ವಿದ್ಯೆಯ ಬೆಳಕು ನೀಡಿದ ಬಿ.ಎಂ.ಪಾಟೀಲರು
ತನ್ನಿಮಿತ್ತ
ಡಾ.ಡಿ.ಆರ್‌.ನಿಡೋಣಿ (ಗುಲಗಂಜಿ)
ಕಳೆದ ಶತಮಾನದ ಪ್ರಾರಂಭದಲ್ಲಿ ಇಂಗ್ಲಿಷರ ದಬ್ಬಾಳಿಕೆ, ಅನಕ್ಷರತೆ ಜತೆಗೆ ಬಡತನ ಜಿಲ್ಲೆಯ ಜನಜೀವನವನ್ನು ಅಯೋಮಯಗೊಳಿಸಿದ್ದವು. ಅಂತಹ ಅವಧಿ ಯಲ್ಲಿ ವಿಜಾಪುರದ ಬಿಎಲ್‌ಡಿಇ ಸಂಸ್ಥೆ1910ರಲ್ಲಿ ಜನ್ಮ ತಾಳಿತು. ಸಂಸ್ಥೆ ಬೆಳೆದಂತೆ ಆರ್ಥಿಕ ಸಮಸ್ಯೆ ಎದುರಿಸುತ್ತಿತ್ತು. ಇಂತಹ ಸಂಕ್ರಮಣ ಕಾಲದಲ್ಲಿ ಬಿ.ಎಂ.ಪಾಟೀಲರು ಅದರ ಕರ್ಣಧಾರತ್ವ ವಹಿಸಿಕೊಳ್ಳುವ ಮೂಲಕ ಸಂಸ್ಥೆಯನ್ನು ಯಶೋಪಥದಡೆಗೆ ಕೊಂಡೊಯ್ದರು.
ತೊರವಿ ಗ್ರಾಮದ ಗೌರವಾನ್ವಿತ ಗೌಡಕಿ ಮನೆತನದ ಮಲ್ಲನಗೌಡ ಹಾಗೂ ಲಕ್ಷ್ಮಿಬಾಯಿ ದಂಪತಿ ಪುತ್ರರಾಗಿ1931ರ, ಫೆಬ್ರವರಿ28ರಂದು ಜನ್ಮತಾಳಿದರು. ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಬಿ.ಎಂ.ಪಾಟೀಲರು ಚಿಕ್ಕಮ್ಮ ಹಾಗೂ ಸೋದರ ಮಾವಂದಿರ (ತಿಕೋಟಾದ ಗೌಡರು) ಲಾಲನೆ ಪಾಲನೆಯಲ್ಲಿ ಬೆಳೆದರು. ಉನ್ನತ ವ್ಯಾಸಂಗವನ್ನು ಬೆಳಗಾವಿ ಲಿಂಗರಾಜ್ ಕಾಲೇಜ್‌ನಲ್ಲಿ ಪಡೆದರು.
ಕಾಲೇಜಿನ ಪ್ರಧಾನ ಪ್ರತಿನಿಧಿ ಆಗುವ ಮೂಲಕ ತಮ್ಮ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದರು. ಸೋದರ ಮಾವ ದಿ.ಎ.ಟಿ.ಪಾಟೀಲರ (ರಾಷ್ಟ್ರಪ್ರಶಸ್ತಿ ಪುರಸ್ಕೃತರು) ಪುತ್ರಿ ಕಮಲಾಬಾಯಿ ಜತೆ1953ರಲ್ಲಿ ವಿವಾಹವಾಯಿತು. ನಂತರ ಅವರು ವಿಜಾಪುರಕ್ಕೆ ಬಂದು ನೆಲೆಸಿ4ಜನ ಹೆಣ್ಣುಮಕ್ಕಳು ಹಾಗೂ ಇಬ್ಬರು ಪುತ್ರರಿಗೆ ಜನ್ಮನೀಡಿದರು. ಅವರ ಹಿರಿಯ ಪುತ್ರ ಎಂ.ಬಿ.ಪಾಟೀಲ ಇಂದಿನ ಶಾಸಕರು ಹಾಗೂ ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಬೆಳೆಸಿದ ಕೀರ್ತಿ ಇವರಿಗಿದೆ.
ಬಿ.ಎಂ.ಪಾಟೀಲರು ಶಾಲಾ ಕಾಲೇಜುಗಳಲ್ಲಿ ಓದುತ್ತಿರುವಾಗ ಭಾರತದಾದ್ಯಂತ ಸ್ವಾತಂತ್ರ್ಯ ಸಂಗ್ರಾಮ ಮುಗಿಲು ಮುಟ್ಟಿತ್ತು. ಅಂದಿನ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ನ ತತ್ವ ಸಿದ್ಧಾಂತಗಳ ಕಡೆಗೆ ವಾಲಿ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾದರು. ವಿಜಾಪುರ ಜಿಲ್ಲೆಯ ಸ್ಮಾತಂತ್ರ್ಯ ಹೋರಾಟಗಾರ ದಿ.ಚೆನ್ನಬಸಪ್ಪ ಅಂಬಲಿಯವರ ಅನುಯಾಯಿಗಳಾಗಿ ಬಿ.ಎಂ.ಪಾಟೀಲರು ರಾಜಕೀಯ ಕ್ಷೇತ್ರಕ್ಕೆ ಧುಮುಕಿದರು.1956ರಲ್ಲಿ ವಿಜಾಪುರ ಜಿಲ್ಲಾ ಕೇಂದ್ರ ಮಧ್ಯವರ್ತಿ ಬ್ಯಾಂಕ್ ಸಂಚಾಲಕ ಮಂಡಳಿ ನಿರ್ದೇಶಕರಾಗಿ ಸಾರ್ವಜನಿಕ ಸೇವೆಗೆ ಪಾದಾರ್ಪಣೆ ಮಾಡಿದರು. ಆಂದೋಲನ ಮೂಲಕ ಖಾದಿಯನ್ನು ಪ್ರತಿ ಹಳ್ಳಿಗೂ ಕೊಂಡೊಯ್ದು ಜನಪ್ರಿಯಗೊಳಿಸಿದರು.
ಶಿರಸಂಗಿ ಟ್ರಸ್ಟ್ ಬೆಳೆಸಿ ಉತ್ತರ ಕರ್ನಾಟಕದ ಬಡ ಲಿಂಗಾಯತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿದರು.1962ರ ಸಾರ್ವತ್ರಿಕ ಚುನಾವಣೆಯಲ್ಲಿ ತಿಕೋಟಾ ಕ್ಷೇತ್ರದಿಂದ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿ, ಸತತ6ಬಾರಿ ಶಾಸಕರಾದರು.1967ರಲ್ಲಿ ರಾಜ್ಯ ಪೌರಾಡಳಿತ ಸಚಿವರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ಪ್ರೀತಿ ಪ್ರಶ್ನಾತೀತ. ವಿಜಾಪುರ ಬಿಎಲ್‌ಡಿಇ ಸಂಸ್ಥೆ ಸ್ಥಾಪನೆಗೊಂಡು 4 ದಶಕಗಳೇ ಕಳೆದಿದ್ದವು. ಬಂಥನಾಳ ಶಿವಯೋಗಿಗಳು, ಡಾ. -.ಗು.ಹಳಕಟ್ಟಿ ಮುಂತಾದ ಹಿರಿಯರು ಬಿ.ಎಂ.ಪಾಟೀಲರಿಗೆ ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನ ವಹಿಸಿಕೊಟ್ಟರು.
1965ದಿಂದ1990ರವರೆಗೆ25ವರ್ಷಗಳ ಕಾಲ ಸಂಸ್ಥೆಯ ಆಧಾರ ಸ್ಥಂಭವಾಗಿ ನಿಂತರು.೩೦ಕ್ಕೂ ಹೆಚ್ಚು ಶಾಲಾ-ಕಾಲೇಜುಗಳನ್ನು ಅವರ  ಅವಧಿ ಯಲ್ಲಿಯೇ ಪ್ರಾರಂಭಿಸಲಾಯಿತು. ಬಿಎಲ್‌ಡಿಇ ವೈದ್ಯಕೀಯ ಕಾಲೇಜ್ (ಪ್ರಸ್ತುತ ಸ್ವತಂತ್ರ ವೈದ್ಯಕೀಯ ವಿಶ್ವವಿದ್ಯಾಲಯವಾಗಿದೆ). ಸ್ಥಾಪನೆಗೆ ಅವರು ಪಟ್ಟ ಶ್ರಮ ಒಂದು ಯಶೋಗಾಥೆಯಾಗಿದೆ.