ಪ್ರಪಂಚವನ್ನೇ ಭಾರಿ ತಲ್ಲಣಗೊಳಿಸುತ್ತಿರುವ ಪೆಗಾಸಿಸ್
ಅಭಿಪ್ರಾಯ
ಕೀರ್ತನಾ ವಿ.ಭಟ್
ಆಧುನಿಕ ಜಗತ್ತು ಎಷ್ಟರಮಟ್ಟಿಗೆ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದೆ ಎಂದರೆ ತಂತ್ರಜ್ಞಾನವಿಲ್ಲದೇ ಬದುಕಲು ಸಾಧ್ಯವೇ ಇಲ್ಲ ಎನ್ನುವ ಹಂತ ತಲುಪಿದ್ದೇವೆ. ಮನುಷ್ಯ ತನ್ನ ದಿನನಿತ್ಯದ ಕೆಲಸವನ್ನು ಮೊಬೈಲ್, ಲಾಪ್‌ಟಾಪ್ ಮುಂತಾದ ಸಾಧನಗಳಿಂದಲೇ ಪ್ರಾರಂಭಿಸಿ, ಅದರಿಂದಲೇ ದಿನ ಮುಗಿಸುವಲ್ಲಿಯವರೆಗೂ ತಂತ್ರಜ್ಞಾನ ಮನುಷ್ಯನ ಜೀವನವನ್ನು ಆವರಿಸಿಕೊಂಡಿದೆ.
ತಂತ್ರಜ್ಞಾನಕ್ಕೆ ನಾವೇ ಪರವಶರಾಗಿದ್ದೇವೆಯೋ ಅಥವಾ ತಂತ್ರಜ್ಞಾನವೇ ನಮ್ಮನ್ನು ಪರವಶ ಮಾಡಿ ಕೊಂಡಿ ದೆಯೋ ಎಂದು ತಿಳಿಯುವುದು ಕಷ್ಟ. ಆದರೆ ತಂತ್ರಜ್ಞಾನ ಬೆಳೆದಂತೆ ಅದರಿಂದ ಆಗುವ ದುಷ್ಪರಿಣಾಮಗಳು ಕೂಡ ಹೆಚ್ಚು. ಜನಸಾಮನ್ಯರ ಗೌಪ್ಯತೆಗೆ ಕನ್ನ ಹಾಕುವಂತ ಗೂಡಾಚಾರಿಕಾ ತಂತ್ರಜ್ಞಾನ ದಿನೇದಿನೆ ಹೆಚ್ಚುತ್ತಿದ್ದು, ಪ್ರತಿದಿನ ಒಂದಲ್ಲ ಒಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ.
ಅದರಲ್ಲಿ ಇತ್ತೀಚೆಗೆ ಪ್ರಪಂಚದಾದ್ಯಂತ ತಲ್ಲಣ ಹುಟ್ಟಿಸಿರುವ ಪಿಗಾಸಿಸ್ ಸ್ಪೈವೇರ್ ಕೂಡ ಒಂದು. ಪಿಗಾಸಿಸ್ ಕಂಪ್ಯೂಟರ್ ಮತ್ತು ಮೊಬೈಲ್ ಸಾಧನವನ್ನು ಪ್ರವೇಶಿಸಲು ವಿನ್ಯಾಸಗೊಳಿಸಿದ ಒಂದು ಹ್ಯಾಕಿಂಗ್ ಸಾ-ವೇರ್. ಇದನ್ನು ಇಸ್ರೇಲ್ ಕಂಪನಿಯ ಎನ್‌ಎಸ್‌ಓ ಗುಂಪು ಅಭಿವೃದ್ಧಿಪಡಿಸಿದ್ದು, ಈ ಸಾಫ್ಟ್ವೇರ್ ನಿಮಗೆ ತಿಳಿಯದ ಹಾಗೆ ನಿಮ್ಮ ಮೊಬೈಲ್‌ನ್ನು ಪ್ರವೇಶಿಸಿ ಅದರಲ್ಲಿರುವ ಎಲ್ಲಾ ಡೇಟಾವನ್ನು ಸಂಗ್ರಹಿಸಿ, ಮೂರನೇ ವ್ಯಕ್ತಿಗೆ ರವಾನಿಸುವ ಕೆಲಸ ಮಾಡುತ್ತದೆ.
ಇದರೊಂದಿಗೆ ನಿಮ್ಮ ಮೊಬೈಲ್ ಕ್ಯಾಮರಾ ಉಪಯೋಗಿಸಿಕೊಂಡು ನಿಮಗೆ ತಿಳಿಯದ ಹಾಗೇ ವಿಡಿಯೊ ರೆರ್ಕಾಡ್ ಮಾಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಅಲ್ಲದೆ ಕಂಪ್ಯೂಟರ್ ಮತ್ತು ಮೊಬೈಲ್ ಡಿವೈಸ್‌ನಲ್ಲಿರುವ ಮೆಸ್ಸೇಜ್‌ ಗಳನ್ನು ನಕಲು ಮಾಡಿ ಬೇರೊಬ್ಬರಿಗೆ ಕಳುಹಿಸುತ್ತದೆ.
ಹೇಗೆ ಹಾನಿಗೊಳಿಸುತ್ತದೆ?:ಪ್ರಮುಖವಾಗಿ ಆಂಡ್ರ್ಯಾಯ್ಡ್ ಮತ್ತು ಐಫೋನ್‌ನಲ್ಲಿ ಡೌನ್‌ಲೋಡ್ ಆಗುವ ಅಪ್ಲೀಕೇಶನ್‌ಗಳನ್ನು ಹಾನಿಗೊಳಿಸುತ್ತದೆ. ಫೋಟೋ, ಮ್ಯೂಸಿಕ್, ಸಂದೇಶ ಮುಂತಾದ ಅಪ್ಲೀಕೇಶನ್‌ಗಳಿಗೆ ಹಾನಿಮಾಡುವ ಮೂಲಕ ನಿಮ್ಮ ಫೋನ್ ನಿಮ್ಮ ಮೊಬೈಲ್‌ನ ಕಾರ್ಯಕ್ಷಮತೆ ಕುಂಠಿತವಾಗುವಂತೆ ಮಾಡುತ್ತದೆ. ಮೊಬೈಲ್ ಹ್ಯಾಂಗ್ ಆಗುವುದು ಇದ್ದಕ್ಕಿದ್ದಂತೆ ಆಫ್ ಆಗುವ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೊಬೈಲ್ ಬ್ಯಾಟರಿಗಳ ಜೀವಿತಾವಧಿ ಕಡಿಮೆಯಾಗುವಂತೆ ಮಾಡುವುದು ಕೂಡ ಪಿಗಾಸಿಸ್ ಸ್ಪೈವೇರ್‌ನ ಒಂದು ಲಕ್ಷಣ.
ಇಸ್ರೇಲ್‌ನ ಎನ್‌ಎಸ್‌ಒ ಗುಂಪು ಈ ಸ್ಪೈವೇರ್ ಅನ್ನು ಅಭಿವೃದ್ಧಿ ಪಡಿಸಿದ್ದು ಈ ಕಂಪನಿಯನ್ನು ಕ್ಯೂ ಸೈಬರ್ ತಂತ್ರಜ್ಞಾನ ಎಂದು ಕೂಡ ಕರೆಯಾಲಾಗುತ್ತದೆ. ಭಯೋತ್ಪಾದನಾ ಸಂಘಟಣೆಗಳ ಚಟುವಟಿಕೆಗಳನ್ನು ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆ ಸಮರ್ಥನೆ ನೀಡಿದೆ. ಆದರೆ ಇದೀಗ ಸರ್ವಾಧಿಕಾರ ಆಡಳಿತ ದೇಶಗಳು ಇದನ್ನು ಹೆಚ್ಚು ಉಪಯೋಗಿಸುತ್ತಿದ್ದು, ತಮ್ಮ ಎದುರಾಳಿ ಮತ್ತು ಪತ್ರಕರ್ತರ ಮೇಲೆ ನಿಗಾ ಇಡುವ ಸಲುವಾಗಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
ಆದರೆ ಇತ್ತೀಚೆಗೆ ಮಾನವ ಹಕ್ಕುಗಳ ಗುಂಪು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಬೇರೆ ಬೇರೆ ದೇಶಗಳ ರಾಜಕೀಯ ವಿರೋಧಿಗಳು, ಮಾನವ ಹಕ್ಕು ಹೋರಾಟ ಗಾರರು ಮತ್ತು ಪತ್ರಕರ್ತರ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಪಿಗಾಸಿಸ್ ಸ್ಪೈವೇರ್‌ನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ವರದಿ ಮಾಡಿದೆ.
ಪತ್ತೆಹಚ್ಚಲು ಸಾಧ್ಯವೇ?:ಮೊಬೈಲ್ ವೇರಿಫಿಕೇಶನ್ ಟೂಲ್‌ಕಿಟ್ (ಎಂವಿಟಿ) ಮೂಲಕ ಪಿಗಾಸಿಸ್ ಸ್ಪೈವೇರ್ ಪತ್ತೆ ಹಚ್ಚಲು ಸಾಧ್ಯ. ಎಂವಿಟಿ ನಿಮಗೆ ತಿಳಿಯದೆ ನಿಮ್ಮ ಮೊಬೈಲ್‌ನಲ್ಲಿ ಪಿಗಾಸಿಸ್ ಇನ್ ಸ್ಟಾಲ್ ಆಗಿದೆಯಾ ಎಂದು ಪತ್ತೆಹಚ್ಚುತ್ತದೆ. ಈ ಟೂಲ್‌ಕಿಟ್‌ನ್ನು ಕೇವಲ ಕಂಪ್ಯೂಟರ್ ಸಾಧನಗಳಲ್ಲಿ ಮಾತ್ರವಲ್ಲದೇ ಐಓಎಸ್ ಮತ್ತು ಆಂಡ್ರ್ಯಾಯ್ಡ್‌ನಲ್ಲೂ ಉಪಯೋಗಿಸಲು ಸಾಧ್ಯವಾಗುವುದರಿಂದ ಪಿಗಾಸಿಸ್ ಸ್ಪೈವೇರ್‌ನ್ನು ಪತ್ತೆ ಹಚ್ಚಲು ಅನುಕೂಲವಾಗಿದೆ.
ನಾವು ಉಪಯೋಗಿಸುವ ಅದೆಷ್ಟೋ ತಂತ್ರಜ್ಞಾನಗಳು ಮಾಹಿತಿಯನ್ನು ನಮಗೆ ತಿಳಿಯದಂತೆ ಪಡೆದುಕೊಳ್ಳುತ್ತದೆ. ಆದರೆ ಪಿಗಾಸಿಸ್‌ನ ಅನುಕೂಲ ಮತ್ತು ಅನಾನುಕೂಲದ ಕುರಿತ ಹಲವಾರು ಸಂಗತಿಗಳು ಅಗೋಚರವಾಗಿದೆ. ಇದರೊಂದಿಗೆ ದೇಶದ ಹೆಸರು ಕೇಳಿಬರುತ್ತಿರುವುದು ಇನ್ನು ಯಾವ ಬದಲಾವಣೆಗೆ ಕಾರಣವಾಗುತ್ತದೆ ಎನ್ನುವುದನ್ನು ಉಹಿಸಲು ಅಸಾಧ್ಯ.