 ಪ್ರತಿರೋಧವೆಂಬ ಆಧುನಿಕ ಸಮಸ್ಯೆ
ಶಿಶಿರಕಾಲ
ಶಿಶಿರ್‌ ಹೆಗಡೆ, ನ್ಯೂಜೆರ್ಸಿ
@.
ಸ್ನೇಹಿತನೊಬ್ಬನಿದ್ದಾನೆ, ಆತನಿಗೆ ಒಂದು ವಿಚಿತ್ರ ಖಯಾಲಿ/ಕಾಯಿಲೆಯಿದೆ. ಆತನಿಗೆ ಒಂದು ಸೀನು ಬಂದರೆ ಸಾಕು ತಕ್ಷಣ ಒಂದು ಗುಳಿಗೆ ನುಂಗುತ್ತಾನೆ. ಕಾಲು ಸ್ವಲ್ಪ ನೋವಾಯಿತೆಂದರೆ ಒಂದು ಗುಳಿಗೆ. ಕೈ ಸ್ವಲ್ಪ ತುರಿಸಿದರೆ ಇನ್ನೊಂದು. ತಲೆ ನೋವು  ಬರಬೇಕೆಂದೇನಿಲ್ಲ, ತಲೆ ನೋವು ಬರಬಹುದುಎಂದೆನಿಸಿದರೆ ಸಾಕು, ಅದಕ್ಕೊಂದು ಗುಳಿಗೆ. ಆತನ ಮನೆಯಲ್ಲಿ ಒಂದು ಮಿನಿ ಔಷಧ ಅಂಗಡಿಯೇ ಇದೆ.
ಕ್ರಿಕೆಟ್ ಆಡಿ ಮನೆಗೆ ಹೊರಡುವಾಗ ಮೈಕೈ ನೋವಿನ ಗುಳಿಗೆ ಮೊದಲು ನುಂಗಿಯೇ ಕಾರು ಆನ್ ಮಾಡುವುದು. ನಾನೇನಾದರೂ ಹೀಗಾಗುತ್ತಿದೆ, ಸ್ವಲ್ಪ ಭುಜ ನೋವು ಹೀಗೆ ಏನೋ ಒಂದು ಹೇಳಿಕೊಂಡು ಬಿಟ್ಟರೆ ಮುಗೀತು, ಅದಕ್ಕೆ ಕನಿಷ್ಠ ನಾಲ್ಕು ಔಷಧದ ಹೆಸರು ಹೇಳುತ್ತಾನೆ. ಆತನೇನು ಡಾಕ್ಟರ್ ಅಲ್ಲ ಆದರೆ ಆತನ ಔಷಧ ಜ್ಞಾನ ಎಷ್ಟಿದೆಯೆಂದರೆ ಜನರಲ್ ಫಿಸಿಶಿಯನ್ ಬರೆದು ಕೊಡುವ ಎಪ್ಪತ್ತು ಪ್ರತಿಶತಕ್ಕಿಂತ ಜಾಸ್ತಿ ಇವನಿಗೆ ಗೊತ್ತು. ಇನ್ನೊಬ್ಬನಿದ್ದಾನೆ – ಆತನದು ಇನ್ನೊಂದು ರೀತಿ. ಆತ ತಿಂಗಳಿಗೆ ಎರಡು ಬಾರಿಯಾದರೂ ಡಾಕ್ಟರ್ ನೋಡಲೇಬೇಕು.
ಮೇಲೆ ಹೇಳಿದ ಸಿಲ್ಲಿ ಅನ್ನಿಸುವ ಕಾರಣಕ್ಕೆ ಡಾಕ್ಟರಲ್ಲಿಗೆ ಓಡುತ್ತಾನೆ. ಆತನಲ್ಲಿ ನನಗೆ ಹೀಗಾಗುತ್ತಿದೆ ಎಂದರೆ ಡಾಕ್ಟರಲ್ಲಿಗೆ ಇನ್ನೂ ಏಕೆ ಹೋಗಿಲ್ಲ ಎಂದು ತಾನೇ ಗಾಬರಿಯಾಗುತ್ತಾನೆ ಮತ್ತು ನಮ್ಮನ್ನೂ ಗಾಬರಿ ಬೀಳಿಸು ತ್ತಾನೆ. ಮನೆಯಲ್ಲಿ ಯಾರಿಗಾದರೂ ಹೀಗೊಂದು ಸಾಮಾನ್ಯವೆನ್ನುವ ಅನಾರೋಗ್ಯವಾಗಿದೆ ಎಂದೇ ನಾದರೂ ಆತನಲ್ಲಿ ಹೇಳಿ ಡಾಕ್ಟರ್ ಅಲ್ಲಿ ನಾಳೆ ಕಡಿಮೆಯಾಗಿಲ್ಲ ಎಂದರೆ ಹೋಗುವುದು ಎಂದು ಬಿಟ್ಟರೆ ಪುಣ್ಯಾತ್ಮ ನಮ್ಮಲ್ಲಿ ಪಾಪಪ್ರಜ್ಞೆ ಮೂಡಿಸಿ ಬಿಡುತ್ತಾನೆ. ಏನಿಲ್ಲ ಮಾರಾಯ, ನಾಳೆ ಆರಾಮಾಗುತ್ತದೆ ಬಿಡು ಎಂದರೆ ಆತನಿಗೆ ಸಮಾಧಾನವಿಲ್ಲ.
ಆಸ್ಪತ್ರೆ ಎನ್ನುವುದು ನಿನ್ನ ಮಾವನ ಮನೆ ಎಂದು ಕಿಚಾಯಿಸುತ್ತಿರುತ್ತೇನೆ. ಕೇಳಿ ನಗುತ್ತಾನೆ ಆದರೆ ಹೋಗುವುದು ಬಿಡುವುದಿಲ್ಲ. ಇಲ್ಲಿ ನನ್ನ ಎರಡು ಸ್ನೇಹಿತರ ವಿವರಣೆ ಕೊಟ್ಟದ್ದು ಉದಾಹರಣೆಗೆ. ನಿಮಗೂ ಇಂಥಹುದೇ ಸ್ನೇಹಿತ, ಸಂಬಂಧ ಇರಬಹುದು ಅಥವಾ ಈ ರೀತಿ ನೀವೇ ಮಾಡುತ್ತಿರಬಹುದು. ಇದು ಗುಳಿಗೆ ನುಂಗುವ ಒಂದು ವಿಚಿತ್ರ ಮನೋರೋಗ. ಇದರಿಂದ ಆಗುವ ಅಧ್ವಾನಗಳ, ಆಡ್ಡ ಪರಿಣಾಮಗಳ ಕುರಿತು ನೀವು ಇಂಥವರಲ್ಲಿ ವಾದ ಮಾಡುವಂತಿಲ್ಲ. ಇದನ್ನು ಖಯಾಲಿ ಎನ್ನಬೇಕೋ ಅಥವಾ ಮಾನಸಿಕ ರೋಗ ಎನ್ನಬೇಕೋ – ಸರಿಯಾದ ಶಬ್ದ ಸಿಗುತ್ತಿಲ್ಲ.
ಆದರೆ ಇತ್ತೀಚಿಗೆ ಇದು ಬಹಳಷ್ಟು ಮಂದಿಯಲ್ಲಿ ಹಬ್ಬುತ್ತಿರುವುದನ್ನಂತೂ ನೋಡುತ್ತಲೇ ಇದ್ದೇನೆ. ಇದೊಂದು ಮನೋಸಾಂಕ್ರಾಮಿಕ ಎಂದು ಕರೆಯ ಬಹು ದೇನೋ. ಇರಲಿ. ಕಳೆದ ಒಂದೂ ಮುಕ್ಕಾಲು ವರ್ಷದಿಂದ ವೈರಸ್ ಮುಖ್ಯ ಖಳನಾಯಕನ ಪಾತ್ರದಲ್ಲಿದ್ದರೂ ಮನುಷ್ಯ ಇಲ್ಲಿಯವರೆಗೆ ಕಂಡ ಅತ್ಯಂತ ಭೀಕರವೆನಿಸುವ ಖಳನಾಯಕ ರೋಗಕಾರಕ ಬ್ಯಾಕ್ಟೀರಿಯಾಗಳು. ನಿಮಗೆ ಆಂಟಿಬಯೋ ಟಿಕ್ ಏನೆಂದು ಗೊತ್ತೇ ಇದೆ. ರೋಗಕಾರಕ ಹಲವು ಬ್ಯಾಕ್ಟಿರೀಯಾ ಪ್ರಬೇಧಗಳನ್ನು ಕೊಲ್ಲುವ ಔಷಧಿ. ಇವತ್ತು ಹೇಳಲು ಹೊರಟಿರುವುದು ಆಂಟಿಬಿಯೊಟಿಕ್ ರೆಸಿಸ್ಟೆ – ಪ್ರತಿಜೀವಕ ಪ್ರತಿರೋಧದ ಬಗ್ಗೆ. ಅತಿಯಾದ ಆಂಟಿಬಯೋಟಿಕ್ ಬಳಕೆಯಿಂದಾಗಿ ಆಗುವ ಅಧ್ವಾನದ ಬಗ್ಗೆ.
೧೯೨೮ರಲ್ಲಿ ಸ್ಕಾಟ್ಲೆಂಡ್‌ನ ಅಲೆಕ್ಸಾಂಡರ್ ಫ್ಲೆಮಿಂಗ್ ಪೆನ್ಸಿಲಿನ್ ಕಂಡುಹಿಡಿದ. ಪೆನ್ಸಿಲಿನ್ ಅಂದಿನ ದಿನದ ಬಹುದೊಡ್ಡ ಆವಿಷ್ಕಾರ. ಎರಡನೇ ಮಹಾಯುದ್ಧದಸಮಯದಲ್ಲಿ ಗಾಯಾಳುಗಳು ಗಾಯಕ್ಕಿಂತ ನಂತರದಲ್ಲಿ ಗಾಯಕ್ಕೆ ಆಗುವ ಬ್ಯಾಕ್ಟಿರೀಯಾ ಸೋಂಕಿನಿಂದಾಗಿ ಸಾಯುತ್ತಿದ್ದರು. ಅವರ ಜೀವ ರಕ್ಷಕವಾಗಿದ್ದೇ ಈ ಪೆನ್ಸಿಲಿನ್. ಹಲವಾರು ರೀತಿಯ, ಅದರಲ್ಲಿಯೂ ರೋಗ ತರಬಹುದಾದ ಬ್ಯಾಕ್ಟಿರೀಯಾಗಳನ್ನು ಕೊಲ್ಲುವ ಔಷಧವಿದು. ಸರಳವಾಗಿ ವಿವರಿಸುವುದಾದರೆ ಪೆನ್ಸಿಲಿನ್ ಈ ಬ್ಯಾಕ್ಟಿರೀಯಾಗಳ ಮೇಲ್ಮೈ ಮೇಲೆ ಬಲೆಯಾಕಾರದ ಗೋಡೆಯನ್ನು ನಿರ್ಮಿಸುತ್ತದೆ.
ಪ್ರತಿ ಬ್ಯಾಕ್ಟಿರೀಯಾ ವಿಭಜನೆಯಾಗುವ ಮೊದಲ ಹಂತದಲ್ಲಿ ಒಂದು ಚಿಕ್ಕ ರಂಧ್ರ ತೆರೆದುಕೊಳ್ಳುತ್ತದೆ. ಆ ರಂಧ್ರವನ್ನು ಈ ಬಲೆ ಮುಚ್ಚಿಬಿಡುತ್ತದೆ. ಆ ಮೂಲಕಬ್ಯಾಕ್ಟಿರೀಯಾ ವಿಭಜನೆ ನಿಲ್ಲುವುದಲ್ಲದೆ ಆ ಬ್ಯಾಕ್ಟಿರೀಯಾ ಕೂಡ ಅಲ್ಲಿಗೆ ಸಾಯುತ್ತದೆ. ಇದರಿಂದ ಸೋಂಕು ನಿಲ್ಲುತ್ತದೆ. ಅಲೆಕ್ಸಾಂಡರ್ ಫ್ಲೆಮಿಂಗ್‌ನ ಈ ಒಂದು ಆವಿಷ್ಕಾರ ಅಂದಿನಿಂದ ಅದೆಷ್ಟೋ ಮಂದಿಯನ್ನು ಬದುಕಿಸಿದೆ. ಆತ ಈ ಆವಿಷ್ಕಾರಕ್ಕೆ1945ರಲ್ಲಿ ನೊಬೆಲ್ ಪ್ರಶಸ್ತಿ ಪಡೆದು ಮಾತನಾಡುವಾಗ ಈ ಬ್ಯಾಕ್ಟಿರೀಯಾ ಆಂಟಿಬಯೋಟಿಕ್‌ಗೆ ಕಾಲ ಕಳೆದಂತೆ ಪ್ರತಿರೋಧ ಪಡೆದುಕೊಳ್ಳುವ ಬಗ್ಗೆ ಎಚ್ಚರಿಸಿದ್ದ.
ಪೆನ್ಸಿಲಿನ್ ರೋಗಿಗಳಿಗೆ ಕೊಡುವಾಗ ಮೊದಲ ಒಂದು ವರ್ಷ ಈ ಔಷಧ ಪವಾಡವೇ ಆಗಿತ್ತು. ಕ್ರಮೇಣ ಜನರಲ್ಲಿ ಹರಿದಾಡುವ ರೋಗಕಾರಕ ಬ್ಯಾಕ್ಟಿರೀಯಾಗಳುಪೆನ್ಸಿಲಿನ್ ನೆಡೆಗೆ ಆತ ಹೇಳಿದಂತೆ ಪ್ರತಿರೋಧ ಪಡೆದುಕೊಂಡವು.1950ರ ಸಮಯದಲ್ಲಿ ಬಹುತೇಕ ರೋಗಕಾರಕ ಬ್ಯಾಕ್ಟಿರೀಯಾಗಳು ಪೆನ್ಸಿಲಿನ್ ಪ್ರತಿರೋಧ ಹೊಂದಿದ್ದವು. ಈ ಕಾರಣಕ್ಕೆ ಕೆಲವೇ ವರ್ಷಗಳ ಹಿಂದೆ ಪವಾಡದಂತಿದ್ದ ಪೆನ್ಸಿಲಿನ್ ಪ್ರಯೋಜನಕ್ಕೆ ಬಾರದ ಹಂತಕ್ಕೆ ತಲುಪಿತು. ಇದು ಪೆನ್ಸಿಲಿನ್ ಒಂದರ ಕಥೆಯಲ್ಲ. ಬಹುತೇಕ ಆಂಟಿಬಯೋಟಿಕ್ ಔಷಧಗಳ ಕಥೆಯೂ ಇದೇ.
ಆಂಟಿಬಯೋಟಿಕ್‌ನಲ್ಲಿ ಎರಡು ರೀತಿ.  ಮತ್ತು .ಮೊದಲನೆಯದು ಬ್ಯಾಕ್ಟಿರೀಯಾ ವಿಭಜನೆಯಾಗಿ ಸಂಖ್ಯೆ ಹೆಚ್ಚುವುದನ್ನು ತಡೆಯುವುದರ ಮೂಲಕ ಸೋಂಕಿಗೆ ಪರಿಹಾರವಾದರೆ ಎರಡನೆಯದು ರೋಗಕಾರಕ ಬ್ಯಾಕ್ಟಿರೀಯಾವನ್ನು ಕೊಲ್ಲುವುದು. ನಾವು ಪ್ರತೀ ಬಾರಿ ಎಂಟಿಬಯೋ ಟಿಕ್ ಸೇವಿಸಿದಾಗಲೂ ಈ ಬ್ಯಾಕ್ಟಿರೀಯಾ ತನ್ನಲ್ಲಿ ಮಾರ್ಪಾಡು ಮಾಡಿಕೊಂಡು ಅದರ ಜೀವ ರಕ್ಷಣೆಗೆ ಪ್ರತಿರೋಧ ಪಡೆಯುತ್ತ ಹೋಗುತ್ತದೆ. ಈ ಪ್ರತಿರೋಧ ವನ್ನು ಆಂಟಿಬಯೋಟಿಕ್ ರೆಸಿಸ್ಟೆ ಅನ್ನುವುದು.
ನಾವು ದೇಹದೊಳಕ್ಕೆ ಹೆಚ್ಚು ಹೆಚ್ಚು ಆಂಟಿಬಯೋಟಿಕ್ ಬಿಟ್ಟುಕೊಂಡಂತೆ ಈ ರೋಗಕಾರಕ ಬ್ಯಾಕ್ಟಿರೀಯಾಗಲು ಅಷ್ಟೇ ವೇಗವಾಗಿ ಪ್ರತಿರೋಧವನ್ನು ಪಡೆಯುತ್ತಹೋಗುತ್ತವೆ. ಇದರಿಂದಾಗಿ ಆಂಟಿಬಯೋ ಟಿಕ್ ಔಷಧ ಕ್ರಮೇಣ ನಿಷ್ಪ್ರಯೋಜಕವಾಗುತ್ತ ಹೋಗುತ್ತದೆ. ಇಲ್ಲಿ ಕೇವಲ ಆಂಟಿಬಯೋಟಿಕ್ ಸೇವಿಸಿದ ವ್ಯಕ್ತಿ ಯಲ್ಲಷ್ಟೇ ಈ ಬ್ಯಾಕ್ಟಿರೀಯಾ ಪ್ರತಿರೋಧ ಹೊಂದುತ್ತದೆ ಎಂದು ತಪ್ಪು ಭಾವಿಸಬೇಡಿ. ಈ ತೆರನಾಗಿ ಔಷಧಕ್ಕೆ ಪ್ರತಿರೋಧ ಪಡೆದ ಬ್ಯಾಕ್ಟಿರೀಯಾ ಇನ್ನೊಬ್ಬರ ದೇಹ ಹೊಕ್ಕಾಗ ಕೂಡ ಮಾರುಕಟ್ಟೆಯಲ್ಲಿರುವ ಔಷಧ ಕೆಲಸವೇ ಮಾಡುವುದಿಲ್ಲ.
ಇದೆಲ್ಲ ಅರ್ಥವಾಗಬೇಕೆಂದರೆ ಬ್ಯಾಕ್ಟಿರೀಯಾದ ಬಗ್ಗೆ ಚಿಕ್ಕದಾಗಿ ತಿಳಿದುಕೊಳ್ಳಬೇಕಾಗುತ್ತದೆ. ಬ್ಯಾಕ್ಟಿರೀಯಾ ಭೂಮಿಯಲ್ಲಿ ಅವತರಿಸಿ ಸುಮಾರು350ಕೋಟಿ ವರ್ಷವಾಗಿದೆ. ಬ್ಯಾಕ್ಟಿರೀಯಾ ಇಲ್ಲದೇ ನಾವು ಬದುಕಲು ಸಾಧ್ಯವೇ ಇಲ್ಲ. ಬ್ಯಾಕ್ಟಿರೀಯಾ ಅಷ್ಟರಮಟ್ಟಿಗೆ ಅವಶ್ಯಕ ಕೂಡ ಹೌದು. ವಯಸ್ಕರ ದೇಹದಲ್ಲಿ ಹತ್ತು ಸಾವಿರ ಕೋಟಿ ಸೂಕ್ಷ್ಮಾಣುಜೀವಿಗಳಿರುತ್ತವೆ. ದೇಹ ಕೆಲಸಮಾಡಬೇಕೆಂದರೆ ಇವುಗಳಲ್ಲಿ ಹೆಚ್ಚಿನವು ಬೇಕು. ಬ್ಯಾಕ್ಟಿರೀಯಾ ಎಂದರೆ ಜೀವನಾವಶ್ಯಕ ಬ್ಯಾಕ್ಟಿರೀಯಾ ಒಂದು ಕಡೆ, ರೋಗಕಾರಕ ಬ್ಯಾಕ್ಟಿರೀಯಾ ಇನ್ನೊಂದು ಕಡೆ. ಪ್ರತೀ ದಿನ, ಕ್ಷಣ ಈ ರೀತಿಯ ಹತ್ತಾರು ರೋಗಕಾರಕ ಬ್ಯಾಕ್ಟಿರೀಯಾ ನಮ್ಮ ದೇಹವನ್ನು ಹೊಕ್ಕುತ್ತಲೇ ಇರುತ್ತವೆ ಮತ್ತು ದೇಹದಲ್ಲಿನ ಪ್ರತಿರೋಧಕ ಶಕ್ತಿ ಅದನ್ನು ಗುರುತಿಸಿ ಕೊಲ್ಲುತ್ತಲೇ ಇರುತ್ತವೆ.
ಒಂದು ಬ್ಯಾಕ್ಟಿರೀಯಾ ದೇಹಕ್ಕೆ ಹೊಕ್ಕ ನಂತರ ಅದು ವಿಭಜಿಸಲು ಶುರುಮಾಡಲು ಕೇವಲ ಇಪ್ಪತ್ತು ನಿಮಿಷ ಸಾಕು. ಈ ರೀತಿ ವಿಭಜನೆಯಾಗುವಾಗ ಅವು ಮ್ಯುಟೇಷನ್ ಗೆ ಒಳಗಾಗುತ್ತವೆ. ದೇಹದಲ್ಲಿ ಆಂಟಿಬಯೋಟಿಕ್ ಇದ್ದಲ್ಲಿ ಅಥವಾ ಪಡೆದಲ್ಲಿ ಈ ರೀತಿ ಮ್ಯುಟೇಷನ್ ವಿಭಜನೆಯಾಗುವಾಗ ಯಾವ ಮರಿಬ್ಯಾಕ್ಟಿರೀಯಾ ದೇಹ ಪ್ರತಿರೋಧಕ್ಕೆ ವ್ಯತಿರಿಕ್ತತೆ ಹೊಂದಿರುತ್ತದೆಯೋ ಅದು ಬದುಕಿಕೊಳ್ಳುತ್ತದೆ ಮತ್ತು ಅದರ ವಂಶ ಮುಂದುವರಿಯುತ್ತದೆ. ಈ ರೀತಿ ಅಂದುಆಂಟಿಬಯೋಟಿಕ್ ಔಷಧ ಸಂಪೂರ್ಣವಾಗಿ ನಪಾಸಾಗಲು ಶುರುವಾಗುತ್ತದೆ. ಈ ಗಟ್ಟಿಗ ಬ್ಯಾಕ್ಟಿರೀಯಾ ನಂತರದಲ್ಲಿ ಇನ್ನಿತರರಿಗೆ ಹರಡುತ್ತ ಸಾಗುತ್ತದೆ. ಹರ್ಡ್ ಇಮ್ಮ್ಯೂನಿಟಿ ಎನ್ನುತ್ತೇವೆಯಲ್ಲ – ಅದನ್ನೇ ಇಲ್ಲಿ ಬೆಕ್ಟಿರಿಯ ಆಂಟಿಬಯೋಟಿಕ್ ನ ವಿರುದ್ಧ ಪಡೆದುಕೊಳ್ಳುತ್ತದೆ.
ಈ ರೀತಿ ಆಂಟಿಬಯೋಟಿಕ್ ರೆಸಿಸ್ಟನ್ಸ್‌ನ ಸಂಖ್ಯೆ ಈಗೀಗ ಎಲ್ಲಿಲ್ಲದಂತೆ ಹೆಚ್ಚುತ್ತಿದೆ. ಸಧ್ಯ ಪ್ರತೀ ವರ್ಷ ಆಂಟಿಬಯೋಟಿಕ್ ಔಷಧಗಳೆಲ್ಲ ನಿಷ್ಪ್ರಯೋಜಕವಾಗಿಸಾಯುವವರ ಸಂಖ್ಯೆ ಜಗತ್ತಿನಲ್ಲಿ ಏಳು ಲಕ್ಷಕ್ಕಿಂತ ಜಾಸ್ತಿ. ಈ ಸಂಖ್ಯೆ ಚಿಕ್ಕದೆನಿಸಿಬಹುದೇನೋ. ಆದರೆ ಈ ರೀತಿ ಆಂಟಿಬಯೋಟಿಕ್ ರೆಸಿಸ್ಟನ್ಸ್‌ನಿಂದ ಸಾಯುವವರ ಸಂಖ್ಯೆಯ ಏರಿಕೆಯ ರೇಖೆಯನ್ನು ಭವಿಷ್ಯಕ್ಕೆ ಎಳೆದುನೋಡಿದರೆ2050ರ ವೇಳೆಗೆ ಈ ಸಂಖ್ಯೆ ಪ್ರತಿ ವರ್ಷಕ್ಕೆ ಒಂದು ಕೋಟಿ ತಲುಪುತ್ತದೆ ಎನ್ನುವುದು ಅಮೆರಿಕದ  ಯ ಲೆಕ್ಕ ಉತ್ಪ್ರೇಕ್ಷೆಯೆನಿಸುವುದಿಲ್ಲ. ಪೆನ್ಸಿಲಿನ್ ಕಂಡುಹಿಡಿದ ಅಲೆಕ್ಸಾಂಡರ್ ಫ್ಲೆಂಮಿಂಗ್ ಇದನ್ನು ಎಪ್ಪತ್ತು ವರ್ಷದ ಹಿಂದೆಮೊದಲ ಆಂಟಿಬಯೋಟಿಕ್ ಕಂಡಿಹಿಡಿದಾಗಲೇ ಗ್ರಹಿಸಿದ್ದ ಮತ್ತು ತನ್ನ ಜೀವನದುದ್ದಕ್ಕೂ ಅದನ್ನು ಹೇಳಿಕೊಂಡೇ ಬಂದ.
ಇದು ನಾವೆ ಅಂದುಕೊಂಡದ್ದಕ್ಕಿಂತ ದೊಡ್ಡ ಸಮಸ್ಯೆ. ಈ ಸಮಸ್ಯೆ ಕಾಲ ಕಳೆದಂತೆ ಹೆಚ್ಚುತ್ತಾ ಹೋಗುತ್ತಿದೆ. ಅದಕ್ಕೆ ಕಾರಣಗಳು ಕೂಡ ಇದೆ. ಮೊದಲು ನನ್ನ ಸ್ನೇಹಿತರನ್ನು ಉಲ್ಲೇಖಿಸಿದ ಅತಿಯಾದ, ಅನವಶ್ಯಕ ಆಂಟಿಬಯೋಟಿಕ್ ಬಳಕೆ ಹೆಚ್ಚುತ್ತಿರುವುದು ಒಂದು ಕಾರಣ ಅಷ್ಟೇ. ಇಂದು ಆಸ್ಪತ್ರೆಗಳಲ್ಲಿ, ಅದರಲ್ಲಿಯೂ ಹೊರ ರೋಗಿಗಳ ವಿಭಾಗದಲ್ಲಿ ಮೊದಲು ಕೊಡುವ ಔಷಧ ಸಾಮಾನ್ಯವಾಗಿ ಆಂಟಿಬಯೋಟಿಕ್. ಹೊರ ರೋಗಿಗಳ ವಿಭಾಗದಲ್ಲಿ ಬರುವ ಮೂವರಲ್ಲಿ ಒಬ್ಬರಿಗೆ ರೋಗ ವೈರಸ್ ನಿಂದಿರಬಹುದು.
ಅವರಿಗೂ ಬಹುತೇಕ ಕಡೆ ಆಂಟಿಬಯೋಟಿಕ್ ವಿಚಾರಮಾಡದೇ ಕೊಡಲಾಗುತ್ತದೆ. ಅಸಲಿಗೆ ಆಂಟಿಬಯೋ ಟಿಕ್ ವೈರಸ್‌ನ ಮೇಲೆ ಯಾವುದೇ ಕೆಲಸ ಮಾಡುವುದೇ ಇಲ್ಲ. ಆಂಟಿಬಯೋಟಿಕ್ ಇರುವುದೇ ಬ್ಯಾಕ್ಟಿರೀಯಾ ಶಮನಕ್ಕೆ. ಸಾಮಾನ್ಯವಾಗಿ ಜ್ವರ ಬಂದಲ್ಲಿ ಅಥವಾ ನೆಗಡಿಯಾದಲ್ಲಿ ನಾವೇ ಹೋಗಿ ಆಂಟಿಬಯೋಟಿಕ್ ತಂದು ನುಂಗುತ್ತೇವೆ. ಈ ಎಲ್ಲ ರೋಗಗಳಿಗೆ ಕಾರಣ ವೈರಸ್, ಆದರೆ ನಾವು ನಮಗೆ ಕೊಟ್ಟುಕೊಳ್ಳುವ ಔಷಧ ಬ್ಯಾಕ್ಟಿರೀಯಾಕ್ಕೆ. ಹೇಗಿದೆ ನೋಡಿ.
ಇದೆಲ್ಲದರಿಂದ ಬ್ಯಾಕ್ಟಿರೀಯಾಗಳಲ್ಲಿ ಈ ಆಂಟಿಬಯೋಟಿಕ್ ರೆಸಿಸ್ಟೆ ಕೂಡ ಹೆಚ್ಚುತ್ತಲೇ ಹೋಗುತ್ತದೆ. ನಿಜವಾಗಿ ಬ್ಯಾಕ್ಟಿರೀಯಾ ಕೊಲ್ಲಬೇಕೆಂದು ಆಂಟಿ ಬಯೋಟಿಕ್ ಬಳಸಿದಲ್ಲಿ ಅದು ಕೆಲಸ ಮಾಡುವುದಿಲ್ಲ. ಈಗ ಕೆಲವು ದಶಕಗಳಿಂದೀಚೆಗೆ ಈ ಎಲ್ಲ ಸಮಸ್ಯೆಗಳು ಇಮ್ಮಡಿಸಿದ್ದಕ್ಕೆ ಇನ್ನೊಂದು ಕಾರಣ ಫಾರ್ಮ್ ಪ್ರಾಣಿ ಸಾಕಾಣಿಕೆ. ಪ್ರಪಂಚದಲ್ಲಿ ಇಂದು ತಯಾರಾಗುವ ಶೇ.80ರಷ್ಟು ಆಂಟಿಬಯೋಟಿಕ್ ಬಳಕೆಯಾಗುವುದು ಫಾರ್ಮ್ ಗಳಲ್ಲಿ ಆಹಾರಕ್ಕೆಂದು ಬೆಳೆಸುವ ಪ್ರಾಣಿಗಳಿಗೆ.2019ಒಂದು ವರ್ಷದಲ್ಲಿ ಪ್ರಾಣಿಗಳಿಗೆ ಬಳಸಲ್ಪಟ್ಟ ಆಂಟಿಬಯೋಟಿಕ್ ಬರೋಬ್ಬರಿ170,000ಟನ್.
ಮಾಂಸಕ್ಕಾಗಿ ಸಾಕುವ ಪ್ರಾಣಿಗಳ ಬೆಳವಣಿಗೆಯ ವೇಗ ಹೆಚ್ಚಿಸಲು ಮತ್ತು ಸಾಮಾನ್ಯ ಬ್ಯಾಕ್ಟಿರೀಯಾಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಫಾರ್ಮ್‌ ಗಳಲ್ಲಿ ಬೇಕಾಗಲಿ, ಬೇಡವಾಗಲಿ ಯಥೇಚ್ಛವಾಗಿ ಆಹಾರದ ಜತೆ ಆಂಟಿಬಯೋಟಿಕ್ ನೀಡಲಾಗುತ್ತದೆ. ಅದಿಲ್ಲದಿದ್ದರೆ ಅಷ್ಟು ಸಾಂದ್ರತೆಯಲ್ಲಿ ಬದುಕುವ ಪ್ರಾಣಿ ಗಳಲ್ಲಿ ಸಾಂಕ್ರಾಮಿಕ/ ರೋಗ ಥಟ್ಟನೆ ಹುಟ್ಟಿ ಹರಡಿಬಿಡುತ್ತದೆ. ಹೀಗಾದಲ್ಲಿ ಇಡೀ ಫಾರ್ಮ್ ನಾಶವಾಗಿಬಿಡಬಹುದು. ಅಲ್ಲ ಈ ಆಂಟಿಬಿಯೊಟಿಕ್ ರೆಸಿಸ್ಟ ಹೆಚ್ಚಾಗುವುದಲ್ಲದೇ ಅಲ್ಲಿ ಈ ತೆರನಾಗಿ ಆಂಟಿಬಯೋಟಿಕ್‌ಗೆ ಪ್ರತಿರೋಧವನ್ನು ಹೊಂದಿದ ಬ್ಯಾಕ್ಟಿರೀಯಾಗಳು ಕ್ರಮೇಣ ಆಹಾರವಾಗಿ, ನೀರು, ಗಾಳಿ, ಮಣ್ಣಿಗೆ ಸೇರಿ ನಂತರ ಮನುಷ್ಯ ದೇಹವನ್ನು ಸೇರಿಕೊಳ್ಳುತ್ತವೆ. ಈ ರೀತಿ ಆಂಟಿಬಯೋಟಿಕ್ ಪ್ರತಿರೋಧ ಹೊಂದಿದ ಮ್ಯೂಟೇಟಡ್ ಬ್ಯಾಕ್ಟಿರೀಯಾವನ್ನು ಸೂಪರ್ಬಗ್ ಎನ್ನಲಾಗುತ್ತದೆ. ಈ ಸೂಪರ್ ಬಗ್ ದೇಹಕ್ಕೆ ಹಿಕ್ಕಿದಾಗ ಅವಕ್ಕೆ ಅದಾಗಲೇ ಎಲ್ಲ ಆಂಟಿಬಯೋಟಿಕ್ ಔಷಧವನ್ನು ಮೀರಿ ಬದುಕುವ ತಾಕತ್ತು ಬೆಳೆ ದಾಗಿರುತ್ತದೆ.
ಇಂದು ಪ್ರಾಣಿಗಳಿಗೆ ಆಂಟಿಬಯೋಟಿಕ್ ಬಳಕೆ ಮುಂದುವರಿದ ದೇಶಗಳಲ್ಲಿ ತಕ್ಕಮಟ್ಟಿಗಿನ ನಿಯಂತ್ರಣದಲ್ಲಿದೆ. ಬೇಕೆಂದಲ್ಲಿ ಹೆಚ್ಚಿನ ಬೆಲೆಗೆ ಆಂಟಿಬಯೋಟಿಕ್ ಹಾಕದೆ ಬೆಳೆಸಿದ ಪ್ರಮಾಣೀಕರಿಸಿದ ಮಾಂಸ ಕೂಡ ಲಭ್ಯ. ಆದರೆ ಜಗತ್ತಿನ ಬಹುತೇಕ ದೇಶಗಳಲ್ಲಿ ಇದೆಲ್ಲದಕ್ಕೆ ಲಂಗು ಲಗಾಮೇ ಇಲ್ಲ. ಚಿಕ್ಕಪುಟ್ಟ ಅಪರೇಷನ್‌ ನಿಂದ ಹಿಡಿದು ಎಲ್ಲ ಶಾಸಚಿಕಿತ್ಸೆಗೂ ಆಂಟಿಬಯೋಟಿಕ್ ಬೇಕೇ ಬೇಕು. ಅದಿಲ್ಲದೇ ಹೋದಲ್ಲಿ ಅಲ್ಲಿ ಸೋಂಕು ತಾಗಿ ರೋಗಿ ಶಿವಾ ಎನ್ನುವುದು ಖಂಡಿತ.
ಆದರೆ ನಾವು, ನಮ್ಮ ವಿಜ್ಞಾನ ಬೆಳೆದಂತೆ ಮತ್ತು ಆಂಟಿ ಬಯೋಟಿಕ್ ಎಗ್ಗಿಲ್ಲದೆ ಬಳಸುವುದರಿಂದ ಎಲ್ಲಲ್ಲದ ಪ್ರಮಾಣ ಮತ್ತು ವೇಗದಲ್ಲಿ ಈ ಬ್ಯಾಕ್ಟಿರೀಯಾಗಳು ಕೂಡ ಈ ಪ್ರತಿರೋಧವನ್ನು ಹೊಂದುತ್ತಿವೆ. ನಾವು ಒಂದು ಕೈ ಮೇಲಾದರೆ ಅವು ಸ್ವಲ್ಪ ಸಮಯದ ಎರಡು ಕೈ ಮೇಲಾಗುತ್ತವೆ. ಇದು ತೀರಾ ಸಮಸ್ಯೆ ಯೆನಿಸುವುದು  ಮತ್ತು ಆಸ್ಪತ್ರೆಗಳಲ್ಲಿ. ಆಸ್ಪತ್ರೆಯೆಂದರೆ ಅಲ್ಲಿ ನಾನಾ ರೋಗದವರು ಶುಶ್ರೂಷೆ ಪಡೆಯುತ್ತಿರುತ್ತಾರೆ. ಐಸಿಯು ನಲ್ಲಿ ಸಾಮಾನ್ಯವಾಗಿ ಈ ರೀತಿಯ ಆಂಟಿಬಯೋಟಿಕ್ಸ್’ಗೆ ಪ್ರತಿರೋಧ ಪಡೆದ ಬ್ಯಾಕ್ಟಿರೀಯಾ ಸೇರಿಕೊಂಡಿತೆಂದರೆ ಅದು ಅಲ್ಲಿಯೇ ಒಬ್ಬರಿಂದೊಬ್ಬರಿಗೆ ದಾಟುತ್ತ, ಅಲ್ಲಿ ಬಳಸುವ ಆಂಟಿ ಬಯೋಟಿಕ್ಸ್’ಗೆ ಕ್ಯಾರೇ ಅನ್ನದೆ ನಿರಂತರವಾಗಿ ಹರಡುತ್ತಲೇ ಇರುತ್ತದೆ.
ಇಂದು ಬಹುತೇಕೆ ಎಲ್ಲ ಐಸಿಯು ನಲ್ಲಿ ಆಂಟಿ ಬಯೋಟಿಕ್ ರೆಸಿಸ್ಟನ್ಸ ತೀರಾ ಸಾಮಾನ್ಯ ಸಮಸ್ಯೆ. ಇಂತಹ ಬ್ಯಾಕ್ಟಿರೀಯಾಗಳನ್ನು ಅಲ್ಟ್ರಾವೈಯೋಲೆಟ್ ಬೆಳಕು ಹರಿಸಿ ಸಾಯಿಸಬಹುದೇನೋ ನಿಜ ಆದರೆ ಅದಕ್ಕೆ ಮೊದಲು  ಖಾಲಿ ಮಾಡಿ ಆ ಕೆಲಸ ಮಾಡಬೇಕು. ಐಸಿಯು ಸಾಮಾನ್ಯವಾಗಿ ಖಾಲಿಯಾಗುವ ಪ್ರಮೇಯವೇ ಹೆಚ್ಚಿನ ಆಸ್ಪತ್ರೆಯಲ್ಲಿ ಇರುವುದಿಲ್ಲ. ಆ ಕಾರಣಕ್ಕೆ ಈ ಬ್ಯಾಕ್ಟಿರೀಯಾಗಳು ಅಲ್ಲಿ ನೆಲೆಯೂರಿ ಬಂದವರಿಗೆಲ್ಲ ಹರಡುತ್ತ ಹೋಗುತ್ತದೆ. ಹಾಗೆಪ್ರತಿರೋಧ ಪಡೆದ ಬ್ಯಾಕ್ಟಿರೀಯಾದೆದುರು ಆಂಟಿಬಯೋಟಿಕ್ ಔಷಧಗಳು ಕೈಚೆಲ್ಲಿ ನಿಲ್ಲುತ್ತವೆ.
ಬೇಕಾಬಿಟ್ಟಿ ಆಂಟಿಬಯೋಟಿಕ್ ಸೇವಿಸದಿರುವುದು, ಡಾಕ್ಟರುಗಳು ತೀರಾ ಅವಶ್ಯಕವೆನಿಸಿದಾಗಲಷ್ಟೇ ಬರೆದುಕೊಡುವುದು, ಆಂಟಿಬಯೋಟಿಕ್ ಬಳಸಿ ಬೆಳೆಸಿದ ಮಾಂಸವನ್ನು ಸೇವಿಸದೇ ಇರುವುದು, ಈ ಮಟ್ಟಿಗೆ ವೈದ್ಯರಲ್ಲಿ ಮತ್ತು ಜನಸಾಮನ್ಯರಲ್ಲಿ ಜಾಗ್ರತೆ ಮೂಡಿಸುವುದು ಇದೆಲ್ಲದರಿಂದ ಈ ರೋಗಕಾರಕ ಬ್ಯಾಕ್ಟಿರೀಯಾವನ್ನು ತಕ್ಕ ಮಟ್ಟಿಗೆ ಹದ್ದುಬಸ್ತಿನಲ್ಲಿಡಬಹುದು. ಅದಿಲ್ಲದಿದ್ದರೆ ಕ್ರಮೇಣ ಎಲ್ಲ ಆಂಟಿಬಯೋಟಿಕ್ ಔಷಧಗಳನ್ನೂ ಮೀರಿ ಈ ಎಲ್ಲ ರೋಗಕಾರಕ ಬ್ಯಾಕ್ಟಿರೀಯಾಗಳು ಬೆಳೆದು ಹರಡಿ ಇನ್ಯಾವುದೋ ಒಂದು ಹೊಸ ರೋಗ, ಸಮಸ್ಯೆ, ಸಾಂಕ್ರಾಮಿಕಕ್ಕೆ ಕಾರಣವಾಗಬಹುದು ಎನ್ನುವುದು ಇಂದಿನ  ಆತಂಕ.
ಒಂದು ಹೊಸ ಆಂಟಿಬಯೋಟಿಕ್ ಅನ್ನು ಕಂಡುಹಿಡಿದು ಅದನ್ನು ತಯಾರಿಸಿ ಮಾರುಕಟ್ಟೆಗೆ ತರಲು ಸಾವಿರಾರು ಕೋಟಿ ವ್ಯಯಿಸಬೇಕಾಗುತ್ತದೆ ಮತ್ತು ಅದಕ್ಕೆ ದಶಕದಷ್ಟು ಸಮಯ ಕೂಡ ಬೇಕು. ಆ ಕಾರಣಕ್ಕೆ ಇಂದು ಹೆಚ್ಚಿನ ಕಂಪನಿಗಳು ಹೊಸ ತಳಿಯ ಆಂಟಿಬಯೋಟಿಕ್ ಗಳನ್ನು ಆವಿಷ್ಕರಿಸಲು ಮುಂದಾಗುವುದಿಲ್ಲ. ಇದಕ್ಕೆಲ್ಲ ಫಾರ್ಮಾ ಕಂಪನಿಗಳನ್ನು ಅಥವಾ ಡಾಕ್ಟರುಗಳನ್ನು ಕಟಕಟೆಯಲ್ಲಿ ನಿಲ್ಲಿಸುವುದು ಸರಿಯಲ್ಲ. ಇದೆಲ್ಲದಕ್ಕೆ ನಾವೆಲ್ಲ ಆಂಟಿಬಯೋಟಿಕ್ ಬಳಸಿದರೀತಿಯೇ ಕಾರಣ. ಪ್ರತೀ ಬಾರಿ ಎಲ್ಲಿಯೇ ಆಂಟಿಬಯೋಟಿಕ್ ಬಳಸಿದಾಗಲೂ ಅಲ್ಲಿ ನಿಧಾನಕ್ಕೆ ಆಂಟಿಬಯೋಟಿಕ್ ಪ್ರತಿರೋಧವನ್ನು ಕೂಡ ಬೆಳಸಿದಂತಾಗುತ್ತದೆ. ಈ ಪ್ರತಿರೋಧ ಹೊಂದಿದ ಬ್ಯಾಕ್ಟಿರೀಯಾಗಳು ಬಾಳಿ ಹೆಚ್ಚಿದಂತೆಲ್ಲ ನಮ್ಮಲ್ಲಿಸುವ ಆಂಟಿಬಯೋಟಿಕ್ ಔಷಧ ವಿಫಲವಾಗುತ್ತ ಹೋಗುತ್ತದೆ.
ಇದು ನಿಧಾನವಾಗಿ ಆಗುತ್ತಿದೆ ಎಂದು ಎಲ್ಲ ಹೇಳಿದರೂ ಇದರ ವೇಗ ದಿನಗಳೆದಂತೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಇಂದು ಟಿಬಿ ಉಂಟುಮಾಡುವಬ್ಯಾಕ್ಟಿರೀಯಾಗಳು ಮೂರ್ನಾಲ್ಕು ದೇಶಗಳಲ್ಲಿ ಇಂದು ಲಭ್ಯವಿರುವ ಎಲ್ಲ ಆಂಟಿಬಯೋಟಿಕ್ ಔಷಧಗಳೆಡೆಗೆ ಈಗಾಗಲೇ ಪ್ರತಿರೋಧ ಹೊಂದಿಬಿಟ್ಟಿವೆ. ಇವು ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಕ್ಕೆ ಹರಡುವ ಭೀತಿ ದಿನಗಳೆದಂತೆ ಹೆಚ್ಚುತ್ತಿದೆ. ಈ ರೀತಿ ಎಲ್ಲ ಆಂಟಿಬಯೋಟಿಕ್ಸ್ ಗಳು ಕೈಚೆಲ್ಲಿದಾಗ ಬ್ಯಾಕ್ಟಿರೀಯಾವನ್ನು ತಿನ್ನಲು ವಿಶೇಷ ವೈರಸ್ ಅನ್ನು ದೇಹದೊಳಕ್ಕೆ ಬಿಡುವ ಹೊಸತೊಂದಿಷ್ಟು ಶುಶ್ರೂಷಾ ಪದ್ಧತಿ ಈಗೀಗ ಮುನ್ನೆಲೆಗೆ ಬರುತ್ತಿದೆ.
ಆದರೆ ಈ ರೀತಿಯ ವೈರಸ್ ಗಳಿಂದಾಗುವ ಅಡ್ಡ ಪರಿಣಾಮ ನಮಗಿನ್ನೂ ತಿಳಿಯಲು ಇನ್ನೊಂದೈವತ್ತು ವರ್ಷವೇ ಬೇಕು. ಒಟ್ಟಾರೆ ಈ ಎಲ್ಲ ಕಾರಣಗಳಿಂದಾಗಿ ಅವಶ್ಯಕತೆಯಿರುವಾಗಲಷ್ಟೇ ಆಂಟಿಬಯೋಟಿಕ್ ಬಳಸುವುದು ಮುಖ್ಯವಾಗುತ್ತದೆ. ಈಗೀಗ ವೈದ್ಯಲೋಕದಲ್ಲಿ ಈ ಜಾಗ್ರತೆಯನ್ನು ಮೂಡಿಸುವ ಕೆಲಸ ವ್ಯಾಪಕ ವಾಗಿ ನಡೆಯುತ್ತಿದೆ. ಆದರೆ ಇದು ಕೇವಲ ವೈದ್ಯರ ಕೆಲಸವಷ್ಟೇ ಅಲ್ಲ. ಇದರ ಜವಾಬ್ದಾರಿ ವೈದ್ಯರಲ್ಲದವರ ಮೇಲೆ ಕೂಡ ಇದೆ. ಬೇಕಾಬಿಟ್ಟಿ ಆಂಟಿಬಯೋಟಿಕ್ ನುಂಗುವ ಹೊಸ ಖಯಾಲಿಯನ್ನು ತಕ್ಷಣಕ್ಕೆ ನಿಲ್ಲಿಸಬೇಕು.
ಸಣ್ಣಪುಟ್ಟ ರೋಗಕ್ಕೆಲ್ಲ ವೈದ್ಯರಲ್ಲಿ ಓಡುವ ಅವಶ್ಯಕತೆಯಿರುವುದಿಲ್ಲ. ವಿವೇಚಿಸಿ ವ್ಯವಹರಿಸಬೇಕು. ಡಾಕ್ಟ್ರೇ ನನಗೆ ಆಂಟಿಬಯೋಟಿಕ್ ಕೊಟ್ಟುಬಿಡಿ’ ಎಂದು ಅಧಿಕ ಪ್ರಸಂಗ ಮಾಡಿ ಒತ್ತಾಯಿಸಬಾರದು. ಆಂಟಿಬಯೋಟಿಕ್ ಕೊಡದ ವೈದ್ಯರು ಸರಿಯಿಲ್ಲ ಎಂಬಂತಾಗಬಾರದು. ಡಾಕ್ಟರ್ ಆರಾಮಾಗೋತ್ತೆ ಔಷಧಿ ಬೇಡ’ ಎಂದರೆ ಅರ್ಥಮಾಡಿಕೊಳ್ಳಬೇಕು. ರೋಗವೆಂದರೆ ಔಷಧವೇ ಪರಿಹಾರ ಎನ್ನುವ ಮೂಢನಂಬಿಕೆ ನಿಲ್ಲಬೇಕು. ಸುಮ್ಮನೆ ಪಂಚಕಜ್ಜಾಯದಂತೆ ಗುಳಿಗೆ ನುಂಗುವ ನಾನ್ಸೆನ್ನಂತೂ ಮಾಡಲೇ ಬಾರದು. ಸಮಸ್ಯೆ ಕೈಮೀರುವ ಮೊದಲು ಜಾಗ್ರತರಾಗಬೇಕು, ಇತರರಲ್ಲಿ ಜಾಗ್ರತೆ ಮೂಡಿಸಬೇಕು.