ವಿದೇಶಾಂಗ ನೀತಿಯ ರೀತಿ ನೀತಿ
ನಾಡಿಮಿಡಿತ
ವಸಂತ ನಾಡಿಗೇರ
.@.
ಈಗಿನ ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಅಭಿವ್ಯಕ್ತಿ ಸಾತಂತ್ರ್ಯಕ್ಕೆ ಇತಿಮಿತಿ ಇಲ್ಲವಾಗಿದೆ. ಮಾಹಿತಿ ಸೋಟವೂ ಸಾಕಷ್ಟಾಗಿದೆ. ಬೆರಳ ತುದಿಯಲ್ಲಿ ಎಲ್ಲ ಮಾಹಿತಿಗಳು ಕ್ಷಣಾರ್ಧದಲ್ಲಿ ಬಂದು ಬೀಳುತ್ತವೆ.
ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್ ಮೊದಲಾದ ಸೌಲಭ್ಯಗಳಿಂದಾಗಿ ಯಾರು ಏನು ಬೇಕಾದರೂ ಬರೆಯಬಹುದು. ಅಂದರೆ ಯಾವ ವಿಚಾರವಿದ್ದರೂ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಬಿಡುಬೀಸಾಗಿ ವ್ಯಕ್ತಪಡಿಸಬಹುದು. ಈ ಕಾರಣಕ್ಕಾಗಿಯೇ ಏನೊ, ನಮ್ಮ ಸುತ್ತಮುತ್ತಲಿನಲ್ಲಿ ಯಾವುದೇ ಬೆಳವಣಿಗೆಯಾದರೂ ನಾವೆಲ್ಲ ತಕ್ಷಣ ಪ್ರತಿಕ್ರಯಿಸುತ್ತೇವೆ. ಪರ-ವಿರೋಧ, ಎಡ-ಬಲ ಇತ್ಯಾದಿ ಎಲ್ಲ ಬಗೆಯ ಒಲುಮೆ, ನಿಲುಮೆಗಳೂ ಎದ್ದು ನಿಲ್ಲುತ್ತವೆ. ರಾಜಕೀಯ, ಸಾಮಾಜಿಕ,ಆರ್ಥಿಕ, ಧಾರ್ಮಿಕ- ಹೀಗೆ ಯಾವುದೇ ವಿಷಯವಿರಲಿ. ಅಲ್ಲಿ ನಮ್ಮ ಕಾಮೆಂಟ್ ಇರುತ್ತದೆ. ಅದೂ ಸುಮ್ಮನೆ ಪ್ರತಿಕ್ರಿಯೆ ನೀಡುವುದಲ್ಲ. ಯಾವುದಾದರೂ ವಿಷಯ ಸಿಕ್ಕರೆ ಅದರ ವಿಚಾರವಾಗಿ ದೊಡ್ಡ ಜಗಳವೇ ನಡೆಯುತ್ತದೆ. ಅಲ್ಲದೆ ಇಲ್ಲಿ ಬರಿ ಅಭಿಪ್ರಾಯ ಇರುವುದಿಲ್ಲ. ಬದಲಾಗಿ ನಾವು ತಜ್ಞರಾಗಿ ಬಿಡುತ್ತೇವೆ. ಭಾರಿ ಅನು ಭವ ಇರುವವರಂತೆ, ಎಲ್ಲವೂ ಗೊತ್ತಿರುವವರಂತೆ ನಮ್ಮ ಚರ್ಚೆಗಳಿರುತ್ತವೆ. ಈಗೀಗ ಕ್ಲಬ್‌ಹೌಸ್ ಕೂಡ ಇದಕ್ಕೆ ಹೇಳಿಮಾಡಿಸಿದ ವೇದಿಕೆಯಗಿ ಮಾರ್ಪಟ್ಟಿದೆ.
ಇದಕ್ಕೆ ಇತ್ತೀಚಿನ ಉದಾಹರಣೆ ಅಫ್ಘಾನಿಸ್ತಾನ್ ವಿದ್ಯಮಾನ. ಅಲ್ಲಿ ಅಮೆರಿಕ ಸೇನಾಪಡೆ ವಾಪಸು ಹೋಗುತ್ತಿರು ವಂತೆ ತಾಲಿಬಾನಿಗಳ ಕೈಮೇಲಾಯಿತು. ಒಂದೊಂದೇ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಾ ರಾಜಧಾನಿ ಕಾಬೂಲ್‌ಗೂ ಬಂದು ಅಧಿಕಾರ ವಶಪಡಿಸಿಕೊಂಡರು. ಹೀಗಾಗಿ ಅಲ್ಲೀಗ ಅರಾಜಕತೆ, ಅಸ್ಥಿರತೆ, ಅನಿಶ್ಚಿತತೆ ಮನೆ ಮಾಡಿವೆ. ನಮಗೆ ಇಷ್ಟೇ ಸಾಕಾಯಿತು. ಅಲ್ಲಿನ ಪರಿಸ್ಥಿತಿ ಬಗ್ಗೆ ವಿಶ್ಲೇಷಣೆ ಶುರುವಾಯಿತು. ತಾಲಿಬಾನ್ ಸರಕಾರವನ್ನು ಭಾರತ ಮಾನ್ಯ ಮಾಡಬೇಕೇ ಬೇಡವೆ? ಅಲ್ಲಿನ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಬೇಕೇ ಬೇಡವೆ? ಅಮೆರಿಕ ಪಡೆಗಳು ವಾಪಸು ಹೋಗಿದ್ದು ಸರಿಯೇ ? ಇದರಿಂದ ನಮ್ಮ ಸುರಕ್ಷತೆಗೆ ಅಪಾಯ ಉಂಟಾಗಲಿದೆಯೇ ? ತಾಲಿಬಾನ್ ಸರಕಾರದ ವಿರುದ್ದ ನಮ್ಮಲ್ಲಿ ಪ್ರತಿಭಟನೆ ಏಕಿಲ್ಲ- ಇತ್ಯಾದಿ ಇತ್ಯಾದಿ ವಿಚಾರಗಳ ಕುರಿತು ಚರ್ವಿತ ಚರ್ವಿಣ ನಡೆಯಿತು.
ಹಾಗಾದರೆ ನಾವು ಚರ್ಚೆ ಮಾಡುವುದು ತಪ್ಪೇ ಎಂಬ ಪ್ರಶ್ನೆ ಬರಬಹುದು. ಖಂಡಿತ ಚರ್ಚೆ ಮಾಡಬಹುದು. ಪ್ರಜ್ಞಾವಂತ ನಾಗರಿಕರಾಗಿ ನಮ್ಮ ಸುತ್ತಲಿನ ಆಗು ಹೋಗುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ನಮಗಿದೆ. ಆದರೆ ಇಂಥ ವಿಷಯಗಳಲ್ಲಿ ನಮ್ಮ ನಿಲುವು ಏನು ಮತ್ತು ಹೇಗಿರಬೆಕು ಎಂದು ಸರಕಾರಕ್ಕೆ ಸಲಹೆ-ಸೂಚನೆ ಕೊಡುವಷ್ಟು; ಇದಮಿತ್ಥಂ ಎಂದು ತೀರ್ಪು ಕೊಡುವಷ್ಟರ ಮಟ್ಟಿಗೆ ನಮಗೆ ಜ್ಞಾನ ಇದೆಯೆ ? ನಾವು ಈ ವಿಚಾರದಲ್ಲಿ ತಜ್ಞರೇ ಎಂಬಿತ್ಯಾದಿ ವಿಷಯಗಳು ನಮ್ಮ ಕಣ್ಣ ಮುಂದೆ ಬರುತ್ತವೆ.
ಅಫ್ಘಾನಿಸ್ತಾನ ಇರಬಹುದು, ಇಲ್ಲವೆ ಇತರ ಅಂತಾರಾಷ್ಟ್ರೀಯ ವಿದ್ಯಮಾನ ಇರಬಹುದು, ಅಲ್ಲಿ ನಮ್ಮ ದೇಶದ ಒಲವು ನಿಲುವುಗಳಿಗೆ ಮುಖ್ಯ ಆಧಾರವೆಂಧರೆ ನಮ್ಮ ಅಂತಾರಾಷ್ಟ್ರೀಯ ನೀತಿ ಹಾಗೂ ರಾಜತಾಂತ್ರಿಕತೆ. ಅದು ಊರ ಮುಂದಿನ ಕಟ್ಟೆ ಇಲ್ಲವೆ ಚಾವಡಿಯಲ್ಲಿ ಕುಳಿತು ಚರ್ಚೆ ಮಾಡಿದಂತಲ್ಲ; ಪಾರ್ಕುಗಳ ಬೆಂಚ್ ಮೇಲೆ ಕುಳಿತು ಲೋಕಾಭಿರಾಮವಾಗಿ ಹರಟೆ ಹೊಡೆದಂತಲ್ಲ. ಆಥವಾ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರೆ ಬಗೆಹರಿಯುವಂಥದ್ದಲ್ಲ. ಇಲ್ಲಿ ಮುಖ್ಯ ವಾಗಿ ಪರಿಗಣನೆಗೆ ಬರುವುದು ದೇಶದ ಹಿತ. ರಾಷ್ಟ್ರಹಿತವನ್ನು ಗಮನದಲ್ಲಿ ಇರಿಸಿಕೊಂಡು ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಅದಕ್ಕನು ಗುಣವಾಗಿ ಇದು ನಡೆಯುತ್ತದೆ.
ಇದೆಲ್ಲ ಗೊತ್ತಾಗಬೇಕೆಂದರೆ ವಿದೇಶಾಂಗ ನೀತಿ ಎಂದರೇನು ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಇದನ್ನು ತಿಳಿದುಕೊಳ್ಳಬೇಕಾದರೆ ವಿದೇಶಾಂಗನೀತಿ ಯಾವ ಆಧಾರದಲ್ಲಿ ರೂಪಿತವಾಗಿದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಸಾಮಾನ್ಯವಾಗಿ ಭಾರತದ ವಿದೇಶಾಂಗ ನೀತಿ ಈ ಅಂಶಗಳನ್ನೆಲ್ಲ ಒಳಗೊಂಡಿರುತ್ತದೆ. ಭಾರತದ ಭೌಗೋಳಿಕ ಸಮಗ್ರತೆಯನ್ನು ಕಾಪಾಡುವುದು; ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವುದು; ದೇಶದ ಆರ್ಥಿಕ ಅಭಿವೃದ್ಧಿ- ಇವು ನಮ್ಮ ವಿದೇಶಾಂಗ ನೀತಿಯ ತಳಹದಿ.
ಹಾಗಾದರೆ ವಿದೇಶಾಂಗ ನೀತಿ ಎಂಬುದು ಸಂವಿಧಾನ ಇದ್ದಂತೆಯೇ ಎಂದು ಕೇಳಬಹುದು. ಹಾಗೇನಿಲ್ಲ. ಆದರೆ ಸರಕಾರಗಳು ಬದಲಾದಂತೆ ಹಾಗೂ ಆಯಾಕಾಲಘಟ್ಟದ ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗಳಾಗಬಹುದು. ಆದರೆ ಒಂದು ವಿಶಾಲ ತಳಹದಿ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ವಿದೇ ಶಾಂಗ ನೀತಿಯ ಕಾಲಘಟ್ಟಗಳನ್ನು ಈ ಕೆಳಕಂಡಂತೆ ಸ್ಥೂಲವಾಗಿ ವಿಂಗಡಿಸಬಹುದು.
1947-62ರ ವರೆಗಿನ ಕಾಲಘಟ್ಟ:ಇದನ್ನು ಅಲಿಪ್ತ ಅಥವಾ ತಟಸ್ಥ ನೀತಿ ಎಂದು ಕರೆಯಬಹುದು. ಆಗ ಅಮೆರಿಕ ಮತ್ತು ರಷ್ಯ ಎಂಬ ಎರಡು ಸೂಪರ್ ಪವರ್ಗಳಿದ್ದವು. ಒಂದಷ್ಟು ರಾಷ್ಟ್ರಗಳು ರಷ್ಯದ ಕಡೆ, ಇನ್ನೊಂದಷ್ಟು ದೇಶಗಳು ಅಮೆರಿಕದ ಕಡೆ ಇದ್ದವು. ಅದು ಶೀತಲ ಸಮರದ ಸಮಯ. ಆದರೆ ಇವೆರಡೂ ಬಣಕ್ಕೆ ಸೇರಿಕೊಳ್ಳಲು ಇಷ್ಟವಿಲ್ಲದ ಒಂದಷ್ಟು ದೇಶಗಳೂ ಇದ್ದವು. ಇವನ್ನು ಆಗ ತೃತೀಯ ಜಗತ್ತಿನ ರಾಷ್ಟ್ರಗಳು ಎಂದು ಕರೆಯಲಾಗುತ್ತಿತ್ತು. ಅಂದರೆ ಅಭಿವೃದ್ಧಿ ಶೀಲರಾಷ್ಟ್ರಗಳು ಎಂದರ್ಥ. ಇವೆಲ್ಲ ಸೇರಿಕೊಂಡು ಅಲಿಪ್ತ ರಾಷ್ಟ್ರ ಕೂಟ ಅಥವಾ ನ್ಯಾಮ್ ಅನ್ನು ರಚಿಸಿಕೊಂಡಿದ್ದವು. ಇದರ ನಾಯಕತ್ವನ್ನು ಭಾರತವೇ ವಹಿಸಿ ಕೊಂಡಿತ್ತು. ಆಗ ತಟಸ್ಥ ನೀತಿಯು ದೇಶದ ವಿದೇಶಾಂಗ ನೀತಿ ಎನಿಸಿತ್ತು. ಆದರೆ ಯಾವಾಗ 1962ರಲ್ಲಿ ಚೀನವು ಆಕ್ರಮಣ ಮಾಡಿತೋ, ಆಗ ದೇಶ ಎಚ್ಚೆತ್ತುಕೊಳ್ಳಬೇಕಾಯಿತು. ತಟಸ್ಥವಾಗಿದ್ದರೆ ನಡೆಯುವುದಿಲ್ಲ ಎಂಬ ಎಚ್ಚರ ಮೂಡಿಸಿತು.
1962-71ರ ಕಾಲಘಟ್ಟ:ಇದನ್ನು ವಾಸ್ತವಿಕತೆಯ ಅರಿವು ಮತ್ತು ಚೇತರಿಕೆಯ ಕಾಲ ಎಂದು ಬೇಕಾದರೆ ಕರೆಯಬಹುದು. ಏಕೆಂದರೆ ಚೀನಾ ಆಕ್ರಮಣದಿಂದಅದಾಗಲೇ ನಮ್ಮ ಅಲಿಪ್ತ ನೀತಿಗೆ ಪೆಟ್ಟು ಬಿದ್ದಿತ್ತು.1962ರ ಯುದ್ಧದ ಬಳಿಕ ಭಾರತವು ರಾಜಕೀಯ ಹಾಗೂ ಭದ್ರತೆಯ ದೃಷ್ಟಿಯಿಂದ ತನ್ನ ಆಯ್ಕೆಗಳನ್ನುಬದಲಾಯಿಸಬೇಕಾಯಿತು. ಹೀಗಾಗಿ ಅದು ರಷ್ಯದತ್ತ ವಾಲತೊಡಗಿತು. ಈ ಅವಽಯಲ್ಲಿ ಭಾರತ-ರಷ್ಯ ನಡುವಿನ ಬಾಂಧವ್ಯ ಬಹಳ ಗಟ್ಟಿಯಾಗಿತ್ತು.
1971-91ರ ಕಾಲಘಟ್ಟ:ಈ ಎರಡು ದಶಕಗಳ ಅವಧಿಯಲ್ಲಿ ವಿಶ್ವದಾದ್ಯಂತ ಸಾಕಷ್ಟು ಬೆಳವಣಿಗೆಗಳು ಮತ್ತು ಬದಲಾವಣೆಗಳು ಕಂಡುಬಂದವು. ಮುಖ್ಯ ವಾಗಿ1971ರ ಬಾಂಗ್ಲಾ ಯುದ್ಧ. ಅನಂತರ ರಷ್ಯ ಒಕ್ಕೂಟದ ಪತನ ನಮ್ಮ ವಿದೇಶಾಂಗ ನೀತಿಯ ಮೇಲೆ ಸಾಕಷ್ಟು ಪರಿಣಾಮ ಬೀರಿದವು. ಇದೇ ಅವಧಿಯಲ್ಲಿ ಇರಾಕ್ ಮತ್ತಿತರ ದೇಶಗಳ ಮೇಲೆ ಅಮೆರಿಕ ವಿಧಿಸಿದ್ದ ಆರ್ಥಿಕ ದಿಗ್ಬಂಧನ ಸಾಕಷ್ಟು ಪರಿಣಾಮ ಉಂಟುಮಾಡಿತು.
1991ರಲ್ಲಿ ಭಾರತದಲ್ಲಿ ಆರ್ಥಿಕ ಕುಸಿತ ಉಂಟಾಯಿತು. ಇವೆಲ್ಲ ಕಾರಣಗಳಿಂದ ನಾವು ನಮ್ಮ ವಿದೇಶ ನೀತಿಯನ್ನು ಆಮೂಲಾಗ್ರವಾಗಿ ಪರಿಷ್ಕಾರ ಮಾಡಿ ಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು. ಉದಾಹರಣೆಗೆ ತೈಲ ಆಮದು ವಿಚಾರದಲ್ಲಿ ನಾವು ಕೆಲವು ಬದಲಾವಣೆ ಮಾಡಬೆಕಾಯಿತು. ಏಕೆಂದರೆ ಅಮೆರಿಕವು ಇರಾಕ್ ಹಾಗೂ ಅನಂತರ ಇರಾನ್ ಮೆಲೆ ಆರ್ಥಿಕ ದಿಗ್ಬಂಧನ ವಿಧಿಸಿದ ಪರಿಣಾಮ ನಮಗೆ ತೈಲಸಮಸ್ಯೆ ಎದುರಾಯಿತು. ಇದೇ ವೇಳೆ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟ ಹಿನ್ನೆಲೆಯಲ್ಲಿ ಚಿನ್ನ ಅಡವಿಡುವ ಪರಿಸ್ಥಿತಿ ಬಂದಿತು. ಇದನ್ನು ಮನಗಂಡು ಹಾಗೂ ಇದರಿಂದ ಪಾರಾಗಲು ದೇಶದಲ್ಲಿ ಆರ್ಥಿಕ ಉದಾರೀ ಕರಣ ಮತ್ತು ಖಾಸಗೀಕರಣ ಅನಿವಾರ್ಯವಾಯಿತು.
1991-98ರ ಕಾಲಘಟ್ಟ:ವ್ಯೂಹಾತ್ಮಕ ಸ್ವಾಯತ್ತೆ ಹಾಗೂ ಭದ್ರತೆಯ ಪರ್ವ ಇದೆಂದು ಬೇಕಾದರೆ ಕರೆಯಬಹುದು. ಏಕೆಂದರೆ ಈ ಅವಧಿಯಲ್ಲಿ ಅಮೆರಿಕದ ಪ್ರಾಬಲ್ಯ ಹೆಚ್ಚಾಯಿತು. ಜತೆಗೆ ಇಸ್ರೇಲ್ ಕೂಡ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿತು. ಅದನ್ನು ಕಡೆಗಣಿಸುವಂತಿರಲಿಲ್ಲ. ಅಲಿಪ್ತ ನೀತಿಯ ಸಂದರ್ಭದಲ್ಲಿಪ್ಯಾಲೆಸ್ತೀನ್ ಪರ ಭಾರತ ವಕಾಲತ್ತು ವಹಿಸಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಇಸ್ರೇಲ್‌ನತ್ತ ವಾಲಲೇಬೇಕಾಯಿತು. ಇದರ ಜತೆಗೆ ಭಾರತವು ಇನ್ನೊಂದು ಸತ್ಯವನ್ನು ಅರಿತುಕೊಂಡಿತು. ಅದೇನೆಂದರೆ ನಾವು ಯಾವುದೋ ಒಂದು ದೇಶದ ಬಾಲವನ್ನು ಹಿಡಿದುಕೊಂಡು ಹೋಗುವ ಕಾಲ ಮುಗಿಯಿತು. ಬದಲಾಗಿ ನಾವು ಕೂಡ ಪ್ರಬಲರಾಗಬೇಕು ಎಂಬ ವಿವೇಕ ಮೂಡಿತು. ಜತೆಗೆ ಪ್ರಾದೇಶಿಕ ಮಟ್ಟದಲ್ಲಿ ಆಗ್ನೆಯ ಏಷ್ಯದ (ಆಸಿಯಾನ್) ದೇಶಗಳ ಜತೆ ಸಹಕಾರ ಹೊಂದುವುದು ಮುಖ್ಯವೆನಿಸತೊಡಗಿತು.
1998-2013 ರ ಕಾಲಘಟ್ಟ: ಈ ಅವಧಿಯಲ್ಲಿ ಜಗತ್ತಿನಲ್ಲಿ ಸಾಕಷ್ಟು ಪರಿವರ್ತನೆಗಳು ಉಂಟಾದವು. ಅಮೆರಿಕದ ಜತೆಗೆ ರಷ್ಯ ಕೂಡ ಮತ್ತೆ ಪ್ರಬಲವಾಯಿತು.ಚೀನಾ ಕೂಡ ಪ್ರವರ್ಧಮಾನಕ್ಕೆ ಬಂದಿತು. ಹೀಗಾಗಿ ಈ ಮೂರು ರಾಷ್ಟ್ರಗಳನ್ನು ಕಡೆಗಣಿಸುವಂತಿರಲಿಲ್ಲ. ಅಥವಾ ಈ ಹಿಂದಿನಂತೆ ಯಾವುದೋ ಒಂದು ದೇಶವನ್ನು ಬಲವಾಗಿ ನೆಚ್ಚಿಕೊಳ್ಳುವಂತಿರಲಿಲ್ಲ. ಬದಲಾಗಿ ಸಮತೋಲನ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಯಾಕೆಂದರೆ ವಿಶ್ವದಲ್ಲಿ ರಾಜಕೀಯ, ಆರ್ಥಿಕ ಸಮೀಕರಣ ಸಂಪೂರ್ಣ ಬದಲಾಗಿತ್ತು.
2013 ರಿಂದ ಈಚಿನ ಕಾಲಘಟ್ಟ: ಅಲಿಪ್ತ ನೀತಿಯಿಂದ ಬಹುತ್ವ ನೀತಿಯತ್ತ ಬದಲಾವಣೆಯಾದ ಮಹತ್ವದ ಕಾಲಘಟ್ಟವಿದು. ಅಮೆರಿಕದ ಜತೆ ಹೆಚ್ಚಿನ ಸಹಾಯಸಹಯೋಗ ಸಾಽಸಬೇಕಾದ ಅನಿವಾರ್ಯತೆ ಉಂಟಾಯಿತು. ಏಕೆಂದರೆ ವಿಶ್ವದ ಆಗುಹೋಗುಗಳಲ್ಲಿ ರಷ್ಯದ ಪಾತ್ರ ಸಾಕಷ್ಟು ಕಡಿಮೆಯಾಗತೊಡಗಿತು. ಹೊಸಹೊಸ ಪಾತ್ರಧಾರಿಗಳ ಬಂದರು. ಚೀನವು ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲಿಟ್ಟು ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಿತು. ಎಲ್ಲೆಡೆ ತನ್ನ ಇರುವನ್ನು ತೋರಿಸಿ ಕೊಟ್ಟಿತು.
ಅಲ್ಲದೆ ವಿಶ್ವದ ಬಲಾಢ್ಯ ದೇಶವಾಗಿ ಹೊರಹೊಮ್ಮುವ ತನ್ನ ಇರಾದೆಯನ್ನು ಗಟ್ಟಿಯಾಗಿ ಪ್ರದರ್ಶಿಸತೊಡಗಿತು. ಭಾರತ ಕೂಡ ಬೇರೆಯವರ ನೆರಳಿನಲ್ಲಿ ಸಾಗಿ, ಅವರ ಮೇಲೆ ಅವಲಂಬಿತ ಆಗುವುದಕ್ಕಿಂತ ಸ್ವಂತ ಬಲದ ಮೇಲೆ ಅಭಿವೃದ್ಧಿ ಹೊಂದುವ ಅಗತ್ಯವನ್ನು ಮನಗಂಡಿತು. ಅದಕ್ಕೆ ತಕ್ಕಂತೆ ಆರ್ಥಿಕವಾಗಿಯೂ ಬಲಿಷ್ಠವಾಗಿ ಹೊರಹೊಮ್ಮತೊಡಗಿತು. ಇತರ ದೇಶಗಳೂ ಭಾರತವನ್ನು ಗಂಭೀರವಾಗಿ ಪರಿಗಣಿಸುವಂತೆ ಹಾಗೂ ಬಲಾಢ್ಯ ಆರ್ಥಿಕ ಶಕ್ತಿಯಾಗಿ ನೋಡುವಂತೆಎದ್ದುನಿಂತಿದೆ. ಹೀಗಾಗಿ ಈ ಕಾಲಘಟ್ಟದಲ್ಲಿ ನಮ್ಮ ವಿದೇಶಾಂಗ ನೀತಿಯು ಬೇರೆಯದೇ ಆದ ಆಯಾಮವನ್ನು ಪಡೆದುಕೊಂಡಿದೆ.
ಬದಲಾದ ಜಗತ್ತಿನಲ್ಲಿ, ಬದಲಾದ ಸನ್ನಿವೇಶದಲ್ಲಿ ಚುರುಕಿನ ರಾಜತಾಂತ್ರಿಕತೆ (ಫಾಸ್ಟ್ ಟ್ರ್ಯಾಕ್ ಡಿಪ್ಲೊಮಸಿ) ಇಂದಿನ ಅಗತ್ಯವಾಗಿದೆ. ಹಾಗೆಯೇ ನೆರೆಹೊರೆ ಯವರು ಮೊದಲು ಎಂಬ ನೀತಿಯನ್ನು ಭಾರತ ಅಳವಡಿಸಿಕೊಂಡಿದೆ. ಏಕೆಂದರೆ ಪಾಕಿಸ್ತಾನ ಮೊದಲಿನಿಂದಲೂ ನಮ್ಮ ವಿರೋಧಿ ರಾಷ್ಟ್ರದಂತೆಯೇ ಇದೆ. ಇದೀಗ ಚೀನಾ ದೇಶವು ಈ ಭಾಗದಲ್ಲಿ ಪ್ರಬಲಶಕ್ತಿಯಾಗಿ ಬೆಳೆದಿದೆ. ಇದರ ಜತೆಗೆ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ನಮ್ಮ ಇರುವನ್ನು, ಪ್ರಭಾವವನ್ನು ಬೆಳೆಸಿ ಕೊಳ್ಳಬೇಕಾಗಿದೆ. ಈಗಿನ ವಿದೇಶಾಂಗ ನಿತಿ ಇದಕ್ಕೆ ಅನುಗುಣವಾಗಿಯೇ ಇರಬೇಕಾಗುತ್ತದೆ. ಇದಕ್ಕಾಗಿ ರಾಜತಾಂತ್ರಿಕ ವಿವೇಕ, ವಿವೇಚನೆ ಬೇಕಾಗುತ್ತದೆ. ಆಯಾ ಸನ್ನಿವೇಶಕ್ಕೆ ಅನುಗುಣವಾಗಿ ನಾವು ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕಾಗುತ್ತದೆ.
ಇದರ ಹಿಂದೆ ವಿದೇಶಾಂಗ ಖಾತೆ, ಇಲಾಖೆಯ ಪಾತ್ರ ಬಹಳ ಪ್ರಮುಖವಾಗಿರುತ್ತದೆ. ನಮ್ಮ ವಿದೇಶಾಂಗ ಖಾತೆ ಏನು ಮಾಡುತ್ತಿದೆ ಎಂದು ಪ್ರಶ್ನೆ ಕೇಳಿಬಿಟ್ಟರೆಆಗುವುದಿಲ್ಲ. ಜಟಿಲ ಪರಿಸ್ಥಿತಿಗಳನ್ನು ನಿಭಾಯಿಸುವುದು ಸುಲಭ ಸಾಧ್ಯವಲ್ಲ. ಅದೊಂದು ಸವಾಲು. ಇಸ್ರೇಲ್ ದೇಶವನ್ನು ನೋಡಿ, ಹೇಗಿದೆ ಎಂದು ಹೇಳುವುದುಸುಲಭ. ಆದರೆ ಅಲ್ಲಿನ ಸ್ಥಿತಿಗತಿಗಳೇನು ಎಂಬುದು ನಮಗೆ ಗೊತ್ತಿರುವುದಿಲ್ಲ. ಇಸ್ರೇಲ್ ದೇಶವು ಗಟ್ಟಿಯಾಗಿ ನಿಂತಿರಬಹುದು.
ಆದರೆ ಸುತ್ತಲೂ ಶತ್ರು ರಾಷ್ಟ್ರಗಳು, ಸದಾ ಯುದ್ಧ ಭೀತಿ. ಹೀಗಿದ್ದಾಗ ಅಲ್ಲಿನ ನಾಗರಿಕರಿಗೆ ನೆಮ್ಮದಿ ಇರುವುದೇ? ಇದನ್ನೆಲ್ಲ ನಾವೇಕೆ ಗಮನಿಸುವುದಿಲ್ಲ? ಆ ಪರಿಸ್ಥಿತಿಯಲ್ಲಿ ನಾವು ಹೇಗೆ ಇರುತ್ತಿದ್ದೆವು ? ಎಂಬುದನ್ನು ಯೋಚಿಸಬೇಕು. ಹೀಗೆ ಒಂದೊಂದು ಪರಿಸ್ಥಿತಿಯನ್ನೂ, ಪ್ರಕರಣವನ್ನೂ ನಿಭಾಯಿಸಲು ಒಂದೊಂದು ಬಗೆಯ ತಂತ್ರವನ್ನು, ರಾಜನೀತಿಯನ್ನು ಅನುಸರಿಸಬೇಕಾಗುತ್ತದೆ. ಇವೆಲ್ಲ ಸದ್ದಿಲ್ಲದೆ ನಡೆಯುತ್ತಿರುತ್ತವೆ. ರಾಜತಾಂತ್ರಿಕ ವಲಯದಲ್ಲಿ ಬ್ಯಾಕ್ ಚಾನೆಲ್ ಡಿಪ್ಲೊಮಸಿ ಎಂಬ ಒಂದು ಪದವಿದೆ. ಅಂದರೆ ನೇಪಥ್ಯದಲ್ಲಿ, ಅನೌಪಚಾರಿಕ ರೀತಿಯಲ್ಲಿ ಕೆಲವೊಂದು ಚರ್ಚೆಗಳು, ಪ್ರಯತ್ನಗಳು, ತಂತ್ರಗಳ ಮೂಲಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ವಿಧಾನವಿದು.
ಅಫ್ಘಾನಿಸ್ತಾನ ಬಿಕ್ಕಟ್ಟನ್ನು ಭಾರತ ಈಗ ಹೇಗೆ ಎದುರಿಸುತ್ತಿದೆ ಎಂಬುದನ್ನು ಈ ನಿಟ್ಟಿನಲ್ಲಿ ನೋಡುವುದಾದರೆ : ಕಳೆದ ಕೆಲವು ದಿನಗಳಿಂದ ವಾಯುಪಡೆಯ ವಿಮಾನಗಳು ಕಾಬೂಲ್‌ನಿಂದ ಭಾರತೀಯರನ್ನು ಕರೆತರುತ್ತಿವೆ. ಆದರೆ ಅದು ಸುಲಭದ ಕಾರ್ಯವಲ್ಲ.
ಏಕೆಂದರೆ ನಮ್ಮ ರಾಜತಾಂತ್ರಿಕ ಅಽಕಾರಿಗಳಿಗೆ ಇದು ಬಲು ಸವಾಲಿನ ಕೆಲಸ. ಮೊದಲನೆಯದಾಗಿ ಅಫ್ಘಾನಿಸ್ತಾನಕ್ಕೆ ನೇರ ವಿಮಾನ ಮಾರ್ಗವಿಲ್ಲ. ಪಾಕಿಸ್ತಾನದ ಮೇಲೆ ಹಾದು ಹೋಗಬೇಕು. ಆದರೆ ಅದಕ್ಕೆ ಅನುಮತಿ ಸಿಗುವುದಿಲ್ಲ. ಹೀಗಾಗಿ ಇರಾನ್ ಮೂಲಕ ಬಳಸಿ ಬರಬೇಕು. ಆದರೆ ಇದಕ್ಕೆ ಆ ದೇಶದ ಅನುಮತಿಯೂ ಅಗತ್ಯ. ಇದಕ್ಕಾಗಿ ಆ ದೇಶದ ಜತೆ ಮಾತುಕತೆ ನಡೆಸಿ ಒಪ್ಪಿಸಿದ್ದಾಗಿದೆ. ಇಷ್ಟಾಗಿಯೂ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೆಚ್ಚು ಸಮಯ ನಿಲ್ಲುವಂತಿಲ್ಲ. ಅಲ್ಲಿ ಗೊಂದಲ, ಗೌಜಿ- ಗದ್ದಲ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತು. ಯಾವಾಗ ಗುಂಡಿನ ದಾಳಿ ನಡೆಯುತ್ತದೆ ಎಂಬ ಮಾಹಿತಿ ಇರುವುದಿಲ್ಲ. ಹೀಗಾಗಿ ನಾವು ಸಾಮಾನ್ಯವಾಗಿ ಬೋರ್ಡಿಂಗ್ ಪಾಸ್ ಪಡೆದು ವಿಮಾನಕ್ಕಾಗಿ ಕಾಯುತ್ತ ಹಾಯಾಗಿ ಕುಳಿತುಕೊಳ್ಳುವಂತಿಲ್ಲ.
ಅಲ್ಲಿ ನಮ್ಮವರು ಯಾರು ಎಂಬುದೂ ಗೊತ್ತಾಗುವುದಿಲ್ಲ. ಅದಕ್ಕಾಗಿ ಕಾಬೂಲ್ ವಿಮಾನ ನಿಲ್ದಾಣದ ಬಳಿ ದೊಡ್ಡ ಗರಾಜ್ ಅನ್ನು ಪಡೆದುಕೊಂಡು ಅಲ್ಲಿ ಭಾರತೀ ಯರನ್ನು ಸೇರಿಸುವುದು. ವಿಮಾನ ಬಂದ ಕೂಡಲೇ ನಿಗದಿ ಪಡಿಸಿದ ಜನರನ್ನು ತಕ್ಷಣ ಕಳಿಸುವುದು. ಅವರು ವಿಮಾನ ಏರುತ್ತಿದ್ದಂತೆ ಅವರೆಲ್ಲರನ್ನೂ ಕಜಕಸ್ತಾನಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಉಳಿದ ಔಪಚಾರಿಕತೆಗಳನ್ನು ಪೂರೈಸಿ ಇರಾನ್ ಮೂಲಕ ಭಾರತಕ್ಕೆ ಕರೆತರುವುದು. ಇದೇನು ಸುಲಭದ ಮಾತೇ ? ನಮ್ಮವರನ್ನು ಯಾರೂ ಕೇಳುವವರೇ ಇಲ್ಲ ಎಂದು ನಾವು ಇಲ್ಲಿ ಕುಳಿತುಕೊಂಡು ಬೊಬ್ಬೆ ಹೊಡೆಯಬಹುದು. ಆದರೆ ವಾಸ್ತವದಲ್ಲಿಅದೊಂದು ಭಗೀರಥ ಯತ್ನ ಒಂದೊಂದು ಸನ್ನಿವೇಶದಲ್ಲೂ ಇಂಥದ್ದೇ ಸವಾಲುಗಳಿರುತ್ತವೆ.
ಕುವೈತ್ ಮೇಲೆ ಇರಾಕ್ ದಾಳಿ ಮಾಡಿದಾಗ ಅಲ್ಲಿನ ಭಾರತೀಯರನ್ನು ಹೇಗೆ ಕರೆತರಲಾಯಿತು ಎಂಬುದನ್ನು ಏರ್‌ಲಿಫ್ಟ್ ಸಿನಿಮಾದಲ್ಲಿ ನೋಡಿದ್ದೇವೆ ( ಒಂದಷ್ಟು ಅತಿರಂಜಿತವಾಗಿರಬಹುದು). ಬೇರೆ ಬೇರೆ ದೇಶಗಳಲ್ಲಿ ಸುಮಾರು5ಕೋಟಿಯಷ್ಟು ಭಾರತೀಯ ಮೂಲದವರಿದ್ದಾರೆ. ಅಲ್ಲಿರುವ ನಮ್ಮವರ ಹಿತರಕ್ಷಣೆ, ಅಗತ್ಯ ಇದ್ದಾಗ ರಕ್ಷಣೆ ಮಾಡುವ ಕೆಲಸ ವಿದೇಶಾಂಗ ಖಾತೆಯದ್ದಾಗಿರುತ್ತದೆ. ಆಗೆಲ್ಲ ನೆರವಿಗೆ ಬರುವುದು ರಾಜತಾಂತ್ರಿಕ ಕೌಶಲವೇ. ಯಾವುದೋ ಕಾರಣಕ್ಕಾಗಿ ವೀಸಾ ಮತ್ತಿತರ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಬಂದಿರುವ ಬಗ್ಗೆ ಆಗಾಗ ಸುದ್ದಿ ಪ್ರಕಟವಾಗುವುದುಂಟು. ಇಂಥವರನ್ನು ಕೇಳಿದರೆ ಇದರ ಹಿಂದೆ ಎಷ್ಟೆಲ್ಲ ಪ್ರಯತ್ನಗಳಿದ್ದವು ಎಂಬುದನ್ನು ಅವರು ವಿವರಿಸಿಯಾರು.
ಇನ್ನು ಅಮೆರಿಕ ಮೊದಲಾದ ದೇಶಗಳಲ್ಲಿ ಶಿಕ್ಷಣ ಪಡೆಯಲು, ಕೆಲಸ ಮಾಡಲು ವೀಸಾ ಪಡೆಯುವ ವಿಷಯದಲ್ಲೂ ನಮ್ಮ ರಾಯಭಾರ ಕಚೇರಿಗಳು ಸಾಕಷ್ಟುಶ್ರಮ ವಹಿಸುತ್ತವೆ. ಶಿಕ್ಷಣ ಪಡೆಯಲು ಯಾವ ದೇಶಗಳು ಉತ್ತಮ; ಎಲ್ಲಿ ಸಮಸ್ಯೆ ಇದೆ ಎಂಬುದರ ಬಗ್ಗೆ ಕಾಲಕಾಲಕ್ಕೆ ಮಾಹಿತಿ, ಸಲಹೆ ಸೂಚನೆಗಳನ್ನು ಕೊಡಬೇಕಾಗುತ್ತದೆ. ಉದಾಹರಣೆಗೆ ಆಫ್ರಿಕದ ಕೆಲವು ದೇಶಗಳಲ್ಲಿ ಸುರಕ್ಷತೆ ಬಹುದೊಡ್ಡ ಸಮಸ್ಯೆ. ಆಗೆಲ್ಲ ನಾವು ವಿದೇಶಾಂಗ ಖಾತೆಯ ನೆರವು ಪಡೆಯ ಬೇಕಾಗುತ್ತದೆ.
ಒಟ್ಟಿನಲ್ಲಿ ರಾಜತಾಂತ್ರಿಕತೆಯು ನಾವು ನೀವೆಲ್ಲ ಇಲ್ಲಿ ಟೇಬಲ್ ಮುಂದೆ ಕುಳಿತು ಚರ್ಚೆ ಮಾಡಿದಷ್ಟು ಸುಲಭ ಅಲ್ಲ. ಅಥವಾ ಟಿವಿ ಸ್ಟುಡಿಯೊಗಳಲ್ಲಿ ಡಿಬೇಟ್ಮಾಡಿದಷ್ಟು ಸರಳವೂ ಅಲ್ಲ. ಅದೊಂದು ಜಟಿಲ ಪ್ರಕ್ರಿಯೆ. ನಾವು ಚರ್ಚೆ ಮಾಡುವಾಗ, ಪ್ರತಿಕ್ರಿಯೆ ನಿಡುವಾಗ ಇವೆಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿ ಕೊಂಡರೆ ಒಳ್ಳೆಯದು.
ನಾಡಿಶಾಸ್ತ್ರಮಾತನಾಡುವುದು, ಆಡಿಕೊಳ್ಳುವುದುಸುಲಭ, ಬಲು ಕಷ್ಟ ಮಾಡುವುದುಬಲ್ಲವರೇ ಬಲ್ಲರು ಆ ಕಷ್ಟವನುಇದನರಿತು ಸುಮ್ಮನಿರೋನೆ ಜಾಣನು