ಇಂಡಿಯಾ ಸ್ಟೀಲ್‌ ಫ್ರೇಮ್‌ಗೆ ಕೃತಜ್ಞತೆ ಹೇಳೋಣ
ವಿರಾಜಯಾನ
ವಿರಾಜ್ ಕೆ. ಅಣಜಿ
@.
ಕಳೆದ ಶನಿವಾರ ಪಿಎಂಒ ಚಾನೆಲ್‌ನಲ್ಲಿ ನೇರ ಪ್ರಸಾರ ಕಾರ್ಯಕ್ರಮ ನೋಡುತ್ತಿದ್ದೆ. ಹೈದರಾಬಾದ್‌ನಲ್ಲಿರುವ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯ2018ಮತ್ತು19ರ ಬ್ಯಾಚ್‌ನ ಐಪಿಎಸ್ ಅಧಿಕಾರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ಮಾಡಿದರು. ಆಸಕ್ತಿಯಿದ್ದವರಿಗೆ ಬಿಟ್ಟ ಕಣ್ಣು ಬಿಡದಂತೆ ಕುತೂಹಲ, ರೋಮಾಂಚನ ಹುಟ್ಟಿಸಬಲ್ಲ ಸಂವಾದವದು.
ಸರಿಯಾಗಿ ಒಂದು ಗಂಟೆ, ಮೂರು ನಿಮಿಷದ ಕಾರ್ಯಕ್ರಮ, ಎಲ್ಲವೂ ಅಚ್ಚುಕಟ್ಟು. ಸೆಕೆಂಡ್ ಟು ಸೆಕೆಂಡ್ ಕಾರ್ಯಕ್ರಮವನ್ನು ಪ್ಲ್ಯಾನ್ ಮಾಡಿ ಅದರಂತೆಯೇ ನಿರ್ವಹಣೆ ಮಾಡಲಾಗಿತ್ತು. ಖಾಕಿ ತೊಟ್ಟ ಹೊಸ ಉತ್ಸಾಹದಲ್ಲಿದ್ದ ಯುವ ಪಡೆಯ ಜತೆ ಪ್ರಧಾನಿ ಅತ್ಯಂತ ಆಪ್ತವಾಗಿ ಮಾತನಾಡಿದರು. ಅನುಜ್ ಪಲಿವಾಲ್ಎಂಬ ಪ್ರಶಿಕ್ಷಣಾರ್ಥಿಯದ್ದು ಮೂಲ ಹರಿಯಾಣ. ಓದಿದ್ದು ಉತ್ತರಾಖಂಡ್‌ನಲ್ಲಿರುವ ಏಷಿಯಾದ ಹಳೆಯ ತಾಂತ್ರಿಕ ವಿದ್ಯಾ ಸಂಸ್ಥೆ ಎಂದು ಹೆಸರಾದ ಐಐಟಿಯಲ್ಲಿ. ಅಭ್ಯಾಸ ಮಾಡಿದ ವಿಷಯ ಬಯೋ-ಟೆಕ್ನಾಲಜಿ. ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಐಚ್ಛಿಕ ವಿಷಯ ಸಮಾಜಶಾಸ್ತ್ರ, ಹವ್ಯಾಸ ಇರುವುದು ಸಂಗೀತದ ಬಗ್ಗೆ.
ಈಗ ಐಪಿಎಸ್ ಸೇವೆಯಲ್ಲಿ ಕೇಡರ್ ಸಿಕ್ಕಿರುವುದು ಕೇರಳ ರಾಜ್ಯ! ಇಷ್ಟೊಂದು ವಿಧ ಮತ್ತು ಭಿನ್ನತೆ ಇರುವಾಗ ನೀವು ಹೇಗೆ ಉತ್ಸಾಹದಿಂದ ಕೆಲಸ ಮಾಡಬಲ್ಲಿರಿ ಎಂದು ಪ್ರಧಾನಿ ಸಖತ್ತಾದ ಪ್ರಶ್ನೆ ಕೇಳಿದರು. ಇನ್ನು ಕರ್ನಾಟಕದಿಂದ ಆಯ್ಕೆಯಾಗಿರುವ ರೋಹನ್ ಜಗದೀಶ್‌ಗೆ ನಿಮಗೆ ಈಜಿನಲ್ಲಿ ಹೆಚ್ಚು ಆಸಕ್ತಿ ಎಂಬುದರ ಬಗ್ಗೆ ಕೇಳಿದ್ದೇನೆ, ಒಬ್ಬ ಪೊಲೀಸ್ ಅಧಿಕಾರಿಗೆ ಫಿಟ್ನೆಸ್ ಎಂಬುದು ಹೇಗೆ ಮತ್ತು ಎಷ್ಟು ಮುಖ್ಯವಾಗುತ್ತದೆ. ನಿಮ್ಮ ತಂದೆ ಪಿಎಸ್‌ಐ ಕೆಲಸಕ್ಕೆ ಸೇರಿ ಕೊನೆಗೆ ಎಸ್‌ಪಿ ಆಗಿ ನಿವೃತ್ತರಾಗಿದ್ದಾರೆ ಎಂದಿದ್ದೀರಿ. ಹಾಗಿದ್ದರೆ, ಈಗಿನ ಮತ್ತು ಹಿಂದಿನ ತರಬೇತಿಗೂ ಏನೆಲ್ಲ ಬದಲಾವಣೆ ಆಗಿದೆ ಎಂಬುದನ್ನು ನಿಮಗಾದ ಅನುಭವ ಮತ್ತು ನಿಮ್ಮ ತಂದೆಯಿಂದ ಕೇಳಿದ್ದರ ಆಧಾರದಲ್ಲಿ ಹೇಳಿ ಎಂದು ಪಿಎಂ ಪ್ರಶ್ನಿಸಿದರು.
ನಿತಿನ್‌ರಾಜ್ ಎಂಬ ಕಾಸರಗೋಡಿನ ಪ್ರತಿಕ್ಷಣಾರ್ಥಿ ಜತಗೆ ಅವರ ಹವ್ಯಾಸವಾದ ಫೋಟೋಗ್ರಫಿ ಬಗ್ಗೆಯೂ ಪ್ರಧಾನಿ ಮಾತನಾಡಿದರು. ವೃತ್ತಿಯಲ್ಲಿ ದಂತ ವೈದ್ಯೆಯಾದ ಪಂಜಾಬಿನ ನವಜೋತ್ ಸಿಮಿ ಈಗ ಬಿಹಾರ ಕೇಡರ್‌ನ ಐಪಿಎಸ್‌ನಲ್ಲಿ, ಇನ್ನು ಐಐಟಿ ಖರಗ್‌ಪುರದ ವಿದ್ಯಾರ್ಥಿ ಕೊಮ್ಮಿ ಪ್ರತಾಪ್ ಓದಿರುವುದು ಫಿನಾನ್ಷಿಯಲ್ ಇಂಜಿನಿಯರಿಂಗ್. ಈಗ ತವರು ಆಂಧ್ರದಲ್ಲಿ ಐಪಿಎಸ್ ಅಽಕಾರಿಯಾಗಿದ್ದು, ಇವರ ಜ್ಞಾನವನ್ನು ಖಾಕಿ ತೊಟ್ಟು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಪಿಎಂ ಚರ್ಚೆ ನಡೆಸಿದರು.
ಈ ಸಂವಾದದ ಇನ್ನೊಂದು ಪ್ರಮುಖ ಆಕರ್ಷಣೆ ಎನಿಸಿದ್ದು ಹರಿಯಾಣಾದ ರಂಜೀತಾ ಶರ್ಮಾ. ಇವರು, ಐಪಿಎಸ್ ಅಸೋಸಿಯೇಷನ್ ಇತಿಹಾಸದಲ್ಲಿಯೇ    ಪ್ರಶಸ್ತಿ, ಗೌರವಕ್ಕೆ ಪಾತ್ರರಾದ ಮೊದಲ ಮಹಿಳೆ.ಸ್ವಾರ್ಡ್‌ಆಫ್ ಆನರ್ ಎಂದರೆ ಐಪಿಎಸ್‌ನ ಹೊರಾಂಗಣ ತರಬೇತಿಯಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಸಲ್ಲುವ ಪ್ರಶಸ್ತಿ. ಪುರುಷರು ದೈಹಿಕವಾಗಿ ಗಟ್ಟಿಯಾದ ಕಾರಣ, ಸಹಜವಾಗಿ ಪ್ರತಿ ಬಾರಿ ಅವರಿಗೇ ಈ ಪ್ರಶಸ್ತಿ ಲಭಿಸುತ್ತಿತ್ತು. ಆದರೆ, ಈ ಬಾರಿಯ ಒಟ್ಟು೫೦ವಿಭಾಗಗಳಲ್ಲಿ ಬರೋಬ್ಬರಿ ಎಂಟರಲ್ಲಿ ಮೊದಲ ಸ್ಥಾನ ಪಡೆದ ರಂಜಿತಾ ಆನರ್ ತಮ್ಮದಾಗಿಸಿಕೊಂಡಿದರು.
ಈ ಮೂಲಕ ಮಹಿಳಾ ಶಕ್ತಿಯನ್ನು ಖಾಕಿಯ ಖದರ್ ನಲ್ಲೂ ತೋರಬಲ್ಲೆವು ಎಂಬುದನ್ನು ತೋರಿಸಿದ್ದರು. ರಂಜಿತಾರ ಈ ಸಾಧನೆಯನ್ನು ಪ್ರಧಾನಿ ಮುಕ್ತ ಕಂಠ ದಿಂದ ಶ್ಲಾಘಿಸಿದರು. ಮಾಸ್ ಕಮ್ಯುನಿಕೇಷನ್ ವಿದ್ಯಾರ್ಥಿಯಾದ ನೀವು ಮೊದಲಿನಿಂದಲೂ ಪಾಠ ಮಾಡುವುದರಲ್ಲಿ ಆಸಕ್ತಿ ಹೊಂದಿದ್ದೀರಿ. ಯೋಗ ಅಭ್ಯಾಸದಲ್ಲಿ ನಿಮ್ಮದೇ ಆದ ಪರಿಣಿತಿ ಸಾಧಿಸಿದ್ದೀರಿ. ನಿಮ್ಮ ಐಪಿಎಸ್ ಸೇವೆ ಜತೆಜತೆಗೆ ನಿಮಗೆ ಸಾಧ್ಯವಾದಾಗಲೆಲ್ಲ ಒಂದು ಗಂಟೆ ಮಕ್ಕಳಿಗೆ ಪಾಠ ಹೇಳಿ ಬನ್ನಿ ಎಂದು ಆಪ್ತ ಸಲಹೆಯನ್ನೂ ಸಂವಾದ ಮಾಡುತ್ತ ಪ್ರಧಾನಿ ಕೊಟ್ಟರು.
ನಂತರ ತಮ್ಮ ನುಡಿಗಳಲ್ಲಿ ಹಲವು ವಿಚಾರಗಳನ್ನು ಪ್ರಧಾನಿ ಪ್ರಸ್ತಾಪಿಸಿದರು. ಭಾರತದ ಸ್ವರಾಜ್ಯಕ್ಕಾಗಿ ಕೋಟ್ಯಂತರ ಮಂದಿ ಹೋರಾಡಿದ್ದಾರೆ. ಅವರ ಬಲಿದಾನ ವ್ಯರ್ಥವಾಗದಂತೆ ನಮ್ಮ ದೇಶಸು-ರಾಜ್ಯವಾಗುವಂತೆ ಹೋರಾಡೋಣ. ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂಬ ಧ್ಯೇಯದಿಂದ ಕೆಲಸ ಮಾಡಿ. ಸಾರ್ವಜನಿಕರೊಂದಿಗೆ ಸ್ನೇಹದಿಂದ ಇರಿ, ನಿಮ್ಮ ಖಾಕಿಯ ಗೌರವವನ್ನು ನೀವೇ ಎತ್ತಿ ಹಿಡಿಯಿರಿ. ಪರಿಣತರನ್ನೂ ಮಣ್ಣು ಮುಕ್ಕಿಸಿ ತಾಂತ್ರಿಕವಾಗಿ ಎಷ್ಟೊಂದು ಮೋಸಗಳು ನಡೆಯುತ್ತಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇದ್ದು, ಜನ ಸಾಮಾನ್ಯರಿಗೆ ಆಗುವಮೋತಡೆಗಟ್ಟಿ.
ಮೊದಲೆಲ್ಲ ಹಿಂಜರಿಯುತ್ತಿದ್ದ ಮಹಿಳೆಯರು ಈಗ ಹೆಚ್ಚಿನ ಸಂಖ್ಯೆಯ ಖಾಕಿ ಹಾಕಲು, ಸೇನೆಗೆ ಸೇರಲು ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ದೇಶದ75ನೇ ಸ್ವಾತಂತ್ರ್ಯೋ ತ್ಸವದ ಹೊತ್ತಲಿ ಎಂದು ಸಂತಸದ ಸಂಗತಿ ಎಂದೆಲ್ಲ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಕಾರ್ಯಕ್ರಮವು ಪ್ರತಿ ವರ್ಷ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದೆ. ಐಪಿಎಸ್ ತರಬೇತಿ ಹೈದರಾಬಾದ್‌ನಲ್ಲಿ ನಡೆಯುವಂತೆ, ಐಎಎಸ್ ತರಬೇತಿ ಹಿಮಾಚಲ ಪ್ರದೇಶದ ಮಸೂರಿಯಲ್ಲಿ ನಡೆಯುತ್ತದೆ. ಆಫೀಸರ‍್ಸ್ ಟ್ರೈನಿಂಗ್ ಮುಗಿಸಿದ ಅಧಿಕಾರಿಗಳ ಜತೆ ದೇಶದ ಪ್ರಧಾನಿ ಸಂವಾದ ನಡೆಸಿ, ಶುಭಾಷಯ ಕೋರುತ್ತಾರೆ.
ದೇಶದ ಪ್ರಗತಿ, ಶಾಂತಿ ಮತ್ತು ರಕ್ಷಣೆಯಲ್ಲಿ ಈ ಸೇವೆಯ ಹೊಣೆಗಾರಿಕೆ ಏನು ಎಂಬುದರ ಬಗ್ಗೆ ಚಿಂತನೆ ಹಂಚಿಕೊಳ್ಳುತ್ತಾರೆ. ನಂತರ, ರಾಷ್ಟ್ರಪತಿ ಭವನ ದಲ್ಲಿ ಈ ನೂತನ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ನೇಮಕ ಪ್ರಕ್ರಿಯೆ ಅಧಿಕೃತಗೊಳ್ಳುತ್ತದೆ. ನಂತರವೇ, ತಾವು ಆಯ್ಕೆಯಾದ ರಾಜ್ಯಗಳಿಗೆ (ಕೇಡರ್) ಈ ಅಧಿಕಾರಿ ಗಳು ಕರ್ತವ್ಯಕ್ಕೆ ನಿಯೋಜನೆಗೊಳ್ಳುತ್ತಾರೆ. ಇಷ್ಟೆಲ್ಲವೂ ಒಬ್ಬ ಸಾಮಾನ್ಯರಾಗಿ ನಮಗೆ ಸರಕಾರದ ಮಟ್ಟದಲ್ಲಿ ನಡೆಯುವ ಒಂದು ಸಹಜ ಪ್ರಕ್ರಿಯೆ ಎನಿಸ ಬಹುದು. ಆದರೆ, ನಾಗರಿಕ ಸೇವಾ ಅಧಿಕಾರಿಯಾಗಲು ಒಬ್ಬ ವ್ಯಕ್ತಿ ಅಣಿಯಾಗುವ ಕತೆಯೇ ರೋಚಕ.
ನಮ್ಮ ದೇಶದಲ್ಲಿ ಅಪ್ಪ ಪ್ರಧಾನಿ ಆದರೆ ಮಗ ಪ್ರಧಾನಿ ಆಗಲು, ತಂದೆ ಸಿಎಂ ಆಗಿದ್ದರೆ ಮಗ ಸಿಎಂ ಆಗಲು, ಕೊನೆ ಪಕ್ಷ ಅಪ್ಪ ಶಾಸಕ, ರಾಜಕಾರಣಿ ಆಗಿದ್ದರೆ ಮಗನೂ ಅದೇ ರೀತಿ ಆಗಲು ಕಷ್ಟ ಪಡಬೇಕಿಲ್ಲ. ಮಕ್ಕಳು ತಾವೇನಾಗಬೇಕು ಎಂದುಕೊಳ್ಳುವ ಮೊದಲೇ ಅಪ್ಪನ ಹಿಂಬಾಲಕರೇ ಉತ್ತರಾಧೀಕಾರಿಗೆ ಜೈ ಎಂದು ಕೂಗಿ ಹೊತ್ತು ಮೆರೆಸಿ ಬಿಡುತ್ತಾರೆ. ಅದೇ ರೀತಿ, ನಟರ ಮಕ್ಕಳು ನಟ, ವೈದ್ಯರ ಮಕ್ಕಳು ವೈದ್ಯ, ಎಂಜಿನಿಯರ್ ಮಕ್ಕಳು ಎಂಜಿನಿಯರ್, ಟೀಚರ್ ಮಗ ಟೀಚರ್ ಆಗಿಬಿಡುತ್ತಾರೆ. ಆದರೆ, ಒಬ್ಬ ಐಎಎಸ್, ಐಪಿಎಸ್ ಅಥವಾ ಇನ್ಯಾವುದೇ ಮಗ/ ಮಗಳಾಗಿದ್ದವರು, ಗೂಟದ ಕಾರನ್ನು ತಾವೂ ಸುಲಭವಾಗಿ ಪಡೆದು ಬಿಡುತ್ತೇವೆ ಎಂದು ಅಂದುಕೊಳ್ಳಲು ಸಾಧ್ಯವೇ ಇಲ್ಲ.
ಏಕೆಂದರೆ, ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಹೆಸರಾಗಿರುವ ನಾಗರೀಕ ಸೇವಾ ಪರೀಕ್ಷೆಯಲ್ಲಿ ಅಭ್ಯರ್ಥಿ ಯಾರು ಎಂಬುದಕ್ಕೆ ಎಳ್ಳಷ್ಟೂ ಮಹತ್ವವಿಲ್ಲ. ನೀವು ಯಾರಾದರೇನು, ನಾವು ಕೇಳುವ ಅರ್ಹತೆ ಹೊಂದಿದ್ದರೆ ಮಾತ್ರ ಅವಕಾಶ ಇಲ್ಲದಿದ್ದರೆ ಗುಡ್ ಬೈ ಎನ್ನುತ್ತದೆ ಯುಪಿಎಸ್‌ಸಿಯ ನಿಮಯಗಳು. ಈ ಪರೀಕ್ಷೆ ಇಷ್ಟು ಕಠಿಣವೇಕೆ ಎಂಬುದಕ್ಕೆ ಉತ್ತರ ಹುಡುಕಿ ಹೊರಟಾಗ, ನನಗಲ್ಲಿ ತಿಳಿದ ಹಲವು ವಿಷಯಗಳು ಚಳಿಯಲ್ಲೂ ನಡುಗುವಂತೆ ಮಾಡಿದ್ದವು. ಇಡೀ ಪರೀಕ್ಷೆಯ ಸೈಕಲ್ ಇರುವುದು ಬರೋಬ್ಬರಿ ಬೇಕಾದದ್ದು ಪೂರ್ಣ ಒಂದು ವರ್ಷ. ತಯಾರಿ ಎಷ್ಟ ಕಾಲ ಮಾಡುತ್ತಾರೆ ಅದು ಅಭ್ಯರ್ಥಿಗೇ ಬಿಟ್ಟ ವಿಚಾರ. ಉದಾಹರಣೆಗೆ, ಇದೇ ಆಗಸ್ಟ್‌ನಲ್ಲಿ ಪ್ರಿಲಿಮಿನರಿ ಪರೀಕ್ಷೆ ನಡೆದರೆ, ಒಂದೂವರೆ ತಿಂಗಳ ನಂತರ ರಿಸಲ್ಟ್.
ಅಲ್ಲಿ ಪಾಸಾಗಿದ್ದರೆ ನವೆಂಬರ್ ವೇಳೆಗೆ ಮೇನ್ಸ್ ಪರೀಕ್ಷೆ. ಅಲ್ಲಿಯೂ ಎಲ್ಲವೂ ಚೆನ್ನಾಗಿ ಆಗಿ ಕೊನೆಯ ಹಂತಕ್ಕೆ ಆಯ್ಕೆಯಾದರೆ, ಅದು ಮಾರ್ಚ್, ಏಪ್ರಿಲ್‌ನಲ್ಲಿದೆಹಲಿಯ ಯುಪಿಎಸ್‌ಸಿ ಭವನದಲ್ಲಿ ಪರ್ಸನಾಲಿಟಿ ಟೆಸ್ಟ್ ಇರುತ್ತದೆ. ಇದರ ಫಲಿತಾಂಶ ಮೇ ತಿಂಗಳಲ್ಲಿ ಬರುತ್ತದೆ. ಅಂತಿಮ ಪಟ್ಟಿಯಲ್ಲಿ ಹೆಸರು ಬಂದರೆಬಚಾವ್, ಇಲ್ಲದಿದ್ದರೆ ಮತ್ತೆ ಮೊದಲಿನಿಂದ ಅಂದರೆ ಮತ್ತೆ ಪ್ರಿಲಿಮ್ಸ್ ಪರೀಕ್ಷೆಯಿಂದಲೇ ಆರಂಭಿಸಬೇಕು. ಅಂದರೆ, ತಾವು ಎಷ್ಟೇ ಚೆನ್ನಾಗಿ ಪರೀಕ್ಷೆ ಎದುರಿ ಸಿದ್ದರೂ, ಫೆಬ್ರವರಿಯಲ್ಲೇ ಹೊಸದೊಂದು ಪ್ರಿಲಿಮ್ಸ್‌ಗೆ ಫೀಸ್ ಕಟ್ಟಿದ್ದರೆ ಮಾತ್ರವೇ ಪರೀಕ್ಷೆ ಬರೆಯಲು ಅವಕಾಶ. ಇದು ಈ ಮ್ಯಾರಥಾನ್ ಪರೀಕ್ಷೆಯ ಒಂದು ಝಲಕ್ ಅಷ್ಟೇ.
ಪ್ರತಿ ವರ್ಷ, ಕನಿಷ್ಠ ಎಂಟು ಲಕ್ಷ ಜನರು ಪ್ರಿಲಿಮ್ಸ್ ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ. ಇದರಲ್ಲಿ ಐದು ಲಕ್ಷ ಜನರಾದರೂ ಪರೀಕ್ಷೆ ಬರೆಯುತ್ತಾರೆ. ಇದರಲ್ಲಿಮೇನ್ಸ್ ಪರೀಕ್ಷೆಗೆ ಆಯ್ಕೆ ಆಗುವವರ ಸಂಖ್ಯೆ ಬರೀ ಹತ್ತು ಸಾವಿರದ ಆಸುಪಾಸು. ಇದರಲ್ಲಿ ಗರಿಷ್ಠ ಎಂದರೆ ಎರಡು ಸಾವಿರ ಜನರು ಇಂಟರ್‌ವ್ಯೂಗೆ ಹಾಜರಾಗಿಒಂದು ಸಾವಿರ ಅಭ್ಯರ್ಥಿಗಳು ಅಂತಿಮ ಲಿಸ್ಟ್‌ನಲ್ಲಿ ಆಯ್ಕೆ ಆಗಬಹದು. ಲಿಸ್ಟ್‌ನಲ್ಲಿ ಬಂದರೆ, ಐಎಎಸ್, ಐಪಿಎಸ್, ಐಎಫ್ಎಸ್ ಸಿಕ್ಕೇ ಬಿಟ್ಟಿತು ಎಂದರ್ಥವಲ್ಲ.ಇದರಲ್ಲೂ ಮೂರು ವಿಭಾಗಗಳಿದ್ದು, ಒಟ್ಟು24ವಿವಿಧ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆದಿರುತ್ತದೆ.
ಎಷ್ಟೋ ಅಭ್ಯರ್ಥಿಗಳು ಲಿಸ್ಟ್‌ನಲ್ಲಿ ಬಂದರೂ ತಮಗೆ ಬೇಕಾದ ಹುದ್ದೆ ಪಡೆಯಲು ಮತ್ತೆ ಪರೀಕ್ಷೆ ಬರೆಯುವ ಸಾಹಸಕ್ಕೂ ಕೈ ಹಾಕುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಇದು ರಭಸವಾಗಿ ಹರಿಯುವ ನೀರಿನ ವಿರುದ್ಧ ದಿಕ್ಕಿನಲ್ಲಿ ಈಜುವಂಥ ಸಾಹಸ. ಇಷ್ಟೆಲ್ಲ ಹರಸಾಹಸ ಬೇಡುವ ಈ ಪರೀಕ್ಷಾ ಪ್ರಕ್ರಿಯೆ ಪಾಸ್ ಮಾಡಿ, ಭಾರತದ ಈ ಎಲೈಟ್ ಹುದ್ದೆ ಅಲಂಕರಿಸಲು ಪ್ರತಿವರ್ಷ ಲಕ್ಷಾಂತರ ಯುವಜನರು ಇದರೊಳಗೆ ಧುಮುಕುತ್ತಾರೆ. ದೆಹಲಿಯ ಕರೋಲ್ ಬಾಗ್, ಬೆಂಗಳೂರಿನ ವಿಜಯ ನಗರ, ಚಂದ್ರಾ ಲೇಔಟ್, ಹೈದರಾಬಾದ್‌ನಂಥ ನಗರಗಳಲ್ಲಿ ವಿದ್ಯಾರ್ಥಿಗಳ ದೊಡ್ಡ ದಂಡೇ ಸಿಗುತ್ತದೆ. ಇಷ್ಟಾದರೂ ಮಾರ್ಗದರ್ಶನದ ಕೊರತೆ, ಕಠಿಣ ಪಠ್ಯ, ಸಮಯ ನಿರ್ವಹಣೆ, ಭಯ, ಆರ್ಥಿಕ ಮುಗ್ಗಟ್ಟು, ಸೋಲಿನ ಮೇಲೇಳುವ ಛಾತಿ ಇಲ್ಲದೇ ಎಷ್ಟೋ ಪ್ರತಿಭೆಗಳು ಈ ಕ್ಷೇತ್ರಕ್ಕೆ ಬರುವುದೇ ಇಲ್ಲ ಎಂಬುದು ಕೂಡ ಅಷ್ಟೇ ಸತ್ಯ.
ಇಷ್ಟೆಲ್ಲ ಸವಾಲುಗಳ ನಡುವೆ ಯಾರಾದರೂ ಆ ಸ್ಥಾನಕ್ಕೆ ಏರಿದರೆ, ಅವರು ನಿಜಕ್ಕೂ ಸಾಧಕರೇ ಸರಿ. ಭಾರತ ಸರಕಾರದಲ್ಲೀಗ ಸರಿ ಸುಮಾರು4900ಕ್ಕೂಹೆಚ್ಚು ಐಎಎಸ್, ಇಷ್ಟೇ ಸಂಖ್ಯೆಯ ಐಪಿಎಸ್ ಅಧಿಕಾರಿಗಳಿದ್ದಾರೆ. ಯೋಧರು ದೇಶದ ಗಡಿ ಕಾಯುತ್ತಿದ್ದರೆ, ಇವರೆಲ್ಲ ದೇಶವನ್ನು ಕಟ್ಟುವ ಕಾಯಕದಲ್ಲಿ ನಿರತರಾಗಿದ್ದಾರೆ. ಇದು ಅತಿಶಯೋಕ್ತಿಯೂ ಅಲ್ಲ. ಏಕೆಂದರೆ,1947ರ ಏಪ್ರಿಲ್24ರಂದು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭ್‌ಭಾಯ್ ಅವರು ನಾಗರೀಕ ಸೇವಾ ಅಧಿಕಾರಿಗಳ ಬಗ್ಗೆ ಮಾತನಾಡುವಾಗ, ಈ ಸೇವೆಯು     ರೀತಿ ಎಂದು ಸಂಭೋದಿಸಿದ್ದರು. ಯಾವುದೇ ದೇಶದ ಗಟ್ಟಿ ಯಾಗಿ ನಿಲ್ಲುವುದು ಆ ದೇಶದ ರಾಜಕೀಯ ವ್ಯವಸ್ಥೆಗಿಂತಲೂ ಹೆಚ್ಚಿನದಾಗಿ ಅಲ್ಲಿನ ಅಧಿಕಾರಿಶಾಹಿಗಳ ಮೇಲೆ ಅವಲಂಬಿತವಾಗಿರುತ್ತದೆ.
ಒಂದೊಮ್ಮೆ ಅವುಗಳೇ ಟೊಳ್ಳಾಗಿದ್ದಾರೆ ದೇಶವೇ ಕುಸಿದು ಬಿಡಲಿದೆ. ನಿಮ್ಮ ಮೇಲೆ ದೇಶವನ್ನು ನಿಭಾಯಿಸುವ ಅಂತಹದ್ದೊಂದು ಜವಾಬ್ದಾರಿ ಇದೆ ಎಂದು ವ್ಯಾಖ್ಯಾನಿಸಿದ್ದರು. ಪಟೇಲರ ಈ ಮಾತು ಭಾರತವೂ ಸೇರಿ ವಿಶ್ವದ ಎಲ್ಲ ಸೂಪರ್ ಪವರ್ ರಾಷ್ಟ್ರಗಳಿಗೂ ಅನ್ವಯ ಆಗುತ್ತದೆ. ಜಸ್ಟ್ ಮೂವತ್ತು ವರ್ಷದ ಹಿಂದೆ ಬರಡು ಮರುಭೂಮಿ ಎನಿಸಿದ್ದ ದುಬೈ ವಿಶ್ವಮಾನ್ಯ ನಗರ ಆಗಬೇಕೆಂದು ಅಂದಿನ ಪ್ರಧಾನಿ ಸೈಯದ್ ಅಲ್ ಮೌಕ್ತಮ್ ಮನಸ್ಸು ಮಾಡಿದ್ದರು. ಆದರೆ, ಅದರ ಸಾಕಾರಕ್ಕಾಗಿ ಅಧಿಕಾರಿಗಳು, ಸರಕಾರಿ ನೌಕರರನ್ನು ನಂಬಿದ್ದರು.
ಅದರಲ್ಲಿ ಯಶಸ್ವಿಯೂ ಆದರು. ಭಾರತ ದೇಶವೀಗ75ನೇ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿದೆ. ದೇಶಕ್ಕಾಗಿ ದುಡಿದ ಎಲ್ಲರ ಬಗ್ಗೆಯೂ ಗುಣಗಾನ ಆರಂಭ ವಾಗಿವೆ. ಈ ಹೊತ್ತಲ್ಲಿ, ವೈದ್ಯರು, ಶಿಕ್ಷಕರು, ಎಂಜಿನಿಯರ್‌ಗಳು, ಕ್ರೀಡಾಪಟುಗಳು, ಸಿನಿಮಾ ನಟರು, ಗಾಯಕರು, ದೊಡ್ಡ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಸಾಧಕರನ್ನು ಸ್ಮರಣೆ ಮಾಡಿಕೊಳ್ಳಲಾಗುತ್ತದೆ, ಇದೇನು ತಪ್ಪಲ್ಲ. ಹಾಗೆಯೇ ಇದೇ ಹೊತ್ತಲ್ಲೇ ಭಾರತದ ಸ್ಥಿರತೆಗೆ ದೊಡ್ಡ ಶಕ್ತಿ ನೀಡಿರುವ ಅಸಂಖ್ಯಾತ ನಾಗರಿಕ ಸೇವಾ ಅಧಿಕಾರಿಗಳನ್ನು ಸ್ಮರಿಸಿಕೊಳ್ಳುವುದು ಸಮಂಜಸ ಎನಿಸುತ್ತದೆ. ಈವರೆಗೂ ಸೇವೆ ಸಲ್ಲಿಸಿದ ಅಸಂಖ್ಯ ಅಧಿಕಾರಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸೋಣ.