ಭಾರತದ ವೇಗಕ್ಕೆ ಇಂಗ್ಲೆಂಡ್‌ ಧೂಳೀಪಟ
ಪ್ರಚಲಿತ
ಇಂದುಧರ ಹಳೆಯಂಗಡಿ
ಅದೊಂದು ಕಾಲವಿತ್ತು. ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್‌ಗೆ ಸ್ಪಿನ್ನರ್ಸ್‌ಗಳೇ ಶಕ್ತಿ ಮತ್ತು ಆಧಾರ. ಏಷ್ಯಾ ಖಂಡದಲ್ಲಿ ಹುಲಿಯಂತೆ ಘರ್ಜಿಸುತ್ತಿದ್ದ ಭಾರತ, ಸೇನಾ ದೇಶಗಳಲ್ಲಿ (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ) ಇಲಿಯಂತೆ ಮಕಾಡೆ ಮಲಗುತ್ತಿತ್ತು.
ಸ್ಪಿನ್ನರ್ಸ್‌ಗಳನ್ನು ಎಷ್ಟು ಅವಲಂಬಿಸುತ್ತಿದ್ದರು ಎಂದರೆ, ಪೇಸ್ ಅಥವಾ – ಬೌಲರ‍್ಸ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ಗಳಲ್ಲೂ ಭಾರತ 2 ಸ್ಪಿನ್ನರ‍್ಸ್‌ಗಳನ್ನು ಆಡಿಸುತ್ತಿತ್ತು. ತಂಡದಲ್ಲಿ ಎಷ್ಟೇ ಬದಲಾವಣೆ ತಂದರೂ, ಸೇನಾ ದೇಶಗಳಲ್ಲಿ ಗೆಲುವು ಮರೀಚಿಕೆಯೇ ಆಗಿತ್ತು. ಇಡೀ ಸರಣಿಯಲ್ಲಿ ಒಂದೂ ಗೆಲುವು ಕಾಣದೇ ತಂಡವು ಮರಳಿ ಬಂದ ಉದಾಹರಣೆಯೂ ಇದೆ. ಟೆಸ್ಟ್ ಪಂದ್ಯಗಳಲ್ಲಿ ಡ್ರಾ ಸಾಧಿಸಿದರೂ, ಗೆಲುವು ಎಂಬಂತೆ ಸಂಭ್ರಮಿಸು ವಂತಿತ್ತು. ಈಗ ಭಾರತ ಕ್ರಿಕೆಟ್ ತಂಡದಲ್ಲಿ ಬಹಳಷ್ಟು ಬೆಳವಣಿಗೆಗಳು ಆಗಿವೆ. ಪ್ರಮುಖವಾಗಿ ತಂಡಕ್ಕೆ ಕಾಡುತ್ತಿದ್ದ ಆಲ್ರೌಂಡ್ ಹಾಗೂ ಪೇಸ್ ವಿಭಾಗ.
ಬ್ಯಾಟ್ಸ್‌ಮ್ಯಾನ್‌ಗಳು ವಿಫಲರಾದರೂ, ಬೌಲರ್‌ಗಳು ಗೆಲುವನ್ನು ತಂದುಕೊಡಬಲ್ಲರು ಎನ್ನುವ ವಿಶ್ವಾಸವಿದೆ. ಭಾರತೀಯ ಕ್ರಿಕೆಟ್ ತಂಡವು ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿ ಇದ್ದು, ಟೆಸ್ಟ್ ಸರಣಿಯ ಮೊದಲೆರಡು ಪಂದ್ಯ ಈಗಾಗಲೇ ಮುಗಿದಿದೆ. ಮೊದಲ ಪಂದ್ಯದಲ್ಲಿ ಭಾರತ ಗೆಲುವಿನ ಸಮೀಪದಲ್ಲಿದ್ದರೂ, ಮಳೆರಾಯನ ಅವಕೃಪೆ ಯಿಂದ, ಪಂದ್ಯವು ಡ್ರಾ ಫಲಿತಾಂಶವನ್ನು ಕಂಡಿತ್ತು. ಬಳಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯ ದಲ್ಲಿ ಭಾರತವು ತೋರಿದ ಆಲ್‌ರೌಂಡ್ ಪ್ರದರ್ಶನದಿಂದ 151 ರನ್ನುಗಳಿಂದ ಇಂಗ್ಲೆಂಡ್ ಶರಣಾಯಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಸ್ಪರ್ಧಾತ್ಮಕ ಮೊತ್ತವನ್ನೇ ಕೂಡಿ ಹಾಕಿತ್ತು. ಕನ್ನಡಿಗ ರಾಹುಲ್ ಶತಕ, ರೋಹಿತ್ ಅರ್ಧಶತಕ, ಕೊಹ್ಲಿ, ಪಂಥ್, ಜಡೇಜಾ ಕೊಡುಗೆಯಿಂದ 364 ರನ್‌ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ 331 ರನ್ನಿಗೆ ಕೇವಲ 5 ವಿಕೆಟ್ ಕಳೆದುಕೊಂಡಿದ್ದ ಭಾರತ, ನಂತರ ಕೇವಲ 33 ರನ್ನುಗಳಿಗೆ ಕೊನೆಯ 5 ವಿಕೆಟ್‌ಗಳನ್ನು ಒಪ್ಪಿಸಿತು. ಆದರೂ, ಒಟ್ಟಾರೆ ಇದೊಂದು ಉತ್ತಮ ಮೊತ್ತವಾಗಿತ್ತು. ನಂತರ ಇಂಗ್ಲೆಂಡ್ ಬ್ಯಾಟಿಂಗ್‌ನಲ್ಲಿ ಕೇವಲ ಜೋ ರೂಟ್ ಉತ್ತಮ ಪ್ರದರ್ಶನ ನೀಡಿದರು.
ಭಾರತದ ಪರ ಸಿರಾಜ್ 4, ಇಶಾಂತ್ 3 ಹಾಗೂ ಶಮಿ 2 ವಿಕೆಟ್ ಪಡೆದರು. ಇದರ ಪರಿಣಾಮ, ಇಂಗ್ಲೆಂಡ್ ಕೇವಲ 27 ರನ್‌ಗಳ ಮುನ್ನಡೆ ಪಡೆಯಿತು. ಅಲ್ಪ ಹಿನ್ನಡೆಯೊಂದಿಗೆ ಕಣಕ್ಕಿಳಿದ ಭಾರತಕ್ಕೆ ಆರಂಭಿಕರಿಂದ ನಿರೀಕ್ಷಿತ ರನ್‌ಗಳು ಬರದೇ ಇದ್ದರೂ, ಪೂಜಾರ ಮತ್ತು ರಹಾನೆ ಉತ್ತಮ ಸ್ಟ್ಯಾಂಡ್ ಕೊಟ್ಟರು. ವಿಕೆಟ್ ಉರುಳುವುದನ್ನು ನಿಲ್ಲಿಸಿದರು ಅನ್ನಬಹುದು. ಇವರ ಜೋಡಿ ಬೇರ್ಪಟ್ಟ ನಂತರ ಮತ್ತೆ ಕುಸಿದ ಭಾರತಕ್ಕೆ ಬೆನ್ನೆಲುಬಾಗಿ ನಿಂತದ್ದು ಶಮಿ ಹಾಗೂ ಬೂಮ್ರಾ! ಬೌಲರ್‌ಳಾಗಿದ್ದರು, 89 ರನ್‌ಗಳ ಜತೆಯಾಟವಾಡಿ ಭಾರತವು ಅತ್ಯಮೂಲ್ಯ 271 ರನ್‌ಗಳ ಮುನ್ನಡೆ ಪಡೆಯಲು ನೆರವಾದರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಕೇವಲ 1 ರನ್ನಿಗೆ 2 ವಿಕೆಟ್ ಕಳೆದುಕೊಂಡಿತು. ನಂತರದಲ್ಲಿ ಡ್ರಾ ಆದರೂ ಮಾಡೋಣ ಎಂದು ಆದಷ್ಟು  ಬಾಲ್‌ ಗಳನ್ನು ಆದರೂ ನಮ್ಮ ವೇಗಿಗಳು ಇದಕ್ಕೆ ಹೆಚ್ಚಿನ ಆಸ್ಪದ ಕೊಡಲಿಲ್ಲ. ಭಾರತದ ಪರ ಸಿರಾಜ್ 4, ಬುಮ್ರಾ 3, ಇಶಾಂತ್ 2 ಹಾಗೂ ಶಮಿ 1 ವಿಕೆಟ್ ಪಡೆದರು! ಎಲ್ಲರೂ ವೇಗಿಗಳೇ ಎಂಬುವುದು ಗಮನಾರ್ಹ!
ಒಟ್ಟಾರೆಯಾಗಿ ಹೇಳುವುದಾದರೆ, ಭಾರತ ಕ್ರಿಕೆಟ್ ತಂಡದ ಒಗ್ಗಟ್ಟಿನ ಅಟ್ಯಾಕ್ ಇಂದಾಗಿ ಇಂಗ್ಲೆಂಡ್ ಧೂಳಿಪಟ ಆಗಿ ಹೋಯಿತು. ಮೊದಲ ಪಂದ್ಯಕ್ಕೆ ಮಳೆಯ ಅಡಚಣೆ ಇಲ್ಲದೇ ಇರುತ್ತಿದ್ದರೆ, ಭಾರತವು ಸರಣಿಯಲ್ಲಿ 2-0 ಮುನ್ನಡೆ ಪಡೆಯುತ್ತಿತ್ತು. ಸದ್ಯ 1-0 ಮುನ್ನಡೆ ಪಡೆದಿರುವ ಭಾರತ ಮುಂದಿನ ಪಂದ್ಯಗಳಲ್ಲೂ ಗೆದ್ದು ಬರಲಿ.
