ತಾಲಿಬಾನ್ ಹಿಡಿತದಲ್ಲಿ ಆಫ್ಘಾನ್‌.. ಮುಂದೇನು ?
ಅಭಿಮತ
ಅರುಣ್ ಕುಮಾರ ಖನ್ನೂರ
.@.
ತಾಲಿಬಾನ್ ಅಪಘಾನಿನ ಮೇಲೆ ಎಣಿಸಿದ್ದಕ್ಕಿಂತ ಬೇಗ ಹಿಡಿತ ಸಾಧಿಸಿದೆ. ಸುಮಾರು 2 ಬಿಲಿಯನ್ ಡಾಲರಿನಷ್ಟು ಹಣವೂ ಅದರ ಬಳಿ ಇದೆಯೆಂದು ಅಧ್ಯಯನ ಗಳು ತಿಳಿಸಿವೆ. ಅದಕ್ಕೆ ಮಾದಕವಸ್ತು, ರಿಯಲ್ ಎಸ್ಟೇಟ, ರಫ್ತು, ದೇಣಿಗೆ ಇತ್ಯಾದಿಗಳ ಮುಖಾಂತರ ಬೃಹತ್ ಪ್ರಮಾಣದಲ್ಲಿ ಹಣ ನಿರಂತರವಾಗಿ ಹರಿದು ಬರುತ್ತಿದೆ.
ಅಮೆರಿಕ ಸೇನೆಯಿಂದ ದೊಡ್ಡ ಪ್ರಮಾಣದಲ್ಲಿ ಅತ್ಯಾಧುನಿಕಅಸ್ತ್ರಗಳನ್ನು ಬೃಹತ್ ಪ್ರಮಾಣದಲ್ಲಿ ವಶಪಡಿಸಿಕೊಂಡಿದೆ. ಹೀಗೆ ಆರ್ಥಿಕವಾಗಿ ಹಾಗೂ ಅತ್ಯಾಧುನಿಕಶಸ್ತ್ರಾಸ್ತ್ರಗಳಿಂದ ಸಧೃಢವಾಗಿರುವ ತಾಲಿಬಾನ್ ಅನ್ನು ಲಘುವಾಗಿ ಪರಿಗಣಿಸಲು ಆಗುವುದಿಲ್ಲ. ಈಗ ಉದ್ಭವಿ ಸಿರುವ ಸನ್ನಿವೇಶದಲ್ಲಿ ಈ ತಾಲಿಬಾನಿ ಸರಕಾರಕ್ಕೆ ಮನ್ನಣೆ ಕೊಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಜಿಜ್ಞಾಸೆ ಉಂಟಾಗಿದೆ. ಏನೇ ಆದರೂ ಜಗತ್ತಿನಾದ್ಯಂತ ಈ ಸನ್ನಿವೇಶದಿಂದ ಉಂಟಾಗಿರುವ ಸಂಚಲನವನ್ನು ನೋಡಿದಾಗ, ಸೂಕ್ಷ್ಮವಾಗಿ ಅವಲೋಕಿಸಿ ವಿಶ್ಲೇಸಿದಾಗ ಕೆಲವು ವಿಷಯಗಳು ಗೋಚರಿಸುತ್ತವೆ.
ತಾಲಿಬಾನ್ ಹಿಡಿತಕ್ಕೆ ಬಂದಿರುವ ಅಫ್ಘಾನಿಸ್ತಾನದಿಂದ ಉದ್ಭವಿಸಿರುವ ಸನ್ನಿವೇಶವು ಆತಂಕಕಾರಿ, ಸೂಕ್ಷ್ಮ ಮತ್ತು ಜಟಿಲವಾಗಿದೆ. ಜಾಗತಿಕ ಶಾಂತಿ ಭಂಗ, ಆತಂಕವಾದದ ಹೆಚ್ಚುವಿಕೆ ಮತ್ತು ಆರ್ಥಿಕತೆಯ ಮೇಲಿನ ದುಷ್ಪರಿಣಾಮಗಳಿಗೆ ಕಾರಣವಾಗಲಿದೆ. ಈಗ ತಾಲಿಬಾನ್ ತನ್ನ ಸರಕಾರವನ್ನು ರಚಿಸುವ ಪ್ರಕ್ರಿಯೆ ಯನ್ನು ಇನ್ನೇನು ಪೂರ್ಣಗೊಳಿಸಲಿದೆ. ಆದರೆ ತಾಲಿಬಾನ್ ಅನ್ನು ವಿಶ್ವಸಂಸ್ಥೆಯ ಸುರಕ್ಷತಾ ಸಮಿತಿಯು 1999ರಲ್ಲಿ 1267ರ ನಿರ್ಣಯದ ಅಡಿಯಲ್ಲಿ ಉಗ್ರಗಾಮಿ ಸಂಘಟನೆ ಎಂದು ಘೋಷಿಸಿದೆ. ಅಲ್ಲದೇ ಇತ್ತೀಚಿನ ದೋಹಾ ಸಮ್ಮೇಳನದಲ್ಲಿ ಭಾರತವು ಸೈನ್ಯದ ಬಲಪ್ರಯೋಗದಿಂದ ಅಧಿಕಾರ ವಹಿಸಿಕೊಳ್ಳುವ ಸರಕಾರಕ್ಕೆ ಮಾನ್ಯತೆ ನೀಡುವುದಿಲ್ಲ ಎಂದು ಘೋಷಿಸಿದೆ.
ಹೀಗಾಗಿ ತಾಲಿಬಾನ್ ಸರಕಾರಕ್ಕೆ ಜಾಗತಿಕ ಮತ್ತು ಭಾರತದ ಮನ್ನಣೆ ತಕ್ಷಣವೇ ಸಿಗುವುದು ದುಸ್ತರ. ತಾಲಿಬಾನಿನ ಹಿಡಿತದಿಂದ ಅಫ್ಘಾನಿಸ್ತಾನವನ್ನು ಮುಕ್ತ ಗೊಳಿಸುವ ಬಗ್ಗೆ ಯಾವ ರಾಷ್ಟ್ರವೂ ಚಕಾರವೆತ್ತುತ್ತಿಲ್ಲ. ವಿಶ್ವಸಂಸ್ಥೆಯು ತನ್ನ ಆಗ 18ರ ಹೇಳಿಕೆಯಲ್ಲಿ ಒಗ್ಗಟ್ಟಿನ, ಎಲ್ಲರನ್ನೂ ಒಳಗೊಂಡ, ಮತ್ತು ಎಲ್ಲಾ ವರ್ಗ ಗಳಿಗೆ ಪ್ರಾತಿನಿಧಿತ್ವ ಇರುವ ಸರಕಾರ ರಚಿಸುವಂತೆ ಒತ್ತಾಯಿಸಿದೆ. ತಾಲಿಬಾನ್ ಕೂಡ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ದೇಶಬಿಟ್ಟು ಹೋಗಿರುವ ಪ್ರಜಾ ಪ್ರಭುತ್ವದ ಮಾದರಿಯಲ್ಲಿ ಆಯ್ಕೆಯಾಗಿ ಆಡಳಿತದಲ್ಲಿದ್ದ ಅಶ್ರಫ್ ಘನಿ ಮತ್ತು ಇತರೆ ಆಧಿಕಾರಿಗಳಿಗೆ ಅಭಯವನ್ನು ನೀಡುವುದಾಗಿ ಹೇಳಿದೆ. ಅದು ಈಗ ಜಾಗತಿಕ ಅಭಿಪ್ರಾಯ ಹಾಗೂ ತನ್ನ ಅಸ್ತಿತ್ವಕ್ಕಾಗಿ ಈ ಮೃದು ಧೋರಣೆಯನ್ನು ಹೊಂದಲೇಬೇಕಾಗಿದೆ.
ತಾಲಿಬಾನಿನ ಸರಕಾರ ರಚನೆ ಆದ ನಂತರ ತಮ್ಮ ನಿಲುವನ್ನು ತಿಳಿಸುವದಾಗಿ ಬಹುತೇಕ ರಾಷ್ಟ್ರಗಳು ಕಾದು ನೋಡುವ ತಂತ್ರ ಅನಿಸರಿಸುತ್ತಿವೆ. ಈ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಭಾರತ ಮತ್ತು ರಷ್ಯಾಗಳು ಸಮಾಲೋಚನೆ ನಡೆಸಿವೆ. ಅಮೆರಿಕದ ಸಿಐಎ ಮತ್ತು ಭಾರತದಅಧಿಕಾರಿಗಳು ತಾಲಿಬಾನಿನೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಭಾರತದ ಮಟ್ಟಿಗೆ ತಾಲಿಬಾನಿನನ್ನು ನಿಭಾಯಿಸುವುದು ದೊಡ್ಡ ಸವಾಲು. ವಿಷಮಿಸಿರುವ ಪಾಕಿಸ್ತಾನ್ ಮತ್ತು ಚೀನಾಗಳೊಂದಿಗಿನ ಸಂಬಂಧಗಳು ಮತ್ತು ಗಡಿಯಲ್ಲಿನ ಸಮಸ್ಯೆಗಳು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿವೆ. ತಾಲಿಬಾನ್ ಈಗ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಮುಂದೆ ಭಾರತದ ಗಡಿಭಾಗ ಮತ್ತು ಕಾಶ್ಮೀರದಲ್ಲಿ ನುಸುಳುವ ಸಾಧ್ಯತೆ ಇದೆ.
ಭಾರತಕ್ಕೆ ಅಫ್ಘಾನಿಸ್ತಾನದಲ್ಲಿ ತಾನು ಹೂಡಿರುವ ದೊಡ್ಡ ಪ್ರಮಾಣದ ಬಂಡವಾಳದ ಚಿಂತೆ ಒಂದೆಡೆಯಾದರೆ ಗಡಿ ಹಾಗೂ ಕಾಶ್ಮೀರದಲ್ಲಿ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ನಿಭಾಯಿಸುವ ದೊಡ್ಡ ಸಮಸ್ಯೆ ಎದುರಾಗಿದೆ. ಇದು ಆರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರಲಿದೆ. ಒಟ್ಟಿನಲ್ಲಿ ತಾಲಿಬಾನಿನ ಪರ ಅಥವಾ ವಿರೋಧಿ ನಿಲುವು ತಳೆಯದೇ ಕಾಯ್ದು ನೋಡುವ ತಂತ್ರ ಮತ್ತು ತಾಲಿಬಾನಿನ ಜತೆ ಮಾತುಕತೆಯ ಮುಖಾಂತರ ಪರಿಹಾರ ಅಥವಾ ಸಮಯ ಪಡೆಯುವುದುಒಳ್ಳೆಯ ಮಾರ್ಗ ಆಗಬಲ್ಲುದು.