ಡೋಲಾಯಮಾನವಾದ ಆರ್ಥಿಕತೆ ಮತ್ತು ಪುನಶ್ಚೇತನದ ಸವಾಲು
ಅಭಿಮತ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
@.
ಪ್ರಪ್ರಥಮವಾಗಿ ಕೋವಿಡ್ ಹಿನ್ನೆಲೆಯಲ್ಲಿ ಡೋಲಾಯಮಾನವಾಗಿರುವ ದೇಶದ ಆರ್ಥಿಕ ಪರಿಸ್ಥಿತಿಯನ್ನು ಕೋವಿಡ್ ಪೂರ್ವ ಮಟ್ಟಕ್ಕೆ ಸರಿಹೊಂದಿಸಿ ಮುನ್ನಡೆ ಯಬೇಕಾಗಿದೆ. ಕೋವಿಡ್ ಕಾರ್ಮೋಡ ಸರಿಯುತ್ತಿದ್ದಂತೆಯೇ ಆರ್ಥಿಕತೆ ಚೇತರಿಸುತ್ತದೆ. ಇದೀಗ ಸಂಭಾವ್ಯ ಕೋವಿಡ್ ಮೂರನೆಯ ಅಲೆಯ ಭೀತಿಯಿರುವು ದರಿಂದ ಆರ್ಥಿಕತೆ ಯೂ ಕೂಡಾ ಅದರ ಪ್ರಖರತೆಯ ಮೇಲೆ ಅವಲಂಬಿಸಿರುವುದುನ್ನು ಅಲ್ಲಗಳೆಯಲಾಗದು.
ಭಾರತದ ಅರ್ಥವ್ಯವಸ್ಥೆ ಇಂಗ್ಲಿಷ್‌ನ ’ವಿ’ ಅಕ್ಷರದ ರೀತಿಯಲ್ಲಿ ಚೇತರಿಸುತ್ತಿದ್ದರೂ ಆಘಾತದಿಂದ ಕುಸಿತ ಕಂಡಷ್ಟೇ ಮೇಲೆದ್ದು ಬಂದರೂ ಕೂಡಾ ಪುನಶ್ಚೇತನ ಗೊಳ್ಳುವ ಮೊದಲೇ ಪ್ರತಿ ಆಘಾತದಲ್ಲೂ ದುರ್ಬಲವಾಗಿ ಹಾನಿಯಾಗುವುದರಿಂದ ದೇಶದ ಆರ್ಥಿಕತೆ ಗಮನಾರ್ಹವಾದ ಬೆಲೆ ತೆರುವಂತಾಗಿದೆ. ಈ ಸಾಂಕ್ರಾಮಿಕವು ಅನಿವಾರ್ಯವಾಗಿ ಮನೆಮನೆಗಳ ಬ್ಯಾಲೆನ್ಸ್ ಶೀಟ್ ಅನ್ನು ಏರುಪೇರು ಮಾಡಿದೆ. ಇದೀಗ ದೇಶದಲ್ಲಿ ಹಣಕಾಸು ನೀತಿಯಲ್ಲಿ ಎಲ್ಲವನ್ನು ಸಮತೋಲನ ರೀತಿಯಲ್ಲಿ ಕಾಯ್ದುಕೊಂಡು ಹೋಗುವ ಪ್ರಯತ್ನ ನಡೆದಿದೆ ಯಾದರೂ ಹಣಕಾಸಿನ ಬಲವರ್ಧನೆಗೆ ಹೊಸ ರೂಪು ರೇಖೆಗಳನ್ನು ರಚಿಸಬೇಕು. ಬೆಳವಣಿಗೆಯೇ ಸರಕಾರದ ಮತ್ತು ವಿತ್ತ ಇಲಾಖೆಯ ಮೊದಲ ಆದ್ಯತೆಯಾಗಬೇಕು.
ಕೋವಿಡ್-೧೯ರಿಂದಾದ ವಿತ್ತೀಯ ಆಘಾತಗಳನ್ನು ಸರಿಪಡಿಸಲು ಆರ್ಥಿಕಾಭಿವೃದ್ಧಿಯ ದರ ಹೆಚ್ಚಾಗಬೇಕು. ಆರ್‌ಬಿಐನ ಮೂಲ ಕರ್ತವ್ಯ ಹಣಕಾಸು ನಿರ್ವಹಣೆ ಮತ್ತು ಬೆಲೆ ಏರಿಕೆಯ ನಿಯಂತ್ರಣ. ಆದರೆ ಪ್ರಸಕ್ತ ಸಂದಿಗ್ಧ ಪರಿಸ್ಥಿತಿಯಲ್ಲಿ ಆರ್‌ಬಿಐನ ಎಲ್ಲಾ ಅಂದಾಜುಗಳು ಸಂಪೂರ್ಣ ಈಡೇರಲಿಲ್ಲ. ಕೋವಿಡ್ ಎರಡನೆಯಅಲೆಯು ಹಣದುಬ್ಬರ ಮತ್ತು ನಿರುದ್ಯೋಗವನ್ನು ಬಿಗಾಡಾಯಿಸಿತು. ಹಣದ ಮೌಲ್ಯವೂ ಕುಸಿಯತೊಡಗಿತು. ಬಾಂಡ್‌ಗಳ ಬೆಲೆ ಹೆಚ್ಚತೊಡಗಿತು. ಆರ್‌ಬಿಐ ಹಣಕಾಸು ಸಮಿತಿಯು ಸರಕಾರಕ್ಕೆ ಹಲವು ಸಲಹೆಗಳನ್ನು ನೀಡಿದೆ. ಪರೋಕ್ಷ ತೆರಿಗೆಗಳನ್ನು ಕಡಿಮೆ ಮಾಡಬೇಕು ಆದರೆ ಸರಕಾರಕ್ಕೆ ಮೂಲಾಧಾರಗಳ ಕೊರತೆ ಯಿದೆ. ಸರಕಾರಗಳು ಅತ್ಯಂತ ಕೆಳ ಮಟ್ಟದಲ್ಲಿರುವ ಜನಗಳ ಮೇಲೆ ಆಗಿರುವ ಆರ್ಥಿಕ ದಾಳಿಯನ್ನು ಗಮನಿಸಬೇಕು.
ಅಡುಗೆ ಅನಿಲ ದರವನ್ನು ಮತ್ತೆ 25 ರು. ಏರಿಸಿದುದು, ಒಂದೇ ವರ್ಷದಲ್ಲಿ 265 ರು. ಹೆಚ್ಚಿಸಿದುದಲ್ಲದೆ ಎಲ್‌ಪಿಜಿ ಸಬ್ಸಿಡಿಯೂ ರದ್ದಾಗಿರುವುದರಿಂದ ಜನ ಕಂಗಾಲಾಗಿದ್ದಾರೆ. ಇದೀಗ ಆರ್‌ಬಿಐನ ಮುಂದಿರುವ ಸವಾಲೆಂದರೆ ದೇಶದ ಆರ್ಥಿಕ ಬೆಳವಣಿಗೆ ಚುರುಕಾಗುವಂತೆ ನೋಡಿಕೊಳ್ಳುವುದು. ಈ ನಿಟ್ಟಿನಲ್ಲಿ ಹಣದುಬ್ಬರ ಸಂಪೂರ್ಣ ನಿಯಂತ್ರಣದಲ್ಲಿಲ್ಲದಿದ್ದರೂ ಅದನ್ನು ಲೆಕ್ಕಿಸದೆ ಆರ್ಥಿಕ ಚೇತರಿಕೆಯನ್ನು ಸುಧಾರಿಸುವ ಬಗ್ಗೆ ರಿಪೋ ದರವನ್ನು ಶೇ. 4 ರ ಯಥಾ ಸ್ಥಿತಿಯಲ್ಲಿಯೇ ಕಾಯ್ದಿರಿಸಿಕೊಂಡಿದೆ.
ಇದರಿಂದಾಗಿ ವಿವಿಧ ಸಾಲಗಳ ಮೇಲಿನ ಬಡ್ಡಿದರ ಹೆಚ್ಚುವುದು ತಪ್ಪಿದಂತಾಗಿದೆ. ಮತ್ತು ಇದು ಕೈಗಾರಿಕಾ ಅಭಿವೃದ್ಧಿಗೆ ನೆರವಾಗಿ ಆರ್ಥಿಕ ಚೇತರಿಕೆ ಚುರು ಕಾಗಲಿದೆ ಎಂಬುದು ಆರ್‌ಬಿಐ ಲೆಕ್ಕಾಚಾರ. ಅದಲ್ಲದೆ ಸಾಲಗಳ ಬಡ್ಡಿದರ ಹೆಚ್ಚಾಗಲಾರದು ಮತ್ತು ಬ್ಯಾಂಕ್‌ಗಳಲ್ಲಿ ವೈಯಕ್ತಿಕ, ಗೃಹ, ವಾಹನ ಮತ್ತಿತರ ಸಾಲಗಳ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ಹಾಗೆಯೇ ಸಾಲ ಬೆಳವಣಿಗೆಯಾದರೆ ಬ್ಯಾಂಕ್‌ಗಳ ಲಾಭದಲ್ಲಿಯೂ ಏರಿಕೆಯಾಗುತ್ತದೆ. ಆಗಸ್ಟ್ ಪ್ರಾರಂಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ8.5ಲಕ್ಷ ಕೋಟಿಗಳಷ್ಟು ಹೆಚ್ಚುವರಿ ಲಿಕ್ವಿಡಿಟಿ ಪ್ರಮಾಣ ಇದೆ. ಈ ನಿಟ್ಟಿನಲ್ಲಿ ಆರ್ಥಿಕ ಬೆಳವಣಿಗೆಗೆ ಸಾಧ್ಯವಾಗಲು ಆರ್‌ಬಿಐ ತನ್ನ ಪರಿಧಿಯಲ್ಲಿರುವ ಎಲ್ಲಾ ಕಾರ್ಯಸೂಚಿಗಳನ್ನು ಜಾರಿಗೊಳಿಸಿದೆ.
ಹಣದುಬ್ಬರ :ಕೇಂದ್ರ ಸರಕಾರ ಆರ್‌ಬಿಐಗೆ ಹಣದುಬ್ಬರದ ಸಹಿಷ್ಣುತೆ ದರವನ್ನು ಶೇ. 6 ಕ್ಕೆ ನಿಗದಿಪಡಿಸಿದೆ. ಆರ್‌ಬಿಐ 2021-2022ರ ಹಣದುಬ್ಬರ ದರವನ್ನು ಶೇ. 5.1 ರಿಂದ ಶೇ. 5.7 ರ ಅಂದಾಜು ವ್ಯಕ್ತಪಡಿಸಿದೆ. ಹಾಗೆಯೇ 2022-23 ರ ಹಣದುಬ್ಬರ ದರವನ್ನು ಶೇ. 5.1 ರಿಂದ ಶೇ. 5.7 ರ ಅಂದಾಜುನ್ನು ವ್ಯಕ್ತಪಡಿಸ ಲಾಗಿದೆ. ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ. 5.59 ಕ್ಕೆ ಇಳಿಕೆಯಾಗಿದೆ ಮತ್ತು ಆಹಾರ ವಸ್ತುಗಳ ಹಣದುಬ್ಬರ ಜುಲೈನಲ್ಲಿ ಶೆ. 3.96 ಕ್ಕೆ ಇಳಿದಿರುವುದು ಆಶಾದಾಯಕ ಬೆಳವಣಿಗೆ. ಇದೇ ಸಂದರ್ಭದಲ್ಲಿ ಸಗಟು ಸೂಚ್ಯಂಕ (ಡಬ್ಲ್ಯೂಪಿಐ) ಆಧರಿಸಿದ ಹಣದುಬ್ಬರ ಜುಲೈನಲ್ಲಿ ಶೇ. 11.4 ರಲ್ಲಿ ನಿಂತಿದೆ. ಜೂನ್‌ನಲ್ಲಿ ಶೇ. 12.07 ಮತ್ತು ಮೇನಲ್ಲಿ ಸರ್ವಕಾಲಿಕ ಶೇ. 12.94 ಕ್ಕೆ ಕುಸಿದಿತ್ತು.
ತೆರಿಗೆ:ಸಮಾಧಾನಕರವಲ್ಲದ ಹಣದುಬ್ಬರಕ್ಕೆ ಪ್ರಮುಖ ಕಾರಣ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕ. ಈ ಸುಂಕ ಕಡಿತವನ್ನು ಹಣಕಾಸು ಸಚಿವೆ ಯರು ನಿರಾಕರಿಸಿದ್ದಾರೆ. ಮತ್ತು ಹಿಂದಿನ ಸರಕಾರ 1.44 ಲಕ್ಷ ಕೋಟಿ ರು. ತೈಲ ಬಾಂಡ್ ಬಿಡುಗಡೆ ಮೂಲಕ ಇಂಧನ ಬೆಲೆ ತಗ್ಗಿಸಿತ್ತು ಮತ್ತು ಇದೀಗ ಬಾಂಡ್‌ದಾರರಿಗೆ ಹಣ ಮರುಪಾವತಿ ಮತ್ತು ಬಡ್ಡಿ ಸರಕಾರಕ್ಕೆ ಹೊರೆಯಾಗಿರುವ ಕಾರಣವನ್ನು ಪ್ರಸ್ತಾಪಿಸಿದ್ದಾರೆ ಮತ್ತು ಯುಪಿಎ ಕಾಲದ ತೈಲ ಬಾಂಡ್‌ನ ಅಸಲು, ಬಡ್ಡಿ ಮರುಪಾವತಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದುದರಿಂದ ಇಂಧನ ಬೆಲೆ ತೆರಿಗೆ ಕಡಿತ ಅಸಾಧ್ಯದ ಮಾತು.
ನಿರುದ್ಯೋಗ:ದೇಶದ ಅರ್ಥವ್ಯವಸ್ಥೆಯನ್ನು ಕಾಡುತ್ತಿರುವ ಗಂಭೀರವಾದ ನಿರುದ್ಯೋಗ ಸಮಸ್ಯೆಯು ಈ ಸಾಂಕ್ರಾಮಿಕದ ಪರಿಣಾಮದಿಂದ ಉಲ್ಬಣಗೊಂಡಿದೆ.ಉದ್ಯಮಗಳಲ್ಲಿ ಒಂದು ರೀತಿಯ ಆತಂಕದ ಮನೋಭಾವನೆ ಮೂಡಿದೆ. ಜುಲೈ ತಿಂಗಳಿನಲ್ಲಿ ನಿರುದ್ಯೋಗ ಪ್ರಮಾಣ ಇಳಿಕೆಯಾದರೂ 32 ಲಕ್ಷ ಜನಉದ್ಯೋಗ ಕಳೆದುಕೊಂಡಿದ್ದಾರೆ. ನಿರುದ್ಯೋಗ ವ್ಯಕ್ತಿಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ದುಷ್ಪರಿಣಾಮಗಳಿಗೆ ಕಾರಣವಾಗಿ ಆರ್ಥಿಕಾಭಿವೃದ್ಧಿಯನ್ನು ನಿರ್ಬಂಧಿ ಸುತ್ತದೆ.
ನಿರುದ್ಯೋಗಿ ಜನರು ಅನುತ್ಪಾದಕರಾಗಿ ಅಭಿವೃದ್ಧಿ ಕ್ರಿಯೆಕ್ರಿಗೆ ಅವರ ಕೊಡುಗೆ ಶೂನ್ಯವಿರುತ್ತದೆ. ನಗರ ಪ್ರದೇಶಗಳಲ್ಲಿ 2019 ಜುಲೈ ನಂತರದಲ್ಲಿ ಒಟ್ಟು ಒಂದು ಕೋಟಿ ವೇತನಾದರರು ಉದ್ಯೋಗ ಕಳೆದುಕೊಂಡಿದ್ದಾರೆ. ಇದು 8.60 ಕೋಟಿಯಿದ್ದ ಸಂಖ್ಯೆ 7.60 ಕೋಟಿಗೆ ಇಳಿಕೆಯಾಗಿದೆ. ಇದೀಗ ಆಗಸ್ಟ್ 12 ಕ್ಕೆ ನಿರುದ್ಯೋಗ ಪ್ರಮಾಣ ಶೇ. 8.3ಕ್ಕೆ ಇಳಿಕೆಯಾದರೂ ತಿಂಗಳ ಸಂಬಳ ಪಡೆಯುತ್ತಿದ್ದವರಿಗೆ ನಿರುದ್ಯೋಗ ಕಾಡುತ್ತಿದೆ. ಉನ್ನತ ಆದಾಯದ ಉದ್ಯೋಗಗಳು ಅನಿಶ್ಚಿತತೆಯಲ್ಲಿದೆ. ನಗರ ಪ್ರದೇಶದ ನಿರುದ್ಯೋಗ ಶೇ. 8.9 ಎಂದು ವರದಿಯಾಗಿದೆ. ಭಾರತದಂತಹ ದೊಡ್ಡ ಪ್ರಮಾಣದ ಜನಸಂಖ್ಯೆಯ ರಾಷ್ಟ್ರಕ್ಕೆ ನಿರುದ್ಯೋಗವೆಂಬುದು ಸಾರ್ವಕಾಲಿಕ ಸಮಸ್ಯೆಯಾಗಿದೆ.
ಹಲವಾರು ಸಮಸ್ಯೆಗಳಿಂದ ಜಾತಿ, ಉಪಜಾತಿ, ಮತ, ಪಂಗಡಗಳ ಮೀಸಲಾತಿ ವ್ಯವಸ್ಥೆಯ ಮೂಸೆಯಲ್ಲಿ ಪುಕ್ಕಟೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಾ ಹೋದರೆ ನಿರುದ್ಯೋಗ ಕಾಡದಿರಲು ಹೇಗೆ ಸಾಧ್ಯ. ಸಂಪತ್ತೆಲ್ಲಾ ದುಡಿದವರಿಗಿಲ್ಲ. ದುಡಿಯದವರಿಗೇ ಸೇರಿ ಹೋಗುತ್ತದೆ. ತೆರಿಗೆ ರಿಯಾಯತಿ, ಬಡ್ಡಿದರ ತಗ್ಗಿಸುವುದು, ಪುಕ್ಕಟೆ ಸೌಲಭ್ಯ ನೀಡುವುದನ್ನು ಮಿತಗೊಳಿಸಿ ಜನ ದುಡಿಯುವುದನ್ನು ರೂಢಿಸಿಕೊಳ್ಳುವುದು, ಉತ್ಪಾದನೆ ಬೇಡಿಕೆ, ಪೂರೈಕೆಗೆ ಅನುಕೂಲಕರ ವಾತಾವರಣ ಸೃಷ್ಠಿಸಬೇಕು. ವಿದ್ಯಾವಂತ ಮೈಗಳ್ಳರು, ನಿರಕ್ಷರಿಗಳಿಗಿಂತ ಅಪಾಯ. ಪ್ರಜಾಪ್ರಭುತ್ವದ ನಿಜವಾದ ಶಕ್ತಿಯಿರುವುದು ಪ್ರಭುತ್ವದಲ್ಲಿ, ಪ್ರಜೆಗಳಲ್ಲಿ ಎನ್ನುವುದು ಭಾರತ ಕಾಣಬೇಕಾಗಿದೆ. ಆರೋಗ್ಯ ಮತ್ತು ಮೂಲ ಸೌಕರ್ಯ ವೆಚ್ಚಗಳು ಏಕಕಾಲದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಬಹುದು.
ಆರ್ಥಿಕತೆಯ ಚೇತರಿಕೆ:ಬಹುತೇಕ ಲಾಕ್‌ಡೌನ್ ತೆರವಾಗಿರುವ ನಿಮಿತ್ತ ಆರ್ಥಿಕ ಚಟುವಟಿಕೆಗಳು ಯಥಾಸ್ಥಿತಿಗೆ ಮರಳಿರುವುದರಿಂದ ಜುಲೈ ತಿಂಗಳಿನಲ್ಲಿತೆರಿಗೆ ಸಂಗ್ರಹ ಏರಿಕೆಯಾಗಿದೆ. ಕಾರ್ಖಾನೆಗಳಲ್ಲಿ ಉತ್ಪಾದನೆಯ ಪ್ರಮಾಣ ಶೆ. 13.6 ರಷ್ಟು ಏರಿಕೆಯಾಗಿದ್ದು, ಉತ್ಪಾದನೆ, ಗಣಿಗಾರಿಕೆ, ವಿದ್ಯುತ್ ವಲಯದಲ್ಲಿ ಪ್ರಗತಿ ದಾಖಲಾಗಿದೆ. ಅದಲ್ಲದೆ ಸಾಂಕ್ರಾಮಿಕ ಸಂದರ್ಭದಲ್ಲಿ ದೇಶ ಆರ್ಥಿಕ ಸುಧಾರಣ ಕ್ರಮಗಳನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಿದೆ. ಇದೇ ಸಂದರ್ಭದಲ್ಲಿ ದೇಶದ ಪ್ರಸಕ್ತ ವಿದೇಶಿ ವಿನಿಮಯ ಮೀಸಲು ೬೮೪ ಲಕ್ಷ ಕೋಟಿ ಡಾಲರ್‌ನಷ್ಟು ಗರಿಷ್ಠ ಮಟ್ಟಕ್ಕೇರಿರುವುದು ಆಶಾದಾಯಕ ಬೆಳವಣಿಗೆ.
ಆರ್ಥಿಕತೆಯ ಸವಾಲು:ಇದೀಗ ದೇಶಕ್ಕೆ ಸವಾಲಾಗಿರುವುದು ವಿತ್ತೀಯ ಕೊರತೆಯಿಂದ ಸಾಲದ ಪ್ರಮಾಣವು ಹೆಚ್ಚಿದೆ. ಕೇಂದ್ರ ಸರಕಾರವು ತನ್ನ ಬಹುಪಾಲು ಆದಾಯಕ್ಕೆ ಸಾಲವನ್ನು ಅವಲಂಬಿಸಿದೆ. 2019-20 ರಲ್ಲಿ ವಿತ್ತೀಯ ಕೊರತೆ ಶೇ. 4.6 ಕ್ಕೆ ಇಳಿದಿತ್ತು. 2020-21 ಕ್ಕೆ ಶೇ. 3.5 ಕ್ಕೆ ಇಳಿಯುವ ನಿರೀಕ್ಷೆಯಿತ್ತು. ಆದರೆ ಸೋಂಕಿನ ಆಘಾತಕಾರಿ ಸನ್ನಿವೇಶದಿಂದ ಸರಕಾರದ ಬೊಕ್ಕಸ ಬರಿದಾಗುತ್ತಿದೆ. ಕಾರಣ ಕೋವಿಡ್ ಎಂಬುದು ನಿರ್ವಿವಾದ. 2020-21 ರ ವಿತ್ತೀಯ ಕೊರತೆ ಶೆ. 7.3 ಕ್ಕೆ ಜಿಗಿದಿದೆ. ಈ ಅನಿರೀಕ್ಷಿತ ವಿತ್ತೀಯ ಆಘಾತಗಳನ್ನು ಸರಿಪಡಿಸಲು ಆರ್ಥಿಕಾಭಿವೃದ್ಧಿಯ ದರ ಹೆಚ್ಚಬೇಕು.
ಹಣಕಾಸು ವಲಯದ ಪ್ರಗತಿ, ಬೆಲೆ ಮತ್ತು ವೇತನ ಹತೋಟಿ, ಸರಕು ಪೂರೈಕೆ ಹೆಚ್ಚಳ ತೆರಿಗೆಯೇತರ ಆದಾಯಗಳಿಂದ ಸಾಧ್ಯ. ದೇಶದ ಆದಾಯದ ಶೇ. 36ಸಾಲದಿಂದ ಬರುತ್ತಿದೆ ಮತ್ತು ಖರ್ಚಿನಲ್ಲಿ ಶೇ. 20 ನ್ನು ಸಾಲದ ಬಡ್ಡಿಗಾಗಿ ವ್ಯಹಿಸಬೇಕಾಗಿರುವುದು ಅತ್ಯಂತ ಕಳವಳಕಾರಿ ಸನ್ನಿವೇಶವಾಗಿದೆ.