ಒಲಿಂಪಿಕ್‌ ಸಾಧನೆಗೆ ಇನ್ನಷ್ಟು ಪ್ರೋತ್ಸಾಹ ಅಗತ್ಯ
ಅಭಿಮತ
ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ
.shetty207@.
ಕ್ರೀಡೆ, ಶಾಂತಿ, ಸಹಬಾಳ್ವೆ, ಸಾಮರಸ್ಯ, ಐಕ್ಯತೆಯನ್ನು ಮೂಡಿಸುವ ಶಾರೀರಿಕ ಚಟುವಟಿಕೆ. ಗ್ರಾಮೀಣ ಭಾಗ ಸೇರಿದಂತೆ ನಗರ ಭಾಗಗಳಲ್ಲಿ ಇಂದು ಕ್ರೀಡಾ ಕ್ಷೇತ್ರದಲ್ಲಿ ಸಾವಿರಾರು ಸಾಧಕರನ್ನು ಕಾಣಬಹುದು. ಆದರೆ ಪ್ರತಿಭೆಗೆ ಪ್ರೋತ್ಸಾಹಗಳು ದೊರಕಿದಾಗ ಕ್ರೀಡಾಪಟುವಿಗೆ ಯಶಸ್ಸು ಲಭಿಸಲು ಪ್ರೇರಣೆಯಾಗುತ್ತದೆ.ದೇಶದಲ್ಲಿ ಬಾಕ್ಸಿಂಗ್, ಕಬಡ್ಡಿ, ಓಟ, ಕುಸ್ತಿ, ಈಜು, ಗುಂಡೆಸೆತ, ಎತ್ತರ ಜಿಗಿತ, ಉದ್ದ ಜಿಗಿತ ಹೀಗೆ ನಾನಾ ಕ್ಷೇತ್ರದಲ್ಲಿ ಗಣನೀಯವಾದ ಸಾಧನೆಗೈದ ಸಾಧಕ ರಿದ್ದಾರೆ.
ಆದರೆ4ವರ್ಷಗಳಿಗೊಮ್ಮೆ ಜರುಗುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಸ್ಥಾನ90ರ ಗಡಿ ದಾಟಿರು ತ್ತದೆ. ಇಲ್ಲಿ ಪ್ರತಿಬಾರಿಯೂ ಚೀನಾ, ಜಪಾನ್, ಬ್ರೆಜಿಲ್ ಸೇರಿದಂತೆ ಇನ್ನಿತರ ರಾಷ್ಟ್ರಗಳು ಅಗ್ರ ಸ್ಥಾನವನ್ನು ಪಡೆದಿರುತ್ತದೆ. ಚೀನಾ ಮತ್ತು ಜಪಾನ್ ದೇಶಗಳು ಅಲ್ಲಿನ ಮಕ್ಕಳಿಗೆ ಬಾಲ್ಯದಿಂದಲೇ ಕ್ರೀಡಾ ತರಬೇತಿ ನೀಡುವ ಮೂಲಕ ಕ್ರೀಡೆಗೆ ಉತ್ತೇಜನ ನೀಡುವ ಮೂಲಕ ಪ್ರತಿಬಾರಿಯೂ ಆ ದೇಶಗಳು ಕ್ರೀಡೆಯಲ್ಲಿ ಚಿನ್ನ ಬೆಳ್ಳಿ ಪದಕಗಳನ್ನು ತಮ್ಮ ಮುಡಿಗೇರಿಸಿ ಕೊಳ್ಳುತ್ತಿವೆ.
ಭಾರತವು ಕೂಡ ಪ್ರತಿಬಾರಿ ಒಲಿಪಿಂಕ್ಸ್ ಕ್ರೀಡಾಕೂಟದಲ್ಲಿ ಪಾಲು ಪಡೆಯುತ್ತದೆಯಾದರೂ, ಕಳೆದ ಎರಡು-ಮೂರು ಒಲಿಂಪಿಕ್ಸ್ ನಲ್ಲಿ ಒಂದಷ್ಟು ಪದಕಗಳನ್ನು ಬಗಲಿಗೆ ಹಾಕಿಕೊಂಡದ್ದು ಬಿಟ್ಟರೆ ನಿರೀಕ್ಷಿತ ಪ್ರಮಾಣದ ಸಾಧನೆಯನ್ನು ಕಾಣಲು ಸಿಕ್ಕಿಲ್ಲ. ಇನ್ನು ಕ್ರೀಡಾ ಸಾಧಕರೆಲ್ಲರೂ ಒಂದಷ್ಟು ಬಡತನವನ್ನು ಮೆಟ್ಟಿ ಕ್ರೀಡಾ ಪರಿಕರಗಳ ಕೊರತೆ, ಸೂಕ್ತ ತರಬೇತಿದಾರರ ಕೊರತೆ, ವೇದಿಕೆಗಳ ಕೊರತೆಯಿಂದ ಸೊರಗಿ ಮೇಲೆ ಬಂದವರೇ ಆಗಿದ್ದಾರೆ. ಇವುಗಳ ಪೈಕಿ ಬಡ ರೈತನ ಮಗಳು ಹಿಮಾದಾಸ್, ಮೇರಿಕೋಮ್, ಗ್ರಾಮೀಣ ಭಾಗದ ಅಶ್ವಿನಿ ಅಕ್ಕುಂಜೆ, ಕಬಡ್ಡಿಯ ಮಮತಾ ಪೂಜಾರಿ ಹೀಗೆ ಉದ್ದುದ್ದ ಸಾಲುಗಳು ಬೆಳೆಯುತ್ತಾ ಸಾಗುತ್ತದೆ.
ಹಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಿಗೆ ದೊರಕುವ ಮಾನ್ಯತೆ, ಪ್ರೋತ್ಸಾಹ ರಾಷ್ಟ್ರೀಯ ಕ್ರೀಡೆಗಳಾದ ಕಬಡ್ಡಿ ಆಟಗಾರರಿಗೆ ಸಿಗುತ್ತಿಲ್ಲ. ಪ್ರಸ್ತುತ ಐಪಿಎಲ್ ಅಥವಾ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪ್ರತಿ ಆಟಗಾರನಿಗೂ ಜಾಹೀರಾತು ಸಂಸ್ಥೆಗಳು, ಕ್ರೀಡಾ ಸಂಸ್ಥೆಗಳು ಕೋಟಿ ಕೋಟಿ ಸುರಿದು ಪ್ರೋತ್ಸಾಹ ನೀಡುತ್ತವೆ. ಆದರೆ ಗ್ರಾಮೀಣ ಭಾಗದಲ್ಲಿ ಕ್ರೀಡಾಪಟುವೊಬ್ಬ ಶ್ರಮಪಟ್ಟು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಬೇಕಾದರೆ ಆರ್ಥಿಕ ಅಡಚಣೆಯಿಂದ ತೊಂದರೆಗೊಳಪಟ್ಟ ನೂರಾರು ನಿದರ್ಶನಗಳಿವೆ.
ಸರಕಾರದಲ್ಲಿ ಯುವಜನ ಮತ್ತು ಕ್ರೀಡಾ ಎಂಬ ಇಲಾಖೆಯಿದ್ದು, ಇವು ಪ್ರಮುಖವಾಗಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಸೂಕ್ತ ಸೌಲಭ್ಯ, ಆಹಾರ, ತರಬೇತಿ, ಪ್ರೋತ್ಸಾಹ, ಪ್ರತ್ಯೇಕ ಅನುದಾನ, ಉದ್ಯೋಗದಲ್ಲಿ ಮೀಸಲಾತಿ, ಒದಗಿಸಿದಾಗ ಪ್ರತಿಭೆ ಬೆಳಗಲು ಸಹಕಾರಿಯಾಗಬಲ್ಲದು. ಸರಕಾರಗಳು ಪ್ರಮುಖವಾಗಿ ಕಲೆ, ಕ್ರೀಡೆ, ಸಾಂಸ್ಕೃತಿಕ, ಜನಪದ, ಶಿಕ್ಷಣಕ್ಕೆ ಉತ್ತೇಜನ ನೀಡಿದಲ್ಲಿ ಆಯಾ ಭಾಗದ ಪರಂಪರೆ ಆಚಾರ-ವಿಚಾರಗಳು ಜೀವಂತವಾಗಿರಲು ಸಾಧ್ಯ.