವಾಗಲೀ ಇರಲಿಲ್ಲ. ಮುರುಗನ್ ಅವರ ತಂದೆ ತಾಯಿ ಇರುವುದು ಪಶ್ಚಿಮ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಕೋನೂರು ಎಂಬ ಗ್ರಾಮದಲ್ಲಿ. ದಲಿತರು. ಒಂದು ಸಣ್ಣ ಶೀಟ್ ಮನೆಯಲ್ಲಿ ವಾಸ. ಮಾಡುವುದು ಕೂಲಿ ಕೆಲಸ. ತಾಯಿ, 59ವರ್ಷದ ವರುದಮ್ಮಾಳ್. ತಂದೆ68ವರ್ಷದ ಲೋಗನಾಥನ್. ಅವರನ್ನು ಪತ್ರಿಕೆ, ಟಿವಿಯವರು ಮಾತನಾಡಿಸಲು ಹೋದಾಗ ಇವರೇನಾ ಎನ್ನಿಸುವಷ್ಟರ ಮಟ್ಟಿಗೆ ಸರಳತೆ. ಕೆಂಪು ಸೀರೆ, ಅದರ ಮೇಲೊಂದು ಮಾಸಿದ ಅಂಗಿ ಹಾಕಿದ್ದ ವರುದಮ್ಮಾಳ್ ಹೊಲದಲ್ಲಿ ಕೆಲಸ ಮಾಡುತ್ತಿದ್ದರು.
ಮತ್ತೊಂದು ಕಡೆ ಲೋಗನಾಥನ್ ಮರಳನ್ನು ತೆಗೆದು ಭೂಮಿಯನ್ನು ಸಮತಟ್ಟು ಮಾಡುವ ಕೆಲಸದಲ್ಲಿ ತೊಡಗಿದ್ದರು. ಜಮೀನ್ದಾರರ ಅನುಮತಿಯೊಂದಿಗೆ ಹಿಂಜರಿಕೆಯೊಂದಿಗೇ ಮಾತನಾಡಿದ ವರುದಮ್ಮಾಳ್, ’ನಮ್ಮ ಮಗ ಮಂತ್ರಿಯಾದರೆ ನಮಗೇನು? ಮಂತ್ರಿಯಾಗಿದ್ದಾನೆ ಎಂಬುದು ಹೆಮ್ಮೆಯ ಸಂಗತಿಯೇ. ಆದರೆ ಇದರಲ್ಲಿ ನಮ್ಮ ಹೆಚ್ಚುಗಾರಿಕೆ, ಕೊಡುಗೆ ಏನಿದೆ ಹೇಳಿ? ’ ಎಂದು ಮರುಪ್ರಶ್ನೆ ಹಾಕುತ್ತಾರೆ.
ತಂದೆಯದೂ ಇದೇ ಅಭಿಪ್ರಾಯ. ಅವನು ಸ್ವಂತ ಸಾಮರ್ಥ್ಯದಿಂದ ಮುಂದೆ ಬಂದಿದ್ದಾನೆ. ಆತನ ಬಿಡುವಿಲ್ಲದ ಜೀವನದಲ್ಲಿ ನಾವೇಕೆ ತಲೆ ಹಾಕಬೇಕು. ನಮ್ಮ ಅನ್ನವನ್ನು ನಾವೇ ದುಡಿದುಕೊಳ್ಳುತ್ತೇವೆ ಎನ್ನುತ್ತಾರೆ. ಶಾಲೆಯಲ್ಲಿ ಮುರುಗನ್ ಜಾಣ ವಿದ್ಯಾರ್ಥಿ. ಅನಂತರ ಕಾಲೇಜು ಹಾಗೂ ಕಾನೂನು ಪದವಿ ಕಲಿಯಲು ಚೆನ್ನೈಗೆ ಹೋದರು. ಆಗ ಅವರ ತಂದೆ ಒಂದಷ್ಟು ಹಣವನ್ನು ಸಾಲವಾಗಿ ತಂದು ಕೊಟ್ಟಿದ್ದರು. ಚೆನ್ನೈನಲ್ಲಿ ಇದ್ದಾಗ ಅಲ್ಲಿಯೇ ತಮ್ಮ ಜತೆ ಇರುವಂತೆ ಮುರುಗನ್ ಒತ್ತಾಯ ಮಾಡುತ್ತಿದ್ದರೂ ಅವರು ಒಪ್ಪುತ್ತಿರಲಿಲ್ಲ.
ನಾಲ್ಕು ದಿನದ ಮಟ್ಟಿಗೆ ಹೋಗಿ ವಾಪಸು ಬಂದು ಬಿಡುತ್ತಿದ್ದರು. ಅನಂತರ ವಕೀಲರಾಗಿ ಮುರುಗನ್ ಸಾಕಷ್ಟು ಹೆಸರು ಮಾಡಿದರೂ ಇವರು ಮಾತ್ರ ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಾದ ಸಂದರ್ಭದಲ್ಲಿ ಒಮ್ಮೆ ಅವರು ಮನೆಗೆ ಬಂದಿದ್ದರು. ಆಗ ಅವರಿಗೆ ಭದ್ರತೆ ಎನು? ಕಾರ್ಯರ್ತರ ದಂಡೇನು? ಆದರೆ ತಂದೆ ತಾಯಿ ಮಾತ್ರ ಅವರನ್ನು ಸ್ವಾಗತಿಸಿ ತಮ್ಮ ಪಾಡಿಗೆ ತಾವು ಇದ್ದುಬಿಟ್ಟರು.
ಇಷ್ಟು ಮಾತ್ರವಲ್ಲದೆ ಮುರುಗನ್ ಅವರು ಕೇಂದ್ರ ಸಚಿವರಾದ ಬಳಿಕವೂ ಅವರ ತಂದೆತಾಯಿಯ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.ಕೋವಿಡ್ ಸಮಯದಲ್ಲಿ ರೇಷನ್ ಕಿಟ್ ವಿತರಿಸಿದ ಸಂದರ್ಭದಲ್ಲಿ ಮುರುಗನ್ ಅವರ ತಂದೆ ಅದನ್ನು ಪಡೆಯಲು ಸರತಿಯ ಸಾಲಿನಲ್ಲಿ ನಿಂತಿದ್ದರಂತೆ. ಯಾಕೆಎಲ್ಲರಂತೆ ಕ್ಯೂನಲ್ಲಿ ನಿಲ್ಲುವಿರಿ, ಹಾಗೇ ಬಂದು ತೆಗೆದುಕೊಂಡಿ ಹೋಗಿ ಎಂದರೆ, ಬೇಡ ಎಂದು ನಿರಾಕರಿಸಿದರು ಎನ್ನುತ್ತಾರೆ ಗ್ರಾಮಸ್ಥರು.
ನಮ್ಮ ಮಗ ದೊಡ್ಡ ಸ್ಥಾನಕ್ಕೆ ಏರಿದ್ದಾನೆ. ಅದರ ಬಗ್ಗೆ ಸಂತಸವಿದೆ. ಆದರೆ ನಾವು ನಮ್ಮ ಕಾಲ ಮೇಲೆ ನಿಲ್ಲುತ್ತೇವೆ. ದುಡಿದೇ ಉಣ್ಣುತ್ತೇವೆ ಎನ್ನುತ್ತಾರೆ.ಮತ್ತೊಂದು ವಿಷಯ ಏನೆಂದರೆ, ಅವರ ಎರಡನೇ ಮಗ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾನೆ. ಸೊಸೆ ಮತ್ತು ಮಕ್ಕಳನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ.ಇದು ಸಿನಿಮಾ ಕಥೆಯಂತೆ ಭಾಸವಾಗುತ್ತದೆ. ನಂಬುವುದು ಕಷ್ಟ. ಆದರೆ ಅಚ್ಚರಿಯಾದರೂ ಸತ್ಯ. ಇವರಿಬ್ಬರದು ಈ ರೀತಿಯಾದರೆ ಮೊದಲಿನಿಂದಲೂಮೋದಿ ಸಂಪುಟದಲ್ಲಿರುವ ಮತ್ತೊಬ್ಬ ಸಚಿವರದು ಬೇರೆಯದೇ ಸ್ಟೋರಿ. ಅವರೇ ವೀರೇಂದ್ರ ಕುಮಾರ್ ಖಟಿಕ್.
2019ರ ಚುನಾವಣೆಯ ನಂತರ ಹಂಗಾಮಿ ಸ್ಪೀಕರ್ ಆಗಿದ್ದವರು. ಯಾಕೆಂದರೆ ಇವರು ಏಳು ಬಾರಿ ಸಂಸದರು. ಅನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣಖಾತೆ ಸಹಾಯಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇತ್ತೀಚಿನ ಸಂಪುಟ ವಿಸ್ತರಣೆ ಕಾಲಕ್ಕೆ ಮತ್ತೆ ಮರಳಿದ್ದು ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಈ ಬಾರಿ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆ ನೀಡಲಾಗಿದೆ. ಜತೆಗೆ ಕ್ಯಾಬಿನೆಟ್ ದರ್ಜೆ.67ವರ್ಷದ ವೀರೇಂದ್ರ ಕುಮಾರ್ ಅವರು ಮಧ್ಯಪ್ರದೇಶದ ಸಾಗರ್ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿದ್ದರು.
ಕಳೆದ ಮೂರುಅವಧಿಯಿಂದ ಟೀಕಮ್‌ಗಢ ಕ್ಷೇತ್ರವನ್ನುಪ್ರತಿನಿಧಿಸುತ್ತಿದ್ದಾರೆ. ಇವೆರಡೂ ಕ್ಷೇತ್ರಗಳು ಮಧ್ಯಪ್ರದೇಶದ ಹಿಂದುಳಿದ ಬುಂದೇಲ್‌ಖಂಡದಲ್ಲಿವೆ. ಇವರು ಪರಿಶಿಷ್ಟ ಖಟಿಕ್ ಸಮುದಾಯಕ್ಕೆ ಸೇರಿದವರು. ಸಾಧಾರಣ ಕುಟುಂಬದಿಂದ ಬಂದವರು. ಸಾಗರ್ ಪಟ್ಟಣದಲ್ಲಿ ಇವರ ತಂದೆಯದು ಒಂದು ಸೈಕಲ್ ಶಾಪ್ ಇತ್ತು. ಇವರೂ ಕೂಡ ಅಂಗಡಿಗೆ ಹೋಗಿ ಪಂಕ್ಚರ್ ಹಾಕುವುದು, ದುರಸ್ತಿ ಕಾರ್ಯ ಮಾಡುತ್ತ, ತಂದೆಗೆ ನೆರವಾಗುತ್ತಿದ್ದರು. ಇದರ ನಡುವೆಯೇ ಚೆನ್ನಾಗಿ ಓದಿಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಬಳಿಕ ಪಿಎಚ್ .ಡಿ ಪಡೆದರು.
ಆರೆಸ್ಸೆಸ್, ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರಿಂದ ಕ್ರಮೇಣ ರಾಜಕಾರಣಕ್ಕೆ ಬಂದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ16ತಿಂಗಳು ಜೈಲುವಾಸ ಅನುಭವಿಸಿದರು. ಇದೆಲ್ಲ ಸರಿ. ಆದರೆ ಅಸಲಿ ವಿಷಯ ಅದಲ್ಲ. ನಾವು ಹೇಳಹೊರಟಿರುವುದು ಈ ಸಚಿವರು ಅಳವಡಿಸಿಕೊಂಡಿರುವ ಅತ್ಯಂತ ಸರಳ, ನಿರಾಡಂಬರದ ಜೀವನದ ಬಗ್ಗೆ. ಏಳು ಬಾರಿ ಸಂಸದರಾಗಿ, ಈಗ ಮಂತ್ರಿ ಆಗಿದ್ದರೂಅಧಿಕಾರದ ಮದ ತಲೆಗೇರಿಲ್ಲ. ಯಾವಾಗಲೂ ಸಾದಾ ಜುಬ್ಬಾ ಪೈಜಾಮ ಧರಿಸುತ್ತಾರೆ. ರೈಲು, ಬಸ್ಸುಗಳಲ್ಲಿ ಪ್ರಯಾಣಿಸುತ್ತಾರೆ. ಇವರು ರೈಲಿನಲ್ಲಿ ಟೀಕಮ್‌ಗಢ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ತಮ್ಮ ಸೂಟ್‌ಕೇಸ್ ತೆಗೆದುಕೊಂಡು ತಮ್ಮ ಪಾಡಿಗೆ ಹೊರಬರುತ್ತಾರೆ. ಅವರಿಗಾಗಿ ಕಾಯುತ್ತಿರುವ ಒಂದು ಕಾಯಂ ಆಟೊ ಏರಿ ಮನೆಗೆ ಬರುತ್ತಾರೆ.
ಊರಿನಲ್ಲೂ ಅಷ್ಟೆ. ಹಳೆಯ ಸ್ಕೂಟರ್‌ನಲ್ಲೇ ನಗರ ಸಂಚಾರ. ನಗರ ಪ್ರದಕ್ಷಿಣೆ ಮಾಡುತ್ತಿರುವಾಗ ಎಲ್ಲಾದರೂ ಸೈಕಲ್ ಅಂಗಡಿ ಕಂಡರೆ ಸಾಕು. ಅಲ್ಲಿ ಕುಳಿತು ಬಿಡುತ್ತಾರೆ. ಪಂಕ್ಚರ್ ಹಾಕುವ ವಿಧಾನ ಕುರಿತು ಅವರೊಂದಿಗೆ ಅನುಭವ ಹಂಚಿಕೊಳ್ಳುತ್ತಾರೆ. ‘ಸುದೀರ್ಘ ಅವಽಗೆ ಸಂಸದರಾಗಿದ್ದೀರಿ. ಇದೀಗ ಸಚಿವರು ಬೇರೆ. ಆದರೂ ಯಾಕೆ ಇಂಥ ಜೀವನ’ ಎಂದು ಕೇಳಿದರೆ ’ಜನಸಾಮಾನ್ಯರಂತೆ ಸಂಚರಿಸಿದರೆ, ಜನರ ಮಧ್ಯೆ ಓಡಾಡಿದರೆ ಅವರ ಕಷ್ಟ ಸುಖಗಳು ಅರ್ಥವಾಗುತ್ತವೆ. ಅವರ ಒಡನಾಟದಲ್ಲಿದ್ದರೆ ಅವರಿಗೂ ನಮ್ಮ ಮೇಲೆ ಪ್ರೀತಿ ವಿಶ್ವಾಸ ಮೂಡುತ್ತದೆ.’ ಎನ್ನುತ್ತಾರೆ ವೀರೇಂದ್ರ ಕುಮಾರ್.
ಅವರ ವಿಷಯದಲ್ಲಿ ಈ ಮಾತು ನೂರಕ್ಕೆ ನೂರು ಸತ್ಯ ಎನಿಸುವುದು ಏಕೆಂದರೆ ಈವರು ಇದುವರೆಗೆ ಒಮ್ಮೆಯೂ ಸೋತಿಲ್ಲ. ಏಳು ಬಾರಿ ಗೆಲ್ಲುವುದೆಂದರೆತಮಾಷೆಯಲ್ಲ. ಆದರೆ ಇದು ಸಾಧ್ಯವಾಗಿರುವುದು ಅವರ ಸರಳ, ವಿರಳ, ನಿಗರ್ವಿ ಜೀವನ ಎಂದರೆ ಅತಿಶಯೋಕ್ತಿ ಅಲ್ಲ. ಒಮ್ಮೆ ಸಂಸದನೋ, ಶಾಸಕನೋ ಆದರೆ ಸಾಕು. ಇನ್ನಿಲ್ಲದ ಗತ್ತು ಬರುತ್ತದೆ. ಸಚಿವರಾದರಂತೂ ಅವರನ್ನು ಹಿಡಿಯುವವರೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ತಲೆಮಾರಿಗಾಗುವಷ್ಟು ಆಸ್ತಿ ಮಾಡುತ್ತಾರೆ.
ದರ್ಪ, ದೌಲತ್ತು ಮೆರೆಯುತ್ತಾರೆ. ಇದು ಈಗ ಕಂಡುಬರುವ ಸಾಮಾನ್ಯ ಚಿತ್ರಣ. ಆದರೆ ಮೇಲೆ ತಿಳಿಸಿರುವಂಥವರು ಇನ್ನೂ ನಮಗೆ ಕಾಣಸಿಗುತ್ತಾರೆಎಂಬುದೇ ಸಂತಸ ಮತ್ತು ಸಮಾಧಾನದ ವಿಷಯ. ಇಂಥವರ ಸಂಖ್ಯೆ ಹೆಚ್ಚಾಗಲಿ.
ನಾಡಿಶಾಸ್ತ್ರಮಂತ್ರಿಯಾದೊಡೆ ಮೂಡುವುದು ಕೋಡುಗತ್ತು ಗೈರತ್ತು ಇವರಿಗಾಗುವುದು ಜೋಡುಇವರ ನಡುವೆ ಕೆಲವರಿರುವರು ನೋಡುಹಿಡೀಬೇಕು ಇಂಥವರ ಸರಳಜೀವನದ ಜಾಡು