ಕರೋನಾ ನಂತರದ ಬದುಕು
ಅಭಿಮತ
ಸಂದೀಪ್ ಶರ್ಮಾ
.@.
ಪ್ರಾಯಶಃ ಜಗತ್ತಿನಾದ್ಯಂತ (ಚೀನಾ ಹೊರತುಪಡಿಸಿ) ಕರೋನಾ ವೈರಾಣುವಿನ ಅಟ್ಟಹಾಸ ಇಷ್ಟೊಂದು ತಲೆನೋವಾಗಿ ಪರಿಣಮಿಸಬಹುದೆಂದು ಯಾರುಊಹಿಸಿರಲಿಲ್ಲ. ಹಿಂದಿನ ವರ್ಷ ನಾಸಿಮ್ ನಿಕೊಲಸ್ ತಲೀಬ್ ಎಂಬ ಪ್ರಬಂಧಕಾರ ಕರೋನಾ ಒಂದು ಬ್ಲ್ಯಾಕ್ ಸ್ವಾನ್ ಇವೆಂಟ್ (ಕಪ್ಪು ಹಂಸ ಸಿದ್ಧಾಂತ) ಅಲ್ಲ ಎಂದು ಅಲ್ಲಗಳೆದಿದ್ದ.
ಏಕೆಂದರೆ ಈ ಮಹಾಮಾರಿಯು ಸಾಮಾನ್ಯ ವೈರಾಣುವಿನಂತೆ ರೋಗ ಹರಡುವ ಪ್ರಕ್ರಿಯೆಯಾದ್ದರಿಂದ ಇದರಲ್ಲಿ ಆಶ್ಚರ್ಯ ಪಡುವಂತದ್ದೇನಿಲ್ಲ ಎಂಬುದನ್ನು ಹೇಳಿದ್ದ. ಆದರೆ, ಈಗಿನ ಪರಿಸ್ಥಿತಿಯನ್ನು ಅವಲೋಕಿಸಿ ದರೆ ಅಲೆಗಳ ಮೇಲೆ ಅಲೆಗಳು ಏಳುತ್ತಿದ್ದರೆ ಬ್ಲ್ಯಾಕ್ ಸ್ವಾನ್ ಇವೆಂಟ್ ಎಂದರೆ ತಪ್ಪಾಗಲಿಕ್ಕಿಲ್ಲ. ಅಂದಹಾಗೆ, ಬ್ಲ್ಯಾಕ್ ಸ್ವಾನ್ ಸಿದ್ಧಾಂತವೆಂದರೆ ಒಂದು ಅನಿರೀಕ್ಷಿತ ಘಟನೆ ಏರ್ಪಟ್ಟಾಗ ಸಾಮಾನ್ಯವಾದ ಪರಿಸ್ಥಿತಿಯಿಂದ ನಿರೀಕ್ಷಿಸಲಾಗದಷ್ಟು ಮೀರಿದ ಪರಿಣಾಮವನ್ನು ಉದ್ಭವಿಸುವುದಕ್ಕೆ ಕಪ್ಪು ಹಂಸ ಸಿದ್ಧಾಂತವೆನ್ನುತ್ತಾನೆ.
ಕರೋನಾ ಇನ್ನೂ ಸಾಕಷ್ಟು ಕಾಲ ಮುಂದುವರಿಯಬಹುದು ಎಂದು ಅಂದಾಜಿಸಲಾಗಿದೆ. ಈ ಸಾಂಕ್ರಾಮಿಕವು ಎಷ್ಟು ಜೀವಹಾನಿ ಮಾಡಲಿದೆ ಎಂದು ಈಗಲೇ ಊಹಿಸಲು ಕಷ್ಟಸಾಧ್ಯ. ಒಂದೆರಡು ತಿಂಗಳ ಲಾಕ್‌ಡೌನ್‌ ನಿಂದ ಅದನ್ನು ಸದ್ಯಕ್ಕೆ ತಡೆಗಟ್ಟಬಹುದಾದರೂ, ಲಾಕ್‌ಡೌನ್‌ಗಳು ನಿರಂತರವಾಗಿ ಮುಂದು ವರಿಯಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಎಲ್ಲ ದೇಶಗಳ ಆರ್ಥಿಕತೆಯೂ ಮಕಾಡೆ ಮಲಗಿದರೆ ಅದರ ಪರಿಣಾಮ ಊಹಿಸಲು ಅಸಾಧ್ಯ. ಕರೋನಾದಿಂದ ಸತ್ತಿದ್ದಕ್ಕಿಂತ ಹೆಚ್ಚು ಮಂದಿ ಹಸಿವಿನಿಂದ, ಇತರ ಕಾಯಿಲೆಗಳಿಂದ, ಆಂತರಿಕ ಧಂಗೆಗಳಿಂದ ಸಾಯುತ್ತಾರೆ ಎನ್ನುತ್ತಾರೆ ವಿಶ್ಲೇಷಕರು.
ಎರಡನೆಯದಾಗಿ, ಕರೋನಾ ಈಗ ಮಾಡಿರುವ ಹಾನಿ, ಸೃಷ್ಟಿಸಿರುವ ಭಯಭೀತಿಯೇ ಸಾಕಷ್ಟು. ಇದಕ್ಕಿಂತ ಹೆಚ್ಚಿನ ಹಾನಿ ಆಗಲು ಏನೂ ಉಳಿದಿಲ್ಲವೆನ್ನುತ್ತಾರೆ. ಎಲ್ಲ ದೇಶಗಳಲ್ಲೂ ಕೈಗೊಂಡಿರುವ ಕ್ರಮಗಳ ಪರಿಣಾಮ ಇನ್ನು ಮುಂದೆ ಜೀವಹಾನಿಯ ಸಂಖ್ಯೆ ಕಡಿಮೆ ಯಾಗುತ್ತ ಹೋಗುತ್ತದೆ ಎನ್ನುವ ಭರವಸೆಯ ಇನ್ನೊಂದು ಮಂದಿ. ಪ್ರಖ್ಯಾತ ಚಿಂತಕ ಚಾಮ್ಸ್ಕಿ ಅನ್ನುತ್ತಾರೆ ಕರೋನಾ ಅಟ್ಟಹಾಸದಿಂದ ನಾವು ತಡವಾಗಿ ಯಾದರು ಹೊರಬರಬಹುದು, ಆದರೆ ಮಾನವನ ಸ್ವಾರ್ಥ ಸ್ವಭಾವದಿಂದ ಪರಿಸರ ನಾಶ, ಅದರಿಂದ ಸೃಷ್ಟಿಯಾಗುತ್ತಿರುವ ತಾಪಮಾನ ಬಿಕ್ಕಟ್ಟು, ಯುದ್ಧಗಳ ಆತಂಕದಿಂದ ಹೊರಗೆ ಬಾರೆವು.
ಚೀನಿ ಕೊಟ್ಟ ವೈರಾಣಿಗೆ ಕೊಟ್ಟಷ್ಟೆ? ವಿಶೇಷ ಗಮನವನ್ನು ಪರಿಸರ ಉಳಿಸುವತ್ತ ಕೊಡಬೇಕು. ಇಲ್ಲವಾದರೆ ನಾವೆಲ್ಲ ಒಟ್ಟಾಗಿ ಪಂಚಭೂತಗಳಲ್ಲಿ ಲೀನ ವಾಗುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದು ಕಾಲವಿತ್ತು ಈಗಲೂ ಚಾಲ್ತಿಯಲ್ಲಿದೆ ಹೊರದೇಶದಲ್ಲಿ ನೆಲೆಸಿ ಜೀವನ ನಡೆಸುವುದೇ ಒಂದು ಘನತೆಯ ಮತ್ತು ಪ್ರತಿಷ್ಠೆಯ ವಿಚಾರ, ಈಗ ಕರೋನೋತ್ತರ ಕಾಲದಲ್ಲಿ ಏನಾಗಬಹುದು? ಅದೇ ಪ್ರತಿಷ್ಠೆ ವಿಜೃಂಭಿಸಿಕೊಳ್ಳುತ್ತಾರೆಯೇ? ಅಮೆರಿಕ, ಚೀನಾ, ಫ್ರಾನ್ಸ್‌ನಂಥ ಮುಂದುವರಿದ ದೇಶಗಳು ಎಲ್ಲ ರೀತಿಯಿಂದಲೂ ಬದುಕುವುದಕ್ಕೆ ಯೋಗ್ಯ ಅನ್ನುವ ಪರಿಕಲ್ಪನೆ ಇತ್ತು.
ನಮ್ಮ ಮೇಲ್ಮಧ್ಯಮ ಹಾಗೂ ಮಧ್ಯಮ ವರ್ಗ ಸದಾಕಾಲ ಹೋಗಿ ಸೇರುವುದಕ್ಕೆ ಹಾತೊರೆಯುವ ದೇಶಗಳು ಇವು. ಆದರೆ, ಕರೋನಾದಂಥ ಸೋಂಕಿನ ಮುಂದೆ ಯಾವ ದೇಶವೂ ಸುರಕ್ಷಿತವಲ್ಲ ಎಂಬುದು ರುಜುವಾತಾಗುತ್ತಿದೆ. ಅಮೆರಿಕ, ಇಟಲಿ, ಜರ್ಮನಿಯಂತಹ ಆರೋಗ್ಯ ಸೇವೆಯನ್ನೆಲ್ಲ ಖಾಸಗೀಕರಣ ಮಾಡಿದ ತಪ್ಪಿಗಾಗಿ ಈಗ ಕಣ್ಣೀರಿಡುತ್ತಿದೆ. ಇವುಗಳನ್ನು ನಾವು ನೋಡುವ ರೀತಿಯಲ್ಲಿ ಬದಲಾವಣೆ ಆಗುವ ಸಾಧ್ಯತೆಗಳಿವೆಯೇ? ಮನುಷ್ಯರು ಮುಟ್ಟದೇ ಕನಿಷ್ಠ ಆರು ಅಡಿಗಳ ಅಂತರದಲ್ಲಿ ವಾಸಿಸಬೇಕು ಎಂಬ ನೆಲೆಗೆ ಕರೋನಾ ತಂದು ನಿಲ್ಲಿಸಿರುವುದು ಅತ್ಯಂತ ಖೇದದ ಸಂಗತಿ.
ಅದೊಂದು ಕಾಲ ಎಲ್ಲರೂ ಕೈ-ಕೈ ಹಿಡಿದುಕೊಂಡು ಪ್ರೀತಿಯಿಂದ ಓಡಾಡುತ್ತಿದ್ದ ಕಾಲ ಆದರೆ ಈಗಿನ ಪರಿಸ್ಥಿತಿ ಎಲ್ಲರನ್ನೂ ದೂರಮಾಡಿಕೊಳ್ಳುವ ಸಂದರ್ಭ, ಇನ್ನೆಷ್ಟು ವರುಷಗಳು ಬೇಕೋ ಮೊದಲಿನ ಉಲ್ಲಾಸದ ಕ್ಷಣಗಳಿಗೆ ಹತ್ತಿರಬರಲು, ಕಾಲವೇ ಸಮಯ ಸೂಚಿಸಬೇಕಿದೆ, ನಾವೆಲ್ಲರೂ ಸಹನೆಯಿಂದ ಕಾಯಬೇಕಿದೆ.