ಪೂಜ್ಯ ಸ್ವಾಮೀಜಿಗಳ ಪಾದಾರವಿಂದಗಳಿಗೆ, ಪ್ರಣಾಮಗಳು
ಅಭಿಮತ
ಡಾ.ಕೆ.ಪಿ.ಪುತ್ತೂರಾಯ
@..
ಕಾಲಕಾಲದಿಂದಲೂ ಸಾಮಾಜಿಕ ಜನಜೀವನ, ದೇಶದ ಭವಿಷ್ಯ ಮತ್ತು ವಿಶ್ವಶಾಂತಿಯನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಭಾವಗೊಳಿಸುತ್ತಲೇಬಂದಿರುವ ೩ ಕ್ಷೇತ್ರಗಳೆಂದರೆ ಧಾರ್ಮಿಕ, ರಾಜಕೀಯ ಮತ್ತು ವೈಜ್ಞಾನಿಕ. ಈ ಮೂರೂ ಕ್ಷೇತ್ರಗಳ ಗುರಿ, ಕಾರ್ಯವಿಧಾನ, ಕಾರ್ಯವ್ಯಾಪ್ತಿ ಮತ್ತು ಇತಿಮಿತಿಗಳು ಬೇರೆ ಬೇರೆ.
ಧಾರ್ಮಿಕ ಕ್ಷೇತ್ರವು ಆಧ್ಯಾತ್ಮ, ಧರ್ಮ, ನಂಬಿಕೆ, ಶುಭಚಿಂತನೆಗಳ ಕುರಿತು ಕಾರ್ಯಗತವಾದರೆ, ರಾಜಕೀಯ ಕ್ಷೇತ್ರವು ಅಽಕಾರದ ಮೇಲೆ ಮತ್ತು ವೈಜ್ಞಾನಿಕ ಕ್ಷೇತ್ರವು ಸಂಶೋಧನೆಗಳ ಮೂಲಕ ಪ್ರಾಪ್ತವಾದ ಆಧಾರ ಪುರಾವೆಗಳ ಮೇಲೆ ಅವಲಂಬಿತವಾಗಿದೆ. ಈ ಮೂರು ಕ್ಷೇತ್ರಗಳ ಅಂತಿಮ ಉದ್ದೇಶ ಮಾನವ ಕಲ್ಯಾಣ, ವಿಶ್ವಶಾಂತಿಯೇ ಆಗಿರಬೇಕಾದುದು ಅಪೇಕ್ಷಣೀಯ ಹಾಗೂ ಅತ್ಯವಶ್ಯಕ. ಆದುದರಿಂದ ಇವುಗಳು ಒಂದ ಕ್ಕೊಂದು ಪೂರಕ- ಪ್ರೇರಕವಾಗಿದ್ದು ಇವುಗಳ ನಡುವೆ ಹೊಂದಾಣಿಕೆ, ಸಾಮರಸ್ಯವಿರಬೇಕಾದುದು ಅತ್ಯಂತ ಅವಶ್ಯ.
ಯಾಂತ್ರಿಕ-ತಾಂತ್ರಿಕ, ವೈಜ್ಞಾನಿಕ ಬೆಳವಣಿಗೆಗಳ ಮೂಲಕ ತರತರದ ಸೌಕರ್ಯ-ಸೌಲಭ್ಯಗಳನ್ನೊ ದಗಿಸಿ, ಬಡತನವನ್ನು ನಿವಾರಿಸಿ, ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿ ವಿಜ್ಞಾನಕ್ಕೆ ಇರಬೇಕೇ ಹೊರತು ಮನುಕುಲವನ್ನೇ ನಾಶ ಗೊಳಿಸಬಲ್ಲ ಅಣುಬಾಂಬು, ಶಸ್ತ್ರಾಸ್ತ್ರಗಳ, ವೈರಾಣುಗಳ ಅನ್ವೇಷಣೆಯನ್ನು ಮಾಡುವು ದರಲ್ಲಿ ಅಲ್ಲ.
ಅಂತೆಯೇ ಮನಸ್ಸಿನ ಅಜ್ಞಾನ-ಅಂಧಕಾರವನ್ನು ಹೋಗಲಾಡಿಸಿ ಜ್ಞಾನ, ಸುಖಶಾಂತಿ ನೆಮ್ಮದಿಯನ್ನು ಒದಗಿಸಿ, ಇಹದಲ್ಲಿ ಕ್ಷೇಮವನ್ನೂ ಪರದಲ್ಲಿ ಮೋಕ್ಷವನ್ನೂ ದಯಪಾಲಿಸುವ ಸಂಕಲ್ಪ ಧಾರ್ಮಿಕ ಕ್ಷೇತ್ರಕ್ಕೆ ಇರಬೇಕು. ಈ ಎರಡೂ ಕ್ಷೇತ್ರಗಳನ್ನು ಸತ್ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಳ್ಳುವ ಸಾಮರ್ಥ್ಯ ರಾಜಕೀಯ ಕ್ಷೇತ್ರಕ್ಕಿದೆ. ಅಂತಹ ಇರಾದೆ ರಾಜಕಾರಣಿಯ ರದ್ದಾಗಿರಬೇಕು. ಆದರೆ, ಈ ನಡುವೆ ಹೀಗಾಗುತ್ತಿಲ್ಲ. ಕೆಲವು ಧಾರ್ಮಿಕ ಕ್ಷೇತ್ರದವರು ರಾಜಕಾರಣಿಗಳನ್ನು ತಮ್ಮ ಅಸ್ತಿತ್ವ, ಭಧ್ರತೆ, ಆರ್ಥಿಕ ನೆರವಿಗಾಗಿ ಬಳಸಿಕೊಳ್ಳುತ್ತಾರೆ; ಫಲವಾಗಿ ಅವರ ಹಿಡಿತಕ್ಕೆ ಒಳಗಾಗುತ್ತಾರೆ.
ಅಂತೆಯೇ ರಾಜಕೀಯ ಕ್ಷೇತ್ರದಲ್ಲಿ ಕೆಲವರು ತಮ್ಮ ಉಳಿವಿಗೆ ಮತ್ತು ಸ್ವಾರ್ಥಕ್ಕಾಗಿ ಮಠ ಮಾನ್ಯಗಳ ಮೊರೆ ಹೋಗುತ್ತಾರೆ. ಹಾಗೂ ವೈಜ್ಞಾನಿಕ ಕ್ಷೇತ್ರವನ್ನುದುರುಪಯೋಗಗೊಳಿಸುತ್ತಾರೆ. ಇದು ಆತಂಕಕಾರೀ ವಿಷಯ. ಧನಾತ್ಮಕವಾಗಿ ಕೆಲಸ ನಿರ್ವಹಿಸಬೇಕಾದ ಈ ಕ್ಷೇತ್ರಗಳು ಒಂದು ಇನ್ನೊಂದರ ತೆಕ್ಕೆಗೆ ಬಿದ್ದು,ಕಲುಷಿತಗೊಂಡರೆ ಜನಕಲ್ಯಾಣವನ್ನು ಲೋಕ ಶಾಂತಿಯನ್ನು ಅಪೇಕ್ಷಿಸುವುದಾದಾರೂ ಹೇಗೆ? ಧಾರ್ಮಿಕ ಕ್ಷೇತ್ರವಂತೂ ಬಹಳ ಪುರಾತನವಾದ ಕ್ಷೇತ್ರ. ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಈ ಕ್ಷೇತ್ರ ಮಾನವ ಕಲ್ಯಾಣ, ಸಾಮಾಜಿಕ ಸಾಮರಸ್ಯ ಸುಖಶಾಂತಿಯನ್ನೇ ಅರಸುತ್ತಾ, ಪಸರಿಸುತ್ತಾ ಬಂದಿದೆ.
ಈ ಕ್ಷೇತ್ರದಲ್ಲಿ ಬಂದು ಹೋದ ಹಾಗೂ ಈಗಲೂ ಸಕ್ರಿಯವಾಗಿರುವ ಅಸಂಖ್ಯಾತ ಸಾಧು-ಸಂತರ, ಯತಿಗಳ, ಮಠಾಧಿಪತಿಗಳ ಸನ್ಯಾಸಿ-ಸ್ವಾಮೀಜಿಗಳ ಕೊಡುಗೆ ಅವಿಸ್ಮರಣೀಯ. ಇಂದಿಗೂ ಇಂತಹ ಕೆಲವು ಪುಣ್ಯಾತ್ಮರು, ಪವಿತ್ರ ಜೀವಿಗಳು ಇರೋದರಿಂದಲೇ ಕಾಲ ಕಾಲಕ್ಕೆ ಮಳೆಯಾಗುತ್ತಿದೆ.; ಜನ ನಿರಾತಂಕವಾಗಿ ಬದುಕಿ ಬಾಳುತ್ತಿದ್ದಾರೆ. ಭಗವತ್ ಸ್ವರೂಪಿಗಳಾದ ಕಲಿಯುಗ ಕಲ್ಪತರು ಮಂತ್ರಾಲಯದ ಪೂಜ್ಯ ರಾಘವೇಂದ್ರ ಸ್ವಾಮಿಗಳಿಂದ ಹಿಡಿದು, ಪ್ರಾಥಃಸ್ಮರಣೀಯರಾದ ಪೇಜಾವರ ಶ್ರೀಗಳು, ತುಮಕೂರಿನ ಸಿದ್ಧಗಂಗಾ ಶ್ರೀಗಳು ಶೃಂಗೇರಿ, ಸುತ್ತೂರು ಆದಿಚುಂಚನಗಿರಿ ಮಠಾಧೀಶರುಗಳೇ ಮೊದಲಾಗಿ ಅನೇಕ ಮಹಾಮಹಿಮ ಮಠಾಽಶರ ಮಧ್ಯೆ ಬಿಡದಿಯ ನಿತ್ಯಾನಂದ ಸ್ವಾಮೀಜಿಯಂತಹ ಕೆಲವು ಕಳಂಕಿತ ಸ್ವಾಮಿಜೀಗಳೂ ಇರೋದು ದುರದೃಷ್ಟಕರ.
ಸ್ವಾಮೀಜಿಗಳೆಂದರೆ, ದೈವೀ ಸ್ವರೂಪಿಗಳು, ಜನಸಾಮಾನ್ಯರು ಅವರಲ್ಲಿ ದೈವತ್ವವನ್ನು ಕಾಣಬಯಸುತ್ತಾರೆ. ಅವರಿಂದ ಉನ್ನತ ವಿಚಾರಧಾರೆಗಳನ್ನು ತಿಳಿದುಕೊಳ್ಳಬಯಸುತ್ತಾರೆ. ಹಾಗೂ ಸೂಕ್ತಮಾರ್ಗದರ್ಶನವನ್ನು ಪಡೆಯ ಬಯಸುತ್ತಾರೆ. ಈ ಕಾರಣದಿಂದಲೇ ಇವರುಗಳ ಎಲ್ಲಾ ವಿಚಾರಗಳಲ್ಲೂ ಎತ್ತರದ ಮಟ್ಟದಲ್ಲಿ ಇರಬೇಕಾಗುತ್ತದೆ; ಹಾಗೂ ಹಲವಾರು ಗುಣ ವಿಶೇಷಗಳನ್ನು ತಮ್ಮದಾಗಿಸಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸದಾ ಪರಮ ಪೂಜ್ಯರಾಗಿ, ಗೌರವಾನ್ವಿತ ಮಾರ್ಗದರ್ಶಕರಾಗಿ, ಸಮಾಜದ ಸಮಗ್ರ ಜನಾಂಗದ ಹಿತಚಿಂತಕರಾಗಿ ಸ್ವಾಮೀಜಿಗಳು ಹೀಗಿದ್ದರೆ ಚೆನ್ನ ಎಂಬುದು ವಿನೀತಭಾವದ ಭಕ್ತರ ಕಳಕಳಿ, ಆಶಯ ಮತ್ತು ಪ್ರಾರ್ಥನೆ.
ಸ್ವಾಮೀಜಿಗಳೆಂದರೆ ಓರ್ವ ಗುರುಗಳು. ಅಂದರೆ ಜನರ ಅಜ್ಞಾನವನ್ನು ಮನಸ್ಸಿನ ಅಂಧಕಾರವನ್ನು ನಿವಾರಿಸುವವರು ಎಂದರ್ಥ. ಈ ಕೆಲಸವನ್ನು ಮಾಡಲು ಅಪರಿಮಿತ ಜ್ಞಾನ ಸಂಪತ್ತಿನ ಅವಶ್ಯಕತೆ ಇದೆ. ಜ್ಞಾನಸಂಪನ್ನತೆ, ಸತತ ಅಭ್ಯಾಸದಿಂದಲೂ, ಕಠಿಣ ಪರಿಶ್ರಮದಿಂದಲೂ ಸಾಧ್ಯ. ಇದರ ಹೊರತಾಗಿ ಆದರ್ಶಶಿಕ್ಷಕನಿಗಿರಬೇಕಾದ ಬೋಧನಾರುಚಿ, ಗಾಂಭೀರ್ಯ, ಭೋಧನಾ ಸಾಮರ್ಥ್ಯ ಹಾಗೂ ಪ್ರೇರಣಾ ಸಾಮರ್ಥ್ಯಗಳೂ ಇರಬೇಕಾಗುತ್ತದೆ. ಮೇಲಾಗಿ ಪೂರ್ವಾಗ್ರಹ ಪೀಡಿತರಾಗದೇ ಇತರ ಎಲ್ಲಾ ಧರ್ಮಶಾಸ್ತ್ರಗಳ, ತತ್ತ್ವ ಸಿದ್ಧಾಂತಗಳ ಪರಿಚಯವನ್ನೂ ಮಾಡಿಕೊಳ್ಳಬೇಕಾಗುತ್ತದೆ.
ಇಲ್ಲವಾದರೆ ಯಾವುದೇ ಚಿಂತನೆಗಳು, ಧಾರ್ಮಿಕ ಸಂದೇಶಗಳು, ಉಪದೇಶಗಳು, ಉಪನ್ಯಾಸಗಳು, ಅಪೂರ್ಣವಾಗಿ ಪರಿಣಾಮಕಾರಿಯಾಗಲಾರವು. ಈಹಿನ್ನೆಲೆಯಲ್ಲಿ ತಾವು ಪ್ರತಿನಿಧಿಸುವ ಮಠದ ತತ್ತ್ವ ಸಿದ್ಧಾಂತಗಳನ್ನು ವಿಚಾರಧಾರೆಗಳನ್ನು ಅನುಸರಿಸಿ, ಆಚರಿಸಿ, ಪಸರಿಸ ಬೇಕಾದುದು, ತಮಗೆ ಅನಿವಾರ್ಯ ವಾದರೂ, ಇತರ ಧರ್ಮಗಳನ್ನು ಒಪ್ಪಿಕೊಂಡು ಪ್ರೀತಿಸಲಾಗ ದಿದ್ದರೂ, ಗೌರವಿಸುವ, ಸಹಿಸಿಕೊಳ್ಳುವ ಅನಿವಾರ್ಯತೆಯೂ ಔದಾರ್ಯಯೂ ಇರಬೇಕಾಗು ತ್ತದೆ. ಇದುವೇ ‘ಪರಧರ್ಮ ಸಹಿಷ್ಣುತೆ’. ಇತರೆ ಧರ್ಮಗಳ ಬಗ್ಗೆ ಏನೂ ತಿಳಿದುಕೊಳ್ಳದೇನೇ, ಅದನ್ನು ಅಭ್ಯಾಸ ಮಾಡದೇನೇ, ಅವುಗಳನ್ನು ದೂಷಿಸುವ ಇಲ್ಲವೇದ್ವೇಷಿಸುವ ಹಕ್ಕು ಯಾರಿಗೂ ಸರ್ವಥಾ ಇಲ್ಲ.
‘ಧರ್ಮ ಧರ್ಮಗಳ ನಡುವೆ ಜಗಳ ಸಲ್ಲದು, ಎಲ್ಲಾ ಧರ್ಮಗಳು ಅಧರ್ಮದ ವಿರುದ್ಧ ಹೋರಾಡಬೇಕು’ ಎಂದು ಗಾಂಧೀಜಿ ಹೇಳಿದರೆ ‘ನಮ್ಮ ದೇಶದಲ್ಲಿರುವ ವಿವಿಧ ಧರ್ಮಗಳಲ್ಲಿರುವ, ಭಿನ್ನತೆಯನ್ನಲ್ಲ, ಸಮಾನತೆ ಏನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಇದರಿಂದಲೇ ಸಾಮಾಜಿಕ ಸಾಮರಸ್ಯ ಸಾಧ್ಯ’ ವೆಂಬುದಾಗಿ ಪೇಜಾವರ ಶ್ರೀಗಳು ಕರೆ ನೀಡಿದರು. ಆದುದರಿಂದ ಗುರುಗಳಾದವರಿಗೆ ಸಮದೃಷ್ಟಿ-ಪ್ರೇಮ ದೃಷ್ಟಿ-ವಿಶಾಲದೃಷ್ಟಿ ವೈಜಾನಿಕ ಇರಬೇಕಾದುದು ಅತ್ಯಾವ್ಯಶ್ಯಕ.
ಸ್ವಾಮೀಜಿ ಎಂದರೆ ಓರ್ವ ಯತಿಯೂ ಹೌದು. ಯತಿಗಳೆಂದರೆ ಸರ್ವಸಂಗ ಪರಿತ್ಯಾಗಿಗಳೆಂದರ್ಥ. ಸರಳ ಸಾತ್ವಿಕ ಜೀವನವನ್ನು ನಡೆಸಿ, ದೇಹವನ್ನು ದಂಡಿಸು ವವರು, ಧರ್ಮವನ್ನು ಮಂಡಿಸುವವರು, ಪ್ರದರ್ಶನದ ಜೀವನವನ್ನಲ್ಲ, ನಿದರ್ಶನದ ಜೀವನವನ್ನು ನಡೆಸುವವರು, ಅಂದ ಮೇಲೆ ಜ್ಞಾನ ವೈರಾಗ್ಯಂ ಯತಿ ಭೂಷಣಂ” ಎಂಬಂತೆ, ಎಲ್ಲವೂ ಇದ್ದರೂ, ಏನೂ ಅಪೇಕ್ಷೆ ಇಲ್ಲದಂತಹ ವೈರಾಗ್ಯದ ಮನೋಭಾವ ಅತ್ಯಾವಶ್ಯಕ. ಈ ದೃಷ್ಟಿಯಲ್ಲಿ ಭೌತಿಕ ಆಕರ್ಷಣೆ, ಲೌಕಿಕ ಜೀವನ, ಐಷಾರಾಮಿ ಬದುಕು, ಪ್ರಚಾರ ಪ್ರಿಯತೆ, ಗುಟ್ಟುಗುಟ್ಟಾದ ಸಾಂಸಾರಿಕ ಜೀವನ ಯತಿಗಳಾದವರಿಗೆ ವರ್ಜ್ಯ. ಬರೀ ಪೂಜೆ, ಪುನಸ್ಕಾರಗಳಿಂದ ಯಾರೂ ಸ್ವಾಮೀಜಿಗಳಾಗಲಾರರು, ಕಟ್ಟು ನಿಟ್ಟಾದ ನಿಷ್ಠೆ ನಿಯಮಗಳಿಂದಲೂ ಕರ್ಮಾನುಷ್ಠಾನದಿಂದಲೂ, ಅಪರಿಮಿತ ಸದ್ಗುಣ ಸದಾಚಾರಗಳಿಂದಲೂ, ಜ್ಞಾನ ಭಂಡಾರ ದಲ್ಲಿ ಮಾತ್ರ ಸ್ವಾಮೀಜಿಗಳಾಗಲು ಸಾಧ್ಯ. ಆರಿಸಿಕೊಂಡ ಸನ್ಯಾಸ ಅಷ್ಟೇ ಬೇಗ ಅಲುಗದು.
ಬಾಲ ಸನ್ಯಾಸವೂ ಮುಂದುವರಿಸಲು ಕಷ್ಟಕರವಾದೀತು. ಒಟ್ಟಿನಲ್ಲಿ ಒಪ್ಪಿಕೊಂಡ ಮೇಲೆ ಯತಿಕುಲ ಧರ್ಮವನ್ನು ಅಕ್ಷರಶಃ ಪಾಲಿಸಿ ಯತಿಕುಲ ಪರಂಪರೆಗೆ ಶೋಭೆ ತರಬೇಕಾಗಿತ್ತದೆ. ಇದು ಸಾಧ್ಯವಾಗದಿದ್ದಲ್ಲಿ ಪೀಠತ್ಯಾಗವೊಂದೇ ಉಳಿದಿರುವ ಏಕೈಕ ಮಾರ್ಗ. ಅನ್ಯ ಒಳಮಾರ್ಗಗಗಳಿಲ್ಲ! ಕೆಲವು ಸ್ವಾಮೀಜಿಗಳು ಮಠಾಽಪತಿಗಳೂ ಆಗಿರುತ್ತಾರೆ. ಅಂದ ಮೇಲೆ ತಮ್ಮ ಮಠದ ಸರ್ವಾಂಗೀಣ ಬೆಳವಣಿಗೆಗೆ ಕಾರಣಕರ್ತರಾಗಬೇಕಾಗುತ್ತದೆ; ದೊಡ್ಡ ಶಿಷ್ಯ ಸಮೂಹವನ್ನೇಸಂಪಾದಿಸಿಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಎಷ್ಟು ಜನ ಸ್ವಾಮೀಜಿಗಳಿದ್ದಾರೆ ಅನ್ನೋದಕ್ಕಿಂತಲೂ ಎಂತಹ ಜನರಿಗೆ ಇವರು ಸ್ವಾಮೀಜಿಗಳು ಅನ್ನೋದುಮುಖ್ಯವಾಗುತ್ತದೆ. ಮಠಗಳೆಂದರೆ ಬರೀ ಊಟದ /ದಾಸೋಹದ ಕೇಂದ್ರಗಳಾಗಬಾರದು. ಈ ಹಿನ್ನೆಲೆಯಲ್ಲಿ ರಾಜ್ಯದ ರಾಷ್ಟ್ರದ ಹಲವಾರು ಮಠಗಳುಆಶ್ರಮಗಳನ್ನು ಆಸ್ಪತ್ರೆಗಳನ್ನು ಅನಾಥಾಲಯಗಳನ್ನು, ವಿದ್ಯಾಸಂಸ್ಥೆ ಗಳನ್ನು ಸ್ಥಾಪಿಸಿ ಸಮರ್ಪಕವಾಗಿ ಮುನ್ನಡೆಸುತ್ಣಿರೋದು ನಿಜಕ್ಕೂ ಅಭಿನಂದನೀಯವಾದ ವಿಷಯ. ಈ ಸತ್ಕಾರ್ಯಗಳಿಗಾಗಿ ಜನತೆ ತಮಗೆ ಚಿರಋಣಿಯಾಗಿದೆ.
ಆದರೆ ಈ ಪವಿತ್ರ ಕೈಂಕರ್ಯ ಖಾಸಗೀಕರಣಗೊಂಡು ಒಂದು ವ್ಯಾಪಾರ- ವ್ಯವಹಾರ ಉದ್ದಿಮೆಯಾಗಿ ಪರಿವರ್ತನೆಗೊಂಡಾಗ ತನ್ನ ಪಾವಿತ್ರ್ಯತೆಯನ್ನುಕಳೆದುಕೊಳ್ಳುತ್ತದೆ. ಅಂತೆಯೇ, ಮಠಾಽಪತಿಗಳೂ ರಾಜಕಾರಣಿಗಳಾಗಬಾರದು. ಮಠಮಾನ್ಯಗಳು ರಾಜಕಾರಣದಿಂದ ದೂರವಿರಲೇಬೇಕು. ಯಾವುದೇಒಂದು ರಾಜಕೀಯ, ಪಕ್ಷದ ಜತೆ ಗುರುತಿಸಿಕೊಂಡು ನಿಕಟ ಸಂಪರ್ಕವಿಟ್ಟುಕೊಳ್ಳೋದು ಧಾರ್ಮಿಕ ಸಂಸ್ಥೆಗಳಿಗೆ ಶೋಭೆಯಲ್ಲ. ಎಲ್ಲಾ ಪಕ್ಷದವರ ಜತೆಸಂಪರ್ಕವಿರಲಿ, ಸಂಬಂಧಗಳಿರಲಿ. ಆದರೆ ವ್ಯವಹಾರಬೇಡ. ಯಾವ ಪಕ್ಷದವರೇ ಆಗಲಿ, ಎಲ್ಲರನ್ನೂ ಸರಿ ಸಮಾನವಾಗಿ ಪ್ರೀತಿಸಿ, ಗೌರವಿಸಿ, ಆಶೀರ್ವದಿಸಿ ಕಳುಹಿಸಬೇಕಾದುದು ಸ್ವಾಮೀಜಿಗಳ ಕರ್ತವ್ಯ. ಮಠಗಳು, ಮಠಾಽಶರು ಮತ್ತು ರಾಜಕಾರಣಿಗಳು ಅಂತರವನ್ನು ಕಾಪಾಡಿಕೊಳ್ಳಬೇಕು.
ಸ್ವಾಮೀಜಿಗಳಾಗದವರು ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಅವಶ್ಯವಾಗಿ ಅರಿತಿರಬೇಕು; ಗಮನಿಸುತ್ತಿರಬೇಕು. ಅವರ ನಿಲುವು,ಸಹಕಾರ ಯಾವುದೇ ಒಂದು ವ್ಯಕ್ತಿಗೆ, ಪಕ್ಷಕ್ಕೆ ಸೀಮಿತವಾಗಿರಬಾರದು. ಈ ದೃಷ್ಟಿಯಲ್ಲಿ “ಈ ಜಾತಿಯವರನ್ನು ಆ ಜಾತಿಯವರನ್ನು ಮಂತ್ರಿಯನ್ನಾಗಿ ಮಾಡಿ” ಎಂದು ಹೇಳುವ ಬದಲು “ಯಾವ ಜಾತಿ-ಮತದವನೇ ಆಗಿರಲಿ. ಓರ್ವ ಒಳ್ಳೆಯ ಯೋಗ್ಯ, ಅರ್ಹ ವ್ಯಕ್ತಿಯನ್ನು ಮಂತ್ರಿಯನ್ನಾಗಿ ಮಾಡಿ” ಅನ್ನೋದುಶೋಭದಾಯಕವಲ್ಲವೇ! ಅಂತೆಯೇ ಧಾರ್ಮಿಕ ಕ್ಷೇತ್ರದಲ್ಲಿ ರಾಜಕಾರಣವಿರಬಾರದು; ಆದರೆ, ರಾಜಕೀಯ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಧರ್ಮದ ಅಂಕುಶ ವಿರಬೇಕು.
ಹೀಗಾಗಬೇಕಾದರೆ, ಮಠಾಧೀಶರುಗಳು ರಾಜಕಾರಿಣಿಗಳ ಮುಷ್ಟಿಯಿಂದ ಹೊರಬರಬೇಕು. ಇದು ಅವರಿಂದ ಆರ್ಥಿಕ ಇಲ್ಲವೇ ಇನ್ಯಾವುದೇ ಸಹಾಯವನ್ನು, ಸಹಕಾರವನ್ನೂ ಪಡೆಯದಿದ್ದಾಗ ಮಾತ್ರ ಸಾಧ್ಯ. ಜಗದ್ಗುರು ಎಂದ ಮೇಲೆ ‘ಉದಾರ ಚರಿತಾನಾಂತು, ವಸುಧೈವ ಕುಟುಂಬಕಂ’ ಎಂಬ ವೇದ ವಾಣಿಯಂತೆ ಇಡೀ ಜಗತ್ತೇ ಸ್ವಾಮೀಜಿಯ ಕುಟುಂಬವಾಗುತ್ತದೆ. ಇವರು ಒಂದು ಜಾತಿಯವರಿಗೆ ಮಾತ್ರ ಸೀಮಿತರಾದವರಲ್ಲ. ಎಲ್ಲರಿಗೂ ಇವರು ಪೂಜ್ಯ ಗುರುಗಳೇ. ಅಂದಮೇಲೆ ಜಾತಿಮತ ಭೇದ ಭಾವವಿಲ್ಲದೆ ‘ಇವನಾರವ ಇವನಾರವ ನೆಂದೆಣಿಸ ದಿರಯ್ಯ ಇವ ನಮ್ಮವ, ಇವ ನಮ್ಮವ ನೆಂದೆಣಿಸಯ್ಯ’ ಎಂಬ ಬಸವಣ್ಣನವರ ಮಾತಿನಂತೆ ವಿವಿಧ ಜಾತಿ-ಮತ-ಪಂಗಡಕ್ಕೆ ಸೇರಿದ ಎಲ್ಲಾ ಭಕ್ತರನ್ನು ಸರಿ ಸಮಾನ ದೃಷ್ಟಿಯಿಂದ ನೋಡೋದು ಧರ್ಮ ಸಮ್ಮತವಾದ ವಿಷಯವಾಗುತ್ತದೆ.
ಕಾರಣ ಒಂದು ಸ್ವಾಮೀಜಿಗೆ ಎಲ್ಲಾ ಜಾತಿ ಮತದವರೂ ಅನುಯಾಯಿಗಳಾಗಿರುತ್ತಾರೆ, ಶಿಷ್ಯರಾಗಿರುತ್ತಾರೆ; ಭಕ್ತರಾಗಿರುತ್ತಾರೆ. ಆದುದರಿಂದ ಜಾತ್ಯತೀತವಾಗಿ,ಪಕ್ಷಾತೀತವಾಗಿ ಎಲ್ಲರನ್ನೂ ಏಕರೀತಿ- ಏಕನೀತಿ- ಏಕಪ್ರೀತಿಯಲ್ಲಿ ನೋಡುವ ಕಣ್ಣಿರಲಿ. ಎಲ್ಲರಿಗೂ ನಿಮ್ಮ ಅನುಗ್ರಹ ಆಶೀರ್ವಾದವಿರಲಿ. ಇಂತಹ ಪರಮಪೂಜ್ಯ ಸ್ವಾಮೀಜಿಗಳ ಸಂತತಿ ಸಾವಿರವಾಗಲಿ, ತನ್ಮೂಲಕ ಎಲ್ಲರಿಗೂ ಶುಭವಾಗಲಿ.